ಸುದ್ದವ್ವ ಈ ಊರವಳಲ್ಲ ವಲಸೆ ಬಂದ ಹುಡುಗಿ
ಇಲ್ಲಿ ನಿಂತವಳೂ ಅಲ್ಲ ಊರೂರಲೆಯುವ ಚಪಲಿ;
ಅವಳಿಗೆ ಮಿಂಡನೆ ತಂದೆ ರಂಡೆಯೆ ತಾಯಿ
ಹುಟ್ಟಿದ ಕೂಡಲೆ ಫಟ್ಟನೊಡೆದುವಂತೆ ಮೈಯೆಲ್ಲ ಬಾಯಿ;
ಅಪ್ಪನ ನೆರಳಿಲ್ಲದೆ ಅವಳಿಗೆ ಜಾತಕ ತಪ್ಪಿತು
ಕುಂಡಲಿ ಕುಲ ಇಲ್ಲವೆಂದು ಮದುವೆ ಕೆಟ್ಟಿತು;
ಇಕ್ಕಟ್ಟು ತಪ್ಪಿದ ಹುಡುಗಿ ಹತ್ತು ದಿಕ್ಕಲ್ಲಿ ಉಂಡಳು
ಮುಟ್ಟು ಕಟ್ಟಿಲ್ಲದೆ ಬೆಳೆದಳು
ತೊಂಡುಗಂಡುಗಳ ಶಿಳ್ಳೆಗೆಲ್ಲ ಹೆಡೆಯಾಡಿಸಿ
ಧರ್ಮಶಾಲೆಯಲ್ಲಿ ಮೈತೆಗೆದಳು.
ಸುದ್ದವ್ವ ಯಾವೂರವಳೂ ಅಲ್ಲ, ಕಲಸಿ ಬಂದ ತುಡುಗಿ
ಎಂಥ ಶಾಖದಲ್ಲೂ ಮೈಸೊಕ್ಕು ಬೇಯದ ಹಡದಿ.
ಅಜ್ಜ ಅವಳ ಜೊತೆ ಗಜ್ಜುಗವಾಡಿದ್ದ
ಬುಗುರಿ ತಿರುವಿದ್ದ;
ಹಲ್ಲು ಬಿದ್ದು ಅವನೀಗ ಬಿಲ್ಲಾಗಿದ್ದರೂ
ಈ ಪಂಚರಂಗಿ ಮಾತ್ರ ಘಮಘಮಾಯಿಸುವ ಪುನುಗು ಜವ್ವಾಜಿ.
‘ಸುದ್ದಿ’ ರಾತ್ರಿರಾಣಿ, ಹಗಲು ಭಿಕಾರಿಣಿ.
ಹಗಲಲ್ಲಿ ಅವಳ ಬಸಿರಿಗೆ ಉಗಿವವರೂ
ಗುತ್ತಿಗೆಯಾಗುತ್ತಾರೆ ಮೈಗೆ ಕತ್ತಲಲ್ಲಿ;
ಮನೆಮುಂದೆ ಗೊನೆಬೀಗಿ ನಡೆದಾಗ
ಕದಮುಚ್ಚುವ ಮಠದ ಕರ್‍ಮಠರೂ
ಹಣಿಕುತ್ತಾರೆ ಕಣ್‌ತಪ್ಪಿಸಿ ಕಿಟಕಿಯಲ್ಲಿ,
“ಈ ನಿತ್ಯಹಾದರಿಯ ಗತ್ತು ಗಮ್ಮತ್ತು ಮಿತಿಮೀರಿ
ಇವಳು ತೊಡುವುದಿಲ್ಲಿ ಬಿಡುವುದಲ್ಲಿ
ಕೊಳೆ ಬೆಳೆದು ನಾರುತ್ತಿದೆ ಮಠದ ಮಗ್ಗುಲ ಗಲ್ಲಿ” ಎಂದು
ಊರು ಊರೇ ನೂರುಬಾಯಾಗಿ ಚೀರುತ್ತದೆ ದೂರು,
ಆದರೆ ಯಾರೂ ಬಗೆದದ್ದಿಲ್ಲ ಈವರೆಗೆ
ಕತ್ತರಿಸಿದಂತೆಲ್ಲ ಬೆಳೆಯುವ ಈ ದಂಡುರುಂಬೆಯ ಬೇರು.
ಮೊನ್ನೆ ನರಸಜ್ಜ ಬದಿಗೆ ಕರೆದು ಹೇಳಿದ-
“ಮಗನೆ ಸುದ್ದವ್ವನ ಗಾಳಿಗಾಲು ನೋಡಿದೆಯಾ,
ಆ ಹರಿಯದ ಪ್ರಾಯ, ಕರೆಯುವ ಕಣ್ಣ ಕಂಡೆಯಾ!
ಹುಷಾರು ಮಗನೇ, ಅಕೆ ಸ್ಮಶಾನದಲ್ಲಿ
ಕೊಳ್ಳಿಹಿಡಿದು ಅಲೆಯುತ್ತಾಳೆ ನಡುರಾತ್ರಿಯಲ್ಲಿ;
ಗೋರಿಗಳನ್ನು ಅಗೆದು ಹೆಣಗಳನ್ನು ತೆಗೆದು
ಉಸಿರೂದುತ್ತಾಳೆ ನಿಲ್ಲಿಸಿ ಹೊಕ್ಕುಳಲ್ಲಿ!
