ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ

ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ

ಪೆರಾಜ್ಹೆಟ್ಟಿ ಅವನ ಪಾಡಿಗೆ ಮಜವಾಗಿದ್ದ –

ಬಹಳ ಜತನದಿಂದ ಬೆಳೆಸಿಕೊಂಡಿರುವ ತನ್ನ ವಕ್ರವಾದ, ಉದ್ದ ಉಗುರುಗಳನ್ನೇ ಗಮನಿಸುತ್ತ, ಆತ ಅತ್ಯಂತ ಗಂಭೀರವಾಗಿ ಮಾತಾಡುವಾಗ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ. ನಂತರ ವಿನಾಕಾರಣ, ಇದ್ದಕ್ಕಿದ್ದಂತೆ ಬಾತುಕೋಳಿಯ ಹಾಗೆ ಕರ್ಕಶವಾಗಿ ಕೂಗುತ್ತ, ನಗಾಡುತ್ತ, ಅತ್ತಿತ್ತ, ಸುತ್ತುತ್ತಿದ್ದ. ಪೆರಾಜ್ಹೆಟ್ಟಿ, ಹೀಗೆ, ನಕ್ಕರೀತಿಯಲ್ಲೇ, ಅವನಿಗೆ ತಲೆ ಕೆಟ್ಟಿದೆಯೆಂದು ಊರಿನವರಿಗೆ ಆಗಲೇ ಖಾತರಿಯಾಗಿತ್ತು. ಕಣ್ಣಾಲಿಗಳು ನೀರಿನಿಂದ ತುಂಬಿ ಕೊಂಡಾಗೆಲ್ಲ, ಅವನ ಗೆಳೆಯರು, ‘ಯಾಕೋ ಮಾರಾಯಾ….. ಏನಾಯ್ತು?’ ಎಂದು ಕೇಳಿದರೆ, ‘ಹಾಗೇನೂ ಇಲ್ಲಪ್ಪ…. ನನಗೆ ವಿವರಿಸಲಿಕ್ಕೆ ಆಗ್ತಾ ಇಲ್ಲ.’ ಎಂದುಬಿಡುತ್ತಿದ್ದ.

ಪ್ರತಿಸಲ ಆತ ನಕ್ಕು, ನಂತರ, ಆ ನಗುವಿಗೆ ಸಮರ್ಪಕ ಕಾರಣ ಕೊಡಲು ನಿರಾಕರಿಸಿದಾಗೆಲ್ಲ ಜನರಿಗೆ ಕಸಿವಿಸಿಯಾಗುತ್ತಿತ್ತು. ಸುಮ್ಮನೆ ಮಳ್ಳರ ಹಾಗೆ ನಿಂತು ಅವನನ್ನೇ ನೋಡುತ್ತ ಸಿಟ್ಟಿಗೇಳುತ್ತಿದ್ದರು. ಇನ್ನು, ಕೆಲ ಸೂಕ್ಷ್ಮ ಮನಸ್ಸಿನವರಿಗಂತೂ ಪಿತ್ಥ ನೆತ್ತಿಗೇರಿ ಅವನನ್ನು ಹಿಡಿದು ನಾಲ್ಕು ಬಾರಿಸಬೇಕೆಂದೂ ಅನಿಸುತ್ತಿತ್ತು. ಆದರೆ, ಹಾಗೆ ಮಾಡಲಾರದ, ಈ ಸೂಕ್ಷ್ಮಮನಸ್ಸಿನವರು (ಇತ್ತಿಚೆಗಂತೂ ಇಂಥವರು ಬಹಳ ಮಂದಿ ಇದ್ದಾರೆ ಬಿಡಿ) ಅದೇ ಸಿಟ್ಟಿನಲ್ಲಿ ತಲೆಯಾಡಿಸುತ್ತ, “ಅವನೊಬ್ಬ ಹುಚ್ಚ” ಎಂದು ಹೇಳುತ್ತಿದ್ದರು.

ತನಗೆ ಉಕ್ಕಿ ಬಂದ ನಗುವಿಗೆ ಕಾರಣವೇನೆಂದು ಅವನಿಗೆ ಗೊತ್ತಿದ್ದರೆ ತಾನೆ! ಮಜಾ ಎಂದರೆ, ಅನೇಕ ಸಲ ಸ್ವತಃ ಪೆರಾಜ್ಹೆಟ್ಟಿಗೇ ಅದನ್ನು ವಿವರಿಸಲು ಸಾಧ್ಯವಾಗುತ್ತಿರಲಿಲ್ಲ.

ಅವನ ಕಲ್ಪನಾಶಕ್ತಿ ತುಂಬಾ ಚುರುಕಾಗಿತ್ತಲ್ಲದೆ, ಅದು ಭಯಂಕರ ವಿಚಿತ್ರವೂ ಆಗಿತ್ತು. ಜನರನ್ನು ನೋಡಿದಾಗಲೆಲ್ಲ ಅವನ ಕಲ್ಪನೆ ನಿಯಂತ್ರಣ ತಪ್ಪಿ ಮನಸ್ಸಲ್ಲಿ ಆಘಾತಕಾರಿ ಬಿಂಬಗಳನ್ನೂ, ವಿವರಿಸಲಸಾಧ್ಯವಾದಂಥ ಹಾಸ್ಯಾಸ್ಪದ ದೃಶ್ಯಗಳನ್ನೂ ಸೃಷ್ಟಿಸುತ್ತಿತು. ಇದ್ದಕ್ಕಿದ್ದಂತೆ ಇವೆಲ್ಲ ಅವನಿಗೆ ಯಾವುದೋ ನಿಗೂಢ ರಹಸ್ಯವನ್ನು ಬೇಧಿಸಿದ ಭ್ರಮೆ ಹುಟ್ಟಿ ಹಠಾತ್ತನೆ ನಗೆಯನ್ನುಕ್ಕಿಸುತ್ತಿದ್ದವು.

ಹೀಗೆ, ಚೂರೂ ಲೆಕ್ಕಿಸದ ಹಠಾತ್ತನೆ ಬಂದು, ಮಾಯವಾಗಿಬಿಡುವ ಇಂಥ ಚುರುಕು ಬಿಂಬಗಳ ಕುರಿತು ಪಾಪ ಪೆರಾಜ್ಹೆಟ್ಟಿ ಜನರಿಗೆ ವಿವರಿಸುವುದಾದರೂ ಹೇಗೆ?

