ಸೂರ್ಯ ಕೆಳಗಿಳಿದು ಕತ್ತಲಾವರಿಸಲಾರಂಭಿಸಿತ್ತು. ಆ ಬೆಳಕು ಕತ್ತಲುಗಳ ಆಟ ಕಾಡಿಗೆ ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಒದಗಿಸಿದ್ದವು. ಪಕ್ಷಿಗಳು ತಮ್ಮ ತಮ್ಮ ಗೂಡಿಗೆ ಸೇರುವ ಸದ್ದೇ ಮೌನವನ್ನು ಕದಡಲು ಯತ್ನಿಸುತ್ತಿತ್ತು. ಆ ಸದ್ದನ್ನು ಹತ್ತಿಕ್ಕುವಂತೆ ಆಗಾಗ ಕ್ರಿಮಿ, ಕೀಟಗಳ ತಮ್ಮದೇ ಆದ ಕೂಗಾಟವು ಕೇಳಿಸುತ್ತಿತ್ತು.
ಬಂಡೆಯ ಮೇಲೆ ಕುಳಿತು, ಬಂಡೆಗಾನಿಕೊಂಡಿದ್ದ ಕಲ್ಯಾಣಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಳು. ಎಡಗೈಯಲ್ಲಿ ಎ.ಕೆ. ೪೭ ಆಯುಧವನ್ನು ಊರುಗೊಲಿನಂತೆ ಹಿಡಿದಿದ್ದಳು. ಅವಳೆದುರು ನಾಗೇಶ ಮತ್ತು ಸಾಯಿ ತಮ್ಮ ತಮ್ಮ ಆಯುಧಗಳನ್ನು ಎದುರಿಗಿಟ್ಟುಕೊಂಡು ಕುಳಿತಿದ್ದರು. ಆಗಾಗ ನಾಗೇಶನ ಮೇಲೆ ಹಾಯುತ್ತಿತ್ತು ಕಲ್ಯಾಣಿಯ ನೋಟ. ಮೌನ ಕಾಯುವಿಕೆ ಅವನಲ್ಲಿ ಅಸಹನೆ ಹುಟ್ಟಿಸುತ್ತಿರುವಂತೆ ಕಂಡುಬರುತ್ತಿತ್ತು. ಮತ್ತೆ ಅವನನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡು ತಪ್ಪು ಮಾಡಿದನೆ ಎಂಬ ಯೋಚನೆ ಹುಟ್ಟಿತ್ತವಳಲ್ಲಿ. ಆ ಬಗ್ಗೆ ಅವಳು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಮೊದಲು ಎಷ್ಟು ಸಲ ತನಗೆ ತಾನು ಕೊಟ್ಟುಕೊಂಡ ಉತ್ತರವೇ ಅವಳ ಮನದಲ್ಲಿ ಹಾಯಿತು. ಎಲ್ಲಾ ಕಲಿಯಲು ಸಮಯ ಹಿಡಿಯುತ್ತದೆ. ಒಮ್ಮಿಂದೊಮ್ಮೆಲೆ ಯಾರೂ ನುರಿತ ಕಮಾಂಡೋ ಅಥವಾ ಮರ್‌ಸಿನರಿ ಆಗಲು ಸಾಧ್ಯವಿಲ್ಲ. ಅವರುಗಳಿಗಾದರೆ ನುರಿತವರು ನಿಯಮಿತ ರೀತಿಯಲ್ಲಿ ಶಿಕ್ಷಣ ಕೊಡುತ್ತಾರೆ. ಹೊತ್ತಿಗೆ ಸರಿಯಾಗಿ ಪೌಷ್ಟಿಕ ಆಹಾರ ಸಿಗುತ್ತದೆ. ಕ್ರಾಂತಿಕಾರಿಗೆ ಅಂತಹದೇನೂ ಇಲ್ಲ. ಒಬ್ಬ ನಿಷ್ಠಾವಂತ ಕ್ರಾಂತಿಕಾರಿಯಾಗಲು ಬೇಕಾದ ಪ್ರಮುಖ ಗುಣ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಎಲ್ಲವನ್ನು ಬಿಟ್ಟು, ಎಲ್ಲರನ್ನೂ ಬಿಟ್ಟು, ಸಾವಿಗೆ ಅಂಜದೇ ಹೋರಾಡುವ ಮನೋಭಾವ. ಅದಕ್ಕೂ ಮುಖ್ಯವಾಗಿ ಹಸಿವು ಬಾಯಾರಿಕೆಯನ್ನು, ಹಿಂಸೆಯನ್ನು ಸಹಿಸುವ ಮನೋಧಾರ್ಡ್ಯ, ಇವೆಲ್ಲಾ ಗುಣಗಳು ನಾಗೇಶನಲ್ಲಿದೆ. ಅವನಲ್ಲಿ ಇರುವ ಒಂದೇ ಅವಗುಣವೆಂದರೆ ಅವನ ಭಾವುಕತೆ, ಏನೂ ಅರಿಯದೇ ಒಮ್ಮೆಲೆ ದೊಡ್ಡ ದೊಡ್ಡ ಕೆಲಸಗಳಿಗೆ ಹೋಗುವ ಮಹಾತ್ವಾಕಾಂಕ್ಷೆ. ಅದಕ್ಕೆ ಕಾರಣ ಅವನ ವಯಸ್ಸು, ಇನ್ನೂ ಹತ್ತೊಂಭತ್ತೂ ಆಗಿರಲಿಕ್ಕಿಲ್ಲ. ಮುಖದ ಮೇಲೆ ಗಡ್ಡದ ಕುರುಹುಗಳೂ ಕಾಣಿಸಿಕೊಂಡಿಲ್ಲ. ಒಮ್ಮೆಲೆ ದೊಡ್ಡವನಾಗಿಬಿಡಬೇಕೆಂಬ ಆಸೆ, ಕಲ್ಯಾಣಿ ಚಿಂತಿಸುತ್ತಿದ್ದುದ್ದನ್ನೇ ಹೇಳುವಂತೆ ಮೌನ ಮುರಿದ ನಾಗೇಶ
“ಈ ಕೆಲಸ ನಾನು ಮಾಡುತ್ತೇನೆ”
“ಯಾವ ಕೆಲಸ?” ತನ್ನ ಯೋಚನೆಯಿಂದ ಹೊರಬಂದ ಕಲ್ಯಾಣಿ ಬೇಕೆಂತಲೇ ಕೇಳಿದಳು.
“ಬಾಂಬು ಸ್ಫೋಟಿಸುವ ಕೆಲಸ” ಕೂಡಲೇ ಹುಮ್ಮಸ್ಸಿನಿಂದ ಹೇಳಿದ ನಾಗೇಶ. ಆ ಮಾತನ್ನು ಕೇಳಿಸಿಕೊಳ್ಳದವಳಂತೆ ಹೇಳಿದಳು ಕಲ್ಯಾಣಿ,
“ಕತ್ತಲಾಗುತ್ತಿದೆ ದೀಪ ಹಚ್ಚು”
ಯಾವ ಮಾತೂ ಇಲ್ಲದೇ ಎದ್ದ ನಾಗೇಶ ಕಂದೀಲನ್ನು ಹೊತ್ತಿಸಿ ತಂದು ನಡುವಿಟ್ಟ. ಆ ಬೆಳಕಿನಲ್ಲಿ ಅವನ ಮುಖ ನೋಡಿದಳು ಕಲ್ಯಾಣಿ. ಅವನು ತನ್ನ ನಿರ್ಣಯಕ್ಕಾಗಿ ಕಾದಂತೆ ಕಂಡುಬರುತ್ತಿತ್ತು. ನಾಗೇಶನಿಗೀಗ ತಿಳಿ ಹೇಳದಿದ್ದರೆ ಮುಂದೆ ಗೊಂದಲಗಳು ಉಂಟಾಗಬಹುದೆಂದು ನಯವಾದ ದನಿಯಲ್ಲಿ ಮಾತಾಡಿದಳು ಕಲ್ಯಾಣಿ.
