ಅಧ್ಯಾಯ ೨೦ ಭಗ್ನಪ್ರೇಮಿ ಜಸ್ವಂತ್
ಸದಾ ಹಸನ್ಮುಖಿಯಾಗಿ, ಪಾದರಸದಂತೆ, ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಹುಡುಗಿ ನಿಷ್ಕ್ರಿಯಳಾಗಿ ಅರೆಗಳಿಗೆ ಕುಳಿತರೂ ಏಕೊ ಸೂರಜ್‌ಗೆ ಸಹಿಸಲಾಗುತ್ತಿರಲಿಲ್ಲ. ಮೊದಲ ದಿನವೇ ಅವಳ ಬಗ್ಗೆ ಒಳ್ಳೆಯ ಭಾವನೆ ಮಿಡಿದಿತ್ತು. ಯಾವುದೋ ಅನಾಥ ಮಗುವಿಗಾಗಿ ಆಕೆ ತೋರಿದ ಆಸಕ್ತಿ ಕಾಳಜಿ ಮೆಚ್ಚುಗೆಯಾಗಿತ್ತು. ಅನ್ಯರಿಗೆ ಮಿಡಿಯುವ ಅವಳ ಮಾನವೀಯತೆ, ಅದಕ್ಕಾಗಿ ಅವಳು ಪಡುವ ಶ್ರಮ ರಿತು ಸಾಧಾರಣ ಮನಸ್ಸಿನ ಹುಡುಗಿಯಲ್ಲ ಎಂದು ನಿರೂಪಿಸಿಬಿಟ್ಟಿದ್ದಳು. ಮಿಂಚುವನ್ನು ಇಲ್ಲಿಯೇ ಉಳಿಸಿಕೊಳ್ಳಲು, ತನ್ನ ಮುಂದಿನ ಭವಿಷ್ಯದ ಬಗ್ಗೆ ಕೊಂಚವೂ ಚಿಂತಿಸದೆ, ಹಿಂದೆ-ಮುಂದೆ ನೋಡದೆ ದತ್ತು ತೆಗೆದುಕೊಳ್ಳುವ ಎಂದು ಹೇಳಿಬಿಟ್ಟಾಗ ಅವಳ ಹೃದಯ ಔದಾರ್ಯದ ಪರಿಚಯವಾಗಿತ್ತು. ಇಲ್ಲಿನ ವೃದ್ದರ ಪ್ರೀತಿ ಗಳಿಸಿದ ರೀತಿ, ಅವರ ಬಗ್ಗೆ ತೋರುವ ಅವಳ ಒಲವು, ಕೆಲಸದಲ್ಲಿನ ಶ್ರದ್ದೆ…. ಇವೆಲ್ಲವೂ ಒಂದೊಂದಾಗಿ ಸೂರಜ್‌ನನ್ನು ಸೆಳೆಯುತ್ತಿದ್ದವು. ಅವಳ ಜತೆ ಇದ್ದಷ್ಟು ಸಮಯವೂ ಮನಸ್ಸಿಗೆ ಹಾಯೆನಿಸುತ್ತಿತ್ತು. ತಾನು ಇಲ್ಲಿಗೆ ಬಂದ ದಿನ ಮನೆಯಲ್ಲಾದ ಬದಲಾವಣೆ ನೋಡಿ ಅಚ್ಚರಿಗೊಂಡಿದ್ದ. ಈ ಟೇಸ್ಟ್ ಖಂಡಿತ ತಾತನದಲ್ಲ ಅನ್ನಿಸಿತ್ತು. ಅದು ನಿಜ ಎಂದು ತಿಳಿದಾಗ ಅಚ್ಚರಿಯೂ ಆಗಿತ್ತು. ಹೆಚ್ಚು-ಕಡಿಮೆ ತನ್ನದೇ ಟೇಸ್ಟ್ ಆಗಲೇ ರಿತುವಿನ ಬಗ್ಗೆ ಆಸಕ್ತಿ ಕೆರಳಿತ್ತು.
“ಸೂರಜ್, ಎಲ್ಲಿ ಕಳೆದುಹೋದೆ? ದೆಹಲಿಗೆ ಹೋಗಿಬಿಟ್ಟಿದ್ದಿಯಾ?” ರೇಗಿಸಿದಳು.