ಪ್ರತಿಯೊಬ್ಬ ಮನುಷ್ಯನ ಮೂಲಸ್ವರಭಾವ ಮತ್ತು ಈ ಮೂಲಸ್ವರಭಾವದ ಕುರಿತು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಶಕ್ತಾನುಸಾರ ನಡೆಸುವ ನಿರಂತರ ವ್ಯಾಖ್ಯಾನಕ್ಕೂ ನಡುವೆ ಬಹಳ ಅಂತರವಿರುವುದೆಂದು ಪೆರಾಜ್ಹೆಟ್ಟಿ ತನ್ನದೇ ಸ್ವಂತ ಅನುಭವದಲ್ಲಿ ಸ್ಪಷ್ಟವಾಗಿ ಕಂಡು ಕೊಂಡಿದ್ದ. ಸಾಮಾಜಿಕ ಜರೂರು ಕಂಡುಬಂದಿರುವುದೋ ಅಥವಾ ಬೇರೆಯವರನ್ನು ಅನುಕರಿಸಬೇಕೆಂಬ ಆಸೆಯೋ ಅಂತೂ ಏನೋ ಒಂದು ಇದಕ್ಕೆ ಕಾರಣವಾಗಿರಬೇಕೆಂದು ಅವನಿಗೆ ಸ್ಪಷ್ಟವಿತ್ತು.

ಈ ಮೂಲಸ್ವಭಾವದ ಕುರಿತು ಆತ ವಿಶೇಷ ಅಭ್ಯಾಸ ನಡೆಸಿ, ಅದನ್ನು ‘ಮೃಗವಿರುವ ಗುಹೆ’ ಎಂದು ಕರೆಯುತ್ತಿದ್ದ. ಮನುಷ್ಯನ ಪ್ರಜ್ಞೆಯ ಪದರಗಳಲ್ಲಿ ಇಂಥ ಒಂದು ಆದಿಮ ಮೃಗ ಹೊಂಚುತ್ತಲೇ ಇರುವುದೆಂದೂ, ಪ್ರತಿಯೊಬ್ಬನೊಳಗೂ ಅದು ಇರುತ್ತದೆಂದೂ ನಂಬಿದ್ದ. ಮನುಷ್ಯನ ಇಂಥ ಪದರಗಳಲ್ಲಿ ಯಾವುದಾದರೊಂದನ್ನು ಮುಟ್ಟಿದರೆ, ಅಥವಾ ಕಚಗುಳಿ ಮಾಡಿದರೆ – ಅದು ಮುಗುಳ್ನಗುವುದೋ, ಕೈಚಾಚುವುದೋ, ಗುಡ್ ಈವ್ನಿಂಗ್- ಗುಡ್ ಡೇ ಅಂತನ್ನುವುದೋ, ಅಥವಾ ಐದು ಲೈರನ್ನೆ ಕೊಟ್ಟುಬಿಡುವುದೋ ಮಾಡುತ್ತದೆ ಎಂದು ನಂಬಿದ್ದ. ಆದರೆ ಕೆಲವೊಮ್ಮೆ! ಇಂಥ ಪದರಗಳನ್ನು ಕೆಣಕಿದಾಗ ಈ ಗುಹೆಗಳಿಂದ ಓರ್ವ ಕಳ್ಳನೋ, ಕೊಲೆಗಾರನೋ, ಮೋಸಗಾರನೋ ಬರುವ ಸಾಧ್ಯತೆಯೂ ಇತ್ತು. ನಮ್ಮ ನಾಗರಿಕತೆಯಲ್ಲಿ, ಶತಶತಮಾನಗಳಿಂದ ಬಹಳಷ್ಟು ಜನ ತಮ್ಮೊಳಗಿರುವ ಇಂಥ ಗುಹೆಯಲ್ಲಿ ಹಂದಿಯನ್ನೋ, ನರಿಯನ್ನೋ ಆಶ್ರಯನೀಡಿ ಪೋಷಿಸುತ್ತಿರುವುದಂತೂ ಸತ್ಯ.

ರೆಸ್ಟೊರೆಂಟುಗಳಲ್ಲಿ – ಉದಾಹರಣೆಗೆ ಹೇಳುವುದಾದರೆ, – ಪೆರಾಜ್ಹೆಟ್ಚಿ ಗಿರಾಕಿಗಳ ನಿಯಂತ್ರಿತ ಅಸಹನೆಯನ್ನು ಅಭ್ಯಸಿಸುತ್ತಿದ್ದ. ಹೊರಗಿನಿಂದ ಅವರೆಲ್ಲ ಸದ್ಗುಣ ಸಂಪನ್ನರು; ಆದರೆ ಒಳಗಿನಿಂದ ಧೂರ್ತರಾಗಿ ಕಾಣಿಸುತ್ತಿದ್ದರು. ತನ್ನ ಆಪ್ತರ, ಪರಿಚಯದವರ ಒಳಗಡೆ ಯಾವ ಜಾತಿಯ ಪ್ರಾಣಿಯಿದೆ ಎಂದು ಊಹಿಸುತ್ತ, ಓ…. ಅದೋ ಅವನೊಳಗಡೆ ಮುಳ್ಳು ಹಂದಿ ಇದೆ, ಇವನೊಳಗಡೆ, ಟರ್ಕಿಕೋಳಿ; ಈ ವ್ಯಕ್ತಿಯಲ್ಲಿ ಖಂಡಿತಾ ಇರುವೆ ತಿನ್ನುವ ಮೃಗವಿದೆ ಎಂದು ಕಲ್ಪಿಸಿಕೊಳ್ಳುತ್ತ ಆನಂದಿಸುತ್ತಿದ್ದ.

ನನಗೆ, ಪೆರಾಜ್ಹೆಟ್ಟಿ ಗಹಗಹಿಸುವುದರ ಹಿಂದೆ ಬಲವಾದ ಕಾರಣವೊಂದಿದೆ ಎಂದನಿಸಿದೆ ಮಾತ್ರವಲ್ಲ, ಸುಮ್ಮನೆ ಎಲ್ಲರಿಗೂ ಇದನ್ನು ಹೇಳಿಬಿಡುವಂಥದ್ದೂ ಅಲ್ಲ ಎಂದೂ ಅನಿಸಿದೆ. ಬದಲಿಗೆ, ಈ ಕಾರಣಗಳನ್ನು ಮೆಲ್ಲನೆ ಕಿವಿಯಲ್ಲುಸುರಬೇಕು. ಆಗ ಥಟ್ಟನೆ ಅದು ನಗುವಿನ ಅಲೆಯನ್ನೇ ಉಂಟುಮಾಡುವುದರ ಮಜಾ ನೋಡಬೇಕು. ಒಮ್ಮೆಯಂತೂ, ತನಗೆ ಹುಚ್ಚು ಹಿಡಿದಿಲ್ಲ ಎಂದು ಸಾಬೀತು ಮಾಡಲೆಂದೇ ಆತ ಗೆಳೆಯನೊಬ್ಬನಿಗೆ ಯಾವುದೋ ಕಾರಣವೊಂದನ್ನು ಹೇಳಿಯೇಬಿಟ್ಟಿದ್ದ.

