ಮುಸ್ಸಂಜೆಯ ಮಿಂಚು – ೪

ಮುಸ್ಸಂಜೆಯ ಮಿಂಚು – ೪

ಅಧ್ಯಾಯ ೪ ವೃದ್ಧ ದಂಪತಿಗಳ ಆತ್ಮಹತ್ಯೆ

ಗುಂಪಾಗಿ ನಿಂತು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಕುತೂಹಲ ಕೆರಳಿ ಗುಂಪಿನತ್ತ ನಡೆದಳು. ತನುಜಾಳನ್ನು ಕಂಡಕೂಡಲೇ ಸಮೀರ್, “ಮೇಡಮ್ ವಿಷಯ ಗೊತ್ತಾಯ್ತಾ? ಮೊನ್ನೆ ಮಗನನ್ನು ಹುಡುಕಿಕೊಂಡು ಬಂದಿದ್ರಲ್ಲ ಆ ಮುದುಕರು ಏನು ಮಾಡ್ಕೊಂಡಿದ್ದಾರೆ ಗೊತ್ತಾ?” ಎಂದ.

ಏನು ಮಾಡಿಕೊಂಡಿದ್ದಾರೆ ಸಮೀರ್ ಅಂತ ಕುತೂಹಲದಿಂದ ಕೇಳಿದಳು ತನುಜಾ.

ಅವ್ರಿಬ್ಬರೂ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮೇಡಂ, ಮಗ ಸರಿಯಾದ ವಿಳಾಸವನ್ನೇ ಕೊಟ್ಟೇ ಇಲ್ಲ. ಮಗ ಮನೆ ವಿಳಾಸನೆ ಕೊಡದೆ ಹೋದರೆ, ಅವರು ಸಾಕಲಿಲ್ಲ ಅಂತ ದೂರೋ ಹಾಗೇ ಇಲ್ವಲ್ಲ. ಅಂತೂ ಈಗೀಗ ಜನ ತುಂಬ ಬುದ್ದಿವಂತರಾಗ್ತಾ ಇದ್ದಾರೆ.”

ವಿಷಯ ಗೊತ್ತಾದ ಕೂಡಲೇ ಅಲ್ಲಿ ನಿಲ್ಲಲಾರದೆ ತನ್ನ ಚೇಂಬರಿಗೆ ಬಂದು, ತನ್ನ ಕುರ್ಚಿಯ ಮೇಲೆ ಕುಸಿದು ಕುಳಿತುಬಿಟ್ಟಳು. ಕ್ಷಣ ಎಲ್ಲವೂ ಅಯೋಮಯವೆನಿಸಿ ಕಣ್ಣು ಕತ್ತಲಿಟ್ಟಿತು. ಸತ್ಯವನ್ನು ಅರಗಿಸಿಕೊಳ್ಳಲಾರದೆ ಏನಾಯ್ತು? ಯಾಕೆ ಹೀಗಾಯ್ತು?

ಮನಸ್ಸಿನಲ್ಲಿ ಏಳುತ್ತಿದ್ದ ಸಾವಿರ ಪ್ರಶ್ನೆಗಳಿಗೆ ಉತ್ತರಿಸಲಾರದೆ ಕಂಗೆಟ್ಟು ಹೋದಳು.

ಅಷ್ಟರಲ್ಲಿ ಒಳಬಂದ ಸಮೀರ್, “ಏನಾಯು ಮೇಡಮ್ ? ಹುಷಾರಿಲ್ವಾ? ನೀರು ಕೊಡಲಾ?” ಗಾಬರಿಯಿಂದ ಗಾಳಿ ಬರಲೆಂದು ಫ್ಯಾನ್ ಹಾಕಿ, ಜಗ್ಗಿನಿಂದ ಲೋಟಕ್ಕೆ ನೀರು ಬಗ್ಗಿಸಿ, “ಮೊದ್ಲು ನೀರು ಕುಡಿಯಿರಿ ಮೇಡಮ್, ಬಿಸಿಲಿಗೆ ತಲೆ ಸುತ್ತಿರಬೇಕು. ಸ್ವಲ್ಪ ಸುಧಾರಿಸಿಕೊಳ್ಳಿ. ಆಗದೆ ಇದ್ರೆ ರಜಾ ಹಾಕಿ ಮನೆಗೆ ಹೋಗಿಬಿಡಿ ಮೇಡಮ್ ನಾನು ಬಾಸ್‌ಗೆ ಹೇಳೀನಿ ಬೇಕಾದ್ರೆ” ಎಂದ.

ನೀರು ಕುಡಿದು ಕೊಂಚ ಸುಧಾರಿಸಿಕೊಂಡ ತನುಜಾ, “ಏನಾಗಿಲ್ಲ ಸಮೀರ್ ರಾತ್ರಿ ಎಲ್ಲಾ ನಿದ್ದೆ ಇಲ್ಲ. ಬಂದ ಕೂಡಲೇ ಈ ವಿಷಯ ಕೇಳಿದ್ನಲ್ಲ ಶಾಕ್ ಆಯ್ತು. ಹೇಗಾಯಿತಂತೆ ಇದೆಲ್ಲ? ಬಾಡಿಗಳು ಎಲ್ಲಿವೆ? ನಾನು ಒಂದು ಸಲ ನೋಡಬೇಕು ಸಮೀರ್” ಧ್ವನಿ ನಡುಗುತ್ತಿತ್ತು.

