ಅಧ್ಯಾಯ ಎರಡು
‘ವಸಂತಸೇನಾ’ ಮೂಕಿ ಚಿತ್ರದ ಚಿತ್ರೀಕರಣ ಬಹುತೇಕ ಕರ್ನಾಟಕದಲ್ಲೇ ನಡೆದರೆ, ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ತಯಾರಾದದ್ದು ಕರ್ನಾಟಕದ ಹೊರಗೆ. ಅದರ ನಿರ್ಮಾಣದ ಹೊಣೆ ಹೊತ್ತವರೂ ಕನ್ನಡೇತರರೇ! ಕರ್ನಾಟಕದಿಂದ ಹೊರಗೆ, ಕನ್ನಡೇತರರಿಂದ ನಿರ್ಮಾಣಗೊಂಡ ‘ಸತಿ ಸುಲೋಚನಾ’ ಕನ್ನಡದ ಮಾತಿನ ಚಿತ್ರಗಳ ಯುಗಕ್ಕೆ ನಾಂದಿ ಹಾಡಿತು.
ಅದು ೧೯೩೪ನೇ ಇಸವಿ. ಭಾರತೀಯ ಚಲನಚಿತ್ರರಂಗದ ಮೊದಲ ಟಾಕಿ ಚಿತ್ರ ‘ಆಲಂ ಆರಾ’ ಬಿಡುಗಡೆಯಾಗಿ ಮೂರು ವರ್‍ಷಗಳಾಗಿದ್ದವು (೧೯೩೧). ಇಂದಿನ ವಿಶಾಲ ಕರ್ನಾಟಕ ಅಂದು ಹಲವಾರು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕನ್ನಡದ ನೆಲ ಎಂದು ಗುರುತಿಸುತ್ತಿದ್ದದ್ದು ಹಳೆಯ ಮೈಸೂರು ಪ್ರಾಂತ್ಯವನ್ನು. ಆದರೂ ಮೈಸೂರು ರಾಜ್ಯಕ್ಕೆ ‘ಬಹುಭಾಷಿಕರ ರಾಜ್ಯ’ ಎಂಬ ಬಿರುದೂ ಇತ್ತು. ರಾಜಕೀಯ, ಸಾಂಸ್ಕೃತಿಕ ಮತ್ತು ಔದ್ಯಮಿಕ ಕಾರಣಗಳಿಂದಾಗಿ ಭಾರತದ ಇತರೆ ಭಾಗಗಳಿಂದ ಅನೇಕ ಭಾಷೆಯ ಜನರು ಮೈಸೂರು ರಾಜ್ಯಕ್ಕೆ- ಮುಖ್ಯವಾಗಿ ಬೆಂಗಳೂರು, ಮೈಸೂರು, ದಾವಣಗೆರೆ, ಭದ್ರಾವತಿಯಂತಹ ನಗರಗಳಿಗೆ- ವಲಸೆ ಬರುತ್ತಿದ್ದರು. ವಲಸಿಗರಾದರೂ ಕನ್ನಡದ ನೆಲ ಮತ್ತು ಭಾಷೆಯ ಬಗ್ಗೆ ಅಭಿಮಾನ, ಗೌರವಭಾವ ಅವರಲ್ಲಿತ್ತು. ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಇದ್ದ ಅಪಾರ ಗೌರವವೇ ‘ಸತಿ ಸುಲೋಚನಾ’ ಚಿತ್ರ ನಿರ್ಮಾಣದಂಥ ಐತಿಹಾಸಿಕ ಸಂಭ್ರಮಕ್ಕೆ ಕಾರಣವಾಯಿತು.
ಚಮನ್‌ಲಾಲ್ ಡುಂಗಾಜಿ- ಉತ್ತರ ಭಾರತದಿಂದ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆಯಾದವರು. ಅವರಿಗೆ ಕನ್ನಡ ಚಿತ್ರವೊಂದನ್ನು ನಿರ್ಮಿಸುವ ಹಂಬಲ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡ ಅವರು ನಿರ್ದೇಶಕನ ಜವಾಬ್ದಾರಿಯನ್ನು ವೈ.ವಿ.ರಾವ್ ಅವರಿಗೆ ನೀಡಿದರು.
ವೈ.ವಿ.ರಾವ್ ಅವರು ಆಂಧ್ರಪ್ರದೇಶದ ಯರಗುಡಪಾಟದವರು. ಮುಂಬೈಯಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ್ದರು; ನಿರ್ದೇಶನವನ್ನೂ ಮಾಡಿದ್ದರು. ೧೯೩೦ರಲ್ಲಿ ಗುಬ್ಬಿ ವೀರಣ್ಣರವರಿಗಾಗಿ ‘ಹರಿಮಾಯ’ ಚಿತ್ರವನ್ನು ನಿರ್ದೇಶಿಸಿ ಜೊತೆಗೆ ಅದರಲ್ಲಿ ನಟಿಸಿದ್ದರು. ತಾರೆ ‘ಜೂಲಿ’ ಖ್ಯಾತಿಯ ಲಕ್ಷ್ಮಿಯ ತಂದೆಯೇ ವೈ.ವಿ.ರಾವ್.
