ಕಮಲಮ್ಮ ರಂಗನೊಂದಿಗೆ ಮನೆಯಲ್ಲಿ ಕಾಲಿಟ್ಟಾಗ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಕಾವೇರಿ ಒಬ್ಬಳು ಮೂಲೆಯಲ್ಲಿ ಕೂತು ಮ್ಲಾನವದನಳಾಗಿದ್ದಳು. ಒಬ್ಬರಿಗೊಬ್ಬರು ನಗೆಚಾಟಿಕೆಯಲ್ಲಿ ತೊಡಗಿದ್ದವರಿಗೆ ಒಳಬಂದ ತಾಯಿ ಮಗನನ್ನು ನೋಡಿ ಕ್ಷಣ ತಳಮಳ, ತಟ್ಟನೆ ಪ್ರತಿಭಟನಾ ವೇದಿಕೆ ಸಿದ್ಧ ಮಾಡಿಕೊಂಡರು. ‘ಯಾಕೆ ಈ ಕಳ್ಳನನ್ನು ಬಿಡಿಸಿಕೊಂಡು ಬಂದೆ?’ ಲಾಯರ್ ದರ್ಪದಿಂದ ಎದ್ದುನಿಂತ, ರಂಗನನ್ನು ಮನೆಯಿಂದಾಚೆಗೆ ನೂಕುವವನಂತೆ.
‘ಕಳ್ಳಕಾಕರಿಗೆಲ್ಲಾ ಈ ಮನೆಯಲ್ಲಿ ಜಾಗವಿಲ್ಲ… ನಾವು ಮಾನವಂತರು’ ಲೆಕ್ಚರರ್ ಗಣೇಶ ಪಾಠ ಶುರು ಮಾಡಿದ.
‘ಹೌದು, ಅಸಲಿಗೆ ಈ ಕಳ್ಳನನ್ನು ಹಿಡಿದುಕೊಟ್ಟವರು, ದೂರುಕೊಟ್ಟವರು ಪಾಳೇಗಾರರು. ಅವರ ಮಾತನ್ನು ಮೀರಿ ಇವನನ್ನು ರಿಲೀಸ್ ಮಾಡಲು ಆ ಎಸ್.ಐ.ಗೆ ಎಲ್ಲಿಂದ ಬಂತಪ್ಪಾ ಧೈರ್ಯ?’ ಪರಮೇಶಿ ತೆರೆದ ಬಾಯನ್ನು ಮುಚ್ಚದೆ ಹೆಂಡತಿ ಮೋರೆ ನೋಡಿದ. ಸೊಸೆಯಂದಿರ ಮುಖ ಕಳೆಗುಂದಿತ್ತು.
‘ರಂಗ ಕಳ್ಳ ಅಲ್ಲ ಅಂತ ಗೊತ್ತಾಯ್ತು… ಬಿಟ್ಟು ಬಿಟ್ಟರಪ್ಪಾ’ ಕಮಲಮ್ಮನ ತಣ್ಣನೆ ದನಿ.
‘ಕಳ್ಳ ಅಲ್ಲ ಅಂದ್ರೆ ಹೆಂಗಮ್ಮ ಈ ಮನೆಯಲ್ಲೇ ಕಾಸ್ಟ್ಲೀ ವಾಚ್ ಸಿಕ್ಕಿತಲ್ಲ!’
‘ಪಾಳೇಗಾರರ ಮನೆಯವರು ಈ ಮನೆಯವರನ್ನೇ ಒಳಹಾಕ್ಕೊಂಡು ಆ ವಾಚನ್ನು ಈ ಮನೇಲಿ ಇರಿಸಿರಬೇಕು’ ರಂಗ ಗೇಲಿಮಾಡಿ ನಕ್ಕ.
‘ಅಂದ್ರೆ ನಿನ್ನ ಮಾತಿನ ಅರ್ಥ?’ ಪಾರ್ವತಿ ಗಂಟಲೇರಿಸಿದಳು.
