ನುಡಿ ನುಡಿಯನಾರಿಸುತ ಒಡಲೊಳಗೆ ಕಿಚ್ಚಿಟ್ಟು
ಗುಡಿಗಳನ್ನು ಕಟ್ಟುವೆನು-ನುಡಿಯ ಶಿಲ್ಪದಲೀಗ
ಕಡುಯಶದ ಜಕಣನಿಗೆ ಒಡಲಬಾಂಧವನಾಗಿ
-ಹಿಡಿಸುವೆನು ಸಿರಿಕೊಡೆಯನು!-
ಹಿಡಿಸುವೆನು ಹೊಗಳಿಕೆಯ ಕೊಡೆಯ ಜಯಚಾಮರವ
ನಡಿವೆ ಶಿವಜೋತಿಯಲಿ, ನುಡಿವರಾರಿದುರಲ್ಲಿ
ಬಿಡು! ಸಳನ, ಹೊಯ್ಸಳನ, ಪೊಡವಿಪನ, ಗೈದಂಧ
-ಕಿಡಿಯಿರಲು ಕೆಚ್ಚೆದೆಯೊಳು-
ಅಗಿದು ಜಗಿಯಲು ನರರು ನರಿಗಳು!
ಯುಗ ಯುಗಾಂತರ ದಿಂದ ಹಿಂಗದೆ
ಸೊಗಸು ರಸವನು ವಸೆದು ವಸೆಯುವ ಪರ್ವ ಭಾರತದ
ಮಿಗಿಲು ಮಿಗಿಲೆನುವಂತೆ ರಸಿಕರು
ಸೊಗಸು ಕಬ್ಬನು ಬೆಳೆವೆ ಪೂರವ
ಯುಗದ ಸೊಬಗಿನ ಗುಪ್ತಗಾಮಿಯ ನೀರ ನಾನೆರೆದು
ಅರಿವಿನಟಿವಿಯ ಸಿಂಗ ನಾರ್ಭಟ!
ಮರಳಿ ನಾಡಲಿ ಕೇಳಿ ಕೇಳಿತು……….
ಸಿರಿವಿಜಯ ನಗರಿಯಲಿ ಶಿಲೆಗಳು ನುಡಿಯಲೆಳಸಿಹವು
ಹಿರಿಯರೆಲ್ಲರು ತೆಗೆದ ಸುಗ್ಗಿಯ
ಪರಿಯ ಕಾಣುವಿರಲ್ತೆ ಗೆಳೆಯರೆ
ಬಿರಿಯುತಿರೆ! ಸಳಕುಸುಮ ಹೊಯ್ಸಳ ಕಂಪ ಬೀರುತಿರೆ!
*****