ಅತ್ತು ಅತ್ತು ಏಕೆ?
ಕಣ್ಣ ನೀರಲಿ ಕೈಯ ತೊಳೆವೆ|
ಪ್ರಕೃತಿಯ ನಿಯಮ ಮೀರಿ
ಇಲ್ಲಿ ಏನು ನಡೆಯದು||
ನಾವು ಪ್ರಕೃತಿಯನರಿತು
ಬಾಳಿದರೇ ನೋವ ಸಹಿಸಬಹುದು||
ಹುಟ್ಟು ಖಚಿತ
ಸಾವು ನಿಶ್ಚಿತ ಎಂಬಂತೆ,
ನಮ್ಮ ನೆರಳು ನಮ್ಮ ನೆಚ್ಚಿ
ಬರುವಂತೆ
ನೋವು ಸಹ ಸದಾ
ಸುತ್ತಾ ಸುಳಿದಾಡುತಿಹುದು||
ಇಂದು ಸಾಯಲೇ ಬೇಕು
ಇಲ್ಲಿ ಹುಟ್ಟಿರುವುದಕೆ|
ಮುಂದೆ ಹುಟ್ಟಲೇ ಬೇಕು
ಕರ್ಮ ತೀರಿಸಿ ಪುಣ್ಯಗಳಿಸಲಿಕ್ಕೆ||
ಅನ್ನದ ಋಣವು ತೀರಿದ ಮೇಲೆ
ಹೋಗುವವರೆ ಎಲ್ಲಾ|
ಹಣ್ಣು ಮಾಗಿದ ಮೇಲೆ ತೊಟ್ಟು
ಕಳಚಿ ಬೀಳುವ ಹಾಗೆ
ಇಂದು ಇವರು, ನಾಳೆ ನಾವು
ಮುಂದೆ ಅವರು, ಹಿಂದೆ ನಾವು||
ತಂದೆ ತಾಯಿಯ ಜೀವ ದೊಡ್ಡದು
ದೈವಕಿಂತಲೂ ಅವರು ಹಿರಿದು
ಆದರವರೂ ಕಾಲಕ್ಕೆ ಅಧೀನರು|
ಇಲ್ಲಿ ಹುಟ್ಟಿದ ಆ ದೇವರುಗಳೇ
ಕಟ್ಟಕಡೆಗೆ ಶಿಲೆಗಳಾಗಿ ನಿಂತರು||
ದುಃಖ ಸರಿದು ಯೋಚಿಸು
ನಾಳಿನ ಬಾಳ ರೂಪಿಸು|
ಚಿಕ್ಕವರಿಗೆ ಧೈರ್ಯ ತುಂಬಿಸು
ಮಡಿದವರಿಗೆ ನಮಿಸು
ಹೆತ್ತವರ ಪ್ರೀತಿ, ಪ್ರೇಮ,
ತ್ಯಾಗ, ಧ್ಯೇಯಗಳ ಸದಾ ಸ್ಮರಿಸುತಲಿ
ಬಾಳ ಮುಂದುವರೆಸು||
*****