“ಹೂ ರಿತು, ಅಲ್ಲಿ ಅಮ್ಮ-ಅಪ್ಪ ಇಬ್ಬರೇ. ನನ್ನ ತುಂಬಾ ಮಿಸ್ ಮಾಡ್ಕೋತಾರೆ. ಅಲ್ಲಿಂದ ಇಲ್ಲಿಗೆ ಬರೋಕೆ ಅವರು ಸಿದ್ಧವಿಲ್ಲ. ನನಗೆ ಅಲ್ಲಿರೋಕೆ ಇಷ್ಟ ಇಲ್ಲ. ಅಜ್ಜಿ ಇರೋತನಕ ಪ್ರತಿವರ್ಷ ರಜೆಗೆ ಬರ್ತಾ ಇದ್ದೆ. ಹಾಗೆ ಬರುವಾಗ ಎಷ್ಟು ಖುಷಿ ಇರ್ತಾ ಇತ್ತೋ ಹೋಗುವಾಗ ಅಷ್ಟೇ ಬೇಸರ ಆಗ್ತಾ ಇತ್ತು. ಇಲ್ಲಿರುವಷ್ಟು ದಿನ ಬಂಧನ ಕಳಚಿದ ಹಕ್ಕಿ ಹಾಗೆ ಹಾರಾಡ್ತಾ ಇದ್ದೆ. ಅಜ್ಜಿ ತುಂಬಾ ಮುದ್ದು ಮಾಡ್ತಾ ಇದ್ದಳು. ಒಂದು ದಿನವೂ ಬೇಸರಪಡಿಸುತ್ತ ಇರಲಿಲ್ಲ. ನನ್ನ ಮನಸ್ಸನ್ನು ಅರ್ಥಮಾಡಿಕೊಂಡು, ಅದರಂತೆ ನನ್ನನ್ನು ನೋಡಿಕೊಳ್ಳುತ್ತ ಇದ್ದಳು. ದೆಹಲಿಗೆ ಹೋದ ಕೂಡಲೇ ನಂಗೆ ಸೆರಮನೆ ವಾಸ, ಒಳ್ಳೆ ಜೈಲಿನಲ್ಲಿ ಇದ್ದಂತೆ ಇರಬೇಕಾಗುತ್ತಿತ್ತು. ಅಪ್ಪ ತುಂಬಾ ಸ್ಟಿಕ್ಟ್ ಒಂದೇ ಒಂದು ದಿನ ನನ್ನ ಜತೆ ಸದರವಾಗಿ ಮಾತಾಡುತ್ತಿರಲಿಲ್ಲ. ಮಕ್ಕಳನ್ನು ತುಂಬಾ ಶಿಸ್ತಾಗಿ ಬೆಳೆಸಬೇಕು ಅನ್ನೋದೆ ಅವರ ನಿಲುವಾಗಿತ್ತು. ಅವರ ಶಿಸ್ತಿಗೆ ಬಲಿಯಾದ ನಾನು ಅಪ್ಪ, ಅಪ್ಪನ ಜತೆ, ಅಪ್ಪ ಇರುವ ಊರು ಎಲ್ಲವನ್ನೂ ದ್ವೇಷಿಸಿದೆ. ಅಪ್ಪನಿಗೆ ನನ್ನ ಡಾಕ್ಟರಾಗಿ ಮಾಡುವ ಇಷ್ಟವಿತ್ತು. ಅವರಿಗಿಷ್ಟ ಅಂತಾನೇ ಅದನ್ನ ತಿರಸ್ಕರಿಸಿದೆ. ನನ್ನ ಮೇಲೆ ಅವರ ಒತ್ತಡ ಜಾಸ್ತಿ ಆದಂತೆಲ್ಲ ನಾನು ಅವರಿಂದ ದೂರ ಆಗ್ತಾ ಬಂದೆ. ಅಜ್ಜಿಗೂ ಇದು ಅರ್ಥವಾಗಿ ನನ್ನ ಬದಲಾಯಿಸೋಕೆ ನೋಡಿದ್ರು. ಆದ್ರೆ ಬದಲಾಗದ ಸ್ಥಿತಿನಾ ನಾನು ತಲುಪಿದ್ದೆ. ಅಪ್ಪ ಯಾವತ್ತೂ ತಮ್ಮ ನಿಲುವು ಬದಲಾಯಿಸುವವರೇ ಅಲ್ಲ” ಎಲ್ಲವನ್ನೂ ಬಡಬಡಿಸಿದ.
“ನಿಮ್ಮ ಅಮ್ಮ ನಿಮ್ಗೆ ಸಪೋರ್ಟ್ ಮಾಡುತ್ತಿರಲಿಲ್ಲವೇ?” ಪ್ರಶ್ನಿಸಿದಳು.