“ಎಕ್ಸೆಟ್ ಆಗಬೇಡಿ ಮೇಡಮ್, ಇದೆಲ್ಲ ಅಪರೂಪನಾ ಈ ಊರಲ್ಲಿ? ದಿನಕ್ಕೆ ಇಂಥವುಗಳು ಅದೆಷ್ಟು ನಡೆಯುತ್ತೋ ? ಇನ್ನೂ ವಿಷಯ ಏನು ಅಂತ ಗೊತ್ತಾಗಿಲ್ಲ. ಕೆಲವರು ಆತ್ಮಹತ್ಯೆ ಅಂತಾರೆ, ಮತ್ತೆ ಕೆಲವರು ಕೊಲೆ ಇರಬೇಕು ಅಂತ ಇದ್ದಾರೆ. ಅವರ್ಯಾಕೆ ಕೊಲೆ ಮಾಡ್ತಾರೆ ಮೇಡಮ್? ಪಾಪ ಬಡಪಾಯಿಗಳು. ಅವರತ್ರ ಏನಿರುತ್ತೆ? ಏನೇ ಆಗಿದ್ರೂ ಒಂದು ಘಳಿಗೆ ಪಶ್ಚಾತ್ತಾಪ ಆಗ್ತದೆ. ಅವರು ಬಂದು ಮೊನ್ನೆ ಇಲ್ಲಿರೋಕೆ ಒಂದು ರಾತ್ರಿ ಅವಕಾಶ ಕೊಡಿ ಅಂತ ಬೇಡಿಕೊಂಡರೂ ಬಾಸ್ ನಿರ್ದಯರಾಗಿ, ಆಗೊಲ್ಲ ಅಂದುಬಿಟ್ರಲ್ಲ. ನಾವು ಕೂಡ ಒಂದೂ ಮಾತಾಡದೆ ಬಾಸ್‌ನ ಸಪೋರ್ಟ್ ಮಾಡಿದಂಗೆ ಆಯ್ತಲ್ಲ. ನಾವ್ಯಾರಾದ್ರೂ ಬಾಸ್‌ಗೆ ಹೇಳಿ ಒಂದು ರಾತ್ರಿ ಇಲ್ಲೇ ಎಲ್ಲೋ ಒಂದು ಮೂಲೆಯಲ್ಲಿ ಮಲಗಿರಲಿ ಬಿಡಿ ಸಾರ್ ಅನ್ನಬಹುದಿತ್ತು. ಇಲ್ಲದ ಉಸಾಬರಿ ನಮಗ್ಯಾಕೆ ಅಂತ ಸುಮ್ಮನಾಗಿಬಿಟ್ವಿ. ಒಂದು ರೀತಿ ನಾವೇ ಆ ಸಾವಿಗೆ ಪರೋಕ್ಷವಾಗಿ ಕಾರಣ ಆದೆವೇನೋ ಅನ್ನೋ ಫೀಲಿಂಗ್ ಕಾಡ್ತಾ ಇದೆ ಮೇಡಮ್. ಬಾಸ್ ಅಂತೂ ತುಂಬಾ ಸಪ್ಪಗಾಗಿಬಿಟ್ಟಿದ್ದಾರೆ. ಯಾಕಾದ್ರೂ ಆ ಮುದುಕರು ಇಲ್ಲಿಗೆ ಬಂದರೋ?” ಬಡಬಡಿಸಿ ಹೇಳಿದವನೇ ಸಮೀರ್ ಸುಸ್ತಾದವನಂತೆ ತನ್ನ ಜಾಗದಲ್ಲಿ ಕುಳಿತು ಮಾತು ನಿಲ್ಲಿಸಿದ.

“ಸಮೀರ್, ನನ್ ಜತೆ ಬರ್ತಿರಾ? ಬಾಡಿಗಳನ್ನ ನೋಡಿಕೊಂಡು ಬರೋಣ” ಬೇಡಿಕೆ ಇತ್ತು ಧ್ವನಿಯಲ್ಲಿ.

ಏನೋ ಹೇಳಬೇಕೆಂದವನು ತನುಜಾಳ ಬಾಡಿದ ಮೊಗ ನಡಿ ಆಯ್ತು ಎನ್ನುವಂತೆ ತಲೆ ಆಡಿಸಿದ. ಈ ಹೆಣ್ಣುಮಕ್ಕಳೇ ಇಷ್ಟು ನೋವಿಗೆ ಕರಗಿಬಿಡುತ್ತಾರೆ. ನಾನು ಇನ್ನೇನೇ ಹೇಳಿದರೂ ತನುಜಾ ಮೇಡಮ್ ಅತ್ತೇ ಬಿಡುತ್ತಾರೇನೋ ಎನಿಸಿ, ಬಾಸ್ ಚೇಂಬರಿಗೆ ಹೋಗಿ ಪರ್ಮಿಶನ್ ಕೇಳಿದ ಇಬ್ಬರಿಗೂ. ಅವರ ಮನಸ್ಥಿತಿಯೂ ಸರಿ ಇರಲಿಲ್ಲ. “ನಾನೂ ಬರುತ್ತೇನೆ ನಡೆಯಿರಿ, ಜೀಪಿನಲ್ಲಿಯೇ ಹೋಗಿಬರೋಣ. ಇನ್ಯಾರಾದರೂ ಬರ್ತಾರೇನೋ ಕೇಳಿ, ಕೊನೆಯ ಬಾರಿ ಒಂದು ಸಲ ನೋಡಿ ಋಣ ತೀರಿಸಿಕೊಳ್ಳೋಣ” ಎಂದವರೇ ಎದ್ದುಬಿಟ್ಟರು.

