ಕಾರ್ಯಕ್ರಮ

ಕಾರ್ಯಕ್ರಮ

ಭಾಗ – ೧

ಬಸವಣ್ಣ ಅಡಕೆ ಮರಾನ ಅಪ್ಪಿ ಹಂಡಕಂದು ಜೀಕಿ ಜೀಕಿ ಮ್ಯಾಲೆ ಹೋಗತಿರಬಕಾರೆ ಅವನ ಕೈಕಾಲಿನ ಮಾಂಸಖಂಡ ಮತ್ತು ನರಗಳು ಎಳೆದುಬಿಟ್ಟ ಹಂಗೆ ಆಗದಾ ಹೆಗಡೆ ನೋಡತಾ ನಿಂತಿದ್ದ. ಶ್ರೀಧರ ಹೆಗಡರೇ ಅಂತ ಸಣ್ಣ ಧ್ವನಿಯಾಗೆ ಕರೆದ ಸದ್ದು ಕೇಳಿದ ಹೆಗಡೆ ಮ್ಯಾಲೆ ನಟ್ಟಿದ್ದ ಕಣ್ಣಿನ ದೃಷ್ಟೀನ ಬದಲು ಮಾಡಿ ಎದುರಿಗೆ ನಿಂತಿದ್ದ ಮನುಷಾನ ಕಡೀಗೆ ಹರಿಸಿದ. ಚಿಗುರುಮೀಸೆ ಬಂದಿದ್ದ ರಾಜಪ್ಪ ಉದ್ದ ಕಾಗದಾನ ಮಡಚಿ ಹಿಡದು ಹೆಗಡೇರೆದುರಿಗೆ ನಿಂತಿದ್ದ. ಏನಪಾ ಅಂತ ಕಣ್ಣೀನಾಗೆ ಕೇಳಿದ್ದಕ್ಕೆ ತನ್ನ ಕೈಯಾಗಿನ ಕಾಗದಾನ ಹೆಗಡೇರ ಕೈಗೆ ಕೊಟ್ಟು ಪಿಳೀ ಪಿಳಿ ಕಣ್ ಬಿಟ್ಟ! ಅಡಕೆ ತ್ವಾಟದ ಪಕ್ಕದ ಬಣ್ಣದಾಗೆ ಅವನ ಗೆಣೆಕಾರ ಉಮೇಶ ನಿಂತಿದ್ದ. ಹೆಗಡೇರು ಕಾಗದ ಓದಿದಾಗ ಅದರಾಗೆ ಇದ್ದಿದ್ದು ಏನಪಾ ಅಂದರೆ ಬಂದಗದ್ದೆ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದ ಸಂಗತಿ. ಇವತ್ತು ೧೯೮೫ರ ಡಿಸೆಂಬರ್ ೧೬ನೇ ತಾರೀಖಾದರೆ ವಾರ್ಷಿಕೋತ್ಸವ ಸಮಾರಂಭ ಡಿಸೆಂಬರ್ ೨೨ಕ್ಕೆ ಮಾಡಬಕು ಅಂತ ಕಾಗದದಾಗೆ ಕಾಣಿಸಿದಾರೆ. ಇಂಥವರು ಅಧ್ಯಕ್ಷರು, ಇಂಥವರು ಅತಿಥಿಗಳು ಮತ್ತು ಇಂಥವರು ಕಾರ್ಯಕ್ರಮಕ್ಕೆ ಬರತಕ್ಕಂಥಾ ಗಣ್ಯರು ಅಂತೆಲ್ಲಾ ಪಟ್ಟೀಲಿ ಬರದಿತ್ತು. ಅಂಗನವಾಡಿ ಮಕ್ಕಳಿಂದ ಡ್ಯಾನ್ಸು, ಮೇಡಮ್ಮನಿಂದ ವಾರ್ಷಿಕ ವರದಿ, ಸ್ವಾಗತ ಭಾಷಣ, ವಂದನಾರ್ಪಣೆ ಹಿಂಗೆ ಉದ್ದಾಪಟ್ಟಿ. ಒಟ್ಟಿನಾಗೆ ಈ ಆಜಪ್ಪ ಹೆಗಡೇರ್ ತಾವ ಬಂದಿದ್ದು ಯಾಕೆ ಅಂತ ನಿಮಗೆ ಗುಟ್ಟಿನಾಗೆ ಹೇಳಬಕು ಅಂದರೆ ಆತನಿಗೆ ಒಂದು ಕಾರ್ಯಕ್ರಮಾನ ಹೆಂಗೆ ನಡಸಬಕು ಆನ್ನಾ ಮಾಹಿತಿ ಸರಿಯಾಗಿ ಇಲ್ಲದೇ ಇದ್ದಿದ್ದು; ಇಡೀ ಊರಿನ ಅವನ ವಾರಿಗೆ ಪೈಕಿ ಹೈಸ್ಕೂಲು ಮೆಟ್ಟಿಲು ಹತ್ತಿದ ರಾಜ ಓದು ಬರಾ ಕಲ್ತ ಹುಡುಗ ಅಂತ ಅಂಗನವಾಡಿ ಮೇಡಮ್ಮು ಕಾರ್ಯಕ್ರಮದ ಉಸ್ತುವಾರೀನ ರಾಜಪ್ಪನ ಹೆಗಲಮೇಲೆ ಇಟ್ಟಳು. ಮೀಸೆ ಚಿಗರಾ ಕಾಲದಾಗೆ ಯಾವನಿಗೆ ನಾಲ್ಕು ಜನರ ಮುಂದೆ ನಿಂತು ಒಂದು ಕೆಲಸಾ ಮಾಡಿ ಭೇಷ ಅನಿಸಿಗೆಳಬಕು ಅಂತ ಅನಸಾದಿಲ್ಲವೋ?

ಮೇಡಮ್ಮನ ಎದುರಿಗೇನೋ ಒಪ್ಪಿಗೆಂದ ರಾಜಪ್ಪನಿಗೆ ನಮ್ಮ ಶಾಸಕರನ್ನ ಬಿ.ಡಿ.ಓ.ನ ಕರೆಸಿ ಕಾರ್ಯಕ್ರಮ ಮಾಡಾದು ಅಂದರೆ ಹುಡುಗಾಟಿಗೆಲ್ಲ ಅಂತ ಅನಸಕ್ಕೆ ಶುರುವಾಗಿ ಇದೋ ಈಗ ಶ್ರೀಧರ ಹೆಗಡೇರ ಮನೀಗೆ ಹೋಗಿ ಅಲ್ಲಿ ಅವರು ತ್ವಾಟದಾಗೆ ಇರಾದನ್ನ ತಿಳದು ಇಲ್ಲೀವರೆಗೂ ಪಾದ ಬೆಳಸಿ ಕಾಗದ ಅವರಿಗೆ ಕೊಟ್ಟುನಿಂತಿದ್ದು, ಆ ಕಾಗದ ಓದಿ ಹೆಗಡೆಗೆ ಸಿಟ್ಟು ಬಂದಿದ್ದು ಯಾಕಪಾ ಅಂದರೆ ಒತ್ತು ಇಳಿ, ದೀರ್ಘ ಸರಿಯಾಗಿ ಬರೀದೇ ಇದ್ದಂಥಾ ಕನ್ನಡ ಓದಿ. ಒಮ್ಮೆ ರಾಜಪ್ಪ ಇಂಗ್ಲೀಷಾಗೆ ತಪ್ಪು ಬರದಿದ್ದರೆ ಅದನ್ನ ಹೆಗಡೆ ಒಪ್ಪತಿದ್ರು. ಕನ್ನಡ ಕನ್ನಡ ಅಂತ ಇಡೀ ಕನ್ನಡನಾಡೇ ಕನ್ನಡ ಭಾಷೆ ಉಳಿಸಿಗೆಂದು, ಬೆಳೆಸಿಕಾಬಕು ಅಂತ ಚಳವಳಿ ಮಾಡಿ ಹೋರಾಡತಾ ಇರಬಕಾರೆ ರಾಜಪ್ಪನಂತಾ ಬೆಳೆಯಾ ಹುಡುಗರು ನಮ್ಮ ತಾಯಿಭಾಷೆ ಕನ್ನಡನ ಹಿಂಗೆ ತಪ್ಪುತಪ್ಪಾಗಿ ಬರೀತಾರೆ ಅಂದರೆ….?

ಹೋಗಲಿ, ಮುಂದೆ ತಿದ್ದಿಕೊಳತಾನೆ ಹುಡುಗ, ಸಂತೋಷದ ಸಂಗತಿ ಅಂದರೆ ಶಾಸಕರು, ಅಧಿಕಾರಿಗಳನ್ನ ಊರಿಗೆ ಕರಸಾ ಮನಸು ಮಾಡಿದಾರೆ ಅನ್ನಾದು. ತಪ್ಪು ಬರದಿದ್ದಕ್ಕೆ ಒಂದಿಷ್ಟು ಬೈದು, ಆ ಮ್ಯಾಲಿನ ಸಂತೋಷದ ವಿಚಾರಾನ ಅವನಿಗೆ ಹೇಳಿ ನನ್ನಿಂದ ಏನಾಗಬೇಕಯ್ಯ ಅಂತ ಶ್ರೀಧರ ಹೆಗಡೆ ಗತ್ತಿನಾಗೇ ಕೇಳಿದ. ಇಷ್ಟು ಹೊತ್ತೂ ಹೆಗಡೆ ಗುಟ್ಟು ಅಂತ ಹೇಳತಾ ಏನು ಬಡಬಡಿಸಿದನೋ ಅದರ ಸಾರಾಂಶನೇ ರಾಜಪ್ಪನ ಉತ್ತರ. ಆತಪಾ, ಬರತೇನೆ. ಎಲ್ಲಿ ಚಪ್ಪರ ಹಾಕಬಕು, ಏನು ಮಾಡಬಕು ನೋಡಾನ. ಸಂಜೇಕಡೀಗೆ ಅಂಗನವಾಡಿ ಹತ್ರ ಇರ್ರೀ. ಕೊನೆ ಕೊಯ್ಲು ಕೆಲಸ ಮುಗದಗೂಟ್ಲೇ ಬಂದುಬಿಡತೇನೆ ಅಂತ ಹೇಳಿ ಅವರನ್ನ ಬೀಳ್ಕೊಟ್ಟ. ಅವರು ಅತ್ತ ಹೋದಗೂಟ್ಲೇ (ಮರ ಹತ್ತಿ ಅಡಕೆ ಕೊನೆ ಕೊಯುವವನು ಹಗ್ಗದ ಮೂಲಕ ಆ ಕೊನೆಯನ್ನೂ ಕೆಳಕ್ಕೆ ಬಿಡುವನು. ಅದನ್ನು ಕೆಳಗೆ ಹಿಡಿದುಕೊಳ್ಳುವುದಕ್ಕೆ ನೇಣು ಹಿಡಿಯುವುದು ಅನ್ನುತ್ತಾರೆ) ನೇಣು ಹಿಡಿಯಾಕೆ ಬಂದಿದ್ದ ಗಿಡ್ಡ ಹುಡ್ರದ್ದು ಎಂತದ್ರೀ? ಅಂದ. ಊರಿನ ಹಿರೀತಲೆ ಆದ ಅವಂಗೆ ಹುಡುಗರು ಮಾಡಾಕ್ ಹೊಂಟ ಕಾರ್ಯಕ್ರಮದ ವಿವರ ಹೇಳತಾ ಶ್ರೀಧರ ಹೆಗಡೆ ಉದುರಿದ ಅಡಕೇನ ಆರಿಸಿ ಬುಟ್ಟೀಗೆ ಹಾಕತಾ ಬಂದ. ತ್ವಾಟದಿಂದ ಅಡಕೆ ಕೊನೇನೆ ಮನೆಗೆ ಹೊತ್ತು ಹಾಕಾಕ್ಕೆ ಬಂದಿದ್ದ ಮಂಜ (ಗಿಡ್ಡನ ಹಿರೀಮಗ) ನಮ್ ಹುಡುಗರು ಸಿವಪ್ಪನೋರನ್ನ ಕರಸ್ತಾರಂತೆ ಹೌದಾ? ಅಂತ ಕೇಳಿದ. ಶ್ರೀಧರ ಹೆಗಡೆ ಅವರಿಗೆ ಎಲ್ಲಾ ವಿವರ ಒಪ್ಪಿಸಿದ. ಮರ ಹತ್ತಿ ಕೊನೆ ಕೊಯ್ಯ ಬಸವಣ್ಣಿ ಮಾತ್ರ ಒಂದು ಮಾತನ್ನೂ ಆಡದೆ ತನ್ನ ಕೆಲಸದೊಳಗೆ ಮುಳುಗಿಬಿಟ್ಟಿದ್ದ! ಕಾರ್ಯಕ್ರಮದ ವಿವರಾನ ಮಂಜಂಗೆ ವಿವರಿಸಿದ ಮ್ಯಾಲೆ ನಮ್ ಉಮೇಶನೂ ಸಿವಪ್ಪನೋರನ್ನ ಕರಿಯಾಕ್ಕೆ ಹೋಕಾನಂತಾ? ಅಂತ ಕೇಳಿದ. ಶ್ರೀಧರ ಹೆಗಡೆ ಹ್ಞೂ ಅಂದ. ದಿನಾ ಸಾಗರಕ್ಕೆ ಹೋಗತಾನೆ ಮಾರಾಯರೆ, ಕೆಲಸಕ್ಕೆ ಬಾ ಅಂದರೆ ಬರಾದಿಲ್ಲ ಅಂತ ಗಿಡ್ಡ ತನ್ನ ಎರಡನೇ ಮಗ ಉಮೇಶನ ವಿಚಾರಕ್ಕೆ ಗೊಣಗಿದ. ಈ ಉಮೇಶ ಅನ್ನಾ ಹುಡುಗ ಈಗಾರೆಂಟು ತಿಂಗಳ ಕೆಳಗೆ ಒಂದು ಸೈಕಲ್ನ ಹಾರೇಗೊಪ್ಪದ ರಾಜಾರಾಮನ ಕಡಿಂದ ಕೊಂಡಿದ್ದು ಹೆಗಡೆಗೆ ಗೊತ್ತಿತ್ತು. ಅಷ್ಟೇ ಅಲ್ಲದೇ ಇವ ಸಾಗರಕ್ಕೆ ಸಿನೆಮಾ ನೋಡಾಕ್ಕೆ ಹೋಗಾದು, ಸೆಕೆಂಡು ಶೋ ನೋಡಿ ರಾತ್ರೋರಾತ್ರಿ ಸೈಕಲ್ಲು ಹೊಡಕಂಡು ಊರಿಗೆ ಬರಾದು ಎಲ್ಲಾ ಗಮನಕ್ಕೆ ಬಂದಿತ್ತು. ಇವನ ಜತೀಗೆ ಕಾನ್ಲೆ ಮಾಸ್ತ್ಯನ ಮಗ ಇದ್ದಿದ್ದನ್ನೂ ಕಂಡಿದ್ದ. ಇವರಿಬ್ಬರೂ ರಾಜಪ್ಪನ ಹಂಗೆ ಓದದು ಬರಿಯಾದು ಕಲೀದೇ ಇದ್ದರೂ, ರಾಜಪ್ಪನ ಹಂಗೇ ಅಂಗಿ ಪ್ಯಾಂಟು ಹಾಕಿ ಟಾಕು ಟೀಕು ಮಾಡತಿದ್ರು. ದುಡಿದೇ ಇದ್ದರೂ ಈ ಉಮೇಶ ಹೆಂಗೆ ಸೋಕಿ ಮಾಡತಾನೆ ಅನ್ನಾದು ವಿಶೇಷ ಅಲ್ಲವೋ ಮಾರಾಯ! ಎಲ್ಲರಿಗೂ ಗೊತ್ತಿದ್ದ ಹಂಗೆ ಈಗ ಐದಾರು ವರ್ಷದ ಕೆಳಗೇ ಅವಂಗೆ ಒಂದು ಕಾಯಿಲೆ ಶುರುವಾಗಿತ್ತು. ಕೈ ಕಾಲು ಸೊಟ್ಟ ಆಗುವಂತಾ ಕಾಯಿಲೆ ಮಾರಾಯ ಅದು. ಉಮೇಶಂಗೆ ಈ ಪ್ರದೇಶದೊಳಗೆಲ್ಲಾ ಅಂದರೆ ಬಂದಗದ್ದೆ, ಹಂದಿಗೋಡು, ಮನೇಘಟ್ಟ, ಪುರಪ್ಪೆಮನೆ ಮುಂತಾದ ಸಾಗರದ ಸುತ್ತಮುತ್ತಲ ಊರುಗಳಾಗೆ ಈ ಕಾಯಿಲೆ ಸುರುವಾದದ್ದು ಎಲ್ಲರ ಗಮನ ಸೆಳೆದು ಅದು ಸರ್ಕಾರದ ಕಣ್ಣಿಗೂ ಬಿದ್ದು ಸಂಶೋಧಕರನ್ನು ನೇಮಿಸಿತ್ತು. ಅವರು ಏನು ಸಂಶೋಧನೆ ಮಾಡಿದರು ಅನ್ನಾದು ಇನ್ನೂ ಬಿಲ್ ಕುಲ್ ಗೊತ್ತಿಲ್ಲ. ಕಳದ ಮಳಗಾಲದಾಗ ಎಲ್ಡ್ ಮೆಟಾಡೋರು, ನಾಕು ಜೀಪು, ಒಂದು ಕಾರು ಮಣ್ಣುರಸ್ತೇಲಿ ಕೆಸರು ಹಾರಿಸಿಕೋತ ನಮ್ಮ ಹಳ್ಳೀಗೆ ಬಂದು ಒಂದು ಒಪ್ಪತ್ ಇದ್ರು. ಹೈದರಾಬಾದಿಂದ ಯಾರೋ ಡಾಕ್ಟರು ಬಂದು ಹಂದಿಗೋಡು ಕಾಯಿಲೆ ಆದವರನ್ನ ಪರೀಕ್ಷೆ ಮಾಡಿದರು ಅಂತ ಜನ ಹೇಳಿದ್ದು ಮಾತ್ರ ಹೆಗಡೆ ತಲೆ ಒಳಗಿತ್ತು. ಹೆಗಡೆ ಕೆಲಸದೊಳಗೆ ಮುಳುಗೆ ಇದನ್ನೆಲ್ಲಾ ಮರೆತೇ ಬಿಟ್ಟಿದ್ದರೂ ಉಮೇಶನ ವಿಚಾರವೋ ಅಥವಾ ಹಿಂಗೇ ಕಾಯಿಲೆ ಆದ ಗೊತ್ತಿದ್ದ ಹುಡುಗರ ವಿಚಾರವೋ ಪ್ರಸ್ತಾಪಕ್ಕೆ ಬಂದರೆ ಆಗ ಕೈಕಾಲು ನೆಟ್ಟಗಿದ್ದು ಚಂದ ಕಾಣಾ ಈ ಹುಡುಗರು ಕುಂಟತಾ ವಕ್ರವಕ್ರಾಗಿ ಕಾಣಾದು ನೋಡಿ ಮನಸೀಗೆ ಬ್ಯಾಸರಾಗಿ ಛಿ, ಇಂದೆಂಥಾ ಕೆಟ್ಟ ರೋಗವಪ್ಪಾ ಅನಸತೈತಿ. ಇನ್ನೂ ಚಿಗುರು ಮೀಸೆ ಮೂಡಾ ವಯಸ್ಸಿನಾಗೆ ಕೈಗೆ ದುಡ್ಡು ಸಿಕ್ಕರೆ ಹುಡುಗರು ಕೇಳತಾವಾ? ಹಕ್ಕಿಗೆ ರೆಕ್ಕೆ ಬಂದ ಹಂಗೆ ಅದು! ಕಾನ್ಲೆ ಮಾಸ್ತ್ಯನ ಮಗ ನಾಗರಾಜಂಗೆ ಈ ಕೆಟ್ಟೆ ರೋಗ ಬಂದಿರನಲ್ಲ. ಅಂವಾ ಉದ್ದಕೆ, ದಪ್ಪಕೆ ಕಟ್ಟುಮಸ್ತಾದ ಆಳು. ಅವನೂ, ಉಮೇಶನೂ ಒಟ್ಟಿಗೇ ಸಿಗರೇಟು ಸೇದತಾ, ಕುಶಾಲು ಮಾತಾಡತಾ ಬಿರಬಿರನೆ ಸೈಕಲ್ಲು ಹೊಡಕಂದು ಹೋದದ್ದು ಹೆಗಡೆಗೆ ಮತ್ತೆ ನೆನಪಿನಾಗೆ ಬಂದುಹೋತು. ಆ ವಿಚಾರನೆಲ್ಲಾ ಒಂದು ಬದಿಗಿಟ್ಟು ಗಿಡ್ಡನತಾವ ಅದು ಇದು ಮಾತಾಡತಾ ಉದುರಿದ ಅಡಕೇನೆ ಆರಿಸಿ, ಬುಟ್ಟಿಗೆ ಹಾಕತಾ ಹಣ್ಣಾದ ಅಡಕೇನ ಮಾತ್ರ ಕೊಯ್ಯ ಅಂತ ಬಸವಣ್ಣಿಗೆ ಹೇಳತಾ ಹೆಗಡೆ ಮತ್ತೆ ತನ್ನ ಕೆಲಸದೊಳಗೆ ಮುಳುಗಿದ.

ಸಂಜೆ ಅಂಗನವಾಡಿ ತಾವ ಹೆಗಡೆ ಹೋದರೆ ಅಲ್ಲಿ ಯಾವ ಮಗನು ಇರನಲ್ಲ. ಅಂಗನವಾಡಿ ಎದುರಿಗೆ ಮೋರಿ ಕಟ್ಟೆಮ್ಯಾಲೆ ಕಾಗೋಡು ಸುಬ್ಬನೂ, ದೇವೀ ಮಂಜನೂ, ಮನೇಘಟ್ಟದ ಕೆರಿಯನೂ, ಊರಿನ ಪೋಕರಿ ಹುಡುಗರ ಕುಟಾ ಪೋಲಿ ಮಾತಾಡತಾ ಕುಂತಿದ್ದರು. ಕಾರ್ಯಕ್ರಮ ನೆಡಸಾ ಮುಂದಾಳುಗಳ ಹಂಗೆ ಕಾಣಾ ರಾಜಪ್ಪ ಮತ್ತು ಉಮೇಶನ ಬಗೀಗೆ ಇವರ ಹತ್ರ ಕೇಳಾನ ಅಂತ ಹೆಗಡೆ ಅಂದುಕೊಂಡರೆ ಮನಸು ಬ್ಯಾಡ ಅಂದುಬಿಡ್ತು. ಅವರು ಹೆಂಡಾ ಕುಡಿದು ಕೂತಹಂಗೆ ಕಂಡಿದ್ದರಿಂದ ಹಾಗೆ ಅನಿಸಿದ್ದು ಊರಿಗೆ ಶಾಸಕರು, ಅಧಿಕಾರಿಗಳು ಬರತಾರಂದರೆ ಹೆಗಡೆ ತಾನೂ ಊರಿನ ಒಬ್ಬ ಹರೇದ ಹುಡುಗಾಗಿ ಸುಮ್ಮನೇ ಕೂರಬಾರದು ಅಂತಲೂ, ಚಿಗುರು ಮೀಸೆ ಮೂಡಿದ ಹುಡುಗರಿಗೆ ಒಂದಷ್ಟು ಆತಗಳಾದು ಒಳ್ಳೇದು ಅಂತಲೂ ಉಮೇದಿನಾಗೆ ಅಲ್ಲಿಗೆ ಹೋದರೆ ಹಿಂಗಾತಲ್ಲಪ್ಪ ಅನಕೋತ ತೆಪ್ಪಗೆ ಮನೆಕಡೆ ಹೊಂಟ. ಅಡಕೆ ತ್ವಾಟದಾಗೆ, ಒಡೇರ ಮನಿಯಾಗೆ ಬೆಳಗಿಂದಲೂ ಗೇದವರು ಉಪ್ಪು, ಅಕ್ಕಿ, ಬೆಲ್ಲ, ಚಾಪುಡೀನ ಗಂಟು ಕಟ್ಟಿಗೆಂದು ಅವರವರ ಮನೀಗೆ ಹೋಗತಿದ್ದರೆ ಮತ್ತೆ ಕೆಲವರು ಬಸ್ಟ್ಯಾಂಡ್ ಹತ್ರ ಮುಟ್ಟಿಸಂದು ಮತ್ತು ಹಿತ್ತಲ ಮೂಲೇಲಿ ಕದ್ದು ಹೆಂಡಾ ಮಾರಾವರ ಹತ್ರ ಸರಿಯಾಗಿ ಕುಡದು ತೂರಾಡತಾ ಅವಾಚ್ಯ ಮಾತಾಡತಾ ಹೋಗತಿದ್ದರು. ಸೂರ್ಯ ಪಶ್ಚಿಮದ ದಿಕ್ಕಿನ ಮರದ ರೆಂಬೆಕೊಂಬೆಗಳ ಸಂದಿನಾಗೆ ತನ್ನ ಕೆಂಬಣ್ಣದ ಕಿರಣ ಬೀರತಾ ನಮ್ಮ ಈ ಪಾಡ ನೋಡಿ ನಗತಾನಾ ಅನ್ನೋ ಹಂಗಿತ್ತು! ಹೊತ್ತು ಕಳೆದ ಹಂಗೆಲ್ಲಾ ಈ ನೆಲಾನ ಆವರಿಸತಿರಾ ಕತ್ತಲಿನಾಗೆ ಹೆಂಡಾ ಕುಡದು ಗಲಾಟೆ ಹಚ್ಚಿಗೆಂದವರ ಹಲ್ಕಟ್ ಮಾತುಗಳು ದೊಂಬರಾಟದ ಹಂಗೆ ಕೇಳತೊಡಗಿತು. ಹೆಗಡೆ ಮನೆಯೊಳಗೆ ಹೋಗಿ ಕೂತ. ಕಾರ್ಯಕ್ರಮ ಹೆಂಗೆಂಗೆ ನಡೀಬೋದು ಅಂತ ಊಹೆ ಮಾಡತೊಡಗಿದ. ಊಹೆಗೆ ಮಿತಿ ಇದೆಯೇನಯ್ಯ?

ಮರುದಿನ ಬೆಳಗ್ಗೆ ಮತ್ತೆ ಹೆಗಡೆ ಅಡಕೆ ತೋಟದಾಗೆ ನಿನ್ನೆ ಕೆಲಸ ನಿಂತಲ್ಲಿಂದ ಬಸವಣ್ಣಿ, ಮಂಜು, ಗಿಡ್ಡರೊಡಗೂಡಿ ಪ್ರಾರಂಭಿಸಿ, ಅರ್ಧ ಮುಕ್ಕಾಲು ಗಂಟೆ ಕಳೆದಿತ್ತು. ರಾಜಪ್ಪ ಉಮೇಶರು ತಮಗೆ ಹಿರಿಯನಾದ ಕಾನ್ಲೆ ಮಾಸ್ತ್ಯನೊಡಗೂಡಿ ಮತ್ತೆ ಶ್ರೀಧರ ಹೆಗಡೇರೆದುರ ಹಾಜರಾದರು. ಹಿರೇನೆಲ್ಲೂರು ಮತ್ತು ಮೆಳವರಿಗೆ ಊರಿನ ಅಂಗನವಾಡಿ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ಮತ್ತು ಇದೀಗ ಹೊಸದಾಗಿ ತಯಾರಿಸಿದ ಮತ್ತೊಂದು ಕಾರ್ಯಕ್ರಮದ ಪಟ್ಟೀನ ಕಾನ್ಲೆ ಮಾಸ್ತ್ಯ ಹೆಗಡೆ ಕೈಗೆ ಕೊಡತಾ ’ಊರಿನೋರು ವರಾಡ ಹಾಕಿ ಒಂದು ಫಂಕ್ಷನ್ನು ಮಾಡಬಕು ಅಂತ ತೀರ್ಮಾನ ಮಾಡಿದೀಂವಿ. ತಾವು ಮುಂದೆ ನಿಂತು ಹೆಂಗೆಂಗೆ ಮಾಡಬಕು ಅನ್ನಾದನ್ನ ನಮ್ಮ ಹುಡುಗರಿಗೆ ಹೇಳಬಕು. ನಮಗೆ ನೀವು ಆದರೆ ನಿಮಗೆ ನಾವು ಆಗತೇವೆ. ಒಬ್ಬರಿಗೊಬ್ಬರು…’ ಅಂತ ಹೇಳತಿದ್ದಂಗೇ ಅವನ ಮಾತು ಮುಂದೆ ಬೆಳೀದ ಇದ್ದ ಹಂಗೆ ತಡದು ’ಅದು ಎಲ್ಲಾ ನಂಗೆ ಅರ್ಥಾತು ಮಾಸ್ತ್ಯಾ, ನನ್ನಿಂದ ನಿಮಗೆ ಏನು ಸಹಾಯ ಆಗಬಕು ಅನ್ನದನ್ನ ಹೇಳಿ, ಮಾಡನ’ ಹೆಗಡೆ ಹೇಳಿದ. ಸಿವಪ್ಪನೋರನ್ನ ಕಂಡು ಮಾತಾಡಿದೇವೆ. ಬರ್ತೇವೆ ಅಂತ ಒಪ್ಪಿದಾರೆ. ಬಿ.ಡಿ.ಓ. ಅವರನ್ನೂ ಕಂಡು ಹೇಳಿದೇನೆ. ಅವರೂ ಬರತೇನೆ ಅಂದಾರೆ ಅಂತ ರಾಜಪ್ಪ ಹೇಳಿದ. ಅದಕ್ಕೆ ಇನ್ವಿಟೇಶನ್ ಪ್ರಿಂಟ್ ಮಾಡಸ್ತೀರೇನಪ್ಪ? ಅಂತ ಕೇಳಿದ ಹೆಗಡೆ. ಹೌದೊ, ಮಾಡಸಬೇಕು ಮತ್ತು ಬಂದವರಿಗೆ ಗಂಧದಹಾರ, ಹೂವು, ಹಣ್ಣು ಕೊಡಬೇಕು. ಅಂಗನವಾಡಿ ಸೂಪರ್ ವೈಸರ್ ಬರತಾರಂತೆ. ಅಲ್ಲದೇ ಮಾಸೂರು, ಮಳವರಿಗೆ, ಹಿರೇನೆಲ್ಲೂರು, ಕೆಳದಿ ಅಂಗನವಾಡಿ ಮೇಡಮ್ಮುಗಳೂ ಬರತಾರೆ. ಅವರಿಗೆ ತಿಂಡಿ ವ್ಯವಸ್ಥೆ ಮಾಡಬೇಕು – ಅಂತ ರಾಜಪ್ಪ ಸ್ಟೈಲಾಗಿ ಹೇಳಲು ’ಇದಕ್ಕೆಲ್ಲಾ ಹಣ ಎಷ್ಟು ಬೇಕಾಗತೈತಿ ಅಂತ ಲೆಕ್ಕಾ ಹಾಕಿದಿಯೇನಪಾ? ಅಂತ ಕೇಳಿದ ಹೆಗಡೆ. ಇಲ್ಲ ಅಂತ ಎಲ್ಲರೂ ಹಲ್ಲುಕಿರದು ಹ್ಯಾಪುನಗೆ ಆಡಿದರು. ಹೆಗಡೆ ಮತ್ತು ತಮ್ಮ ನಡೂಗೆ ಏರ್ಪಟ್ಟ ಮೌನಾನ ಮುರೀತಾ ರಾಜಪ್ಪ ’ಮೇಡಮ್ ಹೇಳಿದರು: ಕೆಳದಿ, ಮೆಳವರಿಗೇಲಿ ಹಿಂಗೆಲ್ಲಾ ಮಾಡಿದಾರಂತೆ, ನಾವು ಮಾಡಬೇಕಲ್ಲಾ ಮತ್ತೆ’ ಅಂದ. ಆ ಮೇಡಮ್ಮಿಗೂ, ಇವರಿಗೂ ಅಕ್ಕಪಕ್ಕದ ಯಾವ ಹಳ್ಳಿಗೂ ಕಮ್ಮಿ ಇಲ್ಲದ ಹಂಗೆ ನಮ್ಮೂರಿನ ಕಾರ್ಯಕ್ರಮ ಮಾಡಬಕು ಅಂತ ಬಂದಿರಾ ಛಲ ಗ್ರೈಸಿ ಖುಷಿಪಟ್ಟು ’ಅಲ್ಲಯ್ಯ ಇವತ್ತು ೧೭ನೇ ತಾರೀಖು. ಕಾರ್ಯಕ್ರಮಕ್ಕೆ ಇನ್ನು ನಾಕೈದು ದಿನ ಮಾತ್ರಾ ಉಳೀತು. ಕಾಗದ ಪ್ರಿಂಟ್ ಮಾಡಕ್ಕೇ ಎರಡು ದಿನ ಆಗತೈತಿ. ಚಪ್ಪರ ಹಾಕಬಕು. ಬೆಂಚು, ಕುರ್ಚಿ, ಮೇಜು ಎಲ್ಲಾ ಎಲ್ಲಿಂದ ತರಾದು, ಏನು ಎತ್ತ ಅಂತ ಯೋಚನೆ ಮಾಡಬಕು. ಎಂಟು ದಿನದ ಮುಂಚೇನೇ ಎಲ್ಲಾ ಕೆಲಸ ಮಾಡಿಕಾಬೇಕಪಾ. ಒಂದು ಕಾರ್ಯಕ್ರಮ ನೆಡಸಾದು ಸುಲಭಾ ಅಲ್ಲ. ಈಗ ಎಷ್ಟು ಹಣ ಒಟ್ಟು ಮಾದಿದ್ದೀರಿ?’ ಅಂತ ಹೆಗಡೆ ಗತ್ತಿನಾಗೆ ಕೇಳಿದ. ಅದು ಮಂಜಪ್ಪನ ಕೇಳಬಕು ಅಂತ ಹೇಳತಾ ಉಮೇಶನ ಕಡೆ ನೋಡಿ ಬೆಪ್ಪನ ಹಂಗೆ ನೆಲನೋಡತಾ ನಿಂತ. ಒಂದು ಕೆಲಸಾ ಮಾಡಿ, ನಮ್ಮ ಚಿಕ್ಕಪ್ಪನೋರು ಸುಮಾರು ಹನ್ನೆರಡು ಗಂಟೀಗೆ ಇಲ್ಲಿಗೆ ಬರಬೋದು. ಅವರು ಬಂದಗೂಟ್ಲೇ ನಾನು ಅಂಗನವಾಡಿ ತಾವ ಬರತೇನೆ. ಆ ಮಂಜಪ್ಪನ್ನೂ ಅಲ್ಲಿಗೆ ಬರಾದಕ್ಕೆ ಹೇಳು. ಮೇಡಮ್ಮು ಮೂರುಗಂಟೆ ಬಸ್ಸಿಗೆ ಸಾಗರಕ್ಕೆ ಹೋಗತಾರೆ ಅಂತ ಕಾಣತೈತಿ ಅಂತ ಹೆಗಡೆ ಅನ್ನತಿದ್ದ ಹಾಗೆ ಉಮೇಶ ಹೌದು ಅಂದ. ಅವರನ್ನು ಕಂಡು ಮಾತಾಡತೇನೆ ಅಂತ ಹೇಳಿ ಅವರನ್ನ ಕಳಿಸಿದ.

ಸುಮಾರು ಹನ್ನೊಂದು ಗಂಟೆ ಆಗತಿದ್ದಂಗೇ ಕೊನೆ ಹೊರಾಕ್ಕೆ ಬಂದಿದ್ದ ಮಂಜನ ಹೆಣ್ತಿ ರೇಣುಕ ಮೆಲ್ಲನೆ ನಡೀತಾ ತ್ವಾಟಕ್ಕೆ ಬಂದಳು. ಅವಳು ತನ್ನ ಮಾವ ಗಿಡ್ಡಂಗೆ ಅಡಕೆ ಆರಿಸಿಕೊಡಾ ಕೆಲಸದಾಗೆ ನೆರವಾದಳು. ಈ ಮಂಜ ಮತ್ತು ರೇಣುಕಂದು ಒಳ್ಳೇಜೋಡಿ ಅನಿಸಿ ಹೆಗಡೆ ಖುಸೀಪಟ್ಟ. ಬಸವಣ್ಣಿ ಅಡಕೇಮರ ಇಳದವ ಐದು ನಿಮಿಷದ ರೆಸ್ಟಿಗಾಗಿ ಬಣ್ಣದ ಮ್ಯಾಲೆ ಕೂತು ಒಂದು ಬೀಡಿ ಹಚ್ಚಿದ. ತನಗೂ ನೇಣು ಹಿಡಿಯಾ ಕೆಲಸ ತಪ್ಪಿದ್ದರಿಂದ ಗಿಡ್ಡನೂ ಕುಂತು ಒಂದುಬೀಡಿ ಹಚ್ಚಿದ. ಚಳಿಗಾಲದ ಮಧ್ಯಾಹ್ನದ ಬಿಸಿಲು ತ್ವಾಟದ ಮರಗಳ ನೆರಳಿನಿಂದಾಗಿ ಹಂಡಹಂಡಾಗಿ ಬಿದ್ದಿತ್ತು. ಇವರು ಸೇದಿದ ಬೀಡಿಹೊಗೆ ಆ ಬಿಸಿಲಿನಾಗೆ ಹೊಳೀತಾ ಮೇಲೇರಿ ಹೋತು. ನಗರಗಳಾಗಿ ಕಾರ್ಖಾನೆ, ಬಸ್ಸು, ಕಾರು ಉಗಳಾ ಹೊಗೆ, ವಾಯುಮಾಲಿನ್ಯ, ಜಲಮಾಲಿನ್ಯ, ಆಸ್ಪತ್ರೆ ಕಸ, ಹೊಲಸು ನೀರು ಇತ್ಯಾದಿ ಹೇಳತಾರೆ. ಗಿಡ, ಮರ, ಹಸರು ಇರಾ ಅಂತ ಸೊಗಸಾದ ಪ್ರಕೃತಿ ಮಡಿಲಾಗೆ ಜನರೀಗೆ ಆ ಕೆಟ್ಟ ತಂಬಾಕಿನ ಹೊಗೆ ಇಲ್ಲದೆ ಬದುಕಾದು ಗೊತ್ತಿಲ್ಲಲ್ಲಪಾ ದೇವರೇ! ಇರಾ ಅಷ್ಟು ಕಾಲ ಗಟ್ಟಿಮುಟ್ಟಾಗಿದ್ದು ದುಡದು ಚೆಂದಾಗಿ ಬದುಕಿ ಸಾಯಾದರ ಬದಲು ನಮ್ಮ ಶ್ವಾಸಕೋಸಾನೆಲ್ಲಾ ಹಾಳು ಮಾಡಿಕೆಂದು, ಅದರ ಜೊತೀಗೆ ಹೆಂಡಾ ಕುಡದು ಆರೋಗ್ಯ ಕೆಡಿಸಿಗೆಂದು, ಕೆಮ್ಮುತಾ, ನರಳತಾ, ಹುಡುಗರು ಮಕ್ಕಳತಾವ ಛೀ, ಥೂ ಅಂತ ಅನಿಸಿಗೆಂದು ಬದುಕಾದು ಏನು ವಿಚಿತ್ರವೋ ಮಾರಾಯ! ಈ ಬದುಕೇ ವಿಚಿತ್ರ, ಹಂಗೆ ನೋಡಿದರೆ ಬದುಕಿನಾಗೆ ತಂಬಾಕಿನ ಹೊಗೆ ಮತ್ತು ಹೆಂಡದ ಅಮಲಿನ ರುಚಿ ನೋಡದೇ ಇದ್ದರೆ ಅದು ಬದುಕೇ ಅಲ್ಲ ಅಂತಲೂ ಒಂದು ಮನಸು ಹೇಳತೈತಿ. ಅಯ್ಯೋ ಮೂರ್ಖ, ಹಂಗೂ ಹೇಳತಿ, ಹಿಂಗೂ ಹೇಳತಿ, ಬುದ್ಧಿ ಇಲ್ಲದ ಬಡ್ಡೀಮಗನೇ, ಮನದೊಳಗೆ ಮಾತು ಮೊಸರಾಗೆ ಕಡಗಲು ತಿರುಗಿದಂಗೆ, ಗಾಳೀಲಿ ಬೀಡಿ ಹೊಗೆ ಆಡಿ ಚಿತ್ರವಿಚಿತ್ರ ರೂಪ ಆದಂಗೆ ಹೆಗಡೆ ಮನಸೊಳಗೆ ಮಾತು ಸುರುವಾತು!

ಬಸವಣ್ಣಿ ಬೀಡಿ ಒಗದು ಮುಂದೆ ಹತ್ತಾಮರದ ಹೂಡು ನೋಡಿ ಮತ್ತೆ ಅಡಿಕೆ ಮರ ಅಪ್ಪಿಹಿಡದು ಜೀಕಿ ಜೀಕೆ ಮ್ಯಾಲೆ ಏರತೊಡಗಿದ. ಅವನ ಕೈಕಾಲಿನ ಮಾಂಸಖಂಡ ನರಗಳು ಎಳೆದುಬಿಟ್ಟ ಹಂಗೆ ಆಗಾದು ಮತ್ತೆ ಹೆಗಡೆ ಗಮನ ಸೆಳತ್ತು. ಸುಮಾರಾಗಿ ಐವತ್ತು ವರ್ಷ ದಾಟಿದ ಈ ಬಸವಣ್ಣಿ ನೆಟ್ಟಸಸಿ ಅವನು ಹತ್ತತಾ ಇರಾ ಮರ ಆಗಿರಬೋದು, ಒಂದು ಅರ್ಥದೊಳಗೆ ಈ ತ್ವಾಟದ ಎಲ್ಲಾ ಕೆಲಸ ಅವನೇ ಮಾಡಿದ್ದು ಅಂದರೆ ತಪ್ಪಲ್ಲ. ಕೆಲಸ ಮಾಡಿದ್ದಕ್ಕೆ ರೊಕ್ಕ ಕೊಟ್ಟಿದ್ದು ಹೆಗಡೆ ಅಪ್ಪ. ಐವತ್ತು ವರ್ಷದಿಂದಲೂ ಒಂದೇ ಸಮ ಅವನು ದುಡದೇ ದುಡದ. ಅದೇ ಅವಧೀಲಿ ಹೆಗಡೆ ಅಪ್ಪ ತ್ವಾಟ ಕೃಷೀ ಮಾಡಸ್ತಾ ಮಾಡಸ್ತಾ ಅಡಕೇನೆ ಜಾಸ್ತಿ ಬೆಳೆದು, ಹಣ ಕೂಡಿಟ್ಟು ಒಂದು ಸಣ್ಣ ಮನೆ ಕಟ್ಟಿಸಿದ. ಬಸವಣ್ಣಿ ನಯಾಪೈಸಾನೂ ಕೂಡಿ ಇಡಲಿಲ್ಲ. ಬದಲಿಗೆ ಸಾಲ ಮಾಡತಾ ಅದನ್ನು ತೀರಸ್ತಾ ಮತ್ತೆ ಸಾಲ ಮಾಡತಾ ಜೀವನ ಸಾಗಸ್ತಾ ಇರಾ ಮನುಷ್ಯ. ಆದರೆ ಅವನು, ಇವನು ಸಂಸಾರದೊಳಗೇ ಬಾಳಿದರು. ಇವತ್ತು ರಾತ್ರಿ ಬೆಳಗಾಗದ್ರೊಳಗೆ ಶ್ರೀಮಂತರು ಆಗಿಬಿಟ್ಟಂತಾ ಜನರನ್ನು ತಾಲ್ಲೂಕಿನ ಸುತ್ತಮುತ್ತ ಕಂಡವರಿಗೆ ಈ ಬಸವಣ್ಣಿ ಅಂತಾ ಸಾವಿರಾರು ಜನ ತಿಕಾ ಬಗ್ಗಿಸಿ, ಮೈಕೈ ನುಗ್ಗು ಮಾಡಿಕೋತ, ಮಳೆ ಬಿಸಲು ಬೆಂಕಿ ಅಂತಿಲ್ಲದೆ ಸಾಯಾವರಿಗೂ ಗೇಯತಾ.. ಓ ದೇವರೇ, ಇಲ್ಲಿ ಎಷ್ಟೊಂದು ಏರುಪೇರು, ಅವರು ಕಾರು, ಸ್ಕೂಟರು, ಇಮಾನಿನಾಗೆ ಜುಂ ಅಂತ ಓಡಾಡಿ ಮಜಾ ಉಡಾಯಿಸಿದರೆ ಇವರು ಕಾಲಿಗೆ ಚಪ್ಪಲಿಯೂ ಇಲ್ಲದೇ ಮೈತುಂಬಾ ಬಟ್ಟೆಯೂ ಇಲ್ಲದೆ ಗೇಯತಾ ಇರಾ ಪರಿ…. ಓ ವಿಚಿತ್ರವೇ …! ಅತ್ತ ಶ್ರೀಮಂತಿಕೆಯೂ ಇಲ್ಲದೆ ಇತ್ತ ಬಸವಣ್ಣಿ ಹಂಗೆ ಬಡತನವೂ ಇಲ್ಲದೆ ನಡೂಗೆ ನಿಂತು ಅತ್ತ ಇತ್ತ ನೋಡಿ ನರಳಾ ಪಾಡು ಹೆಗಡೇದು! ಆದರೆ ಸ್ವಾಭಿಮಾನ ಇರಬಕು ಅಂತಾನೆ. ಬಡವ ಆಗಲಿ ಶ್ರೀಮಂತ ಆಗಲಿ, ತನಗೆ ಬೇಕಾದಂಗೆ ಬದುಕು ರೂಪಿಸ್ಕಬಕು ಅಂತಾನೆ. ಸಮತಾವಾದ ಇರಬೈದು, ಸಮಾಜವಾದ ಇರಬೈದು. ಅದನ್ನ ಆಚರಣೆಗೆ ತರದೆ ಇದ್ದರೆ ಏನುಪಯೋಗ? ಬಡವರ ಮ್ಯಾಲೆ ನಡೆಯಾ ಅನ್ಯಾಯದ ಬಿಗೀಗೆ ಹೋರಾಟ ಮಾಡಾ ಮಂದಿ ಈ ಜಗತ್ತಿನಾಗೆ ಒಂದಷ್ಟು ಜನ ಇದಾರೆ ಅನ್ನು. ಅಂತವರಿಂದ ಆ ಶ್ರೀಮಂತರಿಗೆ ಒಂದಷ್ಟು ಹೆದರಿಕೆ ಸುರು ಆದರೆ ಬೊಗಳಾ ನಾಯಿಗೆ ರೊಟ್ಟಿ ಚೂರು ಹಣದ ಹಂಗೆ ರೊಕ್ಕಾನ ಅವರ ಕೈಮ್ಯಾಲೆ ಇಟ್ಟರೆ ಹೋರಾಟ ಮಾಡಾ ಮಂದಿ ಏಕ್ ದಂ ಹಾರಾಟ ಸುರುಮಾಡಿ ಕೆಳಗಿದ್ದವರನ್ನ ಮರೆತೇ ಬಿಡತಾರಪ್ಪೋ ತಮ್ಮ! ಅದಕ್ಕೆ ಹೆಗಡೆ ಹೇಳಿದ್ದು, ಬದುಕು ವಿಚಿತ್ರ ಅಂತ. ನೀನು ನೋಡಾ ಮರ ಮಟ್ಟಿ ಗುಡ್ಡ ಬೆಟ್ಟ ಹಳ್ಳ ಕೊಳ್ಳ, ಮನೆ, ಗದ್ದೆ, ತ್ವಾಟ, ಸೂರ್ಯ, ಚಂದ್ರ, ನೀರು, ಜನ, ಪ್ರಾಣಿ, ಕ್ರಿಮಿ, ಕೀಟ ಎಲ್ಲಾ ನಿನ್ನ ಕಣ್ಣಿಗೆ ಚಿತ್ರ. ಇವೆಲ್ಲಾ ದಿನನಿತ್ಯ ನೆಡಸಾ ವ್ಯವಹಾರ ವಿಚಿತ್ರ! ಅಲ್ನೋಡು, ಅಡಕೇಕೊನೆ ಕೊಯ್ದು ಬಸವಣ್ಣಿ ಅದನ್ನ ತನ್ನ ಸೊಂಟಕ್ಕೆ ಕಟ್ಟಿಗೆಂದ ಹಗ್ಗದಾಗೆ ಬಿಟ್ಟ. ಕೆಳಗೆ ಆ ಹಗ್ಗದ ತುದಿ ಹಿಡದ ಗಿಡ್ಡಾ ಸುಯ್ ಅಂತ ಬಂದ ಆ ಕೊನೇನ ಹಿಡದು ನೆಲದ ಮ್ಯಾಲೆ ಇಟ್ಟ. ಪ್ರಕೃತಿ ಹೆಗಡೀಗೆ ಕೊಟ್ಟ ಸಂಪತ್ತು ಈ ಅಡಕೆ ಕೊನೆಗಳು. ಚಿಕ್ಕಪ್ಪ ಬಂದು ಹೆಗಡೇನ ಮಾತಾಡಿಸಿದರು. ಮನಸಿನೊಳಗೆ ನಡಿತಿದ್ದಂತ ಮಾತು ನಿಂತುಹೋಯಿತು!

ಹೆಗಡೆಗೆ ಅಮ್ಮನ ಕಾಫಿ ನೆನಪಾಗಿ ಮನೀಗೆ ಹೋಗಿ ಬರತೇನೆ, ಸ್ನಾನ, ಊಟ ಮಾಡೆಕೆಂದು ಬರಾತನಕ ಇರತೀಯಾ ಅಂತ ಚಿಕ್ಕಪ್ಪನ ಕೇಳಿದ್ದಕ್ಕೆ ಹ್ಞೂ ಅಂದ. ಅವಾ ಹಂಗೆ ಅಂದಿದ್ದೇ ತಡ, ಹೆಗಡೆ ಮನೀಗೆ ಬಂದ.

ಕೈಕಾಲು ತೊಳದು ಕಾಫಿ ಕುಡದು ಮತ್ತೆ ಅಂಗನವಾಡಿಗೆ ಹೋದ. ಪುಟ್ ಪುಟ್ ಹುಡುಗರು ಕಟ್ಟೆ ಮ್ಯಾಲೆ ಆಟ ಆಡತಿದ್ವು. ಅಂಗನವಾಡಿ ಕೆಲಸದವಳಾಗಿ ನೇಮಕಾ ಆದವಳು ಉಪ್ಪಿಟ್ಟಿನ ಪಾತ್ರೆ ತೊಳೀತಿದ್ದಳು. ಅವಳ ಹೆಸರು ಹೆಗಡೆಗೆ ಗೊತ್ತಿರದೇ ಇದ್ದರೂ ಅವಳ ರೂಪ, ಲಾವಣ್ಯಕ್ಕೆ ಮನಸೊಳಗೇ ಮೆಚ್ಚಿ ಸಿಂಗಾರಿ ಅಂತ ಹೆಸರಿಟ್ಟುಕೊಂಡಿದ್ದ! ಒಂದೋ ಎರಡೋ ತರಗತೀವರಿಗೆ ಓದಿದ ಎಲ್ಲಾ ಹುಡುಗೇರ ಹಂಗೆ ಮಣ್ಣಾಡತಾ ಬೆಳದಾಕಿ ಈ ಸಿಂಗಾರಿ. ಈಗ ಹರೇದ ಹುಡುಗರ ಕಣ್ಣು ಕುಕ್ಕಾ ಹಂಗೆ ಯೌವನ ತುಂಬಿ ತುಳಕಾಡತಿತ್ತು. ಅಂಗನವಾಡೀಲಿ ಕೆಲಸ ಸಿಕ್ಕಮ್ಯಾಲೆ ಬರಾ ಸಂಬಳದಾಗೆ ಬಣ್ಣ ಬಣ್ಣದ ಅಂಗಿ, ಲಂಗ, ಸೀರೆ, ಕುಪ್ಪಸ ತೊಟ್ಟು ತನಗೆ ಬಂದ ಯೌವನಕ್ಕೆ ಮೆರಗ ಕೊಟ್ಟು ಮೀಸೆ ಬಂದವರನ್ನ ಬೆರಗುಗೊಳಿಸತಿದ್ದಳು! ನಮ್ಮೂರ ಕೆಳಗಿನ ಕೇರಿಯ ಮರುತ್ಯಪ್ಪ ಅನ್ನಾ ಹರೇದ ಹುಡುಗ ಇವಳ ಬೆನ್ನು ಹತ್ತಿದ್ದಾನೆಂಬ ಸುದ್ದಿ ಐತಾದರೂ ಅದು ನಮಗೆ ಮುಖ್ಯ ಅಲ್ಲ ಬಿಡ್ರಿ!

ಹೆಗಡೆ ಅಂಗನವವಾಡಿ ಕಟ್ಟಡದೊಳಗೆ ಕಾಲಿಟ್ಟಕೂಡಲೇ ಮೇಡಮ್ಮು ದಡ್ಡನೇ ಎದ್ದು, ಬನ್ನಿ ಅಂತ ಸ್ವಾಗತ ನೀಡಿ ಒಂದು ಟ್ರಂಕಿನ ಮ್ಯಾಲೆ ಹೆಗಡೆಗೆ ಕೂಡ್ರ ಹೇಳಿ, ಕಾರ‍್ಯಕ್ರಮದ ಪಟ್ಟಿಕೊಟ್ಟು ತಾನು ನಿಂತಳು. ಹೆಗಡೆ ಆ ಪಟ್ಟಿ ನೋಡಿ ಅದರಾಗೆ ಸ್ವಲ್ಪ ತಿದ್ದುಪಾಟು ಮಾಡಿ ಮೇಡಮ್ಮನ ಮುಖ ನೋಡಿದ. ಬಾಳಾ ಗಂಭೀರ ಆಗಿದ್ದ ಆ ಮುಖ ಹೆಗಡೆ ಏನು ಹೇಳತಾನೆ ಅಂತ ಕುತೂಹಲ ವ್ಯಕ್ತಪಡಿಸಿತ್ತು. ಈ ಮೇಡಮ್ಮಿನ ಜೊತೀಗೆ ಸಾಗರದಿಂದ ಬಸ್ಸಿನಾಗೆ ಒಟ್ಟಿಗೇ ಬರಾ ಇತರೆ ಮೇಡಮ್ಮುಗಳು ಮೀಸೆ ಬಂದ ಹುಡುಗರ ಕಂಡು ಕಣ್ಣು, ಹುಬ್ಬು, ತುಟಿ ಇತ್ಯಾದಿ ಆಟಾ ಮಾಡಾದನ್ನ ಕಂಡ ಹೆಗಡೇಗೆ ಈ ಮೇಡಮ್ಮಿನ ಗಂಭೀರ ಮುಖ ಇಷ್ಟಾ ಆದದ್ದು ದೊಡ್ಡ ಮಾತಲ್ಲ. ಹಾಗಂತ ಹಂಗೆ ಆಟಾಮಾಡಾ ಮೇಡಮ್ಮುಗಳ ಬಗೀಗೆ ಹೇಳಿದ್ದು ಸಣ್ಣ ಮಾತು ಅಂತಲೂ ಅದರ ಅರ್ಥ ಅಲ್ಲ. ಯೌವನಾನ ಅನುಭವಿಸಿದವರಿಗೆ ಮಾತ್ರ ಅದರ ರುಚಿ ಗೊತ್ತಿರತೈತಿ ಅಂದುಬಿಟ್ಟರೆ ದೊಡ್ಡ ಸಣ್ಣ ಮಾತಿನ ಅರ್ಥ, ಅನರ್ಥ ಏನೂ ಸಂಭವಿಸಾದಿಲ್ಲ ಅಂತ ಹೆಗಡೆ ಭಾವನೆ. ಏನೋ ಹೇಳತಾ ಅಡ್ಡದಾರಿ ಹಿಡಿದುಬಿಟ್ಟೆ! ಹೆಗಡೆ ಮೇಡಮ್ಮಿನ ಮುಖ ನೋಡಿದೋನೆ ದುಡ್ಡಿನ ವ್ಯವಸ್ಥೆ ಎಲ್ಲೀವರಿಗೆ ಬಂತು? ಅಂತ ಕೇಳಿದ. ಅದಕ್ಕೆ ಮೇಡಮ್ಮು ಚಂದ್ರಪ್ಪನ ಹೆಸರು ಹೇಳಿ ಅವನ್ನ ಕರದು ಬರಾದಕ್ಕೆ ಜನ ಕಳಿಸಿದ್ದಾಗಿಯೂ ಅಂದಳು. ರಾಜಪ್ಪನೂ ಕಾನ್ಲೇ ಮಾಸ್ತ್ಯನೂ ಮತ್ತು ಅವರ ಜೊತೀ ನಾಕಾರು ಪಡ್ಡೆ ಹುಡುಗರೂ ಅಂಗನವಾಡಿ ಕಟ್ಟೆತಾವ ಬಂದರು. ನೋಡ್ರಯ್ಯ, ಇಲ್ಲೆಲ್ಲಾ ಜಡ್ಡು ಕೆತ್ತಬಕು, ಇಲ್ಲಿಗೆ ಚಪ್ಪರ ಹಾಕಬಕು, ಅಲ್ಲಿ ಒಡೆದ ಆ ಮೋರಿ ಕಟ್ಟೇನ ಒಂದಷ್ಟು ಮಣ್ಣು ಹೊಡದು ಕಟ್ಟಬಕು ಅಂತ ಹೆಗಡೆ ಹೇಳಿದ. ಅಂಗನವಾಡಿ ಗ್ವಾಡಿಗೆ ಸುಣ್ಣ ಬಳಿಬಕು ಅಂತ ಮೇಡಮ್ಮು ಹೇಳಿದಾರ ಅಂತ ಸಣ್ಣಕೆ ರಾಜಪ್ಪ ಹೆಗಡೆ ಕಿವಿಯಾಗೆ ಗುನುಗಿದ. ಮೊದಲು ಆ ಸೂರಪ್ಪನ ಕರಿ. ದುಡ್ಡು ಎಷ್ಟು ಒಟ್ಟಾಗಿದೆ ನೋಡಿ ಖರ್ಚಿನ ಬಗೀಗೆ ಯೋಚನೆ ಮಾಡಾನ ಅಂದ ಹೆಗಡೆ. ತನ್ನ ಸುತ್ತಲೂ ಸುತ್ತುವರದು ಏನೇನೋ ಅಂತಿದ್ದ ಹರಕು ಬಟ್ಟೆ, ಸುಂಬಳಸುರಕ ಮಕ್ಕಳ ನಡುಗಿಂದ ಮೇಡಮ್ಮು ಇತ್ತ ಬಂದು ನಿಂತಳು. ಅಲ್ಲಿ ಎಲ್ಲರಿಗೂ ತಾವು ನೆಡಸಾ ಕಾರ್ಯಕ್ರಮದ ಗುಂಗು ಹತ್ತಿಬಿಟ್ಟಿತ್ತು. ಚಂದ್ರಪ್ಪ ಗಾಂಭೀರ್ಯದಲ್ಲಿ ಅಲ್ಲಿಗೆ ಬರಲು, ಅವನ್ನ ಅಂಗನವಾಡಿ ಕಟ್ಟೆ ನೆಳಲಿಗೆ ಕರದು ಒಟ್ಟುಮಾಡಿದ ಹಣದ ಬಗೀಗೆ ಹೆಗಡೆ ವಿಚಾರ ಮಾಡಿದ. ಒಟ್ಟು ೫೦ ರುಪಾಯಿ ಒಟ್ಟು ಮಾಡಿದ ಪಟ್ಟೀನ ಹೆಗಡೆ ಕೈಗೆ ಕೊಟ್ಟು ತಾನು ಕೈಕಟ್ಟಿ ನಿಂತುಬಿಟ್ಟ. ಊದಿನಕಡ್ಡಿ, ಗಂಧದಹಾರ, ಶರಬತ್ತಿಗೆ ಸಕ್ಕರೆ, ಲಿಂಬೆಹಣ್ಣು, ಉಪ್ಪಿಟ್ಟಿಗೆ ರವೆ, ಸ್ಪರ್ಧೇಲಿ ಗೆದ್ದ ಅಂಗನವಾಡಿ ಮಕ್ಕಳಿಗೆ ಬಹುಮಾನ ಇತ್ಯಾದಿ ಇತ್ಯಾದಿ ಮೇಡಮ್ಮು ಮಾಡಿದ ಖರ್ಚಿನ ಪಟ್ಟಿನೋಡಿದರೆ ಕಮ್ಮಿ ಅಂದರೂ ೧೫೦ ರೂಪಾಯಿ ಆಗ್ತಿತ್ತು. ಮಧ್ಯಾಹ್ನದ ಬಿಸಲು ಕಾದಿದ್ದಕ್ಕೂ, ಇವರ ಅವ್ಯವಸ್ಥೆಗೂ ಹೆಗಡೆ ತಲೆ ಬಿಸೀ ಆಗಿ ಹಾಸಿಗೆ ಇದ್ದಷ್ಟು ಕಾಲು ಚಾಚಬಕು, ಇದೇನು, ಕಾರ್ಯಕ್ರಮ ಅಂದ್ರೆ ಹುಡುಗಾಟ ಅಲ್ಲ, ಎಲ್ಲಾ ವ್ಯವಸ್ಥೆ ಅದಮ್ಯಾಲೆ ಶಾಸಕರಿಗೆ ಹೇಳಬಕಾಗಿತ್ತು. ಈಗ ಅವರನ್ನ ಕರಸಾದು ಬಿಡಾದಕ್ಕೆ ಬರಾದೂ ಇಲ್ಲ. ಇಲ್ಲಿ ೫೦ ರೂಪಾಯಿಗೆ ಕಾರ್ಯಕ್ರಮ ಆಗಾದೂ ಇಲ್ಲ, ಏನು ಮಾಡದು ಅಂತ ಹೆಗಡೆ ಬಯ್ದರೆ ಮೈಕ್ ಹಾಕ್ಸಬೇಕು ಅಂತ ಹೇಳದು ಮರತಿದ್ದ ಅಂತ ರಾಜಪ್ಪ ಅಂದ. ಹೆಗಡೇಗೆ ಎಷ್ಟು ಸಿಟ್ಟು ಬಂತಪಾ ಅಂದರೆ ಇವರ ಸಾವಾಸವೇ ಬ್ಯಾಡ ಅನ್ನಾವಷ್ಟು!.ಆದರೂ ಸ್ವಲ್ಪ ತಾಳ್ಮೆ ತಂದುಕಂದು ಹೈಸ್ಕೂಲಿಗೆ ಹೋಗಿ ಎಲ್ಲಾ ಮೇಷ್ಟ್ರು ಹತ್ತರವೂ ದುಡ್ಡು ಕೇಳರಿ, ಹಂಗೇ ಮಿಡ್ಲ್ ಸ್ಕೂಲ್ ನಾಗೂ ಕೇಳರಿ. ಮನಿಗೆ ಇನ್ನೆರಡು ರೂಪಾಯಿ ಜಾಸ್ತಿ ಹಾಕರಿ. ಒಂದು ಇನ್ನೂರು ರೂಪಾಯಿ ಒಟ್ಟಾದರೆ ದುಡ್ಡಿನ ಭಯ ಇಲ್ಲದೆ ಕಾರ್ಯಕ್ರಮ ಮಾಡಬೋದು ಅಂತ ಹೇಳಿದ ಹೆಗಡೆ. ಮೇಡಮ್ಮು ಮುಂದೆ ಬಂದು ಸೋಮವಾರಕ್ಕೆ ಬೇಕಾಗಾ ಕುರ್ಚಿ, ಮೇಜು, ಬೆಂಚು ಹೈಸ್ಕೂಲಿನೋರು ಕೊಡ್ತಾರಾ ಹೆಂಗೆ ಹೆಡ್ಮೇಸ್ತ್ರ ಹತ್ರ ನೀವೇ ಕೇಳಿಬಿಡರಿ ಅಂತ ನಾಜೂಕಾಗಿ ಅಂದಳು. ಅವಳಿಗೆ ಕೇಳಾಕ್ಕೆ ಭಯವೋ ಅಥವಾ ಹೆಗಡೆ ಹೆಡ್ಮೇಸ್ಟರಿಗೆ ಪರಿಚಯದ ಮನಸಾ ಆಗಿದ್ದರಿಂದ ಇಲ್ಲ ಅನ್ನಲಾರರು ಅನ್ನಾ ಆಸೆಯೋ ಯಾರು ಬಲ್ಲ? ಈಗಲೇ ಅದೊಂದು ಕೆಲಸ ಮುಗಿಸಿದ ಹಂಗಾತು. ರಾಜಪ್ಪ ಚಂದ್ರಪ್ಪಗಳು ನನ್ನ ಜೊತೀಗೆ ಬಂದರೆ ನಾಕು ಕಾಸಾದರೂ ಸಿಕ್ಕಬೋದು ಅಂತ ಯೋಚನೆ ಮಾಡಿ ಮೇಡಮ್ಮು, ಚಂದ್ರಪ್ಪ, ರಾಜಪ್ಪರೊಡಗೂಡಿ ಹೆಗಡೆ ಹೈಸ್ಕೂಲಿಗೆ ಹೋದ.

