(ಮತ್ತೇಭವಿಕ್ರೀಡಿತ)
ನಳಿನೀ! ನೀಂ ನಲಿವೈ ವಿಲೋಲಜಲದಾಕಲ್ಲೋಲದುಯ್ಯಾಲೆಗೊಂ
ಡೆಳೆಗೆಂಪಾಂತ ಬಿಸಿಲ್ಗೆ ಮೆಲ್ಲನುಳಿವೈ ಬಲ್ನಿದ್ದೆಯಂ ಕಂಗಳಿಂ!
ಆಳಿಯುಂ ಮೆಲ್ಲುಲಿ, ತಂಬೆಲರ್ ಸೊಗವ, ತೀಡಲ್ ಮೋಡಮಂ ಪೊಂದುವೈ!
ದಳಮಂ ತೂಗುತೆ ನಿದ್ದೆಗೊಳ್ವೆ, ಗೆಳೆಯಂ ಬಾನಿಂ ಮುಳುಂಗಲೈ ನೀಂ! ||೧||
ಸಲಿಲೋತ್ಸಂಗ ವಿನೋದಿನೀ! ಕಮಲಿನೀ! ಮನ್ಮಾನಸೋಲ್ಲಾಸಿನೀ!
ಕಲಿಸೈ ನಿನ್ನವೊಲಾಂ ಮುದಂ ತಳೆವವೊಲ್, ಸಂತಾಪಮಂ ನೀಗುವೋಲ್!
ವಿಲಸದ್ರಮ್ಯತೆಯಿಂ ಸುವಾಸನೆಯಿನಾನಾನಂದಿಪಂತಾವಗಂ,
ಜಲದಾಂದೋಲನದಿಂದೆ ನೀಂ ಸೊಗಸು ತೋರೈ! ಪುಷ್ಪಕಾಂತಾಮಣೀ! ||೨||
ಸರಮಂ ಸಿಂಗರಿಪೈ ವಿಶಾಲದಳದಾ ಸೌಂದರ್ಯದಿಂ ವರ್ಣದಿಂ,
ನರರಂ ರಂಜಿಸುವೈ ನಿರಂತರ ಲಸನ್ಮಾಧುರ್ಯದಿಂ ಲೀಲಿಯಿಂ,
ಧರೆಯೊಳ್ ವರ್ಧಿಸುವೈ ಮಹಾದ್ಭುತಕರ ಶ್ರೀಸೃಷ್ಟಿವೈಚಿತ್ರ್ಯಮಂ.
ಧರಣೀಕರ್ಣದಿನೀಂ ಜಿನುಂಗಿಪೆ ಹರೇರ್ಲೀಲಾ ಮಹತ್ವಂಗಳಂ! ||೩||
ಎಲೆಲೇ! ಮಾನವ ಮೂಢ! ನೋಡು! ಕೆಸರೊಳ್ ನಾಳಂ ಮುಳುಂಗಿರ್ದೊಡಂ,
ಜಲಮಂ ಸೋಂಕಿದೊಡಂ ದಳಂ, ಕಮಲಮುಂ ನಿರ್ಲಿಪ್ತಮಾಗುತ್ತೆ ಬಾಂ
ದಳಕಂ ಕಣ್ಣಿಡುವೋಲ್-ಮಹಾ ಭವದಿ ನೀನುಂ ಮಗ್ನನಾಗಿರ್ದೊಡಂ,
ಮಲಿನಂಗೊಳ್ಳದಿರೆಂದು ಮೀತನ ಪದಾಂಭೋಜಾತಮಂ ದೃಷ್ಟಿಸೈ! ||೪||
*****