ಅರ್ಥಾತ್
ಮೂರ್ತಿಮಂತ ಸ್ವಾರ್ಥತ್ಕಾಗ
(ಗಂಡಿನ ತಂದೆ ಗಾಂಭೀರ್ಯದಿಂದ ಲೋಡಿಗೆ ಆತುಗೊಂಡು ಕುಳಿತಿದ್ದಾನೆ. ಸ್ವಾರ್ಥತ್ಯಾಗವನ್ನು ಕುರಿತು ಉಪನ್ಯಾಸವನ್ನು ಕೊಡುವ ದೇಶ ಭಕ್ತನ ಆವಿರ್ಭಾವದಲ್ಲಿ ಗಂಡಿನ ತಂದೆ ಮಾತನ್ನು ಆರಂಭಿಸುವನು)
“ಏನೂ?… ವರದಕ್ಷಿಣೆ …? ಅದರ ಹೆಸರು ತಗೀಬ್ಯಾಡ್ರಿ! ಕನ್ಯಾ ಮನಸ್ಸಿಗೆ ಬಂತೂ ಆಗಿ ಹೋತು….! ವರದಕ್ಷಿಣಿ ತೊಗೊಂಬೂ ಹಾಂಗಿಲ್ಲ- ಅಂತ ನಿಶ್ಚಯ ಮಾಡೀನಿ; ಒಮ್ಮೆ ಆಗಿ ಹೋಗಲಿ…. ಮಂದಿ ಏಽನಂತಾರ ಅಲ್ಲಿ…! ನೋಡ್ರಿ ನಮ್ಮಂಥವರು ಒಮ್ಮೆ ಹಾದಿಽ ತೋರಿಸಿದರೇನಽ ಜನಾ ಬೆನ್ನ ಹತ್ತಾರ! ಇದರ ಹೊರತು ಹೋಗುವದಿಲ್ಲ ಈ ಕಟ್ಟ ಚಾಳಿ…!
“ಹುಡುಗನ ಮನಸ್ಸಿಗೆ ಹುಡಿಗಿ ಬಂದಾಳ; ಹುಡಗೀ ಮನಸ್ಸಿಗೆ ಹುಡಗ ಬಂದಾನೇನಪಾ- ಹೀಂಗಿರುವಾಗ ನಾವು ವರದಕ್ಷಿಣೀ ದಸೀಂದ ಲಗ್ನಾ ಮುರದು ಬಿಟ್ಟರ ಛಂದ ಕಾಣಿಸೀತಽ?… ನೀವಽ ಹೇಳ್ರಿ! ಈಗಿನ ಹುಡುಗೂರಿಗೆ ವಸ್ತ ಬ್ಯಾಡ ಒಡವಿ ಬ್ಯಾಡಾ… ಏನೂಽ ಬ್ಯಾಡ.,…! ಅದರಿಂದ ಒಂದು ದೊಡ್ಡ ಖರ್ಚ ಉಳಿತಽದ. ಇನ್ನೇನು ನಿಮಗ ಛಂದ ಕಾಣಸ್ತಿದ್ದಿಲ್ಲಾಽಂದ್ರ ಒಂದು ನಾಕು ಠಳಕ ವಸ್ತಾ ಇಡಸರಿ ಬೇಕಾದರ….! ನಾವ ಮೊದಲೇ ಜೋಯಿಸೆರೆನ್ರೆಪಾ! ಈಗೇನೋ ರಾಯ ರಂತಾರ ಜನಾ! ನಾಕು ವಸ್ತಾ ಇಡಿಸಿ ಮದಿವಿ ಮಾಡಿ ಕೊಟ್ಟರ, ಬ್ರಾಹ್ಮಣಗ ಸಾಲಂಕೃತ ಕನ್ಯಾದಾನ ಮಾಡಿದ ಪ್ರಣ್ಯಾನೂ ಬರತಽದ… ಈಗೀನ ಕಾಲದವರಿಗೇನ ವಂಕೀ ಸರಗೀ ಬೇಕಾಗಿಲ್ಲ; ಸರಪಳೀ ಡಾಬು ಬೇಕಾಗಿಲ್ಲ…! ಅದರ ಫ್ಯಾಶನ್ನ ಹೋಗಿ ಬಿಟ್ಟಽದ ಈಗ! ಜೋಡು ಗೋಟು ಪಾಟ್ಲಿ ಎರಡು ತೋಡೆ ಇಷ್ಟ ಇಡಿಸಿದರೂ ಸಾಕು…! ಹೆಚ್ಚು ಖರ್ಚಿನ್ಯಾಗ ಬೀಳ ಬ್ಯಾಡರಿ ನೀವೂ… ! ನೋಡ್ರಿ ವಸ್ತಾಂದರ ಏನಂತೀರಿ…. ಎಷ್ಟು ಮಾಡಿಸಿದರೂ ಕಡಿಮೀನೆ! ಯಾವ ಖರ್ಚಾದರೂ ನಿಮ್ಮ ಲತೋಪಿನೊಳಗಽ ಇರಲಿ… ತಿಳಿತೇನು?
