ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಹೀಗೆ, ‘ರಾತ್ರಿ ಚೂರು ಚೂರಾಗಿದೆ,
ದೂರದಲ್ಲಿ ನಕ್ಪತ್ರ ಮಿನುಗಿದೆ’.
ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ.
ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಅವಳನ್ನು ಪ್ರೀತಿಸಿದೆ. ಒಮ್ಮೊಮ್ಮೆ ಅವಳೂ ನನ್ನ ಪ್ರೀತಿಸಿದಳು.
ಇಂಥ ರಾತ್ರಿಗಳಲ್ಲಿ ಅವಳನ್ನು ಅಪ್ಪಿ ಹಿಡಿದೆ.
ಮೋಡವಿರದ ಸ್ವಚ್ಛ ಆಕಾಶ. ಮತೆ ಮತ್ತೆ ಮುತಿಟ್ಟೆ.
ಅವಳು ಪ್ರೀತಿಸಿದಳು. ಒಮ್ಮೊಮ್ಮೆ ನಾನೂ ಅವಳನು ಪ್ರೀತಿಸಿದೆ.
ಅಂಥ ವಿಶಾಲ ನಿಶ್ಚಲ ಕಣ್ಣು, ಪ್ರೀತಿಸದಿರುವುದು ಹೇಗೆ.
ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಅವಳನ್ನು ಪ್ರೀತಿಸುವುದಿಲ್ಲ. ಅವಳನ್ನು ಕಳೆದುಕೊಂಡೆ.
ಅಗಾಧ ರಾತ್ರಿ. ಅವಳಿಲ್ಲದೆ ಇನ್ನೂ ಅಗಾಧವಾಗಿದೆ.
ಹುಲ್ಲ ಮೇಲೆ ಇಬ್ಬನಿ ಬೀಳುವ ಸದ್ದಿನಂತೆ ಆತ್ಮದ ಮೇಲೆ ಕವಿತೆಯ ಹನಿಗಳು.
ನನ್ನ ಪ್ರೀತಿ ಅವಳನ್ನುಳಿಸಿಕೊಳ್ಳದಿದ್ದರೆ ಏನಂತೆ.
ರಾತ್ರಿ ಛಿದ್ರವಾಗಿದೆ. ಅವಳಿಲ್ಲ ನನ್ನೊಡನೆ.
ಅಷ್ಟೆ. ದೂರದಲ್ಲಿ ಯಾರದೋ ಹಾಡು. ದೂರದಲ್ಲಿ.
ಅವಳನ್ನು ಕಳೆದುಕೊಂಡು ಆತ್ಮಕ್ಕೆ ತೃಪಿಯಿಲ್ಲ.
ನೋಟ ಅವಳನ್ನು ಹುಡುಕುತ್ತದೆ, ಬಳಿಸಾರಲೆಂದು.
ಹೃದಯ ನೋಡುತ್ತದೆ ಅವಳನ್ನು, ನನ್ನೊಡನೆ ಅವಳಿಲ್ಲ.
ಅದೇ ಇರುಳು ಅದೇ ಮರದ ಮೇಲೆ ಅದೇ ತಿಂಗಳು ಸುರಿದಿದೆ.
ನಾವು ಮಾತ್ರ ಅದೇ ನಾವು ಅಲ್ಲ, ಅದೇ ನಾವು ಆಗಿ ಉಳಿದಿಲ್ಲ.
ಅವಳ ಮೇಲೆ ಪ್ರೀತಿಯಿಲ್ಲ. ಖಂಡಿತ. ಎಷ್ಟೊಂದು ಪ್ರೀತಿ ಇತ್ತು.
ಅವಳ ಕಿವಿಯ ಮುಟ್ಟಲೆಂದು ನನ್ನ ದನಿ ಗಾಳಿಯಾಗಿ ಸುಳಿದಿತ್ತು.
ಇನ್ನು ಮೇಲೆ ಅವಳು ಮತ್ತೊಬ್ಬರಿಗೆ, ಮೊದಲು ನಾನು ಕೊಟ್ಟ ಮುತ್ತುಗಳಂತೆ,
ಅವಳ ದನಿ, ಅವಳ ಹೊಳೆವ ಮೈ, ಅವಳ ಅನಂತ ನೋಟ ಇನ್ನೊಬ್ಬರಿಗೆ.
ಅವಳ ಮೇಲೆ ಈಗ ಪ್ರೀತಿ ಇಲ್ಲ, ಖಂಡಿತ.
ಪ್ರೀತಿ ಇರಬಹುದೇನೋ.
ಪ್ರೀತಿ ಎಷ್ಟು ಕಿರಿದು, ಮರೆವು ಎಷ್ಟು ಹಿರಿದು.
ಇಂಥ ರಾತ್ರಿಯಲ್ಲಿ ಅವಳನ್ನು ಅಪ್ಪಿದ್ದೆ
ಅವಳಿಲ್ಲದೆ ಈಗ ಆತ್ಮಕ್ಕೆ ತೃಪ್ತಿ ಇಲ್ಲ.
ಅವಳು ನನಗೆ ಕೊಡುವ ಕೊನೆಯ ನೋವು ಇದೇ ಇರಬಹುದು
ಅವಳ ಬಗ್ಗೆನಾನು ಬರೆಯುವುದು ಇದೇ ಕೊನೆಯ ಕವಿತೆ ಇರಬಹುದು.
*****
ಮೂಲ: ಪಾಬ್ಲೋ ನೆರುಡಾ