ನೀನೇನೊ ನಿಜವಾಗಿ ಮಂತ್ರಿ.
ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು,
ಕಂತ್ರಿಜನಗಳ ಬಿಡು,
“ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ
ಸುಟ್ಟರೆ ನೊಸಲಿಗೆ ವಿಭೂತಿಯಾಗಿ
ತಟ್ಟದೇ ಹಾಕಿದರೆ” ಕೊಳವೆ ಗೊಬ್ಬರವಾಗಿ
ನಾರಿದರು ಬೀಗಿ ಮೆರೆಯುವ ಭಂಡರನು ಸುಡು.
ತಂತ್ರಗಳ ಮರೆಯಿರದೆ ಮಂತ್ರವಾಯಿತು ಮಾತು ನಿನ್ನಲ್ಲಿ;
ಎಸೆದ ಮಾತೆಲ್ಲ ಮಸೆದಲುಗಾಗಿ ಇಂದಿಗೂ
ಆಡುತಿದೆ ದಟ್ಟೈಸಿ ಬೆಳೆದ ಕಗ್ಗಾಡಲ್ಲಿ.
ಲಿಂಗಕಲ್ಲಿನ ಮೇಲೆ ಬದುಕ ಒಗೆಯಲು ಹೊರಟ
ರಜಕ ನಿನಗೆ
ಎಲ್ಲರೂ ಬಳಗ, ನಾಟಕದ ಜಗಲಿಯ ಮೇಲೆ
ಲೋಕಸಂವಾದ, ಕಟ್ಟೀಕಾಂತ ಒಳಗೆ.
ಬಾಳಬಲ್ಲದೆ ಸಂತೆಯಲಿ ಸಲಗ? ಆದರೂ
ಸಿಕ್ಕಿಬಿದ್ದಿದೆ ಕಡೆಗೆ ದೊಂಬಿದಾಸರ ಕೈಗೆ!
ಗಂಟೆ, ಮಂಟಪ, ಭಾರಿ ಬೆಳ್ಳಿ ಸಂಪುಟದಲ್ಲಿ
ಅದಕ್ಕೆ ಊರಿನ ನಡುವೆ ಮೆರವಣಿಗೆ.
(ನಾ ಬಲ್ಲೆ ಒಳಗೊಳಗೆ ನಗು ನಿನಗೆ)
ನಿನ್ನೆ ಪಟದೆದುರಿಗೇ
ತಲೆವಾಗುತಿದೆ ಏತ,
ಕೈಮುಗಿದು ಇಕ್ಕುಳ
ಗಿಳಿಯ ಹಿಂಡೇ ನೆರೆದು ಕಲಿತಿದ್ದ ಒದರುತಿದೆ.
ಅಯ್ಯಾ
ನಾವು ಗಳಿಸಿದ್ದೆಲ್ಲ
ನೀ ಕೊಟ್ಟ ದ್ರಾಕ್ಷಿಗಳ ಹುಳಿಸಿ
ಮದ್ಯವ ಇಳಿಸಿ
ಕುಡಿವ ಕಲೆಯ,
ಓಡೆತ್ತ ಬಲ್ಲುದೊ ಅವಲಕ್ಕಿಯ ಸವಿಯ?
ಕತ್ತೆ ತಿಳಿದೀತೆ ಹೊತ್ತಿರುವ ಗಂಧದ ಬೆಲೆಯ?
ಜನ ಬಾಳಲೆಂದು ದುಡಿದವ ನೀನು ಉತ್ಸವದ ಚಿತ್ರವಾಗಿ
ನಿನ್ನ ನುಡಿ ಅಚ್ಚಾಗಿ ಬೈಂಡಾಗಿ
ಬೀರುವಿಗೆ ಸಿಂಗಾರವಾಗಿ,
ಸಂದ ಗೌರವಕಾಗಿ
ನಗು ನಿನಗೆ,
ಕಣ್ಣೀರು ನನಗೆ.
*****