ಬೆಂಗಳೂರಿನಲ್ಲಿ ಬುದ್ಧಿಯ ಬಿಸಿಬೇಳೆ
ಬಾತು ತಿನ್ನುತ್ತ ಸಂಕೀರ್ಣ ಅಸಂಗತ ಹಾಳುಮೂಳು
ಹೂತು ತಲೆತಪ್ಪಲೆಗೆ ಸಟ್ಟುಗ ತಿರುವುತ್ತ
ಹೊಟ್ಟೆಯಲ್ಲಿ ಹೂವರಳಿಸ ಹೊರಟವನು
ಹಳ್ಳಿಗೆ ಹೋದಾಗ ಭ್ರಮೆ ಬಿಳುಚಿಕೊಂಡಿತು.
ಚೌಕಟ್ಟಿಲ್ಲದ ಊರಬಾಗಿಲು ನೆಲಮುಗಿಲು
ಪ್ರೈಮರಿ ಶಾಲೆಯಲ್ಲಿ ಶಾರದೆಗೆ ಸೀರೆ ಉಡಿಸುವ ಸಡಗರ
ಗೋಡೆಗಳ ಕಟ್ಟು ಕಳಚಿ ಗಾಳಿ ಬೆಳಕು ಅಗಾಧ
ಮೇಲು ಕೀಳು ತಲೆಕೆಳಗು ಮಾಡಿದ ಏಕೈಕ ವೇದಿಕೆ ಎಲ್ಲ ತರ-
ಗತಿಗಲ್ಲೆ ಸ್ಥಾನಮಾನ.
ಒಂದೊಂದ್ಲ ಒಂದು ವಂದಾಕೆ ಸಾ, ಬಸವ ಕಮಲ ಜಿಗುಟ್ದಾ ಸಾ
ಇತ್ಯಾದಿ ಹ್ರಸ್ವ ದೀರ್ಘ ವೈವಿಧ್ಯ ಸ್ವರಮೇಳ
ಸರಸ್ವತಿ ಸೌಧಕ್ಕೆ ಗುದ್ದಲಿಪೂಜೆಯ ಗದ್ದಲ.
ಊರ ಹೊಕ್ಕರೆ ಸಂದಿಗೊಂದಿಗಳಲ್ಲಿ ನೆಲಕ್ಕೆ ಕಾಲರ
ಕಕ್ಕಿತ್ತು; ಗಾರೆನೆಲ ಉಪ್ಪು ಉಕ್ಕಿತ್ತು
ಬೀದಿಯಲ್ಲೆಲ್ಲ ಭಾರತ ದರ್ಶನ;
ಹಿಟ್ಟಿನ ಸೀಕು ತಿನ್ನುತ್ತ ನಿಂತ ಸಿಂಬಳಬುರುಕ ತಲೆಕೆರುಕ
ಮೂಳೆಚಕ್ಕಳ ತಂಡತಂಡದ ಭವಿಷ್ಯ ಇಕ್ಕಳದಲ್ಲಿ ಬತ್ತಲೆ ಗ್ರಾಮಗಿರಣಿಯಲ್ಲಿ ಮೈತಳೆದ ಬೆರಣಿ
ಬಾಳು ಬಿಡಿಸುತ್ತ ಬಂದ ಸೊನ್ನೆ ಸರಣಿ
ನೊಗ ಹೊತ್ತು ಹೊರಟ ಬಡ ಎತ್ತಿನ ಕತ್ತು ಹುಣ್ಣು
ಗೋಣಿತಾಟಿನಲ್ಲಿ ಗೋವಿನ ಮೈ ನೀಟು ಮಾಡುವ ಹೆಣ್ಣು
ಇಲ್ಲದ ಹಾಲಿಗೆ ಕೆಚ್ಚಲು ಕಚ್ಚಿ ಚಪ್ಪರಿಸುವ ಕರು-
ವಿನ ಹಿಂದೆ ನಿಂತು ಮೂಸಿ ನೋಡುವ ನಾಯಿ
ಕಂಡು ಕಲ್ಲು ಎಸೆಯಲೆ ಎಂದುಕೊಂಡಾಗ
ಹಳ್ಳಿಗೇ ಹೆರಿಗೆ ಮಾಡಿಸಲು ಪ್ರಮಾಣವಚನ ಸ್ವೀಕರಿಸಿದ
ಪುಢಾರಿ ಹಲ್ಲು ಕಿಸಿದ
ಮೈ ತುಂಬ ಯೋಜನೆಯ ಮ್ಯಾಪು ಮುದ್ರಿಸಿಕೊಂಡು
ಮಾರುದ್ದ ಮಾತು ಹೊಸೆದ
ಬಚ್ಚಲಿನ ನೀರು ನಿಂತ ಕೊಚ್ಚೆ ಕಾಲುವೆಗೆ ಯಾರೋ ಒಬ್ಬ
ಸತ್ತ ಇಲಿ ಹೆಗ್ಗಣ ಎಸೆದ.