ಇಂಥ ನಗುವಿಗೆಲ್ಲ ಕಾರಣ ಏನು ಅನ್ನುವುದನ್ನು ನಾನು ನಿಮಗೆ ಹೆಚ್ಚೆಂದರೆ ಕೆಲ ಸುಳುಹುಗಳನ್ನು ಕೊಡಬಲ್ಲೆ ಅಷ್ಟೆ. ನೀವು ಇಂಥ ಹಿಂಟುಗಳನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಯಾಕೆಂದರೆ, ಗಟ್ಟಿಯಾಗಿ ಪಕ್ಕನೆ ನಾನೇನಾದರೂ ಹೇಳಿದರೆ ಅದು ಅಸಾಧ್ಯ ಅಲ್ಲದೇ ಹೋದರೂ ಕೂಡ ಹಾಗೆ ತೋರೀತು.

ಪೆರಾಜ್ಹೆಟ್ಟಿ ಅಶ್ಲೀಲ ವ್ಯಕ್ತಿಯೇನಾಗಿರಲಿಲ್ಲ. ಬದಲಿಗೆ, ಮಾನವೀಯತೆಯ ಕುರಿತು ಅಂದರೆ ಪುರಾತನ ಗ್ರೀಕರಿಂದ ಹಿಡಿದು ಈವತ್ತಿನ ಮನುಷ್ಯನೊಳಗೆ ಹುದುಗಿರುವ ಮೃಗವನೂ, ಸೇರಿಸಿ ಏನೇನೆಲ್ಲ ಸಾಧಿಸಿರುವನೋ, ಆ ಎಲ್ಲದರ ಕುರಿತು ತನಗೆ ಅಪಾರ ಗೌರವವಿದೆ ಎಂದೂ ವಾದಿಸುತ್ತಿದ್ದ. ಇಷ್ಟೊಂದು ಸುಂದರವಾದ ಜಗತ್ತನ್ನು ಸೃಷ್ಟಿಸಿದ ಮನುಷ್ಯ ಯಾಕೆ ಇನ್ನೂ ನಿತ್ಯವೂ ಕೆಲ ತೀರಾ ನಿಖರವಾದ ಮತ್ತು ಅಸಹಜವಾದ ಪ್ರಾಕೃತಿಕ ಅಗತ್ಯತೆಗಳಿಗೆ ಶರಣಾಗಿಬಿಟ್ಟಿದ್ದಾನೆ? ಇದರಿಂದ ಏನೂ ಲಾಭವಿಲ್ಲವಲ್ಲ! ಎಂಬ ಸತ್ಯವನ್ನು ಅರಿತವನಾಗಿದ್ದ.

ಸ್ವಪ್ರತಿಷ್ಠೆಯಿಲ್ಲದ ಬಡವರ ಕುರಿತು ಪೆರಾಜ್ಹೆಟ್ಟಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಯಾವಾಗಲೂ ಭಾವಾವೇಶದಲ್ಲೇ ತೇಲಾಡುವ ಹೆಂಗಸರನ್ನೂ, ಆಡಂಬರ-ಅಹಂಕಾರದಲ್ಲೇ ಬೀಗುವ ಗಂಡಸರನ್ನೂ ನೋಡಿದಾಗೆಲ್ಲ ತತ್‍ಕ್ಷಣ, ಅವನಿಗರಿವಿಲ್ಲದೆ ಅವನ ಮನಸ್ಸಲ್ಲಿ ಈ ಜನರ ಖಾಸಗಿ ವಿವರಗಳು, ದಿನನಿತ್ಯದ ಪ್ರಾಕೃತಿಕ ಅಗತ್ಯತೆಗಳು ಬಿಂಬಗಳಾಗಿ ಮೂಡುತ್ತಿದ್ದವು. ಹಾಗೆ ಮೂಡಿದ್ದ, ತಕ್ಷಣ ಗಹಗಹಿಸಿ ನಗಲು ಶುರುಮಾಡಿಬಿಡುತ್ತಿದ್ದ.

ಪುರುಷನ ಉದಾತ್ತಗುಣವಾಗಲೀ, ಸ್ರೀಯ ಸೌಂದರ್ಯವಾಗಲೀ, – ಪೆರಾಜ್ಹೆಟ್ಟಿಯ ವಿಲಕ್ಷಣ ಕಲ್ಪನಾಶಕ್ತಿಯ ಹೊಡೆತಕ್ಕೆ ಸಿಗದೆ ಉಳಿಯುತ್ತಿರಲಿಲ್ಲ. ನಿಜದಲ್ಲಿ, ಅವನಿಗೆ ಹೆಂಗಸಿನ ಉಪಸ್ಥಿತಿಯೇ ಹಗುರಾದ, ಆದರ್ಶಪ್ರಾಯವೆನಿಸುವ ಭಾವನೆ ಉಂಟುಮಾಡಿದಾಗ ಅಥವಾ ಗಂಡಸೊಬ್ಬ ಘನತೆ ಪ್ರದರ್ಶಿಸಿದಾಗ ಮಾತ್ರ ಅನಿರೀಕ್ಷಿತವೆಂಬಂತೆ ಇಂಥ ಬಿಂಬಗಳು ಅವನೊಳಗೆ ಹುಟ್ಟುತ್ತಿದ್ದವು.

ಈಗ, ಇಂಥ ಮನಸ್ಥಿತಿಯಲ್ಲಿ ಪೆರಾಜ್ಹೆಟ್ಟಿ ಪ್ರೇಮಿಸಿದರೆ ಏನಾಗಬಹುದೆಂದು ಊಹಿಸಿ. ಕೊನೆಗೂ ಈ ಪುಣ್ಯಾತ್ಮ ಬಲುಸುಲಭವಾಗಿ – ಅದೂ ಅಸಾಧಾರಣವೆನ್ನಿಸುವ ರೀತಿಯಲ್ಲಿ ಪ್ರೇಮದಲ್ಲಿ ಬಿದ್ದೆ ಬಿಟ್ಟ. ಹಾಗೆ ಪ್ರೇಮಪಾಶದಲ್ಲಿ ಬಿದ್ದದ್ದೇ, ಅವನು ಬೇರ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಲೇ ಯಿಲ್ಲ. ಆದರೆ ಅವನು ಬೇರೆಯವರ ಅಪೇಕ್ಷೆಯಂತೆ, ತನ್ನ ಪ್ರೇಯಸಿಯ ಅಪೇಕ್ಷೆಯಂತೆ, ತನ್ನ ಭಾವೀ ಮಾವಂದಿರ-ಭಾವಮೈದುನರ ಅಪೇಕ್ಷೆಯಂತೆ, ಹೆಣ್ಣಿನ ಕಡೆಯವರ ಗೆಳೆಯರ ಅಪೇಕ್ಷೆಯಂತೆ ಬದಲಾಗಿಬಿಟ್ಟ. ಅಂದರೆ ಆ ಕ್ಷಣದಲ್ಲಿ ಅವನು ಅವನಾಗಿಯೇ ಉಳಿಯಲಿಲ್ಲ. ಬೇರೆಯೇ ಒಬ್ಬ ಪೆರಾಜ್ಹೆಟ್ಟಿಯಾಗಿಬಿಟ್ಟ.

