ಹಿತ್ತಲಲ್ಲಿ ಗಿಡಗಳನ್ನು ಪರೀಕ್ಷಿಸುತ್ತಿದ್ದೆ. ನಮ್ಮಕ್ಕನ ಮಕ್ಕಳಾದ ವಿಶಾಲ್ ಮತ್ತು ವಿನೀತ್ ಕೇಕೆ ಹಾಕಿ ಆಡುತ್ತಿದ್ದರು. ಅವರನ್ನು ಅಷ್ಟು ನಕ್ಕು ನಗಿಸುತ್ತಿದ್ದುದೇನು ಎಂದು ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅವರು ‘ಮುಟ್ಟಿದರೆ ಮುನಿ’ ಸಸ್ಯದೊಡನೆ ಆಟವಾಡುತ್ತಿದ್ದರು.
ಮುಟ್ಟಿದಾಗ ಈ ಸಸ್ಯವು ಎಲೆಗಳನ್ನೆಲ್ಲ ಮುಚ್ಚಿ, ಸ್ವಲ್ಪ ಸಮಯದ ನಂತರ ಮತ್ತೆ ನಿಧಾನವಾಗಿ ತೆರೆಯುತ್ತಿತ್ತು. ಇದೇ ಅವರಿಬ್ಬರ ಖುಷಿಗೆ ಕಾರಣವಾಗಿತ್ತು. ದೊಡ್ಡವನಾದ ವಿಶಾಲ್ ಕೇಳಿಯೇ ಬಿಟ್ಟ. “ಮಾಮಾ ಇದು ಮುಟ್ಟಿದರೆ ಎಲೆಗಳನ್ನು ಹೇಗೆ ಮುಚ್ಚಿಕೊಳ್ಳುತ್ತದೆ?” ಉತ್ತರ ಹೇಳಿದರೆ ಪುಟ್ಟನಿಗೆ ತಿಳಿಯೋಲ್ಲ. ಹೇಳದಿರೆ ನನ್ನನ್ನು ಬಿಡಬೇಕಲ್ಲ! ಹೇಳಿಯೇಬಿಟ್ಟೆ ಎಷ್ಟು ತಿಳೀಯಿತೋ ನಂಗಂತೂ ಗೊತ್ತಾಗಲಿಲ್ಲ.
“ಮುಟ್ಟಿದರೆ ಮುನಿ” ಬಲು ಲಜ್ಜೆಯ ಸಸ್ಯ. ಮುಟ್ಟಿದೊಡನೆ ನಾಚಿ ನೀರಾಗಿ ಎಲೆಗಳನ್ನೆಲ್ಲ ಮುಚ್ಚಿಕೊಳ್ಳುತ್ತದೆ. ಈ ಕಾರಣದಿಂದಾಗಿಯೇ ಇದನ್ನು ‘ಲಜ್ಜಾಯಿ’, ‘ಲಜ್ಜಾವಂತೆ’ ಎಂದು ಬಣ್ಣಿಸಲಾಗಿದೆ. ಸ್ಪರ್ಶಿಸಿದಾಗ ಕಾಂಡದ ಎರಡೂ ಬದಿಯ ಎಲೆಗಳು ‘ನಮಸ್ಕಾರ’ ಮಾಡುವ ರೀತಿಯಲ್ಲಿ ಜೋಡಿಸುವುದರಿಂದ ಇದನ್ನು ‘ನಮಸ್ಕಾರಿ’ ಎಂತಲೂ ಕರೆಯುತ್ತಾರೆ. ಉತ್ತರ ಕರ್‍ನಾಟಕದಲ್ಲಿ ಇದಕ್ಕೆ ‘ಒಳ ಮುಚಗ’ ಎನ್ನುತ್ತಾರೆ.
ಶಾಲಾ ಹುಡುಗರಿಂದ ಹಿಡಿದು ಮುದುಕರವರೆಗೆ “ಮುಟ್ಟಿದರೆ ಮುನಿ” ಗಿಡದ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಅದರ ಈ ಚಲನೆ ಮಾತ್ರ. ಆದರೆ ಅದರಲ್ಲಿ ಅಡಗಿರುವ ಔಷಧೀಯ ಗುಣವನ್ನು ಅರಿತವರು ಬಹಳಷ್ಟು ಕಡಿಮೆ. ಬಹುಶಃ ಇದರಿಂದಾಗಿಯೇ ಏನೋ ಅದು ಮುನಿದು, ಮುಟ್ಟಿದ ತಕ್ಷಣ ಎಲೆಗಳನ್ನು ಮುಚ್ಚುವುದರ ಮೂಲಕ ‘ತನ್ನನ್ನು ಮುಟ್ಟಬೇಡಿ’ ಎಂಬ ಮಾತನ್ನು ತಿಳಿಸುವುದೇನೋ!
