ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ
ಪೂಜಾರಿ ನಾನಽ ಪರಮೇಶಿ ||ಪಲ್ಲ||
ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ
ಬಕುತರು ಬರಲೇ ನಿನಗುಡಿಗೆ
ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ
ಬಂಗಾರ ಕಳಸಾ ನಿನಮುಡಿಗೆ ||೧||
ನೀ ಕಲ್ಲು ಆದರ ಕಲ್ಲೆಲ್ಲ ಕೈವಲ್ಯ
ಪೂಜಾರಿ ನನಗ ಗುರುಪೂಜೆ
ಕುರಿಗೋಳು ಬಂದಾವ ನನಕಾಲು ತೊಳೆದಾವ
ಕಾಲೀನ ಕೆಸರಾ ಕುಡಿದಾವ ||೨||
ಪೂಜಾರಿ ಪರಮೇಶಾ ನಾನೊಬ್ಬ ಜಗದೀಶಾ
ಮಠದಯ್ಯ ಮಾಸಾಮಿ ನಾನಯ್ಯಾ
ನೀಮೂಳಾ ಮಾದೇವಾ ಖಾಲಿಕುಂಬಳ ಖೂಳಾ
ನೀ ಹೇಳಾ ಹುಚಮೂಳಾ ಹಕಿಕತ್ತಾ ||೩||
ಕ್ಯಾವೀಯ ಜೋಳ್ಯಾಗ ಕೆಂಗೋದಿ ಹೋಳ್ಗ್ಯಾಗ
ರೋಮರೋಮಕ ನೋಡ ಭಕುತಾರಾ
ಬಡಬಡ ಬಂದಾವು ದಡದಡ ಬಿದ್ದಾವು
ಕುರಿಗೋಳು ಇರುತನ ನಾ ಜೋರಾ ||೪||
ಕಲ್ಲುದೇವರು ನೀನು ಕಿಸಬಾಯಿ ಕಲ್ಲೇಶಿ
ಮಲ್ಲೇಶಿ ರಾಯ್ರೋ ಕೈಕೊಟ್ರೋ
ಪುಗಸೆಟ್ಟಿ ಪೂಜೇರಿ ಸಾಂಬ್ರಾಜ್ಯ ಜೋರ್ಜೊರಿ
ಎಲ್ಲೀಯ ದೇವ್ರೋ ನನಬಿಟ್ರೋ ||೫||
*****