ಕರೆಮೊಗೆಯ ಹಿಡಿದು ಹೊರಟೆ
ಕೈಗೊಂದಿಷ್ಟು ಗೌರಿಯಾಕಳ
ಹಾಲಿನ ತುಪ್ಪ ಸವರಿ
ಕರು ಮೆಲ್ಲುತ್ತಿತ್ತು ಹುಲ್ಲು
ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು
ವಾಸನೆ ಗೃಹಿಸಿ,
ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ
ತೊಳಕಲು ಅಕ್ಕಚ್ಚು ಮೆಚ್ಚಿಲ್ಲ.
ಅಚ್ಚು ಮೆಚ್ಚುಗಳೆಲ್ಲ ಹಡದಬ್ಬೆ ಮೊಲೆಹಾಲೇ
ತೆರೆದ ಕೆಚ್ಚಲು ಕಚ್ಚಿ ಘಾಸುಕೊಟ್ಟು
ಚೀಪುಲದು ಕಳಸದೊಳಗಣ ಅಮೃತ.
ನನಗೀಗ ಹುರುಪು
ಸೆರೆ ಬಿಟ್ಟಿತು ಕೆಚ್ಚಲು ಕರುವಿನ
ಬಾಯಿ ಘಾಸಿಗೆ,
ಎಳೆಯತೊಡಗಿದೆ ದಾಂಬು
ಕೈಹಾಕಿ ಹಿಂಡಿ ಹಾಲು ಕರೆಯಲು
ಗಿಂಡಿ ತುಂಬಬೇಕು.
ಗೌರಿಯೀಗ ತಾಯಿ-ಬೆರಕಿಯಾಗಲೇ ಬೇಕು
ಆದರೂ ಮಣ್ಣು ಮುಕ್ಕಿಸಲಾಗದು ಅದಕೆ
ನರಜಾತಿಯ ಒಡತಿ ನಾನು
ಕಪಟತೆಯ ಕಲಿಸಬೇಕಿಲ್ಲ. ಕಣಕಣದ ಗುಣ
ಕೈ ಸ್ಪರ್ಶಕ್ಕೆ ಸಿಕ್ಕಂತೆ ಆಳಕ್ಕೆ
ಎಳೆದುಕೊಳ್ಳುವ ಅವಳ ತಂತ್ರಕ್ಕೆ
ಪ್ರತಿತಂತ್ರ ಹೂಡುತ್ತ ಮತ್ತೆ ಬಿಚ್ಚಿದೆ ಕರು
ಕೆಚ್ಚಲಿಗೆ, ಸುರ್ರನೆ ಸೆರೆ ಬಿಡುವ ಗಂಗೆ
ಮತ್ತೆ ಮೇಲಕ್ಕೆ ಎಳೆದುಕೊಳ್ಳುವ ಭರದಲ್ಲಿ
ಸಮರಕ್ಕೆ ನಿಂತಂತೆ ಮತ್ತು ಕರು ಎಳೆದು ಕಟ್ಟುವ
ನಾನು, ತಡೆದು ತಡೆದು
ಸೆರೆಯುಬ್ಬಿ ಸೊರಸೊರನೆ ಸುರಿಯತೊಡಗಿತು ಹಾಲು
ಭರಭರನೇ ಗಿಂಡಿತುಂಬತೊಡಗಿದೆ ನಾನು.
ಗತ್ತಿನಿಂದ ದಕ್ಕಿಸಿಕೊಂಡು,
ನನ್ನದಲ್ಲದ ಎಲ್ಲವೂ ನನ್ನದೇ
ಅದಕ್ಕೆ.
*****