ಇದಕ್ಕೂ ಹಿಂದೆ, ಕನಿಷ್ಠ ಇಪ್ಪತ್ತು ಸಲವಾದರೂ ಅವನ ನಿಶ್ಚಿತಾರ್ಥವಾಗಿತ್ತು. ಈ ಎಲ್ಲ ಬೇರೆ ಬೇರೆ ಪೆರಾಜ್ಹೆಟ್ಟಿಯ ಕುರಿತು, ಆತ ವಿವರಿಸುವಾಗ, ಹಿಂದಿನ ಪೆರಾಜ್ಹೆಟ್ಟಿಗಿಂತಲೂ ಈ ಬಾರಿಯ ಪೆರಾಜ್ಹೆಟ್ಟಿ ಮೂರ್ಖನೆಂದು ಹೇಳಿ, ಆತ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ.

ತನ್ನ ಈ ಹುಚ್ಚಾಟದ ತೀವ್ರತೆ ಕ್ಷೀಣಿಸುತ್ತ, ಹಿಂದಿನಂತೆ ಪುನಃ ಪ್ರಜ್ಞಾವಸ್ಥೆಗೆ ಮರಳಿದ್ದೇ ಅವನ ಆ ಕ್ಷಣದ ರೂಪ ನೆನೆದು ಅವನಿಗೇ ವಿಚಿತ್ರವೆನಿಸುತ್ತಿತ್ತು; ಆಶ್ಚರ್ಯವೂ ಕೂಡ. ಆಮೇಲೆ ತನ್ನ ಹೆಂಡತಿಯಾಗುವವಳನ್ನು, ತನ್ನ ಅತ್ತೆ-ಮಾವಂದಿರನ್ನು ನೋಡಿದ್ದೇ ಮತ್ತೆ ಮೊದಲಿನಂತೆ ಗಹಗಹಿಸಿ ನಗುತ್ತ ಅಲ್ಲಿಂದ ಕಾಲ್ಕೀಳುತ್ತಿದ್ದ. ಹಾಗೆ ಓಡಿಹೋಗದೆ ಅವನಿಗೆ ಬೇರೆ ಉಪಾಯವೇ ಇರಲಿಲ್ಲ.

ಆದರೆ ಸಮಸ್ಯೆಯೆಂದರೆ, ಅವರ್ಯಾರೂ ಅವನನ್ನು ಅಷ್ಟು ಸುಲಭದಲ್ಲಿ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲ. ಪೆರಾಜ್ಹೆಟ್ಟಿ ಒಳ್ಳೆಯ ಹುರುಪಿನ ಯುವಕನಾಗಿದ್ದನಲ್ಲದೇ, ಎಲ್ಲರ ಪ್ರೀತಿ ಪಾತ್ರನಾಗಿದ್ದ ಕೂಡ.

ಪಕ್ಕನೆ ಅವನ ಆ ಇಪ್ಪತ್ತಕ್ಕೂ ಹೆಚ್ಚು ನಿಶ್ಚಿತಾರ್ಥಗಳ ವಿವರಗಳನ್ನೆಲ್ಲ ಪುಸ್ತಕ ರೂಪದಲ್ಲಿ ತಂದಿದ್ದಲ್ಲಿ ಅದು ಈ ಪೀಳಿಗೆಯ ಅತ್ಯಂತ ವಿನೋದದಾಯಕ ಓದಿನ ಸಾಮಗ್ರಿಗಳಲ್ಲೊಂದಾಗುತ್ತಿತ್ತು. ಆದರೆ ಅಸಲಿಗೆ, ಓದುಗನನ್ನು ಯಾವ ವಿವರಗಳು ನಗೆ ತರಿಸುವವೋ ಅವೇ ವಿವರಗಳು, ದುರದೃಷ್ಟವಶಾತ್, ಬಡಪಾಯಿ ಪೆರಾಜ್ಹೆಟ್ಟಿಗೆ ನಿಜವಾಗಿ ಅಳುಬರಿಸುವ, ದುಃಖದ ವಿವರಗಳಾಗಿದ್ದವು.

ಇನ್ನು ಮುಂದೆ ತಾನು ಹೀಗೆಲ್ಲ ಖಂಡಿತ ಮಾಡಲಾರೆ ಎಂದೆಷ್ಟು ವಾಗ್ದಾನ ಮಾಡಿಕೊಂಡರೂ ಆತ ಇನ್ನ್ಯಾರೊನಿದಿಗೋ ಪ್ರೇಮದಲ್ಲಿ ಸಿಲುಕುತ್ತಿದ್ದ! ಪರಿಣಾಮ: ಅದು ಹಿಂದಿಗಿಂತಲೂ ಕೆಟ್ಟದಾಗಿರುತ್ತಿತ್ತು –

ಕೊನೆಗೊಂದು ದಿವಸ ಅವನಿಗೆ ಮದುವೆಯಾಯಿತು ಎಂಬ ಸುದ್ದಿ ಬಾಂಬ್ನಂತೆ ಸ್ಫೋಟಗೊಂಡಿತು. ಆತ ಮದುವೆಯಾಗಿದ್ದು ಯಾರನ್ನು ಎಂದರೆ ಬೇಡ ಬಿಡಿ…. ಯಾರಿಗೂ ಇದನ್ನು ನಂಬಲಿಕ್ಕೇ ಇಷ್ಟವಿಲ್ಲ! ಪೆರಾಜ್ಹೆಟ್ಟಿ ಎಲ್ಲಾ ನಮೂನೆಯ ಹುಚ್ಚಾ ಓಟವನ್ನು ಆಗಲೇ ನಡೆಸಿಯಾಗಿತ್ತು. ಆದರೆ, ಮತ್ತೂ ಮುಂದೆ ಹೋಗಿ ಆತ ಹೆಂಗಸೊಬ್ಬಳನ್ನು ಉಳಿದ ಭವಿಷ್ಯವಿಡೀ ಗಂಟುಹಾಕಿಕೊಳ್ಳುತ್ತಾನೆಂದರೆ…..