ಹೈಸ್ಕೂಲಿನ ಗುಮಾಸ್ತರಾದ ಬಾಲಚಂದ್ರ ಅವರು ಹೆಗಡೆನ ನೋಡಿ ಬರ್ರಿ, ಬರ್ರಿ ಅಂದವರು ಅವನ ಜೊತೇಗಿದ್ದ ಮೇಡಮ್ಮನ್ನು ನೋಡಿ ನಕ್ಕು ಕುರ್ಚಿ ತೋರಸ್ತಾ ಕೂತುಗೊಳ್ಳಿ ಅಂದರು. ರಾಜಪ್ಪ ಚಂದ್ರಪ್ಪಗಳಿಗೆ ಅದೆಲ್ಲಿಯ ನಾಚಿಕೆಯೋ ಅಥವಾ ಹೆದರಿಕೆಯೋ ಸ್ಕೂಲು ಕಟ್ಟೆಮ್ಯಾಲೆ ಗುಸುಗುಸು ಮಾಡತಾ ನಿಂತುಬಿಟ್ಟರು. ಒಳಗೆ ಬರ್ರೋ ಅಂತ ಹೆಗಡೆ ಕರೆದರೆ ಮುಖದಾಗೇ ಒಲ್ಲೆ ಅಂದರು. ಕಾರ್ಯಕ್ರಮದ ಬಗೀಗೆ ಹೆಗಡೆ ಬಾಲಚಂದ್ರ ಅವರಿಗೆ ಹೇಳತಿರಲು ಹೆಡ್ಮೇಸ್ಟ್ರು ಸಿಗರೇಟು ಸೇದತಾ ಅಲ್ಲಿಗೆ ಬಂದರು. ಹೆಗಡೆ ಮಾಮೂಲಿನಂತೆ ಅವರಿಗೆ ಗುಡ್ ಮಾರ್ನಿಂಗ್ ಹೇಳಲು ಅವರೂ ಪ್ರತಿಯಾಗಿ ಮಾಡಿ, ಏನಯ್ಯಾ ಹೆಗಡೆ? ಅಂದರು. ಹೆಗಡೆ ಕಾರ್ಯಕ್ರಮದ ವಿವರ ಹೇಳಿ, ಟೇಬಲ್ಲು, ಕುರ್ಚಿ ಬೇಕು, ಕೊಡತೀರಾ ಅನ್ನಲು, ಆಗಬಹುದಯ್ಯಾ, ಆದರೆ ಹಾಳು ಮಾಡದೆ ವಾಪಾಸು ತಂದು ಕೊಡುವುದು ನಿನ್ನ ಜವಾಬ್ದಾರಿ ಅಂತ ಹೆಡ್ಮೇಸ್ಟ್ರು ಹೇಳಿದ ಮಾತಿಗೆ ರೂಮಿನ ಹೊರಗೆ ಕಟ್ಟೆಮ್ಯಾಲೆ ನಿಂತಿದ್ದ ರಾಜಪ್ಪ ಚಂದ್ರಪ್ಪಗಳ ಮುಖ ಅರಳಿಹೋಯಿತು! ಒಂದು ಕೆಲಸ ಆತೆಂದು ಹೆಗಡೆಗೂ ಸಂತೋಸಾತು. ದುಡ್ದು ಕೇಳರಿ ಅಂತ ರಾಜಪ್ಪನಿಗೆ ಕಣ್ಣುಸನ್ನೆ ಮಾಡಿದರೆ ಅಂವಾ ಹುಡುಗೀ ಹಂಗೆ ನಾಚತಾ ನೆಲ ನೋಡಿದ್ದು ಕಂಡು ಹೆಗಡೆಗೆ ಭಾರೀ ಸಿಟ್ಟು ಬಂತು. ಸಿಟ್ಟು ತಡಕಂಡು, ರಾಜಪ್ಪ ಏನೋ ಹೇಳತಾನೆ ಸಾರ್ ಅಂದ. ಹೆಡ್ಮೇಸ್ಟ್ರು ಸಿಗರೇಟನ್ನ ಕಿಟಕಿ ಸಂದಿನಾಗೆ ಒಗದು ಏನ್ರಪಾ ಅಂತ ಬಾಗಿಲ ಹೊರಗೆ ನಿಂತ ರಾಜಪ್ಪನತ್ತ ನೋಡಲು ಚಂದ್ರಪ್ಪ ಪಟ್ಟಿ ತಂದು ಅವರ ಕೈಗಿತ್ತ. ಎರಡು ರೂಪಾಯಿ ತೆಗೆದು ಕೊಟ್ಟರು. ಬಾಲಚಂದ್ರ ಅವರ ಟೇಬಲ್ಲಿನ ಬಳಿ ಬರುವಷ್ಟರಲ್ಲಿ ಅಲ್ಲಿ ಇನ್ನೊಂದಿಬ್ಬರು ಮೇಸ್ಟ್ರು ಇದ್ದರು. ಅವರೆಲ್ಲಾ ಎರಡೆರಡು ರೂಪಾಯಿ ಕೊಡಲು ನಗುಮುಖದಿಂದ ಚಂದ್ರಪ್ಪ ನೋಟ್ನ ಜೇಬೊಳಗೆ ಇಟ್ಗಂದ. ಅಲ್ಲಿಂದ ಮತ್ತೆ ಅಂಗನವಾಡಿಗೆ ಬಂದು ಖರ್ಚಿನ ಪಟ್ಟಿ ತಯಾರು ಮಾಡಿ, ಸಾಗರದಿಂದ ತರಾ ಸಾಮಾನುಗಳ ಜವಾಬುದಾರೀನ ಹೆಗಡೆ ರಾಜಪ್ಪನಿಗೆ ವಹಿಸಲು ಅದರಲ್ಲಿ ಕೆಲವು ಸಾಮಾನು ತಾನು ತರುತ್ತೇನೆಂದು ಮೇಡಮ್ಮು ಅಂದಳು. ಬಣ್ಣಬಣ್ಣದ ಪೇಪರು ತಂದು ಕಟ್ ಮಾಡಿ ಅಂಗನವಾಡಿ ಪಕಾಶಿ ರೀಪಿಗೆ ಹಚ್ಚುವ ಹೊಸದೊಂದು ಕೆಲಸಾನ ಮೇಡಮ್ಮು ಹೇಳಿದಳು. ಆ ರೀತಿ ಮನೆಘಟ್ಟದಲ್ಲೋ ಮಾಸೂರಿನಲ್ಲೋ ಮಾಡಿರಬಕೆಂದು ಹೆಗಡೆ ಊಹೆ ಮಾಡಿದ. ಅಷ್ಟೇ ಅಲ್ಲದೆ ಅಂಗನವಾಡಿ ಗ್ವಾಡಿಗೆ ಸುಣ್ಣಹಚ್ಚಬೇಕೆಂದು ಮೇಡಮ್ಮು ಬಯಸಿದಳು. ಇದು ನಮ್ಮ ಕೆಲಸಾ ಅಲ್ಲ, ಸರ್ಕಾರ ಮಾಡತೈತಿ ಅಂತ ಹೆಗಡೆ ಅಂದರೆ ಕೆಳದಿ ಊರಿನಾಗೆ ಅವರವರೇ ಹಚ್ಚಿದಾರ್ರೀ ಅಂದಳು. ಯಾರಪ್ಪನ ಮನೆ ಗಂಟು ಖರ್ಚಾಗತೈತಿ? ಹತ್ತು ಜನರ ದುಡ್ಡು. ಎತ್ತಗಾದರೂ ಹೋಗಲಿ ಅನ್ನಾ ನಮ್ಮೂರ ಸೀನ್ವಾಸನ ಮಾತು ನೆನಪಾಗಿ ಹೆಗಡೆ ಬುದ್ಧಿ ಹೇಳಾದು ಬ್ಯಾಡ ಅನಿಸಿ ಸುಮ್ಮನಾದ. ಇನ್ನು ನೀವು ಎಲ್ಲಾ ಏರ್ಪಾಡು ಮಾಡರಿ. ನಂಗೆ ತ್ವಾಟದಾಗೆ ಕೆಲಸೈತಿ ಅಂತ ಹೇಳತಾ ಕಾದ ರಸ್ತೆ ಮಣ್ಣಿನಾಗೆ ಕಾಲಿಟ್ಟರೆ ಹುಡೀ ಆದ ಧೂಳು ಚಪ್ಪಲಿ ಒಳಗೂ ಬಂದವು. ಸರಕಾರ ಈ ರಸ್ತೆಗೆ ಟಾರು ಹಾಕಸಬಾರದೇ ಅನಕೋತ ಹೆಗಡೆ ಮನೆ ಮುಟ್ಟಿದ.

ಎರಡು ದಿನ ಕಳೆದರೂ ರಾಜಪ್ಪನಾಗಲೀ, ಕಾನ್ಲೆಮಾಸ್ತ್ಯನಾಗಲೀ ಮನೇತಾವ ಸುಳೀಲಿಲ್ಲ. ಹೆಗಡೇನೂ ಅತ್ತ ಬದೀಗೆ ತಲೆ ಹಾಕಲೇ ಇಲ್ಲ. ತಲೆ ಹಾಕಿದ್ದರೆ ತಲೆ ಉಳಿಯಾ ಭರವಸೆಯೂ ಹೆಗಡೇಗಿರಲಿಲ್ಲ! ಎರದು ದಿನ ಕೊಯ್ದಿದ್ದ ಗೋಟಡಕೇನ ಅಟ್ಟ ಮತ್ತು ಮನೇ ಮಾಡಿನ ಮ್ಯಾಲೆ ಹಾಕತಾ ಹೆಗಡೆ ತನ್ನ ಪಾಡಿಗೆ ತಾನಿದ್ದ.

ಎಲ್ಲಾ ಕೆಲಸಾ ಮುಗಿಸಿ ಮುಸ್ಸಂಜೆ ಹೊತ್ತಿನಾಗೆ ಮನೇ ಮುಂದಿನ ದೀಪಾ ಹಾಕ್ಕಂದು ಹೆಗಡೆ ಕಟ್ಟೆಮ್ಯಾಲೆ ಕೂತಿದ್ದಾಗ ಉಮೇಶ ರಾಜಪ್ಪನ್ನ ಕ್ಯಾರಿಯರ್ ಮೇಲ್ ಕೂರಿಸಿಗೆಂದು ಜೋರಾಗಿ ಸೈಕಲ್ ಮ್ಯಾಲೆ ಬಂದ. ಇಬ್ಬರೂ ಪ್ಯಾಂಟು, ಅಂಗಿ ತೊಟ್ಟು ಟಾಕುಟೀಕಾಗಿ ಇದ್ದದ್ದು ನೋಡಿ ಸಾಗರದಿಂದ ಬಂದರು ಅಂತ ಹೆಗಡೆ ಭಾವಿಸಿದ. ರಾಜಪ್ಪ ಹೆಗಡೇನ ನೋಡಿದವನೇ ಸೈಕಲ್ಲು ನಿಲ್ಲಿಸಲು ಉಮೇಶನಿಗೆ ಕೂಗಿ ಹೇಳಲು ಮನೇ ದಾಟಿ ಮುಂದೆ ಹೋದ ಉಮೇಶ ಬ್ರೇಕು ಹಾಕಿ ಸೈಕಲ್ಲು ನಿಲ್ಲಿಸಿ, ಸೀಟಿನಿಂದ ಚಂಗನೇ ಹಾರಿ ನಿಂತು ಹೆಗಡೇನ ನೋಡ್ತಾ ಹಲ್ಲು ಕಿರದ. ಅವರ ಕಪ್ಪು ಮುಖದಾಗೆ ದೊಡ್ಡ ದೊಡ್ಡ ಬಿಳೀ ಹಲ್ಲುಗಳು ಗೋಚರಿಸಿದವು. ರಾಜಪ್ಪ ಹೆಗಡೆ ತಾವ ನಡದು ಬಂದು ಸಿವಪ್ಪನೋರ ಮನೀಗೆ ಹೋಗಿದ್ದು, ಅವರು ಮೈಸೂರಿಗೆ ಹೋಗಿದಾರಂತೆ, ಅಲ್ಲಿ ಎಂಥದೋ ಕನ್ನಡ ಮೇಳವಂತೆ, ಯಾವಾಗ ಬರ್ತಾರಂತ ಗೊತ್ತಿಲ್ಲಂತೆ ಅಂದ. ಅಷ್ಟುಹೊತ್ತಿಗೆ ಉಮೇಶ ಸೈಕಲ್ಲು ತಿರಗಿಸಿ ಹೆಗಡೆ ಬಳಿ ಬಂದು ನಿಂತವನು ನೀವು ಬಿ.ಡಿ.ಓ. ಅವರನ್ನು ಕರೆಸಿ ಕಾರ್ಯಕ್ರಮ ನಡೆಸಿಬಿಡಿ ಅಂತ ನಮ್ಮ ಡಾಕ್ಟರು ಹೇಳಿದರು ಅಂದ. ನಮ್ಮ ಡಾಕ್ಟರು ಅಂದರೆ ಅವರು ಯಾರು ಮಾರಾಯ? ಅಂತ ಹೆಗಡೆ ಕೇಳಲು ಹಂದ್ಗೋಡು ಕಾಯಿಲೆ ಆದವರನ್ನ ನೋಡಾಕೆ ಇಲ್ಲೆಗೆಲ್ಲಾ ಬತ್ತಾರಲ್ಲಾ ಅವರು ಅಂದ. ಆಗ ಹೆಗಡೆಗೆ, ಒಂದು ವಾರದ ಹಿಂದೆ ಸಾಗರದ ಪರಿಮಳ ಕಾಫಿ ವರ್ಕ್ಸ್ ನಿಂದ ಕಾಫಿಪುಡಿ ಕೊಂಡಕಂದು ಹೊರಬರಲು ಅದರ ಮಗ್ಗುಲಾಗಿದ್ದ ಚೌಕದಾಗೆ ಈ ಉಮೇಶನೂ ಮತ್ತು ರಾಜಪ್ಪನೂ ಒಬ್ಬ ಎತ್ತರದ, ದಪ್ಪದ, ಸುಂದರ ವ್ಯಕ್ತಿತಾವ ಮಾತಾಡುತ್ತಿದ್ದ ನೆನಪು ಬಂತು. ಹಂದಿಗೋಡು ಕಾಯಿಲೆ ವಿಚಾರ ಹೆಗಡೆ ತಲೇ ಒಳಗೆ ಯಾವತ್ತಿನಿಂದಲೋ ನೋವಿನ ಮಡುವಾಗಿ ಅಡಗಿ ಕುಳಿತಿದ್ದರಿಂದ ಅವರು ಈ ಕಾಯಿಲೆ ಬಗೆಗಿನ ಡಾಕ್ಟರು ಆಗಿರಬೋದು ಅಂತಲೂ ಆ ಕ್ಷಣದಾಗೆ ಅನಿಸಿತ್ತು. ಸರಿ ಕಣ್ರಪ್ಪಾ, ನಿಮ್ಮ ಅನುಕೂಲ ನೋಡಿಕೆಂದು ಕಾರ್ಯಕ್ರಮ ಮಾಡಿರಿ ಅಂತ ಹೆಗಡೆ ಹೇಳುತ್ತಿದ್ದಂಗೇ ಬರ್ತೇವೆ ಅಂತ ಅವರಿಬ್ಬರೂ ಹೋದರು. ಅಷ್ಟು ಹೊತ್ತಿಗೆ ಕತ್ತಲು ಕವಿದಿತ್ತು. ಹೆಗಡೆ ಒಳಾಗೆ ಹೋಗಬಕು ಅನ್ನಾವಷ್ಟು ಹೊತ್ತಿಗೆ ಕೆಳಗಿನ ಕೇರಿ ಬದಿಂದ ಬಂದ ಗೋವಿಂದಪ್ಪ ’ಅಲ್ವೋ, ಏನಯ್ಯಾ, ಅವರ ಕಥೆ, ಶಾಸಕರನ್ನ ಕರಸ್ತಾರೆ ಅಂತ ಕೇಳಿದೆ. ಅಲ್ವೋ, ಅವರು ಇದನ್ನೆಲ್ಲಾ ನಂಗೆ ತಿಳಸಲೇ ಇಲ್ಲ’ ಅಂದ. ಊರಿನಾಗೆ ಶ್ರೀಮಂತ ಅನಿಸಿಗೆಂದ ಮನುಷಂಗೆ ಇತ್ತೀಚೆಗಿನ ಈ ಕಾರ್ಯಕ್ರಮದ ಬೆಳವಣಿಗೆ ಕಿವಿಗೆ ಬಿದ್ದಿದ್ದರಿಂದಲೂ, ಈ ಹುಡುಗರು ತನ್ನನ್ನು ನಿರ್ಲಕ್ಷ್ಯ ಮಾಡಿದ್ದರಿಂದಲೂ ಅವನಿಗೆ ಹೊಟ್ಟೇ ಉರಿ ಆಗಿದೆ ಅನ್ನಾದು ಅವನ ಮಾತಿನ ಧಾಟೀಲಿ ತಿಳೀತಿತ್ತು. ಕಳದ ಚುನಾವಣೇಲಿ ಹೆಗಡೆ ಓಟು ಹಾಕಿ ಬಂದ ಮ್ಯಾಲೆ ಮನೇ ಎದುರೇ ಸಿಕ್ಕಾ ಈ ಗೋವಿಂದಪ್ಪ, ಅಲ್ವೋ ಪಿ.ಟಿ.ಹೆಗಡೇರಿಂದ ನಮ್ಮೂರಿಗೆ ಉಪಕಾರ ಆಗಿದೆ. ನಾವೆಲ್ಲಾ ಅವರಿಗೇ ಓಟು ಕೊಡಬೇಕು. ಅಲ್ವೋ ಕೊಡದೇ ಇದ್ದರೆ ಅವರಿಗೆ ಲೆಕ್ಕ ಸಿಗತದೆ ಅಂತ ಹೇಳಬಕಾರೆ ಅವನಿಗೆ ಭಾರೀ ಭಯ ಇತ್ತು ಅನಿಸಿತ್ತು. ರೊಕ್ಕಾ ಗಂಟು ಕಟ್ಟಿದ ಶ್ರೀಮಂತ ಆದ ಇವರ ಪುಕ್ಕಲುತನ ನೆನೆಸಿಗೆಂದರೆ ಆ ಗಂಟು ಕಟ್ಟಿದ ರೊಕ್ಕ ಬರೀ ಚಪ್ಪು ಕಾಗದದ ಹಂಗೆ ಕಾಣಾ ಅನುಭವ ಆಗತೈತಿ. ಬರೀ ಇದೊಂದೇ ವಿಚಾರಕ್ಕೆ ಈ ಗೋವಿಂದಪ್ಪ ಹಿಂಗಲ್ಲ. ಸರ್ಕಾರದ ಯಾವುದೇ ಅಧಿಕಾರಿ ಅಂದರೂ ಇವನ ಕುಂಡೆ ನಡುಗುತಲೇ ಇರತೈತಿ. ಅದಕ್ಕೆ ಕಾರಣ ಬಡವರ ಮ್ಯಾಲೆ ತನಗೆ ಅನುಕಂಪ ಐತಿ ಅಂತ ಬಾಯಾಗೆ ಹೇಳತಾ ಒಳಗೆ ತನ್ನ ಮೊಮ್ಮಕ್ಕಳಿಗೂ ಆಗಾ ಅಷ್ಟು ಗಂಟು ಮಾಡಿದ್ದು, ಬ್ಯಾರೇವರಿಗೆ ಗೊತ್ತಾಗಿಬಿಟ್ಟರೆ ಹೆಂಗಪ್ಪಾ ಅನ್ನಾ ಕಳಭೀತಿ. ಇದೆಲ್ಲಾ ಅತ್ತ ಬದೀಗಿರಲಿ, ಈಗ ಮುಖ್ಯ ವಿಚಾರ ಏನಪಾ ಅಂದರೆ ಅಂಗನವಾಡಿ ಕಾರ್ಯಕ್ರಮದ್ದು.

ಮೊದಲು ಆಹ್ವಾನ ಪತ್ರನ ಪ್ರಿಂಟು ಮಾಡಿಸಬಕು ಅಂತ ಹೇಳಿ ರಾಜಪ್ಪನೂ ಉಮೇಶನೂ ಚಂದ್ರಪ್ಪನೂ ಕಾನ್ಲೆ ಮಾಸ್ತ್ಯನೂ ಹೆಗಡೆ ತಾವ ಬಂದು ಮಾತಾಡಿ ಡಿಸೆಂಬರ್ ಮೂವತ್ತನೇ ತಾರೀಖು ಕಾರ್ಯಕ್ರಮ ಅಂತಲೂ ಬಿ.ಡಿ.ಓ. ಸಾಹೇಬರೇ ಕಾರ್ಯಕ್ರಮದ ಅಧ್ಯಕ್ಷರೂ ಅಂತಲೂ, ಎಸ್.ಪಿ.ಜಯಂತ್ ಅನ್ನಾ ಸಾಗರದ ರಾಜಕಾರಣಿ ಮತ್ತು ಅಂಗನವಾಡಿ ಮೇಲ್ ವಿಚಾರಕಿ ಮತ್ತು ಹಂದಿಗೋಡು ಕಾಯಿಲೆ ಡಾಕ್ಟರಾದ ಕೃಷ್ಣಮೂರ್ತಿ ಮತ್ತು ಅವರ ಹೆಣ್ತಿ ವಾಣಿಶ್ರೀ ಅನ್ನಾವರು ಅತಿಥಿಗಳೂ ಅಂತಲೂ ಸ್ವಾಗತ ಭಾಷಣ, ಡ್ಯಾನ್ಸು ಇತ್ಯಾದಿ ಇತ್ಯಾದಿ ಆಗಿ ವಂದನಾರ್ಪಣೆ ಮಾಡ್ರಿ ಅಂತ ಹೇಳಿ – ರಾಜಪ್ಪ ನೆಲ ನೋಡತಾ ನಿಂತ. ಹೆಗಡೆ ಉದಯ ಮುದ್ರಣದ ಹೆಸರು ಹೇಳಿದ. ಅದು ಸಾಗರ ಪ್ಯಾಟೇಲಿ ಮಾರಿಗುಡಿ ರಸ್ತೇಲಿ ಚೌಕದ ಮಗ್ಗುಲಾಗೇ ಐತಿ ಅಂತಲೂ, ಮಂಜಪ್ಪ ಡಾಕ್ಟರ ಷಾಪಿನ ಎದುರೇ ಐತಿ ಅಂತಲೂ ಮಾಹಿತಿ ಕೊಟ್ಟರೂ ಎದುರು ನಿಂತವರ ಯಾರ ತಲೇ ಒಳಗೂ ಆ ಮಾಹಿತಿಗಳು ಹೊಕ್ಕ ಹಂಗೆ ಅನಿಸದೇ ಹೆಗಡೇಗೆ ಬ್ಯಾಸರಾತು. ಅದನ್ನ ತೋರಗೊಡದೇ ಸಂತೋಷವೇ ಆದ ಹಂಗೆ ನಾಟಕ ಆಡಿ ಅವರನ್ನು ಬೀಳ್ಕೊಟ್ಟು ತನ್ನ ಪ್ರೀತಿ ಎಮ್ಮೇಕರ ಪದ್ದಿ ಜೊತೆಗೆ ಒಂದಷ್ಟು ಆಟಾ ಆಡಿ ಎಮ್ಮಿಗೂ ಕ್ವಾಣಂಗೂ ಒಂದಷ್ಟು ಹುಲ್ಲು ಹಾಕಿ ಸ್ನಾನ ಮಾಡಕ್ಕೆ ಹೋದ.