“ಅದು ಅಷ್ಟು ಸುಲಭದ ಕೆಲಸವಲ್ಲ ನಾಗೇಶ! ನಿನಗೂ ಎಲ್ಲಾ ಕೆಲಸಗಳೂ ಮಾಡುವ ಅವಕಾಶ ಸಿಗುತ್ತದೆ. ಮೊದಲು ಬೇರೆಯವರು ಹೇಗೆ ಕೆಲಸ ಮಾಡುತ್ತಾರೆ ನೋಡುತ್ತಿರು. ಸಮಯ ಸಿಕ್ಕಾಗಲೆಲ್ಲಾ ಹರಿ ಮತ್ತು ಶಂಕರ ನಿನಗೆ ಎಲ್ಲದರ ಬಗ್ಗೆ ತರಬೇತಿ ಕೊಡುತ್ತಿರುತ್ತಾರೆ… ಇವತ್ತು ಹೇಗೂ ನೀನು ಜತೆಗಿರುತ್ತಿ. ನೋಡು ಹೇಗೆ ಈ ಕೆಲಸ ಮಾಡುತ್ತಾರೆಂಬುವುದು ಗೊತ್ತಾಗುತ್ತದೆ”
“ಬಾಂಬು ಸ್ಫೋಟಿಸಲು ನಾನೂ ಬರುತ್ತೇನೆಯೇ!”
ಅವನ ಆತುರದ ಮಾತು ಅವಳಲ್ಲಿ ಅಸಹನೆಯನ್ನು ಹುಟ್ಟಿಸಿತು. ಇವನ ಭಾವುಕತೆಯನ್ನು ಹತೋಟಿಯಲ್ಲಿ ತರುವುದು ಸಾಧ್ಯವೇ ಎಂದುಕೊಳ್ಳುತ್ತಾ ಹೇಳಿದಳು.
“ಪ್ರತಿಯೊಂದಕ್ಕೂ ಆತುರ, ಅಸಹನೆ ಭಾವುಕತೆಗಳು ಬೇಡ. ನೀನು ಎಲ್ಲಾ ಕೆಲಸಗಳನ್ನು ಮಾಡಬೇಕೆಂದುಕೊಂಡರೆ ಮೊದಲು ಭಾವುಕತೆಯನ್ನು ಹತೋಟಿಯಲ್ಲಿಡು”
“ಸರಿಯಕ್ಕ ಅರ್ಥವಾಯಿತು! ನೀವು ಹೇಳಿದಂತೆ ಕೇಳುತ್ತೇನೆ” ಕೂಡಲೇ ಹೇಳಿದ ನಾಗೇಶ, ಅವನ ಮಾತಿನಲ್ಲಿ ಭಾವುಕತೆ ತುಂಬಿತ್ತು. ಇವನನ್ನು ಸರಿಪಡಿಸುವುದು ಅಸಾಧ್ಯವೇನೊ ಎನಿಸಿತು ಕಲ್ಯಾಣಿಗೆ ಈ ಕೆಲಸವಾದ ಮೇಲೆ ಅದರ ಬಗ್ಗೆ ಗಹನವಾಗಿ ಯೋಚಿಸಬೇಕು ಎಂದುಕೊಳ್ಳುತ್ತಾ ಹೇಳಿದಳು
“ನೀವು ಹೋಗಿ ಅವರು ಬರುತ್ತಿದ್ದಾರೇನೋ ನೋಡಿ.”
ಬೇಸರದಿಂದ ಬಿಡುಗಡೆಗೆ ಅದೇ ಒಳ್ಳೆಯ ಮಾರ್ಗವೆಂದುಕೊಳ್ಳುತ್ತಾ ಎದ್ದರಿಬ್ಬರು. ತನ್ನ ಯೋಜನೆಯ ಕಡೆ ಮನವನ್ನು ಹರಿಯಬಿಟ್ಟಳು ಕಲ್ಯಾಣಿ.
ಸಾಮಾನ್ಯ ರೌಡಿಯಾಗಿದ್ದ ದೇವಿಯಾದವ ದೊಡ್ಡಣ್ಣನ ಕಾಲದಲ್ಲಿ ಆಯುಧಗಳ ವ್ಯಾಪಾರ ಆರಂಭಿಸಿದ. ಸರಕಾದಲ್ಲೂ ಅವನ ಪ್ರಭಾವವಿದ್ದ ಕಾರಣ ಪೋಲೀಸಿನವರೂ ಅವನು ಹೇಳಿದಂತೆ ಕುಣಿಯುತ್ತಿದ್ದರು. ಅದರಿಂದ ಎಂತಹ ಆಯುಧ ಬೇಕೆಂದರಂತಹ ಆಯುಧ, ಆರ್.ಡಿ.ಎಕ್ಸ್‌ನ್ನೊಳಗೊಂಡು ಬಾಂಬು ತಯಾರಿಸಲು ಎಂತಹ ಸಾಮಾಗ್ರಿ ಬೇಕೆಂದರೆ ಅಂತಹದು ಅವನು ತಮಗೆ ಸರಬರಾಜು ಮಾಡುತ್ತಿದ್ದ. ಕೊನೆಯ ಸಲ ದೊಡ್ಡಣ್ಣ ಅವನಿಗೆ ಆಯುಧ ಮತ್ತು ಸ್ಫೋಟಕಗಳಿಗಾಗಿ ಬೇಕಾದಕ್ಕಿಂತ ಹೆಚ್ಚು ಹಣ ಮುಂಗಡವಾಗಿ ಕೊಟ್ಟಿದ್ದೇವೆಂದು ಹೇಳಿದರು. ಆ ಸಾಮಗ್ರಿ ಸಮಯಕ್ಕೆ ಬಂದಿರಲಿಲ್ಲ. ಆ ಬಗ್ಗೆ ಅವರು ಒಂದೆರಡು ಸಲ ಹೇಳಿಕಳಿಸಿದ್ದರು. ಯಾವುದೋ ಒಂದು ನೆಪ ಹೇಳಿ ಆಯುಧಗಳು ಮತ್ತು ಸ್ಫೋಟಕವನ್ನು ಕಳಿಸುವುದನ್ನು ಮುಂದೂಡುತ್ತಾ ಬಂದಿದ್ದ. ಇದೆಲ್ಲಾ ಕಲ್ಯಾಣಿಗೆ ಮಾತ್ರ ಗೊತ್ತಿತ್ತು. ಇದರ ನಡುವೆ ಎನ್‌ಕೌಂಟರ್‌ನಲ್ಲಿ ದೊಡ್ಡಣ್ಣನವರು ವೀರಮರಣವನ್ನಪ್ಪಿದ್ದರು. ದೊಡ್ಡ ಕ್ರಾಂತಿಕಾರಿ ತಂಡ ಒಡೆದು ಚಿಕ್ಕದಾಗಿ ಬಿಟ್ಟಿತ್ತು. ಒಂದರ ನಾಯಕಿ ತಾನಾಗಿದ್ದಳು. ಅದರನಂತರ ಒಂದೆರಡು ಸಲ ದೇವಿಯಾದವನಿಗೆ ಆಯುಧಗಳನ್ನು ಕಳಿಸುವಂತೆ ಹೇಳಿಕಳಿಸಿದ್ದಳು. ಕೊನೆಯ ಸಲ ಶಂಕರ ಹೋದಾಗ ಅವನ ಅವಮರ್ಯಾದೆ ಮಾಡಿ, ಸಾಮಗ್ರಿ ಕಳಿಸುವುದಿಲ್ಲ, ಹಣ ಕೊಡುವುದಿಲ್ಲ ಏನುಬೇಕಾದರೂ ಮಾಡಿಕೊಳ್ಳಿ ಎಂದು ಒರಟಾಗಿ ಹೇಳಿ ಕಳುಹಿಸಿದ್ದ ದೇವಿ ಯಾದವ.
