ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ
ದುಂಡಗಿದ್ದೆವು ನಿಜ. ಆ ಕಾಲದ ಮ೦ದಿಗೆ
ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ
ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ
ನಮ್ಮ ಬಗ್ಗೆ ನಾವೇ ಹೇಳುವುದು ತರವಲ್ಲ
ಕೆಲವರಿಗಾದರೂ ಅದಮ್ಯ ಸ್ಫೂರ್ತಿಯ ಸೆಲೆ-
ಯಾಗಿ ನಾವಿದ್ದುದೇನು ಸುಳ್ಳಲ್ಲವಲ್ಲ, ನಿಜ
ಕೆಲವೊಂದು ವಿಷಯಗಳು ತಿಳಿದಿರಲಿಲ್ಲ ನಮಗೆ
ಮುಚ್ಚುವುದು ಬಿಚ್ಚುವುದು ಎಲ್ಲಿ ಯಾವಾಗ ಹೇಗೆ
ಇತ್ಯಾದಿ. ಈಗ ನೋಡಿದರೆ ಅದೂ ಒಂದು ಮಜ
ಅನಿಸುವುದು ಯಾವ ಮುಚ್ಚುಮರೆ ಕೂಡ ಇರದೆ
ಒಪ್ಪಿಕೊಳ್ಳುವುದು ಸಹಜ ಆಯಾ ಕ್ಷಣದ ಒಲವು
ಆದರೂ ಮೊದ್ದುಗಳೇನಾಗಿರಲಿಲ್ಲ ಬಿಡಿ ನಾವು
ನಿಮಗೇನು ಗೊತ್ತು ನಿಜಕ್ಕೂ ನಮ್ಮ ಎದೆ-
ಯೊಳಗಿನದು? ಚಿತ್ರಿಸಲು ಇದ್ದುದನಿದ್ದ ಹಾಗೆ
ಯಾತಕೆ ಬೇಕು ರಂಗು ರೇಖೆಗಳ ಕಲ್ಪ?
*****