ಕಾನ್ಪುರದ ಎಲ್ಲ ಬೀದಿಗಳಲ್ಲಿ
ಎಲ್ಲ ಮೆನಗಳಲ್ಲಿ
ಮನೆಯ ಮಾಳಿಗೆಯಲ್ಲಿ ಮೂರು
ಹೆಣಗಳು ತೂಗಿದವು ನಿಶ್ಚಿಂತೆಯಲ್ಲಿ.
ಗುಲಾಬಿಯಷ್ಟೇ ಮೃದು ಮನಸಿನ
ಜೀವಿಗಳು ಸಾವಿನಲ್ಲೂ
ನೋವಿನ ಮುಖವನ್ನೇ ಹೊತ್ತಿದ್ದವು.
ಮದುವೆಯ ಮಾರುಕಟ್ಟೆಯಲ್ಲಿ
ಬಿಕರಿಯಾಗದ ಜೀವಗಳು
ಕುಲ, ಗೋತ್ರ, ದೇವರು, ಧರ್ಮ
ಬಂಧು ಬಳಗದ ಸಮ್ಮುಖದಲ್ಲೆ
ನೇಣಿಗೇರಿದ್ದವು.
ಜಗತ್ತಿನ ತಂದೆ ತಾಯಿಯರು
ಅಚ್ಚರಿಯಿಂದ, ಭಯದಿಂದ
ನೋಡಿದರು. ತಂತಮ್ಮ
ಮಕ್ಕಳ ಮುಖವೆ
ಕಂಡಂತಾಗಿ ಹೌಹಾರಿದರು.
ಕೆಲವು ಎದೆಗಳು ಭಾರವಾದವು
ಹಲವು ಕಣ್ಣುಗಳು ನೀರಾದವು
ಒಂದಷ್ಟು ತುಟಿಗಳು
ಲೊಚಗುಟ್ಟಿ ಸುಮ್ಮನಾದವು.
ಆದಿನ ಕಾನ್ಪುರದ
ಎಲ್ಲ ಬೀದಿಗಳಲ್ಲಿ
ಎಲ್ಲ ಮನೆಗಳಲ್ಲಿ
ಹೆಣಗಳದ್ದೆ ವಾಸನೆ
ಎಲ್ಲ ನಿರುಮ್ಮಳ
ಅದನ್ನೆ ಉಸಿರಾಡಿದರು.
(ಹೆತ್ತವರು ವರದಕ್ಷಿಣೆ ತೆರುವುದನ್ನು ತಪ್ಪಿಸಲು ನೇಣು ಹಾಕಿಕೊಂಡ ಕಾನ್ಪುರದ ಮಮತಾ, ಪೂನಂ, ಅಲಕಾ ಸಹೋದರಿಯರು ಬರೆಸಿದ ಕವನ)
*****