ಕೇಳಿ ಭಟ್ಟರೆ ಏಳಿ ಶೆಟ್ಟರೆ
ಎರಡು ಸಾವಿರ ಖಂಡಿಗೆ
ಇಂದೆ ಸಾಗಿಸಿ ಈಗ ಸಾಗಿಸಿ
ಎಲ್ಲ ಸರಕನು ಮಂಡಿಗೆ
ಗೂಗೆ ಹೇಳಿತು ಕಾಗೆ ಕೇಳಿತು
ಸೋಗೆ ನಕ್ಕಿತು ಮೆಲ್ಲಗೆ
ಮಾವು ಚಿಗುರಿತು ಬೇವು ಕೊನರಿತು
ಬಂತು ಮಾಗಿಯು ಊರಿಗೆ
ಹೊದ್ದು ಕಂಬಳಿ ಇಡಿಯ ಹೋಬಳಿ
ಎದ್ದು ಕುಳಿತಿತು ಬಿಸಿಲಿಗೆ
ಒಲ್ಲದಾಕಳು ಎಲ್ಲ ಹೈಕಳು
ಹೊರಟು ನಿಂತವು ಎಲ್ಲಿಗೆ?
ಹೊತ್ತು ಮೂಡಿತು ಹೊತ್ತು ಮುಳುಗಿತು
ಸಂಜೆಯಿಳಿಯಿತು ರಾತ್ರಿಗೆ
ಕಣ್ಣು ಹುಡುಕಿತು ಕೈಯು ತಡವಿತು
ಮೈಯ ಕರೆಯಿತು ಹಾಸಿಗೆ
ತೆರೆದು ಮಾನಸ ಸೇರಿ ಆಗಸ
ಕಟ್ಟಿರೆಕ್ಕೆಯ ಕನಸಿಗೆ
ಮತ್ತೆ ಮರುದಿನ ಹೀಗೆ ಪ್ರತಿದಿನ
ಮಾಗಿ ಮುಗಿದರೆ ಬೇಸಿಗೆ
*****