‘ಕುಂಬಳ ಕಾಯಿ ಕಳ್ಳ ಅಂದರೆ ನೀವ್ಯಾಕ್ರಿ ಹೆಗಲು ಮುಟ್ಕೋತೀರಿ? ನಾನೇನ್ ನಿಮ್ಮ ಗಂಡನ ಹೆಸರನ್ನ ಹೇಳಿದ್ನೆ’ ವ್ಯಂಗ್ಯ ನಗೆ ಚೆಲ್ಲಿದ ಮತ್ತೆ ರಂಗ. ಲಾಯರ್ ಬೆಚ್ಚಿಬಿದ್ದ. ‘ತಮ್ಮ ಅನ್ನೋ ಪ್ರೀತಿ ನಮಗೂ ಇದೆ ಕಣಯ್ಯ’ ಅಂದ ಹುಳ್ಳಗೆ ‘ಅದು ಗೊತ್ತಾಯ್ತು ಬಿಡಯ್ಯ’ ಕಮಲಮ್ಮ ತಿರಸ್ಕಾರ ತೋರಿದಳು. ‘ಹೌದು. ರಂಗನ್ನ ಹೇಗೆ ರಿಲೀಸ್ ಮಾಡಿದರು ಅದನ್ನ ಹೇಳಿ!’ ಮಾಧುರಿಗೆ ಕುತೂಹಲ. ‘ಆ ವಾಚನ್ನ ನಾನೇ ಅವನಿಗೆ ಪ್ರೆಸೆಂಟ್ ಮಾಡಿದ್ದೆ ಅಂತ ಉಗ್ರಪ್ಪನ ಮಗಳೇ ಸ್ಟೇಷನ್ನಿಗೆ ಬಂದು ಹೇಳಿಕೆ ಕೊಟ್ಟಳು…’ ಕಮಲಮ್ಮ ಅಂದರು. ‘ಹೌದಾ ಅಮ್ಮಾ’ ಕಣ್ಣೊರೆಸಿಕೊಳ್ಳುತ್ತಾ ಹಿಗ್ಗಿನಿಂದ ಎದ್ದು ನಿಂತಳು ಕಾವೇರಿ. ‘ಹೌದಮ್ಮ, ಉಗ್ರಪ್ಪ ಮೈಲಾರಪ್ಪ ಇಬ್ಬರೂ ಸ್ಟೇಶನ್ನಿಗೆ ಬಂದಿದ್ದರು. ಅವರ ಎದುರಲ್ಲೇ ರಂಗನ್ನ ನಾನು ಪ್ರೀತಿಸ್ತೀನಿ ಅಂತ್ಲೂ ಧೈರ್ಯವಾಗಿ ಹೇಳಿದ್ಳು’ ಕಮಲಮ್ಮ ಹೆಮ್ಮೆಯಿಂದಲೇ ನಡೆದ ಘಟನೆಯನ್ನು ಹುರುಪಿನಿಂದ ವಿವರಿಸಿದರು. ಲಾಯರ್, ಲಕ್ಟರರ್, ಫ್ಯಾಕ್ಟರಿ ಸೂಪರ್‌ವೈಸರ್‌ಗಳ ಮೋರೆ ನಾರುವ ತಿಪ್ಪೆ ಗುಂಡಿಯಂತಾದವು. ‘ಪ್ರೇಮಿಸಿಬಿಟ್ರೆ ಆಗೋಯ್ತೆ… ಅವರ ಯೋಗ್ಯತೆ ಏನು ಅವರು ಇವನಿಗೆ ಮ್ಯಾರೇಜ್ ಮಾಡಿಕೊಟ್ಟಾರಾ ಅದೆಲ್ಲಾ ಕನಸು’ ರಾಗಿಣಿಯ ರಾಗದಲ್ಲಿ ಅಪಸ್ವರ ಕಂಡಿತು. ‘ದೊಡ್ಡವರನ್ನ ಎದುರು ಹಾಕ್ಕೊಂಡು ನಮ್ಮಂಥವರು ಬಾಳೋಕೆ ಸಾಧ್ಯವಾ? ಅವರು ರಂಗನ್ನ ಕೊಂದು ಹಾಕೋಕೂ ಹೇಸೋರಲ್ಲ’ ಪಾರ್ವತಿ ಬೆದರಿಸಿದಳು. ‘ಕೊಲ್ಲೋರು ಇರೋ ಹಾಗೆ ಕಾಯೋನೂ ಇರ್ತಾನೆ ಅತ್ತಿಗೆ, ನೀವು ಗಾಬರಿಯಾಗ್ಬೇಡಿ. ನನ್ನನ್ನ ಹೇಗೆ ರಕ್ಷಿಸ್ಕೋಬೇಕೋ ಅದು ನನಗೆ ಗೊತ್ತಿದೆ. ನನಗಾಗಿ ನೀವು ಯಾರೂ ಚಿಂತೆ ಮಾಡೋ ಅಗತ್ಯವಿಲ್ಲ’ ರಂಗ ಅಂದು, ಅವರು ಅತ್ಯಂತ ಅಲಕ್ಷ್ಯವಾಗಿ ನೋಡಿದ.