ಹಾಗೇ ದಿನಗಳು ಉರುಳುತ್ತಾ ಹೋಗಿದ್ದವು. ದೇವಿಯಾದವನ ಪ್ರಾಬಲ್ಯ ಬೆಳೆದು ಅವನೇ ಒಂದು ರಾಜಕೀಯ ಪಾರ್ಟಿಯನ್ನು ಆರಂಭಿಸಿದ್ದ. ಚುನಾವಣೆಯಲ್ಲಿ ಅವನು ಗೆಲ್ಲುವುದಲ್ಲದೇ ಅವನ ಪಾರ್ಟಿಯ ಹತ್ತು ಜನ ಚುನಾಯಿತರಾಗಿದ್ದರು. ರಾಜ್ಯದಲ್ಲಿ ಇದೊಂದೇ ಪ್ರಮುಖ ವಿಪಕ್ಷಿದಳವಾಗಿ ಬಿಟ್ಟಿತ್ತು. ಅದರ ನಾಯಕ ದೇವಿಯಾದವ. ರಾಜಕಾರಣವನ್ನು ವ್ಯವಹಾರವಾಗಿಸಿ ಕೊಂಡು ಅವನು ಅದರಲ್ಲೂ ಬೇಕಾದಷ್ಟು ಸಂಪಾದಿಸಿದ್ದ. ಅವನು, ದೊಡ್ಡಣ್ಣ ಮತ್ತು ಅವನೊಡನೆ ಆದ ಒಪ್ಪಂದವನ್ನು ಮರೆತುಬಿಟ್ಟಿರಬಹುದು. ಆದರೆ ಕಲ್ಯಾಣಿ ಅದನ್ನು ಮರೆತಿರಲಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದಳು.
ವಿಪಕ್ಷದ ನಾಯಕ ದೇವಿಯಾದವ ರಾಮನಗರಕ್ಕೆ ಬರಲಿದ್ದಾನೆಂಬ ವಿಷಯ ತಿಳಿದಾಗ ಎಲ್ಲಾ ವಿವರಗಳನ್ನು ಸಂಗ್ರಹಿಸಿಕೊಂಡು ಬರುವಂತೆ ಹರಿ ಮತ್ತು ಶಂಕರನನ್ನು ಕಳುಹಿಸಿದ್ದಳು. ಮಲ್ಲಪ್ಪ ಬಂಡೇರಹಳ್ಳಿಯಲ್ಲಿನ ಚಟುವಟಿಕೆಗಳನ್ನು ಅರಿತು ಬರಲು ಹೋಗಿದ್ದ.
ತಮ್ಮನ್ನು ಮೋಸ ಮಾಡಿದ, ಜನರ ಹಣವನ್ನು ಲೂಟಿ ಮಾಡುತ್ತಿರುವ ದೇವಿಯಾದವ ಇನ್ನು ಬದುಕಿರಬಾರದೆಂಬ ನಿರ್ಣಯವನ್ನು ಕಲ್ಯಾಣಿ ಬಹು ಮೊದಲೇ ತೆಗೆದುಕೊಂಡಿದ್ದಳು. ನಾಳೆ ಅವನು ರಾಮನಗರಕ್ಕೆ ಬರುವನೆಂಬ ಸುದ್ದಿ. ಅದು ಖಚಿತವಾದಮೇಲೆ ಮುಂದಿನ ಯೋಜನೆ ಎಂದು ಕಾಯುತ್ತಿದ್ದಳು. ಇದೆಲ್ಲದರ ಬಗ್ಗೆ ಯೋಚಿಸುವಾಗಲೂ ಭಾವರಹಿತವಾಗಿತ್ತವಳ ಮನ.
ಏಳು ಗಂಟೆಯ ಸುಮಾರಿಗೆ ಹರಿ ಮತ್ತು ಶಂಕರ ಬಂದರು. ಮನದ ಸಮತೋಲನವನ್ನು ಕಳೆದುಕೊಳ್ಳದೇ ಅವರು ತಂದ ಸುದ್ದಿಯನ್ನು ಕೇಳಿದಳು ಕಲ್ಯಾಣಿ. ಇವತ್ತು ರಾತ್ರಿಯೇ ರಾಮನಗರಕ್ಕೆ ಹೋಗಲಿದ್ದಾನೆ ದೇವಿಯಾದವ. ರಾಮನಗರಕ್ಕೆ ಹೋಗಬೇಕಾದರೆ ದೇವನಹಳ್ಳಿಯನ್ನು ಹಾದೇ ಹೋಗಬೇಕು. ಬಂಡೇರಹಳ್ಳಿ ಒಂದು ಕಡೆಯಾದರೆ ದೇವನಹಳ್ಳಿ ಇನ್ನೊಂದು ಕಡೆ, ಕಾಡಿನ ಅಡ್ಡದಾರಿಯಿಂದ ನಡೆಯುತ್ತಾ ಹೋದರೆ ದೇವನಹಳ್ಳಿಯ ರಾಜಮಾರ್ಗ ತಲುಪಲು ಸುಮಾರು ಎರಡು ಗಂಟೆಗಳಾದರೂ ಬೇಕು.
ಹರಿ ಹೇಳುತ್ತಿದ್ದುದನ್ನೆಲ್ಲಾ ಕೇಳುತ್ತಲೇ ಮುಂದೆ ಮಾಡಬೇಕಾದ ಕೆಲಸದ ತಯಾರಿ ಆರಂಭಿಸಿದ್ದಳು ಕಲ್ಯಾಣಿ. ತಾವು ಈಗಲೇ ಹೊರಡಬೇಕು ಎಂದು ಅರಿತ ಮಿಕ್ಕವರೂ ತಮ್ಮೊಡನೆ ತೆಗೆದುಕೊಂಡು ಹೋಗಬೇಕಾದ ಆಯುಧಗಳನ್ನು, ಸಲಕರಣೆಗಳನ್ನು ಸಿದ್ಧ ಮಾಡಿಕೊಳ್ಳುವುದರಲ್ಲಿ ತೊಡಗಿದರು. ಅವರು ಸಿದ್ಧರಾಗುತ್ತಿದ್ದಂತೆ ಬಂಡೇರಹಳ್ಳಿಯಿಂದ ಬಂದ ಮಲ್ಲಪ್ಪ, ಆಗಿನ ಯೋಜನ ಗೊತ್ತಾದಮೇಲೆ ಅವನಿಗೆ ಮಾತಾಡಲು ಸಮಯವೇ ಇರಲಿಲ್ಲ. ಕಲ್ಯಾಣಿಯ ಆದೇಶದ ಮೇರೆಗೆ ಅವನೂ ಅವರೊಡನೆ ಹೊರಡುವ ಸಿದ್ಧತೆ ಆರಂಭಿಸಿದ.
