ಒಂಟಿ ಗಿಡ

ಮರಳುಗಾಡಿನ ನಡುವ ಒಂಟಿ ಗಿಡ
ಹೂಬಿಡುವ ಬಾಯಾರಿಕೆ ಅದಕೆ
ನೀರು ತರುತ್ತೇವೆಂದು ಮುತ್ತಿಟ್ಟು ಹೋದವರು
ಬರಲಿಲ್ಲ ತಿರುಗಿ ಸಾವಿಲ್ಲದ ಬುಡಕೆ.

ಮುಂಗುರುಳಿಗೆ ಮುದ ಕೊಟ್ಟು
ಹೆಂಗರುಳ ಗೆದ್ದರು,
ಮನಸಿಗೆ ಮತ್ತೇರಿಸಿ ಮೈಮೇಲೆ ಬಿದ್ದರು.
ಗಿಡವ ಗರ್ಭಿಣಿ ಮಾಡಿ
ಗಿಳಿಪಾಠ ಒಪ್ಪಿಸಿದರು.
ಮರಳುಗಾಡಿನ ತುಂಬ ಮಹಡಿ
ಕಟ್ಟುತ್ತೇವೆಂದರು.
ತೊಟ್ಟಿಲ ತರುತ್ತೇವೆಂದು ಹೊರಟೇಹೋದರು!

ಇಲ್ಲಿ-
ಮರಳುಗಾಡಿನ ನಡುವೆ ಒಂಟಿ ಗಿಡ
ಮೇಲೆ ನೆಲಜಲಗಳ ದಾಟುವ ವಿಮಾನ
ಹಾರುತ್ತವೆ ಆಚೆಗೆ ಬರುತ್ತವೆ ಈಚೆಗೆ
ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ
ತೂಗುತ್ತವೆ ತೊಟ್ಟಿಲು!
ಹುಟ್ಟದ ಮಗುವಿಗೆ ವಿಮಾನ ತುಂಬ
ಹಳಿಯಿಲ್ಲದ ರೈಲು ಆಟದ ಸಾಮಾನು
ಬಾಯಿ ಬಿಟ್ಟರೆ ಬಣ್ಣದ ಬಟ್ಟಲು
ಜಗಜಗಿಸುವ ಜಾಗತಿಕ ಜೋರಿಗೆ
ನೆಲ ಮುಟ್ಟದ ನೂರೆಂಟು ಕಮಾನು
ಹೊರಡಿಸುತ್ತಾರೆ ಪರಮಾನು.

ಮತ್ತದೇ ನೋಟ-
ಮರಳುಗಾಡಿನ ನಡುವೆ ಒಂಟಿ ಗಿಡ
ಬಣ್ಣಕ್ಕೆ ಬೆತ್ತಲಾಗಿ ಬಸುರಾದ ಗಿಡ
ಹೆರಲಾಗದ ಮಗುವಿಗಾಗಿ ನೋವು ತಿನ್ನುತ್ತದೆ
ಮೂಕಮಹಾಕಾವ್ಯ ಬರೆಯುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಳಿಯೇ
Next post ನಾಡ ಹಬ್ಬ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…