‘ಬಾ ಅಣ್ಣಾ ಊಟ ಮಾಡುವಂತೆ’ ಕಾವೇರಿ ಉತ್ಸಾಹದಿಂದ ಅಡಿಗೆ ಕೋಣೆಯತ್ತ ನಡೆದಳು. ಅವರು ಅಡಿಗೆ ಕೋಣೆ ಸೇರುತ್ತಲೇ ಗಂಡ/ಹೆಂಡದಿರು ಪರಸ್ಪರ ಗುಸುಗುಟ್ಟಿದ್ದರು. ‘ಅಲ್ರೀ, ಅದೆಂಗೆ ಆ ಪಾಳೇಗಾರರು ನಿಮಗೆಲ್ಲಾ ಈಗ ಥರ್ಟಿಫಿಫ್ಟಿ ಸೈಟ್ ಕೊಡ್ತಾರೆ?’ ಹೆಂಡಂದಿರ ಕಳವಳ ಅನುಮಾನ
‘ಆಡಿದ ಮಾತಿಗೆ ತಪ್ಪೋರಲ್ಲ ಪಾಳೇಗಾರರು’ ಲಾಯರ್ ಅಂದ.
‘ಅದು ಪಾಳೆಗಾರ್‍ಕೆ ಕಾಲದ ಮಾತಾಯ್ತು. ಇವರ ದರ್ಪ ದೌಲತ್ತು ಮಾಡೋ ಅನ್ಯಾಯ ನೋಡಿದ್ರೆ ನಮಗೆ ನ್ಯಾಯ ಸಿಗುತ್ತೆ ಅನ್ನಿಸುತ್ತಾ. ಅಲ್ದೆ ರಂಗ ಬೇರೆ ಬಚಾವಾಗಿ ಬಂದುಬಿಟ್ಟ’ ನಿಟ್ಟುಸಿರುಬಿಟ್ಟಳು ಪಾರ್ವತಿ.
‘ಅದವರ ಮಗಳ ತಪ್ಪು. ನಾವು ಅವರು ಹೇಳಿದ್ದಾಗೆ ಕೇಳಿದ್ದೀವಿ… ಕೇಳ್ತಿವಿ. ಅವರಿಗೆ ನಾವು ಬೇಕೆ ಬೇಕು. ಆದ್ದರಿಂದ ನಮಗೆಲ್ಲಾ ಥರ್ಟಿ ಬೈ ಫಿಫ್ಟಿ ಸೈಟ್ ಗ್ಯಾರಂಟಿ… ಲಾಯರ್ ಆಶ್ವಾಸನೆ ಎಲ್ಲರೂ ಕಳೆದುಕೊಂಡ ಆಶೆಯನ್ನು ಮತ್ತೆ ಚಿಗುರಿಸಿತು.
ಇದೇ ಸನ್ನಿವೇಶವಲ್ಲದಿದ್ದರೂ ಇದಕ್ಕಿಂತ ಭಿನ್ನವಾಗೇನೂ ಪಾಳೇಗಾರರ ಮನೆಯ ವಾತಾವರಣವಿರಲಿಲ್ಲ. ಚಿನ್ನುವನ್ನು ಮನೆಗೆ ಕರೆತಂದರೂ ಉಗ್ರಪ್ಪನಾಗಲಿ, ಮೈಲಾರಿಯಾಗಲಿ ಅಂತಹ ಗೆಲುವಾಗಿ ಕಾಣಲಿಲ್ಲ. ಚಿನ್ನು ಮಾತ್ರ ಎಂದಿನಂತೆ ಭಿಡೆಯಿಲ್ಲದೆ ಆರಾಮವಾಗಿ ತೂಗುಯ್ಯಾಲೆಯಲ್ಲಿ ಕೂತು ತೂಗಿಕೊಳ್ಳುವಾಗ ಉಗ್ರಪ್ಪ ದಾವಾನಿಲವಾದ.
‘ನಮ್ಮ ಮನೆ ಮಾನ ಕಳೆದು ಬಿಟ್ಳಪ್ಪಾ ಕಳೆದುಬಿಟ್ಳು ಈ ಲೌಡಿ’ ಉಗ್ರಪ್ಪ ಭರಮಪ್ಪನವರನ್ನು ನೋಡುತ್ತಾ ರೋಷತಪ್ತನಾದ.
‘ಹಂಗೆಲ್ಲಾ ಮನೆಮಾಣಿಕ್ಯನಾ ಲೌಡಿಪೌಡಿ ಅನ್ನಬಾರ್‍ದು ಕಣ್ಲಾ’ ಸಿಡುಕಿದರು ತಾತ.
‘ಅಲ್ಲಿ ಏನು ನಡೀತು ಅಂತ ಕೇಳಿದ್ರೆ ನೀನೆ ಛಡಿ ತಗೊಂಡು ಬಡೀತಿಯಾ’.
