ಪ್ರಿಯ ಸಖಿ,
ಕೆಲವರಿಗೆ ಸದಾ ಉಪದೇಶ ನೀಡುವ ಖಯಾಲಿ. ಯಾರು ಕೇಳಲಿ ಬಿಡಲಿ ಉಪದೇಶ ನೀಡುವ ಸಂದರ್ಭವಿರಲಿ ಬಿಡಲಿ, ಉಪದೇಶ ಕೇಳುವವನು ಅರ್ಹನಿರಲಿ ಬಿಡಲಿ ಉಪದೇಶಿಸುತ್ತಿರುವುದು ಅಂಥವರ ಹವ್ಯಾಸ. ಇಂತಹ ಚಟವನ್ನು ಕಂಡ ಸರ್ವಜ್ಞ ಹೀಗೆ ಹೇಳುತ್ತಾನೆ.
ಕೇಳುವವರಿದ್ದಿಹರೆ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
ಹೇಳಿ ಫಲವೇನು? ಸರ್ವಜ್ಞ!
ಹೌದಲ್ಲವೇ ಸಖಿ? ಕೇಳುವವರಿರುವಾಗ ನಾವು ಕೊಟ್ಟ ಉಪದೇಶಕ್ಕೊಂದು ಬೆಲೆ. ತಾನೇ ಕೋಳದಲಿ ಬಿದ್ದು, ಎಂದರೆ ದೌರ್ಬಲ್ಯ, ಕೆಟ್ಟಗುಣ, ಅಹಂಕಾರದ ಬಂಧನದಲ್ಲಿ ಬಿದ್ದು ನರಳುತ್ತಿರುವವನಿಗೆ ಎಷ್ಟು ಬುದ್ಧಿ ಹೇಳಿದರೆ ಏನು ಪ್ರಯೋಜನ? ನೀಚರಿಗೆ, ಮೂರ್ಖರಿಗೆ ಹೇಳಿದ ಉಪದೇಶದಿಂದ ನಮಗೇ ಕೇಡುಂಟಾಗುತ್ತದೆ ಎನ್ನುತ್ತಾರೆ ಹಿರಿಯರು. ಉಪದೇಶದ ಮಹತ್ವವನ್ನು ಅರಿಯದ ಅವರು ಅದು ತಮ್ಮ ಅಭಿಮಾನಕ್ಕೆ ಬಿದ್ದ ಪೆಟ್ಟೆಂದುಕೊಂಡು ಆ ಮಾತುಗಳಿಂದಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾರೆ.
ಅದಕ್ಕೆಂದೇ ಕವಿ ಷೇಕ್ಸ್ಪಿಯರ್ ಹೀಗೆ ಹೇಳುತ್ತಾನೆ. Speak when you are spoken to and come when you are called for ನಿನ್ನೊಂದಿಗೆ ಮಾತನಾಡಿದಾಗ ಮಾತನಾಡು ಮತ್ತು ನಿನ್ನನ್ನು ಕರೆದಾಗ ಮಾತ್ರ ಬಾ ಎಂದು. ಉಪದೇಶವನ್ನು ಅಥವಾ ತಿಳುವಳಿಕೆಯನ್ನು ಕೇಳಿದಾಗಷ್ಟೇ ನೀಡಿದಾಗ ಅದಕ್ಕೊಂದು ಘನತೆ ಬರುತ್ತದೆ. ಅದು ಬಿಟ್ಟು ಸಿಕ್ಕವರಿಗೆಲ್ಲಾ ಉಪದೇಶ ನೀಡಿದರೆ ವ್ಯರ್ಥವಾಗುತ್ತದೆ.
ಅದರೆ ಸಖಿ, ನಾವೇ ಉಪದೇಶವನ್ನು ಕೇಳುವವರಾದರೆ ಸದಾ ನಮ್ಮ ಕಿವಿಗಳನ್ನು ತೆರೆದಿಡೋಣ. ಒಳಿತಾದ ಮಾತು ಎಲ್ಲಿಂದಲೇ, ಯಾರಿಂದಲೇ ಬರಲಿ ಕೇಳೋಣ. ಆದರೆ ನಾವೇ ಉಪದೇಶ ಕೊಡುವವರಾದರೆ ಬಹಳಷ್ಟು ಯೋಚಿಸೋಣ. ಷೇಕ್ಸ್ಪಿಯರ್ ಹೇಳುತ್ತಾನೆ, From hearing comes wisdom, from speaking repentance. ಕೇಳುವುದರಿಂದ ಜಾಣತನ ಬರುತ್ತದೆ, ಮಾತನಾಡುವುದರಿಂದ ಪಶ್ಚಾತ್ತಾಪ
ಪಡಬೇಕಾಗುತ್ತದೆ ಎಂದು ಹೇಳಿ ಕೆಟ್ಟವರಾಗುವುದಕ್ಕಿಂತ ಅಥವಾ ಪಶ್ಚಾತ್ತಾಪ ಪಡುವುದಕ್ಕಿಂತಾ ಒಳ್ಳೆಯ ಕೇಳುಗರಾಗುವುದೇ ಮೇಲಲ್ಲವೇ ಸಖಿ?
*****