ಗಂಟುಹಾಕಿಕೊಳ್ಳುವುದೆ? ಅವನ ಅನೇಕ ಗೆಳೆಯರಲ್ಲಿ ಯಾರೋ ಒಬ್ಬ ಪುಣ್ಯಾತ್ಮ ಈ ಪದ ಬಳಸಿದಾಗ ಪೆರಾಜ್ಹೆಟ್ಟಿ ಅವನನ್ನು ಕೊಂದುಹಾಕಲಿಲ್ಲ ಸದ್ಯ.

“ಗಂಟು ಹಾಕಿಕೊಂಡು ಬಿಡುವುದಾ? ಏನು ಹಾಗಂದರೆ? ನೀವೆಲ್ಲ ಮೂರ್ಖರು, ಮುಠ್ಠಾಳರು! ನಾನು ಗಂಟು ಹಾಕಿಕೊಳ್ತೀನಾ ಯಾರು ಹೇಳಿದ್ದು ಹಾಗೆ? ನಾನು ನಿಮಗೆ ಗಂಟು ಹಾಕಿಕೊಂಡವನ ಹಾಗೆ ಕಾಣಿಸುತ್ತೇನೆಯೇ? ಬನ್ನಿ…. ಇಲ್ಲಿ…. ಬನ್ನಿ… ಈ ನನ್ನ ಹಾಸಿಗೆ ನೋಡಿ…. ಇದು ನಾನು ನಿತ್ಯ ಮಲಗುವ ಹಾಸಿಗೆ ಅಲ್ವಾ ? ಇದು ನಿಮಗೆ ಎರಡೆರಡಾಗಿ ಕಾಣಿಸುತ್ತಾ ಇದೆಯಾ? ಏಯ್ ಸೆಚ್ಚಿನೋ! ಸೆಚ್ಚಿನೋ!”

ಸೆಚ್ಚಿನೋ ಅವನ ಹಳೇ ನಂಬಿಕಸ್ಥ ಆಳು.

“ಹೇಳು ಸೆಚ್ಚಿನೋ…. ನಾನು ರಾತ್ರೆ ಮಲಗುವಾಗ ಒಬ್ಬನೇ ಇರ್ತೇನಲ್ಲ?”

“ಹೌದು ಒಡೆಯಾ…. ಒಬ್ಬರೇ ಇರ್ತೀರಿ.”

“ಪ್ರತಿ ರಾತ್ರಿ?”

“ಪ್ರತಿ ರಾತ್ರಿ.”

“ನಾನು ತಿನ್ನುವುದೆಲ್ಲಿ?”

“ಓ…. ಆ ಕೋಣೆಯಲ್ಲಿ.”

“ಯಾರ ಜೊತೆ?”

“ಒಬ್ಬರೇ.”

“ನೀನೇ ತಾನೇ ಊಟ ತಯಾರಿಸುವುದು?”

“ಹೌದು ಒಡೆಯಾ…. ನಾನೇ”

“ನಾನಿನ್ನೂ ಅದೇ ಸೆಲೆಸ್ಟಿನೋ ಆಗಿದ್ದೇನಲ್ವಾ ?”

“ಹೌದು ಸರ್…. ಅವರೇ ಆಗಿದ್ದೀರಿ.”

ಪ್ರಶ್ಣೋತ್ತರ ಮುಗಿದು, ಆಳನ್ನು ಆಚೆಕಳಿಸಿ, ಪೆರಾಜ್ಹೆಟ್ಟಿ, “ಮತ್ತೇನೀಗ?” ಎಂದ.

“ಮತ್ತೆ ಇದು ಸತ್ಯ ಅಲ್ವಾ?” ಇನ್ನೊಬ್ಬ ಕೇಳಿದ.

“ಖಂಡಿತಾ ಸತ್ಯ…. ಸತ್ಯ ಮಾರಾಯಾ….. ನಾನವಳನ್ನು ಮದುವೆಯಾದೆ! ರಿಜಿಸ್ಟರ್ಡ್ ಆಫೀಸಿನಲ್ಲಿ ನಂತರ ಚರ್ಚಿನಲ್ಲಿ ಮದುವೆಯಾದೆ! ಇದೇನು ಗಂಭೀರವಾದ್ದೆಂದು ಅನಿಸುತ್ತದೆಯೆ?” ಪೆರಾಜ್ಹೆಟ್ಟಿ ಕೇಳಿದ.

“ಇಲ್ಲಪ್ಪಾ…. ಅದಕ್ಕೆ ತದ್ವಿರುದ್ದವಾದ್ದು…. ಹಾಸ್ಯಾಸ್ಪದವಾದ್ದು.”

“ದಾರಿಬಿಡು ಹೋಗಾಚೆ! ನೀವೆಲ್ಲ ನನ್ನ ಬೆನ್ನ ಹಿಂದೆ ನಗುವವರು! ನಾನು ಸತ್ತೇಹೋದ ಹಾಗೆ ನನ್ನನ್ನು ಚಿತ್ರಿಸಿದ್ದೀರಿ ಅಲ್ವಾ? ಸಾಕುಸುಮ್ನಿರಿ. ನಾನೀಗ ನನ್ನ ಒಳ್ಳೆಯದಕ್ಕೇ ಸ್ವತಂತ್ರನಾಗಿದ್ದೇನೆ! ನನ್ನ ಬದುಕಿನ ಆ ‘ಕೊನೇ ಬಿರುಗಾಳಿ’ಯ ಹೊಡೆತದಿಂದ ಜೀವಂತವಾಗಿ ಪಾರಾಗಿ ಬಂದಿದ್ದೇ ಒಂದು ಪವಾಡ ಗೊತ್ತಾ?” ಎಂದ.

ಪೆರಾಜ್ಹೆಟ್ಟಿ “ಕೊನೇ ಬಿರುಗಾಳಿ” ಎಂದು ಪ್ರಸ್ತಾಪಿಸಿದ್ದು – ಹಣಕಾಸು ಮಂತ್ರಾಲಯದ ಮುಖ್ಯಸ್ಥನಾಗಿರುವ ಕಮಾಂಡರ್ ವಿಕೊಲಮಣ್ಣನ ಮಗಳೊಂದಿಗಿನ ನಿಶ್ಚಿತಾರ್ಥದ ಕುರಿತಾಗಿತ್ತು. “ಪಾರಾಗಿ ಬಂದಿದ್ದೇ ಒಂದು ಪವಾಡ” ಎಂದಾತ ಹೇಳಿದ್ದು ಸರಿಯಾಗಿಯೇ ಇತ್ತು ಕೂಡ. ಈಗ ಹುಡುಗಿಯ ಸೋದರ, ಉತ್ತಮ ಕತ್ತಿವರಸೆಗಾರನೂ ಆಗಿರುವ ಲೀನೋ ಲಮಣ್ಣನೊಂದಿಗೆ ಈತ ಕತ್ತಿವರಸೆ ನಡೆಸಬೇಕಿತ್ತು. ಲೀನೋ ಇವನ ಅತ್ಯುತ್ತಮ ಗೆಳೆಯನಾಗಿದ್ದರಿಂದ ಮತ್ತು ಅವನ ವಿರುದ್ಧ ಡೆರಾಜ್ಹೆಟಿಗೂ ಯಾವ ಶತ್ರುತ್ವವೂ ಇಲ್ಲದ್ದರಿಂದ ಕೋಳಿಯನ್ನು ಕಚಕಚನೆ ಕೊಯ್ದಂತೆ ತಾನೇ ಸೋಲಿಗೆ ಒಡ್ಡಿ ಕೊಂಡುಬಿಟ್ಟಿದ್ದ.

