ಅಲ್ಲಿ ಮಲ್ಲಿಗೆಯ ಮುಗುಳುನಗೆ
ಮುಗ್ಧತೆಯ ನೋಟ
ಕಣ್ಣುಗಳಲ್ಲಿ ಸಂಜೆಯ ರಾಗರತಿ
ತುಟಿಯಂಚಿನಲಿ ಮಾಯವಾಗದ
ಲಾಸ್ಯ-ಪರಿಭಾಷೆ ಬೇಕಿಲ್ಲ
ಯೌವನದ ಕೋಟೆ ಆಳುತಿಹಳು
ತರುಣಿ,
ಮತ್ತವಳು ಮುಗುದೆ
ಭಾವಲಯದ ಹಯವೇರಿ
ಹದವರಿತು ನಡೆದಿಹಳು
ಅಹಮಿಕೆಯು ಎನಿತಿಲ್ಲ
ಕುಸುಮ ನಯನೆ.
ಅರಿತಷ್ಟು ಆಳ
ನುಡಿದಷ್ಟು ಭಾಷ್ಯ
ಬೊಗಸೆ ತುಂಬುವ ವದನ
ಪಿಕ ಕಂಠ ಭಾಗ್ಯೆ,
ಮೆಚ್ಚದವರಿಲ್ಲ ಮೋಹನಾಂಗಿಯ
ಮಧುರ ನಡೆಯು,
ಹದಿವಯಸ್ಸು ಹಸುಮನಸು
ಹುಸಿಯಿರದ ನುಡಿಯು
ಹಂಗಿನಲಿ ಹಳಹಳಿಕೆ
ಇಂಗಡದ ಗುಡಿ ಬಯಕೆ
ಸ್ವಾಭಿಮಾನವೇ ಗತ್ತು
ಅದೇ ಅವಳ ಸ್ವತ್ತು
*****