ಎಲ್ಲವನ್ನು ನೆನಪಿಸಿಕೊಳ್ಳುತ್ತ ಹುಚ್ಚೀರನೂಂದಿಗೆ ಕೂತಿದ್ದ ಶಬರಿಯ ಕಿವಿಯಲ್ಲಿ ಅದೇ ಹಾಡು ಮಾರ್ದನಿಗೊಳ್ಳತೂಡಗಿತು. “ಈ ಭೂಮಿ ನಮ್ಮದು…” ಎಂಥ ಸನ್ನಿವೇಶವದು! ಈಗಲು ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಬಂದೇಬರ್‍ತೇನೆ ಎಂದಿದ್ದ ಸೂರ್ಯ ಬರಲೇ ಇಲ್ಲ. ಅಪ್ಪ ಹೇಳುತ್ತಲೇ ಇದ್ದ “ಬಂದೇ ಕಣವ್ವ. ಎಲ್ಲಾದ್ಕು ಕಾಯ್ಬೇಕು ಕಣವ್ವ, ಒಳ್ಳೇದಕ್ಕೆ ಜಾಸ್ತಿ ಕಾಯ್ಬೇಕು”- ಅಪ್ಪ ಹೀಗೆ ಹೇಳುತ್ತಲೆ ಹೋಗಿಬಿಟ್ಟ- ಮತ್ತೆ ತಿರುಗಿಬಾರದ ಜಾಗಕ್ಕೆ. ಸೂರ್ಯ?
ಇಲ್ಲ ಹಾಗೆ ಹೋಗಿರಲಾರ. ಮತ್ತೆ ಬರುತ್ತಾನೆ. ತಾನು ಕಾಯುತ್ತಿರುವುದಕ್ಕಾದರೂ ಬರಬೇಕು…
ಎಲ್ಲವೂ ಅಂದುಕೂಂಡಂತೆ ಆಗಬೇಕಲ್ಲ? ಅಪ್ಪ ಇಷ್ಟು ಬೇಗ ಸಾಯಬಹುದೆಂದು ಭಾವಿಸಿರಲಿಲ್ಲ. “ಮಗಳೇ ನಿಂಗ್ ಇಂಗಾಗ್‍ಬಾರ್‍ದಿತ್ತು ಕಣವ್ವ” ಎನ್ನುತ್ತಲೇ ಹೋಗಿಬಿಟ್ಟ. ತುಡಿಯುತ್ತ, ಕುಡಿಯುತ್ತ ಹೋಗಿಬಿಟ್ಟ. ಕಡಗೆ ಮಣ್ಣು ಮಾಡುವಾಗ ಅಪ್ಪನಿಗೆ ಇಷ್ಟವಾದ ವಸ್ತುವನ್ನು ಹೆಣದ ಜೊತೆ ಗುಂಡಿಗೆ ಹಾಕಬೇಕೆಂದು ಪೂಜಾರಪ್ಪ ಹೆಂಡದ ಬುಂಡೆ ಹಾಕಿದ! ಇವತ್ತೇ ಎಲ್ಲಾ ನಡೆದದ್ದು- ಅಪ್ಪ ಮಣ್ಣಾದದ್ದು! ಏನು ಮಾಡಿದರೂ ನಿದ್ದೆ ಬರುತ್ತಿಲ್ಲ. ಹುಚ್ಚೀರನಿಗೆ ಹೋಗೆಂದರೂ ಹೋಗುತ್ತಿಲ್ಲ. ಶಬರಿಯ ಮುಖವನ್ನೇ ನೋಡುತ್ತಿದ್ದ.
ಕೆದರಿದ ಕೂದಲಲ್ಲಿ ಕಂಗೆಟ್ಟ ಮುಖ;
ಒಡೆದ ಕನಸುಗಳ ಕಣ್ಣು.
ಅದರುವ ತುಟಿಯಲ್ಲಿ ಅಳುತ್ತ ಕೂತ ಮಾತು.
ಶಬರಿ ಏನನ್ನೂ ಹೇಳದೆ ಒಳಗೆ ಹೋದಳು. ಸೂರ್ಯನ ಬಗಲು ಚೀಲವನ್ನು ನೋಡಿ ಕೈಗೆತ್ತಿಕೊಂಡಳು. ಪುಸ್ತಕಗಳು; ಪಿಸ್ತೂಲು-ಎಲ್ಲಾ ಇವೆ. ಎದೆಗೆ ಒತ್ತಿಕೊಂಡಳು; ಕಣ್ಣು ಮುಚ್ಚಿಕೊಂಡಳು.
ಮುಚ್ಚಿದ ಕಣ್ಣೊಳಗೆ ಸೂರ್ಯನ ಕಿರಣ.
ಕತ್ತಲೊಳಗೆ ಕಾಡುವ ಬೆಳಕು.
ಬೆಳಕಲ್ಲೊಂದು ಬೆಳಕಿನ ರೂಪ.
ಸೂರ್ಯ ಬರುತ್ತಾನೆ; ಬರುವವರೆಗೂ ಕಾಯುತ್ತೇನೆ. ಬಂದಾನೊ ಬಾರನೊ ಎಂದೇ ಕಾಯುತ್ತೇನೆ. ಇಷ್ಟು ದಿನ ಹೀಗೇ ಅಲ್ಲವೆ-ಶಬರಿಯ ಒಳಮಾತು.
ಬಗಲು ಚೀಲವನ್ನು ತಗಲುಹಾಕಿ ಹೊರಗೆ ಬಂದಳು-ಅಳುತ್ತ ಕೂತ ಹುಚ್ಚೀರನ ಕಣ್ಣೊರೆಸಿದಳು. ಆತನ ತಲೆಯನ್ನು ನೇವರಿಸುತ್ತ ನೆನಪಿನತ್ತ ಸಾಗಿದಳು.
* * *
ಪೋಲಿಸರು ಅರೆಸ್ಟ್ ಮಾಡಿ ಕರೆದೊಯ್ದ ಮೇಲೆ ಶಬರಿಗೆ ಆತನ ಆಗಮನಕ್ಕೆ ಕಾಯುವುದೇ ಕೆಲಸವಾಯಿತು. ಜೊತೆಗೆ ತಮ್ಮವರ ಹೋರಾಟದ ಹುಮ್ಮಸ್ಸನ್ನು ಕಾಯ್ದುಕೂಳ್ಳಬೇಕಿತ್ತು. ಸೂರ್ಯ ಬರಲಿಲ್ಲವೆಂಬ ಬೇಗೆಯನು ಅದುಮಿಟ್ಟುಕೊಂಡು ನಗೆ ಚಿಮ್ಮಿಸುತ್ತ ಒಳ್ಳೆಯದರ ನಿರೀಕ್ಷೆಗೆ ನೀರೆರೆಯಬೇಕಿತ್ತು. ಈ ಕೆಲಸವನ್ನು ಶಬರಿ ನಿರ್ವಹಿಸುತ್ತ ಬಂದಳು.
ಪಟ್ಟಣಕ್ಕೆ ಹೋಗಿ ಗೆಳೆಯರೊಂದಿಗೆ ಬರುವುದಾಗಿ ಹೇಳಿದ ನವಾಬ ಬರಲಿಲ್ಲ. ಗೌರಿಯ ಸುದ್ದಿಯೂ ಇಲ್ಲ. ಪೂಜಾರಪ್ಪ ಮತ್ತೆ ಮತ್ತೆ ಶಬರಿಯನ್ನು ವಿಚಾರಿಸಿದ. ಸಮಾಧಾನ ಮಾಡುವುದರಲ್ಲಿ ಆಕೆಗೆ ಸಾಕಾಗುತ್ತಿತ್ತು.
ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳಬೇಕಾದಾಗ, ಶಬರಿಯು ತೋಪಿಗೆ ಹೋಗುತ್ತಿದ್ದಳು. ಅಲ್ಲಿ ನಡೆದು, ನಿಂತು, ಕೂತು, ತನ್ನನ್ನು ತಾನು ಸಂತೈಸಿಕೊಳ್ಳುತ್ತ ನಿರ್ಧಾರಕ ನಿಲುವಿನತ್ತ ಸಾಗುತ್ತಿದ್ದಳು. ಸ್ವಲ್ಪ ದಿನ ಯಾರೂ ತೋಪಿನ ತಂಟೆಗೆ ಬಾರದೆ ಇದ್ದದ್ದು ಆಶ್ಚರ್ಯ ಹುಟ್ಟಿಸಿತ್ತು. ಆದರೆ ನರಸಿಂಹರಾಯಪ್ಪ ಮತ್ತು ಜೋಯಿಸರು ಹಟ್ಟಿಯ ಜನರೂಂದಿಗೆ ಮಾತುಕತೆಯನ್ನಾಡಲು ಬಂದು ಚೆನ್ನಾಗಿ ದಬಾಯಿಸಿದ್ದರು.
“ಇವ್ರ್‌ಗಂತೂ ಬುದ್ದಿ ಇಲ್ಲ ಅಂದ್ರೆ ನಿಮ್ಗೂ ಇಲ್ವ? ಹಿರೇರು ಅಂಬ್ತ ಯಾಕಿದ್ದೀರಿ ಇಲ್ಲಿ?” ಎಂದು ಪೂಜಾರಪ್ಪ ಮತ್ತು ತಿಮ್ಮರಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು “ನಮ್ಮದೇನೈತೆ ದಣೇರ. ಎಲ್ಲಾರು ಸೇರಿ ಏನ್ ತೀರ್‍ಮಾನ ತಗಂಬ್ತಾರೊ ಎಲ್ಲಾ ಅಂಗೇ ಆಯ್ತದೆ” ಎಂದು ಕೈ ತೊಳೆದುಕೊಂಡರು.
ಹೀಗೆ ಹದಿನೈದು-ಇಪ್ಪತ್ತು ದಿನಗಳು ಕಳೆದವು. ಒಂದು ರಾತ್ರಿ; ಊಟ ಮಾಡಿ ಮಲಗುವ ಹೊತ್ತು. ಈಗ ನೀರಿಗೆ ಇಳಿದಿದ್ದಾಗಿದೆ; ಈಜಲೇ ಬೇಕು- ಎಂಬಂಥ ಮಾತುಗಳನ್ನು ಶಬರಿ ಹೇಳುತ್ತಿದ್ದಳು. ಎಲ್ಲರಿಗೂ ಪ್ರಿಯವಾದ “ಈ ಭೂಮಿ ನಮ್ಮದು” ಹಾಡನ್ನು ಹೇಳಬೇಕೆಂದು ಹುರಿದುಂಬಿಸುತ್ತ ತಾನೇ ಮೂದಲೆರಡು ಸಾಲುಗಳನ್ನು ಶುರುಮಾಡಿದಳು.
ಅಷ್ಟರಲ್ಲಿ “ಶಬರಿ” ಎಂಬ ಕೂಗು; ಆಕಡೆ ನೋಡಿದರೆ ಗೌರಿ ಬರುತ್ತಿದ್ದಾಳೆ! ಜೊತೆಗೆ ನವಾಬ!
ಎಲ್ಲರಿಗೂ ಖುಷಿಯೋ ಖುಷಿ.
ಅಮಾವಾಸ್ಯೆಯ ಅನಿರೀಕ್ಷಿತ ಬೆಳದಿಂಗಳು.
ಎಲ್ಲರ ಮುಖದಲ್ಲಿ ನಗೆಮುಗುಳು.
ಶಬರಿ “ಗೌರಿ” ಎಂದು ಸಂಭ್ರಮಿಸಿ ಎದ್ದಳು. ತಾನೇ ಹೋಗಿ ಕೈ ಹಿಡಿದು ಕರೆತಂದಳು. ಪೂಜಾರಪ್ಪ “ಚಂದಾಗಿದ್ದೀಯ ಮಗ್ಳೆ” ಎಂದು ಕೇಳಿದ. “ಊಂಕಣಪ್ಪ” ಎಂದಳು ಗೌರಿ. ಆಮೇಲೆ ನವಾಬನ ಕ್ಷೇಮಸಮಾಚಾರ. ನವಾಬ “ನಮ್ದಿರ್‍ಲಿ ನೀವೆಲ್ಲ ಹೇಗಿದ್ದೀರಿ?” ಎಂದು ಕೇಳಿದ.
“ಸೂರ್ಯ ಇಲ್ಲ” ಎಂದು ಶಬರಿ ಖಿನ್ನಳಾಗಿ ಮಾತು ಶುರುಮಾಡುತ್ತಿದ್ದಂತೆಯೇ ನವಾಬ್ “ವಿಷ್ಯ ಎಲ್ಲ ನಂಗೊತ್ತು. ಇಲ್ಲ ಏನ್ ನಡೀತು ಅಂತ ಪೇಪರ್‍ಗಳಲ್ಲೆ ಬಂತು. ನಾವೆಲ್ಲ ಗೆಳೆಯರು ಒಟ್ಗೆ ಸೂರ್ಯನ್ನ ನೋಡ್ಕಂಡ್ ಬಂದ್ವಿ” ಎಂದು ವಿವರಿಸಿದ.
ಶಬರಿ ಸಹಿತ ಎಲ್ಲರೂ ಮಿಂಚಾದರು. “ಸೂರ್ಯನ್ ಕಂಡಿದ್ದಾ?” ಎಂದು ಕೇಳಿದರು. ಆಗ ಗೌರಿ ಹೇಳಿದಳು- “ನಾನೂ ವೋಗಿದ್ದೆ. ಸೂರ್ಯಣ್ಣ ನಿಮ್ಮೆಲ್ರನ್ನೂ ನೆಪ್ತಿ ಮಾಡ್ಕಂಡ. ಏನೇ ಆದ್ರೂ ಯೆದ್ರ್‌ಬ್ಯಾಡ್ರಿ ಅಂಬ್ತ ಯೇಳಮ್ಮ ಅಂಬ್ತ ಕೇಳ್ಕಂಡ. ಸೂರ್ಯಣ್ಣಂಗೆ ಜೇಲ್‍ನಾಗೂ ನಿಮ್ದೇ ಯೋಚ್ನೆ…..”
ಗೌರಿಗೆ ಅಳು ಬಂತು. ಶಬರಿಯ ಕಣ್ಣು ತುಂಬಿ ಬರುತ್ತಿತ್ತು. ಒರೆಸಿ ಕೊಂಡಳು. “ಆಮ್ಯಾಕೆ.. ಆಮ್ಯಾಕೇನು ಯೇಳು”; ಎಂದು ಗೌರಿಯನ್ನು ಒತ್ತಾಯಿಸಿದಳು. ಸಣ್ಣೀರ “ನಮ್ಮನ್ ಕೇಳಿದ್ ವಿಸ್ಯ ಅಂಗಿರ್‍ಲವ್ವ. ಸೂರ್ಯಪ್ಪ ಯಾವಾಗ್ ಬತ್ತಾನಂತೆ ಅದನ್ನೇಳು” ಎಂದ. ಆಗ ನವಾಬ್ ಮಾತನಾಡಿದ-
“ಸೂರ್ಯ ಸದ್ಯಕ್ಕೆ ಬರೋಸ್ಥಿತೀಲಿಲ್ಲ. ಅವ್ನ್ ಮೇಲೆ ಸುಳ್ ಕೇಸಿದೆ. ಈಗ ಈ ಒಡೆಯ, ಜೋಯಿಸ, ಎಂ.ಎಲ್.ಎ. ಎಲ್ಲಾ ಕುಮ್ಮಕ್ಕು ಕೂಡ್ತಾ ಇದಾರೆ. ಇಷ್ಟರಲ್ಲೇ ತೋಪನ್ನ ಅವ್ರ್ ವಶಪಡಿಸ್ಕೂಳ್ತಾರೆ. ಅದಕ್ಕೆ ಅವ್ಕಾಶ ಕೊಡಬಾರ್‍ದು ಅಂತ ಸೂರ್ಯ ಮತ್ತೆ ಮತ್ತೆ ಹೇಳಿದಾನೆ.”