“ಮೊದಮೊದಲು ನನ್ನ ವಹಿಸಿಕೊಂದು ಅಮ್ಮ-ಅಪ್ಪನ್ ಜತೆ ಜಗಳ ಆಡ್ತಾ ಇದ್ದಳು. ಆದರೆ ಬರಬರುತ್ತಾ ನನ್ನ ಸೆಳೆತ ಇಲ್ಲಿದೆ ಅಂತ ಗೊತ್ತಾದ ಮೇಲೆ ಅವಳು ಅಪ್ಪನ ಥರಾನೇ ಆಡೋಕೆ ಪ್ರಾರಂಭಿಸಿದಳು. ಅವಳಿಗೂ ನನ್ನ ಮೇಲೆ ನೂರಾರು ಕನಸುಗಳು. ಆದರೆ ಅವೆಲ್ಲವೂ ನನ್ನ ಮನಸ್ಸಿನ ವಿರುದ್ದವಾಗಿದ್ದವು. ಅಜ್ಜಿಯ ಆದರ್ಶ, ಅವಳ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ನಾನೂ ಅಜ್ಜಿಯಂತೆಯೇ ಆಗಬೇಕು ಅನ್ನುವ ಆಸೆ ಆಗಲೇ ನನ್ನಲ್ಲಿ ಮೊಳೆಯುತ್ತಿತ್ತು. ಹಾಗಾಗಿ ಅಮ್ಮ, ನಾನು ಇಲ್ಲಿಗೆ ಬರುವುದನ್ನು ತಡೆದು, ರಜಾದಿನಗಳಲ್ಲಿ ಯಾವುದಾದರೂ ಕೋರ್ಸಿಗೆ ಸೇರಿಸಿಬಿಡುತ್ತಿದ್ದಳು. ಅಜ್ಜ-ಅಜ್ಜಿ ಇಲ್ಲಿ ನನಗಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದದ್ದು ನನಗೆ ಅರಿವಾಗಿ ಸಂಕಟಪಡುತ್ತಿದ್ದೆ. ಅಜ್ಜ-ಅಜ್ಜಿ ಎಷ್ಟು ಹೇಳಿದರು, ಇಲ್ಲಿಗೆ ವರ್ಗ ಮಾಡಿಸಿಕೊಂಡು ಬಂದುಬಿಡು ಅಂತ. ಆದರೆ ಅಪ್ಪ ಕೊನೆವರೆಗೂ ಒಪ್ಪಲೇ ಇಲ್ಲ.
ಅಜ್ಜಿ-ಅಜ್ಜನನ್ನೇ ಅಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ನಡೆಸಿ, ನಿರಾಶರಾಗಿದ್ದರು. ಈ ವೃದ್ದಾಶ್ರಮದ ಮೇಲಂತೂ ಅವರಿಗೆ ವಿಪರೀತ ಆಸಹನೆ, ಇದರಿಂದಾಗಿಯೇ ಅಜ್ಜ-ಅಜ್ಜಿ ಇಲ್ಲೇ ಇರುವಂತಾಗಿರುವುದು ಅನ್ನೋ ಭಾವನೆ ಅವರಿಗೆ. ಆದರೆ ಅಜ್ಜ-ಅಜ್ಜಿ ನೊಂದುಕೊಳ್ಳುತ್ತಾರೆಂದು ಅದನ್ನು ತೋರಿಸಿಕೊಳ್ಳಲಾರರು. ಈಗಂತೂ ಇನ್ನೂ ಕೊಪವೇ. ನಾನೂ ಇಲ್ಲಿಯೇ ಬಂದಿದ್ದೀನಿ ಅಂತ ಅವರಿಗೆ ತುಂಬಾ ತುಂಬಾನೇ ಸಿಟ್ಟು. ನಾನಾದರೂ ಏನು ಮಾಡಲಿ? ನನ್ನ ಆಸಕ್ತಿ, ಸೆಳೆತ ಇಲ್ಲಿರುವಾಗ ಅಲ್ಲಿದ್ದು ಏನು ಮಾಡಲಿ? ಈ ಸಮಾಜ ಸೇವೆ, ನನ್ನ ಆದರ್ಶಗಳನ್ನೆಲ್ಲ ಅಪ್ಪ ಲೇವಡಿ ಮಾಡುತ್ತಾರೆ. ಅಮ್ಮ ಗೊಳೋ ಎಂದು ಅಳುತ್ತಾಳೆ. ಅಲ್ಲಿಯೇ ನನ್ನ ಆಫೀಸ್ ತೆರೆದು, ಅಲ್ಲಿಯದೇ ಹುಡುಗಿಯನ್ನು ಮದುವೆಯಾಗಿ, ಅಪ್ಪ ಮಾಡಿರುವ ಆಸ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಅನ್ನುವುದು ಅವರಿಬ್ಬರ ಆಸೆ. ನನ್ನ ಬೇರು ಇಲ್ಲಿರುವಾಗ ನಾನು ಅಲ್ಲಿಗೆ ಹೇಗೆ ಚಿಗುರಿ, ಹೂ ಅರಳಿಸಲು ಸಾಧ್ಯ ಹೇಳು ರಿತು?” ದೀರ್ಘವಾಗಿ ಮನದೊಳಗಿನದನ್ನೆಲ್ಲ ರಿತುವಿನ ಮುಂದೆ ತೆರೆದುಕೊಂಡ ಸೂರಜ್.
