ಒಮ್ಮೊಮ್ಮೆ
ಎವೆಕಳಚಿ ಕೂರುತ್ತೇನೆ ಒಬ್ಬನೇ.
ನಿಧಾನ ಇಳಿಯುತ್ತೇನೆ :
ಅಪ್ಪನ ತಲೆ
ಅಜ್ಜನ ಎದೆ
ಮಾಸಿದ ಮುಖಗಳ ಕಟಿ ತೊಡೆ ನಡೆ
ಬಹಳ ಬೇಕಾಗಿಯೂ
ತಿಳಿಯದ ಹೆಡೆ ;
ಇಳಿ ಇಳಿಯುತ್ತ
ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ
ಬೆಳಕು ತೊದಲುತ್ತದೆ
ನೆನಪು ಮಾಸುತ್ತದೆ
ಕತ್ತಲ ರಾಡಿ
ಉಗ್ಗಿ ಹಾಯುತ್ತದೆ.
ಈಗ
ತೆವಳುವುದೆ ಸರಿ
ಮರವು ಮಂಪರಿನ
ತಳಕ್ಕೆ, ಅಲ್ಲ,
ಇನ್ನೂ ಕೆಳಕ್ಕೆ :
ದನಿ ಜಿಗಿಯದ ಪಿಸು ಉಸುರಿನ
ಹೊಲಕ್ಕೆ.
ಬರುತ್ತಿವೆ ಮೇಲೆ
ನಿಧಾನ ಉಬ್ಬುವ ದಿಬ್ಬಗಳು
ಮಬ್ಬಿನವು,
ಹಾಗೇ ಕೊರಗಿನಲ್ಲಿ
ಗಾತ್ರ ಸಮೆಸಮೆದು
ಅರರೇ
ಗಜ್ಜುಗ ಗಾತ್ರದ ಬೀಜಗಳು;
ಆಕಾರದ ಬಿಗಿತಕ್ಕೆ
ಇಂದ್ರಿಯ ಜಿಗಿತಕ್ಕೆ
ಒಗ್ಗದ ಬಗ್ಗದ
ಕಾಮರೂಪಿ ತಾಮಸ ಕುಡಿಗಳು ;
ದಟ್ಟ ಬೆಳಕನ್ನ ಬೇಡುವ
ಕರಿಗೋಡೆಗೆ ತಲೆ ತೀಡುವ
ಕಿರುಗತ್ತಲೆಗಳು
ಭಾಷೆ ಹೊದೆಯದ ಬೆತ್ತಲೆಗಳು;
ದರಿ ಪೊದೆಗಳ
ಒಡಲಿನಲ್ಲಿ ಪಿಸುಗುಟ್ಟುವ
ಹಸಿ ಬೆದೆಗಳು
ಹೊಸ ಕುದಿಗಳು.
ಇವು
ಮೆತ್ತಗೆ ಬಿಚ್ಚಿ ಸುತ್ತಿದ ಸಿಂಬಿ
ಸರಸರ ಪರಪರ
ಹುಸಿನಿಜಗಳ ನಂಬಿ
ಹುದುಗಿ ಸರಿಯುವ ಹಾವು ನೋವುಗಳು
ಕಾವುಗಳು
ಯಾವ ಏಟಿಗೆ ಎದ್ದವೋ
ಈ ಬಾವುಗಳು?
ಒಂದೆರಡನ್ನು ಹಿಡಿದು,
ಹಗಲಿಗೆ ಎದ್ದೆ
ಎನ್ನುವ ಮೊದಲೇ ಜಾರಿ
ಕೈಯಿಂದ ಬಿದ್ದುವು.
ಸಂದಿತನಕ ಬಂದಿದ್ದಾಗ
ನೋಡಿದೆನಲ್ಲ.
ರಾಡಿ ಬೆಳಕಲ್ಲಿ ಕೆಂಚು ಹಪ್ಪಳದಂತೆ
ಕೊಂಚ ತುದಿ ಕಂಡವು.
ಎಂಥದೋ ದೆವ್ವದ ಮರಿಗಳ?
ಎಂಥದೋ ದೈವ ಹೆತ್ತವ?
ಅರ್ಥವಾಗದು.
ಹುಟ್ಟದ ಕೂಸಿನ ಮೈ ಮುದ್ರೆ
ಗುರುತಿಸುವುದು ಹೇಗೆ?
ಮತ್ತೆ ಪುಳಕ್ಕನೆ ಮುಳುಗಿದವು
ತಳದಲ್ಲಿ,
ಕತ್ತಲ
ಕೊಳದಲ್ಲಿ.
*****