“ಸೂರ್ಯ ಯಾವಾಗ್ ಬತ್ತಾನೆ ನವಾಬಣ್ಣ?”-ಶಬರಿ ಕೇಳಿದಳು. ಆಕೆಯ ಧ್ವನಿಯಲ್ಲಿ ಯಾತನೆಯಿತ್ತು; ಯಾಚನೆಯಿರಲಿಲ್ಲ.
“ನಮ್ ಸ್ನೇಹಿತ್ರೆಲ್ಲ ಪ್ರಯತ್ನ ಮಾಡ್ತಿದಾರೆ. ಒಳ್ಳೆ ಲಾಯರ್‍ನೆ ಇಟ್ಟಿದ್ದೀವಿ. ಬೇಕಾದ್ರೆ ಗೌರೀನ್ ಕೇಳಿ.”
“ಯಾಕೆ ನೀನ್ ಯೇಳಿದ್ರೆ ನಾವ್ ನಂಬಲ್ಲ ಅಂಬ್ತೀವ? ನಮಿಗ್ ನೀನ್ ಬ್ಯಾರೆ ಗೌರಿ ಬ್ಯಾರೆ ಅಲ್ಲ.” ಎಂದು ಶಬರಿ ಹೇಳಿದಾಗ ನವಾಬನ ಕೂರಳುಬ್ಬಿ ಬಂತು. ಒಂದು ಕ್ಷಣ ಸುಮ್ಮನಿದ್ದು ಮತ್ತೇ ಹೇಳಿದ- “ಇನ್ನೊಂದು ವಿಷ್ಯ ಅಂದ್ರೇ ಸೂರ್ಯನ್ ತಾಯೀನು ಕಂಡು ಧೈರ್‍ಯ ಹೇಳ್ ಬಂದಿದ್ದೀವಿ.”
ತಕ್ಷಣ ಗೌರಿ- “ನಾನೂ ವೋಗಿದ್ದೆ” ಎಂದಳು.
“ಏಟೊಂದ್ ಅದೃಷ್ಟ ನಿಂದು” ಎಂದು ಶಬರಿ ಕಣ್ಣೀರು ಒರೆಸಿಕೂಂಡಳು.
ಆಮೇಲೆ ನವಾಬ ತಾವು ಹೋದದ್ದು, ಸ್ನೇಹಿತರನ್ನು ಕಂಡದ್ದು, ಆ ವೇಳಗೆ ಸೂರ್ಯನ ಬಂಧನವಾದ ವಿಷಯ ಗೊತ್ತಾದದ್ದು ಆತನ ತಾಯಿಯನ್ನು ಕಂಡದ್ದು ಎಲ್ಲವನ್ನೂ ಮೊದಲಿನಿಂದ ನಿರೂಪಿಸತೂಡಗಿದಾಗ ಶಬರಿ ತಡೆಯದೆ ಕೇಳಿದಳು – “ಸೂರ್ಯನ ಅವ್ವ ಏನಂದ್ರು? ಸೂರ್ಯನ್ ಮ್ಯಾಲೆ ಬ್ಯಾಸ್ರ ಮಾಡ್ಕಂಡ್ರ?” “ಇಲ್ಲ” ನವಾಬ ಹೇಳಿದ- “ಅವ್ರಿಗೆ ಇದೆಲ್ಲ ಅಭ್ಯಾಸ ಆಗಿದೆ. ಸೂರ್ಯನ್ನ ಹೆತ್ತು ಈ ಸಮಾಜಕ್ಕೆ ಅಂತ್ಲೇ ಬಿಟ್ ಬಿಟ್ಟಿದಾರೆ. ತಮಿಗ್ ತೊಂದ್ರೆ ಆದ್ರೂ ಪರ್‍ವಾಗಿಲ್ಲ ನಾಲಕ್ ಜನಕ್ ಒಳ್ಳೇದ್ ಮಾಡ್ಲಿ ಅಂತ ಯಾವಾಗ್ಲೂ ಹೇಳ್ತಾರೆ.”
“ಮಾತಾಯಿ!”- ಉದ್ಗರಿಸಿದ ತಿಮ್ಮರಾಯಿ.
“ನಿಜ”- ನವಾಬ ಮಾತು ಮುಂದುವರೆಸಿದ- “ಆ ಮಹಾತಾಯಿ ನಿಮ್ಮ ಬಗ್ಗೆ ಎಷ್ಟು ವಿಚಾರಿಸ್ಕೊಂಡ್ರು ಗೊತ್ತ? ಸೂರ್ಯ ಇಲ್ಲ ಅಂತ ಅವ್ರು ಎದೆಗುಂದಬಾರ್‍ದು. ಸೂರ್ಯಂಗೆ ಸಂತೋಷ ಆಗ್ಬೇಕು ಅಂದ್ರೆ ನೀವೆಲ್ಲ ಅವ್ನ್ ತೋರ್‍ಸಿದ್ ದಾರೀಲ್ ಹೋಗ್ಬೇಕು ಅಂತ ನಿಮ್ಗೆಲ್ಲ ಹೇಳು ಅಂದ್ರು. ಮಗ ಜೈಲಲ್ಲಿದ್ರೂ ನಾನ್ ಸಹಿಸ್ಕೊಂಡಿದ್ದೀನಿ, ಅವ್ರೂ ಹಾಗೇ ಇರ್‍ಬೇಕು ಅಂತ ತಿಳ್ಸು ಅಂದ್ರು. ನನ್ ಮಗನ್ಗೆ ಇಷ್ಟು ದಿನ ಅನ್ನ ಕೊಟ್ಟಿದಾರ, ಅವ್ರ್‍ಗೆ ಒಳ್ಳೇದಾಗ್ಲಿ ಅಂತ ನಿಮ್ ಬಗ್ಗೆ ಹೇಳಿದ್ರು.”
ಕೇಳುತ್ತ ಕೂತವರ ಕಣ್ಣಲ್ಲಿ ತಾನೇ ತಾನಾಗಿ ನೀರು ಹರಿಯಿತು. ಬಿಕ್ಕುತ್ತಲೇ ಒಬ್ಬಾಕೆ ಕೇಳಿದಳು- “ಆ ಮಾತಾಯಿದು ಒಂದ್ ಪಟ ಇದ್ರೆ ಕೊಡಪ್ಪ, ದಿನಾ ಕೈಮುಗೀತೀವಿ.”
“ಈಗ ನನ್ ಹತ್ರ ಇಲ್ಲ. ಮತ್ತೆ ಹೋದಾಗ ತಗೊಂಡ್ ಬರ್‍ತೀನಿ” ಎಂದು ನವಾಬ್ ಸಮಾಧಾನಿಸಿದ.
ಎಲ್ಲರಲ್ಲೂ ಸೂರ್ಯನ ಹಾದಿಯಲ್ಲಿ ಹೋಗಲೇಬೇಕೆಂಬ ಭಾವನೆ ಬಲವಾಗಿತ್ತು. ನವಾಬ್ ಮುಂದಿನ ಕಾರ್ಯಾಚರಣೆಯ ಬಗ್ಗೆ ವಿವರ ನೀಡಿದ.
“ಈಗ ನಾನು ಒಂದು ಬೇಡಿಕೆ ಪತ್ರ ಸಿದ್ಧ ಮಾಡ್ಕೊಂಡ್ ಬಂದಿದ್ದೀನಿ. ಇದನ್ನ ಊರಿನ್ ಒಡೆಯರಿಗೆ, ಎಂ.ಎಲ್.ಎ.ಗೆ, ಸರ್ಕಾರಕ್ಕೆ ಕೂಟ್ಟು ಮೊದ್ಲು ಅವ್ರ್ ಕೆಲ್ಸ ತಡೀಬೇಕು. ಇದು ನೀವೇ ಕೊಡೋ ಪತ್ರ. ಅದ್ರಿಂದ ನೀವೆಲ್ಲ ಇದಕ್ಕೆ ಸೈನ್ ಮಾಡ್ಬೇಕು.”
“ಸೇನು ಅಂದ್ರೆ?”- ಸಣ್ಣೀರ ಕೇಳಿದ.
