ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ
ಗುರುತಿನ ಕಾರ್‍ಡು
ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.
ಸಂಕೇತಗಳ ಬೇಡಿಯನ್ನು
ಅಂಗಾಂಗಗಳ ಮೇಲೆಲ್ಲಾ ಹೇರಿ
ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ
ಎಂದೆಲ್ಲ ಊದುವ ಶಂಖನಾದ
ಭಂಡಾರ ಬಳಿದು ಬಲಿಗೆ ಸಿದ್ಧಪಡಿಸಿದ
ಯೂಪಸ್ತಂಭದ ಹರಕೆಯ ಕುರಿಯ
ನೆನಪು ತರುತ್ತದೆ ನನಗೆ
ನಾನು ಹೆಂಡತಿಯಾಗಲಾರೆ.
ಅವಕುಂಟನ, ಪರದಾ ಬುರಖಾಗಳಲ್ಲಿ
ನನ್ನ ಮುಚ್ಚಿ ಮೆಚ್ಚುವ ನಿನ್ನ ಪರಿ
ಅಲಂಕೃತಗೊಳಿಸಿದ ಮೃತದೇಹವನ್ನು
ಶವಪೆಟ್ಟಿಗೆಯಲ್ಲಿಟ್ಟು ಮುಚ್ಚಿದಂತೆ
ನನ್ನೊಳಗಿನ ನನ್ನನ್ನು ಅದುಮಿ
ಸಾಯಿಸುವ ನಿನ್ನ ಹಂಬಲ
ಸೂರ್ಯನಷ್ಟೇ ಸ್ಪಷ್ಟ ನನಗೆ
ನಾನು ಹೆಂಡತಿಯಾಗಲಾರೆ.
ನೀನು ಬಿತ್ತಿದ ಬೀಜಕ್ಕೆ ನನ್ನೆಲ್ಲಾ
ರಕ್ತ ಮಾಂಸಗಳ ಗೊಬ್ಬರ ಬೀರಿ
ತೆನೆತೆಗೆದು ನಿನ್ನ ಕೈಯಲ್ಲಿಟ್ಟು
ಕೃತಾರ್ಥಳಾಗಬೇಕು
ರಕ್ತ ಬಸಿಯುವ ಹಾಲೂಡಿಸಿ ಮತ್ತೆ
ನಿನ್ನ ಹೆಸರಿಗೆ ಇಡಬೇಕು
ನಾನು ಹೆಂಡತಿಯಾಗಲಾರೆ
ನನ್ನ ಹೆಸರಿನ ಕೂಡ ನಿನ್ನ ಹೆಸರಿನ
ಧಿಮಾಕು ಜೋಡಿಸಿ
ನಿನ್ನ ಆಸ್ತಿಯಲ್ಲಿ ಭಾವಬತ್ತಿದ ನಾನೊಂದು
ವಸ್ತುವಾಗಬೇಕು
ನಾನು ಹೆಂಡತಿಯಾಗಲಾರೆ.
ಗಾಲವನ ಗಾಳಕ್ಕೆ ಸಿಕ್ಕು ಮದುವೆ ಎಂಬ
ಬಲೆಯೊಳಗೆ ಮರಳಿ ಮರಳಿ ನರಳಿ
ವಿಲವಿಲನೆ ಒದ್ದಾಡಿ ಬಳಲಿ
ಬೆಂಡಾದ ಬಾಡಿದ ಮಾಧವಿಯಲ್ಲ ನಾನು
ದುಶ್ಯಂತನ ಪ್ರೇಮದ ಬಲೆಯಲ್ಲಿ ಕಳೆದುಹೋಗಿ
ಗಾಂಧರ್ವ ವಿವಾಹದಿ ಬಂಧಿಯಾಗಿ
ಮತ್ತೆ ಪರಿತ್ಯಕ್ತೆಯಾಗಿ ಬೆಂದ
ಶಕುಂತಲಾ ಅಲ್ಲ ನಾನು
ಇನ್ನು ಹುಟ್ಟದೇ ಇರಲಿ ನಾರಿ ಎನ್ನವೋಲ್
ಎಂದು ಹಳಹಳಿಸಿ ನೊಂದ ಪಂಚವಲ್ಲಭೆ
ಪಾಂಚಾಲಿಯೂ ಅಲ್ಲ ನಾನು
ನಾನು ಹೆಂಡತಿಯಾಗಲಾರೆ
*****