ಕೆಲವರು ಕುತೂಹಲದಿಂದ, ಮತ್ತೆ ಕೆಲವರು ಅನುಕಂಪದಿಂದ ಹೊರಟು ನಿಂತರು. ಉಳಿದವರು ತಾವ್ಯಾಕೆ ಹೋಗಬೇಕು ಅಂದುಕೊಂಡು ಆಫೀಸಿನಲ್ಲಿಯೇ ಉಳಿದುಕೊಂಡು ವೃದ್ದರ ಸಾವಿನ ಬಗ್ಗೆ ಮಾತಾಡಿಕೊಳ್ಳುತ್ತ ತಮ್ಮ ಊಹಾ ಕೌಶಲ ಪ್ರದರ್ಶಿಸಿದರು. ತನುಜಾ ಅಂತೂ ತನ್ನನ್ನು ಅದೆಷ್ಟು ಸಲ ಹಳಿದುಕೊಂಡಳೋ? ಈ ಸಾವನು ತಾನು ತಪ್ಪಿಸಬಹುದಿತ್ತು. ತನ್ನ ಉದಾಸೀನವೇ ಈ ದುರಂತಕ್ಕೆ ಕಾರಣವಾಯ್ತೇ ? ಏನಾಯ್ತು ತನ್ನ ತತ್ವ? ಏನಾಯ್ತು ತನ್ನ ಆದರ್ಶ? ಎಲ್ಲಿ ಹೋಯ್ತು ತನ್ನ ಮಾನವೀಯತೆ ? ಕಾಟಾಚಾರಕ್ಕೆ ಕರೆದು ಅವರು ಬರಲ್ಲ ಅಂದ ಕೂಡಲೇ ಸುಮ್ಮನಾಗಿಬಿಟ್ಟೆನಲ್ಲ, ತನಗೂ ಅದೇ ಬೇಕಿತ್ತೇ ? ಜವಾಬ್ದಾರಿಯಿಂದ ಕಳಚಿಕೊಳ್ಳುವ ಬುದ್ಧಿವಂತಿಕೆ, ಎಲ್ಲೋ ಮನದಾಳದ ಮೂಲೆಯಲ್ಲಿ ಜವಾಬ್ದಾರಿ ಹೊರುವ ಮನಸ್ಸಿರಲಿಲ್ಲವೇ? ಹಾಗೆಂದೇ ಸಂಕೋಚದಿಂದ ಅವರು ಬೇಡ ಅಂದ ಕೂಡಲೇ ತನ್ನ ಪಾಡಿಗೆ ತಾನು ಮನೆಗೆ ಹೊರಟುಬಿಟ್ಟೆನಲ್ಲ? ತನಗೇನು ಮಂಕು ಕವಿದಿತ್ತು? ದಾರಿಯುದ್ದಕ್ಕೂ ಪಶ್ಚಾತ್ತಾಪದಲ್ಲಿ ಬೇಯುತ್ತ, ತನ್ನನ್ನು ಹಳಿದುಕೊಳ್ಳುತ್ತ, ಮನದ ಹೋರಾಟವನ್ನು ಹೊರತೋರದೆ, ಮೌನವನ್ನು ಅಪ್ಪಿ ಕುಳಿತುಬಿಟ್ಟಿದ್ದಳು. ತಲೆಗೊಂದರಂತೆ ಜೀಪಿನಲ್ಲಿದ್ದವರೆಲ್ಲಾ ಮಾತಾಡುತ್ತಿದ್ದರೂ ಆ ಮಾತುಗಳಾವುವೂ ಅವಳ ಕಿವಿಯೊಳಗೆ ಹೋಗುತ್ತಲೇ ಇರಲಿಲ್ಲ. ಅವಳ ಕಣ್ಮುಂದೆ, ಅವಳ ಮನದ ತುಂಬಾ ಆ ವೃದ್ಧ ದಂಪತಿಗಳ ಮೊಗವೇ, ಅವರ ಧ್ವನಿಯೇ ತುಂಬಿಕೊಂಡಿತ್ತು.

“ಸಾರ್, ತನುಜಾ ಮೇಡಮ್ ತುಂಬಾ ಅಪ್‌ಸೆಟ್ ಆಗಿಬಿಟ್ಟಿದ್ದಾರೆ. ಇನ್ನು ಬಾಡಿ ನೋಡಿಬಿಟ್ಟರೆ ಇನ್ಹೇಗೆ ಆಡ್ತಾರೋ? ಬರ್ಲೇಬೇಕು ಅಂತ ಬೇರೆ ಹಠ ಮಾಡಿಬಿಟ್ಟರು” ಸಮೀರ್ ಬಾಸ್‍ಗೆ ಹೇಳುತ್ತಿದ್ದರೆ, ಸಂಬಂಧ ಇಲ್ಲದಂತೆ ಕೆಳಗಿಳಿದು ಆಸತ್ರೆಯ ಆವರಣದೊಳಗೆ ನಡೆದಳು ತನುಜಾ.

“ಮೇಡಮ್, ನಿಂತ್ಕೊಳ್ಳಿ. ನಾವು ಮೊದ್ಲು ಹೋಗಿ ನೋಡ್ತೀವಿ. ಆಮೇಲೆ ನೀವು ಬರ್ತಿರಂತೆ, ಇಲ್ಲಿಯೇ ಕೂತ್ಕೊಂಡಿರಿ” ಎಂದವರೇ ಬಾಸ್ ಮತ್ತು ಸಮೀರ್ ಒಳನಡೆದರು.

ಸ್ವಲ್ಪ ಹೊತ್ತಿನ ಅನಂತರ ಹೊರಬಂದ ಅವರಿಬ್ಬರೂ ಈಗ ತಾನೇ ಬಾಡಿನ ಅವರ ಸಂಬಂಧಿಗಳು ಊರಿಗೆ ತಗೊಂಡು ಹೋದರಂತೆ. ಶುಕ್ರವಾರ ರಾತ್ರಿನೇ ಸತ್ತಿರುವುದಂತೆ, ಶನಿವಾರ ಬೆಳಗ್ಗೆ ಗೊತ್ತಾಯಿತಂತೆ. ಅವರ ವಿಳಾಸ ಹುಡುಕಿ ವಾರಸುದಾರರಿಗೆ ಈಗಷ್ಟೇ ಬಾಡಿಗಳನ್ನು ಒಪ್ಪಿಸಿದರಂತೆ. ಇನ್ನೇನು ಕೆಲ್ಸ ನಮ್ಗೆ? ನಡೀರಿ ಹೋಗೋಣ, ಹೋಗ್ತಾ ಎಲ್ಲಾ ಹೇಳ್ತೀನಿ, ಬನ್ನಿ” ಎನ್ನುತ್ತ ಎಲ್ಲರಿಗಿಂತ ಮುಂಚೆ ಸಮೀರ್ ಜೀಪ್ ಏರಿದ. ದಾರಿಯಲ್ಲಿ ಆ ವೃದ್ದರ ಬಗ್ಗೆ ಹೇಳಿದ್ದಿಷ್ಟು-