ಎಲ್ಲರ ಬೆನ್ನುಗಳಿಗೆ ಚೀಲಗಳು ಏರಿದವು, ಹೆಗಲಿಗೆ ಆಯುಧ, ಕಾಡಿನ ಗಾಡಾಂಧಕಾರದಲ್ಲಿ ನಡುಗೆ ಆರಂಭವಾಯಿತು. ಎಲ್ಲರಿಗಿಂತ ಮುಂದಿದ್ದ ಹರಿನಾಥ. ಅವನ ಹಿಂದೆ ಒಂದೇ ಸಾಲಿನಲ್ಲಿ ನಡೆಯುತ್ತಿದ್ದರು ಮಿಕ್ಕವರು. ಕೊನೆಗಿದ್ದವಳು ಕಲ್ಯಾಣಿ. ದಟ್ಟ ಕಾಡಿನಲ್ಲಿ ಗಿಡಗಂಟೆ, ಪೊದೆಗಳ ನಡುವೆ ವೇಗದ ಗತಿಯಲ್ಲಿ ನಡೆಯುವದು ಅಸಂಭವ. ಬಹು ಜನರಿಗೆ ಅಸಂಭವವಾದದ್ದು ಅವರಿಗೆ ಅಷ್ಟು ಕಷ್ಟಕರವಾಗಿ ಕಾಣುತ್ತಿರಲಿಲ್ಲ. ಅಂಧಕಾರದಲ್ಲಿ ಅವರನ್ನು ಯಾರೂ ಅಸ್ಪಷ್ಟವಾಗಿಯೂ ಕಾಣುವ ಹಾಗಿರಲಿಲ್ಲ. ಕಲ್ಯಾಣಿಯ ಮುಂದಿದ್ದ ನಾಗೇಶನ ನಡುಗೆಯ ಗತಿ ಆಗಾಗ ನಿಧಾನಗೊಳ್ಳುತ್ತಿತ್ತು. ಅದನ್ನು ತಿದ್ದಲೆಂಬಂತೆ ತನ್ನ ಆಯುಧದ ಹಿಂಭಾಗದಿಂದ ಅವನನ್ನು ಮುಂದೆ ನೂಕುತ್ತಿದ್ದಳು ಕಲ್ಯಾಣಿ. ಅದರ ಕಾರಣ ಎಡವುತ್ತಿದ್ದ ಅವನು ಯಾವ ಮಾತೂ ಆಡದೆ ತೂರಾಡಿ ಸರಿಹೋಗಿ ಇನ್ನೂ ವೇಗವಾಗಿ ನಡೆಯುತ್ತಿದ್ದ.
ಗಾಢ ಮೌನದಲ್ಲಿ ಇವರುಗಳ ನಡುಗೆಯ ಸದ್ದು, ಗಿಡಗಂಟೆಗಳನ್ನು ಮುರಿಯುವ ಸದ್ದು ಮಾತ್ರ ಕೇಳಿಸುತ್ತಿತ್ತು. ವಾತಾವರಣದಲ್ಲಿ ಹದವಾದ ಚಳಿ ಇದ್ದರೂ, ಆಗಾಗ ತಣ್ಣನೆಯ ಗಾಳಿ ಅವರ ದೇಹವನ್ನು ಸೋಕಿ ಹೋಗುತ್ತಿದ್ದರೂ ಅವರುಗಳ ಹಣೆಯ ಮೇಲೆ ಬೆವರು ಸಾಲುಗಟ್ಟಿ ಕೆಳಗಿಳಿಯುವ ಯತ್ನದಲ್ಲಿದ್ದಾಗ ಅದನ್ನವರು ತಮ್ಮ ಮುಂಗೈಯಿಂದ ವರೆಸಿಕೊಳ್ಳುತ್ತಿದ್ದರು. ಆ ಬೆವರಿಗೆ ಕಾರಣ ಬರೀ ನಡುಗೆಯ ವೇಗವೇ ಅಲ್ಲ. ಬೆನ್ನಿಗಿದ್ದ ಭಾರ ಕೂಡ. ಒಂದು ಮಾತೂ ಇಲ್ಲದೇ ಸಾಗಿತ್ತವರ ನಡುಗೆ, ದಣಿವನ್ನು ಶಮನಗೊಳಿಸಲು ಅವರು ದಾರಿಯಲ್ಲಿ ಒಂದು ಕ್ಷಣವೂ ವಿಶ್ರಮಿಸಲಿಲ್ಲ. ಅವರಿಗೆ ತಮ್ಮ ಗುರಿ ಮುಖ್ಯವಾದ ಕಾರಣ ಅಂತಹ ಯೋಚನೆಯೂ ಅವರಲ್ಲಿ ಸುಳಿಯಲಿಲ್ಲ.
ಕಾಡಿನ ಮೌನವನ್ನು ಸೀಳುತ್ತಾ ಆಗಾಗ ವಾಹನಗಳ ಓಡಾಟದ ಸದ್ದು ಕೇಳಿಸಲಾರಂಭಿಸಿದಾಗ ಅವರ ನಡುಗೆ ನಿಂತಿತ್ತು. ಹಿಂದಿದ್ದ ಕಲ್ಯಾಣಿ ಮುಳ್ಳುಗಿಡ ಪೊದೆಗಳ ನಡುವಿನಿಂದ ಹಾದು ಮುಂದೆ ಬಂದಳು. ಗಿಡ ಗಂಟೆಗಳ ನಡುವಿನಿಂದ ದೂರದ ರೋಡಿನ ಮೇಲೆ ಹೋಗುತ್ತಿರುವ ವಾಹನಗಳ ಬೆಳಕು ಅಸ್ಪಷ್ಟವಾಗಿ ಕಾಣುತ್ತಿತ್ತು.
“ಎಲ್ಲರೂ ಬಗ್ಗಿ ನಿಧಾನವಾಗಿ ಮುಂದೆ ಸರಿಯುತ್ತಾ ಬನ್ನಿ. ಹೆಚ್ಚು ಶಬ್ದವಾಗಬಾರದು” ಮೆಲ್ಲನೆ ಆಜ್ಞಾಪಿಸುವಂತಹ ದನಿಯಲ್ಲಿ ಹೇಳಿದಳು ಕಲ್ಯಾಣಿ. ಮೌನದಲ್ಲಿ ಅದು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸಿತು. ಪ್ಯಾಂಟಿನ ಜೇಬಿನಿಂದ ಬೈನಾಕ್ಯುಲರ್ ತೆಗೆದು ಪೂರ್ತಿ ಬಗ್ಗಿ ಮುಂದೆ ನಡೆಯಲಾರಂಭಿಸಿದಳು ಕಲ್ಯಾಣಿ, ಅದೇ ರೀತಿಯಲ್ಲಿ ಮಿಕ್ಕವರೂ ಅವಳನ್ನು ಅನುಸರಿಸತೊಡಗಿದರು. ಹಾಗೆ ಸುಮಾರು ಹದಿನೈದು ನಿಮಿಷ ಮುಂದುವರೆದ ಮೇಲೆ ಕಾಡಿನಿಂದ ಬಿಡುಗಡೆ ಹೊಂದಿದಂತೆ ಮೈದಾನದಲ್ಲಿ ಬಂದರು. ಬೈನಾಕ್ಯುಲರ್‌ನ ಮೂಲಕ ಮುಂದಿನ ರೋಡು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ನೋಡಿದಳು ಕಲ್ಯಾಣಿ. ಅವರು ಕುಳಿತಲ್ಲಿಂದ ಸ್ವಲ್ಪ ದೂರದಲ್ಲಿರುವ ಹಳ್ಳಿ ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನೂ ಅಲ್ಲಿ ಜನರ ಓಡಾಟ, ಅಂಗಡಿಗಳು ತೆಗೆದುರುವುದು ಕಂಡುಬಂತು. ನೋಡುವ ತನ್ನ ಕೆಲಸವನ್ನು ನಿಲ್ಲಿಸದೇ ಹೇಳಿದಳು ಕಲ್ಯಾಣಿ.