ಹರಕೆ ಸಲ್ಲಿಸಿ ದೆವ್ವದ ಕುಲ ತಣಿಸುತ್ತಾಳೆ.
ದೆವ್ವಗಳೆಲ್ಲ ಬಂದು ‘ಅವ್ವಾ’ ಎಂದಪ್ಪುತ್ತವೆ
‘ಅವ್ವನ’, ‘ಅಪ್ಪನ’ ಎಂದು ಕೊಳ್ಳಿ ಬೀಸಿ ಹಾಡುತ್ತವೆ.
ಸುಸ್ತಾಗುವ ತನಕ ಬತ್ತಲೆ ಕುಣಿತ ಕುಣಿದು
ಎದ್ದು ಬಂದ ಗೋರಿಯಲ್ಲೆ ಬಿದ್ದುಬಿಡುತ್ತವೆ ಕಡೆಗೆ.
ಮಗನೇ ಬುದ್ಧಿ ಕೈಯಲ್ಲಿರಲಿ
ಸುದ್ದಿಯ ಮುರಕಕ್ಕೆ ಮಾರು ಹೋದೀಯಾ!
ಬಲಿದು ನಕ್ಕಾಳು ಅದಕ್ಕೆ ಅರಳೀಯ!
ಉಕ್ಕುವ ಜವ್ವನಿಗರನ್ನೆ ಆ ವಿಷಹಲ್ಲಿನ ನಾಗಿಣಿ
ಅಪ್ಪಿ ಮುಕ್ಕುತ್ತಾಳೆ ಸಕ್ಕರೆಯೆನ್ನುವಂತೆ
ಮುತ್ತಿಡುವಾಗ ಮುಖದಲ್ಲಿ ಮೆಲ್ಲಗೆ ಹಲ್ಲೂರುತ್ತಾಳೆ
ರಕ್ತದ ರುಚಿಹಿಡಿದು ಮೈಯ ಗುರುತು ಹಾಕುತ್ತಾಳೆ
ಹಲ್ಲೂರಿದ ಮೈಯಲ್ಲಿ ಗುಲ್ಲೊಂದು ಸೇರುತ್ತದೆ
“ಮೈ ಬಿಡುವವರೆಗೆ ದೆವ್ವವಾಗಿ ಕಾಡುತ್ತದೆ”
ಅಜ್ಜನ ಮಾತು ಕೇಳಿ ತುಟಿಮರೆಯಲ್ಲಿ ನಕ್ಕೆ
ಜೊತೆಗೇ ದುಃಖಪಟ್ಟೆ!
ಅರುಳು ಮರುಳಾದ ಮೇಲೆ ನಾನಂತೂ ಇರಬಾರದೆಂದು
ಅಗಲೇ ಉರುಳು, ಹೊಳೆ, ಬಾವಿಯೆಲ್ಲ ಯೋಚಿಸಿ
ಮಲಗಿದೆ.
ಬೆಳಿಗ್ಗೆ ಎದ್ದು ತೆರೆದರೆ ಬಾಗಿಲು
ಒಳಗೆ ಬಿತ್ತು ಬೆಳೆದ ಹಗಲು,
ಜೊತೆಗೇ ಒಳತೂರಿತು ಸುದ್ದಿಯ ಹೆಗಲು.
ಅವ್ವನ್ನ ಅರಸುವಾಗ ದೆವ್ವ ಕಂಡಂತಾಗಿ
ಗಾರಾಗಿ ಜೋರಾಗಿ ಕೂಗಿದೆ.
“ನೀ ಯಾರೆ ಇಲ್ಲಿ, ನನಗೇನು ಸಂಬಂಧ” ಎಂದೆ
ಸುದ್ದಿ ನಕ್ಕಳು, ಬೆನ್ನು ತಿರುವಿದಳು-ಅಲ್ಲಿ
ವಿಳಾಸ ನನ್ನದೆ, ಸೀಲು ಶಿವಮೊಗ್ಗೆಯದೆ
ಸಂಬಂಧವಿರದಿದ್ದರೂ ಇವಳು ನನ್ನವಳೆ!
ಉಕ್ಕಿದ ಕೋಪದಲ್ಲಿ ಥಟ್ಟನ ತೋಳು ಸೊಕ್ಕಿ
ಎತ್ತಿ ಒಂದು ಕೊಟ್ಟೆ.
ಬಿಗಿದರೆ ಕೆನ್ನೆಗೆ ಬಾಯಿಬಿಟ್ಟದ್ದು ಹೊಟ್ಟೆ
ಬಸಿರಿನಲ್ಲೋ ಒಂದು ಕೊಳೆತ ಮೊಟ್ಟೆ!
ಜೀವವಾಗಿ ಬೆಳೆಯಬೇಕಿದ್ದ ಭ್ರೂಣ
ಗರ್‍ಭಸ್ರಾವವಾಗಿ ಸಾಯುವುದೆ?
ಅನ್ಯಾಯಕ್ಕೆ ಉಸ್ಸೆನಿಸಿ ಉಸಿರು ಸೋತು
ಎಲ್ಲ ಆಚೆ ಚೆಲ್ಲಿದೆ;
ತೋಚದೆ,
ಗೂಬೆ ಮೆಟ್ಟಿದ ಮನೆಯಲ್ಲಿ ಕೂತೆ.
*****