‘ಅಂತದ್ದೇನ್ಲಾ ಆಗಿದ್ದು…? ಇನ್ಸ್‍ಪೆಕ್ಟರು ಅವನ ಮೇಲೆ ಕೇಸ್ ಬುಕ್ ಮಾಡಿದ್ನಾ?’
‘ಅವನೇನ್ ಮಾಡ್ತಾನೆ ಅವನ ಹಿಂಡೆ ಹೆಣ. ಆ ವಾಚನ ನಾನೇ ರಂಗನಿಗೆ ಗಿಫ್ಟ್ ಆಗಿ ಕೊಟ್ಟಿದೀನಿ ಅಂತ ಹೇಳಿಕೆ ಕೊಟ್ಟಿದಾಳೆ ನಿನ್ನ ಮೊಮ್ಮಗಳು… ಅಷ್ಟೇ ಅಲ್ಲ ನಾನು ಅವನ್ನ ಪ್ರೀತಿಸ್ತೀನಿ ಮೆಜಾರ್‍ಟಿಗೆ ಬಂದೀದೀನಿ ಅಂತೆಲ್ಲಾ ಬೊಗಳೋದೆ…? ಬಿಟ್ಟಿದ್ರೆ ರಂಗನ ಹಿಂದೆ ಹೋಗೋಳೇನೋ. ನಾವೇ ಇವಳ ಎತ್ತಿಹಾಕ್ಕೊಂಡು ಬಂದ್ವಿ’ ಅವಡುಗಚ್ಚಿದ ಉಗ್ರಪ್ಪ ರಕ್ತ ಒಸರಿತು.
‘ಆ ರಂಗ… ಅವನೇನ್ ಅಂದನ್ರಲೆ?’ ಭರಮಪ್ಪ ಕೆಂಗಣ್ಣಾದರು.
‘ಈಗ ನಿಮ್ಮ ಮನೆಯವರ ಜೊತೆ ಹೋಗು ಅಂದ. ನಾಳೆ ನಿನ್ನ ಮನೆಯವರೇ ಒಪ್ಪಿ ನನಗೆ ಕೊಟ್ಟು ಮದುವೆ ಮಾಡಿಕೊಡೋ ಹಂಗೆ ಮಾಡ್ತೀನಿ ಅನ್ನೋ ಟೈಪ್ ಮಾತಾಡಿ ಅವನೇ ಮೊಂಡು ಹಿಡಿದಿದ್ದ ಇವಳನ್ನು ಕರೆತಂದು ಕಾರಲ್ಲಿ ಕೂರಿಸಿದ’ ಉಗ್ರಪ್ಪ ಅವನತಮುಖಿಯಾದ.
‘ಮತ್ತೆ ಎತ್ತಿ ಹಾಕ್ಕೊಂಡು ಬಂದ್ವಿ ಅಂತ ಅಬ್ಬರ ಮಾಡಿದಿರಲ್ಲ ಭಾವ?’ ವ್ಯಂಗವಾಗಂದು ಕಿರುನಗೆ ಬೀರಿ ನಗೆಯಲ್ಲೂ ವ್ಯಂಗ್ಯ ತುಳುಕಿಸಿದಳು ಕೆಂಚಮ್ಮ ಅಲಿಯಾಸ್ ಸುಮ. ಮೈಲಾರಿಗೆ ಉಂಗುಷ್ಟದಿಂದ ನಡುನೆತ್ತಿವರೆಗೂ ನಂಜು ಏರಿತು. ‘ಅವನು ಹೇಳಿದ ತಕ್ಷಣ ಇವಳ ಅವನ ಲಗ್ನ ಆಗೋತು ಅಂಡ್ಕೊಂಡೇನೇ ಭಿತ್ರಿ. ಅವನ ಹೆಣ ಉರುಳಿಸಿ ಇವಳ ಕೊರಳಿಗೆ ತಾಳಿ ಕಟ್ಟಿಸ್ತೀನಿ. ಎಲ್ಡೂ ಒಂದೇ ಮೂಹೂರ್ತದಾಗೇ ಫಿಕ್ಸ್… ತಿಳ್ಕೊ?’ ಮೈಲಾರಿ ಅಂದವನೆ ಕೆಂಚಮ್ಮನ ಕಪಾಳಕ್ಕೆ ರಪ್ಪನೆ ಬಾರಿಸಿಬಿಟ್ಟ. ಆ ಪೆಟ್ಟಿಗೆ ಬೇರೆ ಹೆಂಗಸಾಗಿದ್ದರೆ ಮೂರ್ಛೆ ಹೋಗುತ್ತಿದ್ದಳೇನೋ. ಕನಿಷ್ಠ ಉಸಿರೆತ್ತದೆ ಮೂಲೆ ಸೇರುತ್ತಿದ್ದಳೇನೋ, ಕೆಂಚಮ್ಮ ಜ್ವಾಲಾಮುಖಿಯಾದಳು.
