Home / ಲೇಖನ / ವಿಜ್ಞಾನ / ಪ್ರಾಣಿ – ಪಕ್ಷಿಗಳ ನಿದ್ರೆಯ ವಿಭಿನ್ನ ಕ್ರಮ

ಪ್ರಾಣಿ – ಪಕ್ಷಿಗಳ ನಿದ್ರೆಯ ವಿಭಿನ್ನ ಕ್ರಮ

ನಿದ್ರೆ ಒಂದು ನಿಸರ್‍ಗ ಸಹಜ ಕ್ರಿಯೆ. ಈ ಭೂಮಂಡಲದಲ್ಲಿರುವ ಮನುಷ್ಯನಾಗಲಿ, ಪ್ರಾಣೀ ಪಕ್ಷಿಗಳಾಗಲಿ ನಿದ್ರಿಸದೇ ಇರಲಾರವು. ಮನುಷ್ಯನಿಗಂತೂ ಆಹಾರಕ್ಕಿಂತಲೂ ನಿದ್ರೆಯೇ ಮುಖ್ಯ. ದಿನದಲ್ಲಿ ಎಂಟು ಗಂಟೆಗಳ ಕಾಲ ನಿದ್ರೆಯಲ್ಲಿ ಕಳೆಯುತ್ತಾನೆ. ಇದೇ ರೀತಿ ಪ್ರಾಣಿ-ಪ್ರಕ್ಷಿಗಳೂ ಕೆಲಸಮಯ ನಿದ್ರೆಯಲ್ಲಿ ಕಳೆಯುತ್ತವೆ. ಅವುಗಳ ನಿದ್ರಾಭಂಗಿ ಮತ್ತು ಸಮಯ ಬೇರೆ ಬೇರೆಯಾಗಿರಬಹುದು. ಅಂತಹ ಕೆಲವು ಕುತೂಹಲಕರ ಉದಾಹರಣೆಗಳು ಇಲ್ಲಿವೆ.

ಹೆಚ್ಚಿನ ಪಕ್ಷಿಗಳು ಹಗಲಿನಲ್ಲಿ ಎಚ್ಚರವಿದ್ದು ರಾತ್ರಿ ಮಲಗುತ್ತವೆ. ಬಾವಲಿಗಳು ಗವಿಯ ಗೋಡೆಗೋ, ಗಿಡದ ಟೊಂಗೆಗೋ ಅಥವಾ ಹಳೆಯ ಕಟ್ಟಡದಲ್ಲಿಯೋ ತಲೆಕೆಳಗಾಗಿ ನಿದ್ರಿಸಿದರೆ, ಕೋಳಿಗಳು ಗೂಡಿನಲ್ಲಿ ಕುಂತೇ ನಿದ್ರಿಸಿ ತಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳುತ್ತವೆ.

ಪಕ್ಷಿಲೋಕದ ಅತ್ಯಂತ ಸಣ್ಣ ಪಕ್ಷಿ ಎಂಬ ಖ್ಯಾತಿಗೆ ಹೆಸರಾದ ಹಮ್ಮಿಂಗ್ ಬರ್‍ಡ್ ನಿದ್ರೆಯ ಮಟ್ಟಿಗೆ ಕುಂಭಕರ್‍ಣನಂತೆ! ಅದು ರಾತ್ರಿಯಿಡೀ ನಿದ್ರೆಯಲ್ಲಿ ಕಳೆಯುತ್ತದೆ. ನಿದ್ರೆಯಲ್ಲಿದ್ದಾಗ ಹೆಚ್ಚು ಕಡಿಮೆ ಸತ್ತಂತೆಯೇ ಇರುವ ಈ ಹಕ್ಕಿಯನ್ನು ಕೈಹಾಕಿ ಸುಲಭವಾಗಿ ಎತ್ತಿಕೊಂಡು ಬರಬಹುದು. ಆಗ ಅದಕ್ಕೆ ಮನುಷ್ಯರ ಸ್ಪರ್‍ಶದ ಅರಿವು ಕೂಡ ಇರುವುದಿಲ್ಲ!

ಕಾಮನ್ ಸ್ವಿಫ್ಟ್ ಪಕ್ಷಿ ಎರಡು ಮೂರು ವರ್‍ಷಗಳವರೆಗೆ ಆಕಾಶದಲ್ಲಿ ಹಾರಾಡುತ್ತಲೇ ಇರುತ್ತದೆ. ಕ್ರಿಮಿಕೀಟಗಳ ರೂಪದಲ್ಲಿ ಗಾಳಿಯಲ್ಲಿ ಸಿಗುವ ಆಹಾರ ಸೇವಿಸುತ್ತದೆ. ಹೀಗಾಗಿ ಅದಕ್ಕೆ ಕೆಳಗೆ ಬರುವ ಅವಶ್ಯಕತೆಯೇ ಇಲ್ಲ. ಹಾರಾಡುತ್ತಲೇ ನಿದ್ರಿಸತ್ತದೆ. ಸೂಟಿ ಟರ್‍ನ್ ಪಕ್ಷಿಯೂ ಕೂಡ ಅಷ್ಟೇ! ಸುಮಾರು ೩ ರಿಂದ ೪ ವರ್‍ಷಗಳವರೆಗೆ ಸತತವಾಗಿ ಹಾರುತ್ತ ಇರಬಲ್ಲದು. ಹಾರಾಡುತ್ತಲೇ ನಿದ್ರೆ ಮಾಡಬಲ್ಲದು.

