ಭ್ರಮಣ – ೭

ಭ್ರಮಣ – ೭

ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ್ದಳು ಕಲ್ಯಾಣಿ. ಅವಳು ಹೇಳಿದ ಕಲಿಕೆಯ ಮಾತುಗಳು ಅವನ ಬುರುಡೆಯಲ್ಲಿ ಏರಲಿಲ್ಲ. ಕಲ್ಯಾಣಿ, ಸಮಾಧಾನದಿಂದ ಆತ್ಮೀಯತೆಯಿಂದ ಮಾತಾಡಿದ ದನಿಯೇ ಅವನ ಮನವನ್ನೆಲ್ಲಾ ಸುತ್ತುವರಿದುಬಿಟ್ಟಿತ್ತು. ತಂಡದ ಎಲ್ಲರಿಗಿಂತ ತಾನೇ ಅವಳಿಗೆ ಹೆಚ್ಚು ಬೇಕಾದವನು ಎಂಬ ಭಾವನೆ ಹುಟ್ಟಿಬಿಟ್ಟಿತು. ಅದಕ್ಕೆ ಕಾರಣ ಅವನು ಹುಟ್ಟಿದಾಗಿನಿಂದ ಯಾರ ಪ್ರೀತಿ, ಪ್ರೇಮಗಳಿಗೂ ಪಾತ್ರನಾಗಿರಲಿಲ್ಲ. ಅವಳು ತನ್ನನ್ನು ತನ್ನವನೆಂದುಕೊಳ್ಳುತ್ತಾಳೆ, ಎಲ್ಲರಿಗಿಂತ ತನ್ನ ಬಹಳ ಅಕ್ಕರೆಯಿಂದ ಕಾಣುತ್ತಾಳೆ ಎಂಬ ಅನಿಸಿಕೆ ಅವನನ್ನು ಭಾವುಕ ಹೊಳೆಯಲ್ಲಿ ಹೊಡೆದುಕೊಂಡು ಹೋಗುವಂತೆ ಮಾಡಿತು.

ಬಂಡೇರಹಳ್ಳಿಯಲ್ಲಿ, ಪೋಲೀಸ್ ಸ್ಟೇಷನ್ ಹುಟ್ಟಿಕೊಂಡಿರುವುದು ಕಲ್ಲಕ್ಕನನ್ನು ಮುಗಿಸಲೇ ಎಂದವನು ಗಟ್ಟಿಯಾಗಿ ನಂಬಿದ್ದ. ಅದರಿಂದ ಈ ಇನ್ಸ್‌ಪೆಕ್ಟರ್ ಮಹಾ ಕಿರಾತಕನಿರಬಹುದು ಅದಕ್ಕೆ ಅವನನ್ನು ಇಲ್ಲಿ ಕಳುಹಿಸಲಾಗಿದೆ ಎಂಬ ಅವನ ಊಹೆಗಳು ಬೃಹದಕಾರಾ ತಾಳಿದ್ದವು. ಮೊದಲು ಆ ಇನ್ಸ್‌ಪೆಕ್ಟರ್‌ನನ್ನು ಮುಗಿಸಿಬಿಟ್ಟರೆ ಪೀಡೆ ತೊಲಗುತ್ತದೆ. ಅಕ್ಕನಿಗೆ ಮತ್ಯಾವ ತೊಂದರೆಯೂ ಉಂಟಾಗುವುದಿಲ್ಲ ಎಂಬ ವಿಚಾರ ಅವನಲ್ಲಿ ಅಂಕುರಿಸಿ ಬೆಳೆಯುತ್ತಾ ಹೋದಹಾಗೆ ಅವನಿಗರಿವಿಲ್ಲದಂತೆ ಅದರ ಯೋಜನೆಯೂ ರೂಪು ತಾಳತೊಡಗಿತು. ಅದರ ಜತೆಜತೆಗೇ ಅಕ್ಕನ ಮೇಲಿದ್ದ ಅವನ ಭಾವುಕ ಅಕ್ಕರೆ ಹೆಚ್ಚಾಗತೊಡಗಿತು.

ಹಳ್ಳಿಯ ಜನ ಏನು ಮಾತಾಡಿಕೊಳ್ಳುತ್ತಿದ್ದಾರೆ. ಪೋಲಿಸಿನವರು ಏನು ಮಾಡುತ್ತಿದ್ದಾರೆ ತಿಳಿದುಕೊಂಡು ಬರಲು ಅವನನ್ನು ಬಂಡೇರಹಳ್ಳಿಗೆ ಕಳಿಸಿದ್ದಳು ಕಲ್ಯಾಣಿ. ಹಳ್ಳಿಯಲ್ಲಿ ಅವಳ ತಂಡದವರಾರೇ ಆಗಲಿ ಒಬ್ಬರೇ ಬಂದಾಗ ಅವರ ವೇಷ ಬದಲಾಗಿರುತ್ತಿತ್ತು. ಅಡ್ಡಪಂಚೆ ಸುತ್ತಿ ಅದರ ಮೇಲೆ ಅರ್ಧ ತೋಳಿನ ಶರ್ಟ್‌ನ್ನು ತೊಟ್ಟು, ಬಂಡೇರಹಳ್ಳಿಗೆ ಬಂದಿದ್ದ ನಾಗೇಶ. ಅವನು ಸೊಂಟದಲ್ಲಿ ಅಡಗಿಸಿಟ್ಟುಕೊಂಡ ರಿವಾಲ್ವರ್ ಯಾರಿಗೂ ಕಾಣುವ ಹಾಗಿರಲಿಲ್ಲ. ಹಳ್ಳಿಗರಲ್ಲಿ ಒಬ್ಬನಾಗಿ ಓಡಾಡುತ್ತಿದ್ದ ಅವನು ಯಾರೆಂಬುದು ಅಲ್ಲಿನ ಕೆಲವರಿಗೆ ಗೊತ್ತಿತ್ತು.

ಆದರೆ ಯಾರೂ ಅದರ ಬಗ್ಗೆ ಬಾಯಿಬಿಡುವವರಲ್ಲ. ಅಷ್ಟೊಂದು ಅಲ್ಲಿಯ ಜನಕ್ಕೆ ಕಲ್ಲಕ್ಕನ ಮೇಲಿರುವ ಆದರಾಭಿಮಾನ. ತಾವು ಕ್ರಾಂತಿಕಾರಿಯರಾಗಿರದಿದ್ದರೂ ಅವಳಿಗಾಗಿ ತಮ್ಮ ಪ್ರಾಣವನ್ನು ಸಹಿತ ಕೊಡಲು ಸಿದ್ಧರಿದ್ದರು ಹಲವರು.

ಸೊಂಟದಲ್ಲಿ ಸಿಕ್ಕಿಸಿಕೊಂಡ ಆಯುಧವನ್ನು ಎರಡೆರಡು ಸಲ ತಡವಿ ನೋಡಿಕೊಂಡು ಪೊಲೀಸ್ ಸ್ಟೇಷನ್ನಿನ ಕಟ್ಟಡದ ಎದುರಿನಿಂದ ಹಾದ ನಾಗೇಶ. ಅವನಿಗಲ್ಲಿ ಯಾವ ಚಟುವಟಿಕೆಯೂ ಕಾಣಲಿಲ್ಲ. ಅದರ ಬಾಗಿಲೆದುರು ಒಬ್ಬ ಪೇದೆ ನಿರಾಸಕ್ತಿಯಿಂದ ಎದುರಿಗೆ ನಡೆಯುತ್ತಿರುವ ಚಟುವಟಿಕೆಯನ್ನು ನೋಡುತ್ತಿರುವಂತೆ ಕುಳಿತಿದ್ದ. ನಾಗೇಶನ ಬುದ್ದಿ ಕೆಲಸ ಮಾಡಲಾರಂಭಿಸಿತು. ಪೊಲೀಸ್ ಜೀಪು ಅಲ್ಲೇ ಇದೆ. ಅಂದರೆ ಇನ್ಸ್ ಪೆಕ್ಟರ್‌ ಇಲ್ಲೇ ಎಲ್ಲೋ ಇರಬೇಕು. ಅವನು ಪೊಲೀಸ್ ಸ್ಟೇಷನ್‌ನಲ್ಲಿ ಇರಲಿಕ್ಕಿಲ್ಲ. ಇದ್ದಿದ್ದರೆ ಈ ಪೇದೆಯ ಹಾಗೆ ಸೋಮಾರಿಯಂತೆ ಕುಳಿತಿರುತ್ತಿರಲಿಲ್ಲ. ಅವನನ್ನು ಹುಡುಕಬೇಕು ಎಂದುಕೊಳ್ಳುತ್ತಾ ಎದುರಿನ ಹೋಟಲಿನಲ್ಲಿ ಹೋಗಿ ಕುಳಿತ. ಅವನು ಕೇಳದೆಯೇ ಸಪ್ಲೆಯರ್ ಅವನೆದುರು ಕಾಫಿ ತಂದಿಟ್ಟ. ಪೊಲೀಸ್ ಸ್ಟೇಷನ್ನಿನ ಮೇಲಿಂದ ಗಮನ ಸರಿಸದೇ ಅದನ್ನು ಕುಡಿಯತೊಡಗಿದ ನಾಗೇಶ.

ಆ ಇನ್ಸ್‌ಪೆಕ್ಟರ್‌ನನ್ನು ಕೊಲೆ ಮಾಡುವುದು ಅಷ್ಟು ಕಷ್ಟಕರ ಕೆಲಸವಾಗಿ ಕಾಣುತ್ತಿರಲಿಲ್ಲ ನಾಗೇಶನಿಗೆ ಎದುರಿಗೆ ಹೋಗಿ ಗುಂಡು ಹಾರಿಸಿದರಾಯಿತು. ಒಂದೇ ಗುಂಡಿಗೆ ಅವನ ಕಥೆ ಮುಗಿಯುತ್ತದೆ. ಅವರುಗಳು ತನ್ನ ಬಂಧಿಸಬಹುದು ಹಿಂಸೆ ಕೊಡಬಹುದು. ಏನಾದರೂ ಮಾಡಿ ಕಲ್ಲಕ್ಕ ತನ್ನ ಬಿಡಿಸಿಕೊಳ್ಳುತ್ತಾಳೆ. ಅದು ಸಾಧ್ಯವಾಗದಿದ್ದರೆ ಈ ಪೋಲಿಸಿನವರು ತನ್ನ ಕೊಲ್ಲಬಹುದು. ತಾನು ಸತ್ತರ ಸತ್ತೆ ಅಕ್ಕನಂತೂ ಸುರಕ್ಷಿತವಾಗಿರುತ್ತಾಳಲ್ಲ, ಅದೇ ಸಾಕು ಎಂದುಕೊಂಡಿದ್ದ.