‘ಇದೇ ಏಟು ರಂಗನಿಗೆ ಹೊಡೆದಿದ್ರೆ ಮೆಚ್ಕೋತಿದ್ದೆ. ಹೆಂಗಸಿನ ಮೇಲೆ ಕೈ ಮಾಡ್ತಿಯಲ್ಲ ನಾಚಿಕೆಯಾಗೋಲ್ವಾ, ನಿನ್ನ ಜನ್ಮಕ್ಕೆ’ ಸ್ಫೋಟಗೊಂಡಳಾಕೆ. ಭರಮಪ್ಪ ‘ಹುಶ್’ ಎಂದು ಬಾಯಿಯ ಮೇಲೆ ಬೆರಳಿಟ್ಟು ಎದ್ದು ನಿಂತರು. ಮನೆಯಲ್ಲಿ ಮೌನ ಆವರಿಸಿತಾದರೂ ಉಯ್ಯಾಲೆ ತೂಗುವ ಶಬ್ದ ಮಾತ್ರ ಮನೆಯನ್ನೆಲ್ಲಾ ಅಣುಕಿಸಿತು. ‘ತಾಯಿ, ನೀನು ಹಿಂಗೆಲ್ಲಾ ಮಾತಾಡಬಾರ್‍ದು ಕಣವ್ವ, ಮನೆಯೋರ ಮಾನ ಕಳೆಯೋಕೆ ನಿಂತ ಒಬ್ಬ ಕಳ್ಳನ್ನ ವಹಿಸಿಕೊಂಡು ಮಾತಾಡ್ತಾರೇನೆ ನಮ್ಮವ್ವ! ಆಳುಕಾಳು ಏನ್ ತಿಳ್ಕೊಂಡಾರೆ’ ಭರಮಪ್ಪನೊಂದು ನುಡಿದರು.
‘ಅವನು ಕಳ್ಳ ಅಲ್ಲ ಅಂತ ಚಿನ್ನುನೇ ಹೇಳಿದ್ದಾಳಲ್ಲ. ಇಷ್ಟಕ್ಕೂ ಈ ಅಣ್ಣತಮ್ಮಂದಿರೆ ಆ ವಾಚನ್ನು ರಂಗನ ಮನೇಲಿ ಇರಿಸಿರ್ತಾರೆ… ಇದೆಲ್ಲಾ ಇವರಿಗೇನ್ ಹೊಸತಾ ಮಾವ?’ ಮಾವನನ್ನೇ ನೇರವಾಗಿ ನೋಡುತ್ತಾ ಪ್ರಶ್ನಿಸಿದಳು.
‘ಬೋಸುಡಿ, ನಮ್ಮ ಮನೆ ಮಾನ ಕಳೆದವನ ಪರ ವಕಾಲತ್ತು ಮಾಡ್ತಿಯೇನೆ’ ಮೈಲಾರಿ ಮತ್ತೊಂದು ಕೆನ್ನೆಗೆ ಬಾರಿಸಿದ. ಪೆಟ್ಟು ಬಿದ್ದಷ್ಟು ಗಟ್ಟಿಯಾದಂತೆ ಕಂಡಳು ಕೆಂಚಮ್ಮ.
‘ಮನೆ ಮನೆತನದ ಮಾನ ಕಳಿತಾ ಇರೋರು ನೀವು. ಈ ಮನೆ ಮಾನ ಉಳಿಸೋರು ನೀವ್ಯಾರು ಅಲ್ಲ ರಂಗ… ತಿಳ್ಕೊಳಿ’ ತೋರುಬೆರಳು ತೋರಿಸಿದಳು ಕೆಂಚಮ್ಮ.
‘ಕೆಂಚಮ್ಮ… ನಡಿ ಒಳ್ಗೆ’ ಭರಮಪ್ಪ ಜಬರಿಸಿದರು.