ಈ ಬಾರಿಯಾದರೂ ಮದುವೆ ನಡೆಯುವುದು ಖಂಡಿತ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಹೆಸರೇ ಸೂಚಿಸುವಂತೆ ಮಿಸ್ ಎಲ್ಲಿ ಲಮಣ್ಣಾಳು ಇಂಗ್ಲಿಷ್ ಫ್ಯಾಶನ್ನಿನ ಹುಡುಗಿ. ನೇರ ನಡಿಗೆ, ಯಾವ ಮುಚ್ಚು ಮರೆಯಿಲ್ಲದವಳು; ಸಮಚಿತ್ತದವಳು. ಪೆರಾಜ್ಹೆಟ್ಟಿಯ ಅನಾಹುತಗಿರಿ ಕಲ್ಪನಾಶಕ್ತಿಯ ಸೆಳೆತಕ್ಕೆ ಸಿಗದವಳು. ಹ್ಞಾಂ…. ಹೌದು. ತನ್ನ ಜತೆ ಆಗಾಗ ಮಾತಾಡುತ್ತಿದ್ದ, ಎತ್ತರದ ಕುದುರೆಯ ಮೇಲೂ ಕೂತು ಸಾಥ್ ನೀಡಿದ್ದ ಮಾವನನ್ನು ನೋಡಿದಾಗ ಪೆರಾಜ್ಹೆಟ್ಟಿಯ ಮುಖದಲ್ಲಿ ಸಣ್ಣಗೆ ನಗು ಸುಳಿದಿತ್ತು. ತನ್ನ ಈ ನಗುವಿನ ಭೋರ್ಗರೆತಕ್ಕೆ ಕಾರಣವೇನು “ಎನ್ನುವುದನ್ನು ತಾನು ಮದುವೆಯಾಗಲಿರುವ ಹುಡುಗಿಗೆ ವಿನಯದಿಂದಲೇ ಹೇಳಿಬಿಟ್ಟಿದ್ದ ಪೆರಾಜ್ಹೆಟ್ಟಿ. ಅವಳು ಅದಕ್ಕೆ ನಕ್ಕು ಸುಮ್ಮನಾಗಿದ್ದಳು. ತನ್ನ ದಾಂಪತ್ಯದ ಹಡಗು ಈ ಬಾರಿಯಂತೂ ಮರಳಿನ ದಿಬ್ಬಗಳನ್ನೆಲ್ಲ ದಾಟಿಕೊಂಡು ಬಂದರನ್ನು ಮುಟ್ಟುವುದು ಖಂಡಿತ ಎಂದು ಪೆರಾಜ್ಹೆಟ್ಟಿ ಕೂಡಾ ನಂಬಿದ್ದ. ಅವನ ಅತ್ತೆ ಬಲು ಸಾಧುಸ್ವಭಾವದ ನಿಗರ್ವೀ ಹೆಂಗಸು, ಮಿತಭಾಷಿ ಕೂಡ. ಹುಡುಗಿಯ ಅಣ್ಣ ಲಿನೋವಂತೂ ಎಲ್ಲ ರೀತಿಯಿಂದಲೂ ಬೇಕಾದವನೇ ಆಗಿದ್ದ.

ನಿಶ್ಚಿತಾರ್ಥದ ದಿನದಿಂದಲೇ ಪೆರಾಜ್ಹೆಟ್ಟಿ ಮತ್ತು ಲಿನೋಲಮಣ್ಣ ಗಳಸ್ಯ-ಕಂಠಸ್ಯ ಎನ್ನುವಷ್ಟರಮಟ್ಟಿಗೆ ಹತ್ತಿರವಾಗಿಬಿಟ್ಟರು. ಅಡ್ಡಾಡುವುದು, ಶಿಕಾರಿಗೆ ಹೊರಡುವುದು ಕುದುರೆ ಹತ್ತಿ ಒಟ್ಟಿಗೇ ಬೋಟ್ ಕ್ಲಬ್ಬಿಗೆ ಹೋಗುವುದು ನೋಡಿದರೆ ತನ್ನ ಹೆಂಡತಿಯಾಗುವವಳೊಂದಿಗಿಂತ ಪೆರಾಜ್ಹೆಟ್ಟಿ ತನ್ನ ಭಾವಮೈದನೊಂದಿಗೇ ಹೆಚ್ಚುಕಾಲಕಳೆಯುತ್ತಿದ್ದ.

ಬಡಪಾಯಿ ಪೆರಾಜ್ಹೆಟ್ಟಿ ಎಂಥ ವಿಷಯದ ಕುರಿತೂ ಯೋಚಿಸಬಲ್ಲವನಾಗಿದ್ದ. ಈ ಬಾರಿ ಮಾತ್ರ ತನ್ನ ಭಾವಮೈದುನನೊಂದಿಗಿನ ನಿಕಟ ಸಂಪರ್ಕದಿಂದಾಗಿಯೇ ಎಂಥದೋ ಚಮತ್ಕಾರಿಕ ಹುಚ್ಚುಚ್ಚು ಕಲ್ಪನೆಯಿಂದ ದುರಂತವೊಂದು ಹೊಂಚುಹಾಕಿ ಕೂತಿತ್ತು.

ಯಾವುದೋ ಒಂದು ಹಂತದಲ್ಲೀಗ, ಪೆರಾಜ್ಹೆಟ್ಟಿ ತನ್ನ ಹೆಂಡತಿಯಾಗುವವಳಿಗೂ ಮತ್ತವಳ ಸೋದರನಿಗೂ ಏನೋ ಒಂದು ಸಾಮ್ಯತೆ ಕಂಡು ಹುಡುಕಿಯೇ ಬಿಟ್ಟ.

ಹೀಗೇ ಸಹಜವಾಗಿ ಲಿಮೊರ್ನೋ ಸಮುದ್ರ ತೀರಕ್ಕೊಮ್ಮೆ ಲಮಣ್ಣ ಕುಟುಂಬದವರೊಂದಿಗೆ ಹೋಗಿದ್ದ.