“ಒಬ್ಬ ಮಗ, ಒಬ್ಬ ಮಗಳು ಇದ್ದ ಈ ದಂಪತಿ ಅಂಥ ಬಡವರೇನೂ ಅಲ್ಲ. ಆದ್ರೆ, ಮಗಳ ಮದ್ವೆಗೆ, ಮಗನ ಓದಿಗೆ ಅಂತ ಇದ್ದಬದ್ದ ಚೂರುಪಾರು ಆಸ್ತಿನೆಲ್ಲ ಮಾರಿದರು. ಮಗ ಕೆಲ್ಸದ ನೆವ ಹೇಳಿ ನಗರ ಸೇರಿಕೊಂಡ. ನಗರ ಸೇರಿಕೊಂಡವನು ಅಪ್ಪ-ಅಮ್ಮನ್ನ ಮರೆತೇಬಿಟ್ಟ. ಇತ್ತ ಜಮೀನು ಇಲ್ಲ ಅತ್ತ ಮಗನ ದುಡಿಮೆನೂ ಇಲ್ಲ. ಹಾಗಾಗಿ ವಯಸ್ಸಾಗಿದ್ದರೂ ಕೂಲಿನಾಲಿ ಮಾಡ್ಕೊಂಡು ಹೇಗೋ ಜೀವನ ತಳ್ತಾ ಇದ್ದರು. ತುಂಬಿದ ಮನೆ ಸೊಸೆಯಾದ ಮಗಳಿಂದಲೂ ಯಾವ ಸಹಾಯವನ್ನು ನಿರೀಕ್ಷಿಸದ ಈ ಬಡಪಾಯಿ ದಂಪತಿಗೆ ಅದ್ಯಾರ ಶಾಪವೋ? ಹೃದಯದ ಬೇನೆಯಾಗಿ ಮುದುಕನನ್ನು ಕಾಡತೊಡಗಿತು. ಸರಕಾರಿ ಆಸ್ಪತ್ರೆಗೆ ತೋರಿಸಿದರೆ ತತ್‌ಕ್ಷಣವೇ ಆಪರೇಶನ್ ಮಾಡಬೇಕು ಅಂದರು. ತಿನ್ನೋಕೆ ಕಷ್ಟ, ಅಂಥದ್ದರಲ್ಲಿ ಆಪರೇಶನ್ ಗೆಲ್ಲಿ ಹಣ ಹೊಂದಿಸಿಯಾರು? ಹಣೆಯಲ್ಲಿ ಬರೆದ ಹಾಗೆ ಆಗಲಿ ಅಂತ ಮುದುಕ ಸುಮ್ಮನಾಗಿಬಿಟ್ಟ. ಆದರೆ ಮುದುಕಿಯ ಜೀವ ಸುಮ್ಮನಿರಬೇಕಲ್ಲ. ಮಗಳ ಸಹಾಯ ಬೇಡಿದಳು. ಅಲ್ಲಿಯೂ ಬಡತನ, ಆಪರೇಶನ್‌ಗೆ ಹಣ ಇರಲಿ, ಹೆಚ್ಚು-ಕಡಿಮೆ ಆಗಿ ಮುದುಕಿ ಬಂದರೂ ಅನ್ನ ಹಾಕಿ ಆಶ್ರಯ ನೀಡುವ ಸ್ಥಿತಿಯಲ್ಲಿರಲಿಲ್ಲ ಮಗಳು. ಕೊನೆಗುಳಿದದ್ದು ಒಂದೇ ದಾರಿ, ಮಗನ ಬಳಿ ಹೋಗುವುದು. ಹಾಗೆಂದೇ ಎಂದೋ ಆತ ನೀಡಿದ್ದ ವಿಳಾಸ ಹಿಡಿದು ಈ ಮಹಾನಗರಕ್ಕೆ ಬಂದಿಳಿದಿದ್ದರು. ಅದೆಷ್ಟು ಪರದಾಡಿ, ವಿಳಾಸ ಕಂಡುಹಿಡಿದಿದ್ದರೋ? ತಾವು ಹುಡುಕಿಕೊಂಡು ಬಂದ ವಿಳಾಸದಲ್ಲಿ ಮಗ ಇಲ್ಲ ಎಂದಾಗ ಅದೆಷ್ಟು ನಿರಾಶೆಗೊಂಡರೋ? ಈ ಮಹಾನಗರದಲ್ಲಿ ಮಗನನ್ನು ಹುಡುಕುವುದು ಹೇಗೆಂದು ತಿಳಿಯದೆ ಹತಾಶರಾಗಿ ಸಾವನ್ನು ಅಪ್ಪಿಕೊಂಡರೋ? ಅಥವಾ ಯಾರಾದರೂ ಕೊಲೆಗೈದರೋ? ತನಿಖೆಯಿಂದ ತಿಳಿಯಬೇಕಾಗಿದೆ.”

ವಿಷಯ ತಿಳಿದ ಮೇಲಂತೂ ಮನಸ್ಸು ಇನ್ನಷ್ಟು ಆಸ್ತವ್ಯಸ್ತಗೊಂಡಿತು. ಛೇ, ಎಂಥ ದುರಂತ, ಮುಪ್ಪು ಒಂದು ಶಾಪವೇ? ಎಂಥ ಕೃತಘ್ನ ಆ ಮಗ, ಹೆತ್ತು, ಸಾಕಿ, ಬೆಳೆಸಿದ, ವಿದ್ಯೆ ಕಲಿಸಿ, ಬದುಕು ರೂಪಿಸಿದ ಹೆತ್ತವರನ್ನೇ ಮರೆತುಬಿಡುವುದೇ? ಮಗನ ನಿರ್ಲಕ್ಷ್ಯವೇ ಅವರನ್ನು ಹತಾಶೆಗೆ ದೂಡಿತೇ? ಅನಾರೋಗ್ಯ ಅವರನ್ನು ಬದುಕಿನಿಂದ ವಿಮುಖಗೊಳಿಸಿತೇ ? ಅಸಹಾಯಕತೆ ಸಾವಿಗೆ ಹತ್ತಿರವಾಗಿಸಿತೇ? ಈ ಸಾವಿನ ಹಿಂದಿರುವ ನಿಗೂಢವೇನು? ಪ್ರಶ್ನೆ ಬೃಹದಾಕಾರವಾಗಿ ಕಾಡಿ ಹಿಂಸಿಸಿತು ತನುಜಾಳನ್ನು.