“ಸೈನ್ ಅಂದ್ರೆ ಕನ್ನಡದಲ್ಲಿ ಸಹಿ ಅಂತಾರೆ. ನೀವು ಮೊದ್ಲು ಹೆಬ್ಬೆಟ್ಟು ಒತ್ತುತಾ ಇದ್‍ರಲ್ಲ, ಅದ್ರ್‌ಬದ್ಲು ನೀವೇ ನಿಮ್ ಹೆಸ್ರನ್ನ ಬರೀಬೇಕು.”
“ಅಂಗಾರೆಲ್ಲ ಸೇನ್ ಮಾಡ್ತೀವಿ. ಕೂಡು ನವಾಬಣ್ಣ” ಎಂದು ಶಬರಿ ಪತ್ರವನ್ನು ಕೇಳಿದಳು.
“ಮೊದ್ಲು ಇದ್ರಲ್ಲೇನಿದೆ ಅಂತ ಒದ್ ಹೇಳ್ತೀನಿ” ಎಂದು ನವಾಬ ಓದಿದ. ಅದರಲ್ಲಿ ಬುಡಕಟ್ಟಿನ ಸ್ಥಿತಿಗತಿ, ಅವರಿಗೆ ಭೂಮಿ ಕೂಡಲೇಬೇಕೆಂಬ ಒತ್ತಾಯ, ಯಾವ ಕಾರಣಕ್ಕೂ ತೋಪನ್ನಾಗಲಿ ಪಕ್ಕದ ಬಯಲನ್ನಾಗಲಿ, ಬೆಟ್ಟ ಗುಡ್ಡ ಪ್ರದೇಶವನ್ನಾಗಲಿ ವಿದೇಶಿ ಕಂಪನಿಗೆ ಕೂಡಬಾರದೆಂಬ ಆಗ್ರಹ ಇತ್ತು.
ಒಬ್ಬೊಬ್ಬರೇ ಸಹಿ ಹಾಕಿದರು.
ಹುಚ್ಚೀರನಂತೂ ಸಹಿ ಹಾಕಿ ಪತ್ರವನ್ನು ಹಿಡಿದುಕೊಂಡು ಕುಣಿದಾಡಿದ.
“ನಾನು ನಾಳೇನೇ ಹೋಗ್ತೀನಿ. ಈ ಪತ್ರ ತಲುಪುಸ್ತೇನೆ. ಆನಂತರ ನಾವು ದಿನಾ ತೋಪನ್ನ ಕಾಯ್ಬೇಕು. ಅವ್ರ್ ಯಾರೂ ಕಾಲಡ್‍ಬಾರ್‍ದು. ಹಾಗ್ ಮಾಡ್‍ಬೇಕು.
-ನವಾಬ ಮುಂದಿನ ಕ್ರಿಯೆಯ ಬಗ್ಗೆ ಹೇಳಿದ್ದಾದ ಮೇಲೆ ಪೂಜಾರಪ್ಪ “ಇವ್ರ್‌ಗೇನಾರ ಉಂಬಾಕಿಕ್ರವ್ವ. ಆಗ್ನಿಂದ ಮಾತೇ ಆಯ್ತಲ್ಲ” ಎಂದ. ಶಬರಿ “ಮಾತಾಡ್ತ ಮರ್‍ತೇಬಿಟ್ವಿ. ಏನೈತೊ ನೋಡ್ತೀನಿ” ಎಂದು ಎದ್ದು ಹೋದಳು.
ಉಳಿದ ಹೆಂಗಸರು ಗೌರಿಯ ಸುತ್ತ ಕೂತರು. ಪಟ್ಟಣ ಹೆಂಗಿತು? ಏನೇನ್ ಕಂಡೆ? ಏನೇನ್ ತಂದೆ? ಮುಂತಾದ ಪ್ರಶ್ನೆಗಳನ್ನು ಕೇಳತೂಡಗಿದರು.
“ಎಲ್ಲಾ ವೊತ್ತಾರೆ ಯೇಳ್ತೀನಿ. ಇವಾಗ ನಿಮಿಗ್ ಅಂಬ್ತ ಬಳೆ ತಂದಿವ್ನಿ. ಎಲ್ಲಾ ತಗಳ್ರಿ” ಎಂದು ಬಳೆಗಳನ್ನು ಕೊಟ್ಟಳು. ಅವರೆಲ್ಲ “ಏಟಾದ್ರು ನಮ್ಮ ಅಟ್ಟಿ ಮಗಳಲ್ವ” ಎಂದು ಹೆಮ್ಮಪಟ್ಟರು.
ನವಾಬ್ “ಬಿಸ್ಕತ್ ಪ್ಯಾಕೇಟ್ ತಂದಿದ್ವಲ್ಲ ಅವ್ರಿಗ್ ಕೊಡು ಗೌರಿ” ಎಂದ.
ಗೌರಿ ಬ್ಯಾಗಿನಿಂದ ಬಿಸ್ಕತ್ ಪ್ಯಾಕೆಟ್ ತೆಗೆದು ಎಲ್ಲರಿಗೂ ಒಂದೊಂದು ಬಿಸ್ಕತ್ತನ್ನು ಹಂಚಿದಳು. ಇವರು ಬಿಸ್ಕತ್ತನ್ನು ಸವಿದು ಮುಗಿಸುವ ವೇಳಗೆ ಹೊರಬಂದ ಶಬರಿ “ಏನೇನೊ ತಿನ್ತಾ ಕುಂತಿವ್ರಿ. ನಂಗೇನೂ ಇಲ್ವ?” ಎಂದು ತಮಾಷೆ ಮಾಡಿದಳು. ಗೌರಿ “ಒಂದೇ ಬಿಸ್ಕತ್ ಐತೆ. ನಂಗರ್ಧ ನಿಂಗರ್ಧ” ಎಂದು ಮುರಿದುಕೊಟ್ಟಳು. ಶಬರಿ “ನಾನ್ ಮಾತ್ರ ಅರ್ಧ ಉಂಬಾಕಿಕ್ಕಲ್ಲ. ಪೂರ್ತಿ ಇಕ್ತೀನಿ. ಬರ್ರಿ” ಎಂದು ಊಟಕ್ಕೆ ಕರೆದಳು.
* * *
ನವಾಬ್ ಒಡೆಯರ ಮನೆಯ ಹತ್ತಿರ ಹತ್ತಾರು ಜನರೊಂದಿಗೆ ಬಂದ. ಈತನು ಬಂದಾಗಲೇ ಏನೋ ಕಾದಿದೆಯೆಂದು ನರಸಿಂಹರಾಯಪ್ಪನಿಗೆ ಅನ್ನಿಸಿತು. ಆಳೊಬ್ಬನನ್ನು ಕರೆದು ರಾಮಾಜೋಯಿಸರ ಬಳಿಗೆ ಕಳಿಸಿದ. ಜೋಯಿಸರು ಬರುವವರೆಗೆ ತಾನೇ ಮಾತಾಡುತ್ತ ಕೂತ.
“ಏನಯ್ಯ ನವಾಬ ಇಲ್ಲೀಗಂಟ ಬಂದಿದ್ದಿ?”
“ನಮ್ಮ ಜನಗಳ ಹಕ್ಕಿನ್ ಬಗ್ಗೆ ಮಾತಾಡಕ್ ಬಂದಿದ್ದೀನಿ.”
“ಏನಯ್ಯ ಅಂಗಂದ್ರೆ? ಅವ್ರ್ ಕೇಳ್ತವ್ರೆ ಅಂಬ್ತ ನನ್ ಮನೇನೇ ಬರ್‍ಕೊಡಕಾಯ್ತದ?”
“ನಿಮ್ ಮನೆ ಯಾರ್ ಕೇಳ್ತಿದಾರೆ? ನಮಿಗ್ ಬೇಕಾಗಿರೋದು ಭೂಮಿ; ನಮ್ ತೋಪು.”
“ನನ್ ತೋಪ್ನ ನಿಮ್ ತೋಪು ಅಂದ್ರೆ ಕೂಟ್‍ಬಿಡಾಕಾಯ್ತದ? ಇನ್ ಆ ಬಯಲು ಐತಲ್ಲ; ಅದೆಲ್ಲ ಸರ್‍ಕಾರುದ್ದು. ನನ್ತಾವೇನ್ ಕಿಸೀತಿಯ?”