ಚಾವಡಿಯ ಚಂದ್ರಯಾನದ ಚರ್ಚೆಯಲ್ಲಿ
ಪೂಜಾರಿ ಪಾತ್ರ ಎಷ್ಟು ಗಾತ್ರ!
ಬೀಡಿಯ ಒಂದೊಂದು ದಮ್ಮಿಗೂ ತರಾವರಿ ಶೈಲಿ ಚಿಮ್ಮಿ
ಚಂದ್ರಯಾನ ಸುಳ್ಳು ಚಿಲ್ಲರೆ- ಎಂದು ಸಾರಿದ
ತನ್ನ ಮಂತ್ರಯಂತ್ರ ಎಷ್ಟು ಘನ ಬಲ್ಲಿರೆ- ಎಂದು ಭುಜ ಕುಣಿಸಿದ.
ಎಲ್ಲಿ ಸಲ್ಲದಿದ್ದರೂ ನನ್ನಲ್ಲಿ ಸಲ್ಲಿರೆ- ಎಂದು ಕರೆ ನೀಡಿದ
ಮಾತಿನಿಂದ ಮಾತಿಗೆ ಸರ್ಕಸ್ಸು ನೆಗೆತ ಮಗ್ನ ಮಹಾಜನರ
ಅನುಭವ ಮಂಟಪದಲ್ಲಿ ಗಾಂಧಿ ಇಂದಿರಾಗಾಂಧಿ ಸೇಂದಿ
ಎಲ್ಲ ಹುಟ್ಟಿಸತ್ತು ಸತ್ತುಹುಟ್ಟಿ ಪಾಪ!
ಸಂಸ್ಕಾರ ಮಾಡದೆ ಬರಿ ಸಂತಾಪ!
ತೆನೆ ತೆಕ್ಕೆಗೆ ತುಡಿಯುತ್ತ ಆಸ್ತಮ ಹತ್ತಿದ ಫಸಲು ಪಡೆದ ಬೆವರು
ಬರೆದ ಕತೆ ಲೆಕ್ಕಕ್ಕೆ ಸಿಕ್ಕದಷ್ಟು ಪುನರ್‌ಮುದ್ರಣವಾಗುತ್ತಿದೆ
ಅಷ್ಟು ಇಷ್ಟು ಬಂದರೆ ಪ್ರಕಾಶಕನ ಪಾಲಾಗುತ್ತಿದೆ.
ದಡ್ಡ ದೊಡ್ಡ ಕುರುಡು ಹುರುಡು ಬುದ್ಧಿಲದ್ದಿ
ಎಲ್ಲ ತರದ ತವರಾದ ಹಳ್ಳಿ
ಬಳ್ಳಿ ಹಬ್ಬಿದ ಸಾವುಚಪ್ಪರದಲ್ಲಿ ಮಣ್ಣ ಮದುವೆಯಾಗುತ್ತಿದೆ.
*****