ಹೆಗಡೆ ಅಪ್ಪನಾದಿಯಾಗಿ, ಗಿಡ್ಡ, ಬಸವಣ್ಣಿ, ಗಂಗಾಧರಪ್ಪ ಮೂಲೇಮನೆ ವೆಂಕಪ್ಪ ಹಿಗೆ ಎಲ್ಲಾ ಹಿರೇ ಮನುಷ್ಯಾರಿಗೂ ದಿನ ಬೆಳಗಾದರೆ ಊರಾಗೆ ನಡೀತಕ್ಕಂಥಾ ಕಾರ್ಯಕ್ರಮ ಊರು ಬಾಗಲಾಗೆ ನಿಂತು ಮಾತಾಡತಕ್ಕಂಥಾ ವಿಚಾರ ಆತು. ಕಾರ್ಯಕ್ರಮದ ಬಗೀಗೆ ಸ್ವಲ್ಪ ದೊಡ್ಡಾಂವಾ ಆದ ಹುಡುಗ ಹೆಗಡೆ ಮುತುವರ್ಜಿ ವಹಿಸಿರಾದು ಕೂಡ ಅವರ ಗಮನ ಸೆಳೆದದ್ದು ಬ್ಯಾರೇರ ಬಾಯಿಂದ ಹೆಗಡೆ ಕಿಮೀಗೆ ತಲುಪಿದ್ದು ನಗು ಬರಾ ಹಂಗೆ ಆಗಿತ್ತು.

ಭಾಗ – ೨

ಬೆಳಿಗ್ಗೆ ಒಂಭತ್ತೂವರೆ ಗಂಟೆಗೆ ಕಾರ್ಯಕ್ರಮ ಇದ್ದಿದ್ದರಿಂದ ಹೆಗಡೆ ಬೆಳಿಗ್ಗೆ ಎದ್ದವನು ಎಮ್ಮೆ ಕ್ವಾಣ ಮುಂತಾದವಕ್ಕೆ ಲಗುಬಗೇಲಿ ಅಕ್ಕಚ್ಚು ತೋರಿ, ತ್ವಾಟದಾಗೆ ಉದರತಿದ್ದ ಗೋಟಡಕೇನ ಆರಿಸಿಗೆಂದು ಬಂದು ಬಿಸಲಾಗೆ ಒಣಗಿಸಿ ಸ್ನಾನಾ ಮಾಡಿ ಪೈಜಾಮತೊಟ್ಟು ಒಂದು ಅಂಗಿ ಸಿಕಾ ಹಾಕ್ಯಂದು ಮ್ಯಾಮ್ ಕೋಸಿನ ಪುಟ್ಟ ಡೈರಿ ಹಿಡದು ಅಂಗನವಾಡಿಗೆ ಹೆಜ್ಜೆ ಹಾಕಿದ. ದಾರೀಲಿ ಬಸವಣ್ಣಿ ಮಗಳು ಸರೋಜ, ಕಾನ್ಲೆಮಾಸ್ತ್ಯನ ಮಗಳು ರೇಣುಕ, ಲಕ್ಷ್ಮನ ಹೆಣ್ತಿ ಕರಿ ಹುಡುಗಿ, ಮುಂತಾದೋರು ಮತ್ತು ಹೈಸ್ಕೂಲಿನ ಹುಡುಗರು, ಹುಡುಗೇರು ಎದುರಾದದ್ದು ಕಂಡು ಕಾರ್ಯಕ್ರಮ ತಡ ಇರಬೋದು ಅನಿಸಿತು. ಹೆಗಡೆ ತನ್ನ ಕರ್ತವ್ಯದ ಪ್ರಕಾರ ಮೇಡಮ್ಮು ಮತ್ತು ರಾಜಪ್ಪ ಇತ್ಯಾದಿ ಜನರನ್ನ ಕಂಡು ಕಾರ್ಯಕ್ರಮದ ಏರ್ಪಾಡು ಹೆಂಗೆ ನಡೀತಿದೆ, ಅಲ್ಲಿ ತನ್ನ ಪಾತ್ರ ಏನು ಇತ್ಯಾದಿ ವಿಚಾರ ತಿಳಿಯಾನ ಅಂತ ಮುಂದಾದ. ಎಲೆ ಅಡಿಕೆ ಹಾಕಿ ತುಟಿ, ಬಾಯಿ ಕೆಂಪಗಾಗಿದ್ದ ಸೋಮನಾಥಯ್ಯ ಏನಯ್ಯ, ಪುಸ್ತಕ ಹಿಡದು ಹೊಂಟೆಯಲ್ಲೋ ಅಂತ ಮುಗುಳು ನಗುತಾ ಕೇಳಿದ. ತಾನು ಹೊಂಟಿದ್ದು ಹುಡುಗರು ನೆಡಸಾ ಕಾರ್ಯಕ್ರಮಕ್ಕೆ ಅನ್ನಾದು ಅವನಿಗೆ ಗೊತ್ತಿದ್ದರೂ ಕೇಳತಾನೆ ಅನ್ನಾದು ಹೆಗಡೆಗೆ ಗೊತ್ತಿತ್ತು. ಹೆಗಡೆ ಕಾರ್ಯಕ್ರಮದ ಸುದ್ದಿ ಹೇಳಾದಕ್ಕೂ ಅವನ ಮಗ ರಮೇಶ ಏನ್ರೀ ಹೆಗಡೇರೆ, ತಡೀರಿ, ನಾನು ಬರ್ತೇನೆ ಕಾರ್ಯಕ್ರಮಕ್ಕೆ ಅಂತ ಬಹುವಚನ ಉಪಯೋಗಿಸಿ ತಮಾಸಿ ಮಾಡಿದ. ಸೀನ್ವಾಸನೂ ಈತನೂ ಶುದ್ಧ ಕಿತಾಪತಿಗಳು ಅನಿಸಿ ಅವನ ತಮಾಸೀನ ಕಡೆಗಣಿಸಿ ಹೆಗಡೆ ಸೋಮನನಾಥಯ್ಯನ ಹತ್ರ ಅಡಕೆ ತ್ವಾಟದ ಕಾವಲುಗಾರರ ತಿಂಗಳ ಸಂಬಳದ ಸುದ್ದೀನ ಬಾಳಾ ಗಂಭೀರವಾಗಿ ಮಾತಾಡಾತಾ ಎಲೆ ಅಡಿಕೆ ಸುಣ್ಣ ತಂಬಾಕು ಎಲ್ಲವನೂ ಬಾಯೊಳಗೆ ತುರುಕಿ ರಸ ರಸಮಾಡಿ ಕೆಂಪಗೆ ಆದಾಗ ತುಪ್ಪತೊಡಗಿದ. ಅಷ್ಟು ಹೊತ್ತಿಗೆ ಸೀನ್ವಾಸನೂ ಅಲ್ಲಿಗೆ ಬಂದ. ಮೂವರೂ ಕೂಡಿ ಅಂಗನವಾಡಿ ಹತ್ರ ಹೋಗಲು ಒಂದಷ್ಟು ಹೈಸ್ಕೂಲು ಹುಡುಗೀರು, ಮಿಡ್ಲಸ್ಕೂಲಿನ ಮಕ್ಕಳು, ಒಂದಷ್ಟು ಮೀಸೆ ಬಂದೋರು ಅಲ್ಲಲ್ಲಿ ನಿಂತಿದ್ದರು. ಹೆಗಡೆ ಮನಸ್ಸು ಕಲಕಿದ ಸಿಂಗಾರಿ ಅಂಗನವಾಡಿ ಪಕ್ಕದಾಗೆ ದೊಡ್ಡದೊಂದು ಪಾತ್ರೇನ ತಿಕ್ಕತಾ ಇದ್ದಳು. ನಮಗೆ ಬ್ಯಾಡದಂತಾ ವಿಷಯದೊಳಗೆ ಹೇಳಿದ್ದ ಮೂರುತೆಪ್ಪ ಮೀಸೆ ಬಂದೋರ ಗುಂಪಿನಾಗೆ ನಿಂತು ಅವಳನ್ನ ಕದ್ದು ಕದ್ದು ನೋಡಾತಾ, ರತೀ ಬಾಣದಂತಹ ಮಾತು ಒಗೀತಿದ್ದ. ಯೌವನದೊಳಗೆ ಹಿಂಗೆಲ್ಲಾ ಮಾಡದಿದ್ದರೆ ಅದು ಯೌವನವಾ? ಅಂತ ಕಿತಾಪತಿ ಮನಸು ರೆಕ್ಕೆ ಬಿಚ್ಚತಿರಬೇಕಾದರೆ ಹೆಗಡೆ ಅದನ್ನು ಹಿಡದು ನಿಲ್ಲಿಸಿ ಅಂಗನವಾಡಿ ಒಳಗ ಕಾಲಿಟ್ಟ. ಸುಣ್ಣ ಹೊಡದು ಬೆಳ್ಳಗಾದ ನಾಕು ಗ್ವಾಡೆ ನಡೂಗೆ ಥರಥರದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ನೋಡಿ ನಾಕು ದಿನದ ಹಿಂದೆ ಮೇಡಮ್ಮು ಹೇಳತಿದ್ದ ವಸ್ತುಪ್ರದರ್ಶನ ಅನ್ನಾ ಪದ ನನಪಾಗಿ ಅದೇ ಇದು ಅಂತ ತೀರ್ಮಾನಕ್ಕೆ ಬಂದ. ನಮ್ಮೂರ ಮೇಡಮ್ಮು ಯಾವುದೋ ಕೆಲಸಕ್ಕೆ ಹೊರಗೆ ಹೋಗಲು ಕೆಳದಿ ಮೇಡಮ್ಮು ಹೆಗಡೆ ತಾವ ಬಂದು ಶರಬತ್ತು ಮಾಡೋಣವಾ ಅಂದಳು. ಹೆಗಡೆ ಪಾಕಪ್ರವೀಣ ಅಂತ ಆಕೆ ಹೆಂಗೆ ಕಂಡುಹಿಡಿದಳೋ. ಹ್ಞೂ ಅಂದವನೇ ಸಿಂಗಾರಿ ತೊಳದು ತಂದಿಟ್ಟ ದೊಡ್ಡ ಸಿಲಾವರ್ ಪಾತ್ರೆಯೊಳಗೆ ಒಂದಷ್ಟು ನೀರು, ಸಕ್ಕರೆ ಹಾಕಿ ಕಲ್ಡುತ್ತಿರಲು ಮೇಡಮ್ಮು ನಿಂಬೆಹಣ್ಣು ಕೊಯ್ದು ಕೊಟ್ಟಳು. ಶರಬತ್ತು ತಯಾರು ಮಾಡಿ ರುಚಿ ನೋಡಿ ಮುಚ್ಚಿ ಇಡತಿದ್ದ ಹಾಗೇ ಕಾನ್ಲೆ ಮಾಸ್ತ್ಯ ಬಂದು ಮುಗುಳುನಗೆಯಾಡಿ ತನ್ನ ಹಾಜರಿ ಹಾಕಿ ಗ್ವಾಡೇ ಬದೀಗೆ ಸರದು ನಿಂತು ಬೀಡಿ ಹಚ್ಚಿದ. ಅಂಗನವಾಡಿ ಕಟ್ಟೆಹೊರಗೆ ಇಟ್ಟಿದ್ದ ಬೆಂಚಿನ ಮ್ಯಾಲೆ ಕುಂತಂಥಾ ರಮೇಶ, ಸೀನ್ವಾಸಗಳಿಗೆ ಬಿ.ಡಿ.ಓ. ಸಾಹೇಬರಿಗೆ ಆರ್ಜಿ ಬರೆಯುವಂತಾ ಮತ್ತು ಕಾರ್ಯಕ್ರಮದ ಪಟ್ಟಿ ನಕಲು ಮಾಡುವಂತಾ ಕೆಲಸ ಅಂಟಿಬಿಟ್ಟಿತ್ತು. ಚಪ್ಪರವ ಹಾಕಿ ಟೇಬಲ್ಲು ಕುರ್ಚಿ ಇಟ್ಟಲ್ಲಿ ಬಂದು ಕೂತುಗೊಂಡ ಗಂಡ ಹೆಂಡಿರನ ನೋಡದ ಹೆಗಡೇಗೆ ಅದು ಸಾಗರದಾಗೆ ನೋಡಿದ ವ್ಯಕ್ತಿಯೇ ಅನಿಸಿ ಅವರ ಬಳಿಸಾರಿ ನಮಸ್ಕಾರ ಅಂತ ನಾಜೂಕಾಗಿ ಹೇಳಿ, ಬಿಡಿ‌ಓ ಸಾಹೇಬರು ಬರಾದು ತಡವಾಗಬೋದು ಸಾರ್, ಕ್ಷಮಿಸಿ ಅಂದ. ಅವರ ಸುತ್ತಲೂ ಹಂದಿಗೋಡು ಕಾಯಿಲೆ ಆದ ಕೆಲವರು ಮತ್ತು ಮಕ್ಕಳು ಮರಿ ಮಗ್ಗುಲಾಗೆ ಅವಚಿಗೆಂದ ಮದುಕೇರು, ತಾಯಂದಿರು ನಿಂತಿದ್ದರಿಂದ ಇವರೇ ಉಮೇಶ ಹೇಳಿದ ಡಾಕ್ಟರು ಅಂತ ಕ್ಷಣದೊಳಗೇ ಮನಸಿಗೆ ಅನಿಸಿತ್ತು. ಪಕ್ಕದ ಕುರ್ಚಿ ತೋರುಸ್ತಾ ಬನ್ನಿ ಕೂತ್ಕಳ್ಳಿ, ನೀವ್ಯಾರು ಅಂತ ನಂಗೆ ಗೊತ್ತಾಗಲಿಲ್ಲ ಅಂತ ಆತ್ಮೀಯವಾಗಿ ಹೇಳತಾ ಡಾ.ಕೃಷ್ಣಮೂರ್ತಿ ಹೆಗಡೆ ಹಸ್ತಾನ ತಮ್ಮ ಕೈಯಿಂದ ಮೃದುವಾಗಿ ಹಿಡದರು. ಇದನ್ನೆಲ್ಲಾ ನೋಡತಾ ಸಿಂಗಾರಿ ದೊಡ್ಡಮ್ಮನ ಮಗಳು ಶಾರದನ ತಾವ ಏನೋ ಮಾತಾಡಿ ಹೆಗಡೆ ಮುಖಾ ನೋಡಿದಳು. ಹೆಗಡೇನ ನೋಡತಿದ್ದಂಗೇ ಅವಳ ಮನಸ್ಸು ಬಣ್ಣಬಣ್ಣವಾಗುತ್ತಿತ್ತು. ಇದನ್ನೆಲ್ಲಾ ಬಲ್ಲ ಜಾಣ ಹೆಗಡೆ ತನ್ನ ಕಣ್ಣ ಕಿತ್ತು ಡಾಕ್ಟರಲ್ಲೇ ನೆಟ್ಟು ತನ್ನ ಪರಿಚಯ ಹೇಳಿದ ಕೂಡಲೇ ’ಬಹಳಾ ಸಂತೋಷ, ಇವರು ನನ್ನ ಹೆಂಡತಿ, ವಾಣಿಶ್ರೀ ಅಂತ. ನಾವಿಬ್ಬರೂ ಡಾಕ್ಟರು, ನಿಮ್ಮೂರ ಸುತ್ತಮುತ್ತ ಸುರುವಾಗಿರೋ ಹಂದಿಗೋಡು ಕಾಯಿಲೆ ಬಗ್ಗೆ ರಿಸರ್ಚ್ ಮಾಡತಾ ಇದ್ದೇವೆ’ ಅಂದರು. ಬಿಸಲು ಏರತಾ ಇದ್ದಿದ್ದರಿಂದ ಹೊತ್ತು ಮೀರಿದರೂ ಕಾರ್ಯಕ್ರಮಕ್ಕೆ ಬರಬಕಾಗಿದ್ದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬರದೇ ಇದ್ದಿದ್ದರಿಂದ ಸಮಯಕ್ಕೆ ಅರ್ಧಗಂಟೆ ಮುಂಚೆ ಬಂದ ಡಾಕ್ಟರ ಪಚೀತೀನ ಹೆಗಡೆ ಗ್ರೈಸಿದ. ಈ ವೈದ್ಯ ದಂಪತಿಗಳನ್ನ ಮನೆಗೆ ಕರಕೊಂಡು ಹೋಗಿ ಕಾಫಿ ಕುಡಸಾನ ಅಂತ ಅನಿಸಿ ತನ್ನ ಅಭಿಪ್ರಾಯಾನ ಅವರಿಗೆ ಹೇಳಿದ. ಕುಂತು ಕುಂತು ಬ್ಯಾಸರಾಗಿದ್ದ ಅವರಿಗೆ ಹೆಗಡೆ ಆಹ್ವಾನದಿಂದ ಕುಸೀ ಆಗಿ ’ಹೌದು, ಹಾಗೇ ಮಾಡೋಣ. ಇವರ ಮನೇನೂ ನೋಡಿದ ಹಾಗಾಗುತ್ತೆ ಬಾ ವಾಣಿಶ್ರೀ’ ಅಂತ ಪ್ರೀತಿಂದ ಹೆಂಡತೀನ ಕರೀತಾ ಎದ್ದರು. ಅಂಗನವಾಡಿ ಸುತ್ತಲೂ ಜನ ಸೇರುತ್ತಿದ್ದರು. ಅಂಗನವಾಡಿ ಒಳಗೆ ನಮ್ಮೂರ ಮೇಡಮ್ಮುಗಳು ಗುಂಪಾಗಿ ನಿಂತು ಸಂತೋಷದಿಂದ ನಗತಾ ಮಾತಾಡತಿದ್ದರು. ಉದ್ದ ಜಡೆಯ ಒಂದು ಮೇಡಮ್ಮು ವಾರೆಗಣ್ಣಿನಾಗ್ ಹೆಗಡೇನ ಹೆಂಗೆ ನೋಡಿದಳು ಅಂತ ಇಲ್ಲಿ ವರ್ಣನೆ ಮಾಡಾದು ಉಚಿತ ಅಲ್ಲ ಅನಸತೈತಿ. ಹುಡುಗಾದ ಹೆಗಡೇಗೆ ಆ ರೀತಿ ಒಂದು ವಿಚಿತ್ರ ಆಕರ್ಷಣೆ ಐತಿ ಅಂದರೆ ಸಾಕೋ ಏನೋ!

ಹೆಗಡೆ ಡಾಕ್ಟರನ್ನು ಕರಕಂದು ರಸ್ತೆಮ್ಯಾಲೆ ನಡೀತಿದ್ದರೆ ಸ್ಕೂಲು ಹುಡುಗರು ಮತ್ತು ಇತರೇ ಜನಗಳೆಲ್ಲಾ ಇವರನ್ನೇ ನೋಡುತ್ತಿದ್ದ್ರು. ನಡೀತಾ ಒಂದು ಅರಳೀಮರ ದಾಟುತ್ತಿದ್ದಂಗೇ ಕೆರೆ‌ಏರಿಯ ಆಚೆಗೆ ಹಸುರಾಗಿ ಕಾಣತಿದ್ದ ಅಡಕೆ ತ್ವಾಟ ನೋಡಿದ ಡಾಕ್ಟರು ನಿಮ್ಮ ತೋಟವೂ ಅದರೊಳಗೇ ಬರುತ್ತಾ? ಅಂತ ಹೆಗಡೇನ ಕೇಳಿದರು. ನಿಮ್ಮ ಜೀವನವೇ ಸುಖವಾಗಿದೆ ಹೆಗಡೇರೆ ಎನ್ನುತ್ತ ಹೆಗಡೆ ಮುಖ ನೋಡಿದವರು ಯಾವ ಭಾವವನ್ನ ಕಂಡರೋ ಸುಖ ಅಂದರೆ ನಾನು ಹೇಳಾದು ಶಾಂತವಾದ ಜೀವನ ಅಂತ. ಯಾರ್ಯಾರ ಬದುಕು ಹೆಂಗೆಂಗೆ ಇರುತ್ತೋ? ಅಲ್ಲವಾ? ಅಂದಳು.

