ಹರೆಯುವ ನೀರೊಳಗೆ ಬಣ್ಣದ ನೆರಳು
‘ಫ್ಲುಟೋಯ್ ಚಿಗುರುಗಳು’
ಎಸಳು ಎಳೆಯಾಗಿ, ಎಲೆಗಳಾಗಿ
ಹೂವಾಗಿ ಪರಿಮಳ ಕುಡಿದು
ಮತ್ತೇರಿ ತೂರಿ ಬಂದು ಚುಂಬಿಸಿ
ಪುಳಕಿಸಿ ಮುದಕೊಟ್ಟು
ಭಾವನೆಗಳ ಗರಿಗೆದರಿಸಿ ತೇಲಿಸುತಿವೆ.
ತಿಳಿ ನೀಲಿ ಹೊಳೆ ತಟಗಳಲಿ
ಪರ್ವತ ಶ್ರೇಣಿಗಳಲಿ
ಇಡಿ ದಿನವೂ ಹೊಚ್ಚ ಹೊಸತನ
ತುಷಾರ ಸಿಂಚನದಡಿಯಲಿ
ಪ್ರಶಾಂತ ಹಚ್ಚ ಹಸಿರು
ಬಣ್ಣದೊಳಗೆ ಮುಳಿಗೆದ್ದು
ಸಿಂಪಡಿಸುವ ಚಿಟ್ಟೆಗಳು,
ಕಾಮನ ಬಿಲ್ಲಿನೊಂದಿಗೆ
ಹೂವು ಗಿಡಬಳ್ಳಿಗಳ
ಬಣ್ಣಗಳ ಸ್ಪರ್ಧೆ ಚರ್ಚೆ
ಚಿಲಿಪಿಲಿಸುವ
ಅನಾಮಿಕ ಹಕ್ಕಿಗಳು
ಕುಶಲೋಪಚರಿಸುತ್ತಿವೆ.
ತುಷಾರ ಸಿಂಚನದೊಳಗೆ
ಹಸಿರಾಗಿ ಎಸಳಾಗಿ ಹೊರಬರುತ್ತಿದ್ದಂತೆಯೇ
ಎಳೆ ಬಿಸಿಲಿಗೆ ನಾಚಿ
ಕೆನ್ನೆ ಕೆಂಪೇರಿಸಿಕೊಂಡರೆ
ಸಂಜೆ ನವಿಲಾಗಿ ನರ್ತಿಸುವ
ಮೃದು ಚೆಲುವಿನ
ಮೋಹಕ ಬಣ್ಣದ
ಅನಂತ ರೂಪಧಾರೆ ‘ಫ್ಲುಟೋಯ್’ ಕಂಡು
ಭಾವನೆಗಳು ಪ್ರತಿಫಲಿಸುವಾಗ
ಕಣ್ಣುಗಳಿಂದಲೇ ಇಡಿಯಾದ
ನಿಸರ್ಗಕ್ಕೆ ಮುತ್ತಿಸಿ
ಮಳೆಬಿಲ್ಲಿನಡೆಗೆ ಹಾರುತ್ತಿದೆ.
(ಯೂರೋಪ ತುಂಬೆಲ್ಲ ಈ ‘ಫ್ಲುಟೋಯ್’ ಗಿಡಗಳು ಅವುಗಳ ವರ್ಣರಂಜಿತ ಎಲೆಗಳು ಅರಸಿಕರನ್ನು ಬಡಿದೆಬ್ಬಿಸುವಂತಿವೆ)
*****