ನವಿಲು ನಮ್ಮ ರಾಷ್ಟ್ರಪಕ್ಷಿ. ನವಿಲು ತನ್ನ ಸೌಂದರ್‍ಯ, ಬಣ್ಣ ಹಾಗೂ ನಡೆಗಳಿಗೆ ಪ್ರಸಿದ್ಧಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಸುಂದರವಾದ ಪಕ್ಷಿ.
ಹೆಣ್ಣು ನವಿಲಿಗಿಂತ ಗಂಡು ನವಿಲು ಹೆಚ್ಚು ಸುಂದರ. ಹಾಲು ಬಣ್ಣದ ಹೊಳಪಿನ ಮುಖ, ನೀಲಿಬಣ್ಣದ ತಲೆ, ಅದರ ಮೇಲೆ ರಾಜಠೀವಿ ಮೆರೆಸುವ ತುರಾಯಿ, ಕೆಂಪುಮಿಶ್ರಿತ ನಸುಹಳದಿ ಬಣ್ಣದ ರೆಕ್ಕೆ, ಬೆನ್ನಮೇಲಿನ ಹಸಿರು, ನೀಲಿ ಬಣ್ಣದ ಉದ್ದದ ಗರಿಗಳು, ಆ ಗರಿಗಳ ಮೇಲೆ ಕಣ್ಣಿನ ಹಾಗೆ ಕಾಣುವ ದುಂಡಾಕಾರದ ಚುಕ್ಕೆಗಳು.
ಹೆಣ್ಣು ನವಿಲು ಗಂಡು ನವಿಲಿಗಿಂತ ಚಿಕ್ಕದಾಗಿರುತ್ತದೆ. ಬಣ್ಣವೂ ಕೂಡ ಮಸುಕಾಗಿರುತ್ತದೆ. ಗಂಡು ನವಿಲು ಒಂದೂವರೆ ಮೀಟರ್ ಉದ್ದವಾಗಿದ್ದರೆ, ಹೆಣ್ಣು ನವಿಲಿನ ಉದ್ದ ಒಂದು ಮೀಟರ್‌ಗಿಂತ ಕಡಿಮೆ ಹಾಗೂ ಗಂಡು ನವಿಲು ೫ ಕೆ.ಜಿ. ಭಾರವಿದ್ದರೆ ಹೆಣ್ಣು ನವಿಲಿನ ಭಾರ ೫ ಕೆ.ಜಿ.ಗಿಂತ ಕಡಿಮೆ. ಸಾಮಾನ್ಯವಾಗಿ ನವಿಲುಗಳು ೨೦ ವರ್‍ಷಗಳವರೆಗೆ ಬದುಕುತ್ತವೆ.
ಹೆಣ್ಣು ನವಿಲು ಮೊಟ್ಟೆಯಿಡುವ ಕಾಲ ಫೆಬ್ರುವರಿಯಿಂದ ಆಗಸ್ಟ್ ತಿಂಗಳವರೆಗೆ. ಈ ಕಾಲದಲ್ಲಿ ಹೆಣ್ಣು ನವಿಲು ನೆಲದಲ್ಲಿ ಗೂಡು ಕಟ್ಟಿ ೧೦ ಬಿಳಿಯ ಮೊಟ್ಟೆಗಳನ್ನಿಡುತ್ತದೆ. ಅದು ೮ ತಿಂಗಳವರೆಗೆ ತನ್ನ ಮರಿಗಳನನ್ನು ಪೋಷಿಸುತ್ತದೆ. ನವಿಲುಮರಿಗೆ ತನ್ನ ಮೂರನೆಯ ವರ್‍ಷದಲ್ಲಿ ಗರಿ ಬೆಳೆಯಲಾರಂಭಿಸುತ್ತದೆ.
ಥೈಲೆಂಡ್, ಜಾವಾ, ಬರ್‍ಮಾ ಮತ್ತು ಮಲಯ ದೇಶಗಳಲ್ಲಿರುವ ನವಿಲುಗಳು ನಮ್ಮ ದೇಶದ ನವಿಲಿಗಿಂತ ಭಿನ್ನ. ಅವುಗಳ ಬಣ್ಣ ಹಸಿರು, ಉದ್ದವಾದ ಕಾಲುಗಳು ಅವುಗಳಿಗಿರುತ್ತವೆ.
ಮಳೆಗಾಲದ ಮೋಡಗಳನ್ನು ನೋಡಿ ನವಿಲಿಗೆ ಬಹಳ ಸಂತೋಷವಾಗುತ್ತದೆ. ಆಗ ಅದು (ಗಂಡು ನವಿಲು) ಹೆಣ್ಣು ನವಿಲಿನ ಮುಂದೆ ಕುಣಿಯಲು ಅನುವಾಗುತ್ತದೆ. ತನ್ನ ಬಣ್ಣ ಬಣ್ಣದ ಗರಿಗಳನ್ನು ಬಿಲ್ಲಿನಾಕಾರದಲ್ಲಿ ಕೆದರಿಕೊಂಡು ತನ್ನ ಸೌಂದರ್‍ಯವನ್ನು ಪ್ರದರ್‍ಶಿಸುತ್ತದೆ. ಗರಿಗಳನ್ನು ಪಟಪಟನೆ ಬಡಿದು ಅವುಗಳನ್ನು ಇನ್ನಷ್ಟು ಹರವಿ ಹೆಣ್ಣು ನವಿಲಿನಮನಸ್ಸನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತದೆ. ಈ ಮಯೂರ ನೃತ್ಯ ಮಧ್ಯ ಜನವರಿಯಿಂದ ಡಿಸೆಂಬರ್‌ವರೆಗೆ ನಡೆಯುತ್ತದೆ. ನವಿಲಿನ ಈ ನೃತ್ಯ ೧೫ ರಿಂದ ೩೫ ನಿಮಿಷಗಳವರೆಗೂ ಸಾಗಬಹುದು.
ನವಿಲು ತನ್ನ ಶತ್ರುಗಳ ನಡುವೆ ಸಿಕ್ಕಿಹಾಕಿಕೊಂಡಾಗಲೂ ಕ್ರೋಧದಿಂದ ಕುಣಿದು ವೈರಿಯನ್ನು ತಲ್ಲಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಸಮಯ ಸಾಧಿಸಿ ಅಪಾಯದಿಂದ ಪಾರಾಗುತ್ತದೆ. ಅದೂ ಅಲ್ಲದೆ ನವಿಲು ತನ್ನ ಮಕ್ಕಳ ಹಾಗೂ ತನ್ನ ಗೂಡಿನ ಗಡಿಯ ರಕ್ಷಣೆಗಾಗಿ ಸಮಯ ಬಂದಾಗ ಗರಿಹರವಿ ನರ್‍ತಿಸುತ್ತದೆ.
ನವಿಲುಗಳು ಅಡವಿಯಲ್ಲಿ ಗುಂಪು-ಗುಂಪಾಗಿ ವಾಸಿಸುತ್ತವೆ. ಅವು ರಾತ್ರಿಗಳನ್ನು ಮರಗಳ ಮೇಲೆ ಕಳೆಯುತ್ತವೆ.
ಕ್ರಿಮಿ ಕೀಟಗಳು, ಬೀಜ ಧಾನ್ಯಗಳು, ಹಾವು, ಉರಗಗಳು, ಹಲ್ಲಿಗಳು, ಮಿಡತೆಗಳು ಮತ್ತು ಕಂಬಳಿಹುಳಗಳು ನಿವಿಲಿನ ಆಹಾರಗಳಾಗಿವೆ.
ನವಿಲು ಬಹಳ ಉಪಯುಕ್ತ ಪ್ರಾಣಿ. ಅದರ ರೆಕ್ಕೆಗಳಿಂದ ನಿರ್‍ಮಿತವಾದ ಬೀಸಣಿಗೆಗಳು ಅತ್ಯಂತ ಆಕರ್‍ಷಕ. ನವಿಲು ಬೆಳೆಗಳನ್ನು ನಾಶ ಮಾಡುವ ಕ್ರಿಮಿಕೀಟಗಳನ್ನು ತಿಂದು ಬೆಳೆಗಳ ರಕ್ಷಣೆ ಮಾಡುತ್ತದೆ.
ನವಿಲು ಮಾಂಸವನ್ನು ಕೆಲ ಜನರು ತಿನ್ನುತ್ತಾರೆ; ಅಲ್ಲದೆ ಅದು ಔಷಧಕ್ಕೂ ಉಪಯುಕ್ತ. ಈ ಎಲ್ಲ ಉಪಯುಕ್ತತೆಯಿಂದಾಗಿ ಕೆಲವರು ನವಿಲುಗಳ ಕಳ್ಳ ಬೇಟೆಯಲ್ಲಿ ತೊಡಗಿದ್ದಾರೆ. ಆದ್ದರಿಂದಾಗಿ ನವಿಲುಗಳ ಸಂತತಿ ನಶಿಸಿ ಹೋಗುವ ಹಂತದಲ್ಲಿದೆ. ಗುಂಪು-ಗುಂಪಾಗಿದ್ದ ಸ್ಥಳಗಲ್ಲಿ ಈಗ ಒಂದೋ-ಎರಡೋ ನವಿಲುಗಳು ಕಾಣಿಸುತ್ತಿವೆ. ಪರಿಣಾಮವಾಗಿ ನಮ್ಮ ನಿಸರ್‍ಗದ ಚೆಲುವಿಗೆ ಭಂಗ ಬರಗೊಡಗಿದೆ. ಹುಳುಹುಪ್ಪಟೆಗಳ ನಿರ್‍ಮೂಲನೆಯಲ್ಲಿ ನಮ್ಮ ರೈತರಿಗಾಗುತ್ತಿದ್ದ ಸಹಾಯಕ್ಕೆ ಈಗ ಸಂಚಕಾರ ಒದಗುತ್ತಿದೆ. ಇದನ್ನೆಲ್ಲ ಗಮನಿಸಿಯೇ ಸರ್‍ಕಾರ ಅವುಗಳ ಬೇಟೆಯನ್ನು ಅಪರಾಧವೆಂದು ಸಾರಿದೆ. ರಾಷ್ಟ್ರೀಯ ಪಕ್ಷಿ ನವಿಲನ್ನು ರಕ್ಷಿಸುವುದು ನಮ್ಮೆಲ್ಲರ ಕರ್‍ತವ್ಯವಲ್ಲವೇ?
*****