“ಶಂಕರ್ ನೀ ಹೋಗಿ ಭೂತದ ಗುಡ್ಡದಿಂದ ಸುದ್ದಿ ತಿಳಿದುಕೊಂಡು ಬಾ. ನಮಗೆ ದೇವಿ ಬರುವ ಸರಿಯಾದ ಸಮಯ ಗೊತ್ತಾಗಬೇಕು. ಅವನು ಕೂತ ವಾಹನವನ್ನು ನಾವು ಸರಿಯಾಗಿ ಗುರುತಿಸಬೇಕು”
ಅವಳ ಮಾತು ಮುಗಿಯುತ್ತಿದ್ದಂತೆ ವೇಷ ಬದಲಿಸಿದ ಶಂಕರ ಸ್ವಲ್ಪ ಮುಂದೆ ನಡೆದು ರೋಡಿಗೆ ಬಂದು ಹಳ್ಳಿಯ ಕಡೆ ವೇಗವಾದ ಹೆಜ್ಜೆಗಳನ್ನು ಹಾಕತೊಡಗಿದ. ಬೈನಾಕ್ಯುಲರ್‌ನ ಮೂಲಕ ಅವನನ್ನೇ ಕೆಲಕ್ಷಣಗಳು ತದೇಕಚಿತ್ತದಿಂದ ನೋಡಿದಳು ಕಲ್ಯಾಣಿ. ಹೊಲಸು ಪಂಚೆ, ಪೂರ್ತಿ ತೋಳಿನ ನಿಲುವಂಗಿ, ಕಾಲಿಗೆ ದಪ್ಪನೆಯ ಚಪ್ಪಲಿ ಮತ್ತು ಚಳಿಯನ್ನು ಓಡಿಸಲೆಂಬಂತೆ ಹೊದ್ದ ಕಂಬಳಿಯ ಕಾರಣ ಅವನನ್ನು ಗುರುತಿಸುವುದು ಬಹಳಕಷ್ಟ. ದೂರದರ್ಶಿನಿಯನ್ನು ಕಣ್ಣಿನಿಂದ ಸರಿಸಿ ಆದೇಶಿಸಿದಳು.
“ಹರಿ ನಿನ್ನ ಕೆಲಸ ಆರಂಭಿಸು, ಎಲ್ಲವನ್ನೂ ಎಷ್ಟು ಜಾಗ್ರತೆಯಾಗಿ ಮಾಡಬೇಕೆಂಬುವದನ್ನು ನಾಗೇಶನಿಗೂ ತೋರಿಸು. ಅವಸರದಲ್ಲಿ ಕೆಲಸ ಕೆಡಿಸಬೇಡ, ಸಾಯಿ, ಮಲ್ಲಪ್ಪ ನೀವಿಬ್ಬರೂ ವಿರುದ್ಧ ದಿಕ್ಕುಗಳಲ್ಲಿ ಸ್ವಲ್ಪ ದೂರ ನಡೆದು ಕಾವಲಿರಿ.
ಆವಳ ಮಾತು ಮುಗಿಯುತ್ತಿದ್ದಂತೆ ಕೆಲಸ ಆರಂಭಿಸಿದರವರು.
ರಾತ್ರಿಯ ಒಂಭತ್ತೂವರೆಯಾಗುತ್ತಿದ್ದರೂ ದೇವನಹಳ್ಳಿಯವರು ಅಲ್ಲಲ್ಲಿ ಓಡಾಡುತ್ತಿದ್ದರು. ಆರ್ಥಿಕ ಉದಾರೀಕರಣದ ಪರಿಣಾಮವಾಗಿ ಅಲ್ಲಿ ಒಂದು ಎಸ್.ಟಿ.ಡಿ. ಬೂತ್ ಹುಟ್ಟಿಕೊಂಡಿತ್ತು. ಗ್ರಾಹಕರಿಲ್ಲದ ಕಾರಣ ಬೇಸರವನ್ನು ಓಡಿಸುವ ಉಪಾಯಗಳನ್ನು ಹುಡುಕುತ್ತಿದ್ದ ಅದರ ಒಡೆಯ. ಶಂಕರ ಬರುತ್ತಿರುವುದು ಕಂಡು ಅವನಿಗಾಗಿ ಕಾಯತೊಡಗಿದ. ಇವನು ಫೋನ್ ಮಾಡಲು ಬರುತ್ತಿದ್ದಾನೋ ಇಲ್ಲವೋ ತಿಳಿದುಕೊಂಡು ತನ್ನ ಸ್ಥಾನದಲ್ಲಿ ಹೋಗಿ ಕುಳಿತ ಎಸ್.ಟಿ.ಡಿ. ಬೂತ್‌ನ ಒಡೆಯ ತನ್ನದೇ ಗತಿಯಲ್ಲಿ ನಡೆಯುತ್ತಾ ಬಂದ ಶಂಕರ ಯಾವ ಮಾತೂ ಆಡದೇ ಬೂತಿನಲ್ಲಿ ಸೇರಿ ನಂಬರ್ ಅದುಮತೊಡಗಿದ. ಇನ್ನೂ ಯಾರಾದರೂ ಬರುವರೇನೋ ಎಂಬಂತೆ ನೋಡುತ್ತಿದ್ದ ಎಸ್.ಟಿ.ಡಿ. ಬೂತಿನವ.
“ಹಲೋ”
ಆ ಕಡೆಯಿಂದ ಕೇಳಿ ಬಂದ ಕಂಠವನ್ನು ಗುರುತಿಸಿದ ಶಂಕರ ಕೇಳಿದ.
“ಮೆರವಣಿಗೆ ಹೊರಟಿದೆಯೇ?”
“ಹೂಂ ಇನ್ನೂ ಅರ್ಧ ಗಂಟೆಯಲ್ಲಿ ಬರಬಹುದು” ಆ ಕಡೆಯಿಂದ ಭಾವರಹಿತ ಉತ್ತರ ಬಂತು.
“ಗುರುತಿಸುವುದು ಹೇಗೆ?”
“ಒಂದೇ ಅಂಬಾಸಿಡರ್ ಇದೆ. ಬಿಳಿಯದು. ಎರುಡ ಸೈಕಲ್ ಮೋಟರ್‌ಗಳ ನಂತರ ಅದು ಬರುತ್ತದೆ”
“ಸರಕಾರದ ರಕ್ಷಣೆ.”
“ಸೈಕಲ್ ಮೋಟರ್‌ಗಳೇ ರಕ್ಷಕರು. ಮದುವೆ ಸುಲುಭವಾಗಿ ಆಗಬಹುದು”
ರಿಸೀವರನ್ನು ಕೆಳಗಿಟ್ಟು ಶಂಕರ ಹೊರಬಂದಾಗ ಕೇಳಿದ ಎಸ್.ಟಿ.ಡಿ.ಯವ
“ಇಷ್ಟು ಬೇಗ ಮಾತು ಮುಗಿಯಿತೆ?”
“ಹೆಚ್ಚು ಮಾತಾಡಲು ನನ್ನ ಬಳಿ ಹಣವಿಲ್ಲ” ಎಂದ ಶಂಕರ್ ಅವನು ಕೊಳ್ಳ ರಸೀದಿಯ ಮೇಲೆ ಕಣ್ಣಾಡಿಸಿ ಅದನ್ನು ತನ್ನ ನಿಲುವಂಗಿಯ ಕಿಸಗೆ ಸೇರಿಸುತ್ತಾ ಹಣ ಕೊಟ್ಟು ಅಲ್ಲಿಂದ ಹೊರಟ.