“ಅಪ್ಪ-ಅಮ್ಮನ ಆಸೆ ಈಡೇರಿಸುವುದು ಮಕ್ಕಳ ಧರ್ಮ ಅಲ್ವಾ ಸೂರಜ್? ಪಾಪ, ಒಂಟಿಯಾಗಿ ಇದ್ದೊಬ್ಬ ಮಗನಿಂದ ದೂರ ಇದ್ದು, ಆ ಜೀವಗಳು ಅದೆಷ್ಟು ಸಂಕಟಪಡುತ್ತಿದ್ದಾವೋ?”
“ಆದ್ರೆ ಅಪ್ಪ-ಅಮ್ಮನ ಆಸೆ ಈಡೇರಿಸಬೇಕು ಅಂದ್ರೆ ನನ್ನ ಆಸೆಗಳ ಸಮಾಧಿ ಮಾಡಬೇಕಾಗುತ್ತೆ. ನನ್ನ ಆದರ್ಶಗಳಿಗೆ ಗೋರಿ ಕಟ್ಟಬೇಕಾಗುತ್ತದೆ. ಅವರು ನೋಯುತ್ತಾರೆ ಎಂದು ನಾನು ನನ್ನ ದಾರಿ ಬಿಟ್ಟುಬಿಡಲೇ ? ಇದು ಆತ್ಮವಂಚನೆ ಅಲ್ಲವೇ? ಅಷ್ಟು ಪ್ರೀತಿ ಇದ್ದವರು ಅವರೇ ನನ್ನ ಹಾದಿಗೆ ಬರಲಿ. ನನ್ನ ಹಾದಿ ಏನು ಕೆಟ್ಟದ್ದಲ್ಲವಲ್ಲ. ಇಲ್ಲಿ ನಿಜವಾದ ಬದ್ಧತೆ ಇದ್ದರೆ, ಮಗನ ಮೇಲೆ ಪ್ರೀತಿ ಇದ್ದರೆ ನನ್ನ ನಿಲುವನ್ನು ಒಪ್ಪಿಯೇ ಒಪ್ಪುತ್ತಾರೆ. ಇಲ್ಲವಾದರೆ ಅದು ಕರುಳಿನ ಅನುಬಂಧವೇ ಅಲ್ಲ. ಬರೀ ಕೊಟ್ಟು, ಕೊಂಡುಕೊಳ್ಳುವ ವ್ಯವಹಾರದ ಸಂಬಂಧ ಮಾತ್ರ. ಒಂದಷ್ಟು ದಿನ ಈ ಮಗನನ್ನು ಬಯ್ದುಕೊಳ್ಳುತ್ತಾರೆ. ಸಂಕಟಪಡುತ್ತಾರೆ. ಕಾಲ ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಂಡು, ಮಗ ಇಲ್ಲದೆಯೂ ಬದುಕಬಲ್ಲೆವು ಎಂಬಂತೆ ಬದುಕುತ್ತಾರೆ. ಇದು ವಾಸ್ತವ ಬದುಕಿನ ಸತ್ಯ. ಇಲ್ಲಿ ಯಾರೂ ಯಾರಿಗೂ ಅನಿವಾರ್ಯವಲ್ಲ” ಅವನ ಮಾತುಗಳು ನೇರವಾಗಿ ಮನದಾಳಕ್ಕೆ ಇಳಿದು, ಇಂದಿನ ತಳಮಳಕ್ಕೆ, ದ್ವಂದ್ವಕ್ಕೆ, ಪ್ರಶ್ನೆಗೆ ಉತ್ತರ ಸಿಕ್ಕಿಯೇಬಿಟ್ಟಿತು, ಮನಸ್ಸು ಹಗುರವಾಯಿತು, ಎದೆಯ ಭಾರ ಕಡಿಮೆಯಾಯಿತು. ಸಂಕಟ ತಹಬಂದಿಗೆ ಬಂದಿತು. ‘ಥ್ಯಾಂಕ್ಸ್ ಸೂರಜ್, ನನ್ನ ಇಕ್ಕಟ್ಟಿನ ಪರಿಸ್ಥಿತಿಯಿಂದ ಪಾರುಮಾಡಿಬಿಟ್ರಿ.’ ಮನಸ್ಸಿನಲ್ಲಿಯೇ ಹೇಳಿಕೊಂಡಳು.