’ನೋಡಿ, ನಾವು ಬೆಳಗಿಂದ ಸಂಜೆವರೆಗೂ ಹಳ್ಳಿಗಳಲ್ಲಿ ಅಲೀಬೇಕು, ಅವರು ಏನು ತಿಂತಾರೆ? ಏನು ಕುಡೀತಾರೆ? ಹೆಂಗೆ ಬದಕ್ತಾರೆ ಎಲ್ಲವನ್ನೂ ಪರಿಶೀಲನೆ ಮಾಡಬೇಕು. ಈ ಥರದ ಬದುಕೇ ನಮಗೆ ನಿಜವಾಗಲೂ ಖುಷಿ ಕೊಡ್ತದೆ’ ಅಂದರು. ಇವರು ಹಂದಿಗೋಡು ಕಾಯಿಲೆ ಬಗೀಗೆ ಭಾರೀ ಗಮನಕೊಟ್ಟು ಕೆಲಸಾ ಮಾಡತಿದಾರೆ ಅಂತ ಹೆಗಡೆಗೆ ಅನಿಸಿತು. ’ನಾನು ಹೈಸ್ಕೂಲು ಓದಬಕಾರೆ ಒಂದೆರಡು ಜನರೀಗೆ ಕೈಕಾಲು ಸೊಟ್ಟ ಆತು ನೋಡಿ, ಈಗೀಗ ಇದು ಎಲ್ಲರಿಗೂ ಆಗಾಕೆ ಸುರುವಾಗಿಬಿಟ್ಟೈತಿ. ಮಾಕೆಟ್ಟ ಕಾಯಿಲೆ ಮಾರಾಯರೆ?’ ಅಂದ ಹೆಗಡೆ. ನೀವು ಏನು ಓದಿದೀರಿ ಅಂತ ಡಾಕ್ಟರು ಮಾತಾಡತಿದ್ದ ಟಾಪಿಕ್ಕು ಬದಲು ಮಾಡಿದರು. ತಾನು ಶಿವಮೊಗ್ಗದಾಗೆ ಬಿ.ಎ. ಓದಿದ ವಿವರ ಹೇಳಾದಕ್ಕೂ ಹೆಗಡೆ ಮನೆ ಬಾಗಲು ಬಂತು. ಸೈಕಲ್ಲುಮ್ಯಾಲೆ ಕೆಳದೀ ಕಡೆ ಹೊಂಟಿದ್ದ ಬೆಳೆಯೂರಿನ ಲಕ್ಷ್ಮೀನಾರಣ ನೆಲಕ್ಕೆ ಕಾಲುಕೊಟ್ಟು ತನ್ನಪ್ಪನ ತಾವ ಮಾತಾಡತಿದ್ದ. ಒಳಗೆ ಬಾರಾ ಅಂತ ಕರೆದರೆ ಕೆಳದೀಲಿ ಅರ್ಜಂಟು ಕೆಲಸೈತಿ ಅಂತ ಹೇಳ್ ತಾ ಹೊಂಟ. ತನ್ನಪ್ಪಂಗೆ ವೈದ್ಯ ದಂಪತಿಗಳನ್ನು ಪರಿಚಯ ಮಾಡಿಕೊಟ್ಟು ಮನೇ ಒಳಗೆ ಕರಕಂದು ಬಂದ. ಮನೇ ಒಳಗೆ ಹೋಗಬಕಾರೆ ಮೊದಲು ಕೊಟ್ಟಿಗೆ ಇದ್ದು. ಅದರ ಮತ್ತೊಂದ ಬಾಗಿಲ ಬುಡದಾಗೆ ಎಮ್ಮೆ ಕಟ್ಟಿತ್ತು. ಹೊಸ ಮನುಷಾರ ಆಗಮನದಿಂದ ಎಮ್ಮೆ ಜೋರಾಗಿ ಉಸರು ಬಿಟ್ಟು ಒಂದ್ಸರಿ ಅವರನ್ನ ಕೆಕ್ಕರಿಸಿ ನೋಡಿತು. ಏನ್ರೀ ನಿಮ್ಮೆಮ್ಮೆ ಹೆದರುತ್ತಾ ಅಂತ ಡಾಕ್ಟರು ಮುದ್ದಾಗಿ ಕೇಳಿದರು. ಇವರು ಇಷ್ಟು ಮಾತಾಡಿದರೂ ಇವರ ಹೆಣ್ತಿ ಒಂದು ಮಾತನೂ ಆಡದೆ ಸುಮ್ಮನೇ ಇದ್ದದ್ದು ಹೆಗಡೆ ಗಮನಕ್ಕೆ ಬಂತು. ಜಗಲೀ ಬೆಂಚಿನ ಮ್ಯಾಲೆ ಅವರು ಕೂತಮ್ಯಾಲೆ ಏನು ಕುಡೀತಿರಿ ಅಂತ ಹೆಗಡೆ ಕೇಳಿದ. ಏನಾದರೂ ಅಡ್ಡಿ ಇಲ್ಲ ಶ್ರೀಧರ ಹೆಗಡೆ ಅಂತ ಬಾಯಿತುಂಬ ಹೆಸರು ಹೇಳತಾ ತನ್ನಪ್ಪನ್ನ ಉದ್ದೇಶಿಸಿ ದಿನಾ ಹಳ್ಳಿ ಹಳ್ಳಿ ತಿರಗೋದರಿಂದ ನಮ್ಮ ಆರೋಗ್ಯಾನೂ ಸರಿ ಇರೋದಿಲ್ಲ ಒಂದು, ಎರಡನೇದಾಗಿ ಸಂಕೋಚ ಮಾಡಿಕೊಂಡರೆ ಬಹಳಾ ಕಷ್ಟವಾಗತ್ತೆ. ಪೇಟೇಲ್ಲಿಂದ್ದಂಗೆ ಹಳ್ಳೀಲಿ ಹೋಟ್ಲು ಗೀಟ್ಲೂ ಇರೋದಿಲ್ಲ. ಮಧ್ಯಾಹ್ನ ಯಾವುದಾದರೂ ಹಳ್ಳೀಲಿ ಇರಬೇಕಾಗಿ ಬಂತು ಅಂದರೆ ನಿಮ್ಮಂಥೋರ ಮನೆಲಿ ಊಟ ಹಾಕ್ತೀರಾ ಅಂತ ಬಾಯೊಡದು ಕೇಳಬೇಕಾಗುತ್ತೆ ಅಂದರು. ಅದಕ್ಕೆ ಹೆಗಡೆ ನಗತಾ ಮಧ್ಯಾಹ್ನ ಊಟಕ್ಕೆ ಇಲ್ಲಿಗೇ ಬನ್ನಿ ಅಂದ. ಉದಾಹರಣೆ ಹೇಳಿದ್ದು ಕಣ್ರೀ, ಇವತ್ತಿನ ಕಾರ್ಯಕ್ರಮ ಮುಗದ ಕೂಡಲೇ ನಾವು ಸಾಗರಕ್ಕೆ ಹೋಗ್ತೀವೆ ಅಂದರು. ಅಷ್ಟು ಹೊತ್ತಿಗೆ ಬಸ್ಸು ಇಲ್ಲದ್ದರಿಂದ ಹೆಂಗೆ ಅಂತ ಹೆಗಡೆ ಕೇಳಿದ್ದಕ್ಕೆ ನಮ್ಮ ವೆಹಿಕಲ್ ಇದೆ. ಅಲ್ಲಿ ಹಲಸಿನ ಮರದಡಿಗೆ ನಿಲ್ಲಿಸಿದ್ದೇವಲ್ಲ, ನೋಡಲಿಲ್ಲವಾ? ಅಂದರು. ಅಷ್ಟು ಹೊತ್ತಿಗೆ ಹೆಗಡೆ ಅವ್ವ ಬಂದು ಡಾಕ್ಟರಿಗೆ ನಮಸ್ಕಾರ ಹೇಳಿದ ಕೂಡಲೇ ಹೆಗಡೆ ತನ್ನ ತಾಯೀನ ಅವರಿಗೆ ಪರಿಚಯ ಮಾಡಿಸಿಕೊಟ್ಟ. ಕಾಫಿ ಕುಡದ ಮ್ಯಾಲೆ ಡಾಕ್ಟರು ಹೆಗಡೆ ಅಪ್ಪನ ತಾವ ಹಂದಿಗೋಡು ಕಾಯಿಲೆಯಿಂದ ನರಳಾ ಜನರ ಬಗೀಗೆ ಬಾಳಾ ಕನಿಕರದಿಂದ ಮಾತಾಡಿದರು. ರಸ್ತೇಲಿ ಜೀಪು ಅಥವಾ ಕಾರ ಹೋದ ಸದ್ದು ಕೇಳತೈತೇನೋ ಅಂತ ಹೆಗಡೆ ಆಲಸ್ತಾ ಇದ್ದ. ಯಾವನು ಹೊತ್ತಿಗೆ ಸರಿಯಾಗಿ ಬರದೇ ಇದ್ದರೂ ನಾವು ಹೊತ್ತಿಗೆ ಸರಿಯಾಗಿ ಇರಬಕಾದ ಜಾಗದಾಗ ಇರದು ನಮ್ಮ ಕರ್ತವ್ಯ ಆಗಿದ್ದರಿಂದ ಕಾರ್ಯಕ್ರಮ ನಡೀಬಕಾದ ಜಾಗಕ್ಕೆ ಹೋಗಾ ಚಡಪಡಿಕೆ ತೋರಿಸಿದ್ದೇ ತಡ, ಅದನ್ನು ಗಮನಿಸಿದ ಡಾಕ್ಟರು ಹೊರಡೋಣ ಅಲ್ವಾ ಶ್ರೀಧರ ಹೆಗಡೆ ಅಂತ ಹೇಳಿ ಆರಾಮಾಗಿ ಇನ್ನೊಂದ್ಸಲ ಬರ್ತೇವೆ ಕೂತು ಮಾತಾಡೋಣ ಅಂತ ಅಪ್ಪಂಗೆ ಹೇಳಿ ಹೊರಟರು. ಡಾ. ವಾಣಿಶ್ರೀ ಅವರಿಗೆ ಅವ್ವ ಕುಂಕುಮ ಕೊಟ್ಟರು. ಆ ತಾಯಿ ಕುಂಕುಮ ಹಚ್ಚಿದ ಶಾಸ್ತ್ರ ಮಾಡಿ ಹೋಗಿಬರ್ತೇವೆ ಅಂತ ಹೇಳಿ ಕೈ ಮುಗದು ತನ್ನ ಎತ್ತರದ ಹಿಮ್ಮಡಿ ಇರಾ ಚಪ್ಪಲೀನ ಪಾದಕ್ಕೆ ಕಟ್ಟಿಗೆಂದು ಹೊಂಟಳು. ಯಾವುದೋ ಸಿನೆಮಾದ ಹಾಡು ಧ್ವನೀವರ್ಧಕದೊಳಗಿಂದ ಕಿಮೀಗೆ ಅಪ್ಪಳಿಸಿತ್ತಾದರಿಂದ ಕಾರ್ಯಕ್ರಮ ಪ್ರಾರಂಭ ಆಗಾದು ತಡ ಇದೆ ಅಂತ ಊಹೆ ಮಾಡಿದ ಹೆಗಡೆ. ಹಂದಿಗೋಡು ಕಾಯಿಲೆ ಆದವರ ಭವಿಷ್ಯ ಯೋಚನೆ ಮಾಡಿದರೆ ನನಗಂತೂ ಭಯಾನೇ ಆಗುತ್ತೆ ಹೆಗಡೆ ಅಂತ ಡಾಕ್ಟರು ಹೇಳಿದಾಗ ಇವರ ತಲೇ ಒಳಗೆ ಈ ಕಾಯಿಲೆ ವಿಚಾರ ಹುಳದ ಹಂಗೆ ಕೊರೀತಾ ಐತಿ ಅನಿಸಿ, ಒಬ್ಬ ವೈದ್ಯನಾದವ ತನ್ನ ಪಾಲಿಗೆ ಬಂದ ಕೆಲಸದ ಬಗೀಗೆ ಇವರಷ್ಟು ಕಾಳಜಿ ವಹಿಸಿದ್ದರೆ ದೇಶದ ವೈದ್ಯಕೀಯ ಪರಿಸ್ಥಿತಿ ಇವತ್ತಿನ ಹಂಗೆ ಇರ್ತಿರ್ಲಿಲ್ಲ ಅನಿಸಿತು. ಇವರು ಮಾತಾಡತಾ ಅಂಗನವಾಡಿ ಹತ್ರ ಬಂದರೆ ಒಂದಕ್ಕೆ ಎರಡರಷ್ಟು ಜನ ಅಲ್ಲಿ ಅಲ್ಲಿ ನೆರೆದಿತ್ತು. ಕಾನ್ಲೆ ಮಾಸ್ತ್ಯನೂ, ಗಣಪತಿಯೂ ಹೆಗಡೆ ಹತ್ರ ಬದು ಈಗ ಏನು ಮಾಡಬಕು ಅನ್ನಾದೇ ತಿಳಿಯಾದಿಲ್ಲ. ಗಂಟೆ ಹನ್ನೊಂದಾಗತಾ ಬಂತು. ಇನ್ನೂ ಅವರು ಬರ್ಲೇ ಇಲ್ಲ ಅಂದರು. ’ಒಂದ್ ಕೆಲಸ ಮಾಡ್ತಿ. ಮಠಕ್ಕೆ ಹೋಗಿ ಬಿ.ಡಿ.ಓ. ಆಫೀಸಿಗೆ ಫೋನ್ ಮಾಡ್ರಿ. ಬರ್ತಾರಾ ಇಲ್ಲ ಅಂತ ಗೊತ್ತಾಗತೈತಿ’ – ಹೆಗಡೆ ಹೇಳಿದ. ಅವರಿಬ್ಬರೂ ಮಠಕ್ಕೆ ಓಡಿದರು. ಸೀನ್ವಾಸಂಗೂ ರಮೇಶಂಗೂ ಡಾಕ್ಟರನ್ನು ಪರಿಚಯ ಮಾಡ್ಸಾನ ಅಂದರೆ ಅವರಿಬ್ಬರೂ ಇರ್ಲೇ ಇಲ್ಲ. ಈ ನನ್ಮಕ್ಕಳು ಎಲ್ಲಿಗೋ ಕಂಬಿಕಿತ್ತರು ಅನಿಸಿತು. ಮೇಡಮ್ಮುಗಳ ಗುಂಪು ಸಂಭ್ರಮದಿಂದ ಅಂಗನವಾಡಿ ಮಕ್ಕಳಿಗೆ ಡ್ಯಾನ್ಸಿನ ವಸ್ತ್ರ ಉಡಸತ್ತಿದ್ದರು ಬಾಗಲು ಹಾಕ್ಯಂದು ಆ ಕೆಲಸ ಮಾಡಲಿ ಅಂತ ಅಂಗನವಾಡಿ ಮೇಡಮ್ಮಗೆ ಹೇಳಿ ಹೆಗಡೆ ಡಾಕ್ಟರ ಹತ್ರ ಮತ್ತೆ ಬರಲು ಒಬ್ಬ ಹುಡುಗ ಬಂದು ಸೂರಪ್ಪನೋರು ಬಂದಾರೆ ಸಾ. ಅಲ್ಲೀಗೆ ಬರಬಕಂತೆ – ಅಂದ. ಬನ್ನಿ, ಬನ್ನಿ ಅಂತ ಹೇಳತಾ ಡಾಕ್ಟರು ಹೆಗಡೇನ ಕರಕಂದು ಹೊಂಟರು. ಕಾರ್ಯಕ್ರಮಕ್ಕೆ ವೇದಿಕೆ ಮಾಡಿದ ಜಾಗದಿಂದ ಎಲ್ಡ್ ಮನೆ ಹಿಂದಕ್ಕೆ ಇದ್ದ ಒಂದು ಮನೆ ಕಟ್ಟೆ ಮ್ಯಾಲೆ ಎಂಟ್ ಹತ್ ಜನ ಗುಂಪಾಗಿ ನಿಂತಿದ್ದರು. ಇವರು ಅಲ್ಲಿಗೆ ಹೋಗಾಕ್ಕೂ ಇವರಿಗೆ ಜಾಗ ಮಾಡಿಕೊಟ್ಟು ಬೆಂಚಿನ ಮ್ಯಾಲೆ ಕೂತುಗೊಳ್ಳಾಕೆ ಹೇಳಿದರು. ಇವರು ಕುಂತ ಬೆಂಚಿಗೆ ಅಡ್ಡಬದೀಗೆ ಇದ್ದ ಮಣ್ಣುಕಟ್ಟೆ ಮ್ಯಾಲೆ ಬಿಳೀ ಪಂಚೆ, ಅಂಗಿ ತೊಟ್ಟ ಒಂದು ಬಡಕಲು ವ್ಯಕ್ತಿ ಅಗಲವಾದ ಲೆದರ್ ಬ್ಯಾಗ್ ನ ತೊಡೇ ಮ್ಯಾಲೆ ಇಟ್ಟಗೆಂದು, ಅದರ ಮ್ಯಾಲೆಲ್ಲಾ ಎಂತೆಂಥೆದೋ ಪ್ರಿಂಟೆಡ್ ಫಾರಮ್ಮುಗಳನ್ನು ಹರಡಿಕೆಂದು, ಅದರೊಳಗೇ ಒಂದನ್ನ ಒಬ್ಬ ಮುದುಕರಿಗೆ ಏನೇನೋ ಪ್ರಶ್ನೆ ಕೇಳತಾ ತುಂಬುಸ್ತಿತ್ತು. ಒಂದು ಫಾರಮ್ಮು ತುಂಬಿಸಿದ ಮ್ಯಾಲೆ ತನ್ನ ಪೆನ್ನಿನ ಕ್ಯಾಪು ಹಾಕಿದ ವ್ಯಕ್ತಿ ’ನಮಸ್ಕಾರ ಡಾಕ್ಟರಿಗೆ’ ಅಂತು. ಡಾಕ್ಟರು ಮರುನಮಸ್ತೆ ಹೇಳಿ ಅವರಿಗೆ ಹೆಗಡೆ ಪರಿಚಯ ಮಾಡಿಸಿಕೊಟ್ಟರು. ಹುಡುಗ ಹೇಳಿದ: ಸೂರಪ್ಪನವರು ಅಂತಲೂ, ಅವರು ವೃದ್ಧಾಪ್ಯ ವೇತನ ಬರಾ ಹಂಗೆ ಮಾಡಿಸಿಕೊಡತಾರೆ ಅಂತಲೂ, ಹಂದಿಗೋಡು ಕಾಯಿಲೆ ಆದವರಿಗೂ ಸರ್ಕಾರದಿಂದ ದೊರೆಯುವ ಸೌಲಭ್ಯ ಇದೆ ಅಂತಲೂ, ಆ ಕೆಲಸವನ್ನು ಅವರು ಮಾಡ್ತಾರೆ ಅಂತಲೂ ಗೊತ್ತಾತು. ಹಂದಿಗೋಡು ವಾಸಿಗಳಾದ ಇವರಿಗೆ ಮುನ್ನೂರು ಅಡಕೆ ಮರಗಳು ಜೀವನಾಧಾರಕ್ಕೆ ಆಸ್ತಿ ಅಂತ ಕೊನೀಗೆ ತಿಳದು ಬಂತು. ಇವರಿಗೆ ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತಿ ಐತಿ ಅಂತ ಅವರು ಮಾಡುತಿರುವಂಥಾ ಕೆಲಸ ನೋಡಿದರೆ ಅನಸತೈತಿ. ಡಾಕ್ಟರೇ ಇವನು ಹಂದಿಗೋಡು ಕಾಯಲೇ ಪೇಶೆಂಟಾ ನೋಡ್ರಿ ಅಂತ ಒಬ್ಬ ಮುದುಕನ್ನ ಸೂರಪ್ಪನೋರು ಡಾಕ್ಟರಿಗೆ ತೋರಿಸಿದರು. ಡಾಕ್ಟರು ಅಷ್ಟು ದೂರ ನಡಿ ನೋಡೋಣ ಅಂತ ಮುದುಕರಿಗೆ ಹೇಳಲು ಅವನು ನಡೆದನು. ಡಾಕ್ಟರು ಇಲ್ಲ ಅಂದವರು ಸೂರಪ್ಪನೋರ ಮುಖ ನೋಡಿದರು. ಸರಿ, ಇವನಿಗೆ ಸುಮಾರು ಅರವತ್ತು ವರ್ಷ ಆಗಲಿಲ್ಲವಾ? ಅಂತ ಸೂರಪ್ಪನೋರು ಕೇಳಿದ್ದಕ್ಕೆ ಡಾಕ್ಟರು ಮುದುಕನ ಮುಖ ನೋಡಿ, ಆಗಿದೆ ಇವರಿಗೆ ವೃದ್ಧಾಪ್ಯ ವೇತನ ಬರಾ ಹಂಗೆ ಮಾಡಬೋದು ಅಂದರು. ಇತ್ತ ಬದೀಗೆ ಇವರ ಕೆಲಸ ಹಿಂಗೆ ನಡೆದಿರಲು ಅತ್ತ ಬದೀಗೆ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟವರಿಗೆ ಚಡಪಡಿಕೆ ಸುರುವಾಗಿಬಿಟ್ಟಿತ್ತು. ಇವರು ಕುಂತ ಕಟ್ಟೇ ಹೊರಗೆ ಓಡಾಡಾ ಜನರ ನೆಳ್ಳು ಗಿಡ್ಡಕ್ಕಾಗಿತ್ತು. ಬಿಸಲು ಸುಡುತ್ತಿತ್ತು. ಗಂಟೆ ಹನ್ನೆಲ್ಡಾಗತಾ ಬಂದರೂ ಬರಬೇಕಾದಂತ ದೊಡ್ಡ ಮನುಷ್ಯಾರು ಯಾಕೆ ಬರಲಿಲ್ಲ ಅಂತ ಪ್ರಶ್ನೆ ಆಗಿ ಅವರ ಮ್ಯಾಲೆ ಸಿಟ್ಟು ಬರಾದಕ್ಕೆ ಸುರುವಾತು. ಕೆಳದಿ ಮತ್ತು ನಮ್ಮೂರ ಮೇಡಮ್ಮುಗಳು ಇವರ ಕೂತಲ್ಲಿಗೆ ಬಂದು ನಾವು ಕಾರ್ಯಕ್ರಮ ಸುರು ಮಾಡೋಣಾರೀ, ಎರಡು ಗಂಟೆಗೆ ನಮ್ಮ ಸೂಪರ್ ವೈಸರಿಗೆ ಹೋಗಲೇಬೇಕಾಗಿದೆ ಅಂದರು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಸೀನ್ವಾಸನಂತೂ ಕೋಪದೊಳಗೆ ಅದ್ದಿ ತೆಗೆದಿಟ್ಟಂತೆ ಇದ್ದ! ಟೈಮು ಕೀಪಪ್ಪು ಮಾಡಾ ಬುದ್ಧಿ ಇಲ್ಲ ಅಂದರೆ ಏನರ್ಥ. ನಾವು ಕಾರ್ಯಕ್ರಮ ಸುರು ಮಾಡಾನ ಅವರು ಬಂದರೆ ವಾಪಾಸು ಹೋಗಲಿ ಅಂದ. ಜನರ ಹೊಟ್ಟೆ ಚುರುಚುರು ಅನ್ನಾ ಈ ಹೊತ್ತಿನಾಗೆ ಇವರಿವರು ಕಟ್ಟೆ ಹೊರಾಗೆ ನಿಂತು ಏನು ಚಕಮಕಿ ನಡೆಸಿದರಯ್ಯ ಅಂತ ಡಾಕ್ಟರು ಅಲ್ಲಿಗೆ ಓಡಿ ಬಂದು ಏನು ಏನು ಅಂದರು. ಅವರಿಗೆ ವಿಷಯ ಹೇಳಲು ಸೀನ್ವಾಸನ ಕೋಪಕ್ಕೆ ನೀರು ಚಿಮಕಿಸಾ ಹಂಗೆ ಮಾತಾಡಿದರೂ ನಾವು ಕರದಂತವರು ಅಧಿಕೃತವಾಗಿ ಬರಾದಿಲ್ಲ, ನೀವು ಕಾರ್ಯಕ್ರಮ ಮುಂದುವರೆಸಿ ಅಂದರೆ ಮಾತ್ರ ಸೀನ್ವಾಸ ಹೇಳಾ ಹಂಗೆ ಮಾಡಬೋದೇ ಹೊರತು ಈ ಹೊತ್ತಿನಾಗೆ ಹಂಗೆ ಮಾಡಿದರೆ ಅದು ಊರ ಮರ್ಯಾದಿ ಪ್ರಶ್ನೆ ಆಗತೈತಿ ಅನ್ನಾದು ಹೆಗಡೆ ವಾದ. ಸುಮಾರು ಅರ್ಧ ಗಂಟೆ ವಾದ ವಿವಾದ ನಡೆದು ಕೊನೆಗೂ ಯಾರೂ ಬರದೇ ಇದ್ದರೂ ಇಲ್ಲ, ಇಲ್ಲಿ ಸೇರಿದಂತಾ ಜನರ ಸಲುವಾಗಿ ಕಾರ್ಯಕ್ರಮ ಪ್ರಾರಂಭ ಮಾಡಾದು ಅಂತ ತೀರ್ಮಾನ ಮಾಡಿದ ಮಾಲೆ ಅಧ್ಯಕ್ಷರು ಮತ್ತು ಅತಿಥಿಗಳು ಯಾರು ಅಂತ ಸಮಸ್ಯೆ ಆಗಿಬಿಟ್ಟಿತು. ಹೆಗಡೆ ಮೈಕಿನ ಹತ್ತಿರ ಹೋಗಿ ಕಾರ್ಯಕ್ರಮ ಶುರು ಮಾಡಾ ವಿಚಾರ ಹೇಳಿ ಡಾಕ್ಟರು ದಂಪತಿಗಳು ವೇದಿಕೆ ಮ್ಯಾಲೆ ಬರಬಕು ಅಂದಾಗ ಅಧ್ಯಕ್ಷರು ಯಾರು ಅನ್ನಾ ಸಮಸ್ಯೆ ಸೀನ್ವಾಸಂಗೆ ಜಾಸ್ತಿ ಆಗಿ ಹೆಗಡೆ ತಾವ ಓಡಿ ಬಂದು ಕೆಳದಿಪುರದ ಕನ್ನಪ್ಪ ಬಂದಿದಾರೆ. ಅವರ್ನೆ ಮಾಡಾನ ಅಂದ. ಡಾಕ್ಟರು ದಂಪತಿಗಳನ್ನ ಅತಿಥಿಗಳನ್ನಾಗಿ ಮಾಡಿ ಕನ್ನಪ್ಪನೋರನ್ನ ಅಧ್ಯಕ್ಷರು ಅಂತ ಸಭೆಗೆ ಹೆಗಡೆ ಅಂದಾಗ ಆ ಮನಷಾ ನಾ ಬ್ಯಾಡರಿ, ನೀವೇ ಅಗರಿ ಅಂತ ಹೆಗಡೆ ಕೈ ಹಿಡದೆಳದು ಆ ಕುರ್ಚಿ ಮ್ಯಾಲೆ ಕೂರುಸಾಕ್ಕೆ ಸುರುಮಾಡಿದ. ಹೆಗಡೆ ಸ್ವಲ್ಪ ಕಟ್ಟಾಗಿ ನೀವು ನಮಗೆಲ್ಲಾ ಹಿರೇರು, ನಿಮ್ಮೆದುರೀಗೆ ನಂಗೆ ಆ ಪದವಿ ಬ್ಯಾಡ, ಕೂತ್ಕಳ್ಳರಿ ಅನ್ನಲು ಕನ್ನಪ್ಪನೋರು ಕುಂತರು. ಬೆಂಚಿನ ಮ್ಯಾಲೆ ಕೂತುಗಳಾಕೆ ಬಂದ ಹಂದಿಗೋಡು ಸೂರಪ್ಪನೋರನ್ನು ಖಾಲಿ ಇದ್ದ ಮತ್ತೊಂದು ಕುರ್ಚಿ ಮ್ಯಾಲೆ ಕುರಿಸಿ ವೇದಿಕೇನ ತುಂಬಲು, ರಾಜಪ್ಪನ ಸ್ವಾಗತ ಭಾಷಣದಿಂದ ಕಾರ್ಯಕ್ರಮ ಸುರುವಾತು. ಅಪರಾಹ್ನ ದಾಟಿ ಮಧ್ಯಾಹ್ನ ಮೂರೂವರೆ ಗಂಟೆಗೆ ಹೆಗಡೆ ಮಾಡಿದ ವಂದನಾರ್ಪಣೆ ನಂತರ ಮುಗತ್ತು.

ಕಾರ್ಯಕ್ರಮ ನಡೀಬಕಾರೆ ಸಭೇಗೆ ಅಡ್ಡಾ ಇಟ್ಟಿದ್ದ ಬೆಂಚಿನ ತುಂಬ ಕೂತ ಮೇಡಮ್ಮುಗಳ ಗುಂಪಿನಾಗೆ ಉದ್ದ ಜಡೆ ಮೇಡಮ್ಮು ಹೆಗಡೇನ ಹೆಂಗೆ ನೋಡತಿದ್ದಳು ಅನ್ನಾದು ಇಲ್ಲಿ ಅಪ್ರಸ್ತುತ.

ಗಂಗಾಧರಪ್ಪ, ಮೂಲೆಮನೆ ವೆಂಕಪ್ಪ, ಸೋಮನಾಥಯ್ಯ ಇತ್ಯಾದಿ ಜನರಿಗೆ ಶಾಸಕರು ಮತ್ತು ಬಿ.ಡಿ.ಓ ಬರ್ನಲ್ಲ ಅನ್ನೋದು ಖುಷಿ ಕೊಟ್ಟ ಸಂಗತಿ ಆಗಿತ್ತು ಅಂತ ಹೇಳಾದು ಅಷ್ಟು ಸುಲಭದ ಕೆಲಸಾ ಅಲ್ಲ. ಅಲ್ದೆ ಕತೆ ಹೇಳಾ ಈ ಕಲೆಗಾರಿಕೇಗೆ ಸೂಕ್ತವೂ ಅಲ್ಲ. ಯಾಕೇ ಅಂದರೆ ಅವರು ಹಂಗೆ ಬಾಯೊಡದು ಹೇಳಲೇ ಇಲ್ಲ. ಶಾಸಕರು, ಬಿಡಿ‌ಓ ಸಾಹೇಬರು, ಜಯಂತ ಎಲ್ಲಾರೂ ಬಂದು ಭರ್ಜರಿ ಕಾರ್ಯಕ್ರಮ ಆಗಿದ್ದರೆ ಕಾರ್ಯಕ್ರಮ ನಡೆಸಿದೋರಿಗೆ ಕೋಡು ಬರತಿತ್ತು. ಈಗ ಆ ಅವಕಾಶ ಇಲ್ಲ ಅಂತ ಸಂತೋಸಾಗಿತ್ತು ಅನ್ನಾದು ಮೇಲು. ರಾಜಪ್ಪ, ಉಮೇಶ ಇತ್ಯಾದಿ ಹುಡುಗರು ತಮ್ಮ ಹಳ್ಳೀಗೆ ಕರೆಸಲೇಬೇಕು ಅಂದುಕೊಂಡಿದ್ದ ಶಾಸಕರಿಗೆ ವಿಶ್ವಕನ್ನಡ ಮೇಳದಲ್ಲಿ ಕಾರ್ಯಕ್ರಮವಿತ್ತು. ಬಿಡಿ‌ಓ ಅವರಿಗೂ ಸಾಗರದಲ್ಲೇ ಮೀಟಿಂಗು, ಅದು ಇದು ಅಂತ ಕಾರ್ಯಕ್ರಮವಿತ್ತು. ಹೀಗೆ ಇನ್ನುಳದೋರಿಗೆ ಅವರವರದ್ದೇ ಆದ ಕಾರ್ಯಕ್ರಮಗಳಿದ್ದವು.

ಕಾಯಿಲೆ

ಸೋಮನಾಥಯ್ಯ ಹೆಗಡೇನ ತನ್ನ ಮನೀಗೆ ಬರ್ಲಿ ಅಂತ ಕರೆ ಕಳಿಸಿದ. ಹೆಗಡೆ ಬಂದ ನಂತರ ನೋಡಯ್ಯ, ನಾಳೆ ನೀರಾವರಿ ಇಲಾಖೀಗೆ ಇಬ್ಬರೂ ಹೋಗಬಕು. ತೂಬು ರಿಪೇರಿ, ಹೂಳು ತೆಗೆಸಾದು ಮುಂತದ್ದು ಮಾಡಿಸಿಕೊಡಿ ಅಂತ ಇವತ್ತು ರಾತ್ರಿ ಅರ್ಜಿ ತಯಾರು ಮಾಡು ಅಂದ. ಅರ್ಜಿ ತಯಾರು ಮಾಡಿಕೆಂದು ಬೆಳಿಗ್ಗೆ ಹನ್ನೊಂದು ಘಂಟೆ ಬಸ್ಸಿಗೆ ಸಾಗರಕ್ಕೆ ಹೋಗಿ ಇಬ್ಬರೂ ನೀರಾವರಿ ಇಲಾಖೀಗೆ ಹೊಂಟರು. ಸಾಗರದ ಗಣಪತೀ ದೇವಸ್ಥಾನದ ಕೆರೇರಿ ದಾಟಿ ನಡೆದರು. ಸಾಗರ ಪ್ಯಾಟೆ ತುದೀಲಿ, ಶಿವಮೊಗ್ಗ ರಸ್ತೆ ಪಕ್ಕದಾಗೆ ಇರಾ ಟಿ.ಬಿ. ಕೆಳಗೆ ಈ ನೀರಾವರಿ ಇಲಾಖೆ ಇದ್ದಿದ್ದು ನಡೀಲಾಗದ ಮನುಷಾರಿಗೆ ಬ್ಯಾಸರದ ಸಂಗ್ತಿ. ನಮ್ಮ ಕೆಲಸ ಆಗಬಕು ಅಂದರೆ ಸುಡುಗಾಡಿಗಾದರೂ ಹೋಗಿಬರಬಕು ಮಗನೆ ಅಂತ ಶ್ರೀಧರ ಹೆಗಡೆ ಮನಸು ಹೇಳ್ತು. ಅವರು ನಡೀತಿದ್ದ ಓಲ್ಡು ಬಿ. ಹೆಚ್. ರಸ್ತೆ, ನ್ಯೂ ಬಿ. ಹೆಚ್. ರಸ್ತೇನ ಸೇರಿ ಶಿವಮೊಗ್ಗದ ಹಾದಿ ಹಿಡೀಬಕು ಅಂತಿದ್ದಂಗೇ ಎಡಬದೀಲಿ ಒಂದು ಮನೆ ಗ್ವಾಡೇಲಿ ಹಂದಿಗೋಡು ಕಾಯಿಲೆ ಬಗೀಗಿನ ಡಾಕ್ಟರಾದ ದಂಪತಿಗಳಿಬ್ಬರ ಹೆಸರೂ ದೊಡ್ಡಕ್ಷರದಾಗೆ ಗೋಚರಿಸಿತು. ಸೋಮನಾಥಯ್ಯಂಗೆ ಬೋರ್ಡು ತೋರಿಸಿ ಡಾಕ್ಟರ ಮನೆ ಇದೇ ನೋಡು ಅಂದ. ಅವನು ತನ್ನ ಬೊಕ್ಕು ತಲೇನ ಆಡಿಸಿ ಸುಮ್ಮನಾದ. ಡಕ್ಟರು ಮನೀಗೆ ಬೀಗ ಹಾಕದೇ ಇದ್ದಿದ್ದರೆ ಶ್ರೀಧರ ಹೆಗಡೆ ಅವರನ್ನು ಮಾತಾಡಿಸಿ ಬರತಿದ್ದ.