ಹಿಂದೆ ಹಲವು ಸಲ, ಲಿನೋ, ಆಟಗಾರನ ದಿರಿಸಿನಲ್ಲಿ ದೋಣಿ ಚಲಾಯಿಸುವುದನ್ನು ಪೆರಾಜ್ಹೆಟ್ಟಿ ನೋಡಿದ್ದ. ಈಗ ಅಲ್ಲಿ ಅವನ ಮದುವೆಯಾಗುವವಳು ಸ್ನನನ್ದ ಉಡುಪಿನಲ್ಲಿದ್ದಳು. ಇಲ್ಲಿ ನಾವು ಗಮನಿಸಬೇಕಾದ್ದೇನೆಂದರೆ ಲಿನೋನ ಸೊಂಟದ ಭಾಗ ಸ್ವಲ್ಪ ಹೆಂಗಸರ ಹಾಗೆ ಇತ್ತು ಅನ್ನುವುದು.

ಹಾಗಾದರೆ ಈ ಸಾಮ್ಯತೆ ಕಂಡುಹುಡುಕಿದ ತಕ್ಷಣ ಪೆರಾಜ್ಹೆಟ್ಟಿಯ ಮೇಲೆ ಎಂಥ ಪರಿಣಾಮವಾಯಿತು? ತನ್ನ ಸೋದರನನ್ನೇ ಹೋಲುವ ಎಲ್ಲಿ ಲಮಣ್ಣಾಳ ಜತೆಗಿನ ದಾಂಪತ್ಯದ ಖಾಸಗಿ ಕ್ಷಣಗಳನ್ನು ನೆನೆದ ಪೆರಾಜ್ಹೆಟ್ಟಿ ಬೆವರಿನಿಂದ ತೊಯ್ದುಹೋದ; ಒಂದು ಕ್ಷಣ ಹಿಮ್ಮೆಟ್ಟಿದ. ಥಟ್ಟನೆ ಮನಸ್ಸಲ್ಲೇ ಚಿತ್ರಿಸಿಕೊಂಡ ಆ ಖಾಸಗಿ ಕ್ಷಣಗಳೆಲ್ಲ ವಿಕಾರವೂ ಅಸಹಜವೂ ಎನಿಸಿದವು. ಹೆಂಡತಿಯಾಗುವವಳಲ್ಲಿ ಈಗವನಿಗೆ ಅವಳ ಸೋದರ ಕಾಣುತ್ತಿದ್ದ. ಅವಳ ಸಣ್ಣ ಸ್ಪರ್ಶಕ್ಕೂ ಆತ ಚಡಪಡಿಸತೊಡಗಿದ.

“ಅಯ್ಯೋ…. ಸಾಕಪ್ಪಾ! ದೇವರಾಣೆಗೂ ನಿಲ್ಲಿಸಿಬಿಡಿ…. ನಾನು ಲೀನೋ ಒಳ್ಳೆಯ ಗೆಳೆಯರಾಗಿಯೇ ಇರ್ತೇವೆ. ಯಾಕೆಂದರೆ ಅವನನ್ನು ನಾನು ಮದುವೆಯಾಗಬೇಕಾಗಿಲ್ಲ. ಆದರೆ ನಿನ್ನನ್ನೂ ನಾನು ಮದುವೆಯಾಗುವುದಿಲ್ಲ. ಹಾಗೆ ಮಾಡಿದರೆ ಅದೊಂಥರಾ ನಿನ್ನ ಸೋದರನನ್ನೇ ಮದುವೆಯಾದ ಹಾಗೆ.”

ಪೆರಾಜ್ಹೆಟ್ಟಿ ಈ ಬಾರಿ ಅನುಭವಿಸುತ್ತಿದ್ದ ವೇದನೆ ಮಾತ್ರ ಹಿಂದಿನದ್ದೆಲ್ಲಕ್ಕಿಂತ ಹೆಚ್ಚು ತೀವ್ರವಾಗಿತ್ತು. ಈ ಜಗಳ ಕತ್ತಿವರಸೆಯಲ್ಲಿ ಮುಗಿದರೂ ಯಾವುದೋ ಪವಾಡದಿಂದಾಗಿ ಅವನು ಪರಲೋಕಕ್ಕೆ ಹೋಗುವುದು ಮಾತ್ರ ತಪ್ಪಿತು.

ಜಗಳದಿಂದ ಉಂಟಾದ ಗಾಯ ಗುಣವಾಗುತ್ತಲೇ, “ಹುಚ್ಚುಕಲ್ಪನೆಗಳಿಗೆ ಕಡಿವಾಣ ಹಾಕಲು ನೀನು ಪುನಃ ಮದುವೆಯಾಗುವುದೇನಾದರೂ ಉಂಟಾ?” ಎಂದು ಕೇಳಿದೆ. “ಖಂಡಿತವಾಗಿ…. ಮ್ಯಾಡ್ಡಲೀನಾ ಜತೆ…. ಆ ನಾಯಿ ಇಟ್ಟುಕೊಂಡಿದ್ದಾಳಲ್ಲ…. ಅವಳೇ. ಆ ಮ್ಯಾಡ್ಡಲೀನಾಳನ್ನು ಮದುವೆಯಾಗುತ್ತೇನೆ. ನೀನು ನೋಡಿರಬೇಕಲ್ಲ…. ಪ್ರತಿರಾತ್ರಿ ಎಂಥದೋ ವಿಚಿತ್ರ ಟೊಪ್ಪಿ ಹಾಕಿಕೊಂಡು ಕೂದಲು ಬೋಳಿಸಿಕೊಂಡ ಆ ಕಪ್ಪುನಾಯಿ…. ಪಾಪ…. ಅವಳಿಗೆ ಕೆಲಸ ಮಾಡಲು ಬಿಡುವುದೇ ಇಲ್ಲ.” ಎಂದ.

ಆತ ಚರ್ಚಿನಲ್ಲಿ, ಆಮೇಲೆ ರಿಜಿಸ್ಟರ್ಡ್ ಆಫೀಸಿನಲ್ಲಿ ಅವಳನ್ನು ಮದುವೆಯಾದ. ಬೀದಿಗಳಲ್ಲಿ ಅವಳ ಜತೆ ಸುತ್ತಾಡಿದ. ದಿನಕ್ಕೆರಡರಂತೆ ಲೈರನ್ನು ಕೊಟ್ಟು ಹಡಗಿನಲ್ಲಿ ಕೂರಿಸಿ ದೇಶಾಂತರ ಕಳಿಸಿಬಿಟ್ಟ.