“ಯಾವ್ದು ನಿಮ್ದು ಅಂತ ಹೇಳ್ತೀರೋ ಅದು ನಿಮ್ದಲ್ಲ. ಯವ್ದು ಸರ್ಕಾರುದ್ದು ಅಂತಿರೋ ಅದು ಜನಗಳದ್ದು.”
ಅಷ್ಟರಲ್ಲಿ ಆಗಮಿಸಿದ ರಾಮಾಜೋಯಿಸರು “ಏನಾಯ್ತು? ಏನಂತೆ ಇವ್ರ್‌ದು? ಏನ್ ಬೇಕಂತೆ? ಎಂದು ಅತುರಾತುರವಾಗಿ ಕೇಳಿದರು. ಆಗ ನರಸಿಂಹರಾಯಪ್ಪ “ತಲೆಕಟ್ಟೋನೊಬ್ಬ ಇವ್ರ್ ತಲೆ ಎಲ್ಲಾ ಕೆಡ್ಸಿ ಕರ್‍ಕಂಡ್ ಬಂದವ್ನೆ. ನೀವೇ ಒಸಿ ಇಚಾರ್‍ಸಿ” ಎಂದ.
“ಏನಯ್ಯ, ಏನಯ್ಯ ನಿಂದು?” -ಜೋಯಿಸರು ನವಾಬನನ್ನು ಪ್ರಶ್ನಿಸಿದರು. ಅವರ ಪ್ರಶ್ನೆಯಲ್ಲಿ ಅಸಹನೆಯಿತ್ತು.
“ನಮ್ ಜನಗಳ ಹಕ್ಕಿನ ಬಗ್ಗೆ ಮಾತಾಡೋಕ್ ಬಂದಿದ್ದೀನಿ”-ನವಾಬನು ಮೊದಲಿನಂತಯೇ ಹೇಳಿದ.
“ನಿಮ್ ಜನ? ಏನ್ ಮಾತೂಂತ ಆಡ್ತೀಯ? ನಿನ್ ಜೊತೇಲಿರೋರ್ ಯಾರೂ ನಿಮ್ ಜನ ಅಲ್ಲ. ಇವ್ರೆಲ್ಲ ಏನ್ ಸಾಬರೇನಯ್ಯ?” ಎಂದು ಜೋಯಿಸ ಕೇಳಿದಾಗ ನವಾಬನಿಗೆ ಸಿಟ್ಟು ಬಂತು. ಆದರೂ ತಡೆದುಕೊಂಡು ಹೇಳಿದ- “ನಮ್ ಜನ ಅಂದ್ರೆ ನಮ್ ಜಾತಿ ಜನ, ನಮ್ ಧರ್ಮದ ಜನ ಅಂತ ಅಲ್ಲ. ಅದನ್ನೆಲ್ಲ ಮೀರಿದ ಜನ- ನಮ್ ಜನ. ಇವ್ರ್ ಮನಸ್ನಲ್ಲಿ ಅದು ಯಾವುದೇ ಭಾವನೆ ಇಲ್ಲ. ಸುಮ್ನೆ ನಮ್ಮನ್ ಒಡಯೋಕ್ ಪ್ರಯತ್ನ ಮಾಡ್‍ಬೇಡಿ.”
“ಯಾರಯ್ಯ ಒಡೆಯೋರು? ನಾನೋ ನೀನೋ? ಬಡಬಗ್ಗರ ಹತ್ರ ಬಂದು ಸಹಾಯ ಮಾಡೋ ನೆಪ ಮಾಡ್ಕೊಂಡು ಸಂಚು ಮಾಡ್ತಿದ್ದೀಯ. ದೇಶದ್ರೋಹ ಮಾಡ್ತಿದ್ದೀಯ”- ಜೋಯಿಸರು ನೇರ ಆರೋಪ ಮಾಡಿದರು.
“ಬಾಯಿಗ್ ಬಂದಂತೆ ಮಾತಾಡ್‍ಬೇಡಿ”-ನವಾಬ ರೇಗಿದ – “ನನ್ ಮನಸ್ನಲ್ಲಿ ಅಂತ ಯಾವ ಭಾವನೇನೂ ಇಲ್ಲ. ಈ ಜನಗಳ ಮನಸ್ನಲ್ಲೂ ಇಲ್ಲ. ಸುಮ್ ಸುಮ್ನೆ ವಿಷಬೀಜ ಬಿತ್‍ಬೇಡಿ. ಹಿಂದೆ ಮುಂದೆ ನೋಡ್ಕೊಂಡು ಮಾತಾಡಿ.”
“ಅದೆಲ್ಲ ನಿನ್ನಿಂದ ಕಲೀಬೇಕಾಗಿಲ್ಲ. ನಿನ್ ನಾಟಕ ಜಾಸ್ತಿ ದಿನ ನಡ್ಯೋದಿಲ್ಲ. ಅದೇನ್ ಹೇಳ್ಬೇಕೊ ಬೇಗ ಹೇಳು.”
ಜೋಯಿಸರು ಜೋರು ಮಾಡುತ್ತಿರುವಾಗ ನರಸಿಂಹರಾಯಪ್ಪ ಸುಮ್ಮನೆ ನೋಡುತ್ತಿದ್ದ. ಯಾವ ರೀತಿಯಿಂದಲಾದರೂ ಈ ಜನರನ್ನು ಹತ್ತಿಕ್ಕುವುದು ಅವನಿಗೆ ಬೇಕಾಗಿತ್ತು.
ನವಾಬ್ ಜನರೆಲ್ಲ ಸಹಿಮಾಡಿದ ಪತ್ರವನ್ನು ಕೊಡುತ್ತ ಹೇಳಿದ-
“ಈ ಪತ್ರಾನ ನಿಮ್ಗೆ ಎಂ.ಎಲ್.ಎ.ಗೆ, ಸರ್ಕಾರಕ್ಕೆ ಒಟ್ಟಿಗೇ ಕೊಡ್ತಾ ಇದ್ದೀವಿ. ಈ ಊರ್‍ನೋರಾಗೆ ನೀವೇ ಎಲ್ಲಾ ಫೈಸಲ್ ಮಾಡಿದ್ರೆ ಶಾಂತಿ ಇರುತ್ತೆ. ಇಲ್ದೆ ಇದ್ರೆ ಮುಂದೆ ಏನೇ ಆದ್ರೂ ಅದಕ್ಕೆ ನೀವೇ ಹೊಣೆ.”
ನರಸಿಂಹರಾಯಪ್ಪ ಸಿಡಿಮಿಡಿಗೊಂಡ.
“ಏನ್ ಸಾಮೇರ, ಈ ಸಾಬಣ್ಣ ಇಂಗೆಲ್ಲ ಮಾತಾಡ್ತಾನೆ.”
ತಕ್ಷಣವೇ ನವಾಬ್ “ಸಾಬಣ್ಣಗೀಬಣ್ಣ ಅಂತೆಲ್ಲ ಕರೀಬೇಡಿ. ನಾನು ಒಬ್ ಮನುಷ್ಯ ಅಷ್ಟೆ” ಎಂದು ಬಿರುಸಾಗಿ ಹೇಳಿದ.
“ಸದ್ಯ ಮನುಷ್ಯ ಅಂದಲ್ಲ ನಮ್ ಪುಣ್ಯ, ದೇವರು ಅಂತ ಹೇಳ್‍ಲಿಲ್ಲ. ನೋಡಯ್ಯ. ನಿನ್ ಪತ್ರ ನೀನ್ ಕೊಡು. ನಾವು ಏನ್ ಮಾಡ್ಬೇಕು ಅಂತ ಪರಿಶೀಲಿಸ್ತೇವೆ” ಎಂದು ಜೋಯಿಸರು ಸರ್ಕಾರಿ ಭಾಷಗೆ ತಿರುಗಿದರು.
ನವಾಬ ಕೊಟ್ಟ. “ಮತ್ತೊಂದು ಸಾರಿ ಹೇಳ್ತೀನಿ. ದಯವಿಟ್ಟು ಇಲ್ಲೇ ಫೈಸಲ್ ಮಾಡ್ಕೊಳ್ಳಿ. ನೀವು ಈ ಜನಗಳ ಪರವಾಗಿ ಸರ್ಕಾರಕ್ಕೆ ತಿಳ್ಸಿ. ತೋಪು, ಬಯಲು ಬಿಟ್ಕೊಡಿ” ಎಂದು ವಾದಿಸಿದ.
