ತಾರೆ ಬೆಳಗುತಲಿತ್ತು ಆಗಸದಿ ನಗುನಗುತ
ಹುಲ್ಲು ಗರಿಕೆಯದೊಂದು ನೆಲದಿ ನಿಂತು
ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ
ಕಂಡು ಬೆರಗಾಗುತಲಿ ಕರೆಯಿತಿಂತು!
“ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ
ಮನದ ಚಿಂತೆಯನಳಿಸಿ ಶಾಂತಿ ನೀಡು.”
ಗರಿಕೆ ವಿರಹದಿ ಸೊರಗಿ ಬಾರೆಂದು ಕರೆಯುತಿರೆ
ತಾರೆ ಗರ್ವದಿ ಕುಳಿತು ನಗುತಲಿತ್ತು!
“ನಾನು ಆಗಸದಾಕೆ, ನೀನು ಭೂಮಿಯ ಕ್ರಿಮಿಯು
ನನ್ನ ಉನ್ನತ ದೇಶ ತೊರೆದು ಬರಲೆ!
ಹುಚ್ಚ! ನನ್ನೊಲವನ್ನು ಬೇಡುವೊಡೆ ನೀ ಮೂರ್ಖ!
ನಿನಗಾಗಿ ಸೌಂದರ್ಯ ಉರುಳಿಸುವುದೆ?”
ಎನುತ ಯೌವನದಲ್ಲಿ ತಾರೆ ಗರ್ವದ ಭರದಿ
ಹುಲ್ಲುಗರಿಕೆಯ ಒಲವ ಹಂಗಿಸಿರಲು
ಗರಿಕೆ ತನ್ನೆದೆಯೊಲವು ಬಾಡಿಹೋದುದ ಕಂಡು
ವಿರಹದಲಿ ಒಲವಿನೊಲು ಬಾಡಿಹೋಯ್ತು!
*****