ನಾಕು ದಿನದ ನಂತರ ಬೆಳೆಗ್ಗೆ ಸಾಗರಕ್ಕೆ ಹೋದವನು ತನ್ನ ಕೆಲಸಾ ಮುಗಿಸಿ ಡಾಕ್ಟರ ಮನೇಕಡೆ ಹೋದ. ಬಾಗಲು ತೆಗೆದಿತ್ತು. ಹರಬದೀ ಕ್ವಾಣೇಲಿ ಕುಂತಿದ್ದ ಡಾಕ್ಟರು ಶ್ರೀಧರನ್ನ ಕಂಡೋರು ಸಂತೋಷದಿಂದ ಒಳಗೆ ಕರದು ಕೂರಿಸಿ ಮಾತಾಡಿಸಿದರು. ನೀವು ಬಂದದ್ದು ಬಹಳಾ ಸಂತೋಷ ಆತು ಶ್ರೀಧರ್, ಎರಡು ದಿನದಿಂದ ನಮ್ಮ ತಲೆ ಎಷ್ಟು ಬಿಸಿ ಆಗಿದೆ ಅಂತ ಹೇಳಲಿಕ್ಕೆ ಆಗೋದಿಲ್ಲ ಅಂತ ಡಾಕ್ಟರು ಹೇಳ್ತಿರುವಾಗ ಅವರ ಹೆಣ್ತಿ ಡಾ. ವಾಣಿಶ್ರೀ ರೂಮಿನೊಳಗೆ ಬಂದು ಶ್ರೀಧರನ್ನ ನೋಡಿ ನಕ್ಕು, ಅವರೂ ಮಾತು ಕೇಳತಾ ಕುಂತರು. ಡಾಕ್ಟ್ರು ಅರೆಕ್ಷಣ ಕಣ್ಣುಮುಚ್ಚಿ ಮತ್ತೆ ಕಣ್ ಬಿಟ್ಟರು. ಹಂದಿಗೋಡು ಕಾಯಿಲೆ ಆದವರನ್ನ ಸಾಗರಕ್ಕೆ ಕರಕಂದು ಬಂದು ಸರ್ಕಾರಿ ಆಸ್ಪತ್ರೇಗೆ ಸೇರಿಸಿ, ಅಲ್ಲಿ ಅವರಿಗೆ ಚಿಕಿತ್ಸೆ ಮಾಡ್ಸಾ ವ್ಯವಸ್ಥೆ ಮಾಡಿದ್ದರು. ಮುಖ್ಯಸ್ಥನಾದ ವೈದ್ಯ, ಈ ಡಾಕ್ಟರು ಕರೆತಂದ ರೋಗಿಗೆ ಆಸ್ಪತ್ರೇಲಿ ಜಾಗ ಇದ್ದರೂ ಇಲ್ಲ ಅಂತ ಜಗಳ ಮಾದಿದ. ಅದಕ್ಕೆ ಸಿಟ್ಟು ಬಂದ ಡಾಕ್ಟಾರು ತಾನೂ ಖಾರವಾಗಿ ಬಯ್ದು ಒಂದು ಚಿಕ್ಕ ಗಲಾಟೆಯೇ ನಡೆದುಹೋಯ್ತು ಅನ್ನಾದೂ ಒಟ್ಟಿನಲ್ಲಿ ಸಾರಾಂಶ. ಇದನ್ನೆಲ್ಲಾ ಸಂಕ್ಷಿಪ್ತವಾಗಿ ಹೇಳಿ ಮತ್ತೆ ಅದರ ಬಗ್ಗೆ ಯೋಚನೆ ಮಾಡಿ ಯಾಕೆ ತಲೆಕೆಡಿಸಿಕೊಳ್ಳೋದು. ವಾಣಿಶ್ರೀ, ಸ್ವಲ್ಪ ಕಾಫಿ ಮಾಡು ಅಂದವರೇ ಹೆಗಡೆ ಕಡೆ ತಿರುಗಿ ನಿಮ್ದೂರ ಕಡೆ ಏನು ವಿಶೇಷ ಹೇಳಿ ಎಂದು ಮುಗುಳ್ನಗುತ್ತ ಕೇಳಿದರು. ನಮ್ಮೂರ ಸುತ್ತಮುತ್ತಲ ಹಳ್ಳೀಲಿ ಹಂದಿಗೋಡು ಕಾಯಿಲೆ ಆದದ್ದು ಒಂದು ವಿಶೇಷ ನೋಡ್ರಿ ಹೆಗಡೆ ಹೇಳಿದ. ಹೌದೇನ್ರೀ – ಅಂತ ನಗತಾ ಅಂದ ಡಾಕ್ಟರು ಸಾಹೇಬರು ಕುರ್ಚಿಯಿಂದ ಎದ್ದು ಹೆಗಡೆ ಬೆನ್ನು ತಟ್ಟಿ, ರೂಮಿನ ಕಿಟಕಿಯಿಂದ ರಸ್ತೆ ಕಡೆ ನೋಡತಾ ಅದು ತುಂಬಾ ಕೆಟ್ಟ ಕಾಯಿಲೆ ಶ್ರೀಧರ್, ಅಂತ ಹೇಳತಾ ಯೋಚನಾಮಗ್ನರಾಗಿ ಮತ್ತೆ ತಮ್ಮ ಕುರ್ಚಿ ಮ್ಯಾಲೆ ಕುಂತರು. ದೃಢಕಾಯರಾಗಿ, ಕೆಂಪು ಮೈಬಣ್ಣದ ಡಾಕ್ಟರು ಬಾಳಾ ಭೂಷಣವಾಗಿ ಹೆಗಡೆ ಕಣ್ಣಿಗೆ ಕಂಡರೆ, ಮನಸಿನಾಗೆ ಹಂದಿಗೋಡು ಕಾಯಿಲೆ ಆಗಿ ಕೈಕಾಲು ಸೆಣತು, ಸೊಟ್ಟ ಆಗಿರಾ ಹುಡುಗರು, ದೊಡ್ಡವರು ನಮ್ಮೂರ ರಸ್ತೆ ಓಡಾಡಾ ದೃಶ್ಯ ಮೂಡಿತು. ಅಷ್ಟು ಹೊತ್ತಿಗೆ ಡಾ. ವಾಣಿಶ್ರೀ ಅವರು ಕಾಫಿ ತಂದುಕೊಟ್ಟರು. ಶ್ರೀಧರ್ ಕಾಫಿ ಕುಡೀತಾ ಹಂದಿಗೋಡು ಕಾಯಿಲೆ ಬರಾದಕ್ಕೆ ಮುಖ್ಯ ಕಾರಣ ಏನು ಅಂತ ಪ್ರಶ್ನೆ ಒಗೆದ. ಇದರ ಬಗ್ಗೆ ಬಾಳಾ ವಿವಾದ ಇದೆ. ಅವರ ಆಹಾರ, ವ್ಯವಹಾರ ಬಹಳಾ ವಿಚಿತ್ರವಾಗಿದೆ. ಈಗ ಹಂದಿಗೋಡು ಕಾಯಿಲೆ ಕಾಣಿಸಿಕೊಂಡೋರ ಪೈಕೆ ಶೇಕಡಾ ಎಂಭತ್ತರಷ್ಟು ಜನ ಕೂಲಿ ಮಾಡಿ ಬದಕಾ ಜನರು. ಹಗಲೆಲ್ಲಾ ದುಡದು ಸಂಜೀಗೆ ಹೆಂಡಾ ಕುಡದು ಬಿದ್ದಿರ್ತಾರೆ. ಅವರು ಪೌಷ್ಠಿಕ ಆಹಾರ ಸರಿಯಾಗಿ ತಿನ್ನೋದಿಲ್ಲ ಅಂತ ಡಾಕ್ಟರು ಹೇಳಿದರು. ಕೋಳಿ, ಕುರಿ, ಏಡಿ, ಮೀನು ಮುಂತಾದವು ಪೌಷ್ಠಿಕ ಆಹಾರ ಅಲ್ವಾ ಸಾರ್ ಅಂತ ಶ್ರೀಧರ ಹೆಗಡೆ ಪ್ರಶ್ನೆ ಮಾಡಿದ. ಹೌದು, ನಿಮ್ಮ ಮಾತು ಒಪ್ಪತೇನೆ, ಆದರೆ ನೀವು ಹೇಳಾ ಈ ಆಹಾರ ಅವರು ಉಪಯೋಗ ಮಾಡಾದು ವರ್ಷದಾಗೆ ಬೆರಳು ಎಣಸಾ ಅಷ್ಟು ದಿನ ಮಾತ್ರ. ಉಳದ ದಿನ ಗಂಜಿ ಕುಡದು ಬದಕ್ತಾರೆ. ಎಷ್ಟೋ ಹಳ್ಳಿ ತಿರುಗಿ ಅವರ ಜೀವನ ಕ್ರಮ ಅಭ್ಯಾಸ ಮಾಡಿದ ನಮಗೆ ಈಗಾಗಲೇ ಅನುಭವಕ್ಕೆ ಬಂದಿದೆ ಶ್ರೀಧರ ಹೆಗಡೆ, ಅವರಲ್ಲಿ ಬಡತನ ಎಷ್ಟಿದೆ ಅಂದರೆ ಕೆಲವು ಕುಟುಂಬದವರು ದಿನದಾಗೆ ಒಂದೇ ಹೊತ್ತು ಊಟ ಮಾಡಿ ಬದಕ್ತಾ ಇದಾರೆ ಅಂತ ಹೇಳತಾ ತಮ್ಮ ಹೆಣ್ತೀಕಡೆ ನೋಡಲು ಅವರು ಬೇಸರದಿಂದ ಹೌದೆಂದು ತಲೆ ಆಡಿಸಿ ಅಪಾರ ದುಃಖ ವ್ಯಕ್ತಪಡಿಸಿದರು. ಹಂಗಾದರೆ ಆಹಾರವೇ ಮುಖ್ಯ ಕಾರಣ ಅಂತ ನೀವು ಹೇಳ್ತೀರಾ? ಹೆಗಡೆ ಕೇಳಿದ. ಹಾಗೆ ಹೇಳಲಿಕ್ಕೂ ಬರೋದಿಲ್ಲ ನೋಡಿ, ಅವರು ಬುಕ್ಕನ್ನ ತಿಂತಾರೆ, ಬುಕ್ಕ ಅಂದರೆ ಗೊತ್ತಲ್ಲ, ಮಸಿಮಂಗ. ಅದನ್ನು ಬೇರೆ ಜನಾಂಗದವರು ತಿನ್ನಾದು ಇದುವರಿಗೆ ನಾವು ನೋಡಿಲ್ಲ. ಇದರ ಬಗೀಗೆ ಪ್ರಯೋಗ ಮಾಡಿದಾಗ ನಮಗೆ ಬಲವಾದ ಆಧಾರ ಏನೂ ಸಿಗಲಿಲ್ಲ. ಒಂದು ವರ್ಷದ ಹಿಂದೆ ಹೈದರಾಬಾದಿನಿಂದ ಒಬ್ಬ ಡಾಕ್ಟರು ಬಂದರು. ಈ ಕಾಯಿಲೆ ಬಗ್ಗೆ ರಿಸರ್ಚ್ ಮಾಡಿ ಇದು ಜೆನೆಟಿಕೆ ಉತ್ಪತ್ತಿಗೆ ಸಂಬಂಧಪಟ್ಟ ವಂಶವಾಹಿನಿ ಅಂತ ಹೇಳಿದಾರೆ. ನಾವು ಈಗಾಗಲೇ ಅಭ್ಯಾಸ ಮಾಡಿದ ಪ್ರಕಾರ ಅವರು ಹೇಳೋ ಪಾಯಿಂಟ್ ಸರಿ ಅನಿಸ್ತದೆ. ಆದರೆ ಮೊದಲು ಇದು ಹೇಗೆ ಪ್ರಾರಂಭ ಆಯ್ತು ಅನ್ನೋದು ನಮಗೆ ಬೇಕು. ಅದಕ್ಕಾಗಿಯೇ ನಾವು ಕಷ್ಟಪಡ್ತಾ ಇದ್ದೇವೆ. ನಾವು ಹಳ್ಳಿ ತಿರುಗಿ ಕಷ್ಟಪಟ್ಟು ರೋಗಿಗಳನ್ನ ಪತ್ತೆಹಚ್ಚಿ ಚಿಕಿತ್ಸೆ ನಡೆಸೋಣ ಅಂತ ಇಲ್ಲಿಗೆ ಕರೆತಂದರೆ ಇಲ್ಲಿ ಮುಖ್ಯಸ್ಥರು ಅನ್ನಿಸಿಕೊಂಡವರಿಗೆ ಎಷ್ಟು ಸೊಕ್ಕು ಅಂತೀರಿ – ಅಂದರು. ಆ ಪ್ರಸಂಗದಿಂದ ಇವರಿಗೆ ಬಾಳಾ ನೋವಾಗಿದೆ ಅಂತ ಅವರ ಮಾತಿನಿಂದ ಹೆಗಡೆಗೆ ಗೊತ್ತಾತು. ನಮ್ಮ ತಾಲ್ಲೂಕಿನಾಗೆ ಸುರೂ ಆದ ಈ ಕಾಯಿಲೆ ಬಗೀಗೆ ಸರ್ಕಾರ ಗಮನಾ ಹರಸಿ ತಜ್ನರನ್ನು ಕಳಸಿ, ಈ ಕಾಯಿಲೆ ಮೂಲಾನ ಪತ್ತೆ ಹಚ್ಚಾಕ್ಕೆ ಬಾಳಾ ಶ್ರಮ ವಹಿಸ್ತಾ ಐತಿ ಅನ್ನಬಕಾರ ಹೆಗಡೇಗೂ ಈ ಕಾಯಿಲೆ ಬಗೀಗೆ ಕುತೂಹಲ ಶುರುವಾತು. ಇವತ್ತು ಒಂದು ಕುಟುಂಬದಾಗೆ ಕಾಣಿಸಿಕೆಂದ ಕಾಯಿಲೆ ನಾಳೆ ಹರಡತಾ ಎಲ್ಲಾರಿಗೂ ಬಂದುಬಿಟ್ಟರೆ ಹೆಂಗಪಾ ಅಂತ ಹೆದರಿಕೆ ಆತು. ಆಗ ದೇಶದೊಳಗೆಲ್ಲಾ ಕೈಕಾಲು ಡೊಂಕ ಆಗಿ ಸೊಟ್ಟಪಟ್ಟ ಓಡಾಡಾ ಮನುಷಾರೇ ಆಗಿಬಿಡತಾರಲ್ಲಪ್ಪ ಅನಿಸಿಹೋತು! ಹೊತ್ತು ಬಾಳಾ ಆತು ಡಾಕ್ಟರೆ, ನಾನು ಇನ್ನೊಂದ್ಸರಿ ಬರ್ತೇನೆ. ಈ ಕಾಯಿಲೆ ವಿಚಾರ ತಿಳಕಾಬಕು ಅಂತ ಹೇಳಿದ. ಕೂತ್ಗೊಳ್ಳಿ, ಹೋಗಬೋದು – ಅಂತ ಡಾಕ್ಟರು ಹೇಳಾದಕ್ಕೂ ಹಂದಿಗೋಡಿನ ಸೂರಪ್ಪನೋರು ಅಲ್ಲಿಗೆ ಬರಾದಕ್ಕೂ ಸರೀ ಆತು. ಡಾಕ್ಟರು ಹೇಳಿದ ಗಲಾಟೆ ವಿಚಾರದೊಳಗೆ ಸೂರಪ್ಪನೋರೂ ಭಾಗಿಗಳು ಅಂತಲೂ, ಹಂದಿಗೋಡು ಕಾಯಿಲೆಯಿಂದ ನರಳಾ ಜನರ ಬಗೀಗೆ ಸೂರಪ್ಪನೋರು ಬಾಳಾ ಕಾಳಜಿ ವಹಿಸ್ತಾರೆ ಅಂತಲೂ ಡಾಕ್ಟರು ಮತ್ತು ಸೂರಪ್ಪನೋರು ಆಡಿದ ಮಾತಿನಿಂದ ಗೊತ್ತಾತು. ಮೂಕ ಪ್ರೇಕ್ಷಕ ಆಗಿ ಅವರ ಮಾತು ಕೇಳತಾ ತೆಪ್ಪಗೆ ಕುಂತಿದ್ದ ಹೆಗಡೆ ನೋಡಿ ಸೂರಪ್ಪನೋರು ಮತ್ತೇನು ಶ್ರೀಧರ ಹೆಗಡೆ ಅಂತ ಹೇಳತಾ ತಮ್ಮ ಎಲೆ‌ಅಡಿಕೆ ಸಂಚಿ ತೆಗೆದು ಬಾಯಿಗೆ ಅಡಕೆ ಒಗದು ಕೇಳಲು, ಇವರ ಮಾತು ಮುಗತ್ತು ಅನಿಸಿ, ಏನಿಲ್ಲ ಮಾರಾಯರೆ ಅಂದ. ಈ ಡಾಕ್ಟರ ಸಾವಾಸ ಮಾಡಿ ನಾನೊಬ್ಬ ಉಪವಾಸ ಸಾಯತೇನೆ. ನಾನೊಬ್ಬ ಸಾಲ್ ಅಂತ ನೀವೂ ಇವರಿಗೆ ಗಂಟು ಬಿದ್ರಾ ಅಂತ ಹಾಸ್ಯದ ಚಟಾಕಿ ಒಗೆಯಲು ಅಲ್ಲಿ ಹಾಸ್ಯದ ಬದಲಾಗಿ ಬೇರೇನೋ ಕಂಡ ಹೆಗಡೆ ಸುಮ್ಮನೇ ನಕ್ಕು ಡಾಕ್ಟರ ಮುಖಾ ನೋಡಿದ. ಅವರೂ ನಕ್ಕು ಊಟದ ಹೊತ್ತಿನಾಗೆ ಹಿಂಗೆಲ್ಲಾ ಹೇಳಬೇಡ್ರಿ, ಬರ್ರಿ ಊಟ ಮಾಡೋಣ. ಆಗಲೇ ಗಂಟೆ ಎರಡಾಗಿ ಹೋಯ್ತು ಅಂತಂದರು. ಹೆಗಡೆ ದಾಕ್ಷಿಣ್ಯ ಮಾಡಿಕೊಳ್ಳದೆ ಮೇಲೇಳಲು ಸೂರಪ್ಪನವರೂ ಎದ್ದು ಎಲೆ ಅಡಕೆ ಉಗುಳಿದರು.

ಊಟ ಆದ ಮ್ಯಾಲೆ ಸೂರಪ್ಪನೋರು ಪುನಃ ಅಡಕೆ ಬಾಯಿಗೊಗದು, ಎಲೆ ತುದಿ ಬುಡ ಚೂಟಿ, ಚೊಕ್ಕ ಮಾಡಿ, ಅದಕ್ಕೆ ಸುಣ್ಣ ಹಚ್ಚಿ ಮಡಚಿ ಬಹಳಾ ನಾಜೂಕಾಗಿ ಬಾಯೊಳಗೆ ಇಟ್ಟುಗೊಳತಾ ಅಡಕೆ ಜೊತೆಗೇ ಒಂದು ದವಡಿಗೆ ಸೇರಿಸಿ ಜಗಿಯತೊಡಗಿದರು. ಆಮೇಲೆ ತಂಬಾಕು ತೆಗೆದು ಅಂಗೈಯಲ್ಲಿ ಇಟ್ಟು ಮತ್ತೊಂದು ಕೈ ಬೆರಳೆಂದ ಸುಣ್ಣ ತೆಗೆದು ಅದನ್ನು ತಿಕ್ಕಿ ತಿಕ್ಕಿ ಬಾಯೊಳಗೆ ಹಾಕಿ ರಸರಸವಾಗಿ ಮೆಲ್ಲುತ್ತಾ ಹೋದಂತೆ ಆ ಮನಷಾ ಹೆಗಡೆಗೆ ವಿಚಿತ್ರವಾಗಿ ಕಾಣತೊಡಗಿದ. ಈ ವ್ಯಕ್ತಿ ತಾವ ಏನೋ ಐತಿ ಅನಿಸತೊಡಗಿ ಹೆಗಡೇನೂ ಅವರ ತಾವ ಎಲೆ ಅಡಕೆ ಸಂಚಿ ಇಸಗಂದು ಕವಳ ಹಾಕತೊಡಗಿದ. ಅಷ್ಟು ಹೊತ್ತಿಗೆ ಒಳಗಿಂದ ಹೊರಬಂದ ಡಾಕ್ಟರು ಏನ್ರೀ, ನೀವೂ ಮುದುಕರ ಹಂಗೆ ಎಲೆ ಅಡಿಕೆ ಹಾಕಿಬಿಟ್ಟಿದ್ದೀರಲ್ಲ ಅಂತ ಹೆಗಡೇಗೆ ಅಂದರೆ ಅದರ ಎಫೆಕ್ಟು ಸೂರಪ್ಪನೋರಿಗೆ ಆಗಿ ಎಲ ಅಡಿಕೆ ರುಚಿಯ ಬಗೀಗೆ ಸ್ವಾರಸ್ಯವಾಗಿ ಮಾತಾಡತೊಡಗಿದರು. ಮುದುಕರಿಗೆ ಮಾತ್ರ ಎಲ ಅಡಿಕೆ ಸೀಮಿತಾ ಅಲ್ಲ, ನನ್ನಂಥಾ ಹುಡುಗರೂ ಎಲೆ ಅಡಕೆ ರುಚೀನ ಸವೀಬೋದು ಅಂತ ವಾದಿಸಿ ಡಾಕ್ಟರ ಎದುರಿಗೆ ಗೆದ್ದೆನೆಂಬ ಹೆಮ್ಮೆ ಸೂರಪ್ಪನೋರಿಗೆ ಆಗತಿದ್ದ ಹಾಗೆ ಹೆಗಡೆ ವಿಚಾರವನ್ನು ಹಂದಿಗೋಡು ಕಾಯಿಲೆ ಬಗೀಗೆ ಜಗ್ಗಿದ. ಇಷ್ಟು ಹೊತ್ತಿಗೆ ಮನೇಲಿ ಇರಬಕಾಗಿದ್ದ ಹೆಗಡೆ ಇನ್ನೂ ತಾನು ಈ ಡಾಕ್ಟರ ಮನೇಲೇ ಕುಂತಿದ್ದು ನೆನಪಾದಾಗ ಅವ್ವನ ತಾವ ಬೈಸಿಕೊಳ್ಳಾದು ತಪ್ಪಿದ್ದಲ್ಲ ಅನಿಸಿ ಊರಿಗೆ ಹೋಗಾ ಹೊತ್ತು ಮೀರಿದ ಮ್ಯಾಲೆ ಮಾಡಾದಾದರೂ ಏನು? ಬಿಸಿಲು ಇಳಾ ಮ್ಯಾಲೇ ಊರ ಕಡೆ ಹೊಂಟರಾತು ಅಂತ ಯೋಚಿಸಿದ. ಅಲ್ಲ ಸೂರಪ್ಪನೋರೆ, ನಿಮ್ಮೂರ ಜಟ್ಯಮ್ಮನಿಗೆ ಈಗ ಎಷ್ಟು ವರ್ಷ ಆಗಿರಬೋದು ಅಂತ ಡಾಕ್ಟರು ಕೇಳಿದ ಪ್ರಶ್ನೆಗೆ ಸುಮಾರು ನಲವತ್ತು ಅಂತ ಸೂರಪ್ಪನೋರು ಅಂದರು. ಅವಳಿಗೆ ರೋಗ ಕಾಣಿಸಿಕೊಂಡು ಎಷ್ಟು ವರ್ಷ ಆತು ಡಾಕ್ಟರ ಪ್ರಶ್ನೀಗೆ ಸುಮಾರು ನಾಲ್ಕೈದು ಅನ್ನಾದು ಸೂರಪ್ಪನೋರ ಉತ್ತರ. ಈ ಡಾಕ್ಟರ್ ಸಾಹೇಬರು ಮತ್ತು ತಜ್ನರೆಲ್ಲಾ ಈ ರೋಗದ ಬಗೀಗೆ ಇಷ್ಟೆಲ್ಲಾ ತಲೇ ಕೆಡಿಸಿಕೊಂಡಿರಬಕಾರೆ ಅದ್ರ ಬಗೀಗೆ ನಂಗೆ ಏನೂ ಗೊತ್ತಿಲ್ಲಲಪಾ ಅಂತ ಹೆಗಡೆಗೆ ಅನಿಸಿ, ನಾಚಿಕೆ ಆದಂಗಾತು. ಸಾರ್ ನಿಮ್ಮ ಹತ್ರ ಇರಾ ರಮೇಶ್ ಭಟ್ರ ರಿಪೋರ್ಟ್ ಕೊಡಿ. ಒಂದ್ಸರಿ ಕೂಲಂಕುಷವಾಗಿ ಎಲ್ಲಾ ನೋಡಿ ನಾನು ತಯಾರ ಮಾಡಿದ 89 ಕಾರಣಗಳ ಪಟ್ಟೀನ ನಿಮಗೆ ಕೊಡ್ತೇನೆ ಅಂತ ಸೂರಪ್ಪನೋರು ಅಂದಾಗ ಈ ಕಾಯಿಲೆ ಬಗೀಗೆ ಸೂರಪ್ಪನೋರು ಮಾಡಿರಾ ಕೆಲಸದ ಅರಿವು ಹೆಗಡೆಗೆ ಆತು. ರಮೇಶ್ ಭಟ್ ಅಂದರೆ ಯಾರು ಅಂಬೋ ಹೆಗಡೆ ಪ್ರಶ್ನೆಗೆ ಡಾಕ್ಟರು ಅವರೊಬ್ಬ ತಜ್ನರು ಅಂತಲೂ, ಅವರು ಒಮ್ಮೆ ಇಲ್ಲಿಗೆ ಬಂದು ಈ ಕಾಯಿಲೆ ಬಗೀಗೆ ಅಭ್ಯಾಸ ಮಾಡಿ ಸರ್ಕಾರಕ್ಕೆ ಒಂದು ರಿಪೋರ್ಟ್ ಕಳಿಸಿದಾರೆ ಅಂದರು. ಕಳೆದ ಮಳಗಾಲದಾಗೆ ಮೆಟಾಡೋರು, ಜೀಪು, ಕಾರು ಮುಂತಾದವು ತನ್ನೂರಿಗೆ ಬಂದು ಹೋದದ್ದು ಹೆಗಡೆಗೆ ನೆನಪಾತು. ಶ್ರೀಧರ್ ಅವರೇ, ರಮೇಶ್ ಭಟ್ ಅವರು ಇದನ್ನು ಜೆನೆಟಿಕ್ ಅಂತ ಹೇಳ್ತಾರೆ – ಅಂತ ಸೂರಪ್ಪನೋರು ಹೇಳತಿದ್ದಂತೆ ಡಾಕ್ಟರು ನಡೂಗೆ ಬಾಯಿ ಹಾಕಿ ಅವರು ಹೇಳೋ ಜೆನೆಟಿಕ್ ಅನ್ನೋ ಪಾಯಿಂಟನ್ನು ಸಂಪೂರ್ಣ ಒಪ್ಪಿಕೊಳ್ಳೋದು ಸದ್ಯಕ್ಕೆ ಸಾಧ್ಯ ಇಲ್ಲ ಸೂರಪ್ಪನೋರೇ, ನೋಡಿ, ನಿಮ್ಮೂರಲ್ಲೇ ಮರದ ಕೆಲಸ ಮಾಡಾ ಒಂದು ಕುಟುಂಬಕ್ಕೆ ಈ ಕಾಯಿಲೆ ಬಂದಿದೆ. ಈ ಕುಟುಂಬದವರಿಗೂ ಮತ್ತು ಈಗ ಕಾಯಿಲೆ ಅತಿಯಾಗಿ ಕಾಣಿಸಿಕೊಂಡಿರಾ ಕೂಲಿಕಾರರ ಕುಟುಂಬಗಳಿಗೂ ಹೆಣ್ಣು ಗಂಡು ಕೊಟ್ಟು ತಗೊಳೋ ವ್ಯವಹಾರವೇ ಇಲ್ಲ ಅಂದಾಗ ಸೂರಪ್ಪನೋರು ಸ್ವರ ಏರಿಸಿ ನಾನು ಅದನ್ನ ಪ್ರೂವ್ ಮಾಡ್ತೀನಿ. ಆದರೆ ನಾನು ಹೇಳೋದು ಅಪ್ಪನಿಗೆ ರೋಗ ಇದ್ದರೆ ಅವನ ಮಗನಿಗೂ ಇರುತ್ತೆ ಅನ್ನೋದನ್ನ. ಆದರೆ ಇಲ್ಲಿ ಪ್ರಶ್ನೆ ಅಪ್ಪನಿಗೆ ಈ ರೋಗೆ ಹೇಗೆ ಬಂತು ಅನ್ನುವುದು – ಅಂದರು. ಇವರಿಬ್ಬರ ನಡುಗೆ ಮಾತಿನ ಜಟಾಪಟಿ ಅತಿಯಾದದ್ದು ನೋಡಿ ಡಾ. ವಾಣಿಶ್ರೀ ಅವರು ಮುಗುಳ್ನಕ್ಕರು. ಅಯ್ಯೋ ದೇವರೇ! ಈಗಲೇ ಮಾನವನಿಗೆ ಅಂಟಿಕೊಂಡಿರಾ ಭಯಂಕರ ರೋಗಗಳ ಜೊತಿಗೆ ಮತ್ತೊಂದು ರೋಗ ಅಂಟಿಬಿಟ್ಟಿತಲ್ಲಾ ಅನಿಸಿತು. ನಿಮ್ ಹತ್ರ ಮಾತಾಡತಾ ಇದ್ದರೆ ಹೊತ್ತು ಹೋದದ್ದೇ ತಿಳಿಯೋದಿಲ್ಲ, ನಂಗೆ ಪೇಟೇಲಿ ಕೆಲಸಿದೆ. ಸಂಜೆ ಊರಿಗೆ ಹೋಗಬೇಕು ಅಂತ ಸೂರಪ್ಪನೋರು ಎದ್ದರು. ನಾನು ಹೊರಡತೇನೆ ಡಾಕ್ಟರೆ ಅಂತ ಹೆಗಡೇನೂ ಎದ್ದ, ಸೂರಪ್ಪನೋರಿಗೆ ಅರ್ಜಂಟಿದೆ. ಅವರು ಹೋಗಲಿ, ನಿಮಗೇನ್ರೀ ಅಂಥಾ ಅರ್ಜೆಂಟು. ಇರಿ ಹೋಗಬೋದು ಅಂತ ಡಾಕ್ಟರು ಹೇಳಿದ್ದರಿಂದ ಸೂರಪ್ಪನೋರು ಒಬ್ಬರೇ ತಮ್ಮ ಸೈಕಲ್ ಏರಿದರು. ಡಾಕ್ಟರ ಮನೆ ಚಿಕ್ಕ ಅಂಗಳದಾಗೆ ನಿಂತ ಬುಲೆಟ್ ನೋಡಿ ನಿಮ್ದಾ ಸಾರ್ ಅನ್ನಲು ಹೌದೆಂದರು. ಬನ್ನಿ ಕೂತುಗೊಳ್ಳುವ ಅಂದ ಡಾಕ್ಟರು ಡಾ. ವಾಣಿಶ್ರೀ ಅವರಿಗೆ ಕಾಫಿ ಮಾಡಲು ಹೇಳಿದರು. ಈಗಷ್ಟೇ ಊಟ ಆಗಿದೆ ಅಂದ ಹೆಗಡೆ ದಾಕ್ಷಿಣ್ಯದ ಮಾತಿಗೆ, ಈಗ ಹೇಳಿದರೆ ಇನ್ನು ಅರ್ಧ ಗಂಟೆಗೆ ತಂದುಕೊಡ್ತಾರೆ ಮೇಡಮ್ ಅವರು ಅಂತ ಚೇಷ್ಟೆ ಮಾಡಿದರು.