ಕಾಫಿ ಕುಡಿದು ಅರ್ಧ ಗಂಟೆಯನಂತರ ಎಸ್‌.ಐ. ಮತ್ತು ಎಚ್.ಸಿ. ಬಂದದ್ದನ್ನು ನೋಡಿದ. ಅದರಿಂದ ಅವನ ಹೃದಯಬಡಿತ ಜೋರಾಗಿತ್ತು. ಇನ್ನೇನು ಇನ್ಸ್‌ಪೆಕ್ಟರ್ ಬರಬಹುದು ತನ್ನ ಕೆಲಸ ಮುಗಿಯುತ್ತದೆ. ಎಂಬ ಅನಿಸಿಕೆಯಿಂದಲೇ ಅವನ ಹೃದಯಬಡಿತ ಜೋರಾಯಿತು. ಇವನನ್ನು ಮುಗಿಸಿದರೆ ತಾನಿನ್ನೂ ಹಸುಳೆಯಲ್ಲ ಎಂಬುವುದು ದಳದವರಿಗೂ ತಿಳಿಯುತ್ತದೆ. ಅಕ್ಕ ಹೆಮ್ಮೆಯಿಂದ ಹಿಗ್ಗಬಹುದು.

ತನ್ನಲ್ಲಿರುವ ಆಯುಧ ಬಿಹಾರದ ಯಾವುದೋ ಕಳ್ಳ ಕಾರ್ಖಾನೆಯಲ್ಲಿ ತಯಾರಾದದ್ದು ಮತ್ತು ಅದರ ಸಾಮರ್ಥ್ಯ ಎಷ್ಟೆಂಬುವುದು ಅವನಿಗೆ ಗೊತ್ತಿರಲಿಲ್ಲ. ಇನ್ಸ್‌ಪೆಕ್ಟರ್‌ ಇನ್ನೂ ಬಾರದಿರಲು ಅವನ ಮನದ ವ್ಯಾಕುಲತೆ ಮುಖದಲ್ಲಿ ಕಾಣಲಾರಂಭಿಸಿತು. ಎಸ್.ಐ. ಮತ್ತು ಎಚ್.ಸಿ. ಬಂದರೂ ಪೊಲೀಸ್ ಸ್ಟೇಷನ್ನಿನಲ್ಲಿ ಯಾವ ಚಟುವಟಿಕೆ ಹುಟ್ಟದಿರುವದು ಅವನಲ್ಲಿ ಆಶ್ಚರ್ಯ, ಕಾತುರಗಳನ್ನು ಹೆಚ್ಚಿಸಿತು. ಒಂದು ಅರ್ಧ ಗಂಟೆ ಅವನಿಗೆ ಅಲ್ಲಿ ಕೂಡಲಾಗಲಿಲ್ಲ. ಏನಾದರೂ ಆದಷ್ಟು ಬೇಗ ಕೂಡಲೇ ಮಾಡಬೇಕೆಂಬ ಹಟದಿಂದ ಅಲ್ಲಿಂದ ಎದ್ದ ನಾಗೇಶ, ಅತಿಯಾದ ಆವೇಗ, ವ್ಯಾಕುಲತೆಯ ಕಾರಣ ಅವನು ಸರಿಯಾಗಿ ಯೋಚಿಸುವ ಸ್ಥಿತಿಯಲ್ಲೂ ಇರಲಿಲ್ಲ.

ನೇರವಾಗಿ ನಡೆಯುತ್ತಾ ಬೇಸರದಿಂದ ಕಟ್ಟೆಯ ಮೇಲೆ ಕುಳಿತ ಪೇದೆಯನ್ನು ಕೇಳಿದ.

“ಇನ್ಸ್‌ಪೆಕ್ಟರ್ ಸಾಹೇಬರೆಲ್ಲಿ?” ಆವೇಶದ ಕಾರಣ ಅವನ ದನಿಯಲ್ಲಿ ನಮ್ರತೆಯೂ ಇರಲಿಲ್ಲ. ಬೇಸರ ತೊಲಗಿದ ಪೇದೆ ಅವನನ್ನು ಕೆಳಗಿನಿಂದ ಮೇಲಿನವರೆಗೆ ಪರೀಕ್ಷಾತ್ಮಕವಾಗಿ ನೋಡಿದ. ಅವನ ನೋಟವನ್ನು ದಿಟ್ಟತನದಿಂದ ಎದುರಿಸಿದ ನಾಗೇಶನ ಕೈ ಅವನಿಗರಿವಿಲ್ಲದಂತೆ ಸೊಂಟದ ಮೇಲೆ ಹೋಯಿತು. ತಾನು ನೋಡುವುದನ್ನು ಮುಗಿಸಿದ ಪೇದೆ ಕೇಳಿದ

“ಏನು ಕೆಲಸವಿತ್ತು?”

“ಅವರಿಗೇ ಹೇಳಬೇಕು ಯಾವಾಗ ಬರುತ್ತಾರೆ?” ಕೇಳಿದ ನಾಗೇಶ. ಅವನಿಗೆ ಕೆಲಸ ಬೇಗ ಮುಗಿಸುವ ಆತುರ.

“ಕಾದಿರು ಅವರು ಯಾವ ಸಮಯದಲ್ಲಾದರೂ ಬರಬಹುದು” ಹೇಳಿದ ಪೇದೆ. ಅವನ ದನಿಯಲ್ಲಿ ಈಗ ಬೇಸರ, ಮರು ಮಾತಿಲ್ಲದೇ ಪೋಲಿಸ್ ಸ್ಟೇಷನ್ನಿನ ಕಟ್ಟಡವನ್ನೆಲ್ಲಾ ಒಮ್ಮೆ ಪರೀಕ್ಷಿಸುವಂತೆ ನೋಡಿ ಮತ್ತೆ ಹೋಟೆಲಿನ ಕಡೆ ಹೆಜ್ಜೆ ಹಾಕಿದ ನಾಗೇಶ.

ಅವನು ಕುಳಿತ ಕಡೆಯಿಂದ ಪೋಲಿಸ್ ಸ್ಟೇಷನ್ನಿನ ಕಟ್ಟಡ ಚೆನ್ನಾಗಿ ಕಾಣುತ್ತಿತ್ತು. ಆದರೆ ಪೇದೆ ಒಳಗಿನವರಿಗೆ ಹೇಳಿದ ಮಾತು ಅವನಿಗೆ ಕೇಳಿಸಲಿಲ್ಲ. ಹಾಗೇ ಚಿಕ್ಕ ಕಿಟಕಿಯಿಂದ ಎಚ್.ಸಿ. ಅವನನ್ನೇ ನೋಡುತ್ತಿರುವುದು ಕೂಡ ಅವನ ಗಮನಕ್ಕೆ ಬರಲಿಲ್ಲ. ಇನ್ನೂ ಇಪ್ಪತ್ತು ನಿಮಿಷಗಳು ಹಾಗೇ ಕಳೆದವು. ಕ್ಷಣಕ್ಷಣಕ್ಕೂ ಅವನ ಮುಖದಲ್ಲಿ ಕಾತುರ ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನು ಇಲ್ಲಿ ಕುಳಿತರೆ ಪ್ರಯೋಜನವಿಲ್ಲ ತಾನೇ ಅವನನ್ನು ಹುಡುಕುತ್ತಾ ಹೋಗಬೇಕು ಎಂದುಕೊಂಡು ಹೋಟಲಿನಿಂದ ಹೊರಬಿದ್ದ.

“ಕಲ್ಲಕ್ಕೆ ಎಷ್ಟು ಪ್ರಸಿದ್ಧಳೆಂಬುವುದೂ ನಾಗೇಶನಿಗೆ ಗೊತ್ತಿರಲಿಲ್ಲ. ಅದು ಗೊತ್ತಿದ್ದರೆ ಅವನು ಯಾವ ಹಳ್ಳಿಗನನ್ನಾದರೂ ಕೇಳಿದ್ದರೆ ವಿಷಯ ಸುಲಭವಾಗಿ ತಿಳಿಯುತ್ತಿತ್ತು. ಎಲ್ಲಿ ಹುಡುಕಬೇಕೆಂಬ ಯೋಚನೆಯಲ್ಲಿ ಹಾಗೇ ಅವನು ಸ್ವಲ್ಪ ದೂರ ಬಂದಾಗ ಹಿಂದಿನಿಂದ ಹೇಳಿದ ಪೇದೆ.

“ಇನ್ಸ್‌ಪೆಕ್ಟರ್ ಸಾಹೇಬರು ಬಂದಿದ್ದಾರೆ.”

ಅದನ್ನು ಕೇಳುತ್ತಲೇ ಒಮ್ಮೆಲೆ ಹಿಂತಿರುಗಿದ ನಾಗೇಶ, ಅದಕ್ಕಾಗೆ ಕಾದಂತೆ ಅವನು ಅಲುಗಾಡದ ಹಾಗೇ ಹಿಡಿದವು. ಎಚ್.ಸಿ.ಯ ಕೈಗಳು, ಅವನು ಅಚ್ಚರಿಯಿಂದ ಚೇತರಿಸಿಕೊಳ್ಳುವ ಮೊದಲು ಪೇದೆ ಅವನ ಸೊಂಟದಿಂದ ರಿವಾಲ್ವರ್ ತೆಗೆದ. ಇಬ್ಬರೂ ಅವನನ್ನು ನಯವಾಗಿ ಮಾತಾಡಿಸುತ್ತಾ ಪೊಲೀಸ್ ಸ್ಟೇಷನ್ನಿಗೆ ತಂದರು. ಒಂದು ಸಲ ನಾಗೇಶ ಪೊಲಿಸ್ ಸ್ಟೇಷನ್ನಿನ್ನೊಳಗಡಿ ಇಟ್ಟಾಕ್ಷಣ ಎಸ್.ಐ., ಎಚ್.ಸಿ. ಮತ್ತು ಪೇದೆಯರು ತಮ್ಮನ್ನು ಬಂಡೇರಹಳ್ಳಿಗೆ ವರ್ಗಾಯಿಸಿದ ರೋಷವನ್ನೆಲ್ಲಾ ಅವನ ಮೇಲೆ ತೀರಿಸಿಕೊಳ್ಳಲಾರಂಭಿಸಿದರು. ಎಸ್.ಐ. ಮುಖಕ್ಕೆ ಬಲವಾದ ಗುದ್ದು ಗುದ್ದಿ ಕೇಳಿದ.

“ನೀನು ಕಲ್ಲಕ್ಕನ ದಳದವನೇನೋ?”

“ಅಲ್ಲ” ನೋವನ್ನು ಸಹಿಸುತ್ತಾ ಸಿಟ್ಟಿನಿಂದ ಅವನನ್ನು ದುರುಗುಟ್ಟುತ್ತಾ ಹೇಳಿದ ನಾಗೇಶ. ಪಕ್ಕದಲ್ಲಿ ನಿಂತಿದ್ದ ಎಚ್.ಸಿ.ಯ ಬೂಟುಗಾಲು ಅವನ ಪುಷ್ಟಕ್ಕೆ ಅಪ್ಪಳಿಸಿತು. ವ್ಯಂಗ್ಯದ ದನಿಯಲ್ಲಿ ಹೇಳಿದ.

