ಎಲ್ಲಾ ಹಕ್ಕಿಗಳು ಹಾರಿ ಹೋದವು
ಬರಡು ಮರದಲಿ ಹಸಿರು ಕಾಣದೆ
ಎಲ್ಲಾ ಚಿಕ್ಕಿಗಳು ಮಾಯವಾದವು
ಪ್ರೀತಿ ಕಳೆದ ನೀಲಿ ಆಗಸದಲಿ.
ಅಂಬರದ ಮುನಿಸಿಗೆ ತೆರೆಯಲಿಲ್ಲ
ಅರಿವಿನ ರೆಕ್ಕೆಗಳು ಪಟಪಟ
ಅಕ್ಷಗುಂಟ ಇಳಿದ ಹನಿಗಳು
ಮೋಡವಾಗಲಿಲ್ಲ ಬಿರು ಬಿಸಿಲಿನಲಿ.
ಹಾರಿ ಹೋದ ಹಕ್ಕಿಯ ರೆಕ್ಕೆಯ ನೆರಳು
ನೆತ್ತಿ ಸವರಲಿಲ್ಲ ಇಳಿ ಸಂಜೆಯಲಿ
ಕೌನೆರಳಿನ ಕೌದಿಯ ಅಡಿಯಲಿ
ಮುದುಡಿ ಮಂಕಾಯಿತು ಚಿಕ್ಕಿ ಮಿನುಗುಗಳು.
ಹಕ್ಕಿ ಚಿಕ್ಕಿ ಬಂಧ ಅನುಬಂಧಕೆ
ಪ್ರೇಮ ಕಾವ್ಯ ಅರಳಲಿಲ್ಲ ಶಬ್ದಗಳಲಿ
ಮನದಾಚೆಯ ಮಾತುಗಳು ಪದಗಳಾಗಲಿಲ್ಲ
ನಾ ನೀ ಎದುರು ಬದರು ಕುಳಿತಾಗ.
ಯಾವ ಎಳೆಗಳಲಿ ಪೋಣಿಸಲಿ ಚಿಕ್ಕಿಗಳ
ಯಾವ ಹಾಯಲಿ ತೇಲಿಸಾಲಿ ಹಕ್ಕಿಗಳ
ಆಲಯ ಬಯಲಲಿ ಭಾವ ಅನುಭಾವದ
ಕಾರ್ತೀಕ ಹೇಗೆ ಬೆಳಗಲಿ ವಸಂತ ಚಿಗುರಿಸಲಿ?
*****