ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ,
ನಿಜವಾಗಿ
ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ.
ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ
ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ.
ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ
ನಾನು ಜಾಣನಂತೆ ಕಾಣಬೇಕೆಂದು ಸಿದ್ಧನಾದಾಗ
ನನ್ನೊಳಗಡಗಿರುವ ಒಬ್ಬ ಮೂರ್ಖ
ನನ್ನ ಬಾಯನ್ನು ತುಂಬಿ ನಾಲಗೆಯ ಮೇಲೆ ನರ್ತಿಸುತ್ತಾನೆ.
ಮತ್ತೆ ಕೆಲವೊಮ್ಮೆ ಹಲವು ಗಣ್ಯರ ನಡುವೆ
ನಾನು ತೂಕಡಿಸುತ್ತಿರುವಾಗ
ಒಳಗಿನ ಧೈರ್‍ಯವನ್ನೆಲ್ಲ ಕೂಡಿಸಿಕೊಂಡು
ಧೀರನಂತಿರಬೇಕೆಂದರೆ
ನನಗೆ ಗೊತೇ ಇರದ ಹೇಡಿ ಸಾವಿರ ಹಿಂಜರಿಕೆಗಳೊಂದಿಗೆ.
ನನ್ನ ಇಡೀ ಅಸ್ತಿಪಂಜರದ ಮೇಲೆ
ಸವಾರಿ ಮಾಡುತ್ತಾನೆ,
ನಾಲ್ಕಂತಸ್ತಿನ ಸುಂದರ ಮನೆಗೆ ಬೆಂಕಿ ಬಿದ್ದಾಗ
ಫೈರ್ ಮ್ಯಾನನ್ನು ಕರೆದರೆ
ಡಿಡಿಟಿ ಹೊಡೆಯುವವನು ಓಡಿಬರುತ್ತಾನೆ :
ನಾನೇ ಅವನು. ನಾನು ಮಾಡಬಹುದಾದ್ದು ಏನೂ ಇಲ್ಲ.
ನನ್ನನ್ನು ನಾನು ಹೇಗೆ ಒಗ್ಗೂಡಿಸಿಕೊಳ್ಳಲಿ?
ನಾನು ಓದುವ ಪುಸಕಗಳಲ್ಲಿ ಹೀರೊಗಳು
ಸಿಂಹ ಸದೃಶರು, ಆತ್ಮ ವಿಶ್ವಾಸ ಭರಿತರು.
ಅವರ ಕಥೆ ಓದಿದರೆ ನನಗೋ
ಅಸೂಯೆಯಿಂದ ಸಾಯಬೇಕೆನಿಸುತ್ತದೆ.
ಸಿನಿಮಾಕ್ಕೆ ಹೋದರೆ
ಗಾಳಿಯಲ್ಲಿ ಸುಂಯ್ ಗುಡುವ ಬುಲೆಟ್ಟುಗಳ ನಡುವೆ
ಆರಾಮವಾಗಿ ಓಡಾಡುವ ಕೌಬಾಯ್ಗಳನ್ನು ಕಂಡು ಹೊಟ್ಟೆಕಿಚ್ಚಾಗುತ್ತದೆ.
ಎಲಾ, ಅವರ ಕುದುರೆಗೂ ಎಷ್ಟೊಂದು ಧೈರ್ಯ ಅನ್ನಿಸಿಬಿಡುತ್ತದೆ.
ಒಳಗಿನ ಉತ್ಸಾಹಿಯನ್ನು ಬಾರೆಂದು ಕರೆದರೆ
ನನ್ನೊಳಗಿಂದ ಅದೇ ಮುದಿ ಸೋಮಾರಿ ಆಲಸಿ ಕಾಣಿಸಿಕೊಳ್ಳುತ್ತಾನೆ.
ಅದಕ್ಕೆಂದೇ ನಾನೆಂದರೆ ಯಾರೆಂದು ನನಗೆ ತಿಳಿಯುವುದೇ ಇಲ್ಲ.
ನಾನೆಂದರೆಷ್ಟು ಜನ? ಈಗಿರುವವರು ಯಾರು?
ಗೊತ್ತೇ ಆಗುವುದಿಲ್ಲ,
ರಾಜನಂತೆ ಕರೆಗಂಟೆಯೊತ್ತಿ, ನನ್ನನ್ನು, ನನ್ನೊಳಗಿನ ನಿಜವಾದ ನನ್ನನ್ನು
ಕರೆಯಬೇಕು ನಾನು. ನಿಜವಾದ ನಾನು ಸಿಗಬೇಕಾದರೆ
ನಾನು ಮರೆಯಾಗಿಬಿಡಬಾರದಲ್ಲ.
ಈಗ, ಬರೆಯುತಿರುವಾಗ, ನಾನು ದೂರದಲ್ಲಿದ್ದೇನೆ;
ವಾಪಸ್ಸು ಬರುವಷ್ಟು ಹೊತ್ತಿಗೆ ನಾನು ಹೊರಟುಹೋಗಿರುತ್ತೇನೆ.
ಹೀಗೆ ನನಗೆ ಆಗುವ ಹಾಗೇ ಬೇರೆಯವರಿಗೆ ಕೂಡಾ,
ಆಗುತ್ತದೆಯೇ ಎಂದು ತಿಳಿಯುವ ಆಸೆ ನನಗೆ.
ನನಗೆ ನಾನು ಕಾಣಿಸುವಂತೆ ಅವರಿಗೂ ಅವರು ಕಾಣುತ್ತಾರೆಯೋ?
ಈ ಸಮಸ್ಯೆ ತಳಮುಟ್ಟ ಶೋಧಿಸಿದ ಮೇಲೆ
ಸ್ಕೂಲಿಗೆ ಹೋಗಿ ಪಾಠ ಹೇಳುತ್ತೇನೆ.
ನನ್ನ ಸಮಸ್ಯೆ ವಿವರಿಸಲು ಹೊರಟರೆ
ನನ್ನ ಬಗ್ಗೆ ಅಲ್ಲ, ಭೂಗೋಳದ ಬಗ್ಗೆಮಾತಾಡುತ್ತೇನೆ.
*****
ಮೂಲ: ಪಾಬ್ಲೋ ನೆರುಡಾ