“ಈ ಬೋಳಿಮಕ್ಕಳು ಹೀಗೆ ಬಾಯಿ ಬಿಡುವುದಿಲ್ಲ. ಇವನನ್ನು ಕುರ್ಚಿಗೆ ಕಟ್ಟಿಹಾಕಿ”

ನಾಗೇಶನನ್ನು ಅಲ್ಲಿದ್ದ ಎಲ್ಲರೂ ಸುತ್ತುವರೆದಿದ್ದರು. ಮುಂಬಾಗಿಲ ಕಡೆ ಒಮ್ಮೆ ಕಣ್ಣು ಹಾಯಿಸಿದ ಅವನು ಎದುರಿಗಿದ್ದ ಎಸ್.ಐ.ನ ಹೊಟ್ಟೆಗೆ ಬಲವಾಗಿ ಒದ್ದ. ಅನಿರೀಕ್ಷಿತ ಆ ಏಟಿಗೆ ಕೆಳಗೆ ಬಿದ್ದನಾತ. ಹೊರಗೆ ಓಡಲು ನಾಗೇಶ ಒಂದು ಹೆಜ್ಜೆ ಹಾಕಿದಾಗ ಹಿಂದಿನಿಂದ ಅವನ ಸೊಂಟಕ್ಕೆ ಬಿತ್ತು ಬಲವಾದ ಒದೆ. ಮುಗ್ಗರಿಸಿ ಅವನು ಕೆಳಗೆ ಬಿದ್ದ. ಮುಖದ ಮೇಲೆ ಬಿದ್ದ ಹೊಡೆತದ ಕಾರಣ, ಈಗ ಮುಗ್ಗರಿಸಿ ಕೆಳಗೆ ಬಿದ್ದ ಕಾರಣ ಅವನ ಮೂಗು ತುಟಿಗಳಿಂದ ರಕ್ತ ಬರಲಾರಂಭಿಸಿತ್ತು. ಬಿದ್ದ ಅವನನ್ನು ಕುತ್ತಿಗೆಯ ಮೇಲೆ ಕೈಹಾಕಿ ಎಬ್ಬಿಸಿದ ಒಬ್ಬ ಪೇದೆ. ತನ್ನ ಆವರೆಗಿನ ಸರ್ವೀಸಿನಲ್ಲಿ ಎಂದೂ ಪೊಲೀಸ್ ಸ್ಟೇಷನ್ನನಲ್ಲೇ ಒಬ್ಬ ಬಂದಿಯಿಂದ ಹೊಡೆಸಿಕೊಂಡಿರಲಿಲ್ಲ ಆ ಎಸ್.ಐ. ಅವನು ತನ್ನ ಆರೋಪವನ್ನೆಲ್ಲಾ ನಾಗೇಶನ ಮೇಲೆ ತೀರಿಸಿಕೊಳ್ಳಲಾರಂಭಿಸಿದ. ಹೊಡೆತಗಳ ನೋವು ತಾಳಲಾರದೇ ಅವನ ಬಾಯಿಂದ ವಿವಿಧ ಚೀತ್ಕಾರಗಳು ಹೊರಡತೊಡಗಿದವು. ಆ ಕೂಗುಗಳು ಬಹುದೂರದವರೆಗೆ ಹರಡಿ ಹಳ್ಳಿಗರನ್ನು ಭಯಭ್ರಾಂತರನ್ನಾಗಿ ಮಾಡಿದವು.

ಗಾಢನಿದ್ದೆಯಲ್ಲಿದ್ದ ತೇಜಾನನ್ನು ಅಲುಗಿಸಿ ಎಬ್ಬಿಸಿದ ಗುಂಡು. ಎಚ್ಚೆತ್ತ ಅವನು ಇನ್ನೂ ತನ್ನ ನಿದ್ದೆಯ ಗುಂಗಿನಿಂದ ಹೊರಬರುವ ಮೊದಲು ಹೇಳಿದ ಗುಂಡು.

“ನಿಮ್ಮವರು. ಪೋಲೀಸ್ ಸ್ಟೇಷನ್‌ನಲ್ಲಿ ಒಬ್ಬನನ್ನು ಹೊಡೆದು ಕೊಂದುಬಿಡುತ್ತಿದ್ದಾರೆ”

ಆ ಮಾತು ಮೆದುಳಿನಲ್ಲಿ ಇಳಿಯುತ್ತಿದ್ದ ಹಾಗೇ ತೇಜಾ ನಿದ್ದೆಯ ಗುಂಗಿನಿಂದ ಹೊರಬಂದ. ಯಾವ ಮಾತೂ ಆಡದೇ ಲಗುಬಗೆಯಿಂದ ಬಟ್ಟೆ ಬದಲಿಸಿದ ಅವನು ಪೊಲೀಸ್ ಸ್ಟೇಷನ್ ಕಡೆ ಧಾವಿಸಿದ.

ತೇಜಾ ಅಲ್ಲಿಗೆ ಬರುವಲ್ಲಿ ಅರೆಜೀವವಾಗಿದ್ದ ನಾಗೇಶ. ಕೋಪಾವೇಶದಿಂದ ಗರ್ಜಿಸಿ ಹೊಡೆಯುತ್ತಿದ್ದ ತನ್ನವರನ್ನು ತಡೆದು ಮೊದಲು ವಿಷಯ ತಿಳಿದುಕೊಂಡ.

“ಈ ಬೋಳಿಮಗ ನನ್ನ ಪೋಲಿಸ್ ಸ್ಟೇಷನ್ನಿನಲ್ಲಿ ಹೊಡೆದಿದ್ದಾನೆ ಸರ್. ನನ್ನ ಜೀವಮಾನದಲ್ಲಿ ಯಾರಿಂದಲೂ ಏಟು ತಿಂದವನಲ್ಲ ನಾನು”

ತನಗಾದ ಅವಮಾನಕ್ಕೆ ನಾಗೇಶನನ್ನು ಕೊಂದೇಬಿಡಬೇಕು ಎಂಬಂತಿತ್ತವನ ಮಾತಿನ ಧೋರಣೆ. ಅದನ್ನು ಕೇಳಿಸಿಕೊಳ್ಳದವನಂತೆ ನಾಗೇಶನನ್ನು ಪೂರ್ತಿ ಚೆಕ್ ಮಾಡಿ ಅವನಲ್ಲಿ ಇನ್ಯಾವ ಆಯುಧ ಮತ್ತು ವಿಷವಿಲ್ಲವೆಂಬುವುದು ಖಚಿತಪಡಿಸಿಕೊಂಡು ಅವನನ್ನು ತನ್ನ ಕೋಣೆಯಲ್ಲಿ ಹಾಕಿ ಬಾಗಿಲು ಮುಚ್ಚಿ ತನ್ನ ಸಹೋದ್ಯೋಗಿಗಳನ್ನು ದೂರ ಕರೆದು ಸಿಟ್ಟಿನ ದನಿಯಲ್ಲಿ ಹೇಳಿದ ತೇಜಾ.

“ನಿಮಗೇನಾದರೂ ಬುದ್ದಿ ಇದೆಯೇ! ಕ್ರಾಂತಿಕಾರಿಯರನ್ನು ಎಂದಾದರೂ ನೋಡಿದ್ದೀರಾ! ಇತ್ತೀಚೆಗಷ್ಟೇ ಕ್ರಾಂತಿಕಾರಿಯರ ಚಟುವಟಿಕೆಗಳು ಇಲ್ಲಿ ಆರಂಭವಾಗಿದೆ. ಅದಕ್ಕೆ ಅವರ ಬಗ್ಗೆ ನಿಮಗೇನೂ ಗೊತ್ತಿಲ್ಲ. ಇವನನ್ನು ಕೊಂದು ನಾವು ಸುಲಭವಾಗಿ ಕಾಡಿನಲ್ಲಿ ಎಸೆದುಬಿಡಬಹುದು! ಅದರಿಂದ ಏನಾಗುತ್ತದೆ. ನೀವುಗಳು ಮನೆಗೆ ಸುರಕ್ಷಿತವಾಗಿ ಸೇರುತ್ತಿರೋ ಇಲ್ಲವೋ ಹೇಳಲಾಗುವುದಿಲ್ಲ. ಬರೀ ನಿಮಗೆ ಅಲ್ಲ ನಿಮ್ಮ ಮನೆಯವರೂ ಇದರ ಪರಿಣಾಮವನ್ನು ಎದುರಿಸಬೇಕಾಗಿರಬರಬಹುದು… ಸ್ವಲ್ಪ ಬುದ್ಧಿ ಉಪಯೋಗಿಸಿ ಕೆಲಸ ಮಾಡಿ ನಾವಿಲ್ಲಿ ಬಂದಿರುವುದು ಈ ಸಣ್ಣಪುಟ್ಟ ಕ್ರಾಂತಿಕಾರಿ ಹಸುಳೆಗಳನ್ನು ಹಿಡಿಯಲಿಕ್ಕಲ್ಲ. ನಮಗೆ ಇವರ ನಾಯಕಿ ಬೇಕು. ನೀವು ಎಷ್ಟೇ ಹಿಂಸೆ ಕೊಡಿ ಅವನು ಬಾಯಿ ಬಿಡಲಿಕ್ಕಿಲ್ಲ. ಯಾಕೆಂದರೆ ತಾನು ಸತ್ತಿದ್ದೇನೆಂದು ತಿಳಿದೇ ಅವನೀ ಚಳುವಳಿಯಲ್ಲಿ ಸೇರಿರುವುದು. ಒಂದು ವೇಳೆ ಬಾಯಿಬಿಟ್ಟರೂ ಆವರೆಗೆ ಇವನ ನಾಯಕಿ ಮತ್ತು ದಳದ ಇನ್ನಿತರ ಸದಸ್ಯರು ತಮ್ಮ ಠಿಕಾಣಿ ಬದಲಾಯಿಸಿಬಿಟ್ಟಿರಬಹುದು. ಒಂದು ಮಾತು ಚೆನ್ನಾಗಿ ನೆನಪಿಡಿ ಅವರುಗಳು ತಮ್ಮ ಸೇಡನ್ನು ತೀರಿಸಿಕೊಳ್ಳುವವರೆಗೂ ಸುಮ್ಮನಿರುವವರಲ್ಲ. ಅರ್ಥವಾಯಿತೆ.”

ಸಿಟ್ಟು, ನಿಸ್ಸಹಾಯತೆಗಳಿಂದ ತುಂಬಿದ ತೇಜಾನ ಭಾಷಣದಂತ ಮಾತು ಅವರೆಲ್ಲರ ಮೇಲೂ ಬಹಳ ಪ್ರಭಾವ ಬೀರಿತು. ಸಾವಿನ ಭಯ ಅವರೆಲ್ಲರ ಮುಖದಲ್ಲಿ ಅಷ್ಟೊತ್ತಿದ್ದಂತೆ ಕಂಡುಬರುತ್ತಿತ್ತು. ಅಪರಾಧಿಗಳಂತೆ ನಿಂತಿದ್ದ ಅವರಲ್ಲಿ ಯಾರೂ ಮಾತಾಡಲಿಲ್ಲ. ಅವರಿಗೆ ಸಮಾಧಾನ ಹೇಳುವಂತ ದನಿಯಲ್ಲಿ ಮತ್ತೆ ತಾನೇ ಮಾತಾಡಿದ ತೇಜಾ.