ವಿಷಯ ತಿಳಿದುಕೊಂಡ ರಿತು, ಮನು ತುಂಬಾ ನೊಂದುಕೊಂಡರು. ಕನಿಕರಿಸಿ, ಸಂತಾಪಪಟ್ಟು ಸುಮ್ಮನಾಗಿಬಿಟ್ಟರು. ಆದರೆ, ತನುಜಾ ಅಷ್ಟು ಸುಲಭವಾಗಿ ಮರೆಯದಾದಳು. ಪೊಲೀಸ್ ತನಿಖೆ ನಡೆಯುತ್ತಿತ್ತು. ಯಾವ ಸುಳಿವೂ ದೊರೆಯದೆ ಫೈಲ್ ಮುಚ್ಚಿಬಿಡಬೇಕೆಂದು ನಿರ್ಧರಿಸುತ್ತಿರುವಾಗಲೇ ವೃದ್ದರು ಸತ್ತಿದ್ದ ಪಾರ್ಕಿನ ವಾಚ್ಮನ್ ಪೊಲೀಸರ ಮುಂದೆ ಎಲ್ಲವನ್ನೂ ಹೇಳಿದ. ಹೆದರಿಕೆಯಿಂದ ಅಷ್ಟು ದಿನ ಸುಮ್ಮನಿದ್ದವನು ಮನಸ್ಸಿನ ಒತ್ತಡ ತಡೆಯದೆ, ಅಂದು ಕಂಡದ್ದನ್ನೆಲ್ಲ ಪ್ರತ್ಯಕ್ಷದರ್ಶಿಯಾಗಿದ್ದವನು ವಿವರ ವಿವರವಾಗಿ ಬಿಡಿಸಿದ.

ಅವತ್ತು ರಾತ್ರಿ ಎಲ್ಲೂ ಜಾಗ ಸಿಗದೆ ಕೊನೆಗೆ ಪಾರ್ಕಿಗೆ ಬಂದು ಮರದ ಕೆಳಗೆ ಕುಳಿತಿದ್ದರು. ತಾನು ಬಯ್ದು ಅವರನ್ನು ಹೊರಗೆ ಕಳುಹಿಸಬೇಕೆಂದು ಅಂದುಕೊಳ್ಳುವಾಗಲೇ ಅವರಿಬ್ಬರೂ ಮಾತಾಡಿಕೊಳ್ತಾ ಇದ್ದದ್ದು ಕೇಳಿ, ಅದೇನು ಮಾತಾಡ್ತಾರೋ ಕೇಳೋಣ ಅಂತ ಮರೆಯಲ್ಲಿ ನಿಂತು ಕೇಳಿಸಿಕೊಳ್ಳಲಾರಂಭಿಸಿದೆ.

“ನೋಡು ಪಾರು, ನನ್ನ ಸಾವೇನೋ ಹತ್ತಿರದಲ್ಲಿ ಇದೆ. ನನ್ನ ಹೃದಯದ ಆಪರೇಶನ್ ಮಾಡಿ, ನನ್ನ ಉಳಿಸೋ ಮಗ ಹುಟ್ಟಲಿಲ್ಲ. ಅಂಥ ಶಕ್ತಿನೂ ದೇವರು ನಂಗೆ ಕೊಡಲಿಲ್ಲ. ಇವತ್ತೋ ನಾಳೆಯೋ ನನ್ನ ಸಾವು ಗ್ಯಾರಂಟಿ. ಆದ್ರೆ ನಂಗೆ ನಿಂದೇ ಯೋಚ್ನೆ ಆಗಿಬಿಟ್ಟಿದೆ. ಮಗ ಮಗ ಅಂತ ಮಗನಿಗಾಗಿ ಎಲ್ಲಾ ಕಳ್ಕೊಂಡು, ಮಗಳ ಜೀವನಾನೂ ನರಕ ಮಾಡಿಬಿಟ್ಟಿದ್ದೀನಿ. ತಿನ್ನೋಕೂ ಗತಿ ಇಲ್ದೆ ಇರೋ ಮನೆ ಸೇರಿರೋ ಮಗಳಿಂದ ಯಾವ ಸಹಾಯ ನಿರೀಕ್ಷಿಸೋಕೆ ಸಾಧ್ಯ? ಮಗನಿಗಾಗಿ, ಮಗಳಿಗೆ ಅನ್ಯಾಯ ಮಾಡಿದೆ. ಅದಕ್ಕೆ ಆ ದೇವ್ರು ಸರಿಯಾಗಿ ಶಿಕ್ಷೆ ಕೊಡ್ತಾ ಇದ್ದಾನೆ. ನಾನು ಹೋದ ಮೇಲೆ ನಿನ್ನ ಬದುಕು ಹೇಗೆ ಅನ್ನೋದೇ ನನಗೆ ದೊಡ್ಡ ಚಿಂತೆ ಆಗಿಬಿಟ್ಟಿದೆ” ಭಾರವಾದ ಧ್ವನಿಯಲ್ಲಿ ನುಡಿದ.

“ದೇವರಿದ್ದಾನೆ ಬಿಡಿ. ನಾನೇ ಕಷ್ಟಪಟ್ಟು ನಿಮ್ಮ ಆಪರೇಶನ್ ಮಾಡ್ಸಿ ಉಳಿಸ್ಕೋತೀನಿ.”

“ಹುಚ್ಚಿ, ಬರಿಗೈಲಿ ಇರೋ ನೀನು ಹೇಗೆ ಅಷ್ಟೊಂದು ಹಣ ಹೊಂದಿಸುತ್ತೀಯಾ?”

“ಕೂಲಿ ಮಾಡ್ತೀನಿ, ಅವರಿವರ ಮನೇಲಿ ಪಾತ್ರೆ ತೊಳಿತೀನಿ, ಹೇಗಾದ್ರೂ ಮಾಡಿ ನಿಮ್ಮನ್ನು ಉಳಿಸಿಕೊಳ್ತಿನಿ” ಗದ್ಗದಿತಳಾಗಿ ಹೇಳಿತು ಮುದುಕಿ.

