ಬಾಗೆಳೆಯಾ ಅಂಗಳಕೆ ಸಾಲು ದೀಪಗಳ
ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ.
ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ
ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ
ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ
ಹಚ್ಚೋಣ ಸುರುಸುರು ಬತ್ತಿ ನನ್ನ ನಿನ್ನ ಕಣ್ಣೊಳಗಿನ
ನೂರು ಕನಸುಗಳ ಬಾನಿನಲಿ ಅರಳಿಸಲು.
ಬಾ ಗೆಳೆಯ ಮನೆಗೆ ಸುಮ್ಮನೆ
ಸಿಹಿ ಉಂಡು ಸಿಹಿ ಹಂಚೋಣ ಮೌನವಾಗಿ ಕೈ ಕೈ ಹಿಡಿದು
ಬದುಕು ಹಂಚುವ ವಿಸ್ತಾರವಿದು ನವ ಉಲ್ಲಾಸ ಹರಡಲಿ ಪ್ರತಿದಿನವೂ
ಬಾ ಗೆಳೆಯಾ ನನ್ನ ಕತ್ತಲಿನ ದಾರಿಯಲಿ
ಬೆಳಕಿನ ಕಿರಣ ಸೂಸಿ ನವ ಉಲ್ಲಾಸ ಹರಡಲಿ ಪ್ರತಿ
ಮುಂಜಾನೆಯಲಿ ಬೆಳ್ಳಕ್ಕಿ ಹಿಂಡು ಸಾಗಲಿ ನೀಲಿ ಆಕಾಶದಲ್ಲಿ.
ಬಾ ಗೆಳೆಯ ಎಲ್ಲಾ ಭೀತಿಗಳ ಹೊಡೆದೋಡಿಸಿ
ಅವರ ಚಿತ್ತ ಮನದ ಸುತ್ತ ಬೆಳಗಲೆಂದು ಜ್ಯೋತಿ.
ಪ್ರತಿ ಹಗುರ ಭಾವದಲಿ ಎಲ್ಲಾ ರಾಗಗಳು ಹಾಡಾಗಿ ಎದೆಗಿಳಿವ ಹೊತ್ತಿನಲ್ಲಿ.
ಬಾ ಗೆಳೆಯಾ ಮಿಂಚು ದೀಪಗಳಾಗಿ ಎಲ್ಲವನು
ಮರೆಸಿ ಹರಿಸಿ ಸ್ಪುರಿಸಿ ಪ್ರೀತಿಯ ಎಣ್ಣೆಯಲಿ
ಬತ್ತಿಯಾಗುವ ಹಂಬಲಕೆ ಕರಗದ ನೇಯ್ಗೆಯಾಗು ಬಾಳಿನ ಬಟ್ಟೆಯಲಿ.
*****