“ವರದಕ್ಷಿಣಿ ಬ್ಯಾಡಾ ಅಂದ್ನೆಲ್ಯಾ! ಇನ್ ನೋಡ್ರಿ ನಮ್ಮ ಮನ್ಯಾಗ ಧುಸು ಮುಸು ಸುರು ಆಗಲಿಕ್ಕೇ ಬೇಕು…! ದೇಸಾಯರು ಎರಡು ಸಾವಿರ ತಗೊಂದರು, ದೇಶಪಾಂಡೇರು ಮೂರ ಸಾವಿರ ತಗೊಂಡರು. ನಮಗ ಯಾವ ಹಾದೀಲೆ ಹೋಗೂ ಹೊಲ್ಸ ಸುಧ್ದಾ ಮೂರು ಸಾವಿರ ಕೊಡುತಿದ್ದ… ವರದಕ್ಷಿಣಿ ಇಲ್ಲದ ಮದವೀ ಮಾಡಿಕೂಳ್ಳಲಿಕ್ಕೆ ನಾವೇನು ಅಡಗೀಯವರಽ ನೀರಿ ನವರಽ. ಹಿಂತಾ ಪರಿಯಿಂದ ಈಗ್ಯಾಕ ಬೇಕಾಗಿತ್ತು ಮದಿವಿ?…. ಇವೆಲ್ಲಾ ಸುರೂ ಆಗ್ತಾವ ನಮಸುತ್ತ! ಜೀವಾ ಒಲ್ಲೇ ಅನಿಸಿಬಿಡತಾರ. ಕಾಲಯಾವದು! ಮಾತು ಯಾವದು? ಹೆಂಗಸರಿಗೆ ಇದರ ತಿಳವಳಿಕೆ ಎಲ್ಲಿ ಇರತದ ಹೇಳ್ರಿ! ಅದಕ್ಕ ಈಗಽ ಒಂದ ಕಿವಿಮಂತ್ರಾ ಹೇಳಿ ಇಟ್ಟಿರತೇನಿ! ಮದವ್ಯಾಗ ಬೀಗಿತ್ತಿ ಕಳಸಗಿತ್ತಿ ಇವರಿಬ್ಬರನ್ನು ಕಾಯ್ದುಕೊಂಡು ಹೋದರ ಆತು! ಚೌಕಲಾಣೀ ಆಂತಾವ; ಎಲ್ಲೆ ಬಳೀ ಇಡ್ಸಬೇಕು-ಆಂತಾವ ಹಾಗಲಕಾಯೀ ಸರಾನಽ ಬೇಕೂ ಆಂತಾವ. ಇಂಧಾ ಬಡದಾಟ ತಕ್ಕೊಂಡು ಕೂಡತಾವ! ನೀವು ಇದ್ಯಾವದೂ ಬಡದಾಟ ಬಾರದ್ಹಾಂಗ ಮಾಡ್ರಿ ಆತು…!
