ಪತಿತ ದೇವತೆಗಳು –
ನೀರೊಲೆಯಿಂದ ಹಾರಿದ ಬೂದಿ ಕಣಗಳು,
ಸೀದ ಅನ್ನದ ನಡುವೆ ಸಿಕ್ಕುವ ಕೋಸಿನ ಎಲೆಗಳು,
ಕೆಂಪು ಬಳಿದ ಅಲಿಕಲ್ಲುಗಳು,
ಚಿನ್ನದ ನಾಲಗೆಯಲ್ಲಿ
ನೀಲಿ ಜ್ವಾಲೆಗಳು.
ಪತಿತ ದೇವತೆಗಳು-
ಇರುವೆಗಳು,
ಸತ್ತವರ ಉಗುರ ಬುಡದಲ್ಲಿ ಕಾಣುವ ಅರ್ಧ ಚಂದ್ರಗಳು.
ಸ್ವರ್ಗದ ದೇವತೆಗಳು –
ಹದಿಹರೆಯದ ಹುಡುಗಿಯ ಒಳ ತೊಡೆಗಳು,
ನಾಚಿಕೆಯ ದೇಶದಲ್ಲಿ ಹೊಳೆಯುವ ನಕ್ಷತ್ರಗಳು,
ಪರಿಶುಭ್ರ ತ್ರಿಕೋನಗಳು, ವೃತ್ತಗಳು.
ನಟ್ಟನಡುವೆ, ನಿಶ್ಚಲ, ನಿಶ್ಯಬ್ದ.
ಪತಿತ ದೇವತೆಗಳು –
ಆಸ್ಪತ್ರೆಯ ಹೆಣದ ರೂಮಿನ ತೆರೆದಿಟ್ಟ ಕಿಟಕಿಗಳು,
ಹಸುವಿನ ಕಣ್ಣುಗಳು, ಹಕ್ಕಿಯ ಅಸ್ತಿಪಂಜರಗಳು,
ಬೀಳುವ ವಿಮಾನಗಳು,
ಸತ್ತಸೈನಿಕರ ಪುಪ್ಪುಸದ ಮೇಲೆ ಹಾರುವ ನೊಣಗಳು,
ಕುರುಡು ಚಿತ್ತೆಮಳೆಯ ಹನಿಗಳು.
ಹೆಂಗಸಿನ ಅಂಗೈಯ ಮೇಲೆ
ಲಕ್ಷ ದೇವತೆಗಳು
ಕಸೂತಿಯಲ್ಲಿ ಬಿಳಿಯ ಹಾಯಿಯಂತ
ದೀರ್‍ಘ ಕವಿತೆಯ ಬಿಡಿ ಅಕ್ಷರಗಳು.
ಎಲ್ಲವನ್ನೂ ರಾಶಿಮಾಡಿಕೊಂಡು
ಬೇವಿನ ಮರಕ್ಕಿಟ್ಟು ಮೊಳೆ ಜಡಿಯಬಹುದು.
ಚಾವಣಿಗೆ ಅಂಟಿಕೊಂಡು ಮಲಗಿ
ಹನಿ ಹನಿಯಾಗಿ ಉದುರುತ್ತ ಕೆಳಗೆ ಬೀಳುತ್ತವೆ.
*****
ಮೂಲ: ಟಾಡೆಯೂಸ್ ರೊಸೆವಿಕ್ಸ್