“ನಿಜ ಸೂರಜ್, ಯಾರೂ ಯಾರಿಗೂ ಅನಿವಾರ್ಯವಲ್ಲ, ಇದೇ ಬದುಕಿನ ಸತ್ಯ, ಇದೇ ವಾಸ್ತವ” ಅಂತರಾಳದಿಂದ ಹೊಮ್ಮಿದ ಭಾವದೊಡನೆ ಹೇಳಿದಳು.
ಭಾನುವಾರ ನೇರವಾಗಿ ಜಸ್ಸುವಿನ ಮನೆಗೆ ಹೋದಳು. ತನುಜಾ, ಮನು ತಾವು ಕೂಡ ಬರುವುದಾಗಿ ಎಷ್ಟೇ ಹೇಳಿದರೂ ರಿತು ಬೇಡವೆಂದುಬಿಟ್ಟಳು. ತಾನೀಗ ಒಬ್ಬಳೇ ಹೋಗಿ ಬರುತ್ತೇನೆ ಎಂದು ಅವರನ್ನು ಸುಮ್ಮನಿರಿಸಿದಳು. ಅವಳಿಗೆ ಇಷ್ಟವಿಲ್ಲ ಎಂದ ಮೇಲೆ ಬಲವಂತ ಬೇಡವೆಂದು ಸುಮ್ಮನಾದರು.
ರಿತು ತುಂಬಾ ಸಮಾಧಾನದಿಂದಿದ್ದಳು. ಅವಳ ಮನಸ್ಸು ಆಗಲೇ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡಿತ್ತು. ಹಿಂದಿನಂತೆ ದ್ವಂದ್ವ ಕಾಡಲಿಲ್ಲ. ತಾನು ಮಾಡುತ್ತಿರುವುದೇ ಸರಿ ಎಂದು ತೀರ್ಮಾನಿಸಿಕೊಂಡಿದ್ದಳು. ಯಾರ ಅಳಲು, ನೋವು, ನಿರಾಶೆ ನನ್ನನ್ನು ಅಲುಗಾಡಿಸದೆಂಬ ಆತ್ಮವಿಶ್ವಾಸದಿಂದಲೇ ಆ ಮನೆಯೊಳಗೆ ಕಾಲಿಟ್ಟಳು. ಈ ಮನೆ ಏನು ಅವಳಿಗೆ ಅಪರಿಚಿತವಾಗಿರಲಿಲ್ಲ. ಅದೆಷ್ಟೋ ಬಾರಿ ಬಂದು ಹೋಗಿದ್ದಳು. ಆದರೂ ಈ ಬಾರಿ ಬರುವಾಗ ಪ್ರೀತಿಯ ಅಂಕಲ್ ಇಲ್ಲ ಎಂಬ ನೋವು ಕಾಡಿತು. ನೋವಿನಲ್ಲಿರುವ ಆಂಟಿಯನ್ನು ಹೇಗೆ ಸಮಾಧಾನಿಸಬೇಕೆಂದು ತಿಳಿಯದೆ ಒದ್ದಾಡಿದಳು. ಇವಳಿಗಾಗಿಯೇ ಕಾಯುತ್ತಿದ್ದ ಜಸ್ವಂತ್ ಅಮ್ಮನ ರೂಮಿಗೆ ಕರೆದೊಯ್ದ. ಅವಳನ್ನು ಕಂಡವರೇ ಮೌನವಾಗಿ ಅವಳ ಕೈಹಿಡಿದು ಕಣ್ಣೀರು ಸುರಿಸಿದರು. ಅವರ ದುಃಖಕ್ಕೆ ರಿತುವಿನ ಅಳುವು ಬೆರೆತು, ದುಃಖದಲ್ಲಿ ಸಮಭಾಗಿಗಳಾಗಿದ್ದರು ಆ ಕ್ಷಣ. ರಿತುವೇ ಮೊದಲು ಚೇತರಿಸಿಕೊಂಡು, “ಆಂಟಿ, ನಾನೀಗ ಏನು ಮಾತನಾಡಿದರೂ ಅದು ಬರೀ ಮಾತಾಗುತ್ತದೆ ಅಷ್ಟೇ. ನಿಮ್ಮ ನೋವು, ಸಂಕಟ ನಾನಾಡಿದ ಮಾತುಗಳಿಂದ ಕಡಿಮೆ ಆಗಲಾರದು. ಈ ನೋವು, ದುಃಖ ತಾತ್ಕಾಲಿಕ, ಸಮಾಧಾನ ಮಾಡಿಕೊಳ್ಳಿ ಎಂದು ಹೇಳಲಾರೆ, ಮನಸ್ಸು ಹಗುರವಾಗುವ ತನಕ ಅತ್ತುಬಿಡಿ ಆಂಟಿ’ ಎಂದಳು ಮತ್ತೆ.