“ಅದೆಲ್ಲಾ ಆಗಹೋಗದ ಮಾತು ಪಾರು. ನಾನೊಂದು ತೀರ್ಮಾನಕ್ಕೆ ಬಂದಿದ್ದೀನಿ. ನಾನು ಹೇಳ್ದಂಗೆ ಕೇಳ್ತಿಯಾ? ನಾವಿಬ್ರೂ ಈ ಪ್ರಪಂಚನೇ ಬಿಟ್ಟು ಹೋಗಿಬಿಡೋಣ. ಅದಕ್ಕೆ ಇರೋ ದುಡ್ಡನ್ನೆಲ್ಲ ಸೇರಿಸಿ ವಿಷ ತಂದಿದ್ದೀನಿ.”

“ಬೇಡ ಬೇಡ, ಸಾಯೋದು ಬೇಡ. ನಾವಾಗಿ ಸಾಯೋದು ಬೇಡ, ಬೇಡ ಕಣ್ರಿ” ಗಾಬರಿಯಿಂದ ಹೇಳಿದಳು.

“ಇದು ಬಿಟ್ರೆ ನಮ್ಗೆ ಬೇರೆ ದಾರೀನೇ ಇಲ್ಲಾ ಕಣೆ ಪಾರು. ನನ್ನ ಕ್ಷಮ್ಸಿ ಬಿಡೇ, ನೀನು ಒಪ್ಪಲ್ಲ ಅಂತ ನಂಗೆ ಗೊತ್ತು. ಅದಕ್ಕೆ ನೀನು ಈಗ ತಿಂದ್ಯಲ್ಲ ಚಿತ್ರಾನ್ನದಲ್ಲಿ ವಿಷ ಬೆರೆಸಿದ್ದೆ ಕಣೆ, ನೋಡು, ನಾನು ನಿನ್ನ ಜತೇಲಿ ಬಂದುಬಿಡ್ತೀನಿ. ಇಬ್ಬರೂ ಜತೆಯಾಗಿಯೇ ಈ ಲೋಕ ಬಿಟ್ಟು ಹೋಗೋಣ” ಎಂದವನೇ ಗಟಗಟನೇ ಬಾಟಲಿಯಲ್ಲಿದ್ದ ವಿಷವನ್ನು ಕುಡಿದೇ ಬಿಟ್ಟ. ಅಷ್ಟರಲ್ಲಾಗಲೇ ಮುದುಕಿ ಸಂಕಟದಿಂದ ಒದ್ದಾಡಲಾರಂಭಿಸಿತು. ನಂಗೋ ಕೈ-ಕಾಲೇ ಆಡಲಿಲ್ಲ. ಜಾಸ್ತಿ ಬೇರೆ ಕುಡಿದುಬಿಟ್ಟಿದ್ದೆ. ತಲೆ ಸುತ್ತಿದಂತಾಗಿ ಬಿದ್ದುಬಿಟ್ಟೆ ಎಚ್ಚರವಾದಾಗ ಅವರಿಬ್ಬರೂ ಸತ್ತುಬಿದ್ದಿದ್ದರು. ಭವಿಷ್ಯದ ಭೀಕರತೆಯನ್ನು ಸಹಿಸಲಾರದೆ ಆ ದಂಪತಿ ಬದುಕಿಗೆ ವಿದಾಯ ಹೇಳಿದ್ದರು.

ದುಡುಕಿಬಿಟ್ಟರು. ಸಾವೇ ಪರಿಹಾರವಲ್ಲ ಅನ್ನೋ ಅರಿವಾಗಲೇ ಇಲ್ಲ. ಕೊಂಚ ಸಹಿಸಿಕೊಂಡಿದ್ದರೆ, ವಿವೇಚನೆಯಿಂದ ಬದುಕುವ ಸಾಹಸ ನಡೆಸಿದ್ದರೆ ಅವರ ಸಮಸ್ಯೆಗೆ ಖಂಡಿತ ದಾರಿ ಹೊಳೆದಿರುತ್ತಿತ್ತು. ಇಂಥ ನಿರಾಶ್ರಿತರಿಗೆಂದು ಮಹಾನುಭಾವರು ಕಟ್ಟಿಸಿರುವ ವೃದ್ದಾಶ್ರಮಗಳಿವೆ ಎಂಬುದನ್ನು ಅರಿಯದೇ ಹೋದರು. ತಿಳಿಸಬಹುದಾಗಿದ್ದ ನಾವು ಕೂಡ ಉದಾಸೀನ ಮಾಡಿಬಿಟ್ಟೆವು. ಹೀಗೆ ಸಾಯುವರೆಂಬ ನಿರೀಕ್ಷೆ ಕೂಡ ಇಲ್ಲದ ನಾವೇನು ಮಾಡಬಹುದಿತ್ತು? ಒಟ್ಟಿನಲ್ಲಿ ವಿಧಿ ಲಿಖಿತ. ಇವರು ಹೀಗೆಯೇ ಸಾಯಬೇಕೆಂದು ಬರೆದಿತ್ತೇನೋ? ಮನಸ್ಸು ವೇದಾಂತದ ಮೊರೆ ಹೊಕ್ಕಿತು. ಹೃದಯ ಕಲಕುವ ವಿದ್ರಾವಕ ಸಂಗತಿಯಾದರೂ ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬಂತೆ ತನುಜಾ ಕೂಡ ಆ ಘಟನೆಯನ್ನು ಕೊಂಚಕೊಂಚವಾಗಿ ಮರೆಯಹತ್ತಿದಳು. ಯಾರಾದರೂ ವೃದ್ದರನ್ನು ಕಂಡರೆ ಫಕ್ಕನೇ ಅವರ ನೆನಪಾಗಿ ಕಸಿವಿಸಿಯಾಗುತ್ತಿತ್ತು. ಯಾವ ಹೆತ್ತವರಿಗೂ ಇಂಥ ಗತಿ ಬಾರದೇ ಇರಲಿ ಎಂದು ಮನ ಹಾರೈಸುತ್ತಿತ್ತು. ಆ ವೃದ್ದರು ಹೆತ್ತ ಆ ಪುಣ್ಯಾತ್ಮ ಮಗನಿಗೆ ಅಪ್ಪ-ಅಮ್ಮ ಸತ್ತದ್ದು ಗೊತ್ತಾಗಲೇ ಇಲ್ಲವೇನೋ? ಅಥವಾ ಎಂದಾದರೂ ಗೊತ್ತಾಗಿ ಪಶ್ಚಾತ್ತಾಪ ಕಾಡದೇ ಇದ್ದೀತೇ? ಮಕ್ಕಳ ಮೇಲೆ ಈ ವ್ಯಾಮೋಹಗಳೇ ಇರಬಾರದು. ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ ಮಕ್ಕಳನ್ನು ಬೆಳೆಸಿ, ಅವರಿಗೊಂದು ದಾರಿ ರೂಪಿಸಿ, ತಾವೇ ಅವರ ಬದುಕಿನಿಂದ ಹೊರ ಬಂದುಬಿಡಬೇಕು. ಯಾವುದಕ್ಕೂ ಕೈಚಾಚದಂತೆ ವ್ಯವಸ್ಥೆ ಮಾಡಿಕೊಂಡು ಬಿಡಬೇಕು. ಮನುವಿನ ಚಿಕ್ಕಪ್ಪ-ಚಿಕ್ಕಮ್ಮ ಈ ವಿಷಯದಲ್ಲಿ ಬುದ್ದಿವಂತರು. ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಒಬ್ಬನೇ ಮಗನಾದರೂ ಅವನಿಂದ ದೂರವೇ ಇದ್ದು ನಿರೀಕ್ಷೆಗಳೇ ಇಲ್ಲದ ಬದುಕನ್ನು ಅಪ್ಪಿಕೊಂಡಿರುವುದು, ಮುಂದಿನ ದಿನಗಳ ನಿರಾಶೆಗಳನ್ನು ತಡೆಯುವ ಎದೆಗಾರಿಕೆಯ ತಂತ್ರ ಅದು. ಎಲ್ಲರಿಗೂ ಆ ತಂತ್ರಗಾರಿಕೆ ಎಲ್ಲಿಂದ ಸಾಧ್ಯ? ಮೌನವಾಗಿ ನಿಟ್ಟುಸಿರುಬಿಟ್ಟಳು.