ಟೀಪಾಯಿ ಮೇಲಿದ್ದ ಡೆಕ್ಕನ್ ಹೆರಾಲ್ಡ್, ಸುಧಾ, ದಿ ವೀಕ್ ಮುಂತಾದ ಪತ್ರಿಕೆಗಳ ಮ್ಯಾಲೆ ಹೆಗಡೆ ಕಣ್ಣಾಡಿಸಲು ನಿಮ್ಮ ತಂದೆ ತಾಯಿ ಆರೋಗ್ಯವಾಗಿದಾರಾ? ಅಂತ ಡಾಕ್ಟರು ಕೇಳಿದರು. ಅದಕ್ಕೆ ಉತ್ತರ ಹೇಳಿದ ಹೆಗಡೆ ಸುಮ್ಮನಾಗಲು ಮತ್ತೆ ಡಾಕ್ಟರು ನೀವು ಬಿ. ಎ. ಮಾಡಿದ್ದು ಶಿವಮೊಗ್ಗದಲ್ಲಿ ಅಂದಿರಿ, ಸಾಗರದಲ್ಲೇ ಕಾಲೇಜಿದೆಯಲ್ಲ, ನೀವು ಅಲ್ಲಿಹೋಗಿದ್ದು ಯಾಕೆ? ಅಂತ ಕೇಳಿದರು. ಅಲ್ಲಿ ನನ್ನ ಹಿರೇ ಅಣ್ಣ ಶ್ರೀನಿವಾಸ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರು. ಅವರ ಜೊತೇಗಿದ್ದು ಅಲ್ಲೇ ಬಿ. ಎ. ಓದಿದೆ ಅಂದ ಹೆಗಡೆ. ಮುಂದೆ ಓದಬಹುದಿತ್ತಲ್ಲಾ ಎಂಬ ಡಾಕ್ಟರ ಮಾತಿಗೆ ನಮ್ಮ ತಂದೆಗೆ ವಯಸ್ಸಾಗತಾ ಬಂತು. ಆರೋಗ್ಯ ಸರಿ ಇರ್ತಿರ್ಲಿಲ್ಲ, ಮನೆ ಕಡೆ ತಂದೆ, ತಾಯಿ ಇಬ್ಬರೇ ಇದ್ದಿದ್ದರಿಂದ ಇಲ್ಲೂ ಒಬ್ಬರು ಬೇಕಾಗುತ್ತೆ ಅಂತ ಹೇಳಿದ. ಏನು ಕಾಯಿಲೆ ಇದೆ ನಿಮ್ಮ ತಂದೆಗೆ? ಅಂತ ಅವರು ಕೇಳಲಿ ಮಧುಮೇಹ, ನಿಶ್ಶಕ್ತಿ ಅಂದ. ನೋಡಿ ವಾರಕ್ಕೊಂದು ಸರಿನಾದರೂ ನೀವು ಅವರ ಮೂತ್ರ ಪರೀಕ್ಷೆ ಮಾಡಬೇಕು. ಸಕ್ಕರೆ ಅಂಶ ಅತಿ ಆಗೋದರಿಂದಲೂ ರೋಗಿ ಕೋಮಾ ಸ್ಟೇಜಿಗೆ ಹೋಗ್ತಾನೆ. ಸಕ್ಕರೆ ಅಂಶ ಕಮ್ಮಿ ಆಗೋದರಿಂದಲೂ ರೋಗಿ ಕೋಮಾ ಸ್ಟೇಜಿಗೆ ಹೋಗ್ತಾನೆ ಅಂದರು. ಅದು ಹೆಗಡೇಗೆ ಅರ್ಥ ಆಗದೆ ಮತ್ತೆ ವಿವರ ಕೇಳಿದ. ಈಗ ನಿಮ್ಮ ತಂದೆಗೆ ಅರ್ಧ ಪರ್ಸೆಂಟ್ ಸಕ್ಕರೆ ಅಂಶ ಹೆಚ್ಚಿದೆ ಅಂತ ಇಟ್ಕೊಳ್ಳಿ. ಅದಕ್ಕೆ ಸಂಬಂಧಪಟ್ಟ ಮಾತ್ರೆ ಉಪಯೋಗಿಸಿದರೆ ಅರ್ಧ ಪರ್ಸೆಂಟ್ ಕಮ್ಮಿ ಆಗುತ್ತೆ. ಸಕ್ಕರೆ ಅಂಶ ನಿಲ್ ಆದಾಗಲೂ ಅವರು ಮಾತ್ರೆ ತಿಂದರೆ ಅವರ ದೇಹದಲ್ಲಿ ಸಕ್ಕರೆ ಅಂಶಾ ಇರಬೇಕಾಗಿದ್ದಕ್ಕಿಂತ ಕಮ್ಮಿ ಆಗ್ತಾ ಹೋಗುತ್ತೆ. ಆಗಲೂ ರೋಗಿ ಕೋಮಾ ಸ್ಟೇಜಿಗೆ ಹೋಗಿಬಿಡ್ತಾನೆ. ರೋಗೀನ ಪರೀಕ್ಷೆ ಮಾಡಿ ಸಕ್ಕರೆ ಅಂಶ ಕಮ್ಮಿ ಆಗಿ ಕೋಮಾ ಸ್ಟೇಜಿಗೆ ಹೋಗಿದ್ದು ಗೊತ್ತಾದ ತಕ್ಷಣ ಅವರಿಗೆ ಸಕ್ಕರೆ ತಿನ್ನಿಸಬೇಕಾಗುತ್ತೆ. ಈ ರೋಗ ಆದರೆ ಎರಡೂ ಕಡೆ ಹರಿತವಾದ ಕತ್ತಿ ಇದ್ದ ಹಾಗೇ. ಆಚಿಗೆ ವಾಲಿದರೂ ಕತ್ತರಿಸುತ್ತೆ, ಈ ಕಡೆ ವಾಲಿದರೂ ಕತ್ತರಿಸುತ್ತೆ. ಅದಕ್ಕೇ ನಾನು ಹೇಳಿದ್ದು, ವಾರಕ್ಕೊಂದು ಸರಿ ಅವರ ಮೂತ್ರಾನ ಪರೀಕ್ಷೆ ಮಾಡ್ತಾಲೇ ಇರಬೇಕು. ನೀವು ಹಾಗೆ ಮಾಡ್ತಿದ್ದೀರಾ? ಡಾಕ್ಟರ್ ಪ್ರಶ್ನೀಗೆ ತಿಂಗಳಿಗೆ ಒಂದ್ಸರಿ ಮಾಡಿಸ್ತೇನೆ ಅಂದ ಹೆಗಡೆ. ನೋಡಿ ಶ್ರೀಧರ ಹೆಗಡೆ, ಮೂತ್ರ ಪರೀಕ್ಷೆ ಮಾಡಾದು ತುಂಬಾ ಈಸಿ. ನೀವೇ ಮನೇಲಿ ಮಾಡಬೋದು. ಪ್ರತಿ ಸಾರೀನೂ ಅವರ ಮೂತ್ರಾನ ಹಿಡಕಂಡು ಸಾಗರಕ್ಕೆ ಬರೋ ಅವಶ್ಯಕತೇ ಇಲ್ಲ BENDICTS ಅಂತ ಒಂದು ಸೆಲ್ಯೂಶನ್ ಇದೆ. ೫ ಎಂ. ಎಲ್. ಸೆಲ್ಯೂಶನ್ ಗೆ ೮ ಹುಂಡು ರೋಗಿ ಮೂತ್ರ ಬಿಟ್ಟು ಸ್ಪಿರಿಟ್ ಲ್ಯಾಂಪ್ ನಲ್ಲಿ ಕಾಯಿಸಿದರೆ ಕಲರ್ ಬರತ್ತೆ. ಸೆಲ್ಯೂಶನ್ ಬಾಟ್ಲ್ ನಲ್ಲಿ ಯಾವ ಯಾವ ಕಲರ್ ಬಂದರೆ ಎಷ್ತೆಷ್ಟು ಪ್ರಮಾಣ ಸಕ್ಕರೆ ಇದೆ ಅನ್ನೋ ವಿವರ ಇದೆ. ನೀವು ಇವತ್ತೇ ಮನೆಗೆ ಹೋಗುವಾಗ ಬೆನೆಡಿಕ್ಟ್ ಸೆಲ್ಯೂಶನ್ ಒಂದು ಟೆಸ್ಟ್ ಟ್ಯೂಬ್, ಅದಕ್ಕೆ ಒಂದು ಹಿಡಿಕೆ, ಸ್ಪಿರಿಟ್ ಲ್ಯಾಂಪನ್ನೂ ತಗೊಂಡು ಹೋಗಿ ಅಂದರು. ಇದನ್ನು ಹೇಳಿದ್ದಕ್ಕೆ ತುಂಬಾ ಉಪಕಾರ ಆತು ಸ್ವಾಮೀ, ಹಂಗೇ ಮಾಡತೇನೆ ಅಂದ ಹೆಗಡೆ.

ಅಷ್ಟು ಹೊತ್ತಿಗೆ ಡಾ. ವಾಣಿಶ್ರೀ ಅವರು ಕಾಫಿ ತಂದುಕೊಟ್ಟರು. ಈ ಡಾಕ್ಟರು ಬೀರು ಕುಡಿಯೋದಿಲ್ಲ, ಬ್ರಾಂಡಿ ಕುಡಿಯೋದಿಲ್ಲ, ಸಿಗರೇಟು ಸೇದೋದಿಲ್ಲ, ಅರ್ಧ ಗಂಟೆಗೊಂದು ಸಾರಿ ಕಾಫಿ ಕುಡಿತಿದ್ದಾರೆ ಅಷ್ಟೆ ಅಂತ ಡಾಕ್ಟರು ತಮಗೆ ತಾವೇ ಹೇಳ್ತಾ ನಕ್ಕರು. ಈ ಎಲ್ಲವನ್ನೂ ಮಾಡಾ ಮನಷ ಹೆಗಡೆ ಆಗಿದ್ದರೂ ಹೌದು ಬಿಡ್ರಿ, ಅವೆಲ್ಲಾ ಕೆಟ್ಟ ಅಭ್ಯಾಸಗಳು, ನಮ್ಮ ಆರೋಗ್ಯನ ಹಾಳು ಮಾಡ್ತವೆ ಅಂತ ಬಾಳಾ ಸಲೀಸಾಗಿ ಅಂದ. ನನ್ ಹಂಗೆ ಈ ಹಾಳ್ ಚಟಾನೆಲ್ಲಾ ಅಂಟಿಸಿಗೆಳದ ಈ ಡಾಕ್ಟರು ಮತ್ತು ಇಂಥವರು ಬಾಳಾ ಅದೃಷ್ಟವಂತ ಜನರು ಅಂತ ಹೆಗಡೆ ಅನಕಂಡ. ಕಾಫಿ ಕುಡದಾದ ಮ್ಯಾಲೆ ನಾ ಇನ್ನು ಹೊಂಡತೇನೆ ಅಂತ ಹೇಳತಾ ಎದ್ದ. ಕೂತುಗೊಳ್ಳರಿ, ಮಾತಾಡೋಣ – ಡಾಕ್ಟರು ಅಂದರು. ನಾನೂ ಸ್ವಲ್ಪ ಹಂದಿಗೋಡು ಕಾಯಿಲೆ ಬಗೀಗೆ ತಿಳಕಂಡು ಡಾಕ್ಟರ ತಾವ ಮಾತಾಡಿದರೆ ಅದಕ್ಕೊಂದು ಅರ್ಥ ಇರತೈತಿ ಅನಿಸಿ ಇನ್ನೊಂದು ದಿವಸ ಬರತೇನರಿ, ಈಗ ಬಾಳಾ ಹೊತ್ತಾತು ಅಂತ ಹೇಳಿ ಡಾಕ್ಟರು ದಂಪತಿಗಳಿಗೆ ತನ್ನೂರಿಗೆ ಬರಾದಕ್ಕೆ ಹೇಳಿ ಹೆಗಡೆ ಅಲ್ಲಿಂದ ಹೊರಟ.

ಮೂರು ಗಂಟೆ ಉರಿ ಬಿಸಲಿನಾಗೆ ಸೈಕಲ್ಲು ಹೊಡಕೋತ ಊರು ತಲುಪಿದ ಹೆಗಡೆ ತಡವಾಗಿ ಮನೀಗೆ ಬಂದಿದ್ದಕ್ಕೆ ಅಪ್ಪ ಅವ್ವ ಬೈಗಳದ ಉಡಗೊರೆ ಕೊಟ್ಟಿದ್ದು ಮಾಮೂಲಿ ಸಂಗ್ತಿ. ಹೆಗಡೆ ತನಗೆ ತಾನೇ ಪ್ರಶ್ನೆ ಕೇಳಿಕೆಂದ: ಯಾವತ್ತು ತಾನು ಸರಿಯಾದ ಹೊತ್ತೀಗೆ ಮನೆ ತಲುಪಿದ್ದು?

ಪ್ರಶ್ನೀಗೆ ಸಿಗಾ ಉತ್ತರ ಬೆರಳೆಣಿಸಾ ಹಂಗೆ ಒಂದೋ ಎರಡೋ ಬಾರಿ ಅಷ್ಟೆ. ಮನಿಗೆ ಬಂದವನೇ ದನಾ ಎಮ್ಮೀಗೆ ತೊಳಕಲು ಕುಡಿಸಿ ಗಿಡಗಂಟಿಗೆ ನೀರು ಹಾಕಿ, ತಣ್ಣಗೆ ಕೈಕಾಲು ತೊಳದು ಒಂಡು ಎಲೆ ಅಡಕೆ ಹಾಕಾನ ಅಂತ ಜಗಲೀಗೆ ಬಂದು ಕುರ್ಚು ಮ್ಯಾಲೆ ಹಾಯಾಗಿ ಕುಂತು ಎಲೆ ಅಡಕೆ ಡಬ್ಬಿ ಮುಚ್ಚಳ ತೆಗಿಯಾ ಹೊತ್ತಿಗೆ ಮನೇ ಮುಂದೆ ಸ್ಕೂಟರು ಬಂದು ನಿಂದ ಸದ್ದಾತು. ಅದು ಮೆಳವರಿಗೆ ಚಂದ್ರಪ್ಪನ ಸ್ಕೂಟರಾಗಿತ್ತು. ಹುಡುಗಾಟಿಕಿಂದ ಕುಂಡೇಲಿ ಸೈಕಲ್ಲು ಇಟ್ಟುಗಂದು ರಾತ್ರಿ-ಹಗಲು ಅನ್ನದೆ ಸಾಗರದ ಸುತ್ತಮುತ್ತಲ ಹಳ್ಳೀಲಿ ತಿರಗಿ, ನಾಟಕ, ಮದುವೆ, ಮುಂಜಿ ಫೋಟೋನು ತೆಗದು ಫೋಟೋಗ್ರಾಫರು ಅಂತ ಹೆಸರಾಗಿದ್ದ, ಎಲ್ಡು ತಿಂಗಳ ಹಿಂದೆ ವೆಸ್ಪಾ ಎಕ್ಸ್ ಇ ಅನ್ನಾ ಬಿಳೀ ಬಣ್ಣದ ಸ್ಕೂಟರು ಕರೀದಿ ಮಾಡಿದ್ದ. ಸ್ಕೂಟರನ್ನ ರಸ್ತೇಲಿ ನಿಲ್ಲಿಸಿ ಕೊಟ್ಟಿಗೇ ಮನೆ ದಾಟಿ ಅಂಗಳಕ್ಕೆ ಕಾಲಿಡುತ್ತಲೇ ಜಗಲೀ ಮ್ಯಾಲೆ ಕುಂತಿದ್ದ ಹೆಗಡೇನ ಕಂಡ ಚಂದ್ರಪ್ಪ ಮುಖ ಅಗಲ ಮಾಡಿ ಹಲೋ ಅಂತ ಅವನ ಸ್ಟೈಲಿನಾಗೆ ಹೇಳಿ ಹೆಗಡೆ ಪಕ್ಕದಾಗೇ ಬಂದು ಕುಂತ. ಹೆಗಡೆ ಅವನ್ ತಾವ ಮಾತಾಡಾ ವಿಷ್ಯ ಇರನಲ್ಲ. ಮಾತಾಡಿ ಮುಗದ ಮ್ಯಾಲೆ ಮೌನ ಏರ್ಪಡತೈತಿ. ಇನ್ನು ಕೆಲವು ಬಾರಿ ಮಾತಾಡಾ ಮುಂಚೆ ಏರ್ಪಡಾ ಮೌನ ಬಾಳಾ ಅರ್ಥ ಕೊಡತೈತಿ. ಎರಡನೇದು ಹಾಲಿ ಈ ಸಂದರ್ಭಕ್ಕೆ ಸೇರಾದಿಲ್ಲ. ಹೆಚ್ಚು ಅಂದರೆ ಚಂದ್ರಪ್ಪನ ತಾವ ಗುಟ್ಟಿನಾಗೆ ಕೇಳಾ ಅಂತ ಒಂದು ಸಂಗತಿ ಬಿಟ್ಟರೆ ಬಾಕಿ ಏನೂ ಇರನಲ್ಲ. ಅದು ತಲಕಾಲುಕೊಪ್ಪದ ಶ್ರೀದೇವೀನ ಮದುವೇ ಆಗಾ ವಿಚಾರ. ನಾಕು ತಿಂಗಳ ಹಿಂದೆ ಅವಳನ್ನ ಮದವೇ ಆಗಬೋದು ಅಂತ ಹೆಗಡೆ ಒಪ್ಪಿಗೇ ಕೊಟ್ಟರೂ ಈ ಮನಷಾ ಇನ್ನೂ ಮ್ಯಾಣ ಜಗೀತಾ ಕುಂತಿದ್ದು ಹೆಗಡೇಗೆ ಬ್ಯಾಸರ ತಂದಿತ್ತು. ಹಾಲಿ ಚಂದ್ರಪ್ಪ ಹೆಗಡೆ ತಾವ ಬಂದಿದ್ದು ಕಾನಗೋಡು ಎಂಕಣ್ಣಯ್ಯನ ಮಗಳನ್ನ ಹೆಗಡೆಗೆ ತೋರಸಾನ ಅಂತ. ಅವಂಗೆ ಮುಂಡಗೇಸರಕ್ಕೆ ಹೋಗಿ ಯಾರದ್ದೋ ಫೋಟೋನು ತೆಗೆದಿದ್ದರ ಬಾಕಿ ದುಡ್ಡು ವಸೂಲು ಮಾಡಾ ಕೆಲಸ ಇದ್ದಿದ್ದರಿಂದ ಅದೇ ದಾರೀಲಿ ಸಿಗಾ ಕಾನಗೋಡಿಗೂ ಹೋಗಿ ಎಂಕಣ್ಣಯ್ಯನ ಮಗಳು ಸವಿತಾನ ಹೆಗಡೆಗೆ ತೋರ್ಸಾ ಹೊಂಚು ಹಾಕಿದ್ದ. ಕಾನಗೋಡು, ಮುಂಡಿಗೇಸರದ ಬದೀಗೆ ಹೋದ ಮ್ಯಾಲೆ ಹಂದಿಗೋಡು ದೂರದ ಊರೇನಲ್ಲ. ಅಲ್ಲಿ ಸೂರಪ್ಪನೋರನ್ನ ಕಂಡುಬರಾ ತನ್ನ ಆಸೇನ ಹೆಗಡೆ ಚಂದ್ರಪ್ಪನ ಮುಂದಿಟ್ಟ. ಚಂದ್ರಪ್ಪ ಒಪ್ಪಿದ.

ಅವ್ವ ಕೊಟ್ಟ ರವೇದುಂಡೆ ತಿಂದು, ಕಾಫಿ ಕುಡದು ಮತ್ತೆ ಎಲೆ ಅಡಕೆ ಹಾಕಿ ಇವರು ಬೇಳೂರು ಮೇಲಾಸಿ ಹೊಂಟರು. ಹೊಸಾ ಸ್ಕೂಟರು ಸುಯ್ ಅಂತ ಹೋಗತಿತ್ತು. ಟಾರು ರಸ್ತೆ ಅಲ್ಲದೆ ಉಬ್ಬು ತಗ್ಗು ಇರಾ ಮಣ್ಣು ರಸ್ತೆ ಆಗಿದ್ದರಿಂದ ಚಂದ್ರಪ್ಪ ನಿದಾನಕ್ಕೆ ಹುಷಾರಾಗಿ ಓಡಸ್ತಿದ್ದ. ಸಂಜೇ ಹೊತ್ತಿನ ಸೂರ್ಯನ ಬಂಗಾರದ ಬೆಳಕು ಗಿಡಗಂಟೆ ಬ್ಯಾಣದ ಮ್ಯಾಲೆ ಬಿದ್ದಿದ್ದರಿಂದ ಸುಂದರವಾಗಿ ಕಾಣುತ್ತಿತ್ತು. ಇಂಥಾ ವಾತಾವರಣದಲ್ಲಿ ಎಂಕಣ್ಣನ ಮಗಳು ಹೆಂಗಿರಬೋದು ಅಂತ ಹೆಗಡೆ ಊಹೆ ಮಾಡತೊಡಗಿದ.

ಅಷ್ಟು ಹೊತ್ತಿಗೆ ಚಂದ್ರಪ್ಪ ಮಾಸೂರು ಸುಬ್ರಾಯನ ಕಥೆ ಸುರುಮಾಡಿದ. ಹಿಂದಿನ ಹಂಗೆ ಸೈಕಲ್ಲು ಅಲ್ಲದೆ ಸ್ಕೂಟರು ಆಗಿದ್ದರಿಂದ ಕಾನುಗೋಡು ಬ್ಯಾಗನೆ ಎದುರಾತು. ಏಳೆಂಟು ಮನೆ ಇದ್ದ ಆ ಊರಿನಾಗೆ ನಡೂಗೆ ಎಂಕಣ್ಣನ ಮನೆ. ಎಂಕಣ್ಣನ ತಮ್ಮ ಕೃಷ್ಣಮೂರ್ತಿ ಮನೆ ಬಾಗಲಾಗೆ ನಿಂತಾಂವ ಚಂದ್ರಪ್ಪನ್ನ ಕಂಡವನೇ ನಕ್ಕು ಮನೇ ಒಳಗೆ ಕರದ. ಎಂಕಣ್ಣನ ಮನೆಯವರಿಗೂ ಚಂಡ್ರಪ್ಪನ ಮನೆಯವರಿಗೂ ಬಾಳಾ ವರ್ಷದಿಂದ ಪರಿಚಯ ಇತ್ತು ಅಂತ ಹೆಗಡೆಗೆ ಗೊತ್ತಿತ್ತು. ಹೆಗಡೇನ ಕೃಷ್ಣಮೂರ್ತಿಗೆ ಪರಿಚಯ ಮಾಡಿಸಿದ. ಹೆಗಡೆ ಕಣ್ಣು ಮಾತ್ರ ಸವಿತ ಎಲ್ಲಿ ಕಂಡಾಳು ಅಂತ ಚುರುಕಾಗಿತ್ತು. ಆ ವಿಷಯದಲ್ಲಿ ಅವನಿಗೆ ನಿರಾಸೆಯೇ ಆಗಬೇಕೆ?

ಅದೂ ಇದೂ ನಾಕು ಮಾತಾಡಿ ಕಾಫಿ ಕುಡಾದು ಎಲೆ ಅಡಿಕೆ ಹಾಕಿದರು. ನಂತರ ಹಂದಿಗೋಡು ದಿಕ್ಕಿಗೆ ಚಂದ್ರಪ್ಪನ ಸ್ಕೂಟರು ಓಡಿತು.