“ಆಂಟಿ, ನೀವೂ ಜಸ್ಸುವಿನ ಜತೆ ಹೋಗ್ತಾ ಇದ್ದೀರಂತೆ. ಒಬ್ರೇ ಇಲ್ಲಿದ್ದು ಏನು ಮಾಡುತ್ತೀರಾ? ತುಂಬಾ ಒಳ್ಳೆ ಕೆಲ್ಸ ಮಾಡ್ತಾ ಇದ್ದೀರಾ, ಅವನಿಗೂ ಜತೆ ಆಯ್ತು, ನಿಮಗೂ ಒಂಟಿತನ ದೂರ ಆಗುತ್ತೆ. ಈ ರಿತುವಿನ ನೆನಪು ನಿಮಗಿರಲಿ ಆಂಟಿ” ಎಂದ ಕೂಡಲೇ ಜಸ್ಸು,
“ಏನು ಹೇಳ್ತಾ ಇದ್ದಿಯಾ ರಿತು” ಕಿರುಚಿಯೇ ಬಿಟ್ಟ.
“ಜಸ್ಸು, ಹೊರಗಡೆ ಹೋಗೋಣವಾ?” ಎಂದವಳೇ ಎದ್ದು ನಿಂತಳು.
“ಎಲ್ಲಿಗೆ ಹೋಗೋಣ?” ಬಿಗುವಾಗಿಯೇ ಕೇಳಿದ.
“ಎಲ್ಲಿಗಾದೆರೂ ಸರಿ” ಎಂಡಳು.
“ಸರಿ, ಹೋಗೋಣ ಬಾ” ಎಂದವನೇ ಅವಳೊಂದಿಗೆ ಹೆಜ್ಜೆ ಹಾಕಿದ.
“ರಿತು, ಏನಿದೆಲ್ಲ? ಅಮ್ಮನ ಹತ್ತಿರ ಹಾಗೇಕೆ ಹೇಳಿದೆ?” ಪ್ರಶ್ನಿಸಿದ.
“ಜಸ್ಸು, ಇಲ್ಲೇ ಕೂತ್ಕಳೋಣ ಬಾ, ಸ್ಕೂಲಿಗೆ ರಜಾ ಅಲ್ವಾ ಇವತ್ತು. ಇಡೀ ಫೀಲ್ಡಿಗೆ ನಾವಿಬ್ಬರೇ, ಆರಾಮಾಗಿ ಮಾತಾಡೋಣ.”
“ಜಸ್ಸು, ನಾನೊಂದು ಮಾತು ಹೇಳ್ತಿನಿ ಕೇಳ್ತಿಯಾ? ನೀನು ಅಮೆರಿಕಾಕ್ಕೆ ಹೋಗಲೇಬೇಕಾ? ಅಲ್ಲಿಯೆ ಸೆಟ್ಲ್ ಆಗೋಕೆ ತೀರ್ಮಾನ ಮಾಡಿಬಿಟ್ಟಿದ್ದೀಯಾ?”