‘ನಾನೇನ್ ತಪ್ ಮಾತಾಡ್ತಿಲ್ಲ ಮಾವ. ಮರಾಠಿಗಳ ಪೈಲ್ವಾನನಿಗೆ ಈ ನಿಮ್ಮ ಸಣ್ಣಮಗ ಪುಣ್ಯಪುತ್ರ ಸೋತುಹೋದಾಗ ಷರತ್ತು ಏನಿತ್ತು? ಅವನಿಗೇ ಚಿನ್ನುನ ಲಗ್ನ ಮಾಡಿಕೊಡಬೇಕಾಗಿತ್ತು. ಮನೆ ಹೆಣ್ಣು ಮಕ್ಳನ ಅಡವಿಟ್ಟು ಸೋತು ಕಣ್ಣು ಬಾಯಿ ಬಿಡುವಾಗ ಆ ಮರಾಠಿ ಪೈಲ್ವಾನನ್ನ ಕುಸ್ತಿನಾಗೆ ಸೋಲಿಸಿದೋನು ರಂಗ, ಹಂಗೆ ನೋಡಿದ್ರೆ ಅವನಿಗೆ ನಿಮ್ಮ ಮೊಮ್ಮಗಳ ಕೊಟ್ಟು ಆವತ್ತೇ ಲಗ್ನ ಮಾಡಬೇಕಿತ್ತು. ಅದೇ ಮಾತ್ನೆ ಮರಾಠಿಗರೋನು ಹೇಳ್ದ… ನನಗೆ ಅದೆಲ್ಲಾ ಬ್ಯಾಡ ಕುಸ್ತಿ ಗೆಲುವೇ ಸಾಕು ಅಂತ ಆಗ್ಲೂ ನಿಮ್ಮ ಮನೆಮಾನ ಉಳಿಸ್ದೋನು ರಂಗ… ಅವನಿಗಿಂತ ಗಂಡು ಬೇಕೆ ನಿಮಗೆ?’ ದಬಾಯಿಸಿದಳು. ಮೈಲಾರಿ ಮೈಮೇಲಿನ ಪರಿವೆಯನ್ನೇ ಕಳೆದುಕೊಂಡು ಹೆಂಡತಿಯನ್ನು ನೂಲುಹಗ್ಗದಿಂದ ಬಡಿಯಲಾರಂಭಿಸಿದ. ‘ನಿನ್ನ ಬಲಗೈನಾ ಉಳಿಸ್ದೋನು, ರಕ್ತ ಕೊಟ್ಟು ಪ್ರಾಣ ಕಾಪಾಡಿದೋನು ರಂಗನೇ ಕಣಯ್ಯ ಗಂಡಸೇ’ ಏಟು ಬಿದ್ದಂತೆ ಅವಳ ಬಾಯಿನ ಮಾತುಗಳೂ ಬಿರುಸಾದವು. ಮನೆಯವರೆಲ್ಲಾ ತೆಕ್ಕೆ ಬಿದ್ದು ಮೈಲಾರಿಯಿಂದ ಕೆಂಚಮ್ಮನನ್ನು ಬಿಡಿಸಿದರು. ಚಿನ್ನಮ್ಮನಿಗೆ ನಡುಕ. ‘ಬಾರವ್ವ ಹೆಣ್ಣಿಗೆ ಈಟೊಂದು ತಿಮಿರು ಇರಬಾರ್‍ದು… ಬಾ ಬಾ’ ಬಲವಂತವಾಗಿ ಒಳಗೆ ಕರೆದೊಯ್ದಳು. ಯಾರಿಗೂ ಮಾತನಾಡುವುದಿರಲಿ ಒಬ್ಬರ ಮುಖವನ್ನೊಬ್ಬರು ನೋಡಲೂ ಸೋತು ಬಸವಳಿದವರಂತೆ ತಮ್ಮ ಕೋಣೆ ಸೇರಿದಾಗಲೂ ಸಹ ಕಿರುನಗೆ ಬೀರುತ್ತಾ ಚಿನ್ನು ತೂಗುಯ್ಯಾಲೆಯಲ್ಲಿ ತೂಗಿಕೊಳ್ಳುತ್ತಲೇ ಇದ್ದಳು. ಅದರಿಂದ ಹೊರಹೊಮ್ಮುವ ‘ಕಿರ್‌ಕಿಂವ್’ ಶಬ್ದ ಕಿವಿಯಲ್ಲಿ ಕಾದಸೀಸ ಸುರಿದಷ್ಟು ಹಿಂಸೆ ನೀಡಿದರೂ ಯಾರೂ ಚಿನ್ನುವನ್ನು ಗದರಿಕೊಳ್ಳುವ ಸಾಹಸ ಮಾಡಲಿಲ್ಲ.