“ಮುಟ್ಟಿದರೆ ಮುನಿ” ಕುರುಚಲು ಸಸ್ಯ. ೪೫ ರಿಂದ ೫೦ ಸೆಂ.ಮೀ. ಉದ್ದದಷ್ಟು ಬೆಳೆಯ ಬಲ್ಲದು. ಇದನ್ನು ಸಸ್ಯರಾಜ್ಯದ ‘ಮೈಮೋಸೇಸಿ’ ಎಂಬ ಉಪ ಕುಟುಂಬ (ಲೆಗ್ಯುಮಿನೇಸಿ ಕುಟುಂಬ) ಕ್ಕೆ ಸೇರಿಸಲಾಗಿದ್ದು, “ಮೈಮೊಸಾ ಪುಡಿಕಾ” ಇದರ ವೈಜ್ಞಾನಿಕ ಹೆಸರು. ಬ್ರೆಜಿಲ್ ಈ ಸಸ್ಯದ ಉಗಮಸ್ಥಾನ ಎಂದು ಊಹಿಸಲಾಗಿದೆ. ಭಾರತದ ಉಷ್ಣವಲಯದ ಪ್ರದೇಶದಲ್ಲೆಲ್ಲಾ ಕಾಣಸಿಗುತ್ತದೆ.
ಇದರ ಕಾಂಡದಲ್ಲಿ ಮತ್ತು ಕವಲುಗಳಲ್ಲಿ ಮುಳ್ಳುಗಳಿರುತ್ತವೆ. ಸಂಯುಕ್ತ ಎಲೆಗಳ ತೊಟ್ಟಿನ ಬುಡದಲ್ಲಿ ಉಬ್ಬಿದಂತಹ ಭಾಗವಿದೆ. ಇದೇ ಭಾಗದಲ್ಲಿಯ ಕೋಶಗಳು ಎಲೆಗಳನ್ನು ಮುಚ್ಚಲು ಮತ್ತು ತೆರೆಯಲು ಸಹಾಯಕವಾಗುವವು.
ಈ ಸಸ್ಯದ ಬೇರು ಔಷಧವಾಗಿ ಉಪಯೋಗಿಸಲ್ಪಡುವ ಬಹು ಮುಖ್ಯವಾದ ಭಾಗ. ಆಯುರ್‍ವೇದದಲ್ಲಿ ಇದನ್ನು ಕಫ, ಪಿತ್ತ ನಿವಾರಕವಾಗಿ ಉಪಯೋಸಿಸುತ್ತಾರೆ. ಇದು ರಕ್ತ ಶೋಧಕವಾದ್ದರಿಂದ ರಕ್ತಕ್ಕೆ ಸಂಬಂಧಿಸಿದ ರೋಗ ಮತ್ತು ಕುಷ್ಠರೋಗ ಗುಣಪಡಿಸಲು ಉಪಯೋಗಿಸುತ್ತಾರೆ. ಚರ್‍ಮದ ಮೇಲಿನ ಬಿಳಿ ಕಲೆ ನಿವಾರಿಸಲು ಮತ್ತು ಆಯಾಸ ಹೋಗಲಾಡಿಸಲೂ ಉಪಯೋಗಿಸಲಾಗುತ್ತಿದೆ.
ಯುನಾನಿ ಔಷಧ ಪದ್ಧತಿಯಲ್ಲಿ ಇದನ್ನು ಕಲ್ಮಶ ರಕ್ತ ಮತ್ತು ಪಿತ್ತದಿಂದುಂಟಾಗುವ ಪೀಡೆಗಳನ್ನು ಉಪಶಮನಗೊಳಿಸುವಲ್ಲಿ ಉಪಯೋಗಿಸಲಾಗುತ್ತಿದೆ. ಮೂಲವ್ಯಾಧಿ, ಕಾಮಾಲೆ, ಅತಿಸಾರ, ಕುಷ್ಠರೋಗ, ಸಿಡುಬು ಮತ್ತು ಹುಣ್ಣುಗಳ ನಿವಾರಣೆಗಾಗಿಯೂ ಇದನ್ನು ಬಳಸಲಾಗುತ್ತದೆ.
ಗಾಯಕ್ಕೆ ಬ್ಯಾಂಡೇಜ್ ಮಾಡುವಾಗ ಹತ್ತಿಯನ್ನು ‘ಮುಟ್ಟಿದರೆ ಮುನಿ’ ಯ ರಸದಲ್ಲಿ ಎದ್ದುವರು. ಇದಲ್ಲದೆ ಎಲೆಯನ್ನು ಮೂತ್ರೋತ್ತೇಜನಕಕ್ಕೂ ಉಪಯೋಗಿಸುವರು.
ಸಂಧಿವಾತ, ಸ್ನಾಯುವೇದನೆ, ಗರ್‍ಭಾಶಯದ ಗಡ್ಡೆಯನ್ನು ನಿವಾರಿಸಲೂ ಇದನ್ನು ಉಪಯೋಗಿಸುತ್ತಾರೆ. ಪ್ರತಿ ವಿಷವಲ್ಲದಿದ್ದರೂ ಎಲೆ ಮತ್ತು ಕಾಂಡವನ್ನು ಇತರ ಮದ್ದಿನೊಂದಿಗೆ ಬೆರಸಿ ಉಪಯೋಗಿಸುವುದರಿಂದ ಹಾವು ಮತ್ತು ಚೇಳಿನ ಕಡಿತದ ಅಪಾಯದಿಂದ ಪಾರಾಗಬಹುದು.