“ಆದದ್ದು ಆಗಿ ಹೋಯಿತು! ಇನ್ನು ಮುಂದಾದರೂ ಜಾಗ್ರತೆಯಾಗಿ ಕೆಲಸ ಮಾಡಿ… ಎಲ್ಲಿ ಅವನ ಬಳಿಯಿದ್ದ ರಿವಾಲ್ವರ್ ಇಲ್ಲಿ ಕೊಡಿ. ನಾನವನೊಡನೆ ಮಾತಾಡುತ್ತೇನೆ.”

ಎಚ್.ಸಿ. ನಾಗೇಶನಿಂದ ವಶಪಡಿಸಿಕೊಂಡಿದ್ದ ರಿವಾಲ್ವರನ್ನು ಅವನಿಗೆ ಕೊಟ್ಟ.

“ಯಾರನ್ನೂ ಒಳಬಿಡಬೇಡಿ” ಎಂದ ತೇಜಾ ತನ್ನ ಕೋಣೆಯಲ್ಲಿ ಹೋದ.

ಹೊಡೆತಗಳ ಹಿಂಸೆಯಿಂದ ಮುಕ್ತನಾದ ನಾಗೇಶ ಕುರ್ಚಿಯೊಂದರಲ್ಲಿ ಕುಸಿದು ಕುಳಿತಿದ್ದ ಅವನ ಮುಖ ಭಾವ ಎಲ್ಲಾ ಯೋಚನೆಗಳಿಂದ ಮುಕ್ತವಾದಂತೆ ಕಂಡುಬರುತ್ತಿತ್ತು. ಕರವಸ್ತ್ರವನ್ನು ನೀರಿನಲ್ಲಿ ಅದ್ದಿ ಅವನ ಗಾಯಗಳನ್ನು ಶುಚಿಗೊಳಿಸಲಾರಂಭಿಸಿದ ತೇಜಾ, ತುಟಿ ಒಡೆದು ಅದರಿಂದ ರಕ್ತ ಇನ್ನೂ ಬರುತ್ತಲೇ ಇತ್ತು. ಕೋಣೆಯಿಂದ ಹೊರಗಿಣುಕಿದ ಅವನು ಸ್ಟೇಷನ್ನಿನ ಹೊರಗೆ ಇದ್ದ ಮುದುಕನನ್ನು ಕರೆಯುವಂತೆ ಪೇದೆಗೆ ಹೇಳಿದ. ಗುಂಡು ತಾತ ಬರುತ್ತಲೇ ಅವನಿಗೆ ಅಲ್ಲಿ ಯಾರಾದರೂ ಡಾಕ್ಟರ್, ಕಾಂಪೌಂಡರ್, ವೈದ್ಯ ಯಾರನ್ನಾದರೂ ಕರೆತರುವಂತೆ ಹೇಳಿದ. ಆತ ಆ ಕೆಲಸಕ್ಕೆ ಓಡುತ್ತಲೇ ಒಳಬಂದ ಅವನು ಕರವಸ್ತ್ರವನ್ನು ಇನ್ನೂ ನೆನಸಿ ನಾಗೇಶನ ಒಡೆದ ತುಟಿಯ ಮೇಲೆ ಒತ್ತಿ ಹಿಡಿದು ಬಹು ಕಾಳಜಿಯ ದನಿಯಲ್ಲಿ ಕೇಳಿದ –

“ಬಹಳ ನೋಯುತ್ತಿದೆಯೇ?”

ಅದಕ್ಕೆ ನಾಗೇಶ ಯಾವ ಉತ್ತರವನ್ನೂ ಕೊಡಲಿಲ್ಲ. ಮತ್ತೆ ತೇಜಾನೇ ಮಾತಾಡಿದ

“ಇದನ್ನು ಹೀಗೆ ಗಟ್ಟಿಯಾಗಿ ಒತ್ತಿ ಹಿಡಿ, ರಕ್ತ ಬರುವುದು ನಿಲ್ಲುತ್ತದೆ. ಈಗ ಡಾಕ್ಟರ್ ಬರುತ್ತಾರೆ.”

ನಾಗೇಶ ಯಾಂತ್ರಿಕವಾಗಿ ಅವನು ಹೇಳಿದಂತೆ ಮಾಡಿದ. ಎದುರಿನ ಕುರ್ಚಿಯಲ್ಲಿ ಇನ್ನೂ ಗಡ್ಡಮೀಸೆ ಬರದ ಯುವಕನನ್ನು ನೋಡುತ್ತಾ ಕುಳಿತ ತೇಜಾ, ಯಾವ ಮಾತೂ ಆಡಲು ಹೋಗಲಿಲ್ಲ.

ಅಪಾಯಕಾರಿ ಕೆಲಸಗಳಿಗೆ ಹೋಗುವ ಕ್ರಾಂತಿಕಾರಿಯರು ತುಟಿಯ ಕೆಳಗೆ ಯಾವುದೋ ವಿಷದ ಗುಳಿಗೆಯನ್ನು ಇಟ್ಟುಕೊಂಡಿರುತ್ತಾರೆಂಬ ಮಾತು ಕೇಳಿದ್ದ ನಾಗೇಶ. ಪೊಲೀಸಿನವರಿಗೆ ಬಂದಿಯಾಗುತ್ತಿದ್ದೇವೆ ಬಿಡಿಸಿಕೊಳ್ಳುವ ಯಾವ ಉಪಾಯವೂ ಇಲ್ಲ ಎಂದು ತಿಳಿದಾಕ್ಷಣ ಅದನ್ನು ಕಚ್ಚಿ ನುಂಗಿಬಿಡುತ್ತಾರಂತೆ. ಅದನ್ನು ಅಗಿದಾಕ್ಷಣ ನಾವು ಪೋಲಿಸಿನವರ ಹಿಂಸೆಗೆ ಗುರಿಯಾಗುವ ಪ್ರಶ್ನೆಯೇ ಇಲ್ಲ. ಅಂತಹದನ್ನು ತಾನೂ ಜತೆಗಿಟ್ಟುಕೊಳ್ಳಬೇಕಾಗಿತ್ತು ಎಂದುಕೊಂಡ. ಅದು ಸೈನೈಡ್‌ಕ್ಯಾಪ್ಸುಲ್ ಎಂಬುವುದು ಅವನಿಗೆ ಗೊತ್ತಿರಲಿಲ್ಲ. ಈಗ ಅಕ್ಕನಿಗೆ ಏನೆಂದು ಮುಖ ತೋರಿಸಲಿ ಎಂಬ ಯೋಚನೆ ಬಂದಾಗ ಪೋಲಿಸಿನವರ ಹೊಡೆತಕ್ಕಿಂತ ಹೆಚ್ಚು ಹಿಂಸೆಯಾಗುತ್ತಿತ್ತು. ಅವಮಾನ ಅವನನ್ನು ಒಂದು ತರದಲ್ಲಿ ಮೂಕನನ್ನಾಗಿ ಮಾಡಿಬಿಟ್ಟಂತಿತ್ತು.

ಬಂಡೇರಹಳ್ಳಿಯಲ್ಲಿ ಒಂದು ಚಿಕ್ಕ ಸರಕಾರಿ ದವಾಖಾನೆ ಇದೆ. ಅಲ್ಲಿ ಒಬ್ಬ ಡಾಕ್ಟರ್ ಒಬ್ಬ ಫಾರ್‌ಮಾಸಿಸ್ಟ್ ಮತ್ತೊಬ್ಬ ಗಾಯಗಳಿಗೆ ಪಟ್ಟಿ ಕಟ್ಟುವ ಡ್ರೆಸರ್‌ ಇದ್ದಾನೆ. ಆದರೆ ಯಾರೂ ಎಂದೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ರಾಮನಗರದಿಂದ ಬರಬೇಕಾದ ಡಾಕ್ಟರ್ ತಿಂಗಳಲ್ಲಿ ಎಷ್ಟೋ ದಿನಗಳು ಬರುವುದಿಲ್ಲ. ಆದರೂ ಸಂಬಳ ಸರಿಯಾಗಿ ತೆಗೆದುಕೊಳ್ಳುತ್ತಾನೆ. ಫಾರ್‌ಮಾಸಿಸ್ಟ್ ಅಥವಾ ಕಾಂಪೌಂಡರ್ ಏನೇ ಅನ್ನಿ ಅವನದೇ ಎಲ್ಲಾ ಪಾರಪತ್ಯ. ಮನೆಯಲ್ಲಿ ರೋಗಿಗಳನ್ನು ನೋಡಿ ಔಷಧಿ ಕೊಡುತ್ತಾನೆ, ಇಂಜೆಕ್ಷನ್ ಮಾಡುತ್ತಾನೆ. ಅದಕ್ಕೆ ಹಣ ಕೊಡಬೇಕು. ಗಾಯಗಳಿಗೆ ಬ್ಯಾಂಡೇಜ್ ಕಟ್ಟಿಸಿಕೊಳ್ಳಲು ಅವನ ಮನೆಗೆ ಹೋಗಬೇಕು. ಎಷ್ಟೋ ಸಲ ಗಾಯಮಾಯಲು ಮುಲಾಮನ್ನು ಹಚ್ಚುವುದಲ್ಲದೇ ಎಂತಹ ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಕೂಡ ಅವನೇ ಬರೆದು ಕೊಡುತ್ತಾನೆ. ಅದಕ್ಕೆಲ್ಲಾ ಅವನಿಗೂ ಹಣ ಕೊಡಬೇಕು. ಡಾಕ್ಟರರು ರಾಮನಗರದಿಂದ ಬಂದ ದಿನ ಮಾತ್ರ ಆಸ್ಪತ್ರೆ ತೆಗೆದುಕೊಳ್ಳುತ್ತದೆ. ಈ ವಿಷಯವೆಲ್ಲಾ ತೇಜಾನಿಗೆ ಮೊದಲೇ ತಿಳಿದಿತ್ತು. ಇದರ ಬಗ್ಗೆಯೂ ಅವನು ಸ್ಕ್ವಾಡ್ ಮುಖ್ಯಸ್ಥರೊಡನೆ ಮಾತಾಡಿದ್ದ. ಸರಕಾರಿ ಕೆಲಸ ಅದು ಯಾವಾಗ ಆಗುತ್ತದೆಯೋ ಹೇಳುವ ಹಾಗಿಲ್ಲ. ಸ್ಕ್ವಾಡಿನ ಮುಖ್ಯಸ್ಥರ ಮಾತು ಸಿ.ಎಂ. ಸಾಹೇಬರು ಕೇಳುತ್ತಾರೋ ಇಲ್ಲವೋ ಎನ್ನುವುದು ಕೂಡ ಅನುಮಾನ.

