ನನ್ನ ತಾಯಿ ಕಡೆಯ ಸಂಬಂಧಿಕರಿವರು,
ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು.
ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ
ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು
ಎಷ್ಟೋ ಸಲ ನೋಡಿದ್ದೇನೆ.
ಒಂಟಿಗಿಡದ ಪನ್ನೀರ ಫಲಗಳು ದುರಾಶೆ ತುಂಬಿದ
ಅವರ ತೃಷೆಯನ್ನು ಹೋಗಲಾಡಿಸುತ್ತಿದ್ದವು.
ಊರೂರು ಅಲೆದು ಹೊತ್ತು ತಂದ ಇದ್ದಿಲನ್ನು ಸಂಜೆಗತ್ತಲು ಏರುತ್ತಿದ್ದಂತೆ
ಮಾರಿ, ಗಡಂಗು ಹೊಕ್ಕುಬಿಡುತ್ತಿದ್ದರು ತಾಟಗಿತ್ತಿಯರು.
ಅವರ ಸೊಂಟದ ಬದಿಯ ಕತ್ತಿಗಳು ವಾರಕ್ಕೊಮ್ಮೆಯಾದರೂ
ಕುಲುಮೆಗಾರನಲ್ಲಿಗೆ ಹೋಗಿ ಬರುತ್ತಿದ್ದದ್ದು ನೆನಪಾಗುತ್ತಿರುತ್ತದೆ.
*****