ಎಂದಿನಂತೆ, ಅವನ ಗೆಳೆಯರು ಕೆಲಕಾಲ ಅವನ ಗೋಳುಹೊಯ್ದರು. ಆದರೆ ಪೆರಾಜ್ಹೆಟ್ಟಿ ಮಾತ್ರ ಶಾಂತವಾಗಿ, ತನ್ನ ಎಂದಿನ ಉಗುರು ನೋಡುವ ಅಭ್ಯಾಸ ಮುಂದುವರೆಸುತ್ತ, ಅತ್ಯಂತ ಗಂಭೀರವಾಗಿ ಮಾತಾಡುವ ರೂಢಿಗೆ ವಾಪಾಸಾಗಿದ್ದ.

“ಹೌದು…. ನಾನವಳನ್ನು ಮದುವೆಯಾಗಿಬಿಟ್ಚೆ…. ಅದೇನೂ ಅಂಥ ಗಂಭೀರ ವಿಷಯವಲ್ಲ ಬಿಡಿ. ನಿದ್ದೆ ಮಾಡುವಾಗ ಒಬ್ಬನೇ ನಿದ್ದೆ ಮಾಡುತ್ತೇನೆ. ಮನೆಯಲ್ಲಿ ತಿನ್ನುವಾಗಲೂ ಒಬ್ಬನೇ ತಿನ್ನುತ್ತೇನೆ. ಅಲ್ಲೆಲ್ಲ ನನಗವಳು ಗೋಚರಿಸುವುದೂ ಇಲ್ಲ; ಕಾಡುವುದೂ ಇಲ್ಲ. ಹೆಸರೇನು ಅಂತ ಕೇಳಿದಿರಲ್ಲ? ಹೌದಪ್ಪ…. ನನ್ನ ಹೆಸರನ್ನೇ ಅವಳಿಗೆ ಕೊಟ್ಬುಬಿಟ್ಟೆ. ಇಷ್ಟಕ್ಕೂ ಹೆಸರಿನಲ್ಲೇನಿದೆ? ಇದೆಲ್ಲ ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ.” ಎನ್ನುತ್ತಿದ್ದ.

ಹಾಗೆ ನೋಡಿದರೆ, ಪೆರಾಜ್ಹೆಟ್ಟಿಗೆ ಯಾವುದೂ ಗಂಭೀರವಾದದ್ದಲ್ಲ. ಪ್ರತಿಯೊಂದು ಸಂಗತಿಯ ಮಹತ್ವ ಕೂಡ ನೀವದನ್ನು ಎಷ್ಟು ಹಚ್ಬಿಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ತೀರ ಕ್ಲುಲ್ಲಕ ವಿಷಯಗಳನ್ನೆಲ್ಲ ಹಚ್ಚಿಕೊಂಡರೆ ಅದು ಬಹಳ ಗಂಭೀರವಾಗಿಬಿಡಬಹುದು ಮತ್ತು ತೀರಾ ಗಂಭೀರವಾದ್ದು ಅತ್ಯಂತ ಕ್ಷುಲ್ಲಕವಾಗಿಬಿಡಬಹುದು. ಸಾವಿಗಿಂತ ಗಂಭೀರವಾದ್ದು ಬೇರೇನೆಂಟು? ಇಷ್ಟಾಗಿಯೂ ಬಹಳಷ್ಟು ಮಂದಿ ಅದಕ್ಕೆ ಏನೂ ಮಹತ್ವಕೊಡುವುದಿಲ್ಲ….

ಸರಿ; ಈಗ ಪೆರಾಜ್ಹೆಟ್ಟಿಯ ಗೆಳೆಯರಿಗೆ, ನಂತರದ ದಿನಗಳಲ್ಲಿ ಆತ ಹೇಗೆ ಪಶ್ಚಾತ್ತಾಪ ಪಡುತ್ತಾನೆಂಬುದನ್ನು ನೋಡಬೇಕೆನ್ನಿಸಿತು! ಅದಕ್ಕೆ ಪೆರಾಜ್ಹೆಟ್ಟಿ, “ತಮಾಷೆ ಮಾಡ್ತಾ ಇಲ್ಲ…. ಖಂಡಿತವಾಗಿಯೂ ನನಗೆ ಪಶ್ಚಾತ್ತಾಪವಾಗುತ್ತದೆ! ಆಗಲೇ ನಾನು ನಡೆದ ಘಟನೆಗೆ ಪಶ್ಚಾತ್ತಾಪ ಪಡಲು ಶುರುಮಾಡಿದ್ದೇನೆ…..” ಎಂದುತ್ತರಿಸಿದ.

ಇಂಥ ಚಮತ್ಕಾರದ ಮಾತುಗಳಿಗೆಲ್ಲ ಅವನ ಗೆಳೆಯರು, “ಓಹೋ…. ಹೌದಾ?” ಎಂದು ತಮಾಷೆ ಮಾಡಿದರು.

“ಮೂರ್ಖರೆ…. ಸರಿಯಾದ ಟೈಮ್ ಬಂದಾಗ ಸತ್ಯವಾಗಿಯೂ ನಾನು ಪಶ್ಚಾತ್ತಾಪ ಪಡುವೆ…. ಆದರೆ ನನ್ನ ಸಮಸ್ಯೆಗೆ ಪರಿಹಾರ ದೊರಕುವಪ್ಟರಲ್ಲಿ ನಾನು ಮತ್ತೆ ಯಾರದೋ ಪ್ರೇಮದಲ್ಲಿ ಸಿಲುಕಿರುತ್ತೇನೆ…. ಅಂದರೆ ಹೆಂಡತಿಯನ್ನು ಪಡಕೊಳ್ಳುವ ಆ ಅತ್ಯಂತ ಹೀನಾಯ ಕ್ಷಣದತನಕ” ಎಂದ.

ಎಲ್ಲರೂ ಒಕ್ಕೊರಲಿನಿಂದ, “ಆಗ್ಲೇ ಒಬ್ಬಳನ್ನು ಪಡೆದಾಗಿದೆಯಲ್ಲ” ಎಂದರು.

“ಓಹ್…. ಅವಳಾ? ಬಿಡಿ. ಅದು ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ….” ಎಂದ.

ಉಪಸಂಹಾರ: ಹೆಂಡತಿಯನ್ನು ಪಡಕೊಳ್ಳುವ ಅಪಾಯದಿಂದ ತನ್ನನ್ನೇ ರಕ್ಷಿಸಿಕೊಳ್ಳಲು ಕೊನೆಗೂ ಪೆರಾಜ್ಹೆಟ್ಟಿ ಮದುವೆಯಾಗಲೇ ಇಲ್ಲ.
*****
ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ
Its not to be taken seriously

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಣು
Next post ಅಗತ್ಯ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…