ಗುಂಡು ತಾತಾ ಇನ್ಸ್‌ಪೆಕ್ಟರ್‌ರ ಹೆದರಿಕೆ ತೋರಿಸಿ ಆ ಇಬ್ಬರನ್ನೂ ಕರೆತಂದಿದ್ದ. ಡ್ರೆಸರ್ ಮತ್ತು ಕಾಂಪೌಂಡರ್ ಏನು ಮಾಡಬೇಕೆಂಬುವುದು ತಿಳಿದು ತಮ್ಮ ತಮ್ಮ ಉಪಕರಣಗಳೊಡನೆ ಬಂದಿದ್ದರು. ನಾಗೇಶನ ತುಟಿಯಿಂದ ರಕ್ತ ಹರಿಯುವುದು ಕಡಿಮೆಯಾಗಿತ್ತು. ತುಟಿಯನ್ನು ಸ್ವಚ್ಛಗೊಳಿಸಿದ ಡ್ರೆಸರ್ ಅದಕ್ಕೆ ಚಿಕ್ಕ ಪ್ಲಾಸ್ಟರನ್ನು ಅಂಟಿಸಿ ಸ್ವಲ್ಪ ಹೊತ್ತು ಪರೀಕ್ಷಿಸಿ ನೋಡಿದ. ರಕ್ತ ಬರುವುದು ಪೂರ್ತಿ ನಿಂತಿತ್ತು. ಮುಖದ ಮೇಲೆ ಬಿದ್ದ ಗುದ್ದುಗಳ ಕಾರಣ ಅದು ಊದಿಕೊಂಡಿತ್ತು. ಅದನ್ನು ಸ್ವಚ್ಛಪಡಿಸಿ ಅವನನ್ನು ಎದ್ದು ನಿಲ್ಲುವಂತೆ ಹೇಳಿದ. ಯಾಂತ್ರಿಕವಾಗಿ ಯಾವ ಮಾತೂ ಆಡದೇ ಇದೆಲ್ಲಾ ಉಪಚಾರವನ್ನು ಮಾಡಿಸಿಕೊಳ್ಳುತ್ತಿದ್ದ ನಾಗೇಶ. ಅವನಿಗೆ ಬಿದ್ದ ಬೇರೆ ಗಾಯಗಳು ಎದ್ದು ಕಾಣುವ ಹಾಗಿರಲಿಲ್ಲ. ಅವೆಲ್ಲಾ ಗುಪ್ತಗಾಯಗಳು.

ತನ್ನ ಕೆಲಸ ಮುಗಿಸಿ ಡ್ರೆಸರ್ ಬದಿಗೆ ಸರಿಯುತ್ತಿದ್ದಂತೆ ಡಿಸ್‌ಪೋಸ್‌ಬಲ್ ಸಿರೆಂಜ್ ಜತೆಗೆ ತಂದಿದ್ದ ಕಾಂಪೌಂಡರ್‌ ಅವನಿಗೊಂದು ಆಂಟಿಟಿಟಾನಸ್ ಇಂಜೆಕ್ಷನ್ ಚುಚ್ಚಿದ್ದ. ನೋವು ಕಡಿಮೆಯಾಗಲು ಬಾವು ಇಳಿಯಲು ನಾಗೇಶನಿಗೆ ಕೆಲ ಗುಳಿಗೆಗಳನ್ನು ಕೊಟ್ಟ. ಎರಡನ್ನು ಆಗಲೇ ನಾಗೇಶನಿಂದ ನುಂಗಿಸಿದ ತೇಜಾ, ತಮ್ಮ ಕೆಲಸ ಮುಗಿದ ಮೇಲೆ ಬಹು ವಿನಯದ ದನಿಯಲ್ಲಿ ಕೇಳಿದ ಕಂಪೌಂಡರ್.

“ನಾವಿನ್ನು ಹೋಗಬಹುದೇ ಸರ್!”

“ನಾಳೇ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಡಾಕ್ಟರ್ ಬರದಿದ್ದರೂ ತೆಗೆಯಬೇಕು. ಏನೂ ಅರಿಯದ ಬಡಬಗ್ಗರಿಗೆ ಸರಕಾರಿ ಔಷಧಿಗಳನ್ನು ಕೊಟ್ಟು ಹಣ ಸುಲಿಯುತ್ತಿದ್ದೀರೆಂದು ಕೇಳಿದ್ದೇನೆ. ಅದು ನಿಲ್ಲಬೇಕು. ಇಲ್ಲದಿದ್ದರೆ ನೀವು ಕೆಲಸ ಕಳೆದುಕೊಂಡು ನಿಮ್ಮ ಹೆಂಡತಿ ಮಕ್ಕಳು ಉಪವಾಸ ಸಾಯುವ ಗತಿ ಬರಬಹುದು. ನಾನೀ ವಿಷಯ ಕಲೆಕ್ಟರ್‌ರೊಡನೆ ಮಾತಾಡುತ್ತೇನೆ” ಕಟುವಾಗಿ ಆಜ್ಞಾಪಿಸುವಂತಹ ದನಿಯಲ್ಲಿ ಹೇಳಿದ ತೇಜಾ. ತಲೆ ಕೆಳಹಾಕಿಕೊಂಡು ಆ ವೈದ್ಯಕೀಯ ಸಿಬ್ಬಂದಿಯ ಇಬ್ಬರೂ ಅದಕ್ಕೆ ಏನೂ ಹೇಳಲಿಲ್ಲ.

“ಮಾತಾಡಿ… ಮಾತಾಡಲು ಬರುವುದಿಲ್ಲವೆ?” ಗಡುಸಾದ ದನಿಯಲ್ಲಿ ಬಂತು ತೇಜಾನ ಪ್ರಶ್ನೆ.

“ನಾಳೆ ಸರಿಯಾದ ಸಮಯಕ್ಕೆ ಆಸ್ಪತ್ರೆ ತೆಗೆಯುತ್ತೇವೆ ಸರ್” ತಲೆ ಕೆಳಹಾಕಿಕೊಂಡೇ ಮೆಲ್ಲನೆ ದನಿಯಲ್ಲಿ ಹೇಳಿದ ಕಂಪೌಂಡರ್.

“ಯಾರ ಬಳಿಯಿಂದಲೂ ಹಣ ತೆಗೆದುಕೊಳ್ಳುವುದಿಲ್ಲ ಸರ್” ಹೇಳಿದ ಡ್ರೆಸರ್.

“ಹೋಗಿ… ಹೋಗಿ… ನಿಯತ್ತಿನಿಂದ ಕೆಲಸ ಮಾಡಿ” ಎಂದ ತೇಜಾ ಬೇಸರದ ದನಿಯಲ್ಲಿ. ಅದೇ ಮಾತಿಗಾಗಿ ಕಾದಿದ್ದಂತೆ ಅವರಿಬ್ಬರೂ ಅಲ್ಲಿಂದ ಹೋದರು. ಇನ್ನಲ್ಲಿ ತನ್ನ ಅವಶ್ಯಕತೆ ಇಲ್ಲವೆಂದುಕೊಂಡ ಗುಂಡು ತಾತಾ ಕೂಡ ಹೋಗುತ್ತಿದ್ದಂತೆ ಕೋಣೆಯ ಬಾಗಿಲು ಹಾಕಿ ತನ್ನ ಕುರ್ಚಿಯಲ್ಲಿ ಬಂದು ಕುಳಿತ ತೇಜಾ, ಅವನ ನೋಟ ನಾಗೇಶನನ್ನೇ ಗಮನಿಸುತ್ತಿತ್ತು.

ಈ ಇನ್ಸ್‌ಪೆಕ್ಟರನ ವರ್ತನೆ ವಿಚಿತ್ರವಾಗಿ ತೋರಿತು ನಾಗೇಶನಿಗೆ. ಆ ವೈದ್ಯಕೀಯ ಸಿಬ್ಬಂದಿಯವರೊಡನೆ ಆಡಿದ ಮಾತುಗಳು ಕೂಡ ಅವನ ಮೇಲೆ ಬಹಳ ಪ್ರಭಾವ ಬೀರಿದ್ದವು. ಒಬ್ಬ ಕ್ರಾಂತಿಕಾರಿಯೊಡನೆ ಪೋಲಿಸ್ ಇನ್ಸ್‌ಪೆಕ್ಟರ್ ಹೀಗೆ ವರ್ತಿಸಬಹುದೆಂದು ಅವನು ಕನಸುಮನಸಿನಲ್ಲಿಯೂ ಊಹಿಸಿರಲಿಲ್ಲ. ಯಾಕೊ ಅವನಿಗೆ ಇಂತಹ ವ್ಯಕ್ತಿ ಕೊಲ್ಲಬಾರದೆನಿಸಿತು.

ಸ್ವಲ್ಪ ಹೊತ್ತು ಅವನ ಮುಖದಲ್ಲಿನ ಭಾವೊದ್ವೇಗವನ್ನು ಗಮನಿಸಿದ ತೇಜಾ ಪೇದೆಯನ್ನು ಕರೆದು ಎರಡು ಕಾಫಿ ಕಳುಹಿಸುವಂತೆ ಹೇಳಿದ. ಅವನು ಆಜ್ಞೆ ಪಾಲಿಸಲು ಹೋದನಂತರ ತನ್ನ ಸ್ಥಾನದಿಂದ ಎದ್ದ ತೇಜಾ ನಾಗೇಶನ ಹಿಂದೆ ಬಂದು ಅವನ ತಲೆ ಕೂದಲನ್ನು ಆತ್ಮೀಯವಾಗಿ ಸವರುತ್ತಾ ಹೇಳಿದ.

“ಕಲ್ಲಕ್ಕನಾಗಲಿ, ನೀನಾಗಲಿ ನನ್ನ ಶತ್ರುಗಳಲ್ಲ. ಅದನ್ನು ಚೆನ್ನಾಗಿ ನೆನಪಿಡು” ತೇಜಾನ ವರ್ತನೆ ಮತ್ತು ಮಾತು ನಾಗೇಶನ ಮನವನ್ನು ಕದಡಿತು. ಆವರೆಗೂ ಯಾರೂ ಅವನೊಡನೆ ಹಾಗೆ ವರ್ತಿಸಿರಲಿಲ್ಲ. ಅಷ್ಟು ಆತ್ಮೀಯವಾಗಿ ಮಾತಾಡಿರಲಿಲ್ಲ. ಅವನ ಹಿಂದೆ ನಿಂತೇ ಮತ್ತೆ ಮಾತಾಡಿದ ತೇಜಾ.

