ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು
ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು.
ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು
ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು!
ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ
ಕಡಲ ಚಿತ್ರವನು ಕಣ್ಣಾಗಿ ಈಜಿದೆವು.
ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ
ಕೋಪಗತ್ತರಿ ಬಾಯ್ಗೆ ಕೈಕಾಲುಗಳ ತೆತ್ತು,
ಮುಖಸತ್ತು ನರಳುವೆಷ್ಟೋ ಮಾತ ಎಡೆ ಹಿಡಿದು
ಹೆಕ್ಕಿ ಕರುಣೆಯಲಿ ಮುಖ ಮೈ ಸವರಿ ನೇಹದಲಿ,
ಗತಜೀವನದ ಶೋಕಕಥೆಗೆ ಕಿವಿಗೊಟ್ಟಿರಿ,
ಮೈತಿದ್ದಿ ಮತ್ತೆ ಮುನ್ನಿನ ಬಾಳನಿತ್ತಿರಿ.
ಮಾಸಿದ ಮಹಾಚಿತ್ರಗಳ ಗೆರೆಗಳನು ತಿದ್ದಿ
ಮತ್ತೆ ಮೆರುಗಿತ್ತ ನುಡಿಚಿತ್ರಕಾರರು ನೀವು;
ಬಿತ್ತದಲಿ ಮರ ಕಂಡ ಬುದ್ಧಿಭೀಮರು. ನಮ್ಮ
ನುಡಿಗಂಟನೆಷ್ಟೊ ಬಿಚ್ಚಿದಿರಿ, ಮೆಚ್ಚುವ ರೀತಿ
ಹೊಚ್ಚಿದಿರಿ ಶಾಸ್ತ್ರವಸ್ತ್ರವನು ಕಾವ್ಯದ ಮೈಗೆ.
ಮುಖದೆಲ್ಲ ಚೆಲುವು ಮಡಿ ಗೆಲುವು ಎತ್ತರ ನಿಲುವೆ
ಗೆರೆಗೊಂಡಿತೆಂಬಂತೆ ಸ್ವಲ್ಪ ಬರೆದಿರಿ. ಏಕೆ,
ಹತ್ತು ತಲೆ ಬೇಕೆ ಚೆಲುವನು ಮೆರೆಸೆ? ರಾಮರುಚಿ;
ಎಲ್ಲ ಬಳಸಲೆಬೇಕು ನಿತ್ಯಪಾರಾಯಣಕೆ!
*****