ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ
ಅಂದಣವದೆತ್ತಿರಲು ಅಂದವೆನೆ ಪರರೆಲ್ಲ
ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ
ಭಾರತದಿ ಬಂತು ಹೊಳಲು
ಚಂದಿರನು ತಂಬೆಳಕ ನಗುವಿಡಲು ಅಪಹಾಸ
ದಂದಣವನೆತ್ತಿರಲು ಲಗುಬಿಗಿಯ ಪರರಾಳು
ಮಂದಿಗಳು ತಿಳಿದೇಳಲಗೊ! ಯೋಗಿ ಕರೆಯುತಿರೆ
ಬಾರೆನುತ ಬಂತು ಹೊಳಲು
ಕೀಳಕೀಳಲಿ ಪುಟ್ಟಿ ಮೇಲೆ ಮೇಲೇರುತಲಿ
ಆಳುತಲಿ ಜನಮನವ ಶೂಲಕೊಡ್ಡುತ ಸುರಿಸಿ
ಬಾಳ ಜೀವನ ಜಲವನಾಲಿಯರಿಯದಲಳಿಯೆ
ಜನರಿಳಿದು ಬಂದ ಹೊಳಲು
ಕಾಳು ಕಡ್ಡಿಯ ತೂರಿ ಮೇಲೆ ಮೇಲರಿಸುತ
ನಾಳಿನಾ ನವಯುಗಕೆ ಮೇಲೆನಿಪ ಬೀಜಗಳ
ಹೂಳುವರು ಬರಲಾಗಿ ಕಾಲ ಬಂದಿದೆಯೆನುತ
ಜನಜನದ ನುಡಿಯ ಹೊಳಲು
ಇದು ವಹ್ನಿಗಿರಿ ಇದುವೆ ಮಳೆವಹ್ನಿ ಹೊಳೆವಹ್ನಿ!
ಇದುವುಕ್ಕಿ ಧರೆಯೆಲ್ಲ ತಳಮಳಿಸಿ ನಡುಗುತಿದೆ
ಅದೊ! ಸೊಕ್ಕಿದಾಭಾವ! ತಳಹದಿಯು ಕುಸಿಬಿತ್ತು!
ಮರಳುತಿಹ ಯುಗದ ಹೊಳಲು
ಇದು ಸಿಡಿಲು ಕಾರ್ಮೋಡ ಪ್ರಳಯ ಜಲಧಾರೆಯಿವು
ಇದು ಝರಿಯ ಜಲಧಾರೆ ಇಳೆಗಿಳಿವ ದೇವನದಿ!
ಅದೋ! ವಹ್ನಿ ಕಬ್ಬೊಗೆಯು ಅಳಿದನಿವು ಸಿಡಿದವವು
ಚರಕದರೆ ತಿರುಗೆ! ಹೊಳಲು
ವಿಷಘಳಿಗೆ ಪರಜನಕೆ ಮಧುಯೋಗ ಭಾರತಕೆ
ಹಸಿದು ಶಂಕರಿ ನಿಲ್ಲಲದು ಪ್ರಲಯ ಪರಜನಕೆ
ಬಸಿಯಲೆಂಧಕ ರುಧಿರವದುನೆಲಕೆ ಶ್ರೀ ಶಾಂತಿ
ಎನುತೆನುವ ನರರ ಹೊಳಲು
ಹಸುಳೆಯಂದದಿ ನಕ್ಕು ಮಧುರ ಭಾವವ ಬೀರಿ
ಹೊಸತೆರನ ಜಿಹ್ವೆಯಲಿ ಸುಧೆಯ ಜಾಹ್ನವಿಯುದಿಸೆ
ಹೊಸಯುಗದ ಗಂಧವಹನಿದೊ ಗಾಂಧಿ ಏಳುತಿಹ
ಎನುತೆನುವ ನಾಡ! ಹೊಳಲು
ಅಲ್ಲೋಲ ಕಲ್ಲೋಲ ಉದಧಿಗಳು ಎಚ್ಚೆತ್ತು!
ಎಲ್ಲೆಲ್ಲು ಸಲ್ಲಾಪ ಕುದಿವ ಮನದಾಶಯದ
ಹೊಲ್ಲೆ ಹದ ಸುಳಿವಿರದ! ಮಧುಯುಗವು ಮರಳುತಿರೆ
ಉಲ್ಲಾಸದೊರೆಯ ಹೊಳಲು
*****