ಅವನ ನೆನಪಿನ ಕಿರು
ಕಡತಗಳು ಹಾಗೆ ಇವೆ.
ಸಂದೂಕದ ಅಡಿಯಲ್ಲಿ ಅಲ್ಲಲ್ಲಿ
ಧೂಳಿನ ಲೇಪನಗೊಂಡು
ಎಡತಾಕುವ ಬೆಕ್ಕಿನಂತೆ
ಸದಾ ಹಿಂದೆ ಸುತ್ತುತ್ತಿದ್ದವ
ಅಪರೂಪದ ಬಿಳಿ ಪಾರಿವಾಳವಾದ.
ನನ್ನೆದೆಯ ಗೂಡಲ್ಲಿ
ಕಾಪಿಡುವೆ ನಿನ್ನ ಎಂದವ
ನನ್ನೊಡಲ ಚಿಗುರು ಚೆಲುವುಗಳನ್ನೆಲ್ಲಾ
ಚಿಂದಿಗೊಪ್ಪಿಸಿ ನಡೆದ.
ಸರದಿ ಸಾಲಿನ ಇರುವೆಗಳಂತೆ
ಕಾದು ನಿಂತವರ ಕಡೆಗಣಿಸಿ
ತೆಕೈಸಿ ಬಂದರೆ
ಇರುವೆಯ ಕಾಲಲ್ಲಿ ಹೊಸಕಿದಂತೆ
ಹಿಸುಕಿ ಹಾಕಿದ..
ನೋವಿನ ಕಟಕಟೆಯಲ್ಲಿ
ನಿಂತಾಗಲೆಲ್ಲಾ
ಕೊರೆವ ಗರಗಸದ ಆತ್ಮಗತ
ಪಾಟಿಸವಾಲು
ಆದರೀಗ.. ಈಗೀಗ
ಸಂದೂಕದ ಸಂದಿಗೊಂದಿಗಳು
ಮೇಲೈಯಲ್ಲಿ
ವಿಪರೀತ ಅಲಂಕೃತಗೊಂಡಿವೆ.
ಹೊಸ ಪುಸ್ತಕವೊಂದು ಸಂದೂಕದ
ಬೆನ್ನೇರಿದೆ.
ಬಿಚ್ಚಿ ಮೈ ಚಾಚಿದೆ
ಅರ್‍ವಾಚೀನ ಸೌಂದರ್ಯದ
ನಾವಿನ್ಯತೆ ತೊಟ್ಟು.
ಆದರೂ ನೆನಪುಗಳು ಬೆದರುತ್ತವೆ
ಹಿಡಿದಿಡಲಾಗದೇ
ಹಳೆಯ ಉಸಿರ ಬಸಿರ
ಕಡತಗಳ ತೆಗೆದೊಮ್ಮೆ
ನೋಡಬೇಕೆನಿಸುತ್ತದೆ
ಅದೇ ಗಟ್ಟಿತನವೇ?
ಇಲ್ಲ. ಗೆದ್ದಲುಗೊಂಡ
ಪುಡಿಪುಡಿಗೊಂಡ ಕಾಗದದ ಚೂರೇ
ಎಂದು.
ಓದಬಲ್ಲನೇ ನಾನು
ಹಳೆಯ ದಿಟ್ಟಿಯ ಹಿಡಿದು
ಕನ್ನಡಕದ ದೃಷ್ಟಿಯಲ್ಲಿ ಮುಳುಗಿದವಳಿಗೆ
ತಿಳಿದೀತೆ ಮೊಗೆವ ಮಮತೆಯ
ಮಧುರ ಧಾರೆಯ ಚುಕ್ಕಿ ಹೊಳಪು.
ಕಂಡೀತೆ ಮಗದೊಮ್ಮೆ
ಅವನಲ್ಲೂ ಈ ಚಳಕು.
*****