ಶುಚಿಯು ನಗುತಲೆ ಹಿಂದೆ ಬರ್‍ಪಳು
ಉಚಿತ ಮಾರ್‍ಗವು ತನಗಿದೆನುತಲೆ
ಸಚಿವ! ಹೊಲೆಯನು ಹಿರಿಯ ಪೊರೆವನು ಹೊರಟು ನಿಂದೆಡೆಗೆ.
ಸಚಿವ ಬಾ ಧರೆಯೆಲ್ಲವಳೆಯುವ…….
ಶುಚಿಯ ಜಾನ್ಹವಿ ಹರಿದು ಶ್ರೀ ಹರಿ
ಗುಚಿತದಾಸನವಾಗಲೀಧರೆ ಪರೆಯ ಬಾ ಧೊರೆಯೆ!
ಚಿಗುರಿ ಬೆಳೆಯದ ಮನಗಳಿಲ್ಲಿವೆ
ಚಿಗಿದು ಉರಿಯದ ಭಾವವಿಲ್ಲಿದೆ
ಮೃಗದ ಗವಿಯೊಲು! ಹೊಲಸ ನಿಟ್ಟಿದೆ ಹೊಲೆಯ ನಿಲ್ಲದೆಲೆ.
ನಗುವ ತಾಣವ ಕಂಡೆಯಾದರೆ!
ಹೊಗೆಯು ಸುತ್ತಿರೆ ಜಗದ ಕಳೆಯನು
ಅಗಗೊ! ಹೊಲೆಯನ ಹೆಜ್ಜೆ ಹರಿದಿದೆ ನಾಡಿನುದ್ಧರಕೆ!
ತವಕ ಪಡದಿರು ಧರೆಯ ದೂರಿಗೆ,
ಭವದರಜದಲಿ ಹೊರಳಿ ಆಳುವ!
ಇವರ ಪುಣ್ಯಕೆ ನಾವು ಕಾರಣರೆನಿಸಿ ಬಾಳುವಣ.
ಭವದ ನಂಜನು ಕುಡಿದು ಕಾಯ್ದನ
ಶಿವನ ಸಮ್ಮುಖದಲ್ಲಿ ಹಿರಿಯನು
ಭವಣೆಯೆನ್ನದಲವನ ಸೃಷ್ಠಿಯ ಶುಭ್ರ ಮಾಡಿದವ!
ನಾಡ ಕುವರರ ಮಾಡೆ ಪರರನು
ನೋಡು ನೋಡವು ಹಿರಿಯರಾರ್ಜನೆ!
ಖೋಡಿ ಖೂಳರ ಸೇರುತಿರ್ಪವು ಇಹಕೆ ಪರಕಿರದೆ!
ಮಾಡದಿರು ಹುಲುಮನುಜ! ಭೇದವ!
ಆಡದಿರು ಪರ ಪರೆಯನೆನುತಲೆ!
ನಾಡ ಮಂಗಳಕಾರಿ! ನಿನ್ನನು ದೂರದೂರೆನುವ!
*****