ವಾಸ-ನಾಲ್ಕು ಪುಟಗಳ ಮಧ್ಯೆ
ಭಾಷೆ-ವ್ಯಾಕರಣ ಸೂತ್ರಗಳ ಮಧ್ಯೆ
ಗಡಿ ಮಡಿಗಳ ಇಕ್ಕಟ್ಟಿನೊಳಗೆ ಹೀಗೆ
ಬಿಕ್ಕಟ್ಟಿಗೆ ಸಿಕ್ಕು ಬಾಳಿದರೂ
ತರ್ಕದ ತಲೆಮೆಟ್ಟಿ ಹಾಡುತ್ತದೆ
ಕಟ್ಟು ಮೀರಿ ಹುಟ್ಟುವ ಪದ್ಯದ ಸತ್ಯ.
ಅದರ ದನಿ – ಬಳೆ ನೂಪುರ ಕಾಲುಂಗರ,
ಕಳೆ-ಎಳೆ ಹುಡುಗನ ಮುಖದಂಗಳ;
ಒಡಲು ಹನಿಯಾದರೂ ಜಿಗಿಯುತ್ತದೆ
ಮನೆ ಮಠ ನೆಲ ಬಾನು ತಾರೆಯ,
ಮಂಗಳ ತಿಂಗಳ ಮೇರಯ.
ಎಂದೇ ಸೆಣಸುವ ಕಣದಲ್ಲಿ
ಇಂದಿಗೂ ಸಾಕ್ರಟೀಸ್ ಇದ್ದೇ ಇದ್ದಾನೆ;
ಹಳೆ ವೇಶದ ಕಟ್ಟೊಡೆದು
ಉರಿ ಉರಿ ಹಿಪ್ಪಿ ಹುಟ್ಟುತ್ತಾನೆ;
ಪ್ರಸ್ತುತ ಪ್ರಿಯಗಳ ದಾಳಿಯನ್ನು ತಡೆದು
ಸೋಗಿನ ಸತ್ಯಗಳ ಸೌಧವನ್ನು ಒಡೆದು
ಬಯಲ ಬಿಡುಗಡೆಗೆ ತುಯ್ಯುತ್ತಾನೆ,
ಒಡಲ ಗುಡುಗುಡಿ ಹೊತ್ತಿ
ನೆತ್ತಿಯ ಆಕಾಶಕ್ಕೆತ್ತಿ
ಸದಾ ಪಾರಿಜಾತಕ್ಕೆ ಸುಯ್ಯುತ್ತಾನೆ.
*****