ಮಗು ಚಿತ್ರ ಬರೆಯಿತು
ಬೆರಳುಗಳ ಕೊರಳ ಆಲಿಸಿ
ಗೆರೆಯನೆಳೆಯಿತು.
ಪುಟ್ಟ ಮನೆಯೊಂದ ಕಟ್ಟಿ
ಮನೆಯ ಮುಂದೊಂದು ಮರವ ನೆಟ್ಟು
ರೆಂಬೆ ಕೊಂಬೆಗೆ ಎಲೆಯನಿಟ್ಟು
ಎಲೆಯ ನಡುವೆ ಹೂವನರಳಿಸಿ
ಹೂವಿನ ಜೊತೆಗೆ ಹಣ್ಣನಿರಿಸಿ
ಹಿಗ್ಗಿ ನಲಿಯಿತು.
ಮಗು ಚಿತ್ರ ಬರೆಯಿತು
ಬೆರಳುಗಳ ನಡೆ ನೋಡಿ
ಗೆರೆಯನೆಳೆಯಿತು.
ಮನೆಯ ಹಿಂದೊಂದು ಗುಡ್ಡವ ಕರೆದು
ಗುಡ್ಡದ ಮೇಲೊಬ್ಬ ಸೂರ್‍ಯನ ಉರಿಸಿ
ಸಾಲಾಗಿ ಹಕ್ಕಿಗಳು ರೆಕ್ಕೆ ಬೀಸಲು
ಬುಡದಲ್ಲೊಂದು ನದಿಯ ಹರಿಸಿ
ನದಿಯಲ್ಲೊಂದು ದೋಣಿಯ ತೇಲಿಸಿ
ಹಿಗ್ಗಿ ನಲಿಯಿತು.
ಮಗು ಚಿತ್ರ ಬರೆಯಿತು
ಬೆರಳುಗಳ ಭಾವ ಭ್ರಮಿಸಿ
ಗೆರೆಯನೆಳೆಯಿತು.
ಗಿರಗಿರ ಬುಗುರಿ ತಿರುಗಿಸಿ
ಹುಲ್ಲುಹಾಸಿನ ಮೇಲೆ
ಗಾಲಿ, ಗೋಲಿಯನುರುಳಿಸಿ
ಕುದುರೆಗೂ ಕೊಂಬು ಮೂಡಿಸಿ
ಮಣ್ಣಿಗೂ ಕಣ್ಣು ಬರೆದು
ಹಿಗ್ಗಿ ನಲಿಯಿತು.
೨
ಅವ್ವ….
ಘಮ್ಮೆಂದಿದೆ ಹೂ ಮೂಸಿ ನೋಡು
ಸಿಹಿಯಾಗಿದೆ ಮಾವು ಕಿತ್ತುಕೊಡು
ಝಳಝಳ ನದಿಯಿದೆ ಹಾಡು
ಸುಡುವುದಿಲ್ಲ ಈ ಸೂರ್‍ಯ ಮುಟ್ಟಿಬಿಡು
ಎಂದೆಲ್ಲಾ ನುಡಿನುಡಿದು
ಅವ್ವ…..
ಇದು ನಾನು
ಇಗೋ ಇದು ಮನೆಯ ಮುಂದಿನ ದಾರಿ
ಇದು ನನ್ನ ದಾರಿ
ನಾ ನಡೆವ ದಾರಿ ಎಂದೆಲ್ಲಾ ನುಡಿದು
ಪುಟ್ಟಪುಟ್ಟ ಹೆಜ್ಜೆ ಹಾಕಿ
ಹೋದ ಮಗು ಮರಳಲಿಲ್ಲ….
ನಿಮಿಷಗಳು ವರುಷಗಳು
ಮರಳಲಿಲ್ಲ.
೩
ಕಾದು ಕಾದು ಮರುಗಿದಳಾ ತಾಯಿ
ಕಾದು ಕಾದು ಒರಗಿದಳಾ ತಾಯಿ
ಕಾದು ಕಾದು ಕರಗಿದಳಾ ತಾಯಿ
ಒರಗಿದಲ್ಲೆ ಕರಗಿದರೆ ಅವಳೆಂಥಾ ತಾಯಿ?
ಮತ್ತೆ ಕತ್ತೆತ್ತಿದಳು ಗಿಡವಾಗಿ
ಗಿಡದೊಳಗೆ ಹೂವಾಗಿ
ಹೂವರಳಿ ಪರಿಮಳಿಸಿ
ಗಾಳಿಗುದುರೆಯನೇರಿ ದಿಕ್ಕು ದಿಕ್ಕಿಗೆ ಹಾರಿ
ಹುಡುಕಿದಳಾ ತಾಯಿ-
ಮತ್ತೆ ಕತ್ತೆತ್ತಿದಳು ಗಿಡವಾಗಿ
ಹೂವಾಗಿ, ಹತ್ತಿಯಾಗಿ, ಬತ್ತಿಯಾಗಿ
ಮನೆಮನೆಗೂ ತಿರುಗಿ
ಒಳಗೂ ಹೊರಗೂ ಬೆಳಗಿ
ಹುಡುಕಿದಳಾ ತಾಯಿ….
ಮಮತೆಯ ಮಗ್ಗದೊಳಗೆ
ಮಗ್ಗುಲಾಗಿ ಮಗ್ಗುಲಾಗಿ
ಹಾಯಿಯಾಗಿ ಹಡಗನೇರಿ
ಯಾವುದೋ ದೇಶದಲ್ಲಿ
ಯಾವುದೋ ವೇಷದಲ್ಲಿ
ಹುಡುಕಿದಳಾ ತಾಯಿ….
೪
ಅದೊಂದು ದಿನ ಚಿಗುರು ಮೀಸೆಯ
ಹುಡುಗ ಹತ್ತಿದನಾ ಹಡಗ
ಕಂಬಕ್ಕೊರಗಿ ಕಣ್ಮುಚ್ಚಲು
ಯಾವುದೋ ನೆನಪೊಂದಿಗೆ ತೇಲಿ
ಜೋ ಜೋ ಜೋ ಜೋ
ಎಂದು ತೂಗಿತು ಜೋಕಾಲಿ.
ಮೊಗ್ಗಾಯಿತು ಹೀಚಾಯಿತು ಕಾಯಿ
ತೊದಲಿತು ಬೀಜರೂಪಿ ಬಾಯಿ
ಮಾಯಿ! ಮಾಯಿ! ಮಾಯಿ!
ಪಟಗುಟ್ಟಿ ಮುನ್ನಡೆಸಿತು ಹಾಯಿ
ಕೈ ಹಿಡಿದಳು ಕಂದನಾ ತಾಯಿ
ಕೈ ಬೀಸಿ ಕರೆಯಿತು ದಾರಿ
ಅದೇ ದಾರಿ….
ಚಿತ್ರದೊಳಗಿನ ದಾರಿ.
*****