ಕಾಲೇಜಿನ ದಿನಚರಿ ಎಂದಿನಂತೆ ಸಾಗಿತ್ತು. ಪರೀಕ್ಷೆಯ ದಿನಗಳೂ ದಾಪುಗಾಲು ಇಡುತ್ತಿದ್ದವು. ಸೆಮಿಸ್ಟರಿಗೆ ಹುಡುಗ ಹುಡುಗಿಯರು ತಯಾರಿ ನಡೆಸಿದ್ದರು. ರಂಗ ಎಂದೂ ಕಾಲೇಜು ತಪ್ಪಿಸಲಿಲ್ಲ. ಓದಿನ ಕಡೆಗೂ ಅಷ್ಟೇ ಆಸಕ್ತ. ಆದರೆ ದಿಢೀರನೆ ಕಾಲೇಜಿಗೆ ಬರುವುದನ್ನೇ ನಿಲ್ಲಿಸಿಬಿಟ್ಟ ಚಿನ್ನು ಅಲಿಯಾಸ್ ಭವಾನಿ ಬಗ್ಗೆ ಚರ್ಚೆ ನಡೆಸದವರೇ ಇಲ್ಲ. ಲೆಕ್ಚರರ್‌ಗಳಿಗೂ ಕಾಲೇಜ್ ಏಕೋ ಬೋರ್ ಅನ್ನಿಸುವಾಗ ಪಡ್ಡೆ ಹುಡುಗರ ಪಾಡೇನು. ಒಂದೇ ಹಳ್ಳಿಯವರೆಂದೇ ರಂಗನನ್ನು ಅವಳ ಬಗ್ಗೆ ವಿಚಾರಿಸದವರೇ ಪಾಪಿಗಳು.
‘ನನಗೇನೂ ಗೊತ್ತಿಲ್ಲಪ್ಪಾ… ಅವಳಿಗೇನಾದ್ರೂ ಗಂಡು ನೋಡ್ತಿದಾರೇನೋ’ ಎಲ್ಲರಿಗೂ ಅವನ ಬಳಿ ದೊರಕಿದ್ದು ಒಂದೇ ಉತ್ತರ. ಈ ಮಾತನ್ನು ಕೇಳಿಸಿಕೊಂಡು ಸಡನ್ ಅಪ್‍ಸೆಟ್ ಆದವನೆಂದರೆ ಸಂಗ್ರಾಮ. ಅವನಿಗೆ ಕಾಲೇಜು, ಓದು, ಜಿಮ್ಮು ಯಾವುದೂ ಅಲರ್ಜಿ. ಅವಳನ್ನು ತಾನೇ ಹೇಗಾದರೂ ಸರಿ ಮದುವೆಯಾಗಿ ರಂಗನನ್ನು ಮಂಗನನ್ನಾಗಿ ಮಾಡಬೇಕೆಂಬ ಹಂಬಲ. ತನಗೆ ಅವಮಾನ ಮಾಡಿದ ಅವಳನ್ನು ಮದುವೆಯಾಗಿ ತನ್ನ ಅಂತಃಪುರ ಸೇರಿಸಿಕೊಳ್ಳುವ ಚಪಲ. ದಿನೆದಿನೆ ಕಳೆಗುಂದಿದ ಮಗನ ಮುಖವನ್ನು ಓದಿದ ತಂದೆ ದುರ್ಗಸಿಂಹ ನೊಂದುಕೊಂಡರು. ತಾನು ಎಷ್ಟು ಸಂಪಾದಿಸಿದರೇನು, ಮಗನ ಮುಖದಲಿ ನಗೆ ತಾರದಿದ್ದ ಮೇಲೆ ಅಂದುಕೊಂಡ ದುರ್ಗಸಿಂಹ ಮಗನ ಆಪ್ತ ಗೆಳೆಯರಲ್ಲಿ ವಿಚಾರ ಮಾಡಿದ. ವಿಷಯ ತಿಳಿದ ದುರ್ಗಸಿಂಹ ನಕ್ಕುಬಿಟ್ಟ. ಒಂದು ಹುಡುಗಿಗಾಗಿ ತನ್ನ ಮಗ ಬಳಲುವುದೆ. ತಡಮಾಡದೆ ಹುಡುಗಿ ಮನೆ ಮನೆತನ ಕುಲಗೋತ್ರದ ವರದಿ ತರಿಸಿಕೊಂಡ ನಂತರ ಮಗನೊಡನೆ ಮಾತಿಗಿಳಿದ.
‘ಯಾಕೋ ಹೀಗಿದ್ದಿ ಮಗು?’
‘ಫ್ರೆಂಡ್ಸ್ ಹತ್ತಿರ ಎಲ್ಲಾ ಕೇಳಿ, ತಿಳಿದೂ ಪುನಃ ನನ್ನನ್ನು ಬೇರೆ ಕೇಳ್ತಿರಾ?’ ಮಗ ಮನಸ್ಸು ಬಿಚ್ಚಿ ಮಾತನಾಡದಷ್ಟು ಬಳಲಿದ್ದಾನೆ ಅಂದುಕೊಂಡ ತಂದೆ.
‘ನಿನಗೇನೋ ಗರ್ಲ್‌ಫ್ರೆಂಡ್ಸ್ ಕೊರತೆಯಾಗಿರೋದು?’ ತಿಳಿಯಾಗಿ ನಕ್ಕ ಸಿಂಹ.