ಲಂಚ್ಗೆ ಕುಳಿತಿದ್ದಾಗ ಮಾಲಿನಿ ಯಾಕೋ ಸಪ್ಪಗಿದ್ದಳು. ಮಂಕಾದ ಅವಳ ಮೊಗ “ಯಾಕ್ರೀ ಮಾಲಿನಿ ಡಲ್ ಆಗಿದ್ದೀರಿ, ಮಗಳ ನೆನಪಾ?” ಕೇಳಿದಳು.

“ಇಲ್ಲ ತನುಜಾ, ವಿಭಾ ಸುಖವಾಗಿದ್ದಾಳೆ ಅಲ್ಲಿ, ಅವಳ ಚಿಂತೆ ನನಗಿಲ್ಲ. ಆದರೆ ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಆಫೀಸಿನಲ್ಲಿ ಬೇರೆ ಹೀಗಾಯ್ತು. ಕಾಕತಾಳೀಯ ಅನ್ನೋ ಹಾಗೆ ನಮ್ಮ ಮನೆಯಲ್ಲೂ ಹಾಗೆ ಆಗೋ ಹಾಗಿದೆ. ಏನು ಮಾಡಬೇಕು ಅಂತಾನೇ ತೋಚ್ತಾ ಇಲ್ಲ ತನುಜಾ” ಬೇಸರದಿಂದಲೇ ಮಾಲಿನಿ ಹೇಳಿದಳು.

“ಅಂಥದ್ದೇನಾಯ್ತು ಮಾಲಿನಿ? ನಿಮಗೇನು ಆ ಸಮಸ್ಯೆ ಇಲ್ಲವಲ್ಲ. ನಿಮ್ಮ ಭಾವ ನಿಮತ್ತೇನಾ ನೋಡ್ಕೊತಿದಾರೆ, ಮಾವ, ಮೈದನ, ಮನೆಯಲ್ಲಿ ಇದ್ದಾರೆ. ನೀವಿಬ್ಬರೂ ಹೊರಗೆ ಹೋಗೋವ್ರು ಅಂತ ತಾನೇ ತಂದೆ-ತಾಯಿ ಜವಾಬ್ದಾರೀನ ಅವರು ಹೊತ್ಕೊಂಡಿದ್ದಾರೆ.”

