ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ?
ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ
ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ
ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ
ಯಾವ ಅಲೌಕಿಕ ಶ್ರುತಿಯಿದು, ಇದಕ್ಕೆ ಲೋಕವ ಹೂಡಿದರೇತಕ್ಕೆ?
ಆರಿಹೋಗುತಿದೆ ಎಲ್ಲ ಧಗೆ ಈ ಪ್ರಾಣವೀಣೆಯ ನುಡಿತಕ್ಕೆ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”
ಕುಣಿಯುತ ಬಂದರು ಕೈಗಳನೆತ್ತಿ ಕೃಷ್ಣ ಭಕ್ತರು ಬೀದಿಯಲಿ
ಆನಂದದ ಉದ್ರೇಕಕೆ ತುಳುಕಿದೆ ಕಂಬನಿಧಾರೆ ಕೆನ್ನೆಯಲಿ
ಹೊಳೆಯುವ ನುಣ್ಣನೆ ತಲೆ, ಹಿಂಬದಿಯಲಿ ಚಲಿಸುತ್ತಿದೆ ಶಿಖೆ ಅತ್ತಿತ್ತ
ಸರಿದವು ವಾಹನ ದಾರಿಯ ಬಿಟ್ಟು, ಒಳಗಿನ ಜನ ಕೈಮುಗಿಯುತ್ತ
ಕುಣಿದರು ಭಕ್ತರು ಲಜ್ಜೆಯ ತೊರೆದು ಹಾಡಹಗಲು ನಡುಬೀದಿಯಲಿ
ಹಿಂದೆ ಕುಣಿದಂತೆ ಪ್ರಭು ಚೈತನ್ಯರು ದನಿಯನೆತ್ತಿ ಆಕಾಶದಲಿ-
“ರಾಮ ಹರೇ ರಾಮ ಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”
ಮಿರುಗುವ ಗೋಪೀಚಂದನ ಹಣೆಯಲಿ, ಕೊರಳಲಿ ತುಳಸೀಮಣಿಮಾಲೆ
ಎದೆಯಲಿ ತೂಗುವ ಸಣ್ಣ ಚೀಲದಲಿ ಶ್ರೀಹರಿ ಸ್ಮರಣೆಗೆ ಜಪಮಾಲೆ
ಭೋಗಕೆ ಬಾಗದ ಬತ್ತಿದ ದೇಹ, ಕಣ್ಣೋ ಹಚ್ಚಿದ ಹಣತೆಗಳು
ದಿನವಿಡಿ ಕೃಷ್ಣನ ನೋಡಿ ನೋಡಿ ಕಪ್ಪೇರಿದ ನೇರಿಳೆ ಹಣ್ಣುಗಳು
ಯಾವ ಕಾಲದಿಂದೆದ್ದು ಬಂದಿತೋ ಭಕ್ತಿರಸದ ಈ ಸುಖಚಿತ್ರ?
ನಿಂತ ನೆಲವ ಬೃಂದಾವನವಾಯಿತು ಕುಣಿಯಲು ಭಕ್ತರು ಹಾಡುತ್ತ-
“”ರಾಮ ಹರೇ ರಾಮ ಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”
ತೋಳ ಚಿರತೆಗಳು ಗದ್ದುಗೆ ಹಿಡಿದ ಗೊಂದಲಾಸುರನ ರಾಜ್ಯದಲಿ
ಉರಿವ ಬಾಣಲಿಗೆ ಬಿದ್ದಿದೆ ಬದುಕು ನರಳಿದೆ ನಾಸ್ತಿಕ ವ್ಯಾಜದಲಿ
ಹೇಗೆ ಹುಟ್ಟಿತೀ ಹೊಸ ಹೂವಿನಗಿಡ ಬತ್ತಿ ಹೋದ ಒಣಪಾತಿಯಲಿ?
ಮತ್ತೆ ಬಂದರೋ ಕನಕಪುರಂದರ ಶರೀಫರೆನ್ನುವ ರೀತಿಯಲಿ
ಕುಣಿದರು ಭಕ್ತರು ಅಂತರಂಗವನೆ ಮೃದಂಗಮಾಡಿ ಬಡಿಯುತ್ತ
ನೋಡಿದ ಜನ ರೋಮಾಂಚಿತರಾದರು ತಾವೂ ಕುಣಿದರು ಹಾಡುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”
ದೇಶ ಜಾತಿ ಮತ ಭೇದವಿಲ್ಲದ ಸಕಲೋದ್ಯಾನದ ಪುಷ್ಟಗಳು
ಕಪ್ಪು ಬಿಳುಪುಗಳ ಭೇದವನಳಿಸಿ ಗಂಗೆಯಮುನೆ ಥರ ನೆರೆದವರು
ಇಂದ್ರಿಯದುರಿಗಳ ಹೃಷಿಕೇಶಪದ ಗಂಗೆಯಲ್ಲಿ ಮುಳುಗಿಸಿದವರು
ಕೃಷ್ಣನಾಮ ಸಂಕೀರ್ತನ ಯಜ್ಞಕೆ ಮೈಯೇ ವೇದಿಕೆಯಾದವರು.
ಹಾಡುತ ಕುಣಿಯುತ ನಡೆದರು ಭಕ್ತರು ಸಾಗುವಂತೆ ಶ್ರೀಹರಿಯತ್ತ
ಸುತ್ತ ನಿಂತ ಜನ ಹಾಡಿದರೊಟ್ಟಿಗೆ ನದಿಗಳು ಕಡಲಿಗೆ ಕೂಡುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”
ಕೃಷ್ಣನೆ ಸ್ವಾಮಿ ಕೃಷ್ಣನಮಾಮಿ ಈ ವಿಶ್ವದ ಪ್ರಭು ನೀನೆಂದು
ಕೃಷ್ಣನೆ ಸ್ವಾಮಿ ಕೃಷ್ಣನಮಾಮಿ ನಿನ್ನ ಸೇವಕರು ನಾವೆಂದು
ಭಕ್ತಿಸೇವೆಯಲಿ ಮೈಮರೆಯುವುದೆ ಮುಕ್ತಿಗು ಮೀರಿದ ಗುರಿಯೆಂದು
ಭಾವದ್ಭಾವಕೆ ಮತ್ತೆ ಮರಳುವುದೆ ಭಕ್ತಿಸೇವೆಯ ಗುರಿ ಎಂದು
ಗುರುಪ್ರಭುಪಾದರ ತಾಳದ ದನಿಗೆ ಹಾಡಲು ಭಕ್ತರು ಕುಣಿಯುತ್ತ
ಲೋಕಕೆ ಲೋಕವ ದನಿಗೂಡಿಸಿತು ಕೃಷ್ಣನ ಪಾದಕೆ ಮಣಿಯುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣಹರೇ ಕೃಷ್ಣಹರೇ, ಕೃಷ್ಣ ಕೃಷ್ಣ ಜಯಕೃಷ್ಣ ಹರೇ.”
*****