ಅವನನ್ನು ಮರೆತ ಅಂಗಡಿಯವ ಅದನ್ನು ಮುಚ್ಚುವ ಕೆಲಸದಲ್ಲಿ ನಿರತನಾದ. ಬೆಳಕಿನಿಂದ ಕತ್ತಲಲ್ಲಿ ಬರುತ್ತಲೇ ಶಂಕರನ ನಡುಗೆಯ ವೇಗ ತೀವ್ರಗೊಂಡಿತು.
ಗಾಡಾಂಧಕಾರದಲ್ಲಿ ಆಗಲೇ ರಸ್ತೆಯ ನಡುವೆ ಅನುಮಾನ ಬರದಂತೆ ಬಾಂಬನ್ನು ಇಡುವ ಕೆಲಸ ಮುಗಿಸಿದ್ದ ಹರಿ. ಆಗಾಗ ಅತ್ತಿತ್ತ ಹರಿದಾಡುತ್ತಿದ್ದ ವಾಹನಗಳ ಕಾರಣ ಅವನು ಕೆಲಸ ಮುಗಿಸಲು ತಡವಾಗಿತ್ತು. ಅದೂ ಅಲ್ಲದೇ ಪ್ರತಿ ಕೆಲಸವನ್ನು ಸಹನೆಯಿಂದ ನಾಗೇಶನಿಗೆ ವಿವರಿಸಿದ್ದ. ತಾವು ಹಿಡಿದಿರುವ ವಸ್ತು ಎಷ್ಟು ಅಪಾಯಕಾರಿ, ಸ್ವಲ್ಪವಾದರೂ ಹೆಚ್ಚು ಕಡಿಮೆಯಾದರೆ ಎಂತಹ ಘೋರ ಸಂಭವಿಸಬಹುದೆಂದು ಕೇಳಿದಾಗ ನಾಗೇಶನಿಗೆ ಅದನ್ನು ನಂಬುವುದು ಕಷ್ಟವಾಗಿತ್ತು.
ಕಲ್ಯಾಣಿ ದುರ್ಬಿನ್ನಿನಿಂದ ಎಲ್ಲರ ಚಟುವಟಿಕೆಗಳನ್ನೂ ಗಮನಿಸುತ್ತಿದ್ದಳು. ಅವಳಲ್ಲಿ ಎಂತಹ ಭಯ, ಆತಂಕವಾಗಲಿ ಇರಲಿಲ್ಲ. ನಾಗೇಶನ ಭಾವುಕತೆಯನ್ನು ಹರಿ ನಿಯಂತ್ರಣದಲ್ಲಿಡುವನೆಂಬ ನಂಬಿಕೆ ಅವಳಿಗಿತ್ತು. ಶಂಕರ ಹೆಚ್ಚು ಕಡಿಮೆ ಓಡುತ್ತಲೆ ಬಂದು ಅವಳಿಗೆಲ್ಲವನ್ನು ವಿವರಿಸಿದಾಗ, ಅವನಿಗೆ ಮುಂದೇನು ಮಾಡಬೇಕೆಂಬುವುದು ಹೇಳಿದಳು. ಅವರ ಮಾತು ಮುಗಿಯುತ್ತಿದ್ದಂತೆ ದೂರದಲ್ಲಿದ್ದ ಸಾಯಿಯ ಕಡೆ ಓಡಿದ ಶಂಕರ. ಅವನು ಅತ್ತ ಹೋಗುತ್ತಿದ್ದಂತೆ ಹರಿ ಮತ್ತು ನಾಗೇಶ ಅವರ ಬಳಿ ಬಂದರು. ಎಲ್ಲಾ ಕೆಲಸ ಪರ್ಫೆಕ್ಟಾಗಿ ಆಗಿದೆ ಎಂದು ಹೇಳಿದ ಹರಿ. ರಿಮೋಟನ್ನು ಕೈಯಲ್ಲಿ ಹಿಡಿದುಕೊಂಡು ಕಾಯತೊಡಗಿದಳು ಕಲ್ಯಾಣಿ. ಅವಳ ಬಲಗೈಯಲ್ಲಿ ರಿಮೋಟ್ ಇದ್ದರೆ ಎಡಗೈಯಲ್ಲಿ ದುರ್ಬೀನು.
ಎದುರಿನ ರಸ್ತೆಯ ಮೇಲಿಂದ ಆಗಾಗ ಬಸ್ಸುಗಳು, ವ್ಯಾನುಗಳು, ಜೀಪುಗಳು ಇನ್ನಿತರ ದ್ವಿಚಕ್ರ ವಾಹನಗಳು ಹಾದುಹೋಗುತ್ತಿದ್ದವು. ಕಲ್ಯಾಣಿಯ ಬದಿಗೆ ಕುಳಿತ ನಾಗೇಶನಲ್ಲಿ ಆತಂಕ ಹೆಚ್ಚಾಗಿತ್ತು. ಹರಿ ಹೇಳಿದ ಮಾತುಗಳು ನೆನಪಾಗಿ, ಅದು ನಿಜವಾಗುವುದೇ ಎಂಬ ಅನಿಸಿಕೆಯಿಂದ ಅವನ ಹೃದಯಬಡಿತ ಜೋರಾಗಿತ್ತು. ಇಂತಹದು ಇದು ಅವನ ಮೊದಲ ಅನುಭವ. ಅವನು ಈವರೆಗೆ ಬಾಂಬಿನ ಸದ್ದನ್ನು ಕೇಳಿರಲಿಲ್ಲ. ಸಮಯ ಬಹು ನಿಧಾನವಾಗಿ ಸರಿಯುತ್ತಿದೆ. ಎನಿಸತೊಡಗಿತ್ತವನಿಗೆ.
ಹಳ್ಳಿಯ ಕಡೆ ಹೋದ ಮಲ್ಲಪ್ಪನ ಕಡೆ ನೋಡಿದಳು ಕಲ್ಯಾಣಿ, ಸುತ್ತೂ ನೋಟ ಹಾಯಿಸುತ್ತಾ ಕಾವಲಿಗೆ ನಿಂತಿದ್ದನವ. ಅದರ ಅವಶ್ಯಕತೆಯಿಲ್ಲವೆಂದು ಕಲ್ಯಾಣಿಗೆ ಗೊತ್ತಿದ್ದರೂ ಅವಳು ಎಲ್ಲಾ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಳು. ದೊಡ್ಡಣ್ಣ ಒಂದು ಸಲ ಅವರು ಮಾಡಿದ ಚಿಕ್ಕ ತಪ್ಪಿನಿಂದ ಇಡೀ ಯೋಜನೆಯಲ್ಲಿ ಹೇಗ ಹಾಳಾಗಿ ಹೋಗಿತ್ತೆಂಬುವುದನ್ನು ವಿವರಿಸಿದ್ದ. ಆದಿನದಿಂದ ಒಂದು ಯೋಜನೆ ಹಾಕುವಾಗ ಪ್ರತಿಚಿಕ್ಕ ವಿಷಯಕ್ಕೂ ಬಹು ಮಹತ್ವ ಕೊಡಲಾರಂಭಿಸಿದ್ದಳು ಕಲ್ಯಾಣಿ. ಅವಳು ಹಾಕಿದ ಯಾವುದೇ ಯೋಜನೆಯಾಗಲಿ ಈವರೆಗೆ ವಿಫಲವಾಗಿರಲಿಲ್ಲ. ಅದರಿಂದಾಗಿ ಹುಟ್ಟಿದ ಆತ್ಮವಿಶ್ವಾಸದ ಕಾರಣ ಅವಳು ಯಾವ ಬೇಜವಾಬ್ದಾರಿ ಕೆಲಸವನ್ನೂ ಮಾಡಿರಲಿಲ್ಲ.