“ಕಲ್ಲಕ್ಕನಷ್ಟೆ, ನಿಮ್ಮಷ್ಟೆ ಬಡಬಗ್ಗರ ಯೋಚನೆ ನನಗಿದೆ. ನನ್ನ ಶತ್ರುಗಳು ಕಾಡಿನಲ್ಲಿಲ್ಲ. ಇಲ್ಲೇ ನನ್ನ ಸುತ್ತಮುತ್ತಲೇ ಇದ್ದಾರೆ. ನಿನ್ನ ಅನ್ಯಾಯವಾಗಿ ಹೊಡೆದರಲ್ಲ ಅವರು ನನ್ನ ಶತ್ರುಗಳು, ನಿನಗೆ ಔಷಧೋಪಚಾರ ಮಾಡಿ ಹೋದರಲ್ಲ ಅವರು ನನ್ನ ಶತ್ರುಗಳು”

ನಾಗೇಶನಿಗೆ ಆಶ್ಚರ್ಯವಾಯಿತು. ಅವನ ಮಾತು ಕೇಳಿ, ಅದಕ್ಕೆ ಏನಾದರೂ ಹೇಳಬೇಕೆನಿಸಿತು. ಏನು ಹೇಳಬೇಕೆಂಬುವುದು ತೋಚಲಿಲ್ಲ. ತೇಜಾನೇ ತನ್ನ ನಿಂತ ಮಾತನ್ನು ಮುಂದುವರಿಸುವಂತೆ ಮಾತಾಡಿದ.

“ನಾನು ನಿನ್ನ ಕಲ್ಲಕ್ಕನ ಅಭಿಮಾನಿ ಅದನ್ನವರಿಗೆ ಹೇಳು.”

ಈ ಮಾತಂತೂ ನಾಗೇಶನಲ್ಲಿ ದಿಗ್ಭ್ರಾಂತಿ ಹುಟ್ಟಿಸಿತು. ಇವರು ತನ್ನ ಬಿಟ್ಟು ಬಿಡಬಹುದೇ, ಬಂದಿಯಾದ ಕ್ರಾಂತಿಕಾರಿಯನ್ನು ಪೋಲೀಸಿನವರು ಬಿಟ್ಟುಬಿಡಬಹುದೇ! ಸಾಧ್ಯವಿಲ್ಲ ಅವರು ಕ್ರಾಂತಿಕಾರಿಯರನ್ನು ಮತ್ತೆ ಕಾಡಿನಲ್ಲಿ ಕರೆದೊಯ್ದು ಎನ್‌ಕೌಂಟರಿನ ಹೆಸರಿನಲ್ಲಿ ಮುಗಿಸಿಬಿಡುತ್ತಾರೆಂದವನು ಕೇಳಿದ್ದ. ‘ನನ್ನ ಬಿಟ್ಟುಬಿಡುತ್ತಿರಾ?’ ಎಂದು ಕೇಳಬೇಕೆಂಬ ಮನಸ್ಸಾಯಿತು. ಆದರೆ ಆ ಮಾತುಗಳು ಬಾಯಿಗೆ ಬರಲಿಲ್ಲ.

ಪೇದೆ ಬಂದು ಎರಡು ಕಾಫಿಯ ಲೋಟಗಳನ್ನಿಟ್ಟು ಹೋದ. ನಾಗೇಶನ ಹಿಂದೆಯೇ ಗಂಭೀರ ಮುಖ ಮಾಡಿ ಅತ್ತಿಂದಿತ್ತ, ಇತ್ತಿಂದತ್ತ ನಡೆಯುತ್ತ ತೇಜಾ ಕಾಫಿಯ ಲೋಟವನ್ನು ಎತ್ತಿಕೊಂಡು ಹೇಳಿದ.

“ಪೋಲೀಸ್ ಸ್ಟೇಷನ್ನಿನಲ್ಲಿ ಹೊಡೆಸಿಕೊಂಡೆ ಎಂಬ ಅವಮಾನದ ಭಾವವೇನಾದರೂ ಇದ್ದರೆ ಅದನ್ನು ತೆಗೆದುಹಾಕು. ಜೀವನದಲ್ಲಿ, ಅದೂ ನಿನ್ನಂತಹ ವಯಸ್ಸಿನಲ್ಲಿ ಇಂತಹವೆಲ್ಲಾ ನಡೆಯುತ್ತಿರುತ್ತವೆ. ಅದು ಮಾಮೂಲು… ಕಾಫಿ ಕುಡಿ.”

ತೇಜಾನ ಮಾತಿಗೆ ಮಾರು ಹೋದವನಂತೆ ಲೋಟವನ್ನು ಎತ್ತಿಕೊಂಡು ಕಾಫಿ ಕುಡಿಯತೊಡಗಿದ. ಹಿಂದೆ ಮೆಲ್ಲನೆ ಹೆಜ್ಜೆ ಹಾಕುತ್ತಿದ್ದ ತೇಜಾ ಅವನನ್ನ ಗಮನಿಸುತ್ತಿದ್ದ ಅವನ ಹೊಟ್ಟೆಯಲ್ಲಿ ಎರಡು ಗುಟುಕು ಬಿಸಿ ಕಾಫಿ ಇಳಿದ ಮೇಲೆ ತಾನು ಮೊದಲು ಮಾತಾಡುತ್ತಿದ್ದಂತಹ ದನಿಯಲ್ಲಿಯೇ ಕೇಳಿದ.

“ಒಂದು ಮಾತು ಕೇಳುತ್ತೇನೆ ನಿಜ ಹೇಳಬೇಕು! ನಿನ್ನ ಕಲ್ಲಕ್ಕನ ಆಣೆಯಾಗಿ ನಿಜ ಹೇಳಬೇಕು ನಿನ್ನ ಬಿಟ್ಟುಬಿಡುತ್ತೇನೆ ಹೇಳುತ್ತಿಯಾ?”

ಅವನಿಗರಿವಿಲ್ಲದಂತೆ ಹೇಳುತ್ತೇನೆಂಬಂತೆ ತಲೆ ಹಾಕಿದ ನಾಗೇಶ, ತನ್ನ ಬರಿದಾದ ಲೋಟವನ್ನು ಟೇಬಲ್ಲಿನ ಮೇಲಿಡುತ್ತಾ ತನ್ನ ಸ್ಥಾನದಲ್ಲಿ ಬಂದು ಕುಳಿತು ಕೇಳಿದ ತೇಜಾ.

“ಹೇಳು ಈ ಪಿಸ್ತೂಲ್ ತೆಗೆದುಕೊಂಡು ಯಾಕಿಲ್ಲಿ ಬಂದಿದ್ದಿ?”

ಮೊದಲ ಸಲ ತಲೆ ಮೇಲೆತ್ತಿ ಅವನನ್ನು ನೋಡುತ್ತಾ ಯಾವ ಅಳಕೂ ಇಲ್ಲದೇ ಹೇಳಿದ ನಾಗೇಶ.

“ನಿಮ್ಮ ಕೊಲೆ ಮಾಡಲು”

ಅವನು ಆಗಿನಿಂದ ತೇಜಾನೊಡನೆ ಆಡಿದ ಮೊದಲ ಮಾತದು. ಮಾತು ಮುಗಿಸಿದ ಅವನು ಆಗುವುದಾಗಲಿ ಎಂಬಂತೆ ತೇಜಾನನ್ನೇ ನೋಡುತ್ತಿದ್ದ. ಟೇಬಲಿನ ಡ್ರಾ ಎಳೆದು ಅವನು ತಂದ ಆಯುಧವನ್ನು ಟೇಬಲಿನ ಮೇಲಿಟ್ಟು, ತಾನು ತನ್ನ ಬೆಲ್ಟಿಗಿದ್ದ ಚಿಕ್ಕ ರಿವಾಲ್ವರನ್ನು ತೆಗೆದು ಅದನ್ನು ಅವನ ಆಯುಧದ ಬದಿಯಲ್ಲೇ ಇಟ್ಟು ಈಗ ಆಜ್ಞಾಪಿಸುವಂತಹ ದನಿಯಲ್ಲಿ ಹೇಳಿದ ತೇಜಾ.

“ತಗೋ ಒಂದು ರಿವಾಲ್ವರ್! ಮುಗಿಸಿಬಿಡು ನನ್ನ”

ನಾಗೇಶನ ಮುಖಭಾವ ದಿಗ್ಭ್ರಾಂತಿಯ ಪರಮಾವಧಿಗೆ ಮುಟ್ಟಿದ್ದನ್ನು ಸ್ಪಷ್ಟಪಡಿಸುತ್ತಿತ್ತು. ಏನು ಮಾಡಬೇಕೊ ತೋಚದವನಂತೆ ಅವನ ನೋಟ ತೇಜಾನಿಂದ ಆಯುಧಗಳ ಕಡೆ ಆಯುಧಗಳಿಂದ ತೇಜಾನ ಕಡೆ ಎರಡು ಸಲ ಹರಿದಾಡಿತು. ಬಾಯಿಗೆ ಮಾತು ಬರಲಿಲ್ಲ. ಅವನಿಗೆ ಅಭಯ ನೀಡುವಂತಹ ದನಿಯಲ್ಲಿ ಮತ್ತೆ ಹೇಳಿದ ತೇಜಾ.

“ಇಲ್ಲ ಗುಂಡು ಹಾರಿಸಿದರೆ ಪೋಲೀಸಿನವರು ಹಿಡಿದುಬಿಟ್ಟಾರೆಂಬ ಭಯಬಿಟ್ಟುಬಿಡು. ನಡಿ ಇಬ್ಬರೂ ಕಾಡಿಗೆ ಹೋಗುವ ಅಲ್ಲಿ ನನ್ನ ಕೊಲೆ ಮಾಡಿ ಆರಾಮವಾಗಿ ನಿನ್ನ ಕಲ್ಲಕ್ಕನ ಹತ್ತಿರ ಹೊರಟು ಹೋಗು… ನಾ ಹುಡುಗಾಟವಾಡುತ್ತಿಲ್ಲ. ನಾನು ಯಾವ ಆಯುಧವನ್ನು ಮುಟ್ಟುವುದಿಲ್ಲ. ನಿನ್ನ ಪಿಸ್ತೂಲನ್ನು ತೊಗೋ ನಡಿ ಹೋಗುವ.”

ಭಾವನಾತ್ಮಕ ದನಿಯಲ್ಲಿ ಮಾತು ಮುಗಿಸದ ತೇಜಾ ಕುರ್ಚಿಯಿಂದ ಏಳುತ್ತಿದ್ದಾಗ ನಾಗೇಶನಿಗೆ ಇನ್ನು ತನ್ನ ಭಾವಾವೇಶವನ್ನು ತಡೆಯಲಾಗಲಿಲ್ಲ. ಅವನ ಕಣ್ಣಲ್ಲಿ ನೀರು ತುಂಬಿಬಂದವು. ಒಮ್ಮೆಲೆ ತಲೆ ಕೆಳಹಾಕಿಕೊಂಡು ಹೇಳಿದ

“ನನ್ನಿಂದ ತಪ್ಪಾಯಿತು ಸರ್! ನೀವು ಇಂತಹವರೆಂದು ನನಗೆ ಗೊತ್ತಿರಲಿಲ್ಲ” ಆ ಮಾತನ್ನು ಕೇಳಿಸಿಕೊಳ್ಳದವನಂತೆ ಹೇಳಿದ ತೇಜಾ.

