ಪಿಡಿಗೆ ಅಡವೆನ್ನುವೊಲು! ನಿಡುಗತ್ತಲಡಗಿರಲು
ಸುಡುವ ಮನದವಮಾನದಲ್ಲಿ ಬೆಂದು ಬೆಂದು!
ಕಡುದುಗುಡ ಭಾರವನು ಹೂರುತಿರುವಳಾರೊ…………
ಅಮಮ! ಮಲಗಿರಲೆಲ್ಲ ಮೈಮರೆದು ಮರೆದು!-
ದೂರದಾತಾರೆಗಳು ತೀರದಾದುಗುಡಕ್ಕೆ
ತುಂಬಿ ಕಂಗಳ ನಿಂದು ನಿಡುಸುಯ್ದು ನೋಡಿ-
ಅಂಬ! ನೀನಾರೌವ್ವ ದುಗುಡವೇನೆನಲು
-ಅಮಮ! ಮಲಗಿರಲೆಲ್ಲ ಮೈಮರೆದು ಮರೆದು
ಯಾರದಾರಲಲ್ಲಲ್ಲಿ! ದಾರಿಯಲಿ ನಿಲ್ಲುತಲೆ
ಕುಂಟುತ್ತಲೆಡವುತ್ತ ನಡೆಯುತ್ತಲಿಹಳು
ಎಂಟು ರಾಜ್ಯದ ಮಾತೆ ಗಂಭೀರೆ ಯಾರೊ!
-ಅಮಮ! ಮಲಗಿಹರೆಲ್ಲ ತನುಮನವ ಮರೆದು-
ಸೆರೆ ಹಿಡಿದ! ಸರಪಳಿಯ ಸರಸರಕಜಣಜಣಕೆ
ನೆರೆ ಹಳಿವ ನಿಡುನಿಟ್ಠುರದ ನುಡಿಗೆ ನಡುಗಿ!
ಸೆಳೆದೊಯ್ಯುವಳು ಅಡಿಗಳನು! ಎಡವಿದರು ಎದ್ದು
-ಅಮಮ! ಮಲಗಿಹರಿವರು ಮೈಮರೆದು ಮರೆದು-
ಈ ಜಗದ ತಾಯಿಗೀಸೋಜಿಗದ ಭಂಧನವೆ?
ಪೂಜೆಗೊಂಬುವ ಪದ ಬಂಧನದಲಿರಲು
ಪೂಜೆಮಾಳ್ಪನೆ! ನಾನು! ಸಂಕೋಲೆಯ ಸೆರೆಯ!
-ಅಮಮ! ಮಲಗಿಹರೆಲ್ಲ ತನುಮನವ ಮರೆದು-
ಹೆಜ್ಜೆಯೊಂದಿಗೆ ಧನಿಯು! ಗೆಜ್ಜೆ ಪಾಡಗವಲ್ಲ.
ಸದ್ದ ಕೇಳಿದೆ ನಾನು! ಸರಪಳಿಯ ಸದ್ದ.
ನಿದ್ದೆ ತಿಳಿದದ್ದು ನಾನೆದ್ದು ಕುಳಿತಿರಲು………..
– ಅಮಮ! ಮಲಗಿಹರಿವರು ಮೈಮರೆದು ಮರೆದು-
ಜನದ ಗಜಬಿಜಿಯಲ್ಲಿ! ತನುಮನದ ಕೂಗಿನಲ್ಲಿ!
ಕನಸಿನಾಸಿರಿಪಾದ ಸರಪಣಿಯ ಸೆಳೆವ…….
ಜಣ ಝಣವು ಕೇಳುತಿದೆ ಈ ಹೃದಯದಲ್ಲಿ!
-ಅಮಮ! ಮಲಗಿಹರಿವರು ತನುಮನವ ಮರೆದು-
*****