ಮುಂದೆ ಸಾಗುವ ಮುನ್ನ
ಹಿಂದೆ ನೋಡಬಾರದೆ ಒಮ್ಮೆ
ನದಿಯಲ್ಲವೇ ನಾನು
ತುದಿಯಲ್ಲಿರುವೆ ನೀನು
ನಿಲ್ಲು ನಿಲ್ಲು ನೀ ನನ್ನ ಮಗಳೆ…
ಹಿಟ್ಟು-ರೊಟ್ಟಿಯ ಸುಡುತ
ಹರಕೆ-ಮುಡಿಪುಗಳನಿಡುತ
ತಿಳಿದ ಹಾಡುಗಳ ಹಾಡಿ
ನೂರು ದೇವರ ಕಾಡಿ
ನಿನ್ನ ಪಡೆದೆ
ಉಟ್ಟ ಸೀರೆಯೇ ಮೂರು
ಹಣೆಗೆ ಕುಂಕುಮದ ಚೂರು
ಎದೆಗವಚಿಕೊಂಡೇ ನಿನ್ನ
ರಂಗೋಲೆಯ ಬರೆದೆ
ದೇಶ ನೋಡಲೇ ಇಲ್ಲ
ಕೋಶ ಓದಲೇ ಇಲ್ಲ
ಕಾಡ ಕಣಗಿಲೆ ನಾನು
ಚಿಗುರು ಕೆಂಪೆಲೆ ನೀನು
ಆಚೆ ದಡದಲ್ಲೇನಿದೆಯೋ
ನಾನೇನು ಬಲ್ಲೆ?
ನಿನ್ನ ಆಶೆಯೇ ಬೇರೆ
ನನ್ನ ಭಾಷೆಯ ಬೇರೆ
ಬೇರಲ್ಲವೇ ನಾನು
ಹೂವಲ್ಲವೇ ನೀನು
ತಿರುಗಿ ನೋಡೊಮ್ಮೆ ನನ್ನ ಮಗಳೆ…
*****