“ನೀನು ಕಲ್ಲಕ್ಕನ ಆಜ್ಞೆಯನ್ನು ಪಾಲಿಸಲೇಬೇಕು… ಇಲ್ಲದಿದ್ದರೆ ಅವರೇನೆಂದುಕೊಳ್ಳುತ್ತಾರೆ… ಹೋಗುವ ನಡಿ”

“ಇದು ಕಲ್ಲಕ್ಕನ ಆಜ್ಞೆ ಅಲ್ಲ! ನೀವು ಕಲ್ಲಕ್ಕನ ಶತ್ರುವೆಂದುಕೊಂಡು ನಾನೇ ನಿಮ್ಮನ್ನು ಮುಗಿಸಲು ಬಂದಿದ್ದೆ” ಅವನ ಮಾತು ಮುಗಿಯುತ್ತಲೇ ವಿವರಣೆ ನೀಡಿದ ನಾಗೇಶ.

“ಅಂದರೆ ನೀನೀಗ ನನ್ನ ಕೊಲೆ ಮಾಡುವ ಇರಾದೆಯನ್ನು ಬದಲಿಸಿದಿಯಾ? ನನ್ನ ಕೊಲೆ ಮಾಡುವುದಿಲ್ಲವೇ?” ಪ್ರತಿ ಶಬ್ದವನ್ನು ಎತ್ತಿ ಕೇಳಿದ ತೇಜಾ.

“ಇಲ್ಲ ಸರ್! ನೀವು ಬಹಳ ಒಳ್ಳೆಯವರು. ಇನ್ನೊಮ್ಮೆ ಅಂತಹ ಯೋಚನೆಯೂ ನನ್ನ ತಲೆಯಲ್ಲಿ ಸುಳಿಯುವುದಿಲ್ಲ”

“ನಡಿ ಇನ್ನು ಹೋಗು! ಕಲ್ಲಕ್ಕ ನಿನಗಾಗಿ ಕಾಯುತ್ತಿರಬಹುದು. ಒಂದು ಮಾತು ತಪ್ಪದೇ ಅವರಿಗೆ ಹೇಳು, ನಾನವರ ಅಭಿಮಾನಿ. ಅವರನ್ನು ಒಂದು ಸಲ ನೋಡುವ ಆಸೆ ಇದೆ ಎಂದು ಹೇಳು” ನಾಗೇಶನ ಮಾತು ಮುಗಿಯುತ್ತಲೇ ಎದ್ದು ನಿಂತು ಹೇಳಿದ ತೇಜಾ.

“ಅಂದರೆ ನಾನಿನ್ನು ಹೋಗಬಹುದೇ?” ಅಪನಂಬಿಕೆಯ ದನಿಯಲ್ಲಿ ಕೇಳಿದ ನಾಗೇಶ.

“ಅನುಮಾನವ್ಯಾಕೆ! ಇನ್ನೊಂದು ಮಾತು ಚೆನ್ನಾಗಿ ನೆನಪಿಡು, ಉತೇಜ್ ಎಂದೂ ಸುಳ್ಳಾಡುವುದಿಲ್ಲ. ಮೋಸ ಮಾಡುವುದಿಲ್ಲ. ನೀನಿನ್ನು ಹೋಗು”

ಅನುಮಾನಪಡುತ್ತಲೇ ಎದ್ದ ನಾಗೇಶ ಬಾಗಿಲ ಕಡೆ ಹೆಜ್ಜೆ ಹಾಕತೊಡಗಿದಾಗ ಅವನು ಮರೆತದ್ದನ್ನು ಜ್ಞಾಪಿಸುವಂತೆ ಹೇಳಿದ ತೇಜಾ.

“ನಿನ್ನ ಆಯುಧ ಇಲ್ಲೇ ಬಿಟ್ಟು ಹೋಗುತ್ತಿರುವೆ. ತಗೊ! ದಾರಿಯಲ್ಲಿ ಯಾರ ಕೊಲೆಯನ್ನೂ ಮಾಡಬೇಡ ಅಷ್ಟೆ.”

ಹಿಂತಿರುಗಿದ ನಾಗೇಶನ ಮುಖದಲ್ಲಿ ಮತ್ತೆ ಅಪನಂಬಿಕೆಯ ಭಾವ ತುಂಬಿತ್ತು. ಅವನ ಕೈಗೆ ಅವನ ಪಿಸ್ತೂಲನ್ನು ಕೊಟ್ಟ ತೇಜ. ಯಾಂತ್ರಿಕವಾಗಿ ಅದನ್ನು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡ ನಾಗೇಶ. ಅವನನ್ನು ಪೋಲೀಸ್ ಸ್ಟೇಷನ್ನಿನ ಮುಂಬಾಗಿಲವರೆಗೆ ಬಿಡಲು ಬಂದ ತೇಜಾ, ಬಾಗಿಲ ಹೊರಗಡಿ ಇಡುವಾಗ ಹಿಂತಿರುಗಿ ಕೃತಜ್ಞತಾ ಭಾವ ತುಂಬಿದ ದನಿಯಲ್ಲಿ ಹೇಳಿದ ನಾಗೇಶ.

“ನಿಮ್ಮ ಉಪಕಾರವನ್ನು ಎಂದೂ ಮರೆಯುವುದಿಲ್ಲ ಸರ್!”

ಅದಕ್ಕೇನೂ ಹೇಳಲಿಲ್ಲ ತೇಜಾ, ನಾಗೇಶ ಕಾಡಿನ ಕಡೆ ನಡೆಯತೊಡಗಿದ್ದ. ಅವನನ್ನೇ ಸ್ವಲ್ಪ ಹೊತ್ತು ನೋಡಿ ತನ್ನ ಕೋಣೆಯಲ್ಲಿ ಬಂದು ಕುಳಿತ.

ತೇಜಾನಿಗೆ ಕಲ್ಯಾಣಿಯ ಮೇಲೆ ಎಲ್ಲಿಲ್ಲದ ಸಿಟ್ಟು ಉಕ್ಕಿಬಂದಿತ್ತು. ಏನೂ ಅರಿಯದ ಮುಗ್ಧ ಯುವಕರನ್ನು ತನ್ನ ಕ್ರಾಂತಿಕಾರಿ ದಳದಲ್ಲಿ ಸೇರಿಸಿಕೊಂಡು ಅವರಿಗೆ ಹಿಂಸೆಯ ಭಯಾನಕ ಮಾರ್ಗ ತೋರಿಸುತ್ತಿದ್ದಾಳೆ. ಈ ಮುಗ್ಧ ಯುವಕರು ತಾವೇನು ಮಾಡುತ್ತಿದ್ದೇವೆಂದು ಅರಿಯುವ ಮುನ್ನ ಪೋಲೀಸರ ಗುಂಡಿಗೆ ಬಲಿಯಾಗುವುದು ಖಚಿತ. ಇದನ್ನು ಇನ್ನು ಬೆಳೆಯಗೊಡಬಾರದು ಅವಳನ್ನು ಅವಳ ತಂಡದ ಸದಸ್ಯರನ್ನು ಬಂಧಿಸಿ ಜೈಲಿನಲ್ಲಿ ಹಾಕುವುದು ಕೂಡ ನಿಷ್ಪ್ರಯೋಜಕ. ಅವರನ್ನು ಮುಗಿಸಿಯೇಬಿಡಬೇಕು. ತನ್ನ ಯೋಜನೆ ಸಫಲವಾದಲ್ಲಿ ಅದು ಕಷ್ಟದ ಕೆಲಸವಲ್ಲ. ಆ ಯೋಜನೆ ವಿವಿಧ ತಿರುವುಗಳನ್ನು ತೆಗೆದುಕೊಳ್ಳುತ್ತಾ ಹೋದಂತೆ ಆದಷ್ಟು ಬೇಗ ತನ್ನ ಇಲ್ಲಿನ ಕೆಲಸ ಮುಗಿಸಬೇಕೆಂಬ ನಿರ್ಣಯಕ್ಕೆ ಬಂದ.

ಗುಂಡು ತಾತಾ ಟಿಫನ್ ಕ್ಯಾರಿಯರನ್ನು ಹಿಡಿದುಬಂದಾಗ ತಾನಂದು ಇನ್ನೂ ಊಟವೇ ಮಾಡಿಲ್ಲವೆಂಬುದು ನೆನಪಾಯಿತು ತೇಜಾನಿಗೆ.

“ನೀವ್ಯಾಕೆ ತಂದಿರಿ ಯಾರೊಡನಾದರೂ ಕಳುಹಿಸಬಹುದಾಗಿತ್ತಲ್ಲ” ಕುರ್ಚಿಯಿಂದ ಏಳುತ್ತಾ ಹೇಳಿದ ಉತೇಜ.

“ನಿನ್ನೊಡನೆ ಸ್ವಲ್ಪ ಮಾತಾಡುವುದೂ ಇತ್ತು ಅದಕ್ಕೆ ಈ ನೆಪ ಮಾಡಿಕೊಂಡು ಬಂದೆ” ಗಂಭೀರ ದನಿಯಲ್ಲಿ ಹೇಳಿದ ಆತ ಟೇಬಲ್ಲಿನ ಮೇಲೆ ಕ್ಯಾರಿಯರನ್ನು ಇಟ್ಟು, ಹೆಗಲಿಗೆ ಹಾಕಿಕೊಂಡ ಚೀಲದಿಂದ ಸ್ಟೀಲಿನ ತಟ್ಟೆಯನ್ನು ತೆಗೆದ. ಪೇದೆಯನ್ನು ಕರೆದ ತೇಜಾ ತಟ್ಟೆಯನ್ನು ತೊಳೆದು ನೀರು ತಂದಿಡುವಂತೆ ಹೇಳಿದ.

ಅವನು ತಟ್ಟೆಯನ್ನು ತೆಗೆದುಕೊಂಡು ಹೋದಮೇಲೆ ಇನ್ನೂ ನಿಂತೇ ಇದ್ದ ಹಿರಿಯನಿಗೆ ಕೂಡುವಂತೆ ಹೇಳಿ ಕೇಳಿದ.

“ಏನಾದರೂ ಹೇಳುವುದಿತ್ತೆ?”

“ನಮ್ಮ ಮನೆಯ ಪಕ್ಕದ ಹೆಣ್ಣು ಎಂಟು ದಿನದಿಂದ ನರಳುತ್ತಿದ್ದಾಳೆ! ವಿಪರೀತ ಜ್ವರ. ಇಂಜೆಕ್ಷನ್ ಮಾಡಿಸಿ, ಎಲ್ಲಾ ಮಾಡಿಸಿ ಆಯಿತು. ಸ್ವಲ್ಪವೂ ಸುಧಾರಿಸಿಲ್ಲ. ಈಗ ಹೊಟ್ಟೆನೋವೆಂದು ಚೀರಾಡುತ್ತಿದ್ದಾಳೆ. ಯಾವಾಗಲಾದರೂ ಅವಳು ಸಾಯಬಹುದೇನೋ ಎನಿಸುತ್ತಿದೆ.”