“ಆಯ್ತು ಆಯ್ತು. ನೀನ್ ಹೋಗ್‍ಬಹುದು” ಎಂದು ಹೇಳಿದ ಜೋಯಿಸರು ನವಾಬನ ಜೊತೆಗಿದ್ದ ಜನರನ್ನು ಕುರಿತು “ಈ ಪತ್ರದಲ್ ಇರೋದೆಲ್ಲ ನಿಮಿಗ್ ಒಪ್ಗೆ ಇದೆಯೇನ್ರೋ” ಎಂದು ಕೇಳಿದ.
“ಒಪ್ಗೆ ಇಲ್ದಿದ್ರೆ ನಾವ್ಯಾಕ್ ನಮ್ ಯೆಸ್ರು ಬರೀತಿದ್ವಿ ನೋಡ್ರಿ ಅದ್ರಾಗೆ ನಮ್ ಯೆಸ್ರೆಲ್ಲ ನಾವೇ ಬರ್‍ದಿದ್ದೀವಿ” ಎಂದ ಸಣ್ಣೀರ. ಉಳಿದ ಜನ “ಅವ್ದು ಸಾಮೇರ” ಎಂದದ್ದಲ್ಲದೆ “ಏನೋ ನಮ್ ಕಡೀಕ್ ಒಸಿಕಣ್ ಬಿಡ್ರಿ; ಸುಮ್ಕೆ ಅಟ ಮಾಡ್‍ಬ್ಯಾಡ್ರಿ ಬುದ್ದಿ” ಎಂದೂ ಹೇಳಿದರು- ಒಂದಿಬ್ಬರು.
“ಬಿಡ್ತೀವಿ ಬಿಡ್ತೀವಿ ಸರ್‍ಯಾಗ್ ಕಣ್ ಬಿಡ್ತೀವಿ. ಈಗ ಜಾಗ ಬಿಡ್ರಿ” ಎಂದರು ಜೋಯಿಸರು.
ನವಾಬ್ ಜನರೊಂದಿಗೆ ಹೊರಟ.
ಜೋಯಿಸರ ಮಾತಿನಿಂದ ನವಾಬನಿಗೆ ಬೇಸರವಾಗಿತ್ತು. ಧರ್ಮದ ವಿಷಯ ತೆಗದು ವಿನಾಕಾರಣ ತನ್ನನ್ನು ಜನರಿಂದ ದೂರ ಮಾಡುವ ಅವರ ಪ್ರಯತ್ನ ಹೇಸಿಗೆಯೆನಿಸಿತು. ಇಲ್ಲೇ ಈ ನೆಲದಲ್ಲೇ ಹುಟ್ಟಿ ಬೆಳದವನನ್ನು ಪರಕೀಯ ಮಾಡುವ ಪ್ರಯತ್ನ. ಧರ್ಮದ ಹೆಸರಲ್ಲಿ ಅಧರ್ಮದ ಕೆಲಸ. ಹಿಂದೂವಾಗಲಿ, ಮುಸ್ಲಿಮನಾಗಲಿ, ಕ್ರೈಸ್ತನಾಗಲಿ ಧರ್ಮವನ್ನು ಅಧರ್ಮದ ಕೆಲಸಗಳಿಗೆ ಬಳಸಿಕೊಳ್ಳುವುದು ಆತ್ಮವಂಚನೆ, ಜನವಂಚನೆ. ತಾನು ಎಂದೂ ಧರ್ಮಪ್ರಚಾರ ಮಾಡಲಿಲ್ಲ. ಹುಟ್ಟೇ ತನಗೆ ಪರಕೀಯತೆಯ ಪಟ್ಟ ಕೂಡಬೇಕೆ? ಹುಟ್ಟಿನ ಕಾರಣದಿಂದ ಕೋಟ್ಯಾಂತರ ಜನಕ್ಕೆ ಅಸ್ಪುರ್‍ಶ್ಯತೆಯ ವಿಷಗಾಳಿ ಉಣಿಸಿದ ವ್ಯವಸ್ಥೆ; ಪರಕೀಯಗೊಳಿಸಿದ ವ್ಯವಸ್ಥೆ, ಅದೇ ಹುಟ್ಟಿನ ಕಾರಣಕ್ಕೆ ಅನ್ಯಧರ್ಮೀಯನೆಂದು ತನ್ನನ್ನು ಅನಾಥಗೊಳಿಸುವ ಹುನ್ನಾರ. ಕಿಡಿಗೇಡಿಗಳು ಎಲ್ಲಾ ಕಡೆ ಇರುತ್ತಾರೆ. ಹಾಗೆಂದು ಯಾವುದೇ ಒಂದು ಜನಾಂಗ, ಒಂದು ಧರ್ಮವನ್ನು ಇಡಿಯಾಗಿ ದ್ವೇಷಿಸುವುದೆ? ಎಲ್ಲ ಜನರೂ ನರಸಿಂಹರಾಯಪ್ಪನಂತಲ್ಲ. ಎಲ್ಲ ಜೋಯಿಸರೂ ಈ ಊರ ಜೋಯಿಸರಂತಲ್ಲ ಎಂಬುದೇ ಈ ದೇಶದ ಪುಣ್ಯ. ಪರಕೀಯತೆಯ ಪಾಪಕ್ಕೆ ಸಾಂತ್ವನ ನೀಡುವ ಪುಣ್ಯ!
ಜನರ ಜೊತೆಯಲ್ಲೇ ಒಳಗೊಂದು ಒಂಟಿತನ;
ಕಡೆಗೂ ಕಾಪಾಡುವುದು ಎದೆಯಾಳದ ಗೆಳೆತನ.
ನವಾಬ್ ಅಂತರ್ಮುಖಿಯಾಗಿಬಿಟ್ಟಿದ್ದ. ಸೂರ್ಯನಿದ್ದರೆ ಆತನೊಂದಿಗೆ ಹಂಚಿಕೂಳ್ಳಬಹುದಿತ್ತು. ಮುಸ್ಲಿಮರಿಗೆ ಬಿನ್‍ಲಾಡೆನ್ ಬೇರೆ, ಪೈಗಂಬರ್ ಬೇರೆ ಎಂದು ಪರಸ್ಪರ ಚರ್ಚಿಸಬಹುದಿತ್ತು. ಹಿಂದೂಗಳಿಗೆ ಗಾಂಧಿ ಬೇರೆ, ಗೋಡ್ಸೆ ಬೇರೆ ಎಂದು ವಿಚಾರ ವಿನಿಯಮಯ ಮಾಡಿಕೊಳ್ಳಬಹುದಿತ್ತು. ಗಾಂಧಿಯನ್ನು ಕೊಂದದ್ದು ಸರಿಯೆಂದು ಬಿನ್‍ಲಾಡನ್ ಮಾಡಿದ್ದೆಲ್ಲ ಸೂಕ್ತವೆಂದೂ ಅಮರಿಕದ ಯುದ್ಧ ಪಿಪಾಸುತನ ಒಳಿತೆಂದೂ ವಾದಿಸುವವರು ಯಾವ ಧರ್ಮದವರಾಗಲು ಸಾಧ್ಯ? ಈ ಎಲ್ಲಾ ವಾದ-ಪ್ರತಿವಾದಗಳ ಮಧ್ಯೆ ಮನುಷ್ಯನೇ ಪರಿಕೀಯ. ಮನಸ್ಸೊಂದು ಯಾತನಾ ಶಿಬಿರ…. ‘ಸೂರ್ಯ, ನೀನಿದ್ದರೆ ಎಷ್ಟೆಲ್ಲ ಮಾತಾಡಬಹುದಿತ್ತು. ಇದು ಬುದ್ಧಿಯ ಮಾತಲ್ಲ; ಭಾವದ ಮಾತು. ನನ್ನ-ನಿನ್ನ ಬೌದ್ಧಿಕ ಚರ್ಚೆಗೂ ಒಂದು ಭಾವದ ನೆಲೆ ಇರ್‍ತಾ ಇತ್ತು ಅಲ್ವಾ ಸೂರ್ಯ… ಯಾರ ಜೊತೆ ಮಾತಾಡಲಿ ನಾನು?…’
ನವಾಬನ ಒಳಗೊಂದು ಗರಗಸ; ಲಾವಾರಸ;
ಉದ್ವಿಗ್ನತೆಯಲ್ಲಿ ಉರಿಯುವ ಮೌನದ ನಡಿಗೆ.