‘ಅವರೆಲ್ಲಾ ಭೂಮಿ ಮೇಲಿನ ನಕ್ಷತ್ರಗಳು, ಚಿನ್ನು ಆಕಾಶದಲ್ಲೊಂದು ನಕ್ಷತ್ರ ಇದ್ದಾಗೆ, ಅದನ್ನ ಹಿಡಿಬೇಕು, ಪಡಿಬೇಕು. ಅದು ನನ್ನ ಆಕಾಂಕ್ಷೆ ಮಹಾತ್ವಾಕಾಂಕ್ಷೆ’ ಸಂಗ್ರಾಮ ಮನಸ್ಸು ತೆರೆದಿಟ್ಟ. ಮಗನ ತುಟಿಗೆ ಸಿಗರೇಟ್ ಇಟ್ಟು ತಾವೇ ಲೈಟರ್‌ನಿಂದ ಹತ್ತಿಸಿದ. ದುರ್ಗಸಿಂಹ ನಕ್ಕ.
‘ಹುಚ್ಚು ಹುಡುಗ, ಚಂದ್ರನ್ನೇ ಕೇಳಿದರೂ ತಂದುಕೊಡಬಲ್ಲ ತಾಕತ್ತಿರೋ ತಂದೆ ಇರೋವಾಗ ಇಂತಹ ಜುಜುಬಿ ವಿಷಯಕ್ಕೆಲ್ಲಾ ಟೈಮ್‌ವೇಸ್ಟ್ ಮಾಡೋದೇನೋ… ಅವಳನ್ನೇ ಮದುವೆ ಆಗಬೇಕು ಅಂತಿದ್ದೀಯೋ ಅಥವಾ…’ ನರಿನಗೆ ಮೂಡಿತು ದುರ್ಗಸಿಂಹನ ಮುಖದಲ್ಲಿ.
‘ಮದುವೇನೇ ಆಗಬೇಕು ಡ್ಯಾಡಿ’ ಸೇಡಿನ ನಗೆ ಮೂಡಿದ್ದು ಸಂಗ್ರಾಮನಲ್ಲಿ.
‘ಓಕೆ ಮೈ ಬಾಯ್… ದಟ್ಸ್‌ಗುಡ್’ ತಂದೆಯ ಗ್ರೀನ್‌ಸಿಗ್ನಲ್ ಬಿತ್ತು.
‘ಆ ಹುಡುಗಿ ಹಳ್ಳಿಯಲ್ಲಿರೋ ದೊಡ್ಡ ಪಾಳೇಗಾರರ ಮನೆಯವಳಂತೆ, ಹಳ್ಳಿಯಲ್ಲಿ ಇದ್ದರೂ ಅವರಿಗೆ ದಿಳ್ಳಿವರೆಗೂ ಪ್ರಭಾವವಿದೆಯಂತೆ, ಒಂದಿಷ್ಟು ಖತರ್‌ನಾಕ್ ಇದ್ದಾರಂತೆ’ ಮಗನಲ್ಲಿನ ಆತಂಕ ಕಂಡ ದುರ್ಗಸಿಂಹ ಗಹಗಹಿಸಿ ನಕ್ಕರು.
‘ನನಗಿಂತ ಖತರ್‌ನಾಕ್ ಯಾರಿದ್ದಾರೋ ಮಗನೆ ಈ ಜಗತ್ತಿನಲ್ಲಿ…? ಅವಳ ಬಗ್ಗೆ ತಲೆಕೆಡಿಸ್ಕೋ ಬೇಡ… ಅವಳ ಖಾನ್‌ದಾನ್ ಡಿಟೇಲ್ಸ್ ನನ್ನ ಹತ್ತಿರ ಇದೆ. ಅನೇಕ ವ್ಯವಹಾರಗಳಲ್ಲಿ ಅವಳ ಮನೆಯವರು ನನ್ನ ಜೊತೆ ಬಿಸಿನೆಸ್‍ಪಾರ್ಟ್‌ನರ್, ಪಾರ್ಟ್‌ನರ್‌ಗಳಾದ ನಾವು ರಿಲೇಟಿವ್‌ಗಳಾದ್ರೆ ಹೆಚ್ಚು ನಮಗೇ ಲಾಭ, ಡೋಂಟ್ ವರಿ…. ಸಂಪಿಗೆ ಹಳ್ಳಿಗೆ ಹೋಗೋಣ. ಖಂಡಿತ ಅವರು ನಮ್ಮ ಸಂಬಂಧವನ್ನು ನಿರಾಕರಿಸೋಲ್ಲವಯ್ಯಾ…’ ಸಂಗ್ರಾಮನ ಮುಖ ಫ್ರೂಟ್‌ಸಲಾಡ್ ಆಯಿತು.
*****