ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ
ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ
ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ
ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ.
ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ
ಕೇಳಿ ಹಾಕಿಸಿಕೊಂಡು ಹೊಡೆದದ್ದೆ ಎಲ್ಲರೂ!
ತೇಗುತ್ತ ಕಾಫಿ ಹೀರುತ್ತ ಮಾತಿನ ನಡುವೆ
ಹೊರಬಂತು ಒಂದೊಂದೇ ವಸ್ತುನಿಷ್ಠ ವಿಮರ್ಶೆ.
“ದೋಸೆಯಾಕಾರ ತಟ್ಟೆಗೆ ಕೊಂಚ ಕಿರಿದಾಯ್ತು”
“ತುಪ್ಪದ್ದು ನೋಡು, ಹೊಟ್ಟೆಗೆ ಕೊಂಚ ಕಷ್ಟವೇ”
“ರೊಟ್ಟಿಹಾಗಲ್ಲ ಇದು ತುಂಬ ಮಿದು, ತುಂಬ ತೆಳು
ತಿಂದದ್ದು ಗೊತ್ತಾಗುವುದೆ ಇಲ್ಲ ಬಲು ಮೋಸ!”
ತಿಂದದ್ದು ನಾಲಿಗೆ ಮಾತಾಡುವುದೂ ನಾಲಿಗೆಯೆ! ಒಂದಕ್ಕೊಂದಕ್ಕೆ
ತಾಳಮೇಳಗಳಿಲ್ಲ; ಇದ್ದರದು ಆದೀತೆ ‘ವಸ್ತುನಿಷ್ಠ ವಿಮರ್ಶೆ’?
*****