“ಅವಳನ್ನು ರಾಮನಗರಕ್ಕೆ ಯಾಕೆ ಕರೆದುಕೊಂಡು ಹೋಗಿಲ್ಲ…”

“ಅವಳಿಗೀಗ ಯಾರೂ ದಿಕ್ಕಿಲ್ಲವೆಂದೇ ಹೇಳಬಹುದು. ಗಂಡುಮಕ್ಕಳು ಮದುವೆ ಮಾಡಿಕೊಂಡು ಪಟ್ಟಣ ಸೇರಿದ್ದಾರೆ…. ಅವಳಿಗೀಗ ಬಸ್ಸಿನಲ್ಲಿ ಹೋಗುವ ತ್ರಾಣವೂ ಇಲ್ಲ”

ಕಳಕಳಿಯ ಆತನ ಮಾತು ಕೇಳುತ್ತಿದ್ದಂತೆ ಒಂದು ನಿರ್ಣಯಕ್ಕೆ ಬಂದು ಎಸ್.ಐ.ಯನ್ನು ಕೂಗಿ ಕರೆದ ತಕ್ಷಣ ಬಂದ ಅವನು ಶಿಸ್ತಿನಿಂದ ಎದುರು ನಿಂತಾಗ ಹೇಳಿದ ತೇಜಾ,

“ಇವರ ಮನೆಯ ಬಳಿ ಒಬ್ಬ ಪೇಶಂಟ್ ಸೀರಿಯಸ್ ಇದ್ದಾಳಂತೆ. ತಕ್ಷಣ ಆಕೆಯನ್ನು ನಮ್ಮ ಜೀಪಿನಲ್ಲಿ ರಾಮನಗರಕ್ಕೆ ಕರೆದುಕೊಂಡು ಹೋಗಿ… ನಿಮ್ಮ ಬಳಿ ಲೈಸೆನ್ಸ್ ಇದೆ ತಾನೆ”

“ಇದೆ ಸರ್!”

“ಹೋಗಿ ತಾತ ಆಕೆಗೆ ಸರಿಯಾದ ಚಿಕಿತ್ಸೆ ಕೊಡಿಸಿ… ಏನಾದರೂ ಹಣ ಬೇಕೆ” ಎಸ್.ಐ.ನ ಮಾತು ಮುಗಿಯುತ್ತಲೇ ಹೇಳಿದ ತೇಜಾ.

“ಬೇಡ… ಬೇಡ… ಆದಷ್ಟು ಬೇಗ ನಾವು ರಾಮನಗರ ಸೇರಿದರೆ ಸಾಕು”

“ಹಾಗಾದರೆ ಬೇಗ ಹೊರಡಿ” ಎಂದ ತೇಜ ಅವಸರದ ದನಿಯಲ್ಲಿ.

“ಪುಣ್ಯ ಕಟ್ಟಿಕೊಳ್ಳುತ್ತಿದ್ದಿಯಪ್ಪಾ” ಎಂದ ಗುಂಡು ತಾತಾ ಎಸ್.ಐ.ನ ಹಿಂದೆ ಹೊರಟು ಹೋದ.

ಊಟ ಆರಂಭಿಸಿದಾಗ ಅಡುಗೆಯ ಆಳನ್ನು ಮನಸ್ಸಿನಲ್ಲೇ ಹೊಗಳಿಕೊಂಡ ತೇಜ, ಈ ಸಲ ಭಕರಿ ಇರಲಿಲ್ಲ. ಅನ್ನ, ಹುಳಿ, ಚಟ್ನಿ ಮತ್ತು ಮೊಸರು. ಎಲ್ಲವೂ ರುಚಿಯಾಗಿದ್ದವು. ಈ ತಾತ ಎಲ್ಲಿಂದಲೋ ಅಡುಗೆ ಪಾತ್ರೆಗಳನ್ನು ತಂದು ತನಗಾಗಿ ಬಹಳ ಕಷ್ಟಪಡುತ್ತಿದ್ದಾನೆ ಎನಿಸಿದಾಗ ಮನಸಿನಲ್ಲಿ ಕೃತಜ್ಞತಾ ಭಾವ ತುಂಬಿ ಬಂತು. ಬಹುಶಃ ಇವತ್ತು ಸಂಜೆಯವರೆಗೆ ಆತನ ಮೊಮ್ಮಗ ರಾಮನಗರದಿಂದ ತನ್ನ ಸಾಮಾನು ಸರಂಜಾಮು ತರಬಹುದೆನಿಸಿತು.

ಊಟ ಮುಗಿದ ಮೇಲೆ ಪೇದೆ ಪಾತ್ರೆಗಳನ್ನು ಶುಚಿ ಮಾಡಲು ತೆಗೆದುಕೊಂಡು ಹೋದ. ಹೊಟ್ಟೆ ತುಂಬಿದನಂತರ ಕಲ್ಯಾಣಿಯ ಕಡೆ ತಿರುಗಿತು ಅವನ ಯೋಚನೆ. ಅದು ಮುಂದುವರೆಯದಂತೆ ಇನ್ನೊಬ್ಬ ಪೇದೆ ಬಂದು ಹೇಳಿದ

“ನಿಮ್ಮನ್ನು ಇಬ್ಬರು ಯುವಕರು ಕಾಣಲು ಬಂದಿದ್ದಾರೆ ಸರ್!”

“ಕಳಿಸು” ಎಂದ ಅವನು ಅವರಾರಿರಬಹುದೆಂಬ ಯೋಚನೆಯಲ್ಲಿ ತೊಡಗಿದ.

ಒಳಗಿರುವ ಇಬ್ಬರು ಯುವಕರು ಬಂದು ಅವನೆದುರು ಕೈಕಟ್ಟಿನಿಂತರು. ಏನು ಎಂಬಂತೆ ಅವರ ಕಡೆ ನೋಡಿದ ತೇಜಾ.

“ನೀವು ನಿನ್ನೆ ಸಾರಾಯಿ ಖಾನೆಗಳು ಬೆಳಿಗ್ಗೆ ಹನ್ನೊಂದಕ್ಕೆ ತೆಗೆಯಬೇಕು ರಾತ್ರಿ ಒಂಭತ್ತಕ್ಕೆ ಮುಚ್ಚಬೇಕು ಎಂದು ಹೇಳಿದ್ದಿರಲ್ಲ ಸರ್” ಅವರಲ್ಲಿ ಒಬ್ಬ ವಿನಯದಿಂದ ಹೇಳಿದ. ಆಗ ತಾನು ಬೆಳಗೆ ಕಾನ್ಸ್ ಟೇಬಲ್ಲರಿಗೆ ಒಪ್ಪಿಸಿದ ಕೆಲಸ ನೆನಪಾಯಿತು.

“ಈಗೇನಾಯಿತು. ಇವತ್ತವರು ತಮ್ಮ ಅಂಗಡಿಯನ್ನು ಬೇಗ ತೆಗೆದರೆ?” ಅದೇ ಇರಬಹುದೆಂದುಕೊಳ್ಳುತ್ತಾ ಸಿಟ್ಟಿನ ದನಿಯಲ್ಲಿ ಕೇಳಿದ ತೇಜಾ.

“ಇಲ್ಲ ಸರ್! ಅವರು ಸರಿಯಾಗಿ ಹತ್ತು ಗಂಟೆಗೆ ತೆಗೆದರು. ಆದರೆ ಬೆಳಗಿನ ಆರು ಗಂಟೆಯಿಂದ ಬೇರೆ ಕಡೆ ಮಾರುತ್ತಿದ್ದರು” ಹೇಳಿದ ಇನ್ನೊಬ್ಬ. ಇಂತಹ ವ್ಯವಹಾರ ತಡೆಯುವುದು ಕಷ್ಟವೆಂದುಕೊಳ್ಳುತ್ತಾ ಹೇಳಿದ ತೇಜಾ.

“ಬೆಳಿಗ್ಗೆ ನಮ್ಮ ಕಾನ್ಸ್ ಟೇಬಲ್ಲರನ್ನು ಅದೆಲ್ಲಾ ನೋಡಿಬರುವಂತೆ ಕಳಿಸಿದ್ದೆನಲ್ಲಾ”

“ಅವರೂ ಬಂದಿದ್ದರು ಸರ್! ತಮ್ಮ ಪಾಲಿನ ಹಣ ತೆಗೆದುಕೊಂಡು ಏನೂ ನೋಡದವರಂತೆ ಹೊರಟುಹೋದರು”

ತೇಜಾನ ಮುಖದಲ್ಲಿ ನಿಸ್ಸಹಾಯಕ ಸಿಟ್ಟು ತುಂಬಿಬಂತು. ಮುಖ ಗಂಟಿಕ್ಕಿತು. ತಾನು ಇಷ್ಟು ಬೇಗ ತನ್ನವರಿಗೆ ಮೇಲಿನ ಆದಾಯದ ಮಾರ್ಗ ತೋರಿಸಿಕೊಟ್ಟೆನೇ ಎಂದುಕೊಳ್ಳುತ್ತಾ ಹೇಳಿದ.

“ನೀವು ರಾತ್ರಿ ಎಂಟರ ಸುಮಾರಿಗೆ ಬನ್ನಿ ಅದನ್ನೂ ತಡೆಯುವ ಮಾರ್ಗ ಯೋಚಿಸುವ”

“ಅದಕ್ಕೆ ಏನಾದರೂ ಮಾಡಲೇಬೇಕು ಸರ್! ನನ್ನ ತಂದೆ ಯಾವಾಗಲೂ ನಿಶೆಯಲ್ಲೇ ಇರುತ್ತಾರೆ. ಒಂದು ಕೆಲಸವನ್ನೂ ಮಾಡುವುದಿಲ್ಲ” ಹೇಳಿದ ಮೊದಲು ಮಾತಾಡಿದವ. ಏನು ಮಾಡಬೇಕು ಎಂಬ ಯೋಚನೆಯಲ್ಲಿ ತೊಡಗಿ ಹೇಳಿದ ತೇಜಾ

“ಮಾಡುವ! ಖಂಡಿತ ಮಾಡುವ! ನೀವು ನಾ ಹೇಳಿದಂತೆ ಬನ್ನಿ”.

ಅದಕ್ಕೆ ಏನು ಮಾಡಬಹುದೆಂಬುವದು ಆಗ ಅವನಿಗೂ ಗೊತ್ತಿರಲಿಲ್ಲ. ಸರಕಾರಿ ನೌಕರರಿಂದ ಈ ಮೇಲಿನ ಆದಾಯದ ಪಿಶಾಚಿಯನ್ನು ತೊಲಗಿಸುವುದು ಅಸಂಭವವೇನೋ ಎನಿಸಿತೊಡಗಿತು ತೇಜಾನಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಾತ್ಮ
Next post ಆನೆ ಪೊಡಮಟ್ಟಿತು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…