“ಇದೇನು ಹೊಸ ವಿಚಾರನಾ ರಿತು? ಅದು ಎಂದೋ ತೀರ್ಮಾನವಾಗಿದೆಯಲ್ಲ. ಆ ವಿಷಯ ಬಿಡು ರಿತು. ನನ್ನ ಬಗ್ಗೆ ಹೇಳು. ನನಗಂತೂ ನಿನ್ನ ಮರೆಯೋಕೆ ಸಾಧ್ಯಾನೇ ಇಲ್ಲ. ನೀನು ನಂಗೆ ಬೇಕೇಬೇಕು ರಿತು. ನಮ್ಮ ಪ್ರೇಮ ಶಾಶ್ವತವಾಗಿ ಉಳೀಬೇಕು. ನನ್ನ ಜತೆ ಬಂದುಬಿಡು ರಿತು. ಇದು ನನ್ನ ಬೇಡಿಕೆ ಅಂದ್ಕೋ ರಿತು.”
“ಜಸ್ಸು, ನೀನು ಹೇಗೆ ನಿನ್ನ ನಿರ್ಧಾರಕ್ಕೆ ಬದ್ಧನಾಗಿದ್ದೀಯೋ ನಾನು ಹಾಗೆ ಆಗಿಲ್ಲ ಅಂತ ಯಾಕೆ ತಿಳ್ಕೊಂಡೆ? ನೀನು ಮಾತ್ರ ನಿನ್ನ ತೀರ್ಮಾನ ಬದಲಿಸಲಾರೆ ಎನ್ನುವ ನೀನು, ನಾನು ನನ್ನ ತೀರ್ಮಾನನ ಬದಲಾಯಿಸಿಬಿಡ್ತೀನಿ ಅಂತ ಹೇಗೆ ಭರವಸೆ ಇಳ್ಕೊಂಡಿದಿಯಾ? ಈಗಾಗಲೇ ನನ್ನ-ನಿನ್ನ ವಿಷಯ ಮುಗಿದು ಹೋದ ಅಧ್ಯಾಯ. ನಾನು ಈ ಪ್ರೀತಿ, ಪ್ರೇಮ, ಮದುವೆ ಇವುಗಳ ಮೇಲಿನ ನಂಬಿಕೆನಾ ಕಳೊಂಡುಬಿಟ್ಟಿದ್ದೇನೆ. ನನ್ನನ್ನ ನನ್ನ ಪಾಡಿಗೆ ಬಿಟ್ಟು, ನಿನ್ನ ಅರ್ಥಮಾಡಿಕೊಳ್ಳುವ, ನಿನ್ನ ಆಸೆ, ಕನಸುಗಳಿಗೆ ಸ್ಪಂದಿಸುವ ಹುಡುಗಿನ ಮದ್ವೆ ಮಾಡಿಕೊಂಡು ಸುಖವಾಗಿರು.”
“ನಮ್ಮ ಪ್ರೀತಿ-ಪ್ರೇಮ ಎಲ್ಲಾ ಸುಳ್ಳಾ ರಿತು? ನಾನು ನಿನ್ನ ಪ್ರೀತಿಸಿದ್ದು, ನೀನು ನನ್ನ ಪ್ರೀತಿಸಿದ್ದು, ಬದುಕಿನಿಡೀ ಒಟ್ಟಿಗೆ ಬದುಕಬೇಕು ಅನ್ನುವ ಕನಸು ಕಂಡಿದ್ದು ಎಲ್ಲವೂ ಸುಳ್ಳೇ? ನಮ್ಮ ಪ್ರೇಮ ಪವಿತ್ರವಾಗಿರಲಿಲ್ಲವೇ? ನಾನು ಅಮೆರಿಕಾಕ್ಕೆ ಹೋಗ್ತಾ ಇದ್ದೀನಿ ಅನ್ನೋ ಒಂದೇ ಒಂದು ಕಾರಣಕ್ಕೆ ಈ ಪ್ರೇಮ ಒಡೆದು ಚೂರುಚೂರಾಗಬೇಕೇ?”
