ಕಿಡಿಯೊಂದನಡಗಿಸೆ ನುಡಿಬಲೆ ಹೂಡಿ
ಗುಡುಗಾಡಿ ಜಗವೆಲ್ಲ ಸುತ್ತಿತು ಹಾಡು
ಸಿಡಿಯುತ ನುಡಿಗಳು ಸುಳಿರಾಗವುಗುಳೆ
ಒಡಲುರಿಯೆಂದಿತು ಧರಣಿಯು ಹೊರಳಿ
ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು
ಚಿಗಿಯಿತು ಕವಿಮನದಾಶೆಯ ಕಿಚ್ಚು
ಇನ್ನೊಂದು ಕಿಡಿಯಿಟ್ಟೆ ರೇಖೆ ಬಣ್ಣದಲಿ
ಮುನ್ನದ ಮೋಹಿಸಿ ಮಹಿಯು ಮೈ ಮರೆಯೆ
ವನ್ಹಿ ರೂಪೋತ್ಕರ ಜ್ವಾಲೆಯು ಹರಿಯೆ
ಎನ್ನೊಡಲಾಶೆಯು ದಹಿಸಿತು ಧರೆಯ
ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು!
ಸೊಗಸಿತು ಕಿಚ್ಚಿದು! ಕಿಡಿಗಳು ಹೆಚ್ಚು!
ಮತ್ತೊಂದ ಸೆರೆಯಿಟ್ಟೆ ಕರಿಗಲ್ಲಿನಲ್ಲಿ
ಒತ್ತುವ ತೇಜ ತಥಾಗತ ಮೂರ್ತಿ!
ಮುತ್ತುತ ಜನ ಬಂದು ಮಣಿದರು! ಅಲ್ಲಿ
ಹತ್ತೊಂದು ಹೃದಯವನಾಳಿತು ಮೂರ್ತಿ!
ಚಿಗಿ, ಚಿಗಿ, ಚಿಗಿಯಿತು ಕವಿಮನದಾಶೆ!
ಚಿಗಿಯುತ ಸುಳಿಯಿತು ಧರಣಿಯ ಸೋಸಿ
ಅಂಡ ಪಿಂಡಾಂಡವನೆನ್ನೊಳು ಕಂಡೆ
ಕಂಡೆನು ತಾಂಡವ ಲಾಸ್ಯವ ಕಂಡೆ!
ನಿಂದೆನು ಕಾಲಪ್ರವಾಹವ ದಾಂಟಿ
ಇಂದು ನಾನಾಗಿಹೆ ಭುವನಕೆ ನೆಂಟ
ಚಿಗಿಯಿತು ಕವಿಮನದಾಶೆಯ ಗುಟ್ಟು
ಸೊಗಸುವ ಕಾಂತಿಯ ಧರಣಿಗೆ ಕೊಟ್ಟು!
*****