ಎಷ್ಟು ಉರಿದರೂ ಬೂದಿಯಾಗದ ಭಾವ.
ಒಳ-ಹೊರಗಿನ ಒತ್ತಡದಲ್ಲಿ ಒಂಟ ಜೀವ.
ಮಾತಿಲ್ಲದೆ ಎಷ್ಟು ದೂರ ಹೋಗಲು ಸಾಧ್ಯ? ಸಣ್ಣೀರ ಖಿನ್ನನಾಗಿ ಕೇಳಿದ- “ನಿನ್ನ, ಬ್ಯಾರೇನು ಅಂಬ್ತ ಆ ಜೋಯಿಸ್ರು ಅಂದ್ರಲ್ಲ. ಅದಕ್ ಬ್ಯಾಸ್ರಾನ ನವಾಬಣ್ಣ?”
“ಛೇ! ಛೇ! ಇಲ್ಲ…. ಅಂಥಾದ್ದೇನೂ ಇಲ್ಲ.”
“ಮತ್ತೆ ಯಾಕಿಂಗ್ ಇದ್ದೀಯ? ಒಂದ್ ಮಾತೂ ಆಡ್ತಾನೇ ಇಲ್ಲ.”
“ನಿಜ; ಅವ್ರ್ ಹಾಗಂದಾಗ ಏನೇನೊ ನನಪಿಗ್ ಬಂತು. ಏನಾದ್ರೂ ಹೇಳ್ಕೊಳ್ಳೋಣೆ ಅಂದ್ರೆ ಸೂರ್ಯಾನೂ ಇಲ್ಲ. ಬೇರೆ ಗೆಳಯರೂ ಇಲ್ಲ.”
“ಯಾಕೆ? ನಾವಿಲ್ವ? ಎಂಥ ಮಾತಾಡ್ತೀಯ ನವಾಬಣ್ಣ? ನಮನ್ನೆಲ್ಲ ಏನಂದ್ಕಂಡೆ?”
ನವಾಬ ತಬಿಬ್ಬಾದ.
ಹಾದು; ಇವರೆಲ್ಲ ಇದ್ದಾರೆ. ತಾನೇಕೆ ಹಾಗೆ ಯೋಚಿಸಿದೆ? ಸೂರ್ಯನೆ ಇರಬೇಕೆಂದು ಯಾಕೆ ಬಯಸಿದೆ? ಇವರಿಗೆ ತನ್ನ ತಾತ್ವಿಕಯಾತನೆ ಅರ್ಥವಾಗುವುದಿಲ್ಲವೆಂದೆ? ಯಾತನೆಗೆ ತಾತ್ವಿಕ ಭಾಷೆ ಬೇಕೆ? ಸಣ್ಣೀರ ಮತ್ತೆ ಕೇಳಿದ- “ಯಾಕಣ್ಣ ಸುಮ್ಕಾದೆ? ನಾವೆಂದಾನ ನಿನ್ ಬ್ಯಾರೇನೂ ಅಂಬ್ತ ತಿಳ್ಕಂಡಿದ್ವ? ಅಂಗ್ ತಿಳ್ಕಂಡಿದ್ರೆ ಗೌರೀಗೂ ನಿಂಗೂ ಮದ್ವೆ ಆಯ್ತಿತ್ತ? ಆ ಒಡೆಯ, ಜೋಯಿಸ ಎಲ್ರನ್ನೂ ಬಿಟ್ಟು ನಿನ್ ಜತ್ಯಾಗ್ ನಾವ್ ನಿಂತ್ಕಂಡಿಲ್ವ?”
ನವಾಬ್ ಭಾವುಕನಾದ.
“ತಪ್ಪಾಯ್ತು. ನಾನ್ ನಿಜವಾಗೂ ತಪ್ ಮಾಡ್ದೆ. ನನ್ ಸಂಕಟಾನ ನಿಮ್ ಹತ್ರಾನೇ ಹಂಚ್ಕೋಬೇಕಾಗಿತ್ತು” ಎಂದು ಗದ್ಗದಿತನಾಗಿ ಹೇಳಿದ.
“ಈಗಾನ ಯೇಳ್ಕ ನಿನ್ ಸಂಕಟ; ಮನ್ಸು ಅಗುರಾಗ್ತೈತೆ ನವಾಬಣ್ಣ.”
“ನವಾಬ್ ನಸುನಗುತ್ತ ಹೇಳಿದ- “ಈಗ್ ನಿಮ್ಗೆಲ್ಲ ಹೇಳೊ ಅಗತ್ಯಾನೇ ಇಲ್ಲ. ನಾನ್ ಹೇಳ್ದೆ ಇದ್ರು ಎಲ್ಲ ನಿಮ್ ಅನುಭವಕ್ ಬಂದಿದೆ. ಇದಕ್ಕಿಂತ ದೊಡ್ಡ ವಿಷ್ಯ ಯಾವ್ದಿದೆ? ನಿಮ್ಮ ಮನಸ್ಗಿಂತ ದೊಡ್ಡದು ಯಾವ್ದಿದೆ?”
“ಅದೇನೋಪ್ಪ. ನಮ್ಗೆ ಅಂಬ್ತ ಈಟೆಲ್ಲ ಪಡಿಪಾಟಲು ಬೀಳ್ತಿದ್ದೀಯ ನೀನು. ನಿನ್ನನ್ನ ನಾವ್ ಒಂಟಿ ಮಾಡೇವ? ಎಂದಾನ ಬಿಟ್ ಕೂಟ್ಟೇವ?” ಸಣ್ಣೀರ ಎಲ್ಲರ ಮನಸ್ಸಿಗೆ ಮಾತಾಗಿದ್ದ. ನವಾಬ್ ಆತನ ಕೈ ಹಿಡಿದು ಬಿಗಿಯಾಗಿ ಒತ್ತಿದ. ಅದು ಅವನ ಮನಸ್ಸಾಗಿತ್ತು.
ಕ್ಷಣಕಾಲ ಮೌನ.
ನವಾಬನೇ ಮಾತು ಅರಂಭಿಸಿದ; ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಗಮನ ಸೆಳೆದ. ಧೈರ್ಯ ಕಳೆದುಕೊಳ್ಳೋದು ಬೇಡ. ಎಲ್ಲಾ ಕೆಲಸಗಳಿಗೂ ಇಂತಹ ಅಡೆತಡೆಗಳು ಇರುತ್ತವೆ ಎಂಬ ಬಗ್ಗೆ ನಮ್ಮ ಸ್ವಾತಂತ್ರ್ಯ ಹೋರಾಟ, ಅಸೃಶ್ಯತಾ ವಿರೋಧಿ ಹೋರಾಟ, ರಷ್ಯಾ ಚೈನಾ ಮುಂತಾದ ಕಡೆ ನಡೆದ ಹೋರಾಟ- ಇವೆಲ್ಲ ಉದಾಹರಣೆ ಕೂಡ್ತಾ ಹೋದ. ಮಧೆ ಮಧ್ಯೆ “ಅರ್ಥ ಆಯ್ತ?” ಎಂದು ಕೇಳುತ್ತಿದ್ದ. “ಒಟ್ನಾಗೆ ಮನಸ್ ಮಾಡಿರೆ ಏನ್ ಬೇಕಾರೂ ಆಯ್ತದೆ. ಆಗಾವರ್‍ಗೂ ಕಾಯ್‍ಬೇಕಾಯ್ತದೆ ಅಂಬ್ತ ಗೊತ್ತಾತು” ಅಂದರು ಅವರು. “ಸುಮ್ಮ ಕಾಯ್ತ ಇದ್ರೆ ಆಗೋದಿಲ್ಲ. ಕೆಲ್ಸ ಮಾಡ್ತಾನೆ ಇರ್‍ಬೇಕು; ಕಾಯ್ಬೇಕು” ಎಂದು ನವಾಬ್ ಸ್ಪಷ್ಟಪಡಿಸಿದ.