ಬೆಕ್ಕು ತನ್ನ ಮೈಯನ್ನು ದುಂಡಗೆ ಬಾಗಿಸಿ ಮಲಗಿದರೆ ನಾಯಿ ಮತ್ತಿತರ ಪ್ರಾಣಿಗಳು ಮನುಷ್ಯನಂತೆ ಒರಗುತ್ತವೆ. ಕುದುರೆ ನಿಂತೇ ನಿದ್ರಿಸುತ್ತದೆ. ಸಿಂಹಗಳು ದಿನದ ೨೦ ತಾಸುಗಳನ್ನು ವಿಶ್ರಾಂತಿಯಲ್ಲಿ ಅಥವಾ ನಿದ್ರೆಯಲ್ಲಿ ಕಳೆಯುತ್ತವೆ. ಧ್ರುವ ಪ್ರದೇಶದ ಬಳಿಯ ಹಿಮಕರಡಿಗಳ ಶೀತನಿದ್ರೆಯೇ ಒಂದು ವಿಶೇಷ. ಶೀತಕಾಲದಲ್ಲಿ ಆರು ತಿಂಗಳ ತನಕ ಆಹಾರವನ್ನು ತೆಗೆದುಕೊಳ್ಳದೇ ಅವು ನಿದ್ರಿಸುತ್ತವೆ.

ಉತ್ತರ ಅಮೆರಿಕದಲ್ಲಿರುವ ಕೆಲವು ಅಳಿಲುಗಳು ವರ್‍ಷದಲ್ಲಿ ೯ ತಿಂಗಳನ್ನು ಗಾಢ ನಿದ್ರೆಯಲ್ಲಿಯೇ ಕಳೆಯುತ್ತವೆ.

ಮೀನುಗಳು ಸಸ್ತನಿಗಳಂತೆ ನಿದ್ರೆ ಮಾಡುವುದಿಲ್ಲ. ಕತ್ತಲಲ್ಲಿ ಅವುಗಳ ದೇಹದ ಕ್ರಿಯೆ ಮಂದಗತಿಯಲ್ಲಿರುತ್ತದೆ. ೨೦ ನಿಮಿಷಗಳವರೆಗೆ ನಿದ್ರಿಸಿ ಮತ್ತೆ ಚುರುಕಾಗುತ್ತವೆ. ಆ ಸಮಯದಲ್ಲಿ ಅವು ಏನನ್ನೂ ತಿನ್ನುವುದಿಲ್ಲ. ನಿದ್ರೆ ಬಂದಾಗ ಸ್ವಲ್ಪ ತೂಕಡಿಸಿ ಮತ್ತೆ ಎಚ್ಚರವಾಗುತ್ತವೆ. ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ಚುರುಕಾಗುತ್ತವೆ.

‘ಲಂಗ್ ಫಿಶ್’ ಹೆಸರಿನ ಮೀನು ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತದೆ. ಬೇಸಿಗೆಯಲ್ಲಿ ನೀರಿನ ಅಭಾವವಾದಾಗ ಇದು ಕೆಸರು ನೆಲದಲ್ಲಿ ಬಿಲ ತೋಡಿಕೊಂಡು ಬಿಲದ ಬಾಯನ್ನು ಮುಚ್ಚಿ ಮುದುಡಿ ಮಲಗುತ್ತದೆ. ಮಳೆ ಬಂದು ನೀರು ದೊರೆತಾಗ ಮೇಲೆದ್ದು ಬರುತ್ತದೆ. ಬೇಸಿಗೆಯಿಂದ ಮಳೆಗಾಲದವರೆಗಿನ ಈ ಅವಧಿಯಲ್ಲಿ ಅದು ನಿದ್ರೆ ಮಾಡುತ್ತದೆ. ಈ ಮೀನು ೨ ರಿಂದ ೩ ವರ್‍ಷಗಳವರೆಗೂ ನಿದ್ರೆ ಮಾಡಿದ ದಾಖಲೆಗಳಿವೆ.

ಡಾಲ್ಫಿನ್‌ನ ನಿದ್ರೆ ಇನ್ನೂ ವಿಚಿತ್ರ. ಅದರ ಮಿದುಳು ಎರಡು ಪ್ರತ್ಯೇಕ ಭಾಗಗಳಾಗಿ ಕಾರ್‍ಯ ನಿರ್‍ವಹಿಸುತ್ತದೆ. ಬಲಭಾಗದ ಮಿದುಳು ನಿದ್ರೆಗೊಂಡಾಗ ಎಡಭಾಗದ ಮಿದುಳೂ ಎಚ್ಚೆತ್ತಿರುತ್ತದೆ. ಎಡಭಾಗದ ಮಿದುಳು ಮಲಗಿದಾಗ ಬಲಭಾಗದ್ದು ಎಚ್ಚೆತ್ತಿರುತ್ತದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...