“ಜಸ್ಸು, ನಿಧಾನವಾಗಿ ಯೋಚ್ನೆ ಮಾಡು. ನಮ್ಮ ಪ್ರೀತಿಯ ಸೆಳೆತ ಅಷ್ಟೊಂದು ತೀವ್ರವಾಗಿದ್ದರೆ, ನಾನೋ-ನೀನೋ ರಾಜಿ ಆಗಬೇಕಿತ್ತು ಅಲ್ಲವೇ? ನನಗೆ ನನ್ನ ಗುರಿ, ನನ್ನ ಧ್ಯೇಯನೇ ಹೆಚ್ಚಾದರೆ, ನಿನಗೆ ನಿನ್ನ ಕನಸು, ಆಸೆಗಳೇ ಹೆಚ್ಚಾಗಿವೆ. ನಮ್ಮಿಬ್ಬರಲ್ಲಿ ಪ್ರೀತಿನಾ ಕಳ್ಕೊಂಡರೂ ನಮ್ಮಾಸೆಗಳನ್ನ ಕಳ್ಕೊಳ್ಳದಕ್ಕೆ ಯಾರೊಬ್ಬರೂ ಸಿದ್ಧವಾಗಿಲ್ಲ. ನಮ್ಮದು ಪ್ರೇಮವೇ ಆಗಿದ್ದರೆ, ನಿಜವಾದ ಪ್ರೀತಿನೇ ಆಗಿದ್ದಿದ್ದರೆ ಕಳ್ಕೊಳ್ಳೋದಕ್ಕೆ ಸಿದ್ಧವಾಗ್ತಾ ಇದ್ದೆವಾ? ನಮ್ಮದು ಹದಿವಯಸ್ಸಿನ ಹುಡುಗಾಟದ ಆಕರ್ಷಣೆ ಮಾತ್ರ ಆಗಿತ್ತೇನೋ ಅನ್ನಿಸುವುದಿಲ್ಲವೇ? ನಿಜವಾದ ಪ್ರೀತಿ ಇದಲ್ಲ ಜಸ್ಸು. ನಾವು ಪ್ರೇಮಿಗಳೇ ಅಲ್ಲ. ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡುಬಿಡೋಣ. ನಾನಂತೂ ಒಪ್ಪಿಕೊಂಡು, ನಿನ್ನ ಸ್ನೇಹಿತ ಅಂತ ತಿಳ್ಕೊಂಡಿದ್ದೀನಿ. ಕೊನೆವರೆಗೂ ಸ್ನೇಹಿತರಾಗಿಯೇ ಇದ್ದುಬಿಡೋಣ. ನಿನ್ನ ಹಾದಿಯೇ ಬೇರೆ, ನನ್ನ ಹಾದಿಯೇ ಬೇರೆ. ಪಕ್ಕಪಕ್ಕದಲ್ಲಿಯೇ ಇದ್ದರೂ ಎಂದಿಗೂ ಒಂದಾಗದ ಪಯಣಿಗರು. ಈ ಸತ್ಯನಾ ಒಪ್ಪಿಕೊಂಡು ನಮ್ಮನಮ್ಮ ಹಾದಿ ಹಿಡಿಯೋಣ. ಆಲ್ ದ ಬೆಸ್ಟ್.”
ರಿತು, ಜಸ್ಸುವಿನ ಕೈ ಕುಲುಕಿ, “ನಿನ್ನ ಮದ್ವೆಗೆ ನನ್ನ ಕರೆಯೋದು ಮರೆಯಬೇಡ, ಬರ್ಲಾ? ನಿನ್ನಂಥ ಗೆಳೆಯ ನನ್ನೊಂದಿಗೆ ಇಷ್ಟು ದಿನ ಇದ್ದ, ಮುಂದೆಯೂ ಇರುತ್ತಾನೆ ಎಂಬುದೇ ನನಗೆ ಈಗ ಉಳಿದಿರೋ ಸಮಾಧಾನ. ಈ ಸ್ನೇಹ ಶಾಶ್ವತವಾಗಿ ಕಾಪಾಡಿಕೊಳ್ಳೋಣ, ನಾ ಬರ್ಲಾ ಜಸ್ಸು” ಭದ್ರವಾಗಿ ಹಿಡಿದಿದ್ದ ಜಸ್ಸುವಿನ ಕೈಗಳನ್ನು ಮೆಲ್ಲಗೆ ಬಿಡಿಸಿಕೊಂಡು ಅವನನ್ನು ದಾಟಿ ಮುಂದೆ ನಡೆದು, ಹಿಂತಿರುಗಿ ಕೈ ಬೀಸಿದಳು. ಅವನ ಬಿಂಬ ಅಸ್ಪಷ್ಟವಾಗಿ ಕಾಣಿಸಿದಾಗ ಪಕ್ಕನೇ ಇತ್ತ ತಿರುಗಿ ಕಣ್ಣೊರೆಸಿಕೊಂಡಳು. ಇತ್ತ ಜಸ್ವಂತ್ ಕೂಡ ಕೈ ಬೀಸುತ್ತಾ ಕಣ್ಣಿಂದ ಹರಿಯುತ್ತಿದ್ದ ಕಣ್ಣೀರಿಗೆ ತಡೆಹಾಕದೆ ಹಾಗೆಯೇ ನಿಂತುಬಿಟ್ಟನು.
*****