* * *

ಮನೆ ಮುಂದೆ ಮಣ್ಣು ಕಲಸಿ ಕಟ್ಟೆಕಾಲು ಮೆತ್ತುತಾ ಇದ್ದ ನಡು ವಯಸ್ಸಿನ ಹೆಂಗಸೊಂದು ಸೂರಪ್ಪ ಮತ್ತು ಹೆಗಡೆ ಬದೀಗೆ ಕುತೂಹಲದ ನೋಟ ಬೀರಿ ತುಸು ನಗೂನ ತುಟೀಲಿ ತೋರಿಸಿತು. ಮತ್ತೊಂದು ಅಷ್ಟೇ ವಯಸ್ಸಿನ ಹೆಂಗಸು ಮನೆ ಒಳಗಿಂದ ಕೊಡಪಾನದಾಗೆ ನೀರು ತಂದು ಅದೇ ಕೆಲಸ ಮುಂದುವರೆಸಿತು. ಇದನ್ನೆಲ್ಲಾ ಹೆಗಡೆ ನೋಡುತ್ತಿದ್ದಂಗೇ ಚಂದ್ರಪ್ಪ ಸ್ಕೂಟರು ನಿಲ್ಲಿಸಿ, ಪೆಟ್ರೋಲು ಗಿಟ್ರೋಲಿನ ಪಾಯಿಂಟುಗಳನ್ನು ಸರಿಮಾಡಿ ಅದನ್ನು ನೀಟಾಗಿ ಪಾರ್ಕು ಮಾಡಿದ. ಸೂರಪ್ಪನೋರು ನಮ್ಮನ್ನು ಮನೇ ಒಳಗೆ ಕರಕೊಂಡು ಹೋದರು. ಮುಸ್ಸಂಜೆ ಹೊತ್ತಾಗಿದ್ದರಿಂದ ಮನೇ ಒಳಗೆ ಮಬ್ಬು ಬೆಳಗಿತ್ತು. ಚಂದ್ರಪ್ಪನ್ನ ಅವರಿಗೆ ಪರಿಚಯ ಮಾಡಿಕೊಟ್ಟು ಮುಂಡಿಗೇಸರಕ್ಕೆ ಬರಬೇಕಾದ ಕೆಲಸ ಇದ್ದಿದ್ದರ ಪ್ರಸ್ತಾಪ ಮಾಡಿ, ಹಂಗೇ ನಿಮ್ಮನ್ನೂ ಕಂಡು ಹೋಗಾ ಆಸೆ ಆಗಿದ್ದನ್ನ ಹೇಳಿ, ಅವರ ಮುಖ ನೋಡಿದ. ತಂಬಾಕಿನ ತಾಂಬೂಲದ ರಸದೊಳಗೆ ಕೆಂಪಗಾದ ಸಣ್ಣ ತುಟೀಲಿ ನಗತಿದ್ದ ಸೂರಪ್ಪನೋರು “ಬಾಳಾ ಸಂತೋಷ” ಅಂದರು. ಬೆಳಿಗ್ಗೆ ಸಾಗರದಾಗೆ ಡಾಕ್ಟರ ಮನೇಲಿ ಭೇಟಿ ಆದ ಹೆಗಡೇಗೆ ಅದೇ ದಿನವೇ ಪುನಾ ಇಲ್ಲಿ ಭೇಟಿ ಆಗಿದ್ದು ಆಕಸ್ಮಿಕ ಅನಸಿತು. “ನೀವು ತಯಾರು ಮಾಡಿದ……. ಹಂದಿಗೋಡು ಕಾಯಿಲೆಗೆ ಮೂಲವಾದ 89 ಕಾರಣಗಳ ಪಟ್ಟಿ ನೋಡಬಕಾಗಿತ್ತು” ಅಂಡ. ಬಾಯೊಳಗೆ ತಂಬಾಕಿನ ರಸ ತುಂಬಿ ಮಾತಾಡಾದು ಕಷ್ಟ ಆಗಿದ್ದರಿಂದ ಒಂದ್ಸರಿ ಹೊರಾಗೆ ಹೋಗಿ ಅದನ್ನ ಉಗಳಿ ಬಂದ ಸೂರಪ್ಪನೋರು “ಅದನ್ನ ತಿದ್ದಿ ಬರೀಬೇಕಾಗಿದೆ. ತಿದ್ದಿ ಬರದ ಮ್ಯಾಲೆ ನಿಮಗೆ ತೋರಸ್ತೇನೆ” ಅಂಡವರು “ನೋಡಿ, ಶ್ರೀಧರ್ ಅವರೇ, ನಿಮಗೆ ಇತ್ತೀಚೆಗೆ ಈ ಕಾಯಿಲೆ ಬಗ್ಗೆ ತಿಳಿದುಕೊಳ್ತಾ ಆಸಕ್ತಿ ಬಂದಿದೆ. ಬಾಳಾ ಸಂತೋಷ. ನಮ್ಮೂರಿನಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಾದಕ್ಕೆ ಪ್ರಾರಂಭವಾಗತಿದ್ದಂಗೇ ಇದರ ಬಗ್ಗೆ ಕಾಳಜಿ ವಹಿಸಿ, ಸರ್ಕಾರದ ಗಮನಕ್ಕೆ ತಂದು ಚಿಕಿತ್ಸೆ ನಡೆಸಿ ಅಂತ ಬಡಕೊಂಡೆ. ಮನೆ ಸುಟ್ಟಮ್ಯಾಲೆ ಅಗ್ನಿಶಾಮಕ ದಳದ ವ್ಯಾನು ಬಂದ ಹಾಗೆ ನಮ್ಮ ಸರ್ಕಾರದ ನೀತಿ! ಕಾಯಿಲೆ ಈಗ ಉಲ್ಬಣಿಸಿದ ಮ್ಯಾಲೆ ರಿಸರ್ಚ್ ರಿಪೋರ್ಟ್ ಪತ್ರಿಕೇಲಿ ವರದಿ ಎಲ್ಲಾ ಪ್ರಾರಂಭವಾಗಿದೆ. ಹೋದವರ್ಷ ರಮೇಶ್ ಭಟ್ ಬಂದವರು ಒಳ್ಳೇ ರಿಪೋರ್ಟ್ ಕೊಟ್ಟಿದಾರೆ. ನಮ್ಮ ದೇಶದಲ್ಲಿ ಯಾವ ಮೂಲೇಲಿ ಹೊಸ ರೋಗ ಕಂಡುಬಂದರೂ ಸರ್ಕಾರ ಅದರ ಬಗ್ಗೆ ರಿಸರ್ಚ್ ಮಾಡಲಿಕ್ಕೆ ಮೊದಲು ರಮೇಶ್ ಭಟ್ಟರನ್ನು ಕಳಿಸ್ತದೆ. ಅಷ್ತು ಬುದ್ಧಿವಂತರು ಅವರು. ಇಂದ್ರಾ ಗಾಂಧಿ ರಮೇಶ್ ಭಟ್ರನ್ನ ಮಗ ಅಂತಲೇ ಕರೀತಿದ್ದರಂತೆ. ಇಂಥಾ ಬುದ್ದಿವಂತ ಮನುಷ್ಯನ ರಿಪೋರ್ಟಿಗೆ ನಾನು ಮರುವಿಮರ್ಶೆ ಬರದು ಮುಳ್ಳಾಗಿಬಿಟ್ಟಿದ್ದೆ ಮಾರಾಯರೆ” ಅಂತ ಹೇಳತಾ ನಕ್ಕರು. “ಅವರ ರಿಪೋರ್ಟ್ ನಿಮ್ ಹತ್ರ ಇದೆಯಾ?” ಹೆಗಡೆ ಕೇಳಿದ ಕೂಡಲೇ ಮನೆ ಒಳಾಗೆ ಹೋಗಿ ಒಂದಷ್ಟು ಪೇಪರ್ ಕಟಿಂಗ್ಸ್ ಸಣ್ಣ ಪುಸ್ತಕ, ಹಾಳೆ ಮುಂತಾದ್ದರ ಸಣ್ಣ ಕಟ್ಟು ಇದ್ದ ಫೈಲು ಹಿಡಕಂದು ಬಂದರು. ಅಷ್ಟುಹೊತ್ತಿಗೆ ಇವರನ್ನು ಕುತೂಹಲದಿಂದ ನೋಡಿದ್ದ ಹೆಂಗಸು ಕಾಫಿ ತಂದು ಕೊಟ್ಟಳು. “ಇವಳೂ ನನ್ನ ಹೆಂಡತಿ” ಅಂತ ಸೂರಪ್ಪನೋರು ಆಮೇಲೆ ನಮಗೆ ಪರಿಚಯ ಮಾಡಿಸಿದರು. ಸೂರಪ್ಪನೋರು ತಮ್ಮ ಕಡತದಿಂದ ರಮೇಶಭಟ್ಟರ ರಿಪೋರ್ಟು ತೆಗೆದು ತೋರಿಸುವ ಭರದಲ್ಲಿ ಕತ್ತಲು ಕವಿದಿದ್ದನ್ನು ಮರೆತೇಬಿಟ್ಟಿದ್ದರು. ರಿಪೋರ್ಟಿನ ಪುಸ್ತಕ ಬಿಚ್ಚಿ ಚಿಕ್ಕ ಅಕ್ಷರಗಳನ್ನು ಓದಲಾರದೆ “ಓಹೋ, ಕತ್ತಲಾಗಿ ಹೋಯ್ತಲ್ರೀ” ಅನ್ನುತ್ತಾ ವಿದ್ಯುತ್ ದೀಪ ಹತ್ತಿಸಿ, ಇವರು ಕೂತಿದ್ದ ಒಳದಲ್ಲಿ ಬೆಳಕು ಮಾಡಿದರು. “ನೋಡಿ ಇವರೆ, ರಮೇಶ್ ಭಟ್ರು ಹಂದಿಗೋಡನ್ನ ಸೆಂಟ್ರುಪಾಯಿಂಟು ಮಾಡಿಕೊಂಡು ಇಲ್ಲಿ ಎಲ್ಲೆಲ್ಲಿಗೆ ಹೆಣ್ಣುಕೊಟ್ಟಿದೆ, ಅಲ್ಲಿ ಅವರ ಕುಟುಂಬದಲ್ಲಿ ಜನಿಸಿದವರಿಗೆ ಈ ಕಾಯಿಲೆ ಬಂದಿದೆಯೇ, ಅಲ್ಲಿಂದ ಇತರೆ ಊರಿಗೆ ಹೆಣ್ಣುಕೊಟ್ಟು ಆದ ಸಂತಾನದಲ್ಲಿ ಈ ಕಾಯಿಲೆ ಇದೆಯೇ ಮುಂತಾಗಿ ಹಾಕಿದ ಸ್ಕೆಚ್ಚು ಇದು” ಅಂತ ಆ ಪುಸ್ತಕದ ಒಂಡು ಪುಟದಾಗೆ ಇದ್ದ ಸಂಬಂಧದ ವಿವರ ತೋರಿಸಿದರು. ಹಂದಿಗೋಡಿನಿಂದ ಬಂದಗದ್ದೆವರಿಗೆ ಇತರೇ ಊರುಗಳೂ ಸೇರಿದಂತೆ ಕುಟುಂಬಗಳು ನಡೆಸಿಕೊಂಡ ಸಂಬಂಧದ ವಿವರಗಳು ಈ ಸ್ಕೆಚ್ಚಿನಲ್ಲಿತ್ತು. ಹೆಗಡೆ, ಚಂದ್ರಪ್ಪ ಆ ಸ್ಕೆಚ್ಚಿನ ಮ್ಯಾಲೆ ಕಣ್ಣಾಡಿಸ್ತಿದ್ದಾಗ “ಈ ರಿಪೋರ್ಟಿಗೆ ಮರು ವಿಮರ್ಶೆ ಬರದ ಸುದ್ದಿ ಹೇಳಿದ್ನಲ್ಲಾ, ಇಲ್ಲಿ ಕೇಳಿ. ನಂಗೆ ಹಾರ್ಟ್ ಅಟ್ಯಾಕು ಆಗದೆ ಇದ್ದಿದ್ದೇ ದೊಡ್ಡಾ ಮಾತು. ಈ ರಿಪೋರ್ಟಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ನಾನು ಈ ಊರನಾಗೇ ಇದ್ದು ಅವರ ಜೊತೀಗೇ ಒಡನಾಡಿದ ನಂಗೆ ಗೊತ್ತಿದ್ದಷ್ಟು ಈ ರಿಸರ್ಚಿನವರಿಗೆ ಏನು ಗೊತ್ತಾಗತ್ತೆ ಅನ್ನೋ ಅಹಂಕಾರದೊಳಗೆ “ರಮೇಶಭಟ್ಟರು ಒಪ್ಪಿಸಿದ ರಿಪೋರ್ಟ್ ನ ಮರುವಿಮರ್ಶೆ ಆಗಬೇಕಾಗಿದೆ. ಬೇರೆ ಕೆಲವು ಜನಾಂಗದಲ್ಲಿ ಈ ಕಾಯಿಲೆ ಇದೆ. GENETIC ಆದರೆ ಹೀಗಾಗಲು ಹೇಗೆ ಸಾಧ್ಯ ಮುಂತಾಗಿ ಬರದೆ, ಐದಾರು ತಿಂಗಳ ಹಿಂದೆ ಸುಮಾರು ಇದಕ್ಕೂ ಮುಂಚೆ ಮುಸ್ಸಂಜೇ ಹೊತ್ತಿನಾಗೆ ನಾಕು ಜೀಪು, ಎರಡು ಕಾರು ಮನೆಮುಂದೆ ಬಂದು ನಿಂತವು. ರಮೇಶ್ ಭಟ್ಟರು ಕಾರಿಂದ ಇಳೀತಿದ್ದಂಗೆ ನಂಗೆ ಎದೇಬಡಿತ ಜಾಸ್ತಿ ಆತು. ಕ್ಷಣಾರ್ಧದೊಳಗೆ ಒಂದು ಕತೆ ನೆನಪಾಗಿ ಪ್ರಾಣ ಹೋಗಾ ಹಂಗೆ ಆತು. ಕಥೆ ಏನಪಾ ಅಂದರೆ, ಈಗ ಮೂರ್ನಾಕು ವರ್ಷದ ಹಿಂದೆ ನಮ್ಮ ತಾಲ್ಲೂಕಿನ ಒಬ್ಬ 25-27 ವರ್ಷದ ಹುಡುಗ ಭೂತಳದಲ್ಲಿ ಇರುವ ನೀರಿನ ಸೆಲೇನ ಗುರುತಿಸುವ ಶಕ್ತಿ ತನಗಿದೆ ಅಂತ ಪತ್ರಿಕೆಗಳಲ್ಲೆಲ್ಲಾ ಜಾಹೀರಾತು ಕೊಟ್ಟನಂತೆ. ಕಲ್ಕತ್ತಾದ ಒಬ್ಬ ಉದ್ಯಮದಾರ ಈ ಜಾಹೀರಾತು ಓದಿ ಕಾರಿನಲ್ಲಿ ಅವನ ಮನೇವರೆಗೂ ಬಂದನಂತೆ. ಅವನ ಮುಂದೆ ಈ ಹುಡುಗ ಕಣ್ ಕಣ್ ಬಿಟ್ಟ. ನಿಜವಾದ ಸಂಗತಿ ಅಂದರೆ ಅವನಿಗೆ ಆ ಶಕ್ತಿಯೇ ಇರಲಿಲ್ಲ. ಸಿಟ್ಟುಬಂದ ಉದ್ಯಮದಾರ ಕಲ್ಕತ್ತಾದಿಂದ ಕಾರಲ್ಲಿ ಬಂದು ಹೋದ ಖರ್ಚು ಕೊಡಬೇಕು ಅಂತ ಕುಂತ. ಕೊನಿಗೆ ಈ ಹುಡುಗ ದಂಡ ಕಟ್ಟಬೇಕಾದ ಪ್ರಸಂಗ ಬಂತು. ಈ ಕಥೆ ಅದೇ ಹೊತ್ತಿಗೆ ನೆನಪಾಗಿ ನಂಗೆ ಹೆಂಗಾಯ್ತು ಅಂತೀರಿ, ಅದೇ ಹೇಳಿದನಲ್ರೀ, ಹಾರ್ಟು ಅಟ್ಯಾಕು ಆಗದೇ ಉಳದದ್ದು ದೊಡ್ಡಮಾತು.” ಈ ಹುಡುಗರಿಗೆ ನಗು ಬಂತು. ಆದರೆ ರಮೇಶ್ ಭಟ್ರು “ಹೆದರಬೇಡಿ ಸೂರಪ್ಪನೋರೇ” ಅಂತ ಹೇಳ್ತಾನೇ ಒಳಗೆ ಬಂದರು. ಬಾಳಾ ಸಮಾಧಾನದಲ್ಲಿ ಮಾತಾಡಿದರು. ಅಷ್ಟು ಹೊತ್ತಿನಲ್ಲಿ ಆ ಕುಟುಂಬದವರನ್ನು ನಾನು ಹೆಂಗೆ ತೋರಿಸಲಿ? ಅಲ್ಲದೆ ಅದು ಹಂದಿಗೋಡು ಕಾಯಿಲೆ ಅನ್ನಾ ಗ್ಯಾರಂಟಿ ಏನು? ಕೊನಿಗೆ ರಮೇಶ್ ಭಟ್ಟರು “ಮರುವಿಮರ್ಶೆ ಅಂತ ಅರ್ಜಿ ಹಾಕಬೇಕಾದರೆ ಅದನ್ನು ಸಾಬೀತು ಮಾಡಬೇಕಾದರೆ ಅದಕ್ಕೆ ಸಿದ್ಧರಾಗಿ ಆಮೇಲೆ ಬರೀಬೇಕು. ಇನ್ನು ಮೇಲೆ ಹೀಗೆ ಮಾಡಬೇಡಿ, ನೀವು ಮರುವಿಮರ್ಶೆಗೆ ಅರ್ಜಿ ಹಾಕಿದ್ದರಿಂದ ನನಗೆ ಖಂಡಿತ ಬೇಜಾರಿಲ್ಲ. ಬದಲಾಗಿ ಸಂತೋಷವೇ ಆಗಿದೆ. ಯಾಕೇ ಅಂದರೆ ಈ ಕಾಯಿಲೆ ಬಗ್ಗೆ ಇಷ್ಟು ಆಸಕ್ತಿ ಹೊಂದಿರೋ ಒಬ್ಬ ವ್ಯಕ್ತಿ ಈ ಪ್ರಾಂತ್ಯದಲ್ಲಿ ಇದ್ದಾರಲ್ಲಾ” ಅಂತ ಅಂದರು. “ಆವಾಗ ನಂಗೆ ಎದೇಬಡಿತ ಕಮ್ಮಿ ಆಯ್ತು ನೋಡಿ” ಅಂತ ನಿಟ್ಟುಸಿರು ಬಿಡತಾ ಹೊಸಾ ಎಲೆ ಅಡಕೆ, ತಂಬಾಕು ಹಾಕಾಕ್ಕೆ ಶುರು ಮಾಡಿದರು. “ಕೃಷ್ಣಮೂರ್ತಿ ಡಾಕ್ಟರು ಈ ಕಾಯಿಲೆ ಬಗ್ಗೆ ನಿರ್ದಿಷ್ಟವಾಗಿ ಏನು ಅಭಿಪ್ರಾಯ ಪಟ್ಟಿದಾರೆ ಅಂತ ನೀವು ಹೇಳತೀರಿ?” ಹೆಗಡೆ ಕೇಳಿದ್ದಕ್ಕೆ “ಅವರಿನ್ನೂ ಬಂದು ಆರೇಳು ತಿಂಗಳಾತ್ರೀ, ಅವರೇನು ಹೇಳತಾರೆ? ಅವರು ಇನ್ನೂ ರಿಸರ್ಚು ಅಂತ ಹೇಳತಾನೇ ಇದಾರೆ. ಏಡಿ ತಿನ್ನೋದರಿಂದ, ಬುಕ್ಕನ್ನ ತಿನ್ನೋದರಿಂದ ಕೊಳುಕುತನದ ಜೀವನ ಸಾಗಿಸೋದರಿಂದ, ಪೌಷ್ಟಿಕಾಂಶದ ಕೊರತೆಯಿಂದ ಈ ರೋಗ ಬಂತು ಅನ್ನೋದನ್ನೆಲ್ಲಾ ನಾನು ನಂಬೋದಿಲ್ಲ” ಸೂರಪ್ಪನೋರು ಹೇಳಿದರು. “ನೀವು ಮೇಲೆ ಹೇಳಿದ ಕಾರಣದಿಂದ ಬಂತು ಅಂತ ರಿಸರ್ಚು ಡಾಕ್ಟರು ಹೇಳಿದಾರಾ?” ಅಂತ ಚಂದ್ರಪ್ಪ ಪ್ರಶ್ನೆ ಒಗದ. “ಅವರಿನ್ನೂ ರಿಸರ್ಚ್ ಮಾಡತಾನೇ ಇದಾರ್ರೀ, ಯಾರಿನ್ಗೂ ಇನ್ನೂ ಸರಿಯಾದ ಕಾರಣವೇ ತಿಳದಿಲ್ಲ. ಆದರೆ ಒಂದು ಮಾತು ಸತ್ಯ, ಜೆನೆಟಿಕ್ ಅನ್ನೋ ದೃಷ್ಟೀಲಿ ನೋಡತಾ ಹೋದರೆ ಹೌದು ಅನಸ್ತದೆ. ಕುಟುಂಬದಲ್ಲಿ ಒಬ್ಬನಿಗಿದ್ದರೆ ಅವರ ಕುಟುಂಬದಲ್ಲಿ ಕಾಣಿಸಿಕೊಂಡಿದೆ. ಆದರೆ ನಮ್ಮೂರಲ್ಲಿ ಮರಗೆಲಸ ಮಾಡೋ ಒಂದಿಷ್ಟು ಜನರಿಗೆ ಇದು ಕಾಣಿಸಿಕೊಂಡಿದ್ದರ ಬಗ್ಗೆ ಆಶ್ಚರ್ಯ ಆಗ್ತದೆ ಅಂದವರು ಎಲೆ ಅಡಕೆ ರಸಾ ತುಪ್ಪಾಕ್ಕೆ ಹೊರಾಗೆ ಹೋಗಿ ಬಂದರು. “ನೀವು ಇದರ ಬಗೀಗೆ ಬಾಳಾ ತಲೆ ಕೆಡಿಸಿಕೊಂಡಿದೀರಿ ಬಿಡ್ರಿ” ಅಂತ ಚಂದ್ರಪ್ಪ ಹೇಳತಾ ತಾನೂ ಎಲೆ ಅಡಕೆ ತಬಕೀಗೆ ಕೈ ಹಾಕಿದ. ಬಡ್ಡೀಮಗಂದು ತಲುಬು ಯಾರನ್ನ ಬಿಡತೈತಿ! ಹೆಗಡೇನೂ ಎಲೆ ಅಡಕೆ ಹಾಕಾಕ್ಕೆ ತಬಕೀಗೆ ಕೈ ಹಾಕಿದ. “ಸ್ವಾಮೀ ನೀವು ನಂಬ್ತೀರೋ ಇಲ್ವೋ ಜ್ಯೋತಿಷ್ಯ ಕಲಿಯಾ ಸಲುವಾಗಿ ಮೂರು ವರ್ಷ ನಿದ್ದೆ ಮಾಡಿಲ್ಲರೀ” ಅಂದರು. ಎದುರಿಗೆ ಕುಂತಿದ್ದ ಸಣ್ಣ ಮೈಕಟ್ಟಿನ, ಗುಳಿ ಬಿದ್ದ ಕಣ್ಣಿನ ನಡುಪ್ರಾಯದ ವ್ಯಕ್ತಿ ಸೂರಪ್ಪನವರ ಬಗೀಗೆ ಹೆಗಡೇಗೆ ಕುತೂಹಲ, ಆಶ್ಚರ್ಯ ಆದವು. “ಸುಳ್ಳಲ್ರೀ ಇದು, ಮೂರು ವರ್ಷ ಹಗಲು – ರಾತ್ರಿ ಆಸ್ಟ್ರಾಲಜಿ ಚಿಂತೆ ಬಿಟ್ರೆ ಬೇರೆ ಏನೂ ಇಲ್ಲ. ನಿಮಗೆ ಜ್ಯೋತಿಷ್ಯದ ಬಗೀಗೆ ನಂಬಿಕೆ ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಮನುಷ್ಯನ ಬದುಕು, ಗ್ರಹಗತೀನ ಅವಲಂಬಿಸಿ ಇರ್ತದೆ ಅಂತಾರೆ ನೋಡಿ, ಅದು ಸುಳ್ಳಲ್ಲ” ಅಂತ ಹೇಳತಾ ಜ್ಯೋತಿಷ್ಯ ಸತ್ಯ ಅಂತ ಪ್ರತಿಪಾದಸ ಹಂಗೆ ಮಾತು ಸುರು ಮಾಡಿದರು. ಜ್ಯೋತಿಷ್ಯಕ್ಕೂ ಹಂದಿಗೋಡು ಕಾಯಿಲೆಗೂ ಏನೋ ಸಂಬಂಧ ಹಚ್ಚತಾರೆ ಇವರು ಅಂತ ಹೆಗಡೇಗೆ ಅನಸ್ತಿದ್ದಂಗೇ ಚಂದ್ರಪ್ಪ “ಜಾತಕ ನೋಡಿ ಮದುವೆ ಆಗ್ತಾರಲ್ಲಾ, ಇದರ ಬಗೀಗೆ ನೀವು ಏನಂತೀರಿ?” ಅಂತ ಕೇಳಿದ. ನೋಡ್ರಿ, ಕೆಲವರು ಹುಟ್ಟಿದ ಕ್ಷಣ, ನಕ್ಷತ್ರ, ಗಳಿಗೆ ಇತ್ಯಾದಿ ಬರದಿಟ್ಟು ನಂತರ ಜಾತಕ ಬರದಿಡ್ತಾರೆ. ಕೂಲಿ ಮಾಡಾ ಈ ಜನಗಳಿಗೆ ಓದು ಬರಾ ಗೊತ್ತಿಲ್ಲ. ಮಗು ಹುಟ್ಟಿದ ಕೂಡ್ಲೇ ಓದು ಬರಾ ಗೊತ್ತಿದ್ದವರ ಹತ್ರ ಬಂದು ಹುಟ್ಟಿದ ಹೊತ್ತು ಹೇಳ್ತಾರೆ. ಆ ಆಧಾರದ ಮ್ಯಾಲೆ ನಿನ್ನ ಮಗಂಗೋ ಮಗಳಿಗೋ ಇಂಥಾ ಹೆಸರಿಡು ಅಂತ ಅವರು ಹೇಳ್ತಾರೆ.” “ಹೆಸರಿಗೂ ಈ ಜಾತಕಕ್ಕೂ ಏನು ಸಂಬಂಧ?” ಅಂತ ಹೆಗಡೆ ನಡೂಗೆ ಪ್ರಶ್ನೆ ಒಗದ. “ಇಂಥಾ ನಕ್ಷತ್ರಕ್ಕೆ ಇಂಥಾ ಅಕ್ಷರದಿಂದ ಪ್ರಾರಂಭ ಆಗೋ ಹೆಸರು ಅಂತ ಇರ್ತದೆ” – ಸೂರಪ್ಪನೋರು ಅಂದರು. ಒಂದು ಕ್ಷಣದ ಹಿಂದೆ ಹೆಗಡೆ ತಲೇಲಿ ಹಂದಿಗೋಡು ಕಾಯಿಲೆಗೂ, ಜ್ಯೋತಿಷ್ಯಕ್ಕೂ ಈ ಮನಷಾ ಏನು ತಳಿಕೆ ಹಾಕತಾನೆ ಅಂತ ಸುಳದ ವಿಚಾರ ನೆನಪಾಗಿ “ಸೂರಪ್ಪನೋರೆ, ಜ್ಯೋತಿಷ್ಯಕ್ಕೂ ಈ ಕಾಯಿಲೆಗೂ ಏನು ಸಂಬಂಧ?” ಅಂತ ಕೇಳಿದ. ಎಲೆ ಅಡಕೆ ರಸ ತುಂಬಿದ ಬಾಯಲ್ಲಿ ಕೀರಲು ಧ್ವನೀಲಿ “ಅಲ್ಲೇ ಇರೋದು ನೋಡ್ರಿ ಪಾಯಿಂಟು, ರಮೇಶ್ ಭಟ್ರ ರಿಪೋರ್ಟು ಹೇಳೋ ಜೆನೆಟಿಕ್ ಅನ್ನೋದಕ್ಕೂ ನಾನು ಹೇಳೋ ಈ ವಿಚಾರಕ್ಕೂ ಸಂಬಂಧ ಇದೆ. ಒಬ್ಬ ಮನುಷ್ಯನಿಗೆ ಈ ಕಾಯಿಲೆ ಸುರುವಾಯ್ತು ಅಂದರೆ ಅವನ ವಂಶವೃಕ್ಷ ತಿಳೀಬೇಕಾಗ್ತದೆ. ಆ ವಂಶಕ್ಕೆ ಬಂದು ಸೇರಿದ ಹೆಣ್ಣಿನ ವಂಶ ಪತ್ತೆ ಮಾಡಬೇಕು. ಇದು ಬಾಳಾ ರಗಳೆ ಕೆಲಸ ಮಾರಾಯ್ರೆ” _ ಅಂತ ಹೇಳ್ತಾ ಮತ್ತೆ ಮತ್ತೆ ರಸ ತುಪ್ಪಾಕೆ ಹೊರಗೆದ್ದು ಹೋಗಿ ಬಂದರು. “ಬಾಳಾ ಸಮಯ ಆತು, ನಾವಿನ್ನು ಹೊರಡ್ತೇವೆ. ನಿಮ್ಮಿಂದ ತಿಳಕಳಾ ವಿಷಯ ಭಾಳಾ ಇದೆ. ಇನ್ನೊಂದು ದಿನ ಬರ್ತೇವೆ” – ಅಂತ ಹೇಳ್ತಾ ಇವರು ಎದ್ರು. “ಇರ್ರಿ, ಮಾತಾಡೋಣ, ಇವತ್ತು ಇಲ್ಲೇ ಊಟ ಮಾಡ್ರಿ” ಅಂದರು. “ಬ್ಯಾರೆ ಕೆಲಸ ಇದೆ, ಮುಂಡಗೇಸರದಾಗೆ ಒಬ್ರ ಮನೀಗೆ ಹೋಗಿ ಎಷ್ಟು ರಾತ್ರಿ ಆದರೂ ಊರಿಗೆ ಹೋಗಬೇಕು. ಊಟಕ್ಕೆ ಅಂತ ಕೂತರೆ ಮಾತಿಗೆ ಮಾತು ಬೆಳೆದು ಬೆಳಕು ಹರದುಬಿಡತೈತರಿ!” ಅಂತ ಚಂದ್ರಪ್ಪ ನಯವಾಗಿ ಅಂದ. ನಾವು ಅಲ್ಲಿಂದ ಹೊಂಟು ಬಂದಗದ್ದಿಗೆ ಬಂದೆವು.

ಕೊಟ್ಟಗೇ ಮನೆ ಕಟ್ಟೆ ಮ್ಯಾಲೆ ಕುಂತು ಎಲೇ ಅಡಕೆ, ತಂಬಾಕು ಹಾಕಿ ಅದರ ಸುಖ ಮಜವಾಗಿ ಅನುಭವಿಸ್ತಾ ಸೂರಪ್ಪನೋರ ಬಗೀಗೆ ಮಾತಾಡತಾ ಒಂದಷ್ಟು ಕಾಲ ಕಳೆಯಲು ಸೂರಪ್ಪ ಟಾಪಿಕ್ಕು ಬದಲು ಮಾಡಿದ. ಓತುಗೋಡಿನ ಸುವರ್ಣನ ಯೌವನದ ರಸಭರಿತ ಕಥೆ ಹೇಳಿ ಮನಸೀಗೆ ಒಂದಷ್ಟು ಮುದ ಹಚ್ಚಿದ!

ಮರುದಿನ ಬೆಳಿಗ್ಗೆ ಸೋಮನಾಥಯ್ಯ ಪುನಃ ಹೆಗಡೇನ ತನ್ನ ಮನೀಗೆ ಬರಾಕ್ಕೆ ಕರೆಕಳಿಸಿದ. ಅವನೀಗೆ ತ್ವಾಟದ ಚಿಂತೆ ಹತ್ತಿತ್ತು. ತೂಬು ಸರಿ ಆಗದಿದ್ದರೆ ಮಳಗಾಲದ ನೀರು ಕೆರೇಲಿ ನಿಲ್ಲಾದಿಲ್ಲ. ಬೇಸಿಗೇಲಿ ತ್ವಾಟ ಒಣಗಬಾರದು. ಈ ವರ್ಷ ಮಳೆ ಹತ್ತಾದರೊಳಗೆ ತೂಬು ರಿಪೇರಿ ಮಾಡಿಸಲೇಬೇಕು ಅನ್ನಾದು ಅವನ ಹಟಾ ಆಗಿತ್ತು. ಸೋಮನಾಥಯ್ಯ ಪುನಾ ನೀರಾವರಿ ಇಲಾಖೀಗೆ ಹೋಗಾದಕ್ಕೇ ತನಗೆ ಹೇಳಿಕಳಿಸಿರಬಹುದು ಅಂದುಕೊಳ್ತಾ ಹೆಗಡೆ ಅವನ ಮನೆ ತಾವ ಹೆಜ್ಜೆ ಹಾಕಿದ.

ಹಂದಿಗೋಡು ಖಾಯಿಲೆ ಆಗಿ ನರಳಾ ಈ ಜನ, ಕಷ್ಟಾಬಿದ್ದು, ತ್ವಾಟ, ಜಾನುವಾರು ನಿಗಾ ಮಾಡಾ ಇನ್ನೊಂದು ವರ್ಗದ ಜನ, ಇವರ ತ್ವಾಟದ ಕೆಲಸವೇ ಹರಿಜನರ ಬದುಕಿಗೂ ಆಸರೆ ಆದ ನಂಟು, ಓ ಬದುಕೇ, ಇವರೂ ಇರಬೇಕು. ಅವರೂ ಇರಬೇಕು. ಎಲ್ಲರಿಗೂ ಆರೋಗ್ಯ ಇರಬೇಕು. ಮೇಲು ಕೀಳು ಇರದೇ ಸಂಬಂಧ ಸರೀ ಇರಬೇಕು. ಇದೆಲ್ಲಾ ಹೆಂಗೆ ಸಾಧ್ಯ? ಯೋಚನೆಯ ಸುರುಳಿ ಹೆಗಡೆ ಮನದಲ್ಲಿ ಬಿಚ್ಚತೊಡಗಿತ್ತು.

ಮನೇಕಟ್ಟೆ ಮ್ಯಾಲೆ ಕುಂತು ಕಾಯ್ತಿದ್ದ ಸೋಮನಾಥಯ್ಯ ಹೆಗಡೇನ ನೋಡಿದೋನೇ – ಹೆಗಡೆ, ಇವತ್ತು ಸಾಗರಕ್ಕೆ ಹೋಗಿ ನೀರಾವರಿ ಇಂಜಿನೀಯರನ್ನ ಭೇಟಿ ಮಾಡಿ ಬರಲೇಬೇಕು, ತಯಾರಾಗು ಅಂದ.

ಇಲಾಖೇಗೆ ಹೋಗ್ತಾ ಡಾಕ್ಟರ ಮನೀಗೆ ಹೋಗಬಕು. ಆ ಕೆಟ್ಟಕಾಯಿಲೆ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳದು, ಅವರ ಒಳ್ಳೇದಕ್ಕೆ ಏನಾದರೂ ಮಾದಬಕು ಅಂತ ಹೆಗಡೆ ಯೋಚನೆಮಾಡ್ತಾ ಪುನಾ ಮನೀಗೆ ಹೊಂಟ.

ಪ್ರಶ್ನೆ ಎದುರಾತು. ತಾನು ನೀರಾವರಿ ಇಲಾಖೀಗೆ ಹೊಂಟ್ನಾ? ಡಾಕ್ಟರ್ ಮನೀಗೆ ಹೊಂಟ್ನಾ? ಬಟ್ಟೆ ಧರಿಸಿದೋನು ತಲೆಬುಡ ಹರಿಯದೆ ಮನೆಯಿಂದ ಹೊರಬಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಸ್ತಕ
Next post ಪುಣ್ಯ ಮೂರ್ತಿ

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…