ನೀಲಿ ಅಂಬರದ ತಿಳಿಬೆಳದಿಂಗಳು
ಸಾವಿರಾರು ಚುಕ್ಕಿ ಮಿನುಗು ತೇಲಿ
ಹಾರಿದ ಬೆಳ್ಳಕ್ಕಿ ಸಾಲಿನಲ್ಲಿ ಮೋಡಗಳು
ಎಚ್ಚರಗೊಂಡು ದಾವಾ ಹರಡಿ ಹರಡಿ
ಪೃಥ್ವಿ ಪುಲಕಗೊಂಡಳು ಬಯಲ ತುಂಬೆಲ್ಲಾ ಹಸಿರು.
ಚಿಗುರು ಸ್ಪರ್ಶಕ್ಕೆ ಮುದಗೊಂಡ ಬೀಜ
ಶಕ್ತಿ ವಿಜೃಂಭಿಸಲು ಒಡಲ ತುಂಬಿಕೊಂಡಿತು
ಹುಣ್ಣಿಮೆ ಎಲ್ಲೆಲ್ಲೂ ರಸಪಾಕ ಕುದಿಯ
ಪರಿಮಳದ ಹಾದಿ ಹರವಿಕೊಂಡಿತು
ಇಹದ ಕೊಳದ ತುಂಬ ಕೆಂದಾವರೆ
ಅರಳಿತು ಮಣ್ಣ ತುಂಬೆಲ್ಲಾ ಹೊನ್ನು ಹಳದಿ.
ಸಮುದ್ರದ ನೀರೆಲ್ಲಾ ತಾಯಿಯ ಎದೆ
ಹಾಲಾಗಿ ತುಂಬಿದ ಬೆಳಸಿಕಾಳು ಚಿಲ್ಲನೆ
ಚಿಮ್ಮಿಹಾಸಿ ಎಲ್ಲೆಲ್ಲೂ ಆರ್‍ದ್ರತೆಯ ಬೆಳಕು
ಆದಿಯಿಂದ ಅಂತ್ಯದವರೆಗೆ ಅವಳ
ಮಡಿಲು ಸುರಿದ ಭಾವ ತರಂಗದ
ಮಮತೆಯ ರೂಹುಗೊಂಡ ಹಕ್ಕಿ ಹಾಡು ಕವಿತೆ.
ಎಲ್ಲೆ ಮೀರಿದ ಭಾವ ಅರ್ಥ ಐಶ್ವರ್ಯ
ಒಡಲ ಸಿರಿ ಹರಡಿ ಗರಿಗಳ ಗುಂಟ ಹರಿದಗಾಳಿ
ಅದರ ರೊಟ್ಟಿಗೆ ಹರಡಿದ ಹನಿ ಸಿಂಚನ ಇಬ್ಬನಿ
ಬೆಳದಿಂಗಳು ಚಕ್ಕಿ ಮೋಡಗಳು ಇಳಿದು
ಬಂದ ಗರ್ಭ ಸೂಸಿದಳು ತಿಳಿಬೆಳಕು.
ವಸುಂಧರಾ ಈಗ ಭೂಮಿ ತಾಯಿಯಾದಳು
ಎಲ್ಲೆಲ್ಲೂ ಚಿಲಿಪಿಲಿ ಕಂಪನಗಳು.
*****