“ಇಲ್ಲಿ ತನಕ ಏನೋ ಜವಾಬ್ದಾರಿ ಹೊತ್ಕೊಂಡಿದ್ದರು. ಈಗ ಅವರು ಫಾರಿನ್‌ಗೆ ಹೊರಟಿದ್ದಾರೆ. ನಮ್ಮ ಭಾವನ ಮಗ ಸ್ಟೇಟ್ಸ್‌ನಲ್ಲಿದ್ದಾನೆ ಅಂತ ಹೇಳಿದ್ದೆನಲ್ಲ. ಈಗ ಅವನ ಹೆಂಡತಿ ಪ್ರೆಗ್ನೆಂಟ್. ಈ ನೆವದಲ್ಲಿ ಒಂದಷ್ಟು ದಿನ ಬಂದಿರಿ ಅಂತ ಬಲವಂತ ಮಾಡ್ತಾ ಇದ್ದಾನೆ. ಇವರಿಗೂ ಹೋಗೋ ಆಸೆ. ಆದ್ರೆ ನಮ್ಮ ಅತ್ತೆ ಹಾಸಿಗೆ ಹಿಡಿದುಬಿಟ್ಟಿದ್ದಾರೆ. ಮಲಗಿದ ಕಡೇನೇ ಎಲ್ಲಾ ಅಂತೆ. ಅದಕ್ಕೆ ನಾವು ಫಾರಿನ್‌ಗೆ ಹೋಗಿ ಬರೋವರೆಗೆ ನೀವೇ ಅಮ್ಮನ ಜವಾಬ್ದಾರಿ ವಹಿಸ್ಕೊಳ್ಳಿ ಅಂತ ಹೇಳಿಬಿಟ್ಟಿದ್ದಾರೆ. ನಾಳೆನೇ ಕರ್ಕೊಂಡು ಬರ್ತಾ ಇದ್ದಾರೆ. ಅವರು ಫಾರಿನ್‌ಗೆ ಹೋದ ಮೇಲೆ ಬರೋದು ಎಷ್ಟುದಿನ ಆಗುತ್ತೋ? ಅಲ್ಲಿವರೆಗೂ ನಾವೇ ನೋಡ್ಕೊಬೇಕು. ಹೇಗಪ್ಪಾ ಅಂತ ಚಿಂತೆ ಆಗಿಬಿಟ್ಟಿದೆ ತನುಜಾ, ನಾನು, ಅವರು ದಿನಾ ಕೆಲಸಕ್ಕೆ ಬಂದ್ರೆ ಮನೆಯಲ್ಲಿ ಯಾರು ಅವರನ್ನು ನೋಡ್ಕೊಳೋರು? ನಮ್ಮಿಬ್ಬರಲ್ಲಿ ಯಾರೂ ರಜಾ ಹಾಕೋ ಹಾಗಿಲ್ಲ. ಸಾಲ ಬೇರೆ ಬೆಟ್ಟದಷ್ಟಿದೆ. ಮನೆ ಕಟ್ಟಿದ್ದು, ವಿಭಾಳ ಮದ್ವೆ ಮಾಡಿದ್ದು ಎಲ್ಲಾ ಸಾಲದ ದುಡ್ಡುತಾನೇ? ನಾವಿಬ್ರು ದುಡಿದ್ರೆ ತಾನೇ ಸಾಲ ತೀರಿಸೋಕೆ ಸಾಧ್ಯ. ಅವರನ್ನು ನೋಡ್ಕೊಳ್ಳೋಕೆ, ಕೆಲ್ಸ ಬಿಡೋಕ್ಕೆ ಆಗಲೀ ರಜಾ ತಗೊಳ್ಳೋದಕ್ಕಾಗ್ಲಿ ಸಾಧ್ಯಾನೇ ಇಲ್ಲ. ರಾಜೀವ್‌ಗೂ ನಂಗೂ ಅದೇ ಚಿಂತೆಯಿಂದ ಊಟ-ತಿಂಡಿ ನಿದ್ದೆ ಏನೂ ಬೇಡ್ವಾಗಿದೆ. ಏನ್ ಮಾಡ್ಲಿ ತನುಜಾ ನಾನು?” ಚಿಂತೆಯಿಂದ ಧ್ವನಿ ಭಾರವಾಗಿತ್ತು.

“ಏನ್ ಮಾಡೋಕೆ ಆಗುತ್ತೆ ಮಾಲಿನಿ? ಹೆತ್ತವರನ್ನು ಸಾಕಲೇ ಬೇಕಾಗುತ್ತೆ. ಹಾಗೊಂದು ವೇಳೆ ಆಗಲ್ಲ ಅಂದ್ರೆ ನೋಡಿದ್ರಲ್ಲ, ಆ ಮುದುಕರ ಪರಿಸ್ಥಿತಿನಾ, ಹಾಗಾಗುತ್ತೆ ಅಷ್ಟೇ. ಆದ್ರೆ ಅಂಥದ್ದಕ್ಕೆಲ್ಲ ಮನಸ್ಸು ತುಂಬ ಕಲ್ಲಾಗಿರಬೇಕು. ನಿಮಗಾಗಲೀ ನನಗಾಗಲೀ ಅಂಥ ಕಲ್ಲು ಹೃದಯ ಇಲ್ಲ ಬಿಡಿ. ಬಂದದ್ದನ್ನು ಧೈರ್ಯವಾಗಿ ಫೇಸ್ ಮಾಡಿ. ಯಾರನ್ನಾದರೂ ಕೆಲಸಕ್ಕೆ ಇಡಿ. ನಿಮ್ಮ ಹತ್ತಿರದ ನೆಂಟರ್‍ಯಾರಾದರೂ ಇದ್ರೆ ಕರ್ಕೊಂಡು ಬನ್ನಿ. ಸಂಬಳ ಕೊಟ್ರೂ ಪರ್ವಾಗಿಲ್ಲ.”

“ಅಂಥ ನೆಂಟರ್‍ಯಾರೂ ಇಲ್ಲ ತನುಜಾ. ಅವರವರ ಕಷ್ಟಗಳೇ ಇರುತ್ತೆ. ಇನ್ನು ಬೇರೆಯವರ ಕಷ್ಟನಾ ಗಮನಿಸಿ, ಸ್ಪಂದಿಸುತ್ತಾರಾ? ಕೆಲಸದವರನ್ನು ನಂಬಿ ಇಡೀ ಮನೇನಾ ಹೇಗೆ ತನುಜಾ ಬಿಟ್ಟು ಬರುವುದು? ಅದೂ ಈ ಕಾಲದಲ್ಲಿ, ನೋಡೋಣ, ಮೊದ್ಲು ಅತ್ತೆ ಇಲ್ಲಿಗೆ ಬರ್‍ಲಿ. ನಾಲ್ಕು ದಿನ ನೋಡೋದು ಹ್ಯಾಗೆ ಆಗುತ್ತೆ ಅಂತ. ಆಮೇಲೆ ಏನಾದ್ರೂ ವ್ಯವಸ್ಥೆ ಮಾಡಿದರಾಯಿತು” ಪರಿಸ್ಥಿತಿ ಎದುರಿಸುವ ಮನಸ್ಥಿತಿಯಲ್ಲಿ ಹೇಳಿದಳು. ತನುಜಾಳ ಮಾತುಗಳು ಒಂದಿಷ್ಟು ಧೈರ್ಯವನ್ನು ತಂದಿದ್ದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲೆಗಳು ಬದಲಾಗಿವೆ
Next post ಬೇಡ…

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…