ಎಲೆಗಳ ಚಲನೆ ಹೇಗೆ?
“ಮುಟ್ಟಿದರೆ ಮುನಿ” ಒಂದು ಸೂಕ್ಷ್ಮ ಸಂವೇದನೆ ಸಸ್ಯ. ಇದರ ಎಲೆಗಳು ಉದ್ದವಾದ ಕಡ್ಡಿಯ ಎರಡೂ ಬದಿಯಲ್ಲಿವೆ (ಸಂಯುಕ್ತ ಎಲೆಗಳು). ಮುಟ್ಟಿದ ತಕ್ಷಣ ಎರಡೂ ಬದಿಯ ಎಲೆಗಳು ಮುಚ್ಚಿಕೊಳ್ಳುತ್ತವೆ. ಇದರ ಕ್ರಿಯಾ ವಿಧಾನ (ಮೆಕ್ಯಾನಿಸಮ್) ತಿಳಿಯಬೇಕಾದರೆ ಸಂಯುಕ್ತ ಪತ್ರದ ತೊಟ್ಟಿನ ಬುಡದಲ್ಲಿಯ ಉಬ್ಬಿದ ಭಾಗ (ಪಲ್ವಿನಸ್)ವನ್ನು ಅಡ್ಡಛೇದ ಮಾಡಿದರೆ ಗೊತ್ತಾಗುತ್ತದೆ. ಹಾಗೆ ಮಾಡಿದಾಗ ಪಲ್ವಿನಸ್ ಮೇಲಿನ ಮತ್ತು ಕೆಳಗಿನ – ಹೀಗೆ ಎರಡು ಭಾಗದಲ್ಲಿದೆ ಎಂದು ತಿಳಿಯುತ್ತದೆ.
ಪಲ್ವಿನಸ್‌ನ ಮೇಲಿನರ್‍ಧ ಭಾಗದಲ್ಲಿ ದಪ್ಪ ಭಿತ್ತಿಯ ಪ್ಯಾರೆಂಕೈಮಾ ಕೋಶಗಳಿದ್ದು, ಈ ಕೋಶಗಳ ನಡುವೆ ಸಣ್ಣದಾದ ಜಾಗವಿದೆ (ಇಂಟರ್‌ಸೆಲ್ಯುಲರ್ ಸ್ಪೇಸ್). ಕೆಳ ಅರ್‍ಧದಲ್ಲಿ ತೆಳುಭಿತ್ತಿಯ ಪ್ಯಾರೆಂಕೈಮಾ ಕೋಶಗಳಿದ್ದು, ಈ ಕೋಶಗಳ ನಡುವೆ ದೊಡ್ಡದಾದ ಜಾಗವಿದೆ.
ಎಲೆಗಳನ್ನು ಮುಟ್ಟಿದಾಕ್ಷಣ ಪಲ್ವಿನಸ್‌ನ ಕೆಳಾರ್‍ಧದಲ್ಲಿರುವ ಕೋಶಗಳು ಹೊರಪರಾಸರಣ (Exosmosis) ವಿಧಾನದಿಂದ ನೀರನ್ನು ಹೊರದೂಡುತ್ತವೆ. ಆಗ ಕೋಶಗಳು ಮುದುಡುತ್ತವೆ. ಒತ್ತಡ ಕಡಿಮೆಯಾಗಿ ಎಲೆಗಳು ಕೆಳಕ್ಕೆ ಬಾಗುತ್ತವೆ.
ಮುದುಡುವುದು ಮುಗಿದ ಮೇಲೆ (ಸ್ವಲ್ಪ ಸಮಯದ ನಂತರ) ಕೋಶಗಳ ನಡುವಿನ ಜಾಗದಿಂದ ನೀರು, ಕೋಶಗಳಲ್ಲಿ ಒಳಪರಾಸರಣ ವಿಧಾನದಿಂದ ಹರಿದು ಬರುತ್ತದೆ. ಇದರಿಂದ ಕೋಶಗಳು ಪುನಃ ಮೊದಲಿನ ಸ್ಥಿತಿಗೆ ಬರುತ್ತವೆ. ಆಗ ಎಲೆಗಳು ಪುನಃ ಮೊದಲಿನಂತೆ ತೆರೆದು ಕೊಳ್ಳುತ್ತವೆ.
ಎಲೆಗಳನ್ನು ಮುಟ್ಟಿದ ತಕ್ಷಣ ಪ್ರಚೋದನೆಯು ಒಂದು ಹಾರ್‍ಮೋನಿನ ಆದೇಶದ ಮೂಲಕ ನಡೆಯುವುದೆಂದು ನಂಬಲಾಗಿದೆ. ಆದರೆ ಯಾವ ಹಾರ್‍ಮೋನೆಂಬುದು ಇದೂವರೆಗೆ ತಿಳಿದಿಲ್ಲ.
ಈ ತರದ ಚಲನೆಗೆ “ಸೀಸ್ಮೋನ್ಯಾಸ್ಟಿ” ಎಂದು ಹೆಸರಿಸಲಾಗಿದೆ.
*****