“ನನ್ನ ಸ್ವಂತದ್ದು ಯಾವ ತಕರಾರನೂ ಇಲ್ಲ ಏನ್ರಪಾ. ನಮ್ಮ ಕರ್ತವ್ಯ ನಾವು ಮಾಡಿಬಿಟ್ಟೇವಿ…. ನಮ್ಮ ತಾಯಿ ತಂದೀ ನಮಗೆಷ್ಟು ಶಿಕ್ಷಣ ಕೊಟ್ಟಿದ್ದರು ಅಷ್ಟು ನಾವು ನಮ್ಮ ಹುಡಗ್ಗ ಕೊಟ್ಟು ಬಿಟ್ಟೇವಿ. ಮ್ಯಾಟ್ರಿಕ ಪಾಸ ಆಗ್ಯಾನ….! ನಮಗೇನೋ ಅಷ್ಟು ಸಾಕು…! ಅಳ್ಯಾ ಬಿ.ಎ. ಆಗಬೇಕೂ ಅಂತ ನಿಮಗ ಆನಸತಿದ್ದರಽ ಬೇಕಾದರ ಕಲಿಸಿಕೊಳ್ಳ್ರಿ ನಮ್ಮದೇನೂ ತಕರಾರಿಲ್ಲ ಅದಕ್ಕ…! ನಿಮ್ಮ ಅಳ್ಯಾ ನಿಮ್ಮ ಮಗಳು… ನಾವ್ಯಾಕರೆಪಾ ನಡವ ಬರಬೇಕು? ಹೌದೊ ಅಲ್ಲೋ ಹೇಳ್ರಿ! ಯಾವದಽ ಮಾತಾಡಿದರೂ ಒಬ್ಬರು ಅಲ್ಲಾ- ಅಂದಿರಬಾರದ್ರೇನ್ರೆವಾ…!
“ನಾ ಅಂತೂ ಘಳಾ ಘಳಾ ಹೇಳಿಬಿಟ್ಟೇನಿ; ಮನೀ ಮುಂದ ನಿಮ್ಮ ಮೋಟಾರು ಬಂದು ನಿಂತೂ ಆಂದರ, ಎದ್ದಽ ಏಳೂದು…. ನೀವು ಕೂಡು ಅಂದಲ್ಲೆ ಕೂಡತೀವಿ ಏಳು ಅಂದಲ್ಲೆ ಏಳತೀವಿ…! ನಾಲ್ಕು ದಿನಾ ಧುರಂಧುರಿಯಿಂದ ಮದವೀ ಮಾಡಿ ನಿರೋಪ ಕೊಟ್ರಿ ಅಂದರ ನಾವೇನು ಒಂದು ಮಿನೀಟು ಕೂಡಾ ನಿಮ್ಮೂರಾಗ ಇರುವರಲ್ಲ….; ಹೊರಟುಬಿಡತೀವಿ ನಮ್ಮ ಊರಿಗೆ. ಹೀಂಗ ಮಾಡದ ಹೊರ್ತು ಗತೀನಽ ಇಲ್ಲ… ನಾವೂ ನೀವೂ ಕೂಡಿ ಈ ವರದಕ್ಷಿಣಿ ಚಾಳೀ ನಿರ್ಮೂಲ ಮಾಡಲಿಕ್ಕೇ ಬೇಕು; ನೋಡ್ರಿ, ಇಲ್ಲದಿದ್ದರ ನಮ್ಮ ಸಮಾಜಾ ಇಂದಲ್ಲಾ ನಾಳೆ ಹಾಳಾತ್ಯಂತ ತಿಳೀರಿ…. ಯಾಕ? ಖರೇ ಅಂತೀರೂ ಸುಳ್ಳಂತೀರೊ, ನನ್ನ ಮಾತು?”
(ಈ ಪ್ರಶ್ನೆಯನ್ನು ಕೇಳಿದೂಡನೆಯೆ ಹೆಣ್ಣಿನ ತಂದೆ ಒಮ್ಮೆಲೆ ಮೂರ್ಛಿತನಾಗಿ ಬೀಳುತ್ತಾನೆ.)
*****