ಪ್ರಿಯ ಸಖಿ,
ಸದಾ ಕಾಲ ಹೊಸ ಹೊಸದಕ್ಕಾಗಿ ತುಡಿಯುವುದು ಮನುಷ್ಯನ ಸಹಜ ಗುಣ. ‘ಬದಲಾವಣೆ ಬಾಳಿನೊಗ್ಗರಣೆ’ ಎನ್ನುತ್ತದೆ ನಮ್ಮ ನಾಣ್ಣುಡಿ. ಕವಿಗಳೂ ಇದಕ್ಕೆ ಹೊರತಲ್ಲ. ಹಿಂದಿನ ಕವಿಗಳು ಹೇಳಿಬಿಟ್ಟಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇನೆ ಎನ್ನಿಸಿದಾಗ ಹೊಸತನಕ್ಕಾಗಿ ಹುಡುಕಾಡುತ್ತಾ ತಳಮಳಿಸುವ ಕವಿಯ ಸ್ಥಿತಿ ಹೇಗಿರುತ್ತದೆ? ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ನನ್ನ ನುಡಿ’ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ.
ಚಂದ್ರಸೂರ್ಯರ ನೆರವಿನಿಂದೇ ಬೆಳಗುವಳೀ
ವಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!
ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ
ದೆಸೆಗಳೇ ನಿಮಗೆಂದು ಬಹುದು ಮೀಸಲು ನಿನದ?
ಭೂಮಿಯ ಅಸ್ತಿತ್ವವಿರುವುದೇ ಚಂದ್ರಸೂರ್ಯರಿಂದ. ಅವರಿಲ್ಲದೇ ಬೆಳಗಬಲ್ಲ ಸ್ವಯಂದೀಪಕತೆ ಭೂಮಿಗೆ ಬರುವುದು ಯಾವಾಗ? ಅವರಿವರು ಉಪಯೋಗಿಸಿ ಬಿಟ್ಟ ಪದಗಳು, ವಸ್ತು, ಶೈಲಿ, ತಂತ್ರಗಳನ್ನೇ ಕದ್ದು ಮತ್ತೆ ತಾನೂ ಅದನ್ನೇ ಹೇಳುವಂತಹಾ ಅವಸ್ಥೆಯಿಂದ ಬಿಡುಗಡೆ ಹೊಂದಿ ತನ್ನದೇ ‘ಸ್ವಂತ’ ಸ್ವರವನ್ನು ಹೊರಡಿಸುವ ಗಳಿಗೆ ಬರುವುದೆಂದು? ಎಂದುಕೊಳ್ಳುತ್ತಾರೆ. ಈ ಸ್ಥಿತಿಯಲ್ಲಿದ್ದು ನೊಂದ ಕವಿ ತಮ್ಮ ಕವನದ ಕೊನೆಯಲ್ಲಿ.
ಅನ್ಯರೊರೆದುದನೆ ಬರೆದುದನೆ ನಾಬರೆಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವತನಕ ನನ್ನ ಬಾಳಿದು ನರಕ!
ಎನ್ನುತ್ತಾರೆ. ಬೇರೆಯವರು ಹೇಳಿದ್ದು, ಬರೆದದ್ದೇ ನಾನೂ ಬರೆಬರೆದು ನನ್ನ ಮನಸ್ಸು ಕ್ಷುದ್ರವಾಗಿದೆ. ನನ್ನ ಮನಸ್ಸಿನಾಳಗಳನ್ನು ತೆರೆದು ‘ನನ್ನದೇ ನುಡಿಯಲ್ಲಿ ವಿಭಿನ್ನ ಬಗೆಗಳಲ್ಲಿ ಬಣ್ಣಿಸುವಂತಾ ಎತ್ತರ ದೊರಕುವವರೆಗೆ ನನ್ನ ಬಾಳಿದು ನರಕ! ಎಂದಿದ್ದಾರೆ ಕವಿ.
ಸಖಿ, ಹೊಸತನ್ನು ಹುಡುಕುವುದು, ಹೊಸತನ್ನೇ ಬರೆಯುವುದು ಅದರಲ್ಲಿಯೇ ಸಾಧಿಸುವುಮ, ಹೊಸತನ್ನು ಸಮೂಹ ಒಪ್ಪಿಕೊಳ್ಳುವಂತೆ ಮಾಡುವುಮ ಎಲ್ಲವೂ ಕಷ್ಟವೇ, ಆದರೆ ಹೊಸತಿಗಾಗಿ ಸದಾ ತುಡಿಯುವ ಕವಿಗೆ ಅದಕ್ಕಿಂತಾ ಕಷ್ಟ ಕೊಡುವುದು ಎಂದರೆ ಅವರಿವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು! ಬರೆಯುವುದು! ಅಲ್ಲವೇ ಸಖಿ?
*****