ಸಾಯಿ ಮತ್ತು ಶಂಕರ ಕೂಡ ತಮ್ಮ ಕೆಲಸವನ್ನು ಬಹು ಮುತುವರ್ಜಿಯಿಂದ ನಿರ್ವಹಿಸುತ್ತಿರುವಂತೆ ಕಂಡುಬರುತ್ತಿತ್ತು. ಶಂಕರನ ಬೆನ್ನು ಅವಳ ಕಡೆ ಇತ್ತು. ದುರ್ಬೀನು ಅವನ ಬಳಿಯೂ ಇತ್ತು. ಅವನು ರೋಡಿನ ಮೇಲಿಂದ ನೋಟ ಸರಿಸಿಲ್ಲವೆಂಬುವುದು ಅವಳಿಗೆ ಹೇಳಬೇಕಾಗಿರಲಿಲ್ಲ. ರಾಮನಗರದ ಕಡೆ ಹೋಗುತ್ತಿರುವ ವಾಹನಗಳು ಮೊದಲು ಕಾಣವುದು ಅವನಿಗೆ. ಎಲ್ಲಾ ತಾನು ಎಣಿಸಿದಂತೆ ಸಮಾಧಾನಕರವಾಗಿ ನಡೆದಿದೆ ಎಂದುಕೊಳ್ಳುತ್ತಾ ಕೈಯಲ್ಲಿದ್ದ ರಿಮೋಟನ್ನು ಸರಿಯಾಗಿ ಹಿಡಿದಳು.
ತನ್ನ ಕೆಲಸ ಮುಗಿದಂತೆ ಹರಿ ನಿಶ್ಚಿಂತೆಯಿಂದ ನೆಲದ ಮೇಲೆ ಒರೆಗಿದ್ದ. ಇಂತಹ ಹಲವಾರು ಕೆಲಸಗಳನ್ನು ಮಾಡಿದ ಅವನಿಗೆ ಯಾವ ಬಗ್ಗೆಯ ಕಾತುರವೂ ಇಲ್ಲ. ನಾಗೇಶನಲ್ಲಿ ಬೆಳೆಯುತ್ತಿರುವ ಕಾತುರ ಆತಂಕಗಳು ಅವನನ್ನು ಅಸ್ವಸ್ಥನನ್ನಾಗಿ ಮಾಡುತ್ತಿದ್ದವು. ಕಾಯುವಿಕೆ ಅವನಲ್ಲಿ ಸಹನೆ ಮೀರುವಷ್ಟು ಬೆಳೆದಾಗ ಇನ್ನು ತಾಳಲಾರದವನಂತೆ ಮಾತಾಡಿದ.
“ಇನ್ನೂ ಎಷ್ಟು ಹೊತ್ತಾಗಬಹುದಕ್ಕಾ?”
ಅವನು ಬಹುಮೆಲ್ಲನೆ ಮಾತಾಡಿದರೂ ಮೌನದ ಕಾರಣ ಅದರ ಅಲೆಗಳು ಬಹು ದೂರದವರೆಗೂ ಹರಡಿದ್ದವು. ಅವರಿಬ್ಬರ ಹಿಂದಿದ್ದ ಹರಿ ಅವನನ್ನು ಒರಟಾಗಿ ತನ್ನ ಕಡೆ ಎಳೆದುಕೊಂಡ. ಇಂತಹದನ್ನು ನಿರೀಕ್ಷಿಸಿರದ ನಾಗೇಶ ಒಮ್ಮೆಲೆ ಹೋಗಿ ಅವನ ಮೇಲೆ ಬಿದ್ದ. ಸಿಟ್ಟಿನಿಂದ ಅವನು ಬಾಯಿ ತೆಗೆಯುವ ಮುನ್ನ ಹರಿಯ ಕೈ ಅದರ ಮೇಲೆ ಬಂತು. ಗಟ್ಟಿಯಾಗಿ ನಾಗೇಶನ ಬಾಯಿ ಮುಚ್ಚಿ ಹಿಡಿದು ಅವನ ಕಿವಿಯ ಬಳಿ ಬರೀ ಅವನಿಗೆ ಮಾತ್ರ ಕೇಳಿಸುವಂತೆ ಹೇಳಿದ ಹರಿ
“ಬಾಯಿ ಮುಚ್ಚಿಕೊಂಡು ಆಗುವದನ್ನೆಲ್ಲಾ ನೋಡುತ್ತಿರು. ಬಾಯಿಂದ ಇನ್ನೊಂದು ಮಾತು ಬಂದರೆ ನಿನ್ನ ಕೊಂದುಬಿಡುತ್ತೇನೆ”
ಆಶ್ಚರ್ಯದಿಂದ ಕಲ್ಯಾಣಿಯ ಕಡೆ ನೋಡಿದ ನಾಗೇಶ. ಇದ್ಯಾವುದೂ ತನ್ನ ಗಮನಕ್ಕೆ ಬರದಂತೆ ಶಂಕರನ ಕಡೆಯೇ ನೋಡಿತ್ತಿದ್ದಳವಳು. ನಾಗೇಶನಿಗೆ ಹರಿಯ ವರ್ತನೆಯಿಂದ ಬಹಳ ಸಿಟ್ಟು ಬಂದಿತ್ತು. ಇಂತಹದು ಅವನ ಮೊದಲ ಅನುಭವ, ಕ್ರಾಂತಿಕಾರಿ ತಂಡದವರಾರೂ ಅವನೊಡನೆ ಹೀಗೆ ವರ್ತಿಸಿರಲಿಲ್ಲ. ಇಷ್ಟು ಸಿಟ್ಟಿನಿಂದ ಆಜ್ಞೆ ಕೊಡುವಂತೆ ಮಾತಾಡಿರಲಿಲ್ಲ. ನಿಧಾನವಾಗಿ ಹರಿ ತನ್ನ ಕೈಯನ್ನು ಅವನ ಬಾಯಿಂದ ಸರಿಸಿದ. ಈ ಕೆಲಸ ಮುಗಿಯಲಿ ಆಮೇಲೆ ಅವನನ್ನು ನೋಡಿಕೊಳ್ಳುವ ಎಂದುಕೊಂಡ ನಾಗೇಶ ಮತ್ತೆ ಸರಿದು ಬಂದು ಕಲ್ಯಾಣಿಯ ಬದಿಗೆ ಕುಳಿತ.