“ಅದ್ಸರಿ, ನವಾಬಣ್ಣ, ಈಗ ಮುಂದೇನ್ ಮಾಡ್ಬೇಕು; ಅದನ್ನೇಳಣ್ಣ” ಎಂದು ಸಣ್ಣೀರ ನೇರ ವಿಷಯಕ್ಕೆ ಬಂದ.
“ಆ ವಿಷ್ಯಕ್ ಬರೋಕೇಂತ್ಲೆ ನಾನ್ ಇಷ್ಟೆಲ್ಲ ಹೇಳಿದ್ದು. ಯಾರ್‍ಯಾರು ಎಷ್ಟು ಕಷ್ಟ ಬಿದ್ದಿದಾರೆ ಅಂತ ಗೊತ್ತಾಗ್ಲಿ ಅಂತ ಹಿಂದಿನ ವಿಷ್ಯ ಎಲ್ಲಾ ಹೇಳ್ದೆ. ಈಗ ನೋಡಿ, ಇವ್ರಂತೂ ಏನೂ ಮಾಡೊಲ್ಲ. ಇದನ್ನ ನಾವು ರಾಜ್ಯಮಟ್ಟಕ್ಕೇ ತಗೊಂಡ್ ಹೋಗ್ಬೇಕು. ನಮ್ ಗೆಳೆಯರೂ ಅದಕ್ಕಾಗಿ ಕಾಯ್ತಾ ಇದಾರೆ. ಅವ್ರ್ ಹತ್ರ ಹೋಗಿ ಇಲ್ಲಿನ ವಿಷ್ಯ ಎಲ್ಲಾ ಹೇಳ್ತೀನಿ. ಅದಕ್ ಮುಂಚೆ ಎಂ.ಎಲ್.ಎ. ಧರ್ಮಯ್ಯನ್ನ ಕಾಣ್ತೀನಿ. ಆಮೇಲೆ ನಮ್ಮ ಸ್ನೇಹಿತರ ಜೂತೆ ಸೇರಿ ಸರ್ಕಾರದ ಹತ್ರ ಈ ವಿಷ್ಯ ತಿಳ್ಸಿ ಎಲ್ಲಾ ಇಲ್ಲಿಗ್ ಬಂದು ನಿಮ್‍ಜೊತ ಸೇರ್‍ಕೊಂಡು ಹೋರಾಟ ಮಾಡ್ತೀವಿ. ರಾಜ್ಯಮಟ್ಟದಲ್ಲೂ ಹೋರಾಟ ಮಾಡ್ತೀವಿ. ಎಲ್ಲಾ ಕಡೆ ಜನ್ರಿಂದಲೂ ಇದಕ್ ಬೆಂಬಲತಗಳ್ಸ್ತೀವಿ.” ನವಾಬನ ವಿವರಣೆ ಕೇಳಿದ ಜೊತಗಾರನೊಬ್ಬ ಹುರುಪುಗೊಂಡು “ಎಲ್ಲಾರೂ ನಮ್ ಜತೇಗ್ ಬಂದ್ರೆ ಈ ಒಡೆಯ ಜೋಯಿಸ ಇಬ್ರೂ ಕುಂತ್ಕಂಡೇನೇ ಒಂದು ಎಲ್ಡು ಎಲ್ಲಾ ಮಾಡ್ಕಂಡ್ ಬಿಡ್ತಾರೆ” ಎಂದ.
ಸಣ್ಣೀರ “ಅವ್ರ್ ಬೇಧಿ ವೊಡ್ಕಂಡಂಗೇ ಬಿಡು” ಎಂದು ಉಲ್ಲಸಿತನಾದ.
ಹಟ್ಟಿಯಲ್ಲಿ ಎಲ್ಲವನ್ನೂ ಮಾತಾಡಿದ್ದಾದ ಮೇಲೆ ನವಾಬ್ ಮಾರನೇದಿನವೇ ಹೊರಡಲು ಸಿದ್ಧನಾದ. ಗೌರಿ ತಾನೂ ಬರುತ್ತೇನೆಂದಳು. “ಇಲ್ಲೇ ಇದ್‍ಬಿಡು” ಎಂದು ನವಾಬ ಹೇಳಿದರೂ ಕೇಳಲಿಲ್ಲ. “ಅಲ್ಲಿ ಏನೇನ್ ಆಗ್ತೈತೊ ನಾನು ಜತ್ಯಾಗಿದ್ರೆ ಒಳ್ಳೇದು” ಎಂದಳು ಗೌರಿ. “ನನ್ ಜತೆ ಬೇರೆ ಗೆಳೆಯರು ಇದ್ದೇ ಇರ್‍ತಾರೆ. ನಾನೊಬ್ನೆ ಎಲ್ಲೂ ಹೋಗಲ್ಲ” ಎಂದರೂ ಗೌರಿ ಕೇಳಲಿಲ್ಲ. “ನಾನೂ ಜತೇಗ್ ಬತ್ತೀನಿ” ಎಂದಳು. ಶಬರಿ “ಅವ್ಳ್ ಆಟಂದೇಳ್‍ವಾಗ ಯಾಕ್ ಬ್ಯಾಡ ಅಂಬ್ತೀಯ. ಅವ್ಳೂ ವೋರಾಟ ಮಾಡಾಳ್ ತಾನೆ” ಎಂದು ದನಿಗೂಡಿಸಿದಳು.
ನವಾಬ್ ಗೌರಿಯ ಜೊತೆ ಅತ್ತ ಹೊರಡುವ ವೇಳೆಗಾಗಲೇ ಎಂ.ಎಲ್.ಎ. ಧರ್ಮಯ್ಯನಿಗೆ ಒಡೆಯ ಮತ್ತು ಜೋಯಿಸರಿಂದ ಎಲ್ಲ ಸುದ್ದಿ ತಿಳಿದಿತ್ತು. ಧರ್ಮಯ್ಯ ಸೀದಾ ಊರಿಗೆ ಬಂದ. ಪರಿಸ್ಥಿತಿಯ ಬಗ್ಗೆ ಚರ್ಚಿಸಿದ. ಜನರ ಮೇಲೆ ಏನೂ ಜೋರು ಮಾಡಬೇಡಿ ಎಂದು ಸಲಹೆ ನೀಡಿದ. ಜೋಯಿಸರು ಅದನ್ನೇ ಸಮರ್ಥಿಸಿದರು. “ಅವರವರಲ್ಲೇ ಒಡಕು ಹುಟ್ಟೋ ಹಾಗೆ ಬೀಜ ಹಾಕಿದ್ದೀನಿ” ಎಂದು ಖುಷಿಯಾಗಿ ಹೇಳಿದರು. ಕೂಲಿ ಕೆಲಸಕ್ಕೆ ಈ ಜನರೇ ಬೇಡ ಎಂದರೆ ಅವರೆಲ್ಲ ಒಗ್ಗಟ್ಟಾಗುತ್ತಾರೆ. ಅದರ ಬದಲು ಅವರಲ್ಲೇ ಆಸೆ ಹುಟ್ಟಿಸಿ ಒಡಕು ತರೋಣ ಎಂಬ ತೀರ್ಮಾನಕ್ಕೂ ಬಂದರು. ಧರ್ಮಯ್ಯನಂತೂ ಆತುರದಲ್ಲಿದ್ದ. “ತಡಮಾಡಿದರೆ ನಮ್ಮ ಕೈ ಮೀರುತ್ತೆ. ಬರೋದುಡ್ಡಿಗೆ ಮೂರ್‍ನಾಮ ಆಗುತ್ತೆ. ಎಲ್ಲಾ ಬೇಗ ಮುಗುಸ್ಬೇಕು” ಎಂದು ಮುಂದಿನ ಕಾರ್ಯಾಚರಣೆ ಕುರಿತು ಸಮಾಲೋಚಿಸಿದ.
*****