ಚಲನಚಿತ್ರಗಳ ನಿರ್ಮಾಣ ಆರಂಭವಾದ ಕಾಲದಲ್ಲಿ ಪೌರಾಣಿಕ ಕತೆಗಳು, ಅದರಲ್ಲೂ ಈಗಾಗಲೇ ರಂಗದ ಮೇಲೆ ಯಶಸ್ಸು ಕಂಡ ಕೃತಿಗಳನ್ನು ಭಟ್ಟಿಯಿಳಿಸುವುದು ಭಾರತೀಯ ಚಲನಚಿತ್ರರಂಗಕ್ಕೆ ಸಿದ್ಧ, ಸುಲಭದ ದಾರಿಯಾಗಿತ್ತು. ಚಿತ್ರರಂಗದ ಅಂದಿನ ರೂಢಿಯಂತೆ ಬೆಳ್ಳಾವೆ ನರಹರಿಶಾಸ್ತ್ರಿಗಳ ಜನಪ್ರಿಯ ನಾಟಕ ‘ಸತಿ ಸುಲೋಚನಾ’ ಕೃತಿಯನ್ನು ಆಧರಿಸಿ ಚಿತ್ರ ನಿರ್ಮಿಸುವ ನಿರ್ಧಾರವಾಯಿತು. ಆರಂಭದಲ್ಲಿ ಕತೆಯ ನಿರ್ಧಾರದ ನಂತರ ಕಲಾವಿದರ ಆಯ್ಕೆ ನಡೆಯಿತು. ಪ್ರಧಾನ ಪಾತ್ರಗಳಿಗೆ ಅಭಿನಯ ಮತ್ತು ಗಾಯನ ಬಲ್ಲವರಿಗೆ ಪ್ರಾಶಸ್ತ್ಯ. ಸಹಜವಾಗಿಯೇ ಅಪ್ರತಿಮ ರಂಗಕಲಾವಿದ ಎಂ.ವಿ.ಸುಬ್ಬಯ್ಯನಾಯ್ಡು (ನಾಯಕ ಇಂದ್ರಜಿತ್), ಆರ್.ನಾಗೇಂದ್ರರಾವ್ (ರಾವಣ), ಕಲಾವಿದೆ ತ್ರಿಪುರಾಂಬ (ಸುಲೋಚನಾ), ಲಕ್ಷ್ಮೀಬಾಯಿ (ಮಂಡೋದರಿ) ಮತ್ತು ಸಿ.ಟಿ.ಶೇಷಾಚಲಂ (ನಾರದ) ಆಯ್ಕೆಯಾದರು. ವೈ.ವಿ.ರಾವ್ ಅವರು ನಿರ್ದೇಶನದ ಜೊತೆಗೆ ರಾಮನ ಪಾತ್ರ ವಹಿಸಲೂ ಅಣಿಯಾದರು. ಈ ಎಲ್ಲಾ ಕಲಾವಿದರು ಕರ್ನಾಟಕ ಮತ್ತು ಅದರ ಹೊರಗೂ ಜನಪ್ರಿಯರಾಗಿದ್ದರು. ಹಾಗಾಗಿ ನಿರ್ಮಾಪಕರು ಇಂದಿನ ಚಲನಚಿತ್ರರಂಗದ ಪರಿಭಾಷೆಯಲ್ಲಿ ಹೇಳುವುದಾದರೆ “ಮಿನಿಮಮ್ ಗ್ಯಾರಂಟಿ” ಇಟ್ಟುಕೊಂಡೇ ಚಿತ್ರ ನಿರ್ಮಾಣಕ್ಕೆ ಧುಮುಕಿದ್ದರು.
ಈ ಚಿತ್ರವನ್ನು ಕೊಲ್ಹಾಪುರದ ಮಹಾರಾಷ್ಟ್ರ ಸಿನಿಟೋನ್ ಸ್ಟುಡಿಯೋನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಯಿತು. ಕೊಲ್ಹಾಪುರದಲ್ಲಿ ಆಗ ಸಿನಿಮಾ ಸ್ಟುಡಿಯೋಗಳಿದ್ದವು. ಅದು ಪ್ರಮುಖ ಚಿತ್ರ ನಿರ್ಮಾಣ ಕೇಂದ್ರವೂ ಆಗಿತ್ತು. ಚಿತ್ರ ತಂಡ ೨೪ನೇ ಮಾರ್ಚ್ ೧೯೩೪ರಂದು ಕೊಲ್ಹಾಪುರಕ್ಕೆ ಮೈಸೂರಿನಿಂದ ಹೊರಟಿತು. ಕೊಲ್ಹಾಪುರದ ಸ್ಟುಡಿಯೋ ಸಿಬ್ಬಂದಿ ಕನ್ನಡಿಗರ ಬಗ್ಗೆ ಅಸಡ್ಡೆ ತಾಳಿತ್ತು. ಆದರೆ ಕಲಾವಿದರ ಅಭಿನಯ, ತಂತ್ರಜ್ಞರ ಕೌಶಲ್ಯಗಳು ಅವರ ಅಸಡ್ಡೆಯನ್ನು ಅಭಿಮಾನಭಾವವನ್ನಾಗಿ ಪರಿವರ್ತಿಸಿದವು. ಸಮರದ ದೃಶ್ಯ ಚಿತ್ರೀಕರಣದಲ್ಲಿ ನಿರ್ದೇಶಕರು ತೋರಿದ ಜಾಣ್ಮೆ ಕಂಡು ದಂಗು ಬಡಿದು ಹೋಗಿದ್ದರು. ಎರಡು ಸಾವಿರ ಸಹಕಲಾವಿದರು, ರಥಗಳು, ಕುದುರೆಗಳನ್ನು ಬಳಸಿ ದೃಶ್ಯ ವೈಭವವನ್ನೇ ನಿರ್ದೇಶಕರು ರೂಪಿಸಿದ್ದರು. ಬಹುತೇಕ ಕಲಾವಿದರು ಮೊದಲ ಬಾರಿಗೆ ಕ್ಯಾಮೆರಾ ಎದುರು ಅಭಿನಯಿಸುತ್ತಿದ್ದರು. ಮೂರು ತಿಂಗಳ ಸತತ ಚಿತ್ರೀಕರಣದ ನಂತರ ಚಿತ್ರ ಸಂಪೂರ್ಣ ತಯಾರಾಯಿತು. ಅದನ್ನು ಬೆಂಗಳೂರಿನ ಪ್ಯಾರಾಮೌಂಟ್ ಟಾಕೀಸಿನಲ್ಲಿ ಬಿಡುಗಡೆ ಮಾಡಲಾಯಿತು (ಸಿಟಿ ಮಾರ್ಕೆಟ್ ಎದುರಿಗಿದ್ದ ಆ ಚಿತ್ರಮಂದಿರ ನೆಲಸಮಗೊಂಡು ಅದರ ಸ್ಥಳದಲ್ಲಿ ಪರಿಮಳ, ಪ್ರದೀಪ್ ಚಿತ್ರಮಂದಿರಗಳು ಎದ್ದಿವೆ). ಕನ್ನಡದ ಮೊದಲ ಚಿತ್ರವನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ನಡೆದು, ಗಾಡಿಯಲ್ಲಿ ಕುಳಿತು ಬಂದರು. ಪ್ರೇಕ್ಷಕರಿಗೆ ನಿರಾಶೆಯೇನೂ ಆಗಲಿಲ್ಲ. ಬೆಂಗಳೂರಿನಲ್ಲಿ ಆರು ವಾರ ನಡೆದ ಚಿತ್ರ ನಿರ್ಮಾಪಕನಿಗೆ ನಾಲ್ಕೇ ವಾರದಲ್ಲಿ ಅಸಲನ್ನು ತಂದುಕೊಟ್ಟಿತು. ಅನಂತರ ರಾಜ್ಯಾದ್ಯಂತ (ಸಿಮೀತ ಮಾರುಕಟ್ಟೆ) ಬಿಡುಗಡೆ ಕಂಡಿತು.
೧೯೩೪ರಲ್ಲಿ ತಯಾರಾದ ಕನ್ನಡದ ಮೊಟ್ಟ ಮೊದಲನೆಯ ವಾಕ್ಚಿತ್ರ ‘ಸತಿ ಸುಲೋಚನಾ’ ಚಿತ್ರದ ತಂಡವು ಕೊಲ್ಲಾಪುರಕ್ಕೆ ಪ್ರಯಾಣ ಬೆಳಸುವ ಮುನ್ನ ತೆಗೆದ ಚಿತ್ರ. ಕುಳಿತಿರುವವರು (ಎರಡನೆ ಸಾಲು)-ಎಡದಿಂದ ಬಲಕ್ಕೆ: ಬೆಳ್ಳಾವೆ ನರಹರಿ ಶಾಸ್ತ್ರಿಗಳು, ಆರ್. ನಾಗೇಂದ್ರರಾವ್, ಸಿ.ಟಿ. ಸೀತಾರಾಂ ಶೆಟ್ಟಿ (ಸೌತ್ ಇಂಡಿಯಾ ಮೂವಿಟೋನ್ ಚಿತ್ರ ಸಂಸ್ಥೆಯ ಮೇಲ್ವಿಚಾರಕರು), ಚಿತ್ರದ ನಿರ್ಮಾಪಕ ಪೇಟ ಧರಿಸಿರುವವರು ಚಮನ್‌ಲಾಲ್ ಡೊಂಗಾಜಿ, ಚಿತ್ರದ ನಿರ್ದೇಶಕ ವೈ.ವಿ. ರಾವ್ (ಟೈ ಕಟ್ಟಿರುವವರು) ಎಂಟನೆಯವರು ಕೊನೆಯಲ್ಲಿರುವವರು ಎಂ.ವಿ. ಸುಬ್ಬಯ್ಯನಾಯ್ಡು. ಜಮಖಾನದ ಮೇಲೆ ಕುಳಿತಿರುವವರು: ನಾಲ್ಕನೆಯವರು ಮಗು ಪಕ್ಕದಲ್ಲಿ ಲಕ್ಷ್ಮೀಬಾಯಿ (ಚಿತ್ರದಲ್ಲಿ ಮಂಡೋದರಿ ಪಾತ್ರ ವಹಿಸಿದವರು), ತ್ರಿಪುರಾಂಬ (ಸುಲೋಚನೆ ಪಾತ್ರ ವಹಿಸಿದವರು) ರಾಜಂ (ವೈ.ವಿ. ರಾಯರ ಪತ್ನಿ) ಎಂಟನೆಯವರು ಕೊನೆಯಲ್ಲಿ ಕಮಲಾಬಾಯಿ (ಲಕ್ಷ್ಮೀಬಾಯಿ ತಂಗಿ)
‘ಸತಿ ಸುಲೋಚನಾ’ ಚಿತ್ರದ ಯಶಸ್ಸಿಗೆ ಅನೇಕ ಕಾರಣಗಳಿವೆ. ಮಾಧ್ಯಮವೇ ಹೊಸದು. ಮೊದಲ ಮಾತಿನ ಚಿತ್ರ. ಸಹಜವಾಗಿ ಪ್ರೇಕ್ಷಕರಲ್ಲಿ ಕುತೂಹಲ. ಅದೇ ಪ್ರಮುಖ ಆಕರ್‍ಷಣೆ. ಇದರ ಜೊತೆಗೆ ಪ್ರೇಕ್ಷಕರಿಗೆ ಇಷ್ಟವಾಗುವ ನಾಟಕದ ಕಥಾ ಹಂದರವಿತ್ತು. ಪ್ರೇಕ್ಷಕ ಇನ್ನೂ ನಾಟಕದ ಗುಂಗಿನಲ್ಲೇ ಇದ್ದ ಕಾಲ. ಇದಲ್ಲದೆ ಕತೆ ರಾಮಾಯಣದ ಭಾಗವಾದರೂ, ವಿಶಿಷ್ಟವಾದ ನಾಟಕೀಯ ಗುಣಗಳಿಂದ ಆಕರ್‍ಷಕವಾಗಿತ್ತು. ಇಲ್ಲಿ ರಾಮ ನಾಯಕನಲ್ಲ. ರಾವಣನ ಮಗನಾದ ಇಂದ್ರಜಿತ್‌ನ ಸಾಹಸವೇ ಪ್ರಧಾನ ಕಥಾವಸ್ತು. ಅಭಿನಯಕ್ಕೆ ಅಪಾರ ಅವಕಾಶವಿದ್ದ ಕತೆ. ಜೊತೆಗೆ ಬೆಳ್ಳಾವೆ ನರಹರಿಶಾಸ್ತ್ರಿಯವರ ವೀರರಸವುಕ್ಕಿಸುವ ಸಂಭಾಷಣೆ. ದೈವನಿಂದನೆಯ ಆಂಟಿ ಹೀರೋ (ಪ್ರತಿನಾಯಕ) ನಾಯಕನಾಗಿದ್ದ ಚಿತ್ರ. ರಾಮನನ್ನು ಕೊಲ್ಲಲು ‘ಶಕ್ತಿ ವಶೀಕರಣ ಯಾಗ’ವನ್ನು ತನ್ನ ಹೆಂಡತಿ ಸುಲೋಚನಾಳ ಸಲಹೆಯನ್ನು ಮೀರಿ ಇಂದ್ರಜಿತ್ ಕೈಗೊಳ್ಳುತ್ತಾನೆ. ಮಾಯಾ ಸೀತೆಯನ್ನು ಸೃಷ್ಟಿಸಿ ಯುದ್ಧಕ್ಕೆ ಹೋಗಿ ಅವಳನ್ನು ಕೊಂದ ಇಂದ್ರಜಿತ್ ಲಕ್ಷ್ಮಣನಿಂದ ಹತನಾಗುತ್ತಾನೆ. ಪತಿಯೊಡನೆ ಸಹಗಮನಕ್ಕೆ ಸಿದ್ಧಳಾದ ಸುಲೋಚನಾಳಿಗೆ ವಿಷ್ಣುರೂಪವನ್ನು ತೋರಿಸಿದ ರಾಮ ಅವಳಿಗೆ ‘ಸತಿ’ ಪಟ್ಟ ಅನುಗ್ರಹಿಸುತ್ತಾನೆ.
ಸತಿ ಸುಲೋಚನಾ- ಎಂ.ವಿ.ಸುಬ್ಬಯ್ಯನಾಯ್ಡು (ಇಂದ್ರಜಿತ್), ಆರ್.ನಾಗೇಂದ್ರರಾವ್ (ರಾವಣ), ಬೆಳ್ಳಾವೆ ನರಹರಿಶಾಸ್ತ್ರಿ (ಸಾಹಿತಿ), ವೈ.ವಿ.ರಾವ್ (ನಿರ್ದೇಶಕ)
ಕತೆ, ಸಂಭಾಷಣೆ ಮತ್ತು ಅಭಿನಯದ ಜೊತೆಗೆ ಯುದ್ಧದ ದೃಶ್ಯಗಳು, ಹಾಡುಗಳು, ಭಾವಪೂರಿತ ಸನ್ನಿವೇಶಗಳು ಸಹ ಚಿತ್ರದ ಯಶಸ್ಸಿಗೆ ಕಾಣಿಕೆ ಸಲ್ಲಿಸಿದವೆನ್ನಬಹುದು.
ಕನ್ನಡದ ಮೊದಲ ವಾಕ್ಚಿತ್ರ ‘ಆಂಟಿ ಹೀರೋ’ ನಾಯಕನಿಂದಲೇ ಆರಂಭವಾಯಿತು. ಸುಬ್ಬಯ್ಯ ನಾಯ್ಡು ಅವರೇ ಪ್ರಥಮ ‘ಪ್ರತಿ ನಾಯಕ’. ಬೆಳ್ಳಾವೆ ನರಹರಿ ಶಾಸ್ತ್ರಿಗಳೇ ಪ್ರಥಮ ಚಿತ್ರಸಾಹಿತಿ. ಹದಿನಾರು ಹಾಡುಗಳಿಗೆ ರಾಗ ಸಂಯೋಜಿಸಿ ಸಂಗೀತ ನೀಡಿದ ನಟ ಆರ್. ನಾಗೇಂದ್ರರಾಯರೇ ಮೊದಲ ಸಂಗೀತ ದಿಗ್ದರ್ಶಕರು. ‘ಭಲೇ ಭಲೇ ಪಾರ್ವತಿ ಬಲು ಚತುರೆ’ ಹಾಡನ್ನು ಹಾಡಿದ ಲಕ್ಷ್ಮೀಬಾಯಿಯವರೇ ಕನ್ನಡ ಚಿತ್ರರಂಗದ ಮೊದಲ ಗಾಯಕಿ.
ಹೀಗೆ ಕನ್ನಡ ವಾಕ್ಚಿತ್ರಗಳ ತಯಾರಿಕೆ ದೂರದ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಭ್ರಮದಿಂದ ಆರಂಭವಾಯಿತು.
***
ಕನ್ನಡದ ಮೊದಲ ನಾಯಕ
ಸತಿ ಸುಲೋಚನಾ ಚಿತ್ರದಲ್ಲಿ (ಪ್ರತಿ)ನಾಯಕ ಇಂದ್ರಜಿತುವಿನ ಪಾತ್ರ ವಹಿಸಿದ ದಿವಂಗತ ಎಂ.ವಿ. ಸುಬ್ಬಯ್ಯನಾಯ್ಡುರವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಅಭಿಜಾತ ಕಲಾವಿದರಲ್ಲೊಬ್ಬರು. ರಂಗಭೂಮಿಯಲ್ಲಿ ಅನೇಕ ಪ್ರಯೋಗ ನಡೆಸಿದವರು. ರಂಗಭೂಮಿಗೆ ಶಿಸ್ತು ಮತ್ತು ಗ್ಲಾಮರ್ ತಂದವರು. ರಂಗಭೂಮಿಯ ಸೆಳೆತದಿಂದಾಗಿ ಅವರಿಗೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಚಲನಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗಲಿಲ್ಲ. ಆದರೆ ಇರುವಷ್ಟು ದಿನವೂ ಚಿತ್ರರಂಗದಲ್ಲಿ ಅಭಿನಯದ ಶೈಲಿಯೊಂದನ್ನು ರೂಪಿಸಿದರು. ಅವರು ಪುರಾಣ ಪಾತ್ರಗಳ ಅಭಿನಯಕ್ಕೆ ನೀಡಿದ ಹೊಸ ಬಗೆಯ ಶೈಲಿಯು ಮುಂದೆ ಅನೇಕ ನಟರ ಮೇಲೆ ಪ್ರಭಾವ ಬೀರಿತೆಂದು ಹೇಳಲಾಗಿದೆ. ಕನ್ನಡ ಚಿತ್ರರಂಗದ ಮೊದಲ ನಾಯಕನ ಬಗ್ಗೆ ಒಂದೆರೆಡು ಮಾತು.
ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಜನಿಸಿದ (೧೮೯೬) ಸುಬ್ಬಯ್ಯನಾಯ್ಡು ಅವರ ಬದುಕು ಅನೇಕ ನಾಟಕೀಯ ತಿರುವುಗಳ ಕಥಾ ಹಂದರದ ಸಿನಿಮಾದಂತಿದೆ. ಬಾಲ್ಯದಲ್ಲೇ ಪಿತೃವಿಯೋಗ. ಬಳಿಕ ಹೆಗ್ಗಡದೇವನಕೋಟೆಯ ಸೋದರಮಾನವ ಮನೆಯಲ್ಲಿ ಎಮ್ಮೆ ಕಾಯುವ ಕೆಲಸ. ಅಲ್ಲಿನ ಸಂಕಷ್ಟ ತಾಳಲಾರದೆ ಮೈಸೂರಿಗೆ ಬಂದು ವರ್‍ಷದ ಸಂಬಳದ ಲೆಕ್ಕದಲ್ಲಿ ಹಲವಾರು ಕಡೆ ದುಡಿಮೆ. ಮಂಡಿಯಲ್ಲಿ ಕೂಲಿ, ಮರಕೊಯ್ಯುವ ಕೆಲಸ. ಇಷ್ಟರ ನಡುವೆ ಗರಡಿ ಮನೆ ಸೇರಿ ಅಂಗಸಾಧನೆ. ಅನೇಕ ಕುಸ್ತಿಗಳಲ್ಲಿ ಪಾರಿತೋಷಕ ಗಳಿಕೆ. ಮೈಸೂರಿನ ನಟ-ಸಂಗೀತದ ಮೇಷ್ಟ್ರು ಎಂ.ವಿ. ಮಾದಪ್ಪನವರ ಬಳಿ ಸಂಗೀತ ಮತ್ತು ಅಭಿನಯದಲ್ಲಿ ತರಬೇತಿ. ಅಲ್ಲಿಂದಾಚೆಗೆ ಕಲಾಸೇವೆಗೆ ಬದುಕು ಮುಡಿಪು. ಮೈಸೂರಿನ ಶಾಕುಂತಲಾ ಕಂಪನಿ, ತುಮಕೂರಿನ ಮನೋಹರ ನಾಟಕ ಮಂಡಳಿ, ಜನಮನೋಲ್ಲಾಸಿನಿ ಕಂಪನಿ, ಗುಬ್ಬಿ ಕಂಪನಿಗಳಲ್ಲಿ ನಟರಾಗಿ ಪ್ರವರ್ಧಮಾನಕ್ಕೆ ಬಂದರು. ೧೯೩೨ರಲ್ಲಿ ತಮ್ಮ ಸ್ವಂತ ಕಂಪನಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸ್ಥಾಪನೆ. ಪ್ರಯೋಗಶೀಲ ಆರ್. ನಾಗೇಂದ್ರರಾಯರು ನಾಯ್ಡು ಅವರನ್ನು ಕೂಡಿಕೊಂಡ ನಂತರ ಇಬ್ಬರ ಸಂಗಮದಿಂದ ಭೂಕೈಲಾಸ, ವಸಂತಸೇನಾ, ನಿರುಪಮಾ, ಕೀಚಕವಧೆ ಮೊದಲಾದ ನಾಟಕಗಳು ದಕ್ಷಿಣ ಭಾರತದಾದ್ಯಂತ ಜನಮನ್ನಣೆ ಪಡೆದವು.
ಎಂ ವಿ ಸುಬ್ಬಯ್ಯ ನಾಯ್ಡು
ಗುಬ್ಬಿ ವೀರಣ್ಣನವರು ತಯಾರಿಸಿದ ‘ಹಿಸ್ ಲವ್ ಅಫೇರ್’ ಮೂಕಿ ಚಿತ್ರದಲ್ಲಿ ಪಾತ್ರವಹಿಸಿದ್ದ ಸುಬ್ಬಯ್ಯನಾಯ್ಡುರವರು ಸತಿ ಸುಲೋಚನಾ ಚಿತ್ರಕ್ಕೆ ಆಯ್ಕೆಯಾದರು. ಜೊತೆಗೆ ಆರೆನ್ನಾರ್ ಸಂಗೀತ ನಿರ್ದೇಶಕ-ನಟರಾಗಿ ಜೊತೆಯಲ್ಲಿದ್ದರು. ಚಿತ್ರದಲ್ಲಿ ಮಂಡೋದರಿಯ ಪಾತ್ರ ವಹಿಸಿದ ಲಕ್ಷ್ಮೀಬಾಯಿಯವರನ್ನೇ ಮುಂದೆ ನಾಯ್ಡುರವರು ವರಿಸಿದರು. ಅದೇ ಚಿತ್ರದಲ್ಲಿ ನಟಿಸಿದ್ದ ಆಕೆಯ ಸೋದರಿ ಕಮಲಾಬಾಯಿಯವರನ್ನು ಆರೆನ್ನಾರ್ ವಿವಾಹವಾದರು. ನಾಯ್ಡು-ರಾಯರು ಅಣ್ಣ ತಮ್ಮಂದಿರಂತೆ ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯನ್ನು ಹದಿನೇಳು ವರ್‍ಷಕಾಲ ಮುನ್ನಡೆಸಿ ಕೊನೆಗೆ ಬೇರೆಯಾದರು.
ನಾಯ್ಡು-ರಾಯರ ಜೋಡಿ ಚಲನಚಿತ್ರ ರಂಗದಲ್ಲಿ ಉತ್ತಮ ಪ್ರಯೋಗಗಳನ್ನು ನಡೆಸಿತು. ತಮಿಳು ಚಿತ್ರನಿರ್ಮಾಪಕರ ಪರಿಚಯವಿದ್ದ ಆರೆನ್ನಾರ್ ಅವರೊಡನೆ ಹಾಗೂ ಗೆಳೆಯ ನಾಯ್ಡು ಅವರ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ೧೯೪೧ರಲ್ಲಿ ತಯಾರಾದ ವಸಂತಸೇನಾ ಚಿತ್ರದಲ್ಲಿ ನಾಯ್ಡುರವರು ಚಾರುದತ್ತನ ಪಾತ್ರ ವಹಿಸಿದರೆ ಆರೆನ್ನಾರ್ ‘ಶ’ಕಾರನ ಪಾತ್ರಕ್ಕೆ ಹೊಸದೊಂದು ತಿರುವು ನೀಡಿದರು.
ಬಳಿಕ ಎಂ.ವಿ.ಎಸ್-ಆರೆನ್ನಾರ್ ಜೋಡಿಯು ಎವಿಎಂ ಸಂಸ್ಥೆಯ ನೆರವಿನೊಡನೆ ತಯಾರಿಸಿದ ‘ಸತ್ಯ ಹರಿಶ್ಚಂದ್ರ’ ಹೊಸದೊಂದು ಇತಿಹಾಸವನ್ನೇ ಬರೆಯಿತು. (ಏಳನೇ ಅಧ್ಯಾಯ ನೋಡಿ) ಇಲ್ಲೂ ಸುಬ್ಬಯ್ಯನಾಯ್ಡು (ಹರಿಶ್ಚಂದ್ರ) ಮತ್ತು ರಾಯರ (ವಿಶ್ವಾಮಿತ್ರ) ಅಭಿನಯ ಜನರ ಮೇಲೆ ಮೋಡಿ ಹಾಕಿತ್ತು. ಇದು ರಾಯರು ಮೊದಲ ಅಧಿಕೃತ ನಿರ್ದೇಶನದ ಚಿತ್ರ. ಕೊನೆಯದಾಗಿ ಅವರಿಬ್ಬರೂ ಒಟ್ಟಾಗಿ ದುಡಿದ ಚಿತ್ರ ಮಹಾತ್ಮ ಕಬೀರ್ (೧೯೪೭). ರಾಯರ ನಿರ್ದೇಶನದಲ್ಲಿ ಕಬೀರ್ ಪಾತ್ರದಲ್ಲಿ ನಾಯ್ಡು ಅವರು ಅಭಿನಯಿಸಿದ್ದರು. ಎಂ.ವಿ.ಎಸ್-ಆರೆನ್ನಾರ್ ಜೋಡಿ ಬೇರೆಯಾದ ನಂತರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಲಾಂಛನದಡಿ ಎಂ.ಎಸ್. ಸುಬ್ಬಯ್ಯನಾಯ್ಡುರವರು ಎಚ್.ಎಸ್. ಕೃಷ್ಣಸ್ವಾಮಿ ಅವರ ಜೊತೆಯಲ್ಲಿ ನಿರ್ದೇಶಿಸಿದ ಭಕ್ತ ಪ್ರಹ್ಲಾದ (೧೯೫೮) ಚಿತ್ರವು ಅವರ ಅಭಿನಯದ ಕೊನೆಯ ಚಿತ್ರ. ಆ ಚಿತ್ರದಲ್ಲಿ ಅವರ ಮಗ ಲೋಕೇಶ್ ಪ್ರಹ್ಲಾದನ ಪಾತ್ರ ವಹಿಸಿದ್ದರು. ಅದು ನಿರ್ದೇಶಕ ವಿ. ಸೋಮಶೇಖರ್ ಅವರು ಚಿತ್ರರಂಗಕ್ಕೆ ಪ್ರವೇಶ ಪಡೆದ ಚಿತ್ರವೂ ಹೌದು.
ನಾಯ್ಡು ಅವರು ನಾಗೇಂದ್ರರಾಯರು ರಚಿಸಿದ್ದ ಭೂಕೈಲಾಸದ ರಾವಣನ ಪಾತ್ರಕ್ಕೆ ವಿಶಿಷ್ಟವಾದ ತಿರುವು ನೀಡಿದ್ದರು. ರಾವಣನ ಪಾತ್ರಕ್ಕೆ ಅಬ್ಬರದ ಅಭಿನಯವಿರಬೇಕೆಂಬುದು ಅಂದಿನ ಸ್ವೀಕೃತ ನೀತಿ. ಆದರೆ ನಾಯ್ಡು-ರಾಯರ ಜೋಡಿಯಲ್ಲಿ ರಾವಣ ಒಬ್ಬ ಮಾನವೀಯ ಗುಣದ ಚಕ್ರವರ್ತಿಯಾಗಿ, ತಾಯಿಗಾಗಿ ಆತ್ಮಲಿಂಗವನ್ನು ಹುಡುಕಿ ತರುವ ಭಾವುಕ ಮಗನಾಗಿ ಪರಿವರ್ತನೆಗೊಂಡಿದ್ದ. ಮುಂದೆ ತೆಲುಗಿನಲ್ಲಿ ಈ ಚಿತ್ರ ತಯಾರಾದಾಗ ಸುಬ್ಬಯ್ಯನಾಯ್ಡುರವರೇ ಪಾತ್ರ ವಹಿಸಿದ್ದರು. ರಾಜ್ ಅಭಿನಯದ ಭೂಕೈಲಾಸದ ರಾವಣನೂ, ನಾಯ್ಡು ಅವರ ಎರಕದಲ್ಲಿ ಮೂಡಿಬಂದವನೇ ಆಗಿದ್ದಾನೆ. ಆ ಚಿತ್ರದಲ್ಲಿ ರಾಜ್‌ರವರ ಅಭಿನಯ ಮನಮುಟ್ಟುತ್ತದೆ. ಆದರೂ ರಾಜ್‌ರವರು ಸುಬ್ಬಯ್ಯನಾಯ್ಡುರವರ ರಾವಣನ ಪಾತ್ರ ಅಮೋಘ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹಾಗೆ ನೋಡಿದರೆ ರಾಜ್‌ರವರಿಗೆ ರಂಗಭೂಮಿಯಲ್ಲಿ ದೊಡ್ಡ ಪಾತ್ರಗಳನ್ನು ನೀಡಿ ಅವರ ಪ್ರತಿಭೆಗೆ ಕನ್ನಡಿ ಹಿಡಿದವರು ಸುಬಯ್ಯನಾಯ್ಡು ಅವರು.
ಚಿತ್ರರಂಗದ ನಂಟನ್ನು ಬಿಟ್ಟರೂ ರಂಗಭೂಮಿಯಲ್ಲಿ ಸದಾ ಪ್ರಯೋಗಶೀಲರಾಗಿದ್ದ ನಾಯ್ಡುರವರು ಬೆಂಗಳೂರಿನಲ್ಲಿ ಅಪಾರ ಹಣ ಹೂಡಿ ‘ಶ್ರೀರಾಮ ಜನನ’ ನಾಟಕಕ್ಕಾಗಿ ‘ಚಲಿಸುವ ರಂಗ ವೇದಿಕೆ’ಯನ್ನು ನಿರ್ಮಿಸಿದ್ದರು. ಆದರೆ ಆರ್ಥಿಕವಾಗಿ ಮುಗ್ಗರಿಸಿದರು. ಮಂಡ್ಯದಲ್ಲಿ ಕಂಪನಿ ಮೊಕ್ಕಾಂ ಮಾಡಿದ್ದಾಗ ಹೃದಯಾಘಾತದಿಂದ ಜುಲೈ ೨೧, ೧೯೬೨ರಂದು ನಿಧನರಾದರು.
ಸೈಡ್ ರೀಲ್
ಭಕ್ತ ಪ್ರಹ್ಲಾದ ಚಿತ್ರಗಳಲ್ಲಿ ಪ್ರಹ್ಲಾದನ ಪಾತ್ರದಲ್ಲಿ ಲೋಕೇಶ್ (೧೯೪೧) ಹಾಗೂ ಪುನೀತ್‌ರಾಜ್ (೧೯೮೯); ಹಿರಣ್ಯ ಕಶಿಪು ಪಾತ್ರಗಳಲ್ಲಿ ಎಂವಿಎಸ್ ಮತ್ತು ರಾಜ್
> ‘ಸತಿ ಸುಲೋಚನಾ’ ಬಿಡುಗಡೆಯಾದ ಮೊದಲ ಚಿತ್ರವಾದರೂ ಅದು ಸೆಟ್ ಏರುವ ಮೊದಲೇ ಮುಂಬೈನ ಅಜಂತಾ ಸ್ಟುಡಿಯೋನಲ್ಲಿ ‘ಭಕ್ತ ಧ್ರುವ’ ಸೆಟ್ ಏರಿತ್ತು. ಚಿತ್ರೀಕರಣ ಮುಗಿದು, ಸೆನ್ಸಾರ್ ಆಗಿ ಬಿಡುಗಡೆಗೆ ಸಿದ್ಧವಾದರೂ ಬಿಡುಗಡೆಯಾಗಿರಲಿಲ್ಲ. ‘ಸತಿ ಸುಲೋಚನಾ’ ಚಿತ್ರದ ಬಿಡುಗಡೆಯ ನಂತರ ತೆರೆಗೆ ಬಂತು.
> ಗುಬ್ಬಿ ಕಂಪನಿ ಬಿಟ್ಟು ರಾಜ್‌ರವರು ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯನ್ನು ಸೇರಿಕೊಂಡರು. ಪ್ರಸಿದ್ಧ ಭಕ್ತ ಅಂಬರೀಶ್ ನಾಟಕದಲ್ಲಿ ರುಕ್ಮಾಂಗದನ ಪಾತ್ರದಿಂದ ಅವರು ಪ್ರಸಿದ್ಧಿಗೆ ಬಂದರು. ಗುಬ್ಬಿ ಕರ್ನಾಟಕ ಫಿಲ್ಮ್ಸ್ ಸಂಸ್ಥೆಯು ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನ ಪಾತ್ರವನ್ನು ನೀಡಿದ ಸಂದರ್ಭದಲ್ಲಿ ನಾಯ್ಡುರವರ ಕಂಪನಿ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಮಾಡಿತ್ತು. ಅಲ್ಲಿಂದ ನಾಯ್ಡುರವರ ಅನುಮತಿಯನ್ನು ಪಡೆದು ಹೊರಟ ರಾಜ್ ತ್ರಿವಿಕ್ರಮನಾಗಿ ಬೆಳೆದದ್ದು ಬೇರೆಯೇ ಕತೆ.
> ಎಂವಿಎಸ್ ಅವರ ಪ್ರಭಾವ ರಾಜ್‌ಕುಮಾರ್ ಅವರ ಮೇಲೆ ಗಾಢವಾಗಿತ್ತೆಂದು ಕಾಣುತ್ತದೆ. ಹಾಗಾಗಿ ನಾಯ್ಡು ಅವರು ಅಭಿನಯಿಸಿದ ಭೂ ಕೈಲಾಸ (ತೆಲುಗು), ಹರಿಶ್ಚಂದ್ರ, ಭಕ್ತ ಪ್ರಹ್ಲಾದ ಮತ್ತು ಮಹಾತ್ಮಾ ಕಬೀರ್‌ನ ಮುಂದಿನ ಅವತರಣಿಕೆಗಳಲ್ಲಿ ರಾಜ್‌ರವರು ಅದೇ ಪಾತ್ರಗಳನ್ನು ಅಭಿನಯಿಸಿದರು. ಭಕ್ತ ಪ್ರಹ್ಲಾದ ಚಿತ್ರದ ಮೊದಲ ಆವೃತ್ತಿಯಲ್ಲಿ ನಾಯ್ಡು ಅವರ ಮಗ ಲೋಕೇಶ್ ಪ್ರಹ್ಲಾದನ ಪಾತ್ರ ವಹಿಸಿದ್ದರೆ, ಮುಂದಿನ ಆವೃತ್ತಿಯಲ್ಲಿ ರಾಜ್‌ರವರ ಮಗ ಪುನೀತ್ ಆ ಪಾತ್ರವನ್ನು ನಿರ್ವಹಿಸಿದ್ದರು.
> ಸುಬ್ಬಯ್ಯ ನಾಯ್ಡು ಅವರು ಪಾತ್ರಗಳಿಗಾಗಿ ತಮ್ಮ ನಿಜಮೀಸೆಯನ್ನು ಎಂದೂ ತೆಗೆಯುತ್ತಿರಲಿಲ್ಲವಂತೆ. ಪಾತ್ರಗಳಿಗೆ ಅನುಗುಣವಾಗಿ ತಮ್ಮ ಮೀಸೆಯನ್ನು ಹೊಂದಿಸಿಕೊಂಡು ಮೇಕಪ್ ಹಾಕಿಕೊಳ್ಳುತ್ತಿದ್ದರು. ಹಾಗಾಗಿ ಅವರು ಅಭಿನಯಿಸಿದ ಇಂದ್ರಜಿತ್, ರಾವಣ, ಹರಿಶ್ಚಂದ್ರ, ಚಾರುದತ್ತ, ಕಬೀರ್ ಮತ್ತು ಹಿರಣ್ಯ ಕಶಿಪು ಪಾತ್ರಗಳಲ್ಲಿ ಮೀಸೆ ಪ್ರಧಾನವಾಗಿ ಕಾಣುತ್ತದೆ.
ಪತ್ನಿ ಲಕ್ಷ್ಮೀಬಾಯಿ ಅವರೊಡನೆ ಎಂ ವಿ ಸುಬ್ಬಯ್ಯ ನಾಯ್ಡು