ಸಾಯಿಯ ಕೈಯಲ್ಲಿದ್ದ ಟಾರ್ಚು ಒಂದು ಸಲ ಹೊತ್ತಿಕೊಂಡು ನಂದಿತು. ಕಲ್ಯಾಣಿ ಅದನ್ನು ನೋಡಿದಳು. ಅವಳ ಅವಯವಗಳೆಲ್ಲಾ ಇನ್ನೂ ಚುರುಕಾದವು. ಹಲವು ಕ್ಷಣಗಳು ಕಳೆದ ಬಳಿಕ ಮೋಟಾರ್ ಸೈಕಲ್‌ನ ಶಬ್ದ ಅಸ್ಪಷ್ಟವಾಗಿ ಕೇಳಿ ಬರಲಾರಂಭಿಸಿತು. ಹಿಂದಿದ್ದ ಹರಿ ಒಮ್ಮೆಲೆ ಎದ್ದು ಸರಿಯಾಗಿ ಕುಳಿತ. ಕಲ್ಯಾಣಿಯ ನೋಟ ದೂರದ ರಸ್ತೆಗೇ ಅಂಟಿಕೊಂಡಿತ್ತು. ಆ ಸದ್ದು ಸ್ವಲ್ಪ ಜೋರಾಗಿ ಕೇಳಿಸತೊಡಗಿದಾಗ ಇನ್ನೊಮ್ಮೆ ಸಾಯಿಯನ್ನು ನೋಡಿದಳು. ಕಲ್ಯಾಣಿ, ಇನ್ನೊಮ್ಮೆ ಅವನ ಕೈಯಲ್ಲಿದ್ದ ಟಾರ್ಚ್ ಬೆಳಗಿ ನಂದಿತು. ಮತ್ತೆ ರೋಡಿಗೆ ತಿರುಗಿತು ದುರ್ಬೀನು. ಒಬ್ಬರ ಪಕ್ಕದಲ್ಲಿ ಒಬ್ಬರು ಬರುತ್ತಿದ್ದ ಸೈಕಲ್ ಮೋಟರ ಸವಾರರು ಸ್ಪಷ್ಟವಾಗಿ ಕಾಣಿಸತೊಡಗಿದರು. ಒಬ್ಬ ಪೋಲೀಸಿನ ಉಡುಪಿನಲ್ಲಿದ್ದ. ಅವನು ಇನ್ಸ್‌ಪೆಕ್ಟರ್ ಇರಬಹುದು ಎಂದುಕೊಂಡಳು ಕಲ್ಯಾಣಿ. ಇನ್ನೊಬ್ಬ ದಷ್ಟಪುಷ್ಟ ವ್ಯಕ್ತಿ ರೌಡಿಯಂತೆ ಕಾಣುತ್ತಿದ್ದ. ಅವನು ದೇವಿಯಾದವನ ಹಿಂಬಾಲಕ, ಹೆಚ್ಚಕಡಿಮೆ ನಿರ್ಜನ ರಸ್ತೆಯ ಕಾರಣ ವೇಗವಾಗಿ ಬರುತ್ತಿದ್ದವು ವಾಹನಗಳು. ಅವುಗಳ ಸಾಕಷ್ಟು ಹಿಂದೆ ಕಾಣಿಸಿಕೊಂಡಿತು ಅಂಬಾಸಿಡರ್, ಸಾಯಿ, ಶಂಕರ ಕುಳಿತ ಕಡೆಯಿಂದ ಇನ್ನೊಮ್ಮೆ ಬೆಳಕು ಬೆಳಗಿ ನಂದಿತು. ಆಗಲೇ ಅವರನ್ನು ದಾಟಿ ಮುಂದೆ ಬಂದುಬಿಟ್ಟಿದ್ದವು ಸೈಕಲ್ ಮೋಟರ್‌ಗಳು.
ಬಹು ಗಮನವಿಟ್ಟು ಅಂಬ್ಯಾಸಿಡರ್ ಕಾರನ್ನು ಗಮನಿಸತೊಡಗಿದ್ದಳು ಕಲ್ಯಾಣಿ. ಅದರಲ್ಲಿ ಜನ ತುಂಬಿದಂತೆ ಕಂಡರು. ಅವರಲ್ಲಿ ದೇವಿಯಾದವ ಇದ್ದಾನೋ ಇಲ್ಲವೋ ಎಂಬ ಶಂಕೆ ಅವಳಲ್ಲಿ ಒಂದು ಕ್ಷಣ ಸುಳಿದು ಮಾಯವಾಯಿತು. ಅವಳ ಕಣ್ಣುಗಳಿಗಿದ್ದ ದುರ್ಬೀನು ಕಾರನ್ನೇ ಅನುಸರಿಸುತ್ತಾ ಬರತೊಡಗಿತು. ಅದರಿಂದ ಅವಳ ತಲೆಯೂ ಹಾಗೇ ತಿರುಗುತ್ತಿತ್ತು.
ಸೈಕಲ್ ಮೋಟಾರ್‌ಗಳು ಅವರು ಕುಳಿತ ಕಡೆಯಿಂದ ಹಾದು ಹೊರಟುಹೋಗಿದ್ದವು. ಒಂದು ನಿಮಿಷದ ಬಳಿಕ ಅಂಬಾಸಿಡರ್ ತಾನೆಂದುಕೊಂಡ ಸ್ಥಾನಕ್ಕೆ ಬಂದಾಗ ರಿಮೋಟನ್ನು ಅದುಮಿದಳು ಕಲ್ಯಾಣಿ, ಒಮ್ಮೆಲೆ ಬಂದ ಭಯಂಕರ ಶಬ್ದ ದೇವನಹಳ್ಳಿಯನ್ನೇ ಅಲ್ಲ ಇಡೀ ಕಾಡನ್ನೇ ನಡುಗಿಸುವಂತಿತ್ತು. ಆಕಾಶದ ಎತ್ತರಕ್ಕೆ ಎಂಬಂತೆ ಹಾರಿದ ಅಂಬಾಸಿಡರ್ ಸರಿಯಾಗಿ ನಡುವಿನಿಂದ ಎರಡು ಹೋಳುಗಳಾದಂತೆ ಕಂಡಿತು. ಆ ಸ್ಫೋಟದಿಂದ ಎದ್ದ ಜ್ವಾಲೆ ಮಿಂಚಿನಂತೆ ಇಡೀ ಪ್ರದೇಶವನ್ನು ಬೆಳಗಿಸಿತು. ಮತ್ತೆ ನೆಲಕ್ಕೆ ಕುಸಿದ ಕಾರಿನ ಭಾಗಗಳು ಉರಿಯುತ್ತಿರುವುದನ್ನು ಒಂದು ಕ್ಷಣ ನೋಡಿದ ಕಲ್ಯಾಣಿ ಕಾಡಿನ ಒಳಭಾಗದಲ್ಲಿ ನಡೆಯಲಾರಂಭಿಸಿದಳು. ಆ ಬೆಂಕಿಯ ಜ್ವಾಲೆಯಲ್ಲೂ ಯಾರಿಗೂ ಕಾಣದ ಹಾಗೆ ಕುಳಿತಿದ್ದರು ಕ್ರಾಂತಿಕಾರಿ ತಂಡದವರು. ದಾರಿತೋರಕನಂತೆ ಮೊದಲೇ ಕಾಡು ಪ್ರವೇಶಿಸಿದ್ದ ಹರಿ, ತಮ್ಮ ಜತೆ ನಾಗೇಶ ಇಲ್ಲದಿರುವುದನ್ನು ಕಂಡು ನಾಲ್ಕು ಹೆಜ್ಜೆ ನಡೆದ ಕಲ್ಯಾಣಿ ಹಿಂತಿರುಗಿಬಂದಳು. ದಿಗ್ಮೂಢನಾದಂತೆ ಇನ್ನೂ ಉರಿಯುತ್ತಿರುವ ಕಾರಿನ ಅವಶೇಷವನ್ನೇ ನೋಡುತ್ತಾ ಕುಳಿತಿದ್ದ ನಾಗೇಶ, ಅದನ್ನು ಕಂಡು ಬೂಟುಗಾಲಿನಿಂದ ಜೋರಾಗಿ ಅವನ ಸೊಂಟಕ್ಕೆ ಒದ್ದಳು ಕಲ್ಯಾಣಿ. ಅದರಿಂದ ಇಹಲೋಕಕ್ಕೆ ಬಂದಂತೆ ಎದ್ದು ನಿಂತ ನಾಗೇಶ. ಅವನ ತಲೆಯನ್ನು ಹಿಡಿದು ಮುಂದೆ ನೂಕಿ ಅವನ ಹಿಂದ ನಡೆಯತೊಡಗಿದಳು ಕಲ್ಯಾಣಿ.
ಕ್ರಾಂತಿಕಾರಿಯರೆಲ್ಲಾ ಏನೂ ಆಗದಂತೆ ಬೇರೆ ಬೇರೆ ದಿಕ್ಕುಗಳಿಂದ ತಮ್ಮ ಗಮ